ತುಘಲಕ್:
ವಿಮರ್ಶೆ-ಪರಾಮರ್ಶೆ
“Let
us not seek to satisfy our thirst drinking from the cup of bitterness and
hatred. We must forever conduct our struggle on the high plane of dignity and
discipline. We must not allow our creative protest to degenerate into physical
violence. Again and again we must rise to the majestic heights of meeting
physical force with soul force.
-Martin
Luther King Junior,I Have A Dreame
ಭಾರತೀಯ ರಂಗ ಪರಿಕಲ್ಪನೆ ಒಂದು ಸಿದ್ಧಾಂತವಾಗಿ ನಮ್ಮನ್ನು
ಕಾಡಲಿಲ್ಲ. ಯಾವುದು ನಮ್ಮದೋ ಅದು ಸಾಮಾನ್ಯವಾಗಿ ಹಾಗೆ ಕಾಡುವುದು ಇಲ್ಲ. ನವೋದಯದ ಉತ್ತರಾರ್ಧದಲ್ಲಿ
ಮತ್ತು ಇಡೀ ನವ್ಯದ ಕಾಲಘಟ್ಟದಲ್ಲಿ ನಮ್ಮ ರಂಗ ಇತಿಹಾಸದಲ್ಲಿ ಒಂದು ವಿಶಿಷ್ಠ ಬದಲಾವಣೆಯಾಯಿತು. ಈ
ಬದಲಾವಣೆಯನ್ನು ಬೆಳವಣಿಗೆ ಎನ್ನಬೇಕೋ, ಪ್ರಭಾವ ಎನ್ನಬೇಕೋ, ಪರಿಣಾಮ ಎನ್ನಬೇಕೋ ಅದು ಇನ್ನೂ ಚರ್ಚೆಗೆ
ಯೋಗ್ಯ ವಿಷಯ. ನಾನು ಆರಂಭದಲ್ಲಿ ಹೇಳಿದೆ, ನಾಟ್ಯಶಾಸ್ತ್ರ ನಮಗೆ ಒಂದು ಸಿದ್ಧಾಂತವಾಗಿ ಕಾಡಲಿಲ್ಲ.
ಕಾಡಿದ್ದರೂ ಅದರ ತೀವ್ರತೆ ಯೂರೋಪಿನ ರಂಗಸಿದ್ಧಾಂತದಷ್ಟು ಪ್ರಖರವಾಗಿರಲಿಲ್ಲ. ಇಲ್ಲಿ ಇನ್ನೂ ಒಚಿದು
ಓದು ಸಾಧ್ಯವಿದೆ. ಬಹುತೇಕ ಗಾಂಧಿ ಯುಗದಿಂದ ಇಂದಿರಾ
ಗಾಂಧಿಯವರೆಗಿನ ಆ ಸಂದರ್ಭವೇ ಹೀಗೆ. ಇಲ್ಲಿ ಪಶ್ಚಿಮದಿಂದ ಬಂದುದೆಲ್ಲವೂ ಆಕರ್ಷಕವಾಗಿ ಕಂಡಿತು. ಆತ್ಮೀಯವೆನ್ನಿಸಿತು
ಮತ್ತು ವರ್ತಮಾನವನ್ನು ಇದರಿಂದ ಚೆನ್ನಾಗಿ ವಿಶ್ಲೇಷಿಸಬಹುದು ಎನ್ನುವ ಭ್ರಮೆಯನ್ನೂ ಸೃಷ್ಟಿಸಿತು.
ನಾನಿದನ್ನು ಈಗ ಭ್ರಮೆ ಎನ್ನುತ್ತಿದ್ದೇನೆ, ಯಾಕೆಂದರೆ ನಮ್ಮ ರಂಗಚಿಂತನೆ ಅದರಿಂದ ಹೊರಬಂದು ಮತ್ತೆ
ಮೂಲದತ್ತಲೋ, ಹೊಸದರತ್ತಲೋ ತವಕಿಸುವ ಹೊರಳು ದಾರಿಯಲ್ಲಿದೆ.
ಸನ್ಮಿತ್ರ ಡಾ.ಎಚ್.ಎಲ್. ಮಲ್ಲೇಶಗೌಡರ ‘ತುಘಲಕ್ ದರ್ಬಾರಿನಲ್ಲಿ’
ಓದುತ್ತಿದ್ದರೆ, ತುಘಲಕ್‌ನಂತಹ ದ್ವಂದ್ವ ಮನಸ್ಥಿತಿಯ ಅನೇಕ ಪಾತ್ರಗಳು ಕಾರ್ನಾಡರ ‘ತುಘಲಕ್’ನ ಆಸುಪಾಸಿನಲ್ಲಿ
ಭಾರತೀಯ ಸಾಹಿತ್ಯದಲ್ಲಿ ಬಂದಿರುವುದು ನೆನಪಾಗುತ್ತದೆ. ಬಾದಲ್ ಸರ್ಕಾರ್‌ರ ‘ಇಂದ್ರಜಿತ್’, ವಿಜಯ ತೆಂಡೂಲ್ಕರ್‌ರ
‘ಘಾಸೀಂ ರಾಮ್ ಕೋತ್ವಾಲ್’, ಇಂದಿರಾ ಪಾರ್ಥಸಾರಥಿಯವರ ‘ಔರಂಗಜೇಬ್’, ಧರ್ಮವೀರ ಭಾರತೀಯವರ ‘ಅಂಧಾಯುಗ’
ದಲ್ಲಿನ ಯುಯುತ್ಸು ಅಥವಾ ಕಂಬಾರ, ಕುಸನೂರು ಮತ್ತು ಚಂದ್ರಶೇಖರ ಪಾಟೀಲರ ನಾಟಕದಲ್ಲಿಯ ಅನೇಕ ಪಾತ್ರಗಳಾಗಿರಬಹುದು.
ಇವೆಲ್ಲಾ ಅಲ್ಬರ್ಟ್ ಕಾಮೂವಿನ ‘ಕಲಿಗುಲ’ದ, ಕಾನಾರ್ಡರ ತುಃಲಹನ ಅನ್ಯ ಮುಖಗಳೇ.
