Total Pageviews

Sunday, March 11, 2012

ಕವಿಶೈಲದ ಮಣ್ಣು, ಬೆಂಗಳೂರಿನ ಮತ್ತು


                 ಕವಿಶೈಲದ ಮಣ್ಣು, ಬೆಂಗಳೂರಿನ ಮತ್ತು

                             ಟೀಕೆ ಟಿಪ್ಪಣಿಗಳಿಗೆ ಕನ್ನಡದಲ್ಲಿ ಕಂಡುಬರುವುದು ಅಖಂಡ ಮೌನ ಮಾತ್ರ.
                                                                                                                      
                                                                                                    -ವಸಂತ ಬನ್ನಾಡಿ

ನಮ್ಮ ಸಾಹಿತ್ಯಕ ರಾಜಧಾನಿಗಳಲ್ಲಿ (ಮೈಸೂರು-ಬೆಂಗಳೂರು-ಧಾರವಾಡ) ಅಲ್ಲಲ್ಲಿ ನಡುಗಡ್ಡೆಗಳಂತೆ ಸಾಹಿತಿಗಳ ಗುಂಪುಗಳಿಗೆ. ಇವುಗಳಿಗೆ ಹೊರನೋಟಕ್ಕೆ ವೈಚಾರಿಕ, ಸೈದ್ಧಾಂತಿಕ ಭಿನ್ನತೆಯ ಕಾರಣಗಳಿದ್ದರೂ ಆಂತರಿಕವಾಗಿ ಜಾತಿ ಮತ್ತು ಸ್ವಾರ್ಥವೇ ಈ ಗುಂಪುಗಾರಿಕೆಗೆ ಕಾರಣವಾಗಿರುವುದನ್ನು ಗಮನಿಸಬಹುದು. ಅವರವರ ಚೇಲಾಗಳು ಬಗಲಿನ ಚೀಲುಗಳಲ್ಲಿ ಬಾಟಲ್ ಹಾಕಿಕೊಂಡು, ತನ್ನ ಪಾಲಿನ ಜಾಗತಿಕ ಲೇಖಕನಿಗೆ ಅಹವಾಲುಗಳನ್ನಿಟ್ಟುಕೊಂಡು, ರಾತ್ರಿಯ ಲೆಕ್ಕಾಚಾರಗಳಲ್ಲಿ ಏರಿಸಿ-ಇಳಿಸಿ, ಗುಂಡಿನ ರೌಂಡಗೊಮ್ಮೆ ಮಾತು ಬದಲಿಸಿ, ಮತ್ತಿಗೊಮ್ಮೆ ಸಿದ್ಧಾಂತಕ್ಕೆ ಹೊರಳಿಸಿ ಮುಕ್ತಾಯವಾಗುವ ಗೋಷ್ಠಿಗಳನ್ನು ಮರುದಿನ ಸ್ಮರಿಸಿಕೊಂಡರೆ ಎಲ್ಲವೂ ಭ್ರಮನಿರಸನ. ಇಂಥ ಒಂದೆರಡು ರಾತ್ರಿಗಳನ್ನು ನಾನು ಬೆಂಗಳೂರಿಲ್ಲಿ ಕಳೆದಿರಬಹುದೇನೊ. ಆದರೆ ನೆಲಮಂಗಲಕ್ಕೆ ಬರುತ್ತಲೆ ಹಿಂದಿನ ಒಂದೆರಡು ಗಂಟೆಗಳ ಮತ್ತು ಇಳಿದು ನೆಲದ ಅನುಭವವಾಗುತ್ತ ಮತ್ತೆ ಈ ರಾಜಕೀಯ ಕವಿಗಳ ಮಧ್ಯ ಮನುಷ್ಯನೊಬ್ಬನ ಹುಡುಕಾಟ ಪ್ರಾರಂಭವಾಗುತ್ತದೆ. ಇತ್ತೀಚೆಗೆ ಹೀಗೇ ಆಯಿತು.
            ತಿಂಗಳಾಯಿತು ಬಾಗಲಕೋಟೆಗೆ ಹೋಗಿ ಬಂದು. ದರವೆಸಿ ಮನಸ್ಸಿನ ಹುಡುಕಾಟ ನಿಂತಿರಲಿಲ್ಲ. ಕೊನೆಗೂ ಬಾಬಣ್ಣ ಸಿಕ್ಕೆ ಬಿಟ್ಟ. ಮನೆಗೆ ಹೋದಾಗ ಮೂರುಸಂಜೆ. ಆಗಷ್ಟೆ ಅಂಗಳದ ಮಣ್ಣಿಗೆ ಚಳಿ ಹೊಡೆದಿರಬಹುದು. ಯಾಕೆಂದರೆ ನಾನು ಕುಳಿತುಕೊಳ್ಳಬೇಕಾಗಿದ್ದಲ್ಲಿ ಮಣ್ಣಿನ ವಾಸನೆ. ನನ್ನಪ್ಪನಿಗೆ ಅಣ್ಣನಂತಿದ್ದ ಬಾಬಾ(ಹುಸೇನಸಾಬ) ನನಗಾಗಿಯೇ ಕಾಯುತ್ತಿದ್ದನೇನೋ! ಈತನಿಗೆ ಲಕ್ವಾ ಹೊಡೆದು ವರ್ಷಗಳೇ ಉರುಳಿವೆ. ಕ್ಷಮಿಸಿ, ಆತ ಈತ ಎನ್ನುತ್ತಿದ್ದೇನೆ. ಯಾಕೆಂದರೆ ಇದು ಆತ್ಮದ ದ್ವನಿ. ಆತ್ಮಕ್ಕೆ ಆಭರಣದ ಭಾಷೆ ಗೊತ್ತಿಲ್ಲ.
ಹೋಗಿ ಪಕ್ಕದಲ್ಲಿ ಕುಳಿತೆ. ಹಸುಗೂಸನ್ನು ಜೋಡುಕಾಲುಗಳ ಮೇಲೆ ಹಾಕಿಕೊಂಡು ಮುಖದಿಂದ ತಿಕದವರೆಗೆ ತಿಕ್ಕುವ ತಾಯಿಯಂತೆ ನನ್ನ ಮೈಯೆಲ್ಲಾ ಹುಸೇನಸಾಬ ಕೈಯಾಡಿಸಿಬಿಟ್ಟ. ನಾನೊಂದು ಕ್ಷಣ ದುರ್ಯೋದನನಿಗಿಂತಲೂ ಬೆತ್ತಲೆಯಾಗಿ ನಿಂತು ಗಾಂಧಾರಿಯಿಂದ ವರ್ಜಕಾಯ ಪಡೆದ ಆತ್ಮಸ್ಥೈರ್ಯವನ್ನು ಅನುಭವಿಸಿದೆ. ಮುಪ್ಪು ಕೈಗಳ ಹುಸೇನಸಾಬ ತೊದಲುತ್ತಾ ಗದ್ಗದಿತನಾಗಿ ನನ್ನ ಕೆನ್ನೆ ಸವರಿ ಹೇಳಿದ

