Total Pageviews

Tuesday, July 26, 2016

ಬರಿದೆ ಮಾತೇಕಿನ್ನು: ಕನಕದಾಸ


         ಕನಕದಾಸರನ್ನು ನಾನು ಅರ್ಥೈಸಿಕೊಳ್ಳುವ ರೀತಿಯೆ ತೆರನಾದುದು. ಇಂದು ನೂರಾರು ಚಿಂತನೆಗಳಿಗೆ ಇಂಬುಗೊಟ್ಟ ಕನಕ ಮೂಲದಲ್ಲಿ ಒಂದು ದೇಹದಿಂದ ಆಯಾಮ ಪಡೆದ ಚಿಂತನೆಯೆ. ಇದು ಕೇವಲ ಎರಡು ದಿನಗಳ, ಒಂದು ತಿಂಗಳಿನ, ಒಂದು ವರ್ಷದ ಅಥವಾ ಒಂದು ಜೀವಮಾನದ ಸಾಧನೆಯ ಪ್ರಶ್ನೆಯಲ್ಲ. ಹೀಗೆ ಹೇಳಿದಾಗ ನಾನೆಲ್ಲೊ ಕನಕನನ್ನು ಬುದ್ಧನ ಜನ್ಮಾಂತರಗಳ ಪರಿಕಲ್ಪನೆಗೆ ಜಾರಿಸಿದೆನೆಂದು ಭಯಪಡಬೇಕಿಲ್ಲ. ಎಂಥ ಜಾರುವಿಕೆಯ ಸಂದರ್ಭದಲ್ಲೂ ಜಾಗೃತಿ ಇದ್ದರೆ ಸಾಕು ಅದು ಜೀವನವನ್ನು ಸಂದೀರ್ಘ ಅವಲೋಕನದ ಪ್ರತಿಫಲವಾಗಿಸಿಬಿಡುತ್ತದೆ.
ಕನಕದಾಸರ ಬದುಕು ಮತ್ತು ಬರಹ ಅಂಥ ಪ್ರತಿಫಲ. ಅದು ತನ್ನೊಳಗಿನ ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತ ಸಮಷ್ಠಿಯನ್ನು ತನ್ನೊಳಗೆ ಶಕ್ತಿಯಾಗಿಸಿದ ಪ್ರಕ್ರಿಯೆ.
 ಪ್ರಪಂಚದ ಮಹತ್ವದ ದಾರ್ಶನಿಕರಲ್ಲಿ ಒಬ್ಬರಾದ ಔಸ್ಪೆನ್ಸ್ಕಿ ಹೇಳುತ್ತಾರೆ, “ಕನಿಷ್ಟ ನೀವು ನಿಮ್ಮ ಬಗ್ಗೆ ಯೋಚಿಸುವುದರಲ್ಲಿಯೂ ಕೂಡಾ ಒಂದು ಪ್ರಯೋಜನವಿದೆ. ಇಡೀ ಪ್ರಪಂಚದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಒಮ್ಮಿಗೆ ಸಾಧ್ಯವಿಲ್ಲ ಎಂದು ಎಲ್ಲರೂ ಸುಮ್ಮನಾದರೆ ಎಂದೆಂದಿಗೂ ಯಾರೊಬ್ಬರೂ ಇಲ್ಲಿ ಸ್ವತಂತ್ರರಾಗಲಾರರು. ಅದರ ಬದಲಿಗೆ, ಒಮ್ಮೆಗೆ ಒಂದು ಗುಂಪಿನಂತೆ ಸ್ವತಂತ್ರರಾಗುತ್ತ, ಉಳಿದವರಿಗೆ ಅವರು ಮಾರ್ಗದರ್ಶಕರಾದರೆ ಆಗ ಎಲ್ಲರೂ ಒಂದು ದಿವಸ ಸ್ವತಂತ್ರರಾಗಬಹುದು. ಇದರ ಹೊರತು ಸ್ವತಂತ್ರರಾಗುವಂತಹ ಬೇರೆ ಯಾವ ಸಾಧ್ಯತೆಯೂ ನಮಗೆ ಇಲ್ಲಿ ಇಲ್ಲ.” ಆಲೋಚನೆ ರಷಿಯಾದ ಚಿಂತಕನಿಂದ ನಡೆದಿದೆ. ಆದರೆ ಇದು ನಿಜಕ್ಕೂ ಶತಮಾನಗಳಿಂದ ಆಧ್ಯಾತ್ಮಿಕ ನೆಲೆಯಲ್ಲಿ ಭಾರತದಲ್ಲಿ ಆಚರಣೆಯಲ್ಲಿದೆ. ಇದಕ್ಕೊಂದು ನಿದರ್ಶನ ಕನಕದಾಸ ಹಾಗೂ ಅವರ ಸಾಹಿತ್ಯ.