ಯೂರೋಪಿನ, ಮನುಷ್ಯನೊಳಗಿನ ಈ ಓದನ್ನು ನಾನು ಒಂದು
ಸಾಧ್ಯತೆ ಎಂದು ತಿಳಿದುಕೊಂಡಿದ್ದೇನೆ. ಈ ಕಾರಣಕ್ಕಾಗಿಯೇ ಭಾರತೀಯ ನಾಟಕಕಾರ ಒಂದು ದೊಡ್ಡ ಪಡೆ ಕಾಲಾಂತರದಲ್ಲಿ
ಪೂಜೆ ಮತ್ತು ಆರಾಧನೆಯ ಹಂತದಿಂದ ಕೆಳಗಿಳಿದು, ನಮ್ಮ ಪುರಾಣ, ಕಾವ್ಯ, ಜಾನಪದ ಮತ್ತು ಇತಿಹಾಸದೊಳಗಿನ
ಪಾತ್ರಗಳನ್ನು ಹೀಗೆ ಓದಲಾರಂಭಿಸಿತು. ಗಿರೀಶ ಕಾರ್ನಾಡರ ‘ತುಘಲಕ’ ಅಂತಹ ಒಂದು ಓದು ಅಷ್ಟೇ. ಯಾವುದನ್ನು
ಇತಿಹಾಸ ಆಗಾಧ, ವಿಚಿತ್ರ ಎಂದು ಸಾರಿ ಒಂದು ರೀತಿಯ ಉದಾಸೀನದ ಲೋಕಕ್ಕೆ ತಳ್ಳಿಬಿಟ್ಟಿತ್ತೋ ಅದನ್ನು
ಸಹಜವಾಗಿಸುವ, ಸಮೀಪವಾಗಿಸುವ ಕ್ರಿಯೆ. ಈ ಸಂದರ್ಭದ ಸೃಜನಶೀಲ ಮತ್ತು ಭಾಷಾಂತರದ ಮುಖೇನ ಬಂದ ಅನೇಕ
ನಾಟಕ ರಚನೆಗಳನ್ನು ಗಮನಿಸಿ. ಷೇಕ್ಸ್‌ಪಿಯರ್‌ನ “To be or
not to be” ಆಲೋಚನೆಯೇ ಇವುಗಳ ಮನೋಸ್ಥಿತಿ. ಸ್ವಲ್ಪ ಹಿಂದೆ ಸರಿದು ಶ್ರೀರಂಗರ
‘ಶೋಕಚಕ್ರ’, ಪರ್ವತವಾಣಿಯವರ ‘ಭೂತಗಳು’, ಕಾರ್ನಾಡರ ಸಮಕಾಲೀನರಾದ ಲಂಕೇಶರ ‘ದೊರೆ ಈಡಿಪಸ್’, ಇವೆಲ್ಲವೂಗಳಲ್ಲಿಯೂ
ಮನುಷ್ಯನ ಮನೋದ್ವಂದ್ವ ಒಂದು ಬಿಡಿಸಲಾಗದ ಕಗ್ಗಂಟು. ಈ ತೆರನಾದ ಸೃಷ್ಟಿಗೆ ಈ ಸಂದರ್ಭದ ಸಾಮಾಜಿಕ ಮತ್ತು
ರಾಜಕೀಯ ಸಂದರ್ಭಗಳ ಕೊಡುಗೆ ಖಂಡಿತವಾಗಿಯೂ ಇದೆ.
ಇತಿಹಾಸವನ್ನಾಧರಿಸಿದ ನಾಟಕವೊಂದು ಪ್ರಸ್ತುತವಾಗುತ್ತದೆ.
ಯಾಕೆಂದರೆ ಇತಿಹಾಸವೆನ್ನುವುದು ಘಟನೆಗಳ ಪುನರಾವರ್ತನೆಯಲ್ಲದೇ ಮತ್ತೇನೂ ಅಲ್ಲ. ಬದುಕಿನ ತೊಂಬತ್ತೈದನೇ
ವಯಸ್ಸಿನಲ್ಲಿ ಖುಷ್ವಂತ್‌ಸಿಂಗ್ ಬರೆದ, “Absoulute Khushwanth” ದಲ್ಲಿಯ
ಈ ಸಾಲುಗಳನ್ನು ನೋಡಿ.
Partition was bloodiest exchange. I do not think either Pandit Neharu
or Jinnah had imagined this level of violence. In any case both of them seemed
to live in the dream world of their own.
Over 10 million people were uprooted from their homes. In a couple of
months a million were slaughtered in cold blood. Almost over night, Muslims,
Hindus and Sikhs, who had co-existed amicably over centuries, became sworn
enemies.
ಈ ಸಾಲುಗಳ ಹಿನ್ನೆಲೆಯಿಂದ
ನೋಡಿ. ತುಘಲಕ್ ದರ್ಬಾರು ಮುಗಿದಿದೆ ಎನ್ನಿಸುವುದೇ ಇಲ್ಲ. ಧರ್ಮಕಾರಣ, ರಾಜಕಾರಣದ ಸಿಲಸಿಲಾ ಕೊನೆಯಾಗುತ್ತದೆ
ಎನಿಸುವುದಿಲ್ಲ. ವರ್ತಮಾನಕ್ಕೆ ಬರೋಣ. ಬಾಬರ್ ಮಸೀದಿಯ ಧ್ವಂಸ, ಗೋಧ್ರಾ ಹತ್ಯಾಕಾಡ, ನಮ್ಮ ಕರಾವಳಿ
ತೀರದುದ್ದಕ್ಕೂ ನಡೆದ ಚರ್ಚುಗಳ ಮೇಲಿನ ದಾಳಿ, ಪಾದ್ರಿಗಳ ಜೀವಂತ ದಹನ, ಪ್ರತಿಫಲವಾಗಿ,
The BJP got what it wanted. It reaped a rich electoral harvest.