ನೀನು ಮಣ್ಣೊಳಗಿನ ಬಂಗಾರ
ಮಣ್ಣು ಬಡವರ ಅನ್ನ

            ಅವನು ಕವಿ ಅಲ್ಲ ಬಿಡಿ. ಕೆರಿಯೊಳಗೆ ಕುಳಿತುಕೊಂಡು ಹಾಡುವ ಯಜಮಾನನಂತೆ ಅವನ ಸಾಲುಗಳು ನನಗೆ ಕಾಡಿವೆ ಅಷ್ಟೆ. ಒಂದು ಕಾಲಕ್ಕೆ ಈತ ಶರೆ ಕುಡಿದು ಲೋಕವ್ಯವಹಾರ ಮಾತನಾಡುವಾಗ ನಾನು ಮಣ್ಣಿನ ವಾಸನೆ ಹಿರುತ್ತಾ ನಿದ್ರೆಯಲ್ಲಿರುತ್ತಿದ್ದೆ. ಈಗಲೂ ನನಗೆ ಮಣ್ಣೆಂದರೆ ನೆನಪಾಗುವದು ಈ ಹುಸೇನಸಾಬ, ನನ್ನೂರು ಮತ್ತು ನನ್ನ ನಿದ್ರೆಯಲ್ಲೂ ಸಂಚಲನವಾಗುತ್ತಿದ್ದ ಶಕ್ತಿ.
            ಮುಂದೆ ಮತ್ತೆ ಈ ಮಣ್ಣಿನ ಬಗ್ಗೆ ಓದಿದಾಗ ನನ್ನನ್ನು ಕಾಡಿದ್ದು ಸು ರಂ ಯಕ್ಕುಂಡಿಯ ಕವಿತೆ. ಈ ಯಕ್ಕುಂಡಿ ಕಾವ್ಯ ನನ್ನ ಅತಿ ದೊಡ್ಡ ದೌರ್ಬಲ್ಯ. ವಿಮರ್ಶಕ ಬಂದುಗಳಿಗೆ ಈತ ಎಷ್ಟು ಬೇಕಾಗಿದ್ದನೋ ಇಲ್ಲವೋ ಆ ಮಾತು ಬೇರೆ. ನಾನಂತು ಈತನನ್ನು ಕುಡಿದು ಬಿಟ್ಟೆ. ರಾಮಾಯಣದ ಸೀತೆಯನ್ನು ಕೊಟ್ಟ ಮಣ್ಣನ್ನು ಕುರಿತು ಕವಿ ಬರೆಯುತ್ತಾನೆ -

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಿ ಬರುವೆ
ರಾಮಭದ್ರನ ಕಥೆಯ ಹಾಡಿ ಕರಡಿಗೆಯಲ್ಲಿ
ಜನಕರಾಜನ ಹೊಲದ ಮಣ್ಣು ತರುವೆ

            ಯಕ್ಕುಂಡಿಯವರ ಕವಿತೆ ‘ಮಿಥಿಲೆ’ ನಾನು ನೂರು ಸಾರಿ ಓದಿರಬಹುದು. ಮಗಳು ಹುಟ್ಟಿದ ಮೇಲಂತೂ ಅದು ನನ್ನ ಹೃದಯದ ಅವಿಭಾಜ್ಯ ಅಂಗವೇ ಆಗಿದೆ. ನೆನಪಿರಲಿ, ಈ ಕವಿತೆ ಇರುವುದು ಅಯೋಧ್ಯಯ ಮಹಾರಾಣಿ ಸೀತೆಯನ್ನು ಕುರಿತಲ್ಲ ಜನಕರಾಜನ ಮಗಳು ಮಿಥಿಲೆಯ ಬಗ್ಗೆ. ಸೀತೆ ಮಿಥಿಲೆಯಾಗಿದ್ದಳು ಎನ್ನುವುದೇ ಈ ಹೆಣ್ತನದ ಸೌಂದರ್ಯ.
            ಈ ಲೇಖನ ಬರೆಯುವ ವೇಳೆಗೆ ಉತ್ತರ ಕರ್ನಾಟಕದಲ್ಲಿ ಯಲ್ಲಮ್ಮನ ಜಾತ್ರೆ ಮುಗಿದು ಕೆಲವು ದಿನಗಳಾಗಿರಬಹುದಷ್ಟೆ.  ದೇವಿಯ ಭಂಡಾರ ಸಿಗದ ತಾಯಂದಿರು ಪಾದಗಟ್ಟಿಗೆ ಸುತ್ತು ಹೊಡೆದು ಹಸುಗೂಸುಗಳ ಹಣೆಗೆ ಮಣ್ಣನ್ನೇ ಬಂಡಾರದಂತೆ ಬಳಿಯುವ ದೃಶ್ಯ ಇಲ್ಲಿ ನೆನಪಾಗುತ್ತದೆ ನನಗೆ.
            ಹಲಸಂಗಿಯಲ್ಲಿ ಮಧುರಚೆನ್ನರ ಸಮಾಧಿಯ ಸುತ್ತ ಸುತ್ತು ಹಾಕುವ ತಾಯಂದಿರು ಅಲ್ಲಿಯ ಮಣ್ಣನ್ನೆತ್ತಿ ಮಗುವಿನ ಹಣೆಗಿಡುವ ದೃಶ್ಯವನ್ನ ನಾನು ನೋಡಿದ್ದೇನೆ. ಬಿ.ಎಮ್.ಶ್ರೀ ಬಿಜಾಪುರಕ್ಕೆ ಕಾಲಿಡುತ್ತಲೇ ಭಾವಪರವಷರಾಗಿ ಅಲ್ಲಿಯ ಮಣ್ಣನ್ನೆತ್ತಿಕೊಂಡಿದ್ದನ್ನು ಕೇಳಿದ್ದೇನೆ. ಹೀಗೆ ಈ ಮಣ್ಣಿನ ಮಹಿಮೆ ಒಂದೇ ಎರಡೆ.
            ಮಣ್ಣು ಎಲ್ಲಕಾಲಕ್ಕೂ ಶೋಷಿತರ, ದಮನಿತರ ಸಂಕೇತ. ಅದು ಅನ್ನ ಮತ್ತು ಬದುಕಿನ ಭರವಸೆಯ ಸಂಕೇತ, ಅದು ಬೇರುಗಳ ಪ್ರಶ್ನೆ, ಮತ್ತಿನ್ನೇನೋ. ಕೆಲವರು ಮೆಟ್ಟಿದ ಮಣ್ಣು ವಿಭೂತಿ ಮತ್ತೇ ಕೆಲವರು ಮೆಟ್ಟಿದ ಮಣ್ಣು ಧೂಳು.  ಧೂಳಿಗೂ ವಿಭೂತಿಗೂ ವ್ಯತ್ಯಾಸವಿದೆ. ಅಂತೆಯೆ ಬರೆದರು ನಮ್ಮ ಚಂಪಾ-
ಹೋಗಿ ಬರ್‍ತೀನಜ್ಜಾ ಹೋಗಿ ಬರ್‍ತೀನಿ
ನಿನ್ನ ಪಾದದ ಧೂಳಿ ನನ್ನ ಹಣಿಮ್ಯಾಗಿರಲಿ
ತಪ್ಪಿಯೂ ಕಣ್ಣಾಗ ಬೀಳದಿರಲಿ