ಸಮಕಾಲೀನ ಕನ್ನಡ ಸಾಹಿತ್ಯ ಚಿಂತನೆಯ ಪ್ರಮುಖ ಕೇಂದ್ರವಾಗಿ ಕನಕದಾಸರ ಬರಹಗಳು ನಿಲ್ಲುತ್ತಿವೆ. ನಮ್ಮ ಶ್ರೇಣಿಕೃತ ಸಮಾಜ ವ್ಯವಸ್ಥೆ, ಜಾಗತಿಕಮುಖಿಯಾದ ಅರ್ಥವ್ಯವಸ್ಥೆ, ರಾಜಕೀಯದ ಅತ್ಯಂತ ದೊಡ್ಡ ನಿರ್ಧಾರಾತ್ಮಕ ನೆಲೆಯಲ್ಲಿರುವ ಜಾತಿವ್ಯವಸ್ಥೆಗಳಿಗೆಲ್ಲ ಪ್ರಮುಖ ಆಕರ ನೆಲೆಯಾಗಿ ಕನಕರ ಸಾಹಿತ್ಯ ಸಾಕ್ಷಿಯಾಗುತ್ತಿದೆ. ಆಧುನಿಕ ಕನಕ ಚಿಂತನೆಗೆ ತೊಡಗಿಸಿಕೊಂಡವರ್ಯಾರೂ ಬರೀ ಜ್ಞಾನವನ್ನು ನಂಬಿಕೊಂಡವರಲ್ಲ. ಹಾಗೊಂದು ವೇಳೆ ಮಾಡಿದ್ದರೆ ಕನಕದಾಸರ ಸಾಹಿತ್ಯ ಅಂಥವರಿಗೆ ದಕ್ಕಲು ಸಾಧ್ಯವಿಲ್ಲ. ಯಾಕೆಂದರೆ ಭಾರತ ಶತಮಾನಗಳಿಂದಲೂ ನಂಬಿದೆ. ಕಾಲಕಾಲಕ್ಕೆ ಅದು ತನ್ನ ಸಾಧು, ಸಂತ ಹಾಗೂ ಸಾಧಕರ ಮೂಲಕ ಇದನ್ನು ಸಾಬೀತು ಪಡಿಸಿದೆ. ಕೇವಲ ಜ್ಞಾನ ಹಾಗೂ ಸ್ಥಾನ ಮಾತ್ರದಿಂದ ಸಮಾಜದೊಳಗಿನ ಮತ್ತು ತನ್ನೊಳಗಿನ ದ್ವಂದ್ವಗಳನ್ನು ಗೆಲ್ಲಲಾಗದು. ಕಾಲದ ಹೆಡಮುರಿಗೆಯನ್ನು ಕಟ್ಟಿಕೊಳ್ಳುವ ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳಲಾಗದು ಎಂದು ಹೇಳಿದೆ. ಇದೇ ವಿಚಾರವನ್ನು ಸಾರಿದ ಪ್ರಪಂಚದ ಮಹತ್ವದ ಮುಂಚೂಣಿಯ ಚಿಂತಕರಲ್ಲಿ ಕರ್ನಾಟಕದ ನಮ್ಮ ಸಂತಪರಂಪರೆಯೂ ಬರುತ್ತದೆ
ಜ್ಞಾನ, ಇಚ್ಚೆಗಳನ್ನು ಮೀರುವ ದಾರಿಯನ್ನು ತೋರಿಸುವುದಿಲ್ಲ. ದೇಹವೆಂಬ ಮದ ಮಡಿಕೆಯ ಕಾಯಿಸಲುಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಬೇಕುಎಂದು ಹೇಳುವ ಕನಕದಾಸ ಪರಂಪರೆಯ ಮಹತ್ವದ ಕೊಂಡಿಯಾಗಿ ಕಾಣುತ್ತಾರೆ. ಮನುಷ್ಯನೆಂಬ ಕ್ಲಿಷ್ಟಕರ ಯಂತ್ರಕ್ಕೆ ಕೀರ್ತನೆ-ಪ್ರಾರ್ಥನೆಗಳ ಕೀಲೆಣ್ಣೆ ಸುರಿದು ದುರಸ್ತಿಗೊಳಿಸಿದ ಕನಕದಾಸರು ಸಮಾಜದ ದುರವಸ್ಥೆಯನ್ನು ನೋಡಿ ಲೇವಡಿ ಆಡುತ್ತ ಹೋಗಿದ್ದರೆ ಖಂಡಿತ ಮತ್ತೆ ಅವರ ಓದು ಅನಿವಾರ್ಯವೂ ಆಗುತ್ತಿರಲಿಲ್ಲ, ಅವಶ್ಯಕತೆಯೂ ಆಗುತ್ತಿರಲಿಲ್ಲ. ಒಬ್ಬ ಚಿಂತಕನ ವಿಚಾರದಲ್ಲಿ ಎರಡೂ ಅವಕಾಶಗಳು ಹುಟ್ಟುವುದು ಬರೀ ಆತನ ಪಾಂಡಿತ್ಯದಿಂದಲ್ಲ ಬದಲಾಗಿ ಜೀವನ ಕಾಳಜಿಗಳಿಂದ. ಕನಕದಾಸ ಜೀವ-ಜೀವ್ಹೆಯ ಕವಿ. ಅದಕ್ಕೊಂದು ಸಾಕ್ಷಿ ಅವರ ಪದ್ಯ -
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ

ಒಡಲು ಹಸಿಯಲು ಅನ್ನವಿಲ್ಲದಲೇ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳನೆಲ್ಲಾ ತೊಲಗಿಸಿ ಬಿಡಬಹುದು
ಕಡಲೊಡೆಯ ನಿನ್ನ ಅರೆಘಳಿಗೆ ಬಿಡಲಾಗದು

ತಾಯಿ ತಂದೆಯ ಬಿಟ್ಟು ತಪವ ಮಾಡಲೂಬಹುದು
ದಾಯಾದಿ ಬಂಧುಗಳ ಬಿಡಲೂಬಹುದು
ರಾಯ ತಾ ಮನಿದರೆ ರಾಜ್ಯವನೇ ಬಿಡಬಹುದು
ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು

ಪ್ರಾಣವ ಪರರು ಬೇಡಿದರೆತ್ತಿಕೊಡಬಹುದು
ಮಾನದಲಿ ಮನವ ತಗ್ಗಿಸಬಹುದು
ಜಾಣ ನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು
          ಇದು ಲೋಕ ವ್ಯಾಪಿಸಿದ ಕನಕದಾಸರ ಪದ್ಯ. ಇದೊಂದು ಅಮಾಯಕ ಹೃದಯಜನ್ಯ ವ್ಯಾಪಿಸುವಿಕೆ. ಜನಾಂಗಗಳು ಅಂದಿನಿಂದ ಇಂದಿನವರೆಗೂ ತಮ್ಮ ಬುದ್ಧಿ ಹೃದಯ ಹಾಗೂ ಕಾಯಗಳನ್ನು ಏಕಕಾಲಕ್ಕೆ ತಿದ್ದಿಕೊಳ್ಳಲು ಸರ್ವಾಂಗ ಸುಂದರ ವ್ಯಾಯಾಮದಂತೆ ಇದನ್ನು ಅನುಸರಿಸುತ್ತ ಬಂದಿದ್ದಾರೆ. ನನ್ನ ಓದಿಗೆ ನಿಲುಕಿದಂತೆ ಪದ್ಯದಲ್ಲಿಯಬರಿದೆ ಮಾತೇಕಿನ್ನು’, ‘ಅರೆಘಳಿಗೆ ಬಿಡಲಾಗದುಹಾಗೂಜಾಣ ನಾಯಕನಾದಎನ್ನುವ ಪದಪುಂಜಗಳು ಕಾಯಾ-ವಾಚಾ ಹಾಗೂ ಮನಸಾ ಶುದ್ಧಿಯ, ಜಾಗೃತಿಯ ನೆಲೆಗಳಂತೆ ತೋರಿ, ಭಕ್ತಿ ಎಂಬ ಮಹಾ ಮಂಟಪದ ಬುನಾದಿಯ ಬೆರಗನ್ನು ಬಿಚ್ಚಿಡುತ್ತವೆ.
          ಪದ್ಯವೊಂದು ಹಾಡಾಗಿ ಕಾಡುವ ಭಾಗ್ಯ ಎಲ್ಲ ಪದ್ಯಗಳಿಗೂ ಇರುವುದಿಲ್ಲ. ಮತ್ತೆ ಗೆದ್ದಲು ಹುಳುಗಳಂತೆ ನಮ್ಮ ನೆಮ್ಮದಿ ಕದಡುವ ಜನಪ್ರಿಯ ಪದ್ಯಗಳಿಗೆ ಕಾಲಾತೀತವಾದ ಮೌಲ್ಯವಿರುವುದಿಲ್ಲ. ಪದಕಾರನ ಬದುಕಿನ ಪುಣ್ಯದ ಮೇಲೆ, ಆತನ ಲೌಕಿಕ ಹಾಗೂ ಪಾರಮಾರ್ಥಿಕ ಮೌಲ್ಯಗಳ ಹುಡುಕಾಟದ ರೀತಿಯ ಮೇಲೆ ಪದ್ಯದ ಸಾರ್ವತ್ರಿಕತೆಯ ವಿಸ್ತಾರ ನಿಗದಿಯಾಗುತ್ತದೆ. ಅಂಥ ವಿಸ್ತøತಿಯ ಬಾಳು ಕನಕದಾಸರದ್ದಾದುದರಿಂದಲೇ ಅವರ ಸಾಹಿತ್ಯ ಮತ್ತು ಜೀವನಗಳೆರಡೂ ವಿಸ್ಮøತಿಗೆ ಒಳಗಾಗಲಿಲ್ಲ. “ದಾಸ ದಾಸರ ಮನೆಯ ದಾಸಾನು ದಾಸ ನಾನು, ಆಳುದಾಸ, ಕಿರಿಯದಾಸ, ಆಳಿನಡಿದಾಸ, ಮಂಕುದಾಸ, ಕುರುಡದಾಸ, ಬಡದಾಸ, ಕುರುಬದಾಸ, ಹೊಲೆದಾಸ, ರಂಗ ನಿನ್ನ ಮನೆಯ ಮಾದಿಗದಾಸ ನಾನೆಂದು ವಿನಮ್ರವಾಗಿ ಹೇಳುತ್ತಲೆ ಸಮಾಜಕ್ಕಂಟಿದ ಹಲವು ಕೊಳೆಗಳನ್ನು ತೊಳೆಯಲೆತ್ನಿಸಿದವರು ಕನಕದಾಸರು.