ಖುಷ್ವಂತ ಸಿಂಣ್‌ರ ಇನ್ರ್ನೆಂದು ಮಾತು, ’’Advani
, more than any one else, sensed that Islaofobia was deeply ingrained in the
minds of mollions of Hindus and it needed only a spark to set it a blaze”. ಬಾಬರಿ ಮಸೀದಿಯ ಧ್ವಂಸ, ಸಾವಿರಾರು
ಅಮಾಯಕರನ್ನು ಕೊಂದು ಒಬ್ಬ ವ್ಯಕ್ತಿಗೆ, ಒಂದು ಪಕ್ಷಕ್ಕೆ, ಲಾಭ ತಂದು ಕೊಟ್ಟಂತೆ ನಮ್ಮ ದೇಶ ವಿಭಜನೆಯ
ಕತೆಯಾಯಿತು. ಹಾಗೆಯೇ ತುಘಲಕನ ರಾಜಧಾನಿ ಬದಲಾವಣೆಯ ವ್ಯವಹಾರವೂ ಕೂಡ. ಅದು ಅಜೀಜ್ ಹಾಗೂ ಆಜಮರಿಗೆ
ಲಾಭ ತಂದಿತಷ್ಟೇ. ಪರಿಣಾಮವನ್ನು ಗ್ರಹಿಸಲಾಗದ ನಾಯಕರು ಮೂರ್ಖರಾಗುತ್ತಾರೆ. ನಗೆಪಾಟಲಾಗುತ್ತಾರೆ.
ಈ ಕಾರಣಕ್ಕಾಗಿ ತುಘಲಕ್ ಮೂರ್ಖ ಅರಸ ಆದ.
ನಾನು
ಹೇಳುತ್ತಿರುವುದಿಷ್ಟೇ. ಧರ್ಮಕ್ಕಾಗಿ ರಾಜಕಾರಣ, ರಾಜಕಾರಣಕ್ಕಾಗಿ ಧರ್ಮ, ಹೀಗೆ ಅದಲು-ಬದಲು, ಕಂಚಿ
ಬದಲನ್ನು ಜನರೊಂದಿಗೆ ಆಡುವ ತುಘಲಕರು ಪುನರಾವರ್ತನೆ ಆಗುತ್ತಲೇ ಇದ್ದಾರೆ. ಔರಂಗಜೇಬ್, ನೆಹರೂ, ಜಿನ್ನಾ,
ಪಟೇಲ್, ಅದ್ವಾನಿ, ಹೆಸರುಗಳಷ್ಟೇ ಭಿನ್ನ. ಇವರೆಲ್ಲಾ ತಮ್ಮ ಸ್ವಾರ್ಥದ ಕಲ್ಪನೆಗಳಿಗೆ ಇಡೀ ದೇಶ, ಜನಾಂಗಗಳನ್ನೇ
ಮೃತ್ಯವಿನ ಬಾಯಿಗೆ ತಳ್ಳಲು ಹೇಸಿದವರಲ್ಲ. ಒಟ್ಟಾರೆ ರಾಜಕಾರಣ, ಅದಕ್ಕೊಂದು ನೆಪ, ಜೊತೆಗೆ ಧರ್ಮದ
ಆಫೀಮು, ಹದಿನಾಲ್ಕನೇ ಶತಮಾನದಲ್ಲಿ ತುಘಲಕ್ ಮಾಡಿದ್ದು ಇದನ್ನೇ.
ಡಾ. ಮಲ್ಲೇಶಗೌಡರು ಇಡೀ ತುಘಲಕನ ವ್ಯಕ್ತಿತ್ವವನ್ನು,
ಆಡಳಿತವನ್ನು ಒಂದು ವಾಕ್ಯದಲ್ಲಿ ಕಟ್ಟಕೊಟ್ಟಿದ್ದಾರೆ. ನಿಜವಾಗಿಯೂ ತುಘಲಕನದು ಆದರ್ಶವಲ್ಲ, ಆವೇಶ
ಮಾತ್ರ. ಇದನ್ನೇ ಕುರ್ತಕೋಟಿಯವರು “His
character transcends his action”
ಅಂತ ಸ್ವಲ್ಪ
ಭಿನ್ನವಾಗಿ ಹೇಳಿರುವುದು. ಮ್ಯಾಕಬತ್‌ನಂತೆ, ಓಡಿಪಸ್, ಹ್ಯಾಮ್ಲೆಟರಂತೆ ಈ ತುಘಲಕ ದ್ವಂದ್ವದ ಮನುಷ್ಯ. ಇವನ ದ್ವಂದ್ವಕ್ಕೆ ಕಾರಣ ಹತ್ತಾರು. ವಿವೇಚನಾರಹಿತ ಹೆಜ್ಜೆಗಳು
ಮತ್ತು ಹಿಡಿತದಲ್ಲಿಲ್ಲದ ಆಡಳಿತಗಾರರು. ಮಲ್ಲೇಶಗೌಡರ ಪದಗಳಲ್ಲಿಯೇ ಹೇಳಬೇಕೆಂದರೆ ‘ಈ ನಾಟಕದ ಪಾತ್ರಗಳ
ಬೇರೆ ಬೇರೆ ಸ್ವಭಾವಗಳೆಲ್ಲಾ ತುಘಲಕನ ಪಾತ್ರವೊಂದರಲ್ಲಿಯೇ ನರ್ತನ ಮಾಡಿವೆ.’
·
“The personality of Mohammad Tugalak is so
vast that, its parts are distributed among the other characters of the play”.
ಮಲ್ಲೇಶಗೌಡರು ತುಘಲಕ ದರ್ಬಾರಿನ ಮೂಲಕ ಏನನ್ನು ಹೇಳಲು
ಯತ್ನಿಸುತ್ತಿದ್ದಾರೆ? ತಿಳಿಸುವುದಕ್ಕೂ ಮುಂಚೆ ಕಾನಾರ್ಡರ
ತುಘಲಕನ್ನು ನೋಡಿಬಿಡೋಣ-
ಮಧ್ಯಯುಗೀನ ಭಾರತೀಯ ಸಂದರ್ಭದಲ್ಲಿ ಖಿಲ್ಜಿಗಳ ನಂತರ
ಬಂದವನು ಘಿಯಾಸುದ್ದೀನ್ ತುಘಲಕ್. ಹಿಂದೂ ಹೆಂಗಸನ್ನು ಮದುವೆಯಾಗಿ, ರಾಜ್ಯಭಾರ ನಡೆಸಿದ ಘಿಯಾಸುದ್ದೀನ್‌ನ
ಕುಡಿಯೇ ಮಹಮ್ಮದ್ ಬಿನ್ ತುಘಲಕ್. ಇವನ ಮೂಲ ಹೆಸರು ಜುನಾಖಾನ್. ಈತನ ಒಂದು ಕನಸು, ನೂತನ, ಸರ್ವಸುಂದರ
ರಾಜ್ಯವನ್ನು ನಿರ್ಮಾಣ ಮಾಡಬೇಕು ಎಂಬುದು. ಆದರೆ ಸಂಧರ್ಭ ಎಂತಹದು? ಆಳುವ ತಾನು, ಅಲ್ಪಸಂಖ್ಯಾತ ಮುಸ್ಲಿಂ.