            ಇಷ್ಟೆಲ್ಲ ಪೀಠಿಕೆಯ ಉದ್ದೇಶವಿಷ್ಟೆ ಮಣ್ಣು ಮತ್ತು ಅದರ ಸಂಸ್ಕೃತಿ ಕಾಡಿದ ರೀತಿಯಲ್ಲಿ ನಮ್ಮನ್ನು ಬೌದ್ಧಿಕತೆ  ಕಾಡುವುದಿಲ್ಲ. ಮಣ್ಣಿಗಿರುವ ವಿನಯ, ಪ್ರಾಮಾಣಿಕತೆ ಮನಿಷ್ಯನ ಬುದ್ಧಿಗಿಲ್ಲ. ಬುದ್ಧಿ ಪಾರಮ್ಯದ ಲೇಖಕರು ಮಣ್ಣು ಸಹಜವಾದ ಲೇಖಕರಂತೆ ನಮ್ಮನ್ನು ಕಾಡುವುದಿಲ್ಲ. ಅದಕ್ಕಾಗಿ ನಾನು ಹೀಗೆ ಬರೆದೆನೇನೋ.....
ರಾತ್ರಿ ಹತ್ತಾದರೆ
ಇಳಿಯುತ್ತದೆ ಬೆಂಗಳೂರಿನ ಮತ್ತು
ಇರುಳ ಕನಸೆಲ್ಲಾ ಕಾಡುತ್ತದೆ
ಕವಿಶೈಲದ ಮಣ್ಣು ಮತ್ತೆ
ಮಧುರಚೆನ್ನರ ನವಿಲಿನ ಕಣ್ಣು
                                  ರಾಗಂ
ಹಿರಿಯ ವಿಮರ್ಶಕ ಗೆಳೆಯ ರಹಮತ್ ತರಿಕೆರೆ ತಮ್ಮ ಕತ್ತಿಯಂಚಿನ ದಾರಿಯಲ್ಲಿ ಒಂದು ಮಹತ್ವದ ವಿಚಾರವನ್ನು ಚರ್ಚಿಸಿದ್ದಾರೆ. “ಒಂದು ಭಾಷೆಯ ಲೇಖಕ ಸಮುದಾಯವು, ಸಂಗಾತಿಗಳಂತೆ ಪರಸ್ಪರ ಕಲಿತು ಕಲಿಸುವ ಡೆಮಾಕ್ರಟಿಕ್ ಪರಿಸರವೊಂದು ನಿರ್ಮಿಸಿಕೊಳ್ಳುವುದು, ಸಾಹಿತ್ಯಕ ಪರಿಸರದ ಆರೋಗ್ಯಕ್ಕೆ ಮಾತ್ರವಲ್ಲ; ಸಮಾಜದ ಇತರೆ ಕ್ಷೇತ್ರಗಳಲ್ಲೂ ಶ್ರೇಷ್ಠ-ಕನಿಷ್ಠಗಳೆಂಬ ತರತಮವಿಲ್ಲದೆ ಒಡನಾಡುವ ಸಾಂಸ್ಕೃತಿಕ ವಿನಯವನ್ನು ಪಡೆದುಕೊಳ್ಳುವುದಕ್ಕೆ ನೆರವಾಗುತ್ತದೆ. ಹಾಗಲ್ಲದೆ ಬರೀ ಕಲಿಸುವ ಮಾತನಾಡುವುದು ಮತ್ತೊಂದು ಪ್ರಕಾರದ ಸ್ವಾಯತ್ತತೆಯನ್ನು ಮನ್ನಿಸದ ಅಹಂಕಾರವಾಗುತ್ತದೆ. ಇದಕ್ಕೂ ಮತ್ತೊಬ್ಬ ವ್ಯಕ್ತಿಯ ಘನತೆಯನ್ನು ಮನ್ನಿಸದಿರುವ ನಿಲುವಿಗೂ ವ್ಯತ್ಯಾಸವೇನಿಲ್ಲ”. ಇಲ್ಲಿ ತರಿಕೆರೆಯವರ ಈ ಹೇಳಿಕೆಯಲ್ಲಿ ಗಮನಿಸಬೇಕಾದುದು “ಸಂಗಾತಿ” ಕಲಿತು-ಕಲಿ. ಡೆಮಾಕ್ರಟಿಕ್, ಆರೋಗ್ಯ, ಸಮಾಜ ಎಂಬ ಪದಗಳನ್ನು ಇವು ನೆಲದ ಮೇಲಿರುವವರ, ನೆಲವೇ ನೆಲೆ ಎಂದು ತಿಳಿದವರು ಬರೆಯಬಹುದಾದ ಸಾಲುಗಳು.
            ಜನೆವರಿ ೨೮/೨೦೧೨ ರಂದು “ದ ಹಿಂದೂ” ಪತ್ರಿಕೆಯ ಸಾಹಿತ್ಯಕ ಪುರವಣಿಯಲ್ಲಿ ಸುಪ್ರೀಂ ಕೋರ್ಟನ ಮಾಜಿ ಜಡ್ಜ್ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಹಾಲಿ ಚೇರ್‌ಮನ್‌ರೂ ಆಗಿರುವ ಮಾರ್ಕಂಡೆಯ ಕಾಟ್ಜು ಅವರು ಒಟ್ಟು ಭಾರತೀಯ ಸಾಹಿತ್ಯವನ್ನು ಗಮನದಲ್ಲಿರಿಸಿಕೊಂಡು ಪ್ರಶ್ನೆಯೊಂನ್ನು ಎತ್ತಿದ್ದಾರೆ - However, there is hardly any good art and literature today before us. Where are the Sarat Chandras and Premchands? Where are the Kabirs, the Dickens? There seems to be a vacuum in artistic and literary terms. Everything seems to have become commercialized. Writers write not to highlight the plight of the masses but to earn money.
            Today India thirsts for good literature. If someone writes about the people’s real problems it will spread like wildfire. But are our writers doing this? If they are not, why do they complain that nobody wants to read them? Art and literature must serve the people. Writers and artists must have genuine sympathy for the people and depict their sufferings. Like Dickens and Shaw in  England, Rousseau and Valtaire in France, Thomas Paine and Walt Whiteman in America, Chernyshevsky  and Gorky in Russia and  