Total Pageviews

Friday, August 3, 2018

ತಲೆ ಬಾಗಿದ್ದೇನೆ ನಾನು


ಇವನಾರವ ಎಂದಿನಿಸದೆ
ಇವ ನಿಮ್ಮವ ಎಂದೆನಿಸಿ
ಅಖಂಡ ಇಂಡಿ ತಾಲೂಕಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನಂತಹ ಕಿರಿಯನನ್ನು ಆಯ್ಕೆ ಮಾಡಿ ಹಿರಿಮೆಯನ್ನು ಮೆರೆದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ, ಎಲ್ಲ ಪದಾಧಿಕಾರಿಗಳಿಗೆ, ಭಾಗದ ಸಾಹಿತ್ಯಾಸಕ್ತರಿಗೆ, ಗುರು-ಹಿರಿಯರಿಗೆ ಅಭಿನಂದನೆಗಳು, ವಂದನೆಗಳು.
          ಇದು ಭೀಮಾ ತೀರದಲ್ಲಿ ನಡೆಯುತ್ತಿರುವ ಅಖಂಡ ಇಂಡಿ ತಾಲೂಕಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನ. ಎಲ್ಲಿ ಗುಣಕ್ಕೆ ಮತ್ಸರವಿಲ್ಲವೋ ಅಲ್ಲಿ ನಾಮದೇವ ಘಟಿಸುತ್ತಾನೆ. ಅಲ್ಲಿ ಅಕ್ಕಮಹಾದೇವಿ, ಕೀಟ್ಸ್, ರಾಬಿಯಾ ಮತ್ತು ರಾಗಂ ಘಟಿಸುತ್ತಾರೆ. ಗುಣಕ್ಕೆ ಮತ್ಸರವಿಲ್ಲದೆ ಗುಣಗ್ರಾಹಿಯಾಗಿರುವ ಪ್ರಜ್ಞಾವಂತರು ಇಲ್ಲಿರುವ ಕಾರಣಕ್ಕಾಗಿಯೇ ನನ್ನಂಥ ಎಳೆಯ ಒಂದು ಸಮ್ಮೇಳನದ ಸರ್ವಾಧ್ಯಕ್ಷನ ಹಂತಕ್ಕೆ ಏರಲು ಕಾರಣವಾಗುತ್ತದೆ. ಇಲ್ಲಿ ಯಾರಿಗೂ ಮಾಡಿದೆವೆಂಬ ಅಹಂ ಇಲ್ಲ, ನೀಡಿದೆವೆಂಬ ದುರಹಂಕಾರವಿಲ್ಲ ರಾಜರಾರಣದ ಲೇಪವಿಲ್ಲ. ಸಹಜವಾಗಿ ನೀಡಿ, ಸಹಜ ಸಂಸ್ಕøತಿಗೆ ಇಂದು ನೀವು ಸಾಕ್ಷಿಯಾಗಿದ್ದೀರಿ.

          ಬದುಕಿನಲ್ಲಿ ಭಾಗ್ಯ ಬರಬೇಕಾದ ರೀತಿಯನ್ನು ನನ್ನ ತಂದೆ ಹಾಗೂ ವಿದ್ಯಾಗುರುಗಳಾದ ಪ್ರೊ. ಜಿ.ಜಿ. ಮಠಪತಿಸಹಜತೆಎಂಬ ಸಿದ್ಧಾಂತದಲ್ಲಿಯೇ ಕಟ್ಟಿಕೊಟ್ಟರು. ಅವರು ಕಲಿಸುತ್ತಿದ್ದ ಒಂದು ಪದ್ಯ-
ಸಹಜ ಮಿಲೆ ತೊ ದೂದ್ ಸಮಾನ್
ಮಾಂಗೇ ಜೊ ಮಿಲೆ, ಪಾನಿ ಸಮಾನ್
ಜಾಮೇ ಏಂಚತಾನಿ
ರಕ್ತ ಸಮಾನ್

ಹಾಲಿನಂತೆ ಸಹಜವಾಗಿ ನಮಗೆ ಭಾಗ್ಯಗಳು ದಕ್ಕಬೇಕು. ಮನುಷ್ಯನಿಗೆ ದೈವಭಾಗ್ಯ, ಸಮಾಜ ಭಾಗ್ಯ ಯಾವುದೇ ಆಗಿರಲಿ ಅದು ನೆತ್ತರಿನ ವಾಸನೆಯೊಂದಿಗೆ ನಮಗೆ ಅಂಟಿಕೊಳ್ಳಬಾರದು. ಹೀಗೆ ಭೀಮೆ ಹರಿದಷ್ಟೂ ಸಹಜವಾಗಿ ನನ್ನ ಬದುಕಿನಲ್ಲಿ ಯಶಸ್ಸಿನ ಹೊಳೆ ಹರಿಸಿದವರು ನೀವು.