ಪ್ರಜೆಗಳು ಬಹುಸಂಖ್ಯಾತ ಹಿಂದೂಗಳು. ದಿಲ್ಲಿಯ ಗದ್ದಿಗೆಯ ಸುತ್ತ ಅಮೀರರು, ಅಮೀರರ ಸುತ್ತ ಮುಲ್ಲಾಗಳು.
ಧರ್ಮದ ಪ್ರಭಾವಳಿ. ಅಲ್ಪಸಂಖ್ಯಾತ ಮುಸ್ಲಿಮರು ಒಂದು ಕಡೆ ಎಂದೂ ಈತನ ವಿಶ್ವಾಸಕ್ಕೆ ಪಾತ್ರರಾಗದ ಹಿಂದೂಗಳು
ಇನ್ನೊಂದು ಕಡೆ. ಸೋದರಿಯ ಮಗ ದೀನ್ ಘುರ್ಸೈಫನ ದಂಗೆ, ಉಲ್‌ಮುಲ್ಕನ ದಾಳಿ, ದೋಅಬ್‌ನಲ್ಲಿ ಭೀಕರ ಬರಗಾಲ,
ಮುಂಗೋಲರ ಕಿರಿಕಿರಿ, ಮುಲ್ತಾನಿನ ಖುಸ್ಸುಖಾನನ ಪ್ರತಿಭಟನೆ, ಗುಜರಾತಿನ ತಾಷ್ ಎನ್ನುತ್ತಿದ್ದವ ನೀಡುತ್ತಿದ್ದ
ನಿರಂತರ ಕಿರಿಕಿರಿ, ಇವುಗಳ ಮಧ್ಯೆ ಉದಯಿಸಬೇಕಾಗಿದೆ ತುಘಲಕನ ಆದರ್ಶ ರಾಜ್ಯ. ಆದರೆ ದುರ್ದೈವ, ಅಧಿಕಾರಕ್ಕೆ
ಬರುತ್ತಲೇ ಆತ ಕಳಂಕಿತ, ಅಧಿಕಾರಕ್ಕಾಗಿ ತಂದೆಯನ್ನು ಕೊಲ್ಲಿಸಿದವ, ತಮ್ಮನನ್ನು ಕೊಲ್ಲಿಸಿದವ ಎನ್ನುವ
ಕುಖ್ಯಾತಿ ಬೇರೆ. ಈ ಹಿಂಸೆಗಳೆಲ್ಲಾ ಮಹಮ್ಮದ ಬಿನ್ ತುಘಲಕನನ್ನು, ಲೇಖಕರು ಹೇಳುವಂತೆ, ‘ ಮನುಷ್ಯ
ಸಂಬಂಧದ ಮೂಲ ಸೆಲೆಯನ್ನು ಗುಮಾನಿಯಿಂದ ನೋಡುವಂತಹ ಸ್ಥಿತಿಗೆ ತಂದು ನಿಲ್ಲಿಸುತ್ತದೆ. ಅದಕ್ಕಾಗಿ ಬದುಕಿನಲ್ಲಿ ಅತ್ಯಂತ
ಆರ್ದ ಸಂದರ್ಭವನ್ನು ಏರ್ಪಡಿಸಬಲ್ಲ ವಿವಾಹದಿಂದ ದೂರ ಉಳಿಯುತ್ತಾನೆ. ಅವನ ಮಾನವೀಯತೆಯ ಸಂಕೇತವಾಗಿರುವ
ಮಲತಾಯಿಯನ್ನು ಸಾರ್ವಜನಿಕವಾಗಿ ಬೀದಿಯಲ್ಲಿ ಕಟ್ಟಿಸಿ, ರಾಜದ್ರೋಹದ ಆಪಾದನೆಯ ಮೇರೆಗೆ ಕಲ್ಲು ಹೊಡೆಸಿ
ಕೊಲ್ಲುತ್ತಾನೆ. ಧರ್ಮಗುರುಗಳಾದ ಷೇಕ್ ಇಮಾಮ್ ಉದ್ದೀನರನ್ನು ಕೊಲ್ಲಿಸುತ್ತಾನೆ. ವಿಪರ್ಯಾಸವೆನ್ನುವಂತೆ
ಅಜೀಜನಂತಹ ಹಗಲುಗಳ್ಳನ ಕಾಲಿಗೆ ಪ್ಚಜೆಗಳೇದುರೇ ಧೀರ್ಘದಂಡ ನಮಸ್ಕಾರ ಮಾಡಿಕೊಳ್ಳುವ ಸಂದರ್ಭ ತಂದುಕೊಳ್ಳುತ್ತಾನೆ.
ಕೈಗಂಟಿದ ರಕ್ತವನ್ನು ಒರೆಸಿಕೊಳ್ಳಲು ಆಶಿಸುತ್ತಲೇ ಇಡೀ ಮನಸನ್ನೇ ರಕ್ತದ ಕೊಳವನ್ನಾಗಿಸಿಕೊಳ್ಳುತ್ತಾನೆ.
ಹಾಗೂ-ಹೀಗೂ ಜನರಪ್ರೀತಿಯ ದೊರೆಯಾಗುವ ಧಾವಂತದಲ್ಲಿ ದೆಹಲಿಯಿಂದ ದೌಲತಾಬಾದ್‌ಗೆ ರಾಜಧಾನಿಯನ್ನು ಬದಲಾಯಿಸುತ್ತಾನೆ.