Sarat Chandra and Nazrul Islam in Bengal, they must inspire people to struggle for a better life. What can be really called human existence, and to create a better world, free of injustice. Only then will people respect them. ಈ ಹೇಳಿಕೆಯಲ್ಲೂ ಅಷ್ಟೆ. ನೆಲದಂತೆ ಹಂಬಲಿಸಿದ ಮನಸ್ಸಿನ ಕನವರಿಕೆಗಳಿವೆ. ಅಪಾರ ಸಂಖ್ಯೆಯ ಬರಹಗಾರರ ಮಧ್ಯ ಲೇಖಕರನ್ನು ಹುಡುಕುವ ಪ್ರಯತ್ನ ನಡೆದಿದೆ. ಪೀಠ, ಪ್ರಶಸ್ತಿ ಸಮ್ಮೆಳನಗಳಲ್ಲಿ ಕಳೆದುಹೋಗದೇ ರೈತನಂತೆ ತೊಡಗಿಸಿಕೊಂಡ ಲೇಖಕ ಮಹಾಶಯನ ಅನ್ವೇಷಣೆ ನಡೆದಿದೆ. ಪಥಬ್ರಷ್ಟತೆಗೆ ಸಾಹಿತ್ಯದ ಯಾವ ಪ್ರಕಾರವೂ ಸಾಕ್ಷಿಯಾಗಿಸಬಹುದು, ಆದರೆ ವಿಮರ್ಶೆಯನ್ನೇ ನಾನೆತ್ತಿಕೊಂಡಿದ್ದೇನೆ ಯಾಕೆಂದರೆ ಸೃಜನಶೀಲ ಕ್ರಿಯೆಯಲ್ಲಿಯೇ ಅತ್ಯಂತ ಎಚ್ಚರಿಕೆಯಿಂದ ನಡೆಯುವುದು ವಿಮರ್ಶೆ. ಆದರೆ ಈ ಎಚ್ಚರಿಕೆಯ ಕ್ರಿಯೆ ಹೇಗಿದೆ ಎನ್ನುವುದಕ್ಕೆ ಇಲ್ಲಿಯೊಂದು ಸಾಕ್ಷಿ.  
ಇದು ಕನ್ನಡದ ಪಾಲಿಗೆ ಇಡಿಯಾಗಿ ಸಮ್ಮತವಲ್ಲದಿದ್ದರೂ ಕೂಡ ನಮ್ಮ ಸಾಹಿತ್ಯ ಸೃಷ್ಠಿಯ ಒಂದು ಆಯಾಮವಾದ ವಿಮರ್ಶೆಯಲ್ಲಿ ಯಾವ ಬೆಳವಣಿಗೆ ಇದೆ ಎನ್ನುವುದನ್ನು ತರಿಕೆರೆ ಹೀಗೆ ದಾಖಲಿಸಿದ್ದಾರೆ. “ಈಗ ವಿಮರ್ಶೆ ಎಂಬುದು ರಾಜಕಾರಣ, ಧರ್ಮ, ಸಮಾಜ, ಫಿಲಾಸಫಿ ಹೀಗೆ ಲೋಕದ ಹತ್ತೆಂಟು ವಿಷಯಗಳನ್ನು ಮೈಮೇಲೆ ಎಳೆದುಕೊಂಡು ಚರ್ಚಿಸುತ್ತಿದೆ. ಈ ಹಲವು ವಿಷಯಗಳಲ್ಲಿ ಸಾಹಿತ್ಯವು ಮುಖ್ಯವಾಗಿದ್ದರೂ, ಅದೇ ಎಲ್ಲವೂ ಅಲ್ಲ. ಇದರಿಂದ ವಿಮರ್ಶೆಯು ಶುದ್ಧ ಸಾಹಿತ್ಯಗಿರಿ ಬಿಟ್ಟು ‘ಅಶುದ್ಧ’ವಾಗಿ, ಈ ಕಾರಣಕ್ಕೇ ತನ್ನ ಕಾಲ ಮೇಲೆ ನಿಂತುಕೊಳ್ಳಬಲ್ಲ ವ್ಯಕ್ತಿತ್ವ ಪಡೆಯುತ್ತ, ಸಂಸ್ಕೃತಿ ಚಿಂತನೆಯಾಗಿ ರೂಪಾಂತರಗೊಳ್ಳುತ್ತಿದೆ. ವಿಮರ್ಶೆ ಓದುಗರ ಜೊತೆಗೆ ಸಂವಾದ ಏರ್ಪಡಿಸುವ ಕೆಲಸಕ್ಕಿಂತ ಹೆಚ್ಚಾಗಿ, ಲೇಖಕರನ್ನು ಮನ್ನಣೆಯ ಜಾಗಗಳಿಗೆ ಹತ್ತಿಸುವ ಏಣಿಯ ಕೆಲಸವನ್ನು ಸಮಕಾಲೀನ ಸಂದರ್ಭ ಹೇರಿಬಿಟ್ಟಿರುವುದು. ಹೀಗಾಗಿ ವಿಮರ್ಶೆ ಏಕಕಾಲಕ್ಕೆ ಬುದ್ಧಿ ಹೇಳಿಸಿಕೊಳ್ಳುವ ದಡ್ಡನಂತೆ, ಪರಿಚಾರಿಕೆ ಮಾಡುವ ಊಳಿಗದವನಂತೆ, ಪ್ರಾಡಕ್ಟನ್ನು ಪ್ರಚಾರ ಮಾಡುವ ಜಾಹಿರಾತುದಾರನಂತೆ, ಬಹುರೂಪಿಯಾಗಿ ಕಾಣುತ್ತಿದೆ.” ಈ ವಿಮರ್ಶೆಯ ಅದ್ವಾನಗಳನ್ನು ಕುರಿತು ಬೇರೆ ಬೇರೆ  ಕಾಲ, ಘಟ್ಟಗಳಲ್ಲಿಯೂ ಚರ್ಚೆ ನಡೆದಿರುವುದಕ್ಕೆ ವಸಂತ ಬನ್ನಾಡಿ ತಮ್ಮ ‘ಇಗೋ ಅರಿವೆ’ಯಲ್ಲಿ ಒಂದು ನಿದರ್ಶನವನ್ನು ಕೊಟ್ಟಿದ್ದಾರೆ. ಇದು ರಿಲ್ಕೆ ಮತ್ತು ಫ್ರಾನ್ಜ್ ಕಾಫ್ಕರ ಮಧ್ಯದ ಪತ್ರ ವ್ಯವಹಾರ. “ಸಾಹಿತ್ಯ ವಿಮರ್ಶೆಯನ್ನು ಆದಷ್ಟು ಕಡಿಮೆ ಓದು, ಸಾಹಿತ್ಯ ವಿಮರ್ಶೆಯೆನ್ನುವುದು ಪಕ್ಷಪಾತದ ಅಭಿಪ್ರಾಯಗಳಾಗಿರುತ್ತದೆ. ಜಡ್ಡುಕಟ್ಟಿ ಅರ್ಥಹೀನವಾಗಿ, ನಿರ್ಜೀವವಾಗಿರುತ್ತದೆ. ಅಥವಾ ಇಂದು ಈ ಅಭಿಪ್ರಾಯವನ್ನು ಗೆಲ್ಲಿಸುವ, ನಾಳೆ ಮತ್ತೊಂದು ಅಭಿಪ್ರಾಯವನ್ನು ಗೆಲ್ಲಿಸುವ ಜಾಣತನದ ಪದಕ್ರೀಡೆಯಾಗಿರುತ್ತದೆ.” 
            ಈ ಮೇಲಿನ ಕೆಲವು ಆರೋಪಗಳನ್ನು, ಹೇಳಿಕೆಗಳನ್ನು ಸಾಹಿತ್ಯವನ್ನು ಗಂಭೀರವಾಗಿ ಎತ್ತಿಕೊಂಡವರು ಪರಿಗಣಿಸುವದಾದರೆ ಒಟ್ಟು ಸೃಜನಶೀಲ ಪರಿಸರದಲ್ಲಿ ಧ್ಯಾನಪರತೆಯ ಕೊರತೆಯಾಗಿರುವದಂತೂ ಸ್ಪಷ್ಟವಾಗುತ್ತದೆ. ಸಹಜತೆಹಿಂದ ದೂರ ಸರಿದು ರಾಜಕೀಯದ, ಅಧಿಕಾರದ, ಪ್ರಾಚಾರದ ಹುಚ್ಚು ನಶೆ ಹುಟ್ಟಿಸಿಕೊಂಡ ನಮ್ಮ ಸಾಹಿತ್ಯ ಮತ್ತು ಸಾಹಿತಿಗಳಿಂದ ಏನನ್ನು ನಿರೀಕ್ಷಿಸುವುದು? ದೊಡ್ಡ ಪ್ರಶ್ನೆಯಾಗಿದೆ. ಕವಿಋಷಿ, ದೃಷ್ಠಾರ ಎನ್ನುವ ಪದಗಳು ಹೋಗಲಿ ಒಬ್ಬ ಸಾಮಾನ್ಯ ಮನುಷ್ಯನ ಸ್ಥರದಿಂದಲೂ ಆತ ದೂರ ಎನಿಸುತ್ತಿದೆ. ದಿನೇ ದಿನೇ ಜನಸಾಮಾನ್ಯರು ಸಾಹಿತಿಗಳನ್ನು ಯಾವ ಗುಮಾನಿಯಿಂದ ಗಮನಿಸುತ್ತಿದ್ದಾರೆ ಎನ್ನುವುದೂ ಆತನಿಗೆ ಗೊತ್ತಾಗುತ್ತಿಲ್ಲವೆ? ಅಥವಾ ಈ ಭಂಡತನದ ಪ್ರತಿಪಾದನೆಯೆ ಆತನ ಉದ್ದೇಶವೆ? 
