ಜೀವನಾವರ್ತನ
ಗೀತೆಗಳು ಮತ್ತು ಹೂ ಹಕ್ಕಿ
ಮಕ್ಕಳು
(ಕೃತಿಗಳ
ಬಿಡುಗಡೆ ಸಮಾರಂಭ ,ದಿನಾಂಕ: ೧೨/೦೩/೨೦೧೨, ಸರಕಾರಿ
ಕಲಾ ಕಾಲೇಜು, ಹಾಸನ)
ಡಾ.ಹಂಪನಹಳ್ಳಿ ತಿಮ್ಮೇಗೌಡರ "ಜೀವನಾವರ್ತನ ಗೀತೆಗಳು" ಮತ್ತು ಮೇಟಿಕೆರೆ ಹಿರಿಯಣ್ಣನವರ
"ಹೂ ಹಕ್ಕಿ ಮಕ್ಕಳು" ಎರಡೂಜೀವನ್ಮುಖಿ
ಕೃತಿಗಳೇ. ಇರ್ವರೂ ಜೀವನ ಶ್ರದ್ಧೆಯ
ಲೇಖಕರುಗಳೇ. ಒಬ್ಬರದು ಸಂಗ್ರಹ, ಇನ್ನೊಬ್ಬರದು
ಸೃಜನಶೀಲ. ಒಂದು ಜಿಲ್ಲೆಯಲ್ಲಿ ಹೀಗೆ
ಒಂದಿಷ್ಟು ಸಾಹಿತ್ಯವನ್ನೇ ತಪಸ್ಸಾಗಿಸಿಕೊಂಡ
ಲೇಖಕರುಗಳೊಂದಿಗೆ ಒಡನಾಡುವುದೇ ಛಂದ. ಹೀಗೆಯೆ ಈ ಕೃತಿಗಳ
ಬಿಡುಗಡೆಯ ಸಮಾರಂಭದಲ್ಲಿ ಮೂರು ತಲೆಮಾರುಗಳಿಗೆ ಸಾಕ್ಷಿಯಾಗಿರುವ
ಜ.ಹೊ.ನಾರಾಯಣಸ್ವಾಮಿಯವರಂಥ ಹಿರಿಯ ಚಿಂತನಶೀಲ ಲೇಖಕರು
ನಮ್ಮೊಂದಿಗಿರುವುದು ಛಂದಕ್ಕೂ ಛಂದ. ಹೀಗೆ
ಹೇಳಿದರೆ ಅತೀಶಯೊಕ್ತಿಯಾಗಬಾರದು. ಹಾಸನ ಎಂದರೆ ಹೊಟ್ಟೆ ತುಂಬುವಷ್ಟು
ರಾಜಕಾರಣ. ಸಾರ್ವಜನಿಕ ಸ್ಥಳಗಳಿಂದ ಕಾಲೇಜಿನ ಕಾರಿಡಾರ್ಗಳವರೆಗೆ
ಈ ರಾಜಕಾರಣವೆಂಬ ಅಕ್ಟೋಪಸ್
ತನ್ನ ಮೈ ಚಾಚಿದೆ. ಇಲ್ಲಿ
ಎಲ್ಲೆ ನಿಂತು ಒಂದು ಕಲ್ಲು
ಒಗೆದರೂ ಅದು ಒಂದಿಲ್ಲಾ ಒಂದು
ರೀತಿಯ, ರೂಪದ ರಾಜಕಾರಣಿಯ ಮೇಲೆಯೇ
ಬೀಳುತ್ತದೆ. ಇಂಥಹದರ ಮಧ್ಯ ನಿರ್ಲಿಪ್ತತೆಯನ್ನ
ಘೋಶಿಸಿಕೊಂಡು ಸಂಸ್ಕೃತಿಮುಖಿಯಾಗುವುದು, ಜೀವನ್ಮುಖಿಯಾಗುವುದು ಒಬ್ಬ ಲೇಖಕನ ಜೀವಂತಿಕೆಯ
ಲಕ್ಷಣ. ಈ ಹಿನ್ನೆಲೆಯಲ್ಲಿ ಈ
ಕೃತಿಗಳ ಲೋಕಾರ್ಪಣೆ ಒಂದುಅರ್ಥಪೂರ್ಣ ಕಾರ್ಯ.
ನಾನು ಒಂದೆರಡು ವರ್ಷ ಮೈಸೂರಿನ
ಭಾರತೀಯ ಭಾಷೆಗಳ ಕೇಂದ್ರ ಅಧ್ಯಯನ
ಸಂಸ್ಥೆಯಲ್ಲಿ ಡಾ.ಜನಿಫರ್ ಬೇಯರ್
ಹಾಗೂ ಪ್ರೊ.ಕಿಕ್ಕೆರಿನಾರಾಯಣರೊಂದಿಗೆ ಸೇರಿಕೊಂಡು ಜೇನುಕುರುಬರ
ಸಾಹಿತ್ಯ ಸಂಗ್ರಹದ ಕಾರ್ಯದಲ್ಲಿ
ತೊಡಗಿಸಿಕೊಂಡಿದ್ದು ಇಂದು ಈ ಕೃತಿಗಳ
ಬಿಡುಗಡೆಗೆ ನನಗೊಂದು ಅರ್ಹತೆಯನ್ನು ಒದಗಿಸಿವೆ
ಎನ್ನುವ ಭರವಸೆಯೊಂದಿಗೆ ಈ ಕೃತಿಗಳ ಬಿಡುಗಡೆ
ಮಾಡಿ ಮಾತನಾಡುವ ಧೈರ್ಯ ಮಾಡಿದ್ದೇನೆ.
ಡಾ.ಹಂಪನಹಳ್ಳಿ ತಿಮ್ಮೇಗೌಡರಿಂದ ಸಂಪಾದಿತ 'ಜೀವನಾವರ್ತನ ಗೀತೆಗಳು' ಕುರಿತು ಬರೆಯುತ್ತ ಪ್ರೊ.".ಸಿ.ರಾಮಚಂದ್ರೇಗೌಡರು ಮಹತ್ವದ
ಚರ್ಚೆಯನ್ನು ಎತ್ತಿದ್ದಾರೆ. 'ಆಧುನಿಕ' ಮತ್ತು 'ಪುರಾತನ'
ಎಂಬ ಎರಡು ಪದಗಳನ್ನು ಬಳಸುವುದರ
ಮೂಲಕ ಜ್ಞಾನದ, ಅದರಲ್ಲೂ ಜನಪದದ
ಅಪಮೌಲೀಕರಣ ಹೇಗಾಯಿತು ಎನ್ನುವುದನ್ನು ಬಹಳ ಸಮರ್ಥವಾಗಿ ವಿಶ್ಲೇಸಿದ್ದಾರೆ.
"ಆ ಕಾಲದ ಪರಿಸ್ಥಿತಿ ಹೊರಗಿನಿಂದ
ಬಂದಜ್ಞಾನ 'ಆಧುನಿಕ', ನಮ್ಮದೆಂಬುದು 'ಪುರಾತನ' ಎಂದು ಮನಸೋತು
ಒಪ್ಪಿಕೊಂಡು ಬಿಟ್ಟಿತು. ಭಾರತೀಯ ಉತ್ಪಾದನೆಯಲ್ಲಿ ಹೊಸತು
ಮತ್ತು ಹಳತು ಎಂಬ ವಿಭಜಿತ
ಧೋರಣೆ ಎಲ್ಲರ ಮನದೊಳಗೆ ದಾಖಲಾಗಿತ್ತು.
ಆ ಕಾರಣದಿಂದ ಮೇಲಿಂದ
ನಮ್ಮ ಸಂಸ್ಕೃತಿ ಮತ್ತು ಜನಪದ ಸಾಹಿತ್ಯ ನಮ್ಮ ಹಳ್ಳಿಗಳಂತೆ
ಹಳೆಯದು ಎಂದು ಹೇಳುವುದನ್ನು ಮರೆಯುತ್ತಿರಲಿಲ್ಲ."
ಇಂಥದೇ ಒಂದು ಹೇಳಿಕೆಯನ್ನ ಅನಂತಮೂರ್ತಿಯವರಿಂದಲೂ
ಆಗಿರುವುದನ್ನು ನಾವಿಲ್ಲಿ ಗಮನಿಸಬೇಕು.
ವ್ಯತ್ಯಾಸವಿಷ್ಟೆ, ಅವರು ಪೂರ್ವ
ಮತ್ತು ಪಶ್ಚಿಮದ ಹಿನ್ನೆಲೆಯಿಂದ ವಿವರಿಸಿದ್ದಾರೆ. ಅವರು ಬರೆಯುತ್ತಾರೆ "ಭಾರತದ
ಸತ್ವ ಸುಪ್ತವಾಗಿದ್ದ ಕಾಲದಲ್ಲಿ ಪಾಶ್ಚಾತ್ಯಲೋಕ ಎಚ್ಚೆತ್ತು ವ್ಯಕ್ತಿಧರ್ಮವನ್ನೇ ಎತ್ತಿ ಹಿಡಿದು ಅದೃಶ್ಯ ಶಕ್ತಿಗಳನ್ನು
ಬೀಳ್ಗಳೆದು, ಸಮಾಜಧರ್ಮವನ್ನು ರೂಢಿಸಿಕೊಳ್ಳದೆ ಇಂದ್ರಿಯಗಮ್ಯವಾದ ಪದಾರ್ಥ ಲೋಕವೊಂದನ್ನೇ ನೆಚ್ಚಿ ವಿಜ್ಞಾನದ ಮಂತ್ರಕಂಬದ ಮೇಲೆ ಕುಳಿತು ಮೈದಾಸನ
ಸ್ವರ್ಣ ಹಸ್ತದಿಂದ ಮುಟ್ಟಿದ್ದನ್ನೆಲ್ಲ ಚಿನ್ನ ಮಾಡುವೆನೆಂದು ಹೊರಟಿತು.