ಧಂಗೆಗಳಿಗೆ ಹಣವೇ ಮೂಲ ಎಂದು ಜನರ ಬಳಿ ಹಣವಿಲ್ಲದಂತೆ ನೋಡಲು ಯತ್ನಿಸುತ್ತಾನೆ. ವಿಚಿತ್ರ ಎನ್ನಿಸುವಂತೆ
ಚಿನ್ನ ಮತ್ತು ಬೆಳ್ಳಿ ನಾಣ್ಯಗಳ ಬದಲಾಗಿ ತಾಮ್ರ, ಹಿತ್ತಾಳೆ, ಚರ್ಮದ ನಾಣ್ಯಗಳನ್ನು ಜಾರಿಗೆ ತರುತ್ತಾನೆ.
ಇಲ್ಲಿ ‘ತುಘಲಕ್ ದರ್ಬಾರಿನ’ ಹುಚ್ಚುತನದ ಕುರಿತು ಡಾ. ಮಲ್ಲೇಶಗೌಡರು ಒಂದು ಪ್ರಶ್ನೆ ಕೇಳಿದ್ದಾರೆ.
” ಆ ಕಾಲದ ಹಿಂದೂ ಧರ್ಮದ ಕಲ್ಪನೆಯಲ್ಲಿ ಹಣ ಸಾಕ್ಷಾತ್
ಲಕ್ಷ್ಮೀ. ಜೊತೆಗೆ ಸವರ್ಣೀಯರಿಗೆ ಪೂಜಾರ್ಹ ಎನ್ನಿಸಿರುವ
ಹಣವನ್ನು ಚರ್ಮದ ರೂಪದಲ್ಲಿ ಸ್ವೀಕರಿಸಲು ಸಾಧ್ಯವೇ? ಇದು ಒಂದು ರಾಷ್ಟ್ರದ ದೊರೆಗೆ ಸಹಜವಾಗಿ ಹೊಳೆಯಬೇಕಾದುದಲ್ಲವೇ?”ಖಂಡಿತವಾಗಿಯೂ
ಇದೇ ತುಘಲಕ್ ಪಾತ್ರದ ಅಸ್ತಿತ್ವ. ಆತನ ಇಪ್ಪತೈದು ವರ್ಷಗಳ ಆಳ್ವಿಕೆಯೆನ್ನುವುದು ಇಂತಹ ಹಲವಾರು ವಿವೇಚನಾ
ರಹಿತ ನಿರ್ಧಾರಗಳ ಕತೆ.ಕೊನೆಗೆ ಇತಿಹಾಸಕಾರರು ಹೇಳಿದಂತೆ, ಸುಲ್ತಾನನಿಂದ ಪ್ರಜೆಗಳು, ಪ್ರಜೆಗಳಿಂದ
ಸುಲ್ತಾನರು ಬಿಡುಗಡೆ ಹೊಂದಿದ್ದಾರೆ ಎನ್ನುವುದೇ ಅವನ ಆಳ್ವಿಕೆಯ ಸಾಧನೆ.
ನಾಟಕ ಶುರುವಾಗುವುದು ಅಜೀಜನಂತಹ ಅಯೋಗ್ಯನನ್ನು ಕ್ಷಮಿಸುವ
ದೃಶ್ಯದಿಂದ, ತಾರಕಕ್ಕೇರುವುದು ಷೇಕ್ ಇಮಾಮುದ್ದೀನರ ಕೊಲೆಯಿಂದ ಮುಕ್ತಾಯವಾಗುವುದು ಅಜೀಜನ ವಿಜಯದಿಂದ.
ನಾಟಕದ ಆರಂಭದಿಂದಲೂ ತುಘಲಕ ಅರಸನಾಗಿ ಅವನತಿಯ ದಾರಿಯಲ್ಲಿದ್ದಾನೆ, ಅಜೀಜ ಅಗಸನಾಗಿ ಯಶಸ್ಸಿನ ದಾರಿಯಲ್ಲಿದ್ದಾನೆ.
ಆರಂಭದಲ್ಲಿ ಅಜೀಜ ತುಘಲಕನಿಗೆ ಬಂಧಿ. ಅಂತ್ಯದಲ್ಲಿ ತುಘಲಕ ಅಜೀಜನಿಗೆ ಬಂಧಿ. ಯಾತಕ್ಕಾಗಿ ಆತನನ್ನು
ಕ್ಷಮಿಸುತ್ತಾನೋ ದಿನಕ್ಕೆ ಐದು ಹೊತ್ತು ನಮಾಜು ಮಾಡಬೇಕೆಂದು ಘೋಷಿಸಿದವ, ದೌಲತಾಬಾದಿನಲ್ಲಿ ಐದು ವರ್ಷಗಳವರೆಗೆ
ನಮಾಜನ್ನೇ ಯಾಕೆ ನಿಲ್ಲಿಸಿದನೋ ಒಂದೂ ಸ್ಪಷ್ಟವಿಲ್ಲ ಆತನಿಗೆ. ಆದರೆ ಒಂದಂತೂ ಸತ್ಯ.
ಇತಿಹಾಸದ ತುಘಲಕ್ ನಮಗೆಲ್ಲರಿಗೂ ಗೊತ್ತು. ಕಾರ್ನಾಡರ
‘ತುಘಲಕ್’ ನಾಟಕವೂ ಗೊತ್ತು. ಇಂತಹ ಸುಪ್ರಸಿದ್ಧ ವ್ಯಕ್ತಿ, ಇತಿಹಾಸ ಕುರಿತು ಮಲ್ಲೇಶಗೌಡರು ಯಾಕೆ
ಸಂಶೋಧನೆ ಮಾಡಬೇಕಿತ್ತು? ಗಮನಿಸಬೇಕು, ೧೯ವರ್ಷಗಳ ಹಿಂದೆ ಅವರು ಕೈಕೊಂಡ ಸಂಶೋಧನೆ ಇದು. ಸುಮಾರು ಎರಡು
ದಶಕಗಳ ನಂತರ ನಮ್ಮ ಕೈಗಿಡುತ್ತಿದ್ದಾರೆ. ಯಾಕೆ? ಗೊತ್ತಿರಲಿ, ಈ ಕೃತಿ ತುಘಲಕ್ ನಾಟಕದ ಕುರಿತು ಇದುವರೆಗೂ
ಬಂದ ವಿಮರ್ಶೆಯ ಪರಾಮರ್ಶೆ. ಈ ಪರಾಮರ್ಶೆಗೆ ಲೇಖಕರು ಹುಡುಕುವ ಕಾರಣಗಳು, ಕೊಡುವ ಸಮಜಾಯಿಷಿಗಳು, ನನ್ನ
ಕುತೂಹಲಗಳನ್ನು ಕೆರಳಿಸಿವೆ.