            ಇದರಿಂದ ಒಂದಂತು ಸತ್ಯ ಇದು ನಾವು ಲೇಖಕರು ನಮ್ಮ ನಮ್ಮ ಭ್ರಮೆಗಳಿಂದ ಹೊರಬಂದು ವ್ಯಕ್ತಿ ನಿರಸನಗೊಳಿಸಿಕೊಳ್ಳಬೇಕಾದ ಸಂದರ್ಭವಂತೂ ಸತ್ಯ. ಜನ ಮತ ಹಾಕುವುದೇ ಯಾವ ರೀತಿ ಒಬ್ಬ ಜನ ಪ್ರತಿನಿಧಿಯ ಅರ್ಹತೆಯಾಗಲಾರದೊ ಹಾಗೆಯೇ ನಮ್ಮ ಸಮ್ಮೇಳನ, ಪೀಠ ಮತ್ತು ನಮ್ಮ ಪ್ರಶಸ್ತಿಗಳೇ ನಮ್ಮ ಸಾಹಿತ್ಯದ ಅಸ್ತಿತ್ವಗಳ ಮಾನದಂಡಗಳಾಗಲಾರವು. ಅಲ್ಲಮನಂತೆ ಆಳವಾಗುತ್ತಾ ಹೋಗುವವರ ಜೀವನ ದರ್ಶನ ನೀಡಬಲ್ಲ ದೃಷ್ಠಾರನ ನೆಲೆಯ ಸಾಹಿತಿಗಳ ನಿರೀಕ್ಷೆ ಈ ಸಮಾಜಕ್ಕಿದೆ. ಸ್ವಯಂ ಸಾಂಪ್ರದಾಯಿಕತೆಯಿಂದ ಬಿಡುಗಡೆ ಹೊಂದಿ ತನ್ನವರನ್ನು ಮೌಡ್ಯಗಳಿಂದ ಹೊರತರಬಲ್ಲ ಲೇಖಕನನ್ನು ಈಗಲೂ ಜನ ಕಾಯುತ್ತಿದ್ದಾರೆ. ಸಾಂಪ್ರದಾಯಿಕತೆಯಿಂದ ಮುಕ್ತಿ ಬೇಕೇ ಬೇಕು ಯಾಕೆಂದರೆ ಅದು ಕಾಲದ ಪರಿವೆಯಿಲ್ಲದೆ ನಿಂತ ನೀರು. ಅದು ನಿರಂತರವಲ್ಲ.
ಹಿಂದೆಂದಿಗಿಂತಲೂ ಲೇಖಕ ಹಾಗೂ ಓದುಗನ ಪಾಲಿಗೆ ಸಾಹಿತ್ಯದ ವರ್ತಮಾನ ಸಂಕೀರ್ಣವಾಗಿದೆ. ಇದು ಒಬ್ಬ ಜನಮುಖಿ ಲೇಖಕ ತನ್ನ Egocentric Utopia ದಿಂದ ಹೊರಬಂದು ತನ್ನ ಸುತ್ತಲಿನದೆಲ್ಲವನ್ನೂ ತನ್ನೊಳಗೆ ಸಮಾವಿಷ್ಠಗೊಳಿಸಿಕೊಂಡು ಚಿಂತಿಸಬೇಕು. ಅಂತ ಕೆಲಸ ಕನ್ನಡದಲ್ಲಿ ಆಗುತ್ತಿದೆ ಎನ್ನುವುದಕ್ಕೆ ಇಂದಿನ ಈರ್ವರು ಲೇಖಕರು ಸಾಕ್ಷಿ. ಸಿ.ಎನ್.ಆರ್ ಅವರು ‘For Reasons of Their own’ ಬಗ್ಗೆ ಬರೆಯುತ್ತ Prof Sudheer Chandra Hajela ಕನ್ನಡ ಆಲೋಚನೆಯ ಗರಿಮೆ ಏನು ಅನ್ನುವುದನ್ನು ಬಹಳ ಸುಂದರವಾಗಿ ಹೇಳಿದ್ದಾರೆ. “Prof C.N. Ramachandran seems to believe that the colonial hegemony of the pre- independence era has taken new dimensions in the wake of globalization and the commercialization of literature, the identity of regional and indigenous literature is to be preserved by a close scrutiny of the ancient myths, folklores and poetics available in oral and written literatures with a spirit to intervene with the given ‘constructs’ and modulate them to represent India’s hither to neglected social and cultural identities/groups and communities.”
ಈ ಆಲೋಚನೆ ಆಕಾರ ಪಡೆದ ಪ್ರಕಾರವಷ್ಟೇ ಭಿನ್ನ ಆದರೆ ಅದೇ ಚಿಂತನೆ. ಒಂದು ಕಡೆಗೆ ಸಮಾಧಾನ ಮತ್ತೊಂದು ಕಡೆ ಮತ್ತೆ ಎಚ್ಚರಿಕೆ. ಮೈ ಮರೆಯಬಹುದಾದ ಲೇಖಕರಿಗೆ ಜವಾಬ್ದಾರಿಯ ಪ್ರಶ್ನೆ. ಇಂದಿನ ಇನ್ನೊರ್ವ ಲೇಖಕರಾದ ಪ್ರೊ.ವಿ.ಕೃಷ್ಣಮೂರ್ತಿರಾವ್ ಅವರು “ಶೃತಿ ಹಿಡಿದು ಶೂನ್ಯದಲಿ” ಸಂಕಲನದ ‘ಅರೆಮತ್ತ ರಸಿಕ ಗೆಳೆಯನ ಉವಾಚ-೨’ ಕವಿತೆಯಲ್ಲಿ ಇದನ್ನೇ ಬಹಳ ಸುಂದರವಾಗಿ ಪ್ರಶ್ನಿಸಿದ್ದಾರೆ-
ನೀನು ತೆರೆದು ನೋಡುವ ಬುಕ್ಕು
ಓದಲಿರುವ ಕವನಗಳಿಂದ
ಜೋಡಿಸಿಟ್ಟಿರುವ ಆಲ್ಬಮ್ಮುಗಳಿಂದ
ಹಾಲು ರೂಮು ಗೋಡೆಗೆ  ನೇತು
ಹಾಕಿದ ಪ್ರಶಸ್ತಿ ಮಾನ ಪತ್ರ
ಅಕಾಡೆಮಿ ಪ್ರತಿಷ್ಠಾನ ಬಹುಮಾನ
ನೆನಪಿನ ಕಾಣಿಕೆಗಳಲ್ಲಿ ನಿನ್ನನ್ನು
ನೀನೊಮ್ಮೆ ಕಾಣ ಬಲ್ಲೆಯೋ ನಾ ಕಾಣೆ.