          ಕನಕದಾಸರ ಸಾಹಿತ್ಯ ಕುರಿತಾಗಿ ನಾವು ವರ್ತಮಾನದಲ್ಲಿ ನಡೆಸುತ್ತಿರುವ ಕೆಲವು ವಾದ-ಸಂವಾದಗಳು ಎಲ್ಲೋ ಕೆಲವೊಮ್ಮೆ ಅವರ ಸಾಹಿತ್ಯದ ಮೂಲ ಆಶಯವನ್ನೇ ಎರ್ರಾಬಿರ್ರಿಗೊಳಿಸುತ್ತಿದೆ ಏನೋ ಎಂಬ ಗುಮಾನಿ ಬರುವಂತೆ ಮಾಡುತ್ತದೆ. ಜಾಸ್ ವೀಡಾನ್ ಒಂದೆಡೆ ಬರೆಯುತ್ತಾನೆ, ‘ ಆ್ಯಮ್ ವೇರಿ ಹಾರ್ಡ್ ಲೈನ್. ಆ್ಯಂಗ್ರಿ ಏತಿಸ್ಟ್. ಯಟ್ ಆ್ಯಮ್ ಫ್ಯಾಸಿನೇಟೆಡ್ ಬೈ ಕಾನ್ಸೆಪ್ಟ ಆಫ್ ಡಿವೋಷನ್’. ಡಿವೋಷನ್ ಅಂದರೆ ಭಕ್ತಿ. ಇದು ಕನಕದಾಸರ ಸಾಹಿತ್ಯದ ಅಡಿಪಾಯ. ಹಾಗೆ ನೋಡಿದರೆ ಇದುವೇ ಎಲ್ಲವೂ. ಭಾರತದ ಒಂದು ನಿರ್ದಿಷ್ಟ ಘಟ್ಟದ ಒಟ್ಟು ಸೃಜನ ಕ್ರಿಯೆಯ ಬುನಾದಿಯೇ ಭಕ್ತಿ. ಅದು ಇಲ್ಲಿಯ ನಾಗರೀಕತೆಯ ದಿನಗಳಿಂದ ವರ್ತಮಾನದವರೆಗೂ ಅಖಂಡವಾಗಿದೆ. ಕನಕದಾಸರಂತೂದಾಸನಾಗಬೇಕು, ಸದಾಶಿವನ ದಾಸನಾಗಬೇಕು’, ಎಂದು ಹಾಡುತ್ತ, ‘ಬಿರುದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ ನಾನುಎಂದು ಆದಿಕೇಶವನೆಂಬ ಪ್ರಜ್ಞೆಯಲ್ಲಿ ಮಾಗಿದ ಭಕ್ತಿಯ ಮಹಾ ಮನಸ್ಸು.
ಕನಕದಾಸರ ಭಕ್ತಿ ಒಂದು ಮಹಾಪೂರ. ಅದರೊಳಗೆ ಹರಿದು ಬಂದ ಲೋಕ, ಪಾರಮಾರ್ಥಗಳ ಚಿಂತನೆಗಳನ್ನು ಗಮನಿಸಿದಾಗ, “ ಹೋಲ್ ಹೌಸ್ ಕೇಮ ಅಪ್ ಆ್ಯಂಡ್ ಕೇಮ್ ಅಪ್ ವಿಥ್ ಇಟ್. ವಾಜ್ ಜಸ್ಟ್ ಪ್ರೇಯಿಂಗ್ ಟು ಲಾರ್ಡ್ ಟು ಟೇಕ್ ಕೇರ್ ಆಫ್ ಮಿಎಂಬ ಅಮೇರಿಕಾದ ಜನಪದ ಗಾಯಕ ವಿಲಿ ನೆಲ್ಸನ್ ಮಾತು ನೆನಪಾಗುತ್ತದೆ. ಬದುಕಿನ ಅಥವಾ ಸಾಹಿತ್ಯದ ಸಾತತ್ಯವಿರುವುದೇ ಸಮಗ್ರತೆಯಲ್ಲಿ. ಅಂಥ ಸಮಗ್ರತೆ ಕನಕರ ಸಾಹಿತ್ಯ ಮತ್ತು ಬದುಕುಗಳೆರಡರಲ್ಲೂ ನಾವು ಕಾಣಬಹುದಾಗಿದೆ.