ಅದರ ಸಾಧನೆ ಬೆರಗುಗೊಳಿಸುವಂಥದಾದರೂ ಅದರ
ಸಿದ್ಧಿಯಲಿ ಮನುಷ್ಯ ಅಂತರಂಗಲೋಕದ, ಧರ್ಮಲೋಕದ,
ಅದೃಶ್ಯಲೋಕದ ಅರಿವಿನ ಅಭಾವ ವಿಜ್ಞಾನ
ಧರ್ಮಮಾರಕವಾಗಲೂ ಕಾರಣವಾಟಿತು.
ಎರಡು ಭಿನ್ನ ಹಿನ್ನೆಲೆಂದ ಹೊರಟ ಈ ಎರಡೂ
ಹೇಳಿಕೆಗಳ ಕಾಳಜಿ ಒಂದೇ ಮತ್ತು
ಉದ್ದೇಶವು. ಧ್ಯಾನಸ್ಥ
ಸ್ಥಿತಿಯ ಭಾರತದ ಸಂಸ್ಕೃತಿ, ಸಾಹಿತ್ಯ ಬದಲಾಗುವ ರೀತಿ
ಭಿನ್ನ. ಅದರ ಲಯ ಗತಿಗಳೂ
ಭಿನ್ನ. ಜ್ಞಾನದ ಹೊಳವೂ ಭಿನ್ನ. ಹೀಗಾಗಿ ನೂರಾರು ವರ್ಷಗಳವರೆಗೆ ಪಶ್ಚಿಮದ
ತೆಕ್ಕೆಗೆ ಬಿದ್ದ ಈ ದೇಶ,
ಅದರ ಜನಪದ, ಸಂಸ್ಕೃತಿ, ಮತ್ತು ಧರ್ಮ
ಒಂದು ರೀತಿಯಿಂದ ಭಗ್ನಗೊಂಡಿತು ಎನ್ನುವುದನ್ನು
ಈ ಹೇಳಿಕೆಗಳು ಸ್ಪಷ್ಟಪಡಿಸುತ್ತವೆ.
ಪೂರ್ವ ಪಶ್ಚಿಮದ ತಿಕ್ಕಾಟದಲ್ಲಿ, ಪಶ್ಚಿಮ
ಪ್ರಣೀತ ವಿಜ್ಞಾನ, ಪೂರ್ವ ಪ್ರಣೀತ
ಜ್ಞಾನಗಳ ಮಸೆತದಲ್ಲಿ, ಜನಪರವಾದ, ಜನಪದೀಯವಾದ, ಅದರಲ್ಲೂ ಮುಖ್ಯವಾಗಿ ಮೌಖಿಕವಾದ
ಬಹಳಷ್ಟು ಸಾಹಿತ್ಯ ಇನ್ನಿಲ್ಲದಷ್ಟು
ಹಾನಿಗೊಳಗಾತು ಎನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು.
ನಾವು ಒಪ್ಪಿಕೊಳ್ಳದಿದ್ದರೆನಂತೆ, ಡಾ.ಹಂಪನಹಳ್ಳಿ ತಿಮ್ಮೇಗೌಡರ
ಜೀವನಾವರ್ತನ ಗೀತೆಗಳಂಥ ಸಂಪಾದನೆಗಳು ಇದನ್ನು ಒಪ್ಪುವಂತೆ ಮಾಡುತ್ತವೆ.
ಬರಹವನ್ನು ಸಾಕ್ಷಿಯಾಗಿಸಿಕೊಂಡ ಲಿಖಿತ ಅಥವಾ ಶಿಷ್ಟ
ಸಾಹಿತ್ಯ ಕಾಲಾಂತರದಲ್ಲಿಯೂ ಕಾದಾಡಲು
ಸಮರ್ಥವಾಗಿದೆ. ಆದರೆ ಜನಪದದ ಸಮಸ್ಯೆಯೆ
ಬೇರೆ. ಅದು ಮುಖವಾಣಿ. ಎಲ್ಲದರ
ತಾಯಿಬೇರು. ಆ ಕಾರಣ ಅದಕ್ಕೆ
ಬೇರೆಯದೇ ಆದ ಕಾಳಜಿಗಳು ಬೇಕು.
ಡಾ.ತಿಮ್ಮೇಗೌಡರು ಬರೆಯುತ್ತಾರೆ "ನಮ್ಮ ಸಾಹಿತ್ಯ
ಪರಂಪರೆಯನ್ನು ನೋಡಿದಾಗ ಶಿಷ್ಟ ಸಾಹಿತ್ಯಕ್ಕೆ ಪ್ಠು ನೀಡಿ
ನೀರೆರೆದು ಬೆಳೆಸಿರುವುದು ಮೌಖಿಕ ಸಾಹಿತ್ಯ.