೧)
ನಾಟಕ ಕೃತಿಯ ವಿಮರ್ಶೆ ಅಥವಾ ಆ ನಾಟಕದ ಬರೀರಂಗ ಪ್ರಯೋಗದ ವಿಮರ್ಶೆ ಎರಡು ಅಪೂರ್ಣ. ಅವೆರಡನ್ನು ಸೇರಿಸಿ
ನೋಡುವುದು ಆರೋಗ್ಯಪೂರ್ಣ ಎನ್ನುವ ಊಹೆಗಾಗಿ ಈ ಹುಡುಕಾಟ.
೨)
ಇದುವೆರಗೂ ನಾಟಕ ಸಾಹಿತ್ಯವನ್ನು ಕುರಿತು ಒಂದು ಸ್ಪಷ್ಟವಾದ ವಿಮರ್ಶೆಯ ಮಾನದಂಡವೇ ನಮ್ಮಲ್ಲಿ ಬರಲಿಲ್ಲ
ಎನ್ನುವುದು.
೩)
ವಿಮರ್ಶೆ ಸಾಮಾನ್ಯ ಓದುಗನಿಗೂ ನಾಟಕದ ಮೌಲ್ಯವನ್ನು ತಿಳಿಸುವಂತಿರಬೇಕು. ಅಂದರೆ ನಿರ್ದೇಶಕ ಮತ್ತು
ವಿಮರ್ಶಕ, ಪೇಕ್ಷಕ ಮತ್ತು ಓದುಗನ ಅಭಿರುಚಿಯನ್ನು ಕಾಲಮಾನಕ್ಕೆ ತಕ್ಕಂತೆ ಬದಲಿಸಿ ಆಸಕ್ತಿಯನ್ನು ಕೆರಳಿಸುವ
ಸಾಮರ್ಥ್ಯ ಹೊಂದಿದವರಾಗಿರಬೇಕು.
೪)
ನಾಟಕಗಳನ್ನು ವಿರ್ಮಶಿಸುವ ವಿಮರ್ಶಕನಿಗೆ ನಾಟಕಗಳಲ್ಲಿನ ರಂಗಸಾಧ್ಯತೆಗಳನ್ನು ಹೆಕ್ಕಿ ತೆಗೆಯುವ ಗುಣ
ಅವಶ್ಯಕ.
ಇವು ಕಾನಾರ್ಡರ ‘ತುಘಲಕ್’ ನಾಟಕವನ್ನು ನೆಪವಾಗಿರಿಕೊಂಡು ಮಲ್ಲೇಶಗೌಡರು ಒಟ್ಟು ರಂಗಚಟುವಟಿಕೆಗಳಲ್ಲಿ ನಡೆಸುವ ಹುಡುಕಾಟ.
ತುಘಲಕ ನಾಟಕದ ಮನಸ್ಥಿತಿ ಅಥವಾ ವಿಷಯ ಹೊಸದೇನಲ್ಲ. ಷೇಕ್ಸಪಿಯರನ ಮಾಕಬೆತ್ ಇತ್ತು, ಕನ್ನಡ ಅರುಣೋದಯ
ಕಾಲದ ಬಹಳ ಪ್ರಮುಖ ಭಾಷಾಂತರಕಾರ ಎಮ್. ಎಸ್ ಶ್ರೀಕಂಠೇಶಗೌಡರಿಂದ ಸಧ್ಯದ ಕೆ.ಎಸ್ ಭಗವಾನರವರೆಗೆ ‘ಷೇಕ್ಸಪಿಯರ್’
ನಾಟಕದ ಅನೇಕ ಅವತರಣಿಕೆಗಳು ಲಭ್ಯವಿದ್ದವು. ಲಂಕೇಶರ ‘ದೊರೆ ಈಡಿಪಸ’ ಇತ್ತು. ಆದರೆ ಮಲ್ಲೇಶಗೌಡರಿಗೆ
ಕಾನಾರ್ಡರ ತುಘಲಕ್ ಯಾಕೇ ಬೇಕಾಗಿರಬಹುದು? ಎನ್ನುವುದಕ್ಕೆ ನಾನು ಕಂಡುಕೊಂಡಿರುವ ಒಂದು ಸಮಾಧಾನ-
ಮ್ಯಾಕಬೆತ್ ಮತ್ತು ಓಡೀಪಸರು ಸಾಂಧರ್ಬಿಕ ಬೊಂಬೆಗಳು.
ಅವರ ಬಹುಪಾಲು ಕ್ರಿಯೆಗೆ ಅವರು ಹೊಣೆಗಾರರಲ್ಲ. ಅವರು ನಿಯಂತ್ರಿಸಲಾಗದ ಶಕ್ತಿಯೊಂದರ ಕೈಯಲ್ಲಿನ ದಾಳಗಳಷ್ಟೇ.