ಮಾರ್ಟು ಮಾಲುಗಳಿಗೊಮ್ಮೆ ಹೋಗಿ ನೋಡು
ಮೇಲಿನವರನ್ನೊಲಿಸಲು
ವಿವಿಧ ಭಂಗಿಯ ಮಾಡೆಲ್ಲುಗಳು
ಲೆಕ್ಕವಿಲ್ಲದ ಈ ಸಾಲುಗಳಲ್ಲಿ
ನಿನ್ನಂತೆ ಇರಬಹುದು ಸಂಧರ್ಭಕ್ಕೆ ತಕ್ಕಂತೆ
ಅಸಲು ಕಳೆದುಕೊಂಡು ಮುಲಾಜಿಗೆ
ಬಸಿರಾದ ಎಷ್ಟೊಂದು ನಕಲಿ ವೇಷಗಳು.

            ಪ್ರಕಾಶನ/ಪ್ರಕಟಣೆಯ ಪ್ರಶ್ನೆ ಬಂದಾಗಲೂ ಅಷ್ಟೆ. ಪುಸ್ತಕ ಸಂಸ್ಕೃತಿಯ ಹೆಸರಿನಲ್ಲಿ ಪುಸ್ತಕ ತ್ಯಾಜ್ಯದ ಪ್ರಶ್ನೆ ಗಂಭೀರವಾಗುತ್ತಿದೆ. ಪ್ರಕಟಣವಾಗುವ ಸಾವಿರ ಸಾವಿರ ಪುಸ್ತಕಗಳಲ್ಲಿ ಓದಲು ಯೋಗ್ಯವಾದ ಪುಸ್ತಕಗಳನ್ನು ಆಯ್ದುಕೊಳ್ಳುವುದೇ ಪ್ರಶ್ನೆಯಾಗಿದೆ. ನಿಜವಾಗಿಯೂ ವೃತ್ತಿ ಗೌರವವನ್ನು ಉಳಿಸಿಕೊಂಡು ಒಳ್ಳೆಯ ಪುಸ್ತಕಗಳನ್ನು ಪ್ರಕಟಿಸುವವರನ್ನೂ ಈ ಕಾಳಸಂತೆಯಲಿ ನಾವು ಕಳೆದುಕೊಳ್ಳುವ ಭಯವಿದೆ. ಒಟ್ಟಾರೆ ಹೇಳಬೇಕೆಂದರೆ ಥರಾವರಿಯ ಈ ವರ್ತಮಾನದಲ್ಲಿ ಧ್ಯಾನಪರತೆಯ,  ವ್ಯಕ್ತಿನಿರಸನತೆಯ ದೊಡ್ಡ ಕೊರತೆ ಎದ್ದು ಕಾಣುತ್ತಿದೆ. ಇದು ಅಳಿಯಬೇಕಿದೆ. ಈ ವೇಳೆಯಲ್ಲಿ ಕುವೆಂಪು ಅವರ ಪದ್ಯ ನೆನಪಾಗುತ್ತದೆ-
ಕಾಳಿಂಗನ ತುಳಿದಂದದಿ
ತುಳಿ ತುಳಿ ತುಳಿ
ಹತ್ತಿ ತುಳಿ, ಮೆಟ್ಟಿ ತುಳಿ, ಮತ್ತೆ ತುಳಿ, ಒತ್ತಿ ತುಳಿ