          ನೆಲದ, ಜನರ ಶಕ್ತಿಯೇ ಇದು, ಸಾಮಾನ್ಯರನ್ನು ಶರಣ ಸಂಸ್ಕøತಿಯ ದೀಕ್ಷೆಯಿಂದ ಅಲ್ಲಮರಾಗುವ, ಯೋಗಿಗಳಾಗುವ, ಧರ್ಮವಂತರಾಗುವ ದಾರಿಯನ್ನು ತೋರಿಸಿದ ನೆಲ. ಇದು ಶ್ರೀ ಸಾಮಾನ್ಯರಿಂದ ಜಾನಪದವನ್ನು ರಚಿಸಿಬದುಕೇ ಕಾವ್ಯ, ಕಾವ್ಯವೇ ಬದುಕು ಎನ್ನುವ ಸಂದೇಶ ಕೊಟ್ಟ ನೆಲ. ಇಲ್ಲಿಯ ಶ್ರೀಸಾಮಾನ್ಯನ ಬೆಳಗಿನ ಮೊದಲ ಪ್ರಶ್ನೆ, “ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ..?” ಇಲ್ಲಿಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ. ಹೀಗಾಗಿ ಅಖಂಡ ಇಂಡಿ ತಾಲೂಕಿನ ಹತ್ತನೆಯ ಸಾಹಿತ್ಯ ಕನ್ನಡ ಸಮ್ಮೇಳನದ ಆಯೋಜನೆಯಲ್ಲಿಯೂ ಸಾಮಾನ್ಯನ ಕೊಡುಗೆ ಸಾಮಾನ್ಯವಾದುದಲ್ಲ. ಹೀಗಾಗಿ ಮೊದಲಿಗೆ ಸಾಹಿತ್ಯದ ಜೀವಾಳವಾದ ಸಾಮಾನ್ಯರನ್ನು ಇಲ್ಲಿ ಸ್ಮರಿಸಿಕೊಳ್ಳುತ್ತಲೇ ನನ್ನ ಮಾತುಗಳನ್ನಾರಂಭಿಸುತ್ತೇನೆ.
ತಲೆ ಬಾಗಿದ್ದೇನೆ:
ನಾನು ತಲೆ ಬಾಗಿದ್ದೇನೆ, ಉರಿ ಬಿಸಿಲಿನೊಂದಿಗೆ ಹೋರಾಡುತ್ತಾ ನೆಮ್ಮದಿಯ ಅನ್ನ ನೀಡುವ ಇಲ್ಲಿಯ ರೈತರಿಗೆ. ಕಡು-ಬಡತನದಲ್ಲಿಯೂ ಕನಸಿಟ್ಟುಕೊಂಡ ಇಲ್ಲಿಯ ಕಲಾವಿದ, ಸಾಹಿತಿ ಹಾಗೂ ಸಾಧಕರಿಗೆ. ನಾನು ತಲೆ ಬಾಗಿದ್ದೇನೆ, ನನ್ನಂಥ ಸಾವಿರಾರು ಪ್ರತಿಭೆಗಳನ್ನು ಸೃಷ್ಟಿಸಿದ ಪ್ರಾಥಮಿಕ, ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಕ ಬಂಧುಗಳಿಗೆ, ಅಂಗನವಾಡಿಯ ಅಮ್ಮಂದಿರಿಗೆ. ನಾನು ತಲೆ ಬಾಗಿದ್ದೇನೆ ನಮ್ಮೂರ ಸಂತೆ, ವ್ಯಾಪಾರ, ವ್ಯವಹಾರ ಹೊತ್ತ ಹಮಾಲಿಗಳಿಗೆ. ಆಟೋ-ರಿಕ್ಷಾ ಚಾಲಕರಿಗೆ, ಊರ ಗುಡಿಸುವ ಪೌರ ಕಾರ್ಮಿಕರಿಗೆ. ನಾನು ತಲೆ ಬಾಗಿದ್ದೇನೆ, ಕ್ಷೌರಿಕರಿಗೆ, ಧರ್ಮಗುರುಗಳಿಗೆ, ವ್ಯಾಪಾರಿಗಳಿಗೆ, ರಾಜಕಾರಣಿಗಳಿಗೆ. ನಾನು ತಲೆ ಬಾಗಿದ್ದೇನೆ, ಸಮ್ಮೇಳನಕ್ಕೆ ಕಾರಣರಾದ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ, ಜಿಲ್ಲಾ ಮತ್ತು ತಾಲ್ಲೂಕಾ ಅಧ್ಯಕ್ಷರುಗಳಿಗೆ, ಖಜಾಂಚಿ, ಕಾರ್ಯದರ್ಶಿ ಸದಸ್ಯ ಬಂಧುಗಳಿಗೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಿಗೆ. ನಾನು ತಲೆ ಬಾಗಿದ್ದೇನೆ, ಎಲ್ಲ ಕನ್ನಡ ಪರ ಸಂಘಟನೆಗಳಿಗೆ, ಹೋಟೆಲ್ ಮಾಲೀಕರುಗಳಿಗೆ, ದಾನಿಗಳಿಗೆ, ನುಡಿಜಾತ್ರೆಗೆ ನೆಲ-ನೆರಳು ಕೊಟ್ಟು ಕನ್ನಡ ರಾಜ-ರಾಜೇಶ್ವರಿಯ ತೇರು ಹೊತ್ತು ತಂದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳಿಗೆ, ಇಲ್ಲಿಯ ಶಿಕ್ಷಕ ಬಂಧುಗಳಿಗೆ, ಸಂಸ್ಥೆಯ ಎಲ್ಲ ಪದಾಧಿಕಾರಿಗಳಿಗೆ. ನಾನು ತಲೆ ಬಾಗಿದ್ದೇನೆ, ಕಳೆದ ಒಂದು ತಿಂಗಳಿಂದ ಸಮ್ಮೇಳನದ ಸುದ್ದಿಯನ್ನು ಸಾಮಾನ್ಯರ ಮನೆ-ಮನಗಳಿಗೆ ಒಯ್ದ ಮಾಧ್ಯಮ ಮಿತ್ರರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಮತ್ತೆ ಹಿಡಿ ಮಣ್ಣಿಗೆ.  
ಸಾಮಾನ್ಯರಿಗಾಗಿ ಸಾಹಿತ್ಯ :
ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಎರಡು ಪದಗಳ ಮಹತ್ವದ ಘೋಷಣೆಯೊಂದನ್ನು ದಾಖಲಿಸಲಾಗಿದೆ. ‘ಸಾಮಾನ್ಯರಿಗಾಗಿ ಸಾಹಿತ್ಯಎನ್ನುವ ವಾಕ್ಯ ನನ್ನನ್ನು ಬಹುವಾಗಿ ಕಾಡಿದೆ. ಬಹುತೇಕ ಪ್ರಪಂಚದ ವಿಭೂತಿ ಪುರುಷರಿಗೂ ಕಾಡಿರುವ, ಕಾಡಬೇಕಾದ ವಾಕ್ಯಸಾಮಾನ್ಯರಿಗಾಗಿ ಸಾಹಿತ್ಯ. ಮಹತ್ವದ ಚಿಂತನೆಗೆ ಹೋಗುವ ಮುನ್ನ ಒಂದು ಸ್ಪಷ್ಟನೆ; ನನ್ನ ವಿಭೂತಿಗೆ ಲಿಂಗಾಯತ, ವೀರಶೈವ, ಬ್ರಾಹ್ಮಣ ಎಂಬ ಮೌಢ್ಯದ ಮಿತಿಯಿಲ್ಲ. ಇದು ಅಲ್ಲಮನ ಲಿಂಗ ಮೆತ್ತಿದ ವೈಚಾರಿಕತೆಯ ಪವಿತ್ರ ಹುಡಿ. ‘ಸಾಮಾನ್ಯರಿಗಾಗಿ ಸಾಹಿತ್ಯ. ಹೌದು, ಇದರ ಇನ್ನೊಂದು ಅರ್ಥವಾಗಿಜನಸಾಮಾನ್ಯರಿಂದಲೇ ಸಾಹಿತ್ಯವೆಂದು ವಿಸ್ತಾರಗೊಳ್ಳಬೇಕಿದೆ. ಸಮಾಜಮುಖಿಯಾದ ಸಾಹಿತ್ಯ ನಮ್ಮ ಎಲ್ಲ ಕಾಲಗಳ ಜರೂರತ್ತಾಗಿರಬೇಕಾಗಿದೆ. ಜನಸಾಮಾನ್ಯ ಅಥವಾ ಶ್ರೀಸಾಮಾನ್ಯನೆಂಬುವನು ವಿಶ್ವದ ಬಹುಪಾಲು ಚಳುವಳಿಗಳ, ಕ್ರಾಂತಿ ಹಾಗೂ ಆಲೋಚನೆಗಳ ಕೇಂದ್ರ ಪ್ರಜ್ಞೆ ಇದ್ದಂತೆ. ಇವನಿಂದ ವಿಮುಖವಾದ, ಇವನನ್ನು ತುಳಿದ, ಸೀಳಿದ ಯಾವುದೇ ಶಕ್ತಿಗೂ ಭವಿಷ್ಯವಿರುವುದಿಲ್ಲ. ಅಂತೆಯೇ ಪ್ರಪಂಚದ ಶ್ರೇಷ್ಠ ವೈಚಾರಿಕ ಸಂತ ಕಬೀರ
ದುರ್ಬಲ್ ಕೊ ಸತಾಯಿಯೇ
ಜಾ ಕಿ ಮೋಟಿ ಹಾಯ್
ಬಿನಾ ಜೀವ ಕಿ ಸಾಂಸ್ ಸೆ
ದೇಹ ಬಸಮ್ ಹೊಯಿ ಜಾಯ್
ಎಂದಿದ್ದಾರೆ.
ಬರಹವಿರಲಿ, ಬದುಕೇ ಇರಲಿ ದರಿದ್ರ ನಾರಾಯಣನ ಸೇವೆಯಿಂದ ಅದು ದೂರವಾಗದಿರಲಿಎಂದು ಗಾಂಧಿಯೂ ಹೇಳಿತ್ತಾರೆ.
      ಸಾಹಿತ್ಯಕ್ಕಾಗಿ ನೋಬೆಲ್ ಶಾಂತಿ ಪ್ರಶಸ್ತಿ ಪಡೆಯುತ್ತಾ ಹೆನ್ರಿ ಕಿಸಿಂಜರ್ ಬರೆಯುತ್ತಾನೆ, “ನಾನು ಪ್ರಪಂಚದ ಶ್ರೀ ಸಾಮಾನ್ಯರ ಪ್ರತಿನಿಧಿ. ನನ್ನ ಸಾಹಿತ್ಯವೆಲ್ಲವೂ ಅವರ ಚಿತ್ರಣ. ಸಾಮಾನ್ಯ ಮನುಷ್ಯ ಕೇವಲ ಕಷ್ಟಪಡುವುದಿಲ್ಲ, ಹೋರಾಡುವುದಿಲ್ಲ ಬದುಕುತ್ತಾನೆಯೂ ಕೂಡ.
ಅಮೇರಿಕಾದ ಶ್ರೇಷ್ಠ ನಾಟಕಕಾರ ವಿಲಿಯಂ ಫಾಕ್ನರ್ ಹೇಳುತ್ತಾನೆ, “ ಜನಸಾಮಾನ್ಯ ಮನುಷ್ಯ ಅಮರ ಮತ್ತು ನಿರಂತರ. ಸಾಹಿತಿ, ರಾಜಕಾರಣಿ ಹೀಗೆ ಒಟ್ಟಾರೆ ನಾಯಕನಾಗುವವನು ಜನಸಾಮಾನ್ಯನ ಹೃದಯ ಸಂಬಂಧಿ ಪುರಾತನ ಮೌಲ್ಯಗಳಾದ ಪ್ರೀತಿ, ಗೌರವ, ದುಖಃ, ದುರಂಹಕಾರ, ಸಹಾನುಭೂತಿ ಹಾಗೂ ತ್ಯಾಗಗಳಂಥ ಅಂಶಗಳನ್ನು ಗೌರವಿಸಬೇಕಿದೆ. ಜನಸಾಮಾನ್ಯನ ಅಂಶಗಳಿಲ್ಲದ ಯಾವ ಸಾಹಿತ್ಯವೂ ತಾತ್ಕಾಲಿಕವಾಗಿರುತ್ತದೆ ಹಾಗೂ ಹುಟ್ಟುತ್ತಲೇ ಅವಸಾನದ ಹಂತದಲ್ಲಿರುತ್ತದೆ. ಇವುಗಳನ್ನು ಚರ್ಚಿಸದ ಸಾಹಿತಿ ಶಾಪಗ್ರಸ್ಥನಂತೆಎಂದು. ಹೀಗಾಗಿಯೇ ದೈವ, ದೇವರುಗಳ ಕುರಿತಾದ ಆಸ್ಥಾನಪೋಷಿತ ರಾಜಾಶ್ರಯದ ಸಾಹಿತ್ಯ ಪ್ರಪಂಚದ ಎಲ್ಲೆಡೆಯಲ್ಲಿಯೂ ಕಾಲ ಕಾಲಕ್ಕೆ ಧಿಕ್ಕರಿಸಲ್ಪಟ್ಟಿತು, ಭಾರತದಲ್ಲಿಯೂ ಕೂಡ.