ಆದರೆ ಶಿಷ್ಟ ಸಾಹಿತ್ಯಕ್ಕೆ
ದೊರಕಿರುವಷ್ಟು ಪುರಸ್ಕಾರ, ಗೌರವ, ಆದರಗಳು ಮೌಖಿಕ
ಸಾಹಿತ್ಯಕ್ಕೆ ಸಿಕ್ಕಿಲ್ಲ." ಇದು ವಿಷಾದದ ಸಂಗತಿಯಾಗಿರುವಂತೆ ಸಂಸ್ಕೃತಿ ವಿನಾಶದ ಅಂಚಿನಲ್ಲಿರುವುದನ್ನೂ ಸೂಚಿಸುತ್ತಿದೆ.
ಒಂದು ರೀತಿಯ ಅವಜ್ಞೆ ಬೆಳೆಯುತ್ತಿದೆ.
ಡಾ.ತಿಮ್ಮೇಗೌಡರು ಹೇಳಿದಂತೆ, "ಇಂದು ನಾವು ಭಾರತೀಯ
ಸಂಸ್ಕೃತಿಯಲ್ಲಿರುವ ದೇಸಿ ಜ್ಞಾನವನ್ನುಅಲಕ್ಷಿಸುತ್ತಾ, ಅನ್ಯ ಸಂಸ್ಕೃತಿಯ
ಜ್ಞಾನಕ್ಕೆ ಹಾತೊರೆಯುತ್ತಿದ್ದೇವೆ. ಈಗ ವಸ್ತು ಸಂಸ್ಕೃತಿಗೆ
ಮಾರು ಹೋಗುತ್ತಿದ್ದು, ಜ್ಞಾನ ಸಂಸ್ಕೃತಿಯ ಕಡೆ
ಅಲಕ್ಷ್ಯ ಭಾವನೆ ತಳೆಯುತ್ತಿದ್ದೇವೆ. ನಮ್ಮಲ್ಲಿರುವ ಜಾನಪದ ಸಂಪತ್ತು ಸ್ಥಳೀಯ
ಜ್ಞಾನದ ಗಣಿ. ಅದನ್ನು ಬಗೆದಷ್ಟು ಅಪಾರಜ್ಞಾನ
ಚಿನ್ನದಂತೆ ದೊರಕುತ್ತಿರುತ್ತದೆ."
'ನಮ್ಮಲ್ಲಿರುವ
ಜಾನಪದ ಸಂಪತ್ತು ಸ್ಥಳೀಯ ಜ್ಞಾನದಗಣಿ.'
ಎನ್ನುವ ತಿಮ್ಮೇಗೌಡರ ಹೇಳಿಕೆಯ ವ್ಯಾಪ್ತಿ ದೊಡ್ಡದು.ಇಡೀ ಜೀವನಾವರ್ತನವನ್ನು ಅದರ
ಒಟ್ಟು ಸೊಗಡಿನೊಂದಿಗೆ ಸೂಚಿಸುವಂಥದ್ದು. ಅದು ನಮ್ಮ ದೇಶಿಯ
"ಜ್ಞಾನ, ಧರ್ಮ, ಜೀವನ ಶೈಲಿ,
ವನಸ್ಪತಿ, ಉಡುಗೆ, ಆಚರಣೆಗಳೆಲ್ಲವನ್ನು ಸಮಾವಿಷ್ಟಗೊಳಿಸಿಕೊಂಡ ಮಹಾನ್ ಸಾಗರ, ಜೀವ
ನದಿ. ಈ ಮಹತ್ವವನ್ನು ತಿಳಿದುಕೊಂಡೇ
ಶಿಷ್ಟ ಸಾಹಿತ್ಯದ ಅನೇಕ
ಪ್ರಾಜ್ಞರು ನಮ್ಮಜಾನಪದ ಸಾಹಿತ್ಯವನ್ನು ಸಂಗ್ರಹಿಸುವತ್ತ ಕಾರ್ಯೋನ್ಮುಖರಾದರು. ಅಂಥವರ
ಒಂದು ದೊಡ್ಡ ಪಟ್ಟಿಯನ್ನು ಈ
ಸಂಗ್ರಹದ ಆರಂಭದಲ್ಲಿ ರಾಮೇಗೌಡರು ಸೂಚಿಸಿದ್ದಾರೆ. ಕನ್ನಡದ ಪಾಲಿಗೆ ಇರುವಂತೆ
ರಾಷ್ಟ್ರಮಟ್ಟದಲ್ಲಿಯೂ ಜನಪದ ಸಂಗ್ರಹಕಾರರ ಒಂದು
ದೊಡ್ಡ ಪಡೆಯೇ ಇದೆ.ಅವರಲ್ಲಿ
ಪ್ರಮುಖವಾಗಿ ಏಳೆಂಟು ಹೆಸರುಗಳು ನನಗಿಲ್ಲಿ
ದಾಖಲಿಸಬೇಕು ಎನಿಸುತ್ತಿದೆ.
ವೇರಿಯರ್ಎಲ್ವಿನ್ನ ಬಗೆಗೆ
ನಿಮಗೆ ಗೊತ್ತಿರಬಹುದು. ೧೯೦೨ ಮತ್ತು ೬೪ರ
ಅವಧಿಯಲ್ಲಿ ಬದುಕಿದ್ದ ಈತ ಮಾನವ ಶಾಸ್ತ್ರಜ್ಞನಾಗಿರುವಂತೆ, ಗುಡ್ಡಗಾಡು, ಜನಪದ ಸಂಗ್ರಹಕಾರನೂ ಆಗಿದ್ದ.