            ಇದು ನಮ್ಮೊಳಗೇ ನಡೆಯಬೇಕಾದುದು, ನಮ್ಮುಳುವಿಗೆ ನಡೆಯಬೇಕಾದುದು, ನಮ್ಮಿಂದಲೇ ನಡೆಯಬೇಕಾದುದು. ಅಂದಾಗ ಮಾತ್ರ ಆ ಮೇರು ಓದುಗರ ಎದೆಯಲ್ಲಿ ಆ ಏರು ಸಾಧ್ಯವಾಗಬಹುದೇನೋ? ಸ್ವಚ್ಛವಾದ ಮನಸ್ಸನ್ನು ಸಾಕ್ಷಿಯಾಗಿಸಿಕೊಂಡು ನಾವು ಹಾಡಬಹುದೇನೋ. ಪ್ರಶಸ್ತಿ, ಪುರಸ್ಕಾರಗಳ ಪೊಗರಿನಿಂದ ಹೊರಬಂದು ನಾವು ಮಣ್ಣಂತೆ ನಿರಾಳವಾದ ಕುವೆಂಪು ಪ್ರಾರ್ಥನೆಯ ಆಳ ಅರಿಯಬಹುದೇನೊ-
ನಿಮ್ಮ ಬಾಂದಳದಂತೆ
ನನ್ನ ಮನವಿರಲಿ
ನಿನ್ನ ಆಗಸದಂತೆ
ನನ್ನ ಎದೆಯಿರಲಿ
ನಿನ್ನಾತ್ಮದಾನಂದ ನನ್ನದಾಗಲಿ
ನಿನ್ನೊಳಗಿರುವ ಭಾಗ್ಯ ನನ್ನೆಡೆಗೆ ಬರಲಿ.
                                                                                                            ಧನ್ಯವಾದಗಳು

ಸಂದರ್ಭ : ಡಾ.ಸಿ.ಎನ್.ರಾಮಚಂದ್ರನ್ ಅವರ ‘For Reasons of Their own’ ಮತ್ತು
             ಪ್ರೊ.ವಿ.ಕೃಷ್ಣಮೂರ್ತಿರಾವ್ ಅವರ ‘ಶೃತಿ ಹಿಡಿದು ಶೂನ್ಯದಲಿ’ ಪುಸ್ತಕ ಬಿಡುಗಡೆ  
                     ವಾಡಿಯಾ ಸಭಾಂಗಣ ಬೆಂಗಳೂರು ದಿನಾಂಕ: ೦೫/೦೨/೨೦೧೨


No comments:

Post a Comment