ಆದರೆ ಈ ತುಘಲಕ್ ಹಾಗಲ್ಲ. ಇಲ್ಲಿ ಈತನೇ ಎಲ್ಲ ಯೋಜನೆಗಳ ಹರಿಕಾರ. ತನ್ನ ಕ್ರಿಯೆಗಳ ಫಲಿತಾಂಶಗಳಿಗೆ
ಆತನೇ ಹೊಣೆಗಾರ, ಇಂತಹ ಪಾತ್ರಗಳ ಶಕ್ತಿಯೇ ಭಿನ್ನ. ಜೊತೆಗೆ ರಂಗ ಪ್ರಯೋಗವಾಗಿಯೂ, ಒಂದು ಸಾಹಿತ್ಯ
ಕೃತಿಯಾಗಿಯೂ ಒಂದು ಸಶಕ್ತ ಸೃಷ್ಟಿ. ‘ತುಘಲಕ್’ನನ್ನು ಚಿತ್ರಿಸುತ್ತಾ ಈ ತುಘಲಕ ಏನನ್ನೂ ಸಾಬೀತುಪಡಿಸುತ್ತಾನೆ
ಎನ್ನುವುದನ್ನು ಮಲ್ಲೇಶಗೌಡರು ಬರೆಯುತ್ತಾರೆ. “ಇವನಲ್ಲಿ ಅಸಾಧಾರಣ ರಾಜಕಾರಣ, ಅಗಾಧ ಪಾಂಡಿತ್ಯ, ಕನಸುಗಾರಿಕೆಗಳ
ಜೊತೆಗೆ ರಾಕ್ಷಸಿಯತೇ, ಅವಿವೇಕತೆಗಳೂ ಮನೆ ಮಾಡಿಕೊಂಡಿವೆ. ತನ್ನ ಪರಿಸರದ ಜನಮಾನಸವನ್ನು ಅರ್ಥಮಾಡಿಕೊಳ್ಳಲು
ಅಸರ್ಮಥನಾದ ತುಘಲಕನಿಗೆ ತನ್ನ ಆದರ್ಶದ ಹಟವೇ ಮುಖ್ಯವಾಗಿ, ಇನ್ನುಳಿದ ಮೌಲ್ಯಗಳನ್ನು ಮಣ್ಣುಪಾಲು ಮಾಡುತ್ತಾನೆ.
ಇದರಿಂದಾಗಿ ಈತ ಸ್ವಯಂನಿಷ್ಟನಾಗಿ ಗೋಚರಿಸುತ್ತಾನೆ. ಜೀವನ ಮೌಲ್ಯಗಳನ್ನು ಲೆಕ್ಕಿಸದೆ ಕೇವಲ ಆದರ್ಶಗಳಿಗೆ
ಹಂಬಲಿಸುವವನ ಬದುಕಿನ ಬೆಲೆಯಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.
ಮುಂದುವರೆದು ಬರೆಯುತ್ತಾರೆ, “ತನ್ನ ರಾಜ್ಯದಲ್ಲಿ
ಶಾಂತಿ, ನ್ಯಾಯ ಸಮ್ಮತಿ ಬೇಕೆಂದು ಆದರ್ಶ ಹೊಂದಿದ್ದ
ತುಘಲಕನೇ ಹಿಂಸೆಯ, ಕೌರ್ಯದ ಆರಾಧಕನಾದುದು ಮಾತ್ರ
ಆಶ್ಚರ್ಯವಾಗುತ್ತದೆ. ಮಲ್ಲೇಶಗೌಡರು ಇದೇ ನಾಟಕದಲ್ಲಿ ಬಂದ ಮಲತಾಯಿ, ಅಜೀಜ್, ಅಜಂ, ನಜೀಬ್,
ಬರನಿ, ಷಾಯುದ್ದೀನ, ರತನ್‌ಸಿಂಗರನ್ನು ಕುರಿತು ಇದುವರೆಗೂ ಬಂದ ವಿಮರ್ಶೆಯನ್ನು ಪ್ರಶ್ನಿಸುತ್ತಾರೆ.
ತುಘಲಕನನ್ನು
ಕುರಿತು ಖಾಸಗಿ ಬದುಕಿನಿಂದ ವಂಚಿತನಾದವನು ನಿಜವಾಗಿಯೂ ಶ್ರೇಷ್ಟ. ಅಸಂಗತ ನಾಯಕನಾಗಬಲ್ಲ ಎಂಬುದನ್ನು
ಸ್ಪಷ್ಟ ಪಡಿಸುತ್ತಾರೆ.ತುಘಲಕ ನಾಟಕವನ್ನು ಕುರಿತು ಬಹುತೇಕ ಇದುವರೆಗೆ ಕನ್ನಡ ವಿಮರ್ಶಕರು ಗಮನಿಸದೇ
ಇರುವ ಹಲವು ವಿಚಾರಗಳನ್ನು ಅವರು ಇಲ್ಲಿ ಬರೆದಿದ್ದಾರೆ.
೧)
ಕಾರ್ನಾಡರ ಈ ನಾಟಕದಲ್ಲಿ ತುಘಲಕ ಒಂದು ಪಾತ್ರವಾದರೆ, ಅವನ ಸುತ್ತ ಬರುವ ಎಲ್ಲ ವ್ಯಕ್ತಿಗಳು ಸೇರಿ
ಮತ್ತೊಂದು ಪಾತ್ರ. ಈ ವ್ಯಕ್ತಿಗಳಲ್ಲಿ ಪ್ರಧಾನ ಅಪ್ರಧಾನವೆಂಬ ತಾರತಮ್ಯವಿಲ್ಲವೆನಿಸುತ್ತದೆ. ಕೆಲವು
ಪಾತ್ರಗಳು ರಂಗದ ಮೇಲೆ ಹೆಚ್ಚು ಕಾಣಿಸಿಕೊಳ್ಳಬಹುದು.ಜೊತೆಗೆಹೆಚ್ಚು ಮಾತಾಡಬಹುದು. ಇನ್ನೂ ಕೆಲವು
ಪಾತ್ರಗಳು ಒಂದೆರಡು ಬಾರಿ ಬಂದು ಕೆಲವೇ ಮತುಗಳನ್ನಾಡಬಹುದು.
ಅಥವಾ ಕೆಲವು ಪಾತ್ರಗಳು ರಂಗದ ಮೇಲೆಯೂ ಬರದೆಯೂ ಹೋಗಬಹುದು.ಆದರೆ ಎಲ್ಲ ಪಾತ್ರಗಳ ಪರಿಣಾಮ ಒಂದೇ.
೨)
ರಾಜಧಾನಿ ಬದಲಾವಣೆ,ತೆರಿಗೆ ನೀತಿ, ಮತ್ತು ನಾಣ್ಯ ಪರಿವರ್ತನೆ, ಘಟನೆಗಳೀಗೆ ಹೆಚ್ಚು ಒತ್ತು ಕೊಟ್ಟು,
ಅವುಗಳ ಸುತ್ತ ಉಳಿದ ಘಟನೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ದಂಗೆ,ಪಿತೂರಿ ಮತು ಬರಹಗಳಂತಹ
ವಿಶಾಲ ಸಂದೇಶಗಳನ್ನು ಸಾಂಕೇತಿಕವಾಗಿ ಮಾತ್ರ ತರುತ್ತಾರೆ.