ಭಾರತಕ್ಕೆ ಕ್ರೈಸ್ತಮತ ಪ್ರಚಾರಕನಾಗಿ ಬಂದ ಈತ ಗಾಂಧಿಯೊಂದಿಗೆ
ಭಾರತೀಯರ ಕಾಂಗ್ರೆಸ್ಸಿಗೆ ಸೇವೆ
ಸಲ್ಲಿಸುವಗೊಸ್ಕರ ತನ್ನ ವೃತ್ತಿಗೆ ರಾಜಿನಾಮೆಕೊಟ್ಟ ವಿಚಿತ್ರ ಮನುಷ್ಯ. ಮುಂದೊಂದು ಕಾಲಕ್ಕೆ
ಶಿಲ್ಲಾಂಗ್, ಓರಿಸ್ಸಾ ಮತ್ತು ಮಧ್ಯಪ್ರದೇಶಗಳಲ್ಲಿ
ಜನಪದ ಸಾಹಿತ್ಯ ಸಂಗ್ರಹಿಸುವ ಆಲೋಚನೆಯಿಂದ ಗಾಂಧಿ
ಮತ್ತು ಆತನ ಕಾಂಗ್ರೆಸ್ಸನ್ನು ಬಿಟ್ಟ.
ಇನ್ನೊಬ್ಬಳಿದ್ದಾಳೆ ಜಾನ್ ಮೇರಿಯಮ್ಮ, ದಲಿತರ
ಪಾಲಿನ ಅಜ್ಜಿಯಂದೇ ಖ್ಯಾತಳಿವಳು. ಕೇರಳದಲ್ಲಿ ತೊಂಬತ್ತು ವರ್ಷ ಜನಪದ ಸಾಹಿತ್ಯದ ಸಂಗ್ರಹ ಮಾಡಿದ
ಈಕೆ ಕೊಟ್ಟಾಯಮ್ಮ್ ಸಮೀಪದ ಕಾಲೇಜೊಂದರಲ್ಲಿ ಕಸ ಗೂಡಿಸುವ ಕೆಲಸದಲ್ಲಿದ್ದಳು.
ಆದರೆ ಕೇರಳದ ಜನಪದವನ್ನು ಇನ್ನೆಂದೂ
ಸಾಯದಂತೆ ಕಟ್ಟಿಕೊಟ್ಟಳು. ಕಲಕತ್ತೆಯ ಚಂದ್ರಕುಮಾರ ಕೂಡ ಅಷ್ಟೇ ಮಹತ್ವದ
ಜನಪದ ಸಂಗ್ರಹಕಾರ. ಕಿರಾಣಿ ಅಂಗಡಿಯೊಂದರಲ್ಲಿ ಒಂದು
ರೂಪಾಯಿ ಸಂಬಳದೊಂದಿಗೆ ಜೀವನ ಪ್ರಾರಂಭಿಸಿ, ಮುಂದೆ
ತಾಲೂಕಾಫೀಸಿನಲ್ಲಿ ಎರಡು ರೂಪಾಯಿ ಸಂಬಳ
ಪಡೆದು, ಎಂಟು ರೂಪಾಯಿ ಸಂಬಳ
ಪಡೆಯುವಷ್ಟರಲ್ಲಿ ಹಳ್ಳಿಗಳಿಗೆ ಹೋಗಿ ತೆರಿಗೆ ಸಂಗ್ರಹಿಸುವ ಅಧಿಕಾರಿಯಾದ. ಇದೆ
ಆತನ ಪಾಲಿಗೆ ಜನಪದವನ್ನು ಸಂಗ್ರಹಿಸಲು ದಾರಿಯಾತು. ಮುಂದೊಂದು
ಕಾಲಕ್ಕೆ ಕಲಕತ್ತಾ ವಿಶ್ವವಿದ್ಯಾಲಯದಲ್ಲಿ ಎಪ್ಪತ್ತು ರೂಪಾಯಿ ಸಂಬಳದೊಂದಿಗೆ ದೊಡ್ಡಜನಪದ ಸಂಗ್ರಹಕಾರನಾಗಿ ಬೆಳೆದ. ಬಂಗಾಲದ ಮಹಾನ್ಜನಪದ ತಜ್ಞನೆನಿಸಿಕೊಂಡ.
ಹಾಗೆಯೆ
ಕೇರಳದ ಕಿ.ರಾಜನಾರಾಯಣ್, ಕೋಮಲ್
ಸ್ವಾಮಿನಾಥನ್, ರಾಜಸ್ಥಾನದ ಕೋಮಲ್ಕೊಠಾರಿ, ದೇವಿಲಾಲ
ಸಮರ್, ಗುಜರಾತಿನ ಭಗವಾನ್ದಾಸ ಪಟೇಲ್
,ಹೀಗೆಯೆ ಅನೇಕರನ್ನು ಹೆಸರಿಸಬಹುದು.