ರಾಷ್ಟ್ರೀಯತ್ವಕ್ಕೂ ಹಾಗೂ ಕರ್ನಾಟಕತ್ವಕ್ಕೂ ಅದ್ಭುತವಾದ ಸಂಬಂಧಗಳನ್ನು ಬೆಸೆದ ನವೋದಯ, ನವ್ಯ, ಪ್ರಗತಿಶೀಲ, ದಲಿತ ಹಾಗೂ ಬಂಡಾಯದ ಒಟ್ಟು ಸಾಹಿತ್ಯದ ಕೇಂದ್ರ ಪ್ರಜ್ಞೆಯಾಗಿ ಗೌರವಿಸಲ್ಪಟ್ಟವ ಜನಸಾಮಾನ್ಯ. ಹಾಗೆ ನೋಡಿದರೆ ಕೃತ್ರಿಮವಾದ, ಸಹಜವಲ್ಲದ ಎಲ್ಲ ವ್ಯವಸ್ಥೆಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ಮೊದಲಿಗರೆಂದರೆ ಶ್ರೀ ಸಾಮಾನ್ಯರಾಗಿದ್ದ ವಚನಕಾರರು. ಹೀಗಾಗಿಯೇ
ಬ್ರಹ್ಮ ಪದವಿಯನೊಲ್ಲೆ
ವಿಷ್ಣು ಪದವಿಯನೊಲ್ಲೆ
ಇಂದ್ರ ಪದವಿಯನೊಲ್ಲೆ
ರುದ್ರ ಪದವಿಯನೊಲ್ಲೆ
ಎಲ್ಲಕ್ಕೂ ಒಡೆಯ
ಶ್ರೀ ಶಿವ ಪ್ರಮಥಂಗಳ
ತಿಪ್ಪೆಯ ಮೇಲಿನ ಹುಳುವಾಗಿ ಹುಟ್ಟಿಸು
ಮಹಾ ಮಹಿಮ ಸೊಡ್ಡಳ
ಎನ್ನುವ ಧೋರಣೆಯ ವಚನಗಳನ್ನು ಸಾಮಾನ್ಯ ಶರಣನಾಗಿ ಸೊಡ್ಡಳ ಬಾಚರಸರೂ ರಚಿಸಿದರು.

ಭಾರತೀಯ ಸಾಹಿತ್ಯದ ಪ್ರಗತಿಶೀಲ ಕಾಲ ಘಟ್ಟವಂತೂ ಶ್ರೀಸಾಮಾನ್ಯನ ಪಾಲಿನ ಸಾಹಿತ್ಯದ ಸ್ವರ್ಣಯುಗವೆಂದೇ ಹೇಳಬೇಕು. ಇದರ ಮುಂಚೂಣಿಯ ಬರಹಗಾರರಾಗಿದ್ದ ಮುನ್ಷಿ ಪ್ರೇಮಚಂದ ಹೇಳುತ್ತಾರೆ, “It is the object of our association to rescue literature from the conservative classes to work for the freedom of ideas and thoughts of an ordinary man to living the arts and literature into the closest touch with the people and to take them as a vital organs which will resister the actualities of life, as well as lead us to the future envisage. Opposition to blind faith in religion, Opposition to caste and untouchability, Opposition to communalism, opposition to exploitation of woman. Upliftment and emancipation of Indian laboubers. Upliftment and emancipation of the peasantry. As a whole freeing individual thinking from fatalism and superstition to make it follow reasons and logic.”