೩)
ನಾಟಕ ಆಟಗಳಿಂದ ಕೂಡಿದೆ. ಜಾನಪದ ಅಥವಾ ಗ್ರಾಮೀಣ ಜನ ಆಟ ಎಂಬ ಪದವನ್ನು, ನಾಟಕ ಎಂಬರ್ಥದಲ್ಲಿ ಬಳಸುತ್ತಿರುವುದನ್ನು
ಗಮನಿಸುತ್ತಿರಬಹುದು. ನಾಟಕ ಪ್ರಾರಂಭವಾಗುವುದು ಅಂಥದೊಂದ್ದು ಆಟದಿಂದಲೇ.ಕಳ್ಳನ ಹಾಗೆ ಖಾಜಿಯ ಎದುರು
ಅರಸ ಮತ್ತು ಅಗಸ ಕೈಕಟ್ಟಿ ನಿಂತಿದ್ದಾರೆ.ನ್ಯಾಯ ವಿಚಾರಣೆ ಎಂಬ ಆಟ ನಡೆಯುತ್ತದೆ.ತೀರ್ಪು ಹೊರಬೀಳುತ್ತದೆ.
ಹೊರಡಿರಿ,ಹೊರಡಿರಿ, ಆಟ ಎಲ್ಲ ಮುಗಿಯಿತು ಎಂಬಲ್ಲಿಗೆ ಕಾವಲುಗಾರ ಎಲ್ಲರನ್ನು ಕಳುಹಿಸುತ್ತಾನೆ.
೪)
ಚದುರಂಗ ಈ ನಾಟಕದಲ್ಲಿ ಪ್ರಾಸಂಗೀಕವೂ ಹೌದು. ಸಾಂಕೇತಿಕವೂ ಹೌದು.ತುಘಲಕನ ವ್ಯಕ್ತಿತ್ವದ ಒಂದು ಮುಖ್ಯ
ಮುಖಕ್ಕೆ ದೀಪವೂ ಹೌದು.
೫)
ಜನ ಮತ ಹಾಕುವುದೇ ನನ್ನ ಅರ್ಹತೆಯಾಗಲಾರದು. ಒಬ್ಬನನ್ನು ಚುನಾವಣೆಯಲ್ಲಿ ಸೋಲಿಸದ್ದಷ್ಟಕ್ಕೆ ನಾನು
ನಾಯಕನಾಗಲಾರೆ ಎಂಬ ಅರಿವು ಸೂತ್ರ ಹಿಡಿಯುವವರೆಗೆ ಇರಬೇಕಾಗುತ್ತದೆ ಎಂಬುದನ್ನು ಧ್ವನಿಸುತ್ತಾರೆ.
ಬಹಳ ದಿನಗಳ ಹಿಂದೆಯೇ ರಾಮಚಂದ್ರ ದೇವ ಅವರ, ‘ಷೇಕ್ಸಪಿಯರ್
ಎರಡು ಸಂಸ್ರ್ಕತಿಗಳಲಿ’ ಎನ್ನುವ ಕೃತಿ ಓದಿದ್ದೆ. ಅದು ಕೂಡ ಹೀಗೆಯೇ ಷೇಕ್ಸಪಿಯರನ ಕುರಿತು ಬಂದ ವಿಮರ್ಶೆಗಳ
ಪರಾಮರ್ಶೆ.ಇಂತಹ ಬರಹ ಬಹಳಷ್ಟು ಎಚ್ಚರಿಕೆಗಳಿಂದ ಕೂಡಿರುತ್ತದೆ. ತೀರ ಪರಿಚಿತ ಮತ್ತು ತೀರ ಅಪರಿಚಿತವಾದವುಗಳನ್ನು
ಬರೆದು ಗೆಲ್ಲುವುದು ಕಷ್ಟ. ಹಾಗೆಯೇ ಮಲ್ಲೇಶಗೌಡರ ತುಘಲಕ ಕುರಿತ ಈ ಬರಹವೂ ಕೂಡ. ತೀರ ಪರಿಚಿತವಾದುದನ್ನು
ಕುರಿತು ಮಲ್ಲೇಶಗೌಡರು ಯಶಸ್ವಿಯಾಗಿ ಬರೆದಿದ್ದಾರೆ. ಅವರಿಗೆ ಅಭಿನಂದನೆಗಳು.
ನನ್ನ ಕೃತಿ "ಷೇಕ್ಸಪಿಯರನ ಕುರಿತು ಬಂದ ವಿಮರ್ಶೆಗಳ ಪರಾಮರ್ಶೆ" ಅಲ್ಲ. ನಿಜವಾಗಿ ಓದಿದವರಿಗೆ ಅದು ಏನೆಂದು ಗೊತ್ತಿರುವ ಕಾರಣ ಹೆಚ್ಚಿನ ವಿವರಣೆ ಅನಗತ್ಯ.
ReplyDeleteರಾಮಚಂದ್ರ ದೇವ
ನಿಮ್ಮ ಅತ್ಯಂತ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು.`ಷೆಕ್ಸಪಿಯರ್ ಎರಡು ಸಂಸ್ಕ್ರತಿಗಳಲ್ಲಿ' ಸುಮಾರು ನನ್ನ ಪಾಲಿನ ಹನ್ನೆರಡು ವರ್ಷಗಳ ಹಿಂದಿನ ಓದು. ನಿಜವಾಗಿಯೂ ಓದಿರುವೆನೋ, ಅಥವಾ ಇನ್ನ್ಯಾವುದೋ ರೀತಿಯಲ್ಲಿ ಓದಿದೆನೋ ಅದು ನನ್ನಾತ್ಮಕಷ್ಟೇ ಗೊತ್ತಾಗುವ ವಿಷಯ. ನಿಮ್ಮದೇ ಭಾಷೆಯಲ್ಲಿ ಹೇಳಬೇಕೆಂದರೆ `ಹೆಚ್ಚಿನ ವಿವರಣೆ ಅನಗತ್ಯ'.
Deleteಡಾ.ರಾಜಶೇಖರ ಮಠಪತಿ(ರಾಗಂ)