ನಮಗೆ ಖುಶಿಯಾಗಬೇಕು, ಇದೆ ದಾರಿಯನ್ನು ಕ್ರಮಿಸಿದ ಡಾ.ಹಂಪನಹಳ್ಳಿ
ತಿಮ್ಮೇಗೌಡ ಮತ್ತು ಮೇಟಿಕೆರೆ ಹಿರಿಯಣ್ಣ
ನಮ್ಮೊಂದಿಗಿದ್ದಾರೆ. ಐದು ಪ್ರಮುಖ ಭಾಗಗಳಲ್ಲಿ ವಿಂಗಡಿಸಲ್ಪಟ್ಟ ಹಂಪನಳ್ಳಿಯವರ ಈ ಕೃತಿ ಜೀವನ
ಶ್ರದ್ಧೆಗೊಂದು ಸಾಕ್ಷಿ. ಈ ಪುಸ್ತಕ
ನಮ್ಮ ಮನೆಯ ಗ್ರಂಥಾಲಯದಲ್ಲಿರುವುದು ಒಂದು
ಶ್ರೀಮಂತಿಕೆ. ಪ್ರತಿ ಸಾಲು ಉದ್ದರಣೆಗೆ
ಯೋಗ್ಯ. ಉದಾಹರಣೆಗೆ-'ನಿದ್ರೆಗೆ ಮದ್ದುಂಟೆ ವಜ್ರಕ್ಕೆ ಬೆಲೆಯುಂಟೆ', 'ಸಂಜೆ ದೇವತೆ ತಾಯೆ
ಕಂದನ ತಲೆ ಕಾಯೆ', 'ಅತ್ತೆಯೆಂಬ
ಬಾಯಿಗೆ ಮುತ್ತ ತಂದು ತುಂಬುವೆ', 'ಹಾಗಾಲಕಾಯನ್ನು ಹೇಗೆ
ಅಟ್ಟರೂ ಕಹಿಯೆ', 'ಗಂಜಿಯ
ಕುಡಿದರೂ ಗಂಡನ ಮನೆ ಲೇಸು' ಹೀಗೆ ಒಂದೇ, ಎರಡೇ, ಸಾವಿರಾರು ಸಾಲುಗಳನ್ನು ಉದ್ಧರಿಸಬಹುದು.
ಜನಪದದಷ್ಟು ಉದ್ಧರಣಯೋಗ್ಯವಾದ ಸಾಹಿತ್ಯ ಬೇರೆ
ಇನ್ಯಾವುದು ಇಲ್ಲವೆನ್ನುವುದನ್ನು ನಿರ್ವಿವಾದಿತವಾಗಿ
ಒಪ್ಪಿಕೊಳ್ಳಬೇಕು. ಜಾನಪದ ಬೌದ್ಧಿಕ ಕಸರತ್ತಿನಿಂದ
ಹುಟ್ಟಿಕೊಂಡದ್ದಲ್ಲ. ಅದು ಬುದ್ಧಿ ಪಾರಮ್ಯದ
ಸಾಹಿತ್ಯವೂ ಅಲ್ಲ. ಒಂದು
ರೀತಿಯಲ್ಲಿ ಅನುಭಾವಕ್ಕೆ ಸಮೀಪವಾದ ಜನಾಂಗದ
ತಲೆಮಾರುಗಳ ಸ್ವಾನುಭವದ ಕೆನೆ. ನಿತ್ಯಜಂಗಮವಾದ ಜಾನಪದ
ಕಾಠಿಣ್ಯದ ಮಾತುಗಳಾಡುವುದಿಲ್ಲ. ಬದಲಾಗಿ ನಮ್ಮನ್ನು ಮಾನವ
ಕಾರುಣ್ಯಕ್ಕೆ ಕರೆದೊಯ್ಯುತ್ತದೆ. ಈ ಕಾರಣಗಳಿಂದಾಗಿಯೇ ಜನಪದ
ಕಾಲಾತೀತವಾಗಿ ಬದುಕುತ್ತದೆ.
ಸುಮಾರು
ಐದನೂರು ಪುಟಗಳ ಇಂಥ ಒಂದು
ಜನಪದ ಸಂಪಾದನೆಯನ್ನು ಮಾಡಿಕೊಡುವ ಮೂಲಕ ಡಾ.ತಿಮ್ಮೇಗೌಡರು
ಸಂಸ್ಕೃತಿ ಮತು ಜೀವನ ಕಾಳಜಿಯನ್ನು
ಮೆರೆದಿದ್ದಾರೆ. ನಾನಿಲ್ಲಿ ಅಲೆಗ್ಸಾಂಡರ್ ಪೋಪನನ್ನ ನೆನಪಿಸಿಕೊಳ್ಳಬೇಕು. ಆತ
ಹೇಳಿದ್ದ, "ಸಾಹಿತಿಯಾದವನು ಹೊಸದೇನನ್ನು
ಹೇಳಬೇಕಾದುದಿಲ್ಲ. ಇದುವರೆಗೂ ಹೇಳದ ಯಾವ ಹೊಸತು
ಯಾವ ಲೇಖಕನಿಗೂ ಸಾಧ್ಯವಿಲ್ಲ. ಇರುವದನ್ನೇ ಸಂಗ್ರಹಿಸಿಕೊಟ್ಟರೂ ಅದು ಹೊಸತೇ." ಈ
ಮಾತು ತಿಮ್ಮೇಗೌಡರ ಈ ಸಂಗ್ರಹದಲ್ಲಿ ಸಾಧ್ಯವಾಗಿದೆ.