 ಭಕ್ತಿಯಲ್ಲಿ ಹೇಗೋ ಹಾಗೆಯೆ ಸಾಹಿತ್ಯ ರಚನೆಯಲ್ಲೂ ಸಂಖ್ಯೆಯಿಂದ ದೊಡ್ಡ ಸಂತರಾದವರಲ್ಲ ಕನಕದಾಸರು. ಮುನ್ನೂರಕ್ಕೂ ಮಿಕ್ಕಿದ ಕೀರ್ತನೆಗಳು, ನಾಲ್ಕು ದೊಡ್ಡ ಕಾವ್ಯಕೃತಿಗಳು, ಅವುಗಳಲ್ಲಿ ಅಭಿವ್ಯಕ್ತಿಗೊಂಡ ಸಂಸಾರ, ಜ್ಞಾನ, ವೈರಾಗ್ಯ, ವೈಚಾರಿಕತೆ, ಊರುಗಾರಿಕೆ, ಅರಸೊತ್ತಿಗೆಯ ಪ್ರಶ್ನೆ. ಜೀವನ ಚಿಂತನೆಗಳು ಬರೀ ಕಾಲ್ಪನಿಕವಾಗಿ ಕಾಯಪಡೆದವುಗಳಲ್ಲ. ಬದಲಾಗಿ ಲೋಕ ಸಂಚಾರದ ಮಹಾ ಯಾತ್ರೆಯಿಂದ ಮೈದಾಳಿದ ವಾಸ್ತವಗಳು. ಅಂತೆಯೆ ಕುಲದ ನೆಲೆ, ಭಕ್ತಿ ಮತ್ತು ಡಾಂಭಿಕತೆ, ಧರ್ಮ ಮತ್ತು ಸಮಕಾಲೀನ ರಾಜಕಾರಣದ ಪ್ರಶ್ನೆಗಳು ಅವರ ಇಡೀ ಸಾಹಿತ್ಯದಲ್ಲಿ ಮತ್ತೆ ಮತ್ತೆ ಪ್ರಸ್ತಾಪಗೊಳ್ಳುತ್ತವೆ. ಲೋಕವಿಮುಖ ಸಾಹಿತ್ಯ ಹಾಗೂ ಸಾಹಿತಿಗಳಿಬ್ಬರಲ್ಲೂ ಪ್ರಶ್ನೆಗಳು ಅಪ್ರಸ್ತುತ. ಪ್ರಶ್ನೆಗಳಲ್ಲದ ಸಾಹಿತ್ಯ ಅಷ್ಟೇ, ಅದು ಅಲ್ಪಾಯು. ಆದರೆ ಕನಕದಾಸ ಸಾಹಿತ್ಯ ಕಾಲ ಪ್ರವಾಹದಲ್ಲಿ ಕೊಚ್ಚಿಹೋಗಿ ಮರೆವಿಗೆ ಒಳಗಾಗುವ ಬದಲು ಜನಪದ, ಕರ್ನಾಟಕ, ಹಿಂದೂಸ್ತಾನಿ, ರವೀಂದ್ರ ಸಂಗೀತಗಳ ಮೂಲಕ, ಸಿನಿಮಾ, ಪ್ರವಚನ ಹಾಗೂ ಗಣಕಯಂತ್ರಗಳಂಥ ಆಧುನಿಕ ಮಾಧ್ಯಮಗಳ ಮೂಲಕ ಹರಿದು ಬಂದು ಅಖಂಡವಾಗಿ ನಮ್ಮನ್ನು ವ್ಯಾಪಿಸಿದೆ, ವ್ಯಾಪಿಸುತ್ತಲೇ ಇದೆ.