ಇದು ನಿಮ್ಮಜನಸಾಮಾನ್ಯನಿಗಾಗಿ ಸಾಹಿತ್ಯ ಎಂಬ ವಾಕ್ಯದ ಚರಿತ್ರೆ ಮತ್ತು ವಿಸ್ತಾರ. ಜನಸಾಮಾನ್ಯರ ಕಾಳಜಿಗಳ ಸಂಸ್ಕಾರದಲ್ಲಿಯೇ ನನ್ನ ಸಾಹಿತ್ಯವೂ ಪಲ್ಲವಿಸಿದ್ದು. ಹೀಗಾಗಿ ಹಳೆಯದೆಲ್ಲವನ್ನು ಧಿಕ್ಕರಿಸಿ ಇಂದಿಗೆ ಹದಿನಂಟು ವರ್ಷಗಳ ಹಿಂದೆಎರಡು ದಡಗಳ ನಡುವೆಎಂಬ ನನ್ನ ಕಾವ್ಯ ಸಂಕಲನದಲ್ಲಿ ನಾನೊಂದು ಪದ್ಯ ಬರೆದಿದ್ದೆ. ಅದರ ಶೀರ್ಷಿಕೆಬೇರು ಬಿಟ್ಟವರಲ್ಲ ನಾವು
ನಾವು
ನಿಮ್ಮಂತೆ ಬೇರು ಬಿಟ್ಟವರಲ್ಲ ಸ್ವಾಮಿ,
ನಿನ್ನೆ ತಾನೇ ಹುಟ್ಟಿ,
ನಾಳೆಯನ್ನು ಕನಸುತ್ತಿರುವವರು
ಇಂದಿಗೆ ನಿಮ್ಮ ಒಲವು ಬೇಕು.
ನೀವು ಹಾಕಿದ ಹೆದ್ದಾರಿಗಳ ಬಿಟ್ಟು
ಕವಲು ದಾರಿಯ ಕತೆಯ ಬರೆಯ ಹೊರಟವರು
ಹರಕೆ, ಹಂಬಲ ನಮ್ಮ ಜೊತೆಗೆ ಬಿಡಬೇಕು.


ನಿಮ್ಮ ಹಗ್ಗವೊ ಹಳತು
ಹರಿವ ಹಾವ್ಗಳೇ ಹಿಡಿದು ಆಡಹೊರಟವರು
ಎದೆ ಹಾಡಿಕೊಂಡರೆ ಹರಸಬೇಕು
ನಡುರಾತ್ರಿ ಎದೆಸೀಳಿ
ಕಡುಬಿಸಿಲ ಹುಟ್ಟಿಸಿ, ಬಚ್ಚಿಟ್ಟ ಸತ್ಯಗಳ
ನೋಡ ಹೊರಟವರು
ನೀವು ನೋಡುತ್ತಿರಬೇಕು.

ನಾವು ಇತಿಹಾಸವನು ಬಗೆದು
ಹೊಸ ಕವನ ಬರೆದು, ಹಾಡಹೊರಟವರು
ತಾಳ ಹಾಕುವ ತಾಳ್ಮೆ ನಿಮ್ಮಲಿರಬೇಕು
ನಿಮ್ಮ ಮತಗಳ ಕೊಡವಿ
ಮರಣೋತ್ತರವ ಬರೆದು
ಹುಗಿಯ ಹೊರಟವರು ಸುಮ್ಮನಿರಬೇಕು.
ಬಿಸಿಲೇ ಒಂದು ಬೆಸುಗೆ :
ಬುದ್ಧಿಯ ಪ್ರಾಥಮಿಕ ಸ್ಥಿತಿಯಲ್ಲಿ ವಸ್ತು-ವಿಷಯಗಳೆಲ್ಲ ಒಂದು ಇನ್ನೊಂದರಿಂದ ಭಿನ್ನ, ಒಂದು ಇನ್ನೊಂದಕ್ಕೆ ವಿರೋಧ ಎನ್ನುವಂತೆ ಗೋಚರಿಸುತ್ತವೆ. ಆದರೆ ಅನುಭವ ಮಾಗಿದಂತೆ ವಿಭಜನೆಯ ಗೆರೆಗಳು ಮಾಯವಾಗಿ ಇಡೀ ಪ್ರಪಂಚ ಒಂದು ಅಖಂಡ ಶಿಲ್ಪವಾಗಿ, ಬದುಕಾಗಿ