ಒಂದರ್ಥದಲ್ಲಿ ತಿಮ್ಮೇಗೌಡರು ಸಾಹಿತ್ಯದ ಕೆರೆಯ
ನೀರನ್ನು ಕೆರೆಗೇ ಚಲ್ಲಿ ವರವ
ಪಡೆದ ಧನ್ಯರು.
ನಮ್ಮೊಂದಿಗೆ ಇನ್ನೊಬ್ಬರಿದ್ದಾರೆ
ಮೇಟಿಕೆರೆ ಹಿರಿಯಣ್ಣ. ಆಕಾರದಲ್ಲಿ ಮತ್ತು ಆಲೋಚನೆಯಲ್ಲಿ
ಅವರು ಹಿರಿಯಣ್ಣನೇ. ಅರವತ್ತರ ಅಂಚನ್ನು ದಾಟಿ ಹಿರಿಯಣ್ಣ ತೊಡಗಿಸಿಕೊಂಡ ಲೋಕ ಮಾತ್ರ ಮಕ್ಕಳದ್ದು.
ಇದು ತುಂಬಾ ಕಷ್ಟದ ಕೆಲಸ.
ಮನುಷ್ಯ ಮಗುವಾಗುವುದು ಇನ್ನೂ ಪ್ರಯಾಸ. ಅವರ
ಬ್ಯಾ ಬ್ಯಾ ಕುರಿಗಳೇ, ದೀವಳಿಗೆ,
ಚಿಲಿಪಿಲಿ, ಬಿಸಿಬಿಸಿ ಕಜ್ಜಾಯ ಎಲ್ಲ ಮಕ್ಕಳ
ಲೋಕವೇ. ಈಗ `ಹೂ ಹಕ್ಕಿ
ಮಕ್ಕಳು' ಅದರ ಮುಂದುವರಿಕೆ.
ಕೃತಿಯ ಮುನ್ನುಡಿಯನ್ನು ಬರೆಯುತ್ತಾ ಡಾ.ಸಿದ್ದಲಿಂಗಯ್ಯ ಕನ್ನಡದಲ್ಲಿ
ಶಿಶುಸಾಹಿತ್ಯದ ಶೈಶವಾವಸ್ಥೆಯ ಬಗೆಗೆ
ಬೇಸರ ವ್ಯಕ್ತಪಡಿಸಿದ್ದಾರೆ. "ಕನ್ನಡದಲ್ಲಿ ಶಿಶುಸಾಹಿತ್ಯಕ್ಕೆ ಅಂತಹ ಪುರಾತನತೆಯೇನು
ಇಲ್ಲ. ಸುಮಾರು ೧೨೦೦ ವರ್ಷಗಳ
ಇತಿಹಾಸ ಇರುವ ಕನ್ನಡ ಸಾಹಿತ್ಯದಲ್ಲಿ ಶಿಶುಗೀತೆಗಳು ಒಂದನೂರು ವರ್ಷ ಹಳೆಯದಷ್ಟೆ.
ಪ್ರೌಢಸಾಹಿತ್ಯದ ಒಂದು ಭಾಗವಾಗಿ
ಮಕ್ಕಳಿಗಾಗಿ ನೀತಿಕತೆಗಳು ಬಂದಿರುವುದನ್ನು ಬಿಟ್ಟರೆ, ಇಪ್ಪತ್ತನೇ ಶತಮಾನದ ಆದಿಭಾಗಕ್ಕೆ ಮೊದಲು
ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಇಲ್ಲವೇ
ಇಲ್ಲ ಎನ್ನಬಹುದು. ಪಂಜೆ, ಹೊಯ್ಸಳ, ರಾಜರತ್ನಂ
ಮುಂತಾದವರು ದಕ್ಷಿಣಕರ್ನಾಟಕದ ಭಾಗದಲ್ಲಿ, ಅದೇ ರೀತಿ ಮುಂದೆ ಶಂ.ಗು.ಬಿರಾದಾರ, ಎ.ಕೆ.ರಾಮೇಶ್ವರ ಮುಂತಾದವರು
ಗಣನೀಯ ಪ್ರಮಾಣದಲ್ಲಿ ಉತ್ತರಕರ್ನಾಟಕದಲ್ಲಿ ಶಿಶುಸಾಹಿತ್ಯವನ್ನು ರಚಿಸಿದವರು. ಇಂದು ವಿದ್ಯಾವಂತರ ಮಕ್ಕಳು ನಿಜವಾಗಿ ಕನ್ನಡದ
ಪದ್ಯಗಳಿಂದ, ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಈಗ್ಗೆ ೪೦-೫೦
ವರ್ಷಗಳ ಹಿಂದೆ ತಾಯಂದಿರು ಮಕ್ಕಳಿಗೆ
ಹೇಳುತ್ತಿದ್ದ ಜಾನಪದ ಕತೆ, ಕವನಗಳು,
ಸಂಪ್ರದಾಯದ ಹಾಡುಗಳು ಕಣ್ಮರೆಯಾಗಿವೆ. ಆ
ಜಾಗಕ್ಕೆ ಇಂಗ್ಲೀಷ ರೈಮ್ಸ್ ಬಂದಿವೆ;
ಜೊತೆಗೆ ಮಕ್ಕಳ ಇಂಗ್ಲೀಷ ಪದ್ಯಗಳ
ಪುಸ್ತಕ, ಸಿ.ಡಿ ದೊರಕುವ
ಪ್ರಮಾಣದಲ್ಲಿ ಕನ್ನಡದಲ್ಲಿ ದೊರಕುತ್ತಿಲ್ಲ."
ಸಿದ್ಧಲಿಂಗಯ್ಯನವರ
ಹೇಳಿಕೆ ಒಪ್ಪುವಂಥದೇ. ಆದರೆಇಂತದರಲ್ಲೂ ಕಂಚಾಣಿ ಶರಣಪ್ಪ, ಅ.ಬಾ.ಚಿಕ್ಕಮಣ್ಣುರ, ಹುಲ್ಲೆಪ್ಪನವರಮಠ
ಹಾಗೂ ಮೇಟಿಕೆರೆ ಹಿರಿಯಣ್ಣನವರಂಥ ಲೇಖಕರು ಮಕ್ಕಳ ಸಾಹಿತ್ಯಕ್ಕೆ ಗಂಭೀರವಾಗಿ ತೊಡಗಿಸಿಕೊಂಡಿರುವುದನ್ನು
ಶ್ಲಾಘಿಸಬೇಕಾದುದೆ. ಶಿಶುಸಾಹಿತ್ಯ ಮನಸ್ಸಿಗೆ ಸಂಬಂಧ
ಪಟ್ಟ ಪ್ರಶ್ನೆ. ಅದು ಎಲ್ಲರಿಗೂ ದಕ್ಕುವಂಥದಲ್ಲ.
ಮಕ್ಕಳ ಸಾಹಿತ್ಯ ರಚನೆಗೆ
ಬೇರೆಯದೇ ಮನಸ್ಥಿತಿ ಬೇಕಾಗುತ್ತದೆ.ಸರಳವಲ್ಲದ ಮನಸ್ಸು ಈ ಸಾಹಿತ್ಯವನ್ನು ಸೃಜಿಸಲು ಸಾಧ್ಯವಿಲ್ಲ.
ಮೇಟಿಕೆರೆ ಹಿರಿಯಣ್ಣ ಈ ಸರಳತೆಯನ್ನು
ಸಿದ್ಧಿಸಿಕೊಂಡ ಹಿರಿಯ ಮನುಷ್ಯ. ಈ
ಸಂಕಲನದ ಮೂರು ನಾಮದ ದಾಸಯ್ಯ,
ಅಮ್ಮನ ಹೂ ತೋಟ, ನಿಸರ್ಗ,
ಮಗು ಮತ್ತು ಮೋಡ ಕವಿತೆಗಳು ಅವುಗಳ ಸರಳ
ಭಾಷೆ, ವಿಚಾರ ಮತ್ತು ಪದಗಳ
ಲಾಲಿತ್ಯದಿಂದಾಗಿ ನಿಮ್ಮನ್ನು ಕಾಡದೆ ಇರುವುದಿಲ್ಲ.
ಒಟ್ಟಾರೆ
ಹಾಸನ ಜಿಲ್ಲೆಯ ಇಬ್ಬರು ಮಹತ್ವದ ಜಾನಪದ
ಚಿಂತಕರು, ಸಂಗ್ರಹಕಾರರು ಭವಿಷ್ಯದ ಕಾಳಜಿಗಳೊಂದಿಗೆ
ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿಕೊಂಡು
ವರ್ತಮಾನದ ಅನೇಕ ವಿಚಾರಗಳಿಗೆ ಮುಖಾಮುಖಿಯಾಗುತ್ತಿರುವುದು ಈ ಜಿಲ್ಲೆಯ ಅಳಿದುಳಿದ
ಸೃಜನಶೀಲ ಆರೋಗ್ಯತೆಗೆ ಸಾಕ್ಷಿ ಎಂದು ಹೇಳುತ್ತಾ ಈ ಎರಡು ಮಹತ್ವದ
ಕೃತಿಗಳನ್ನು ನೀಡಿದ ಇಬ್ಬರು ಹಿರಿಯರನ್ನು
ಹುತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
No comments:
Post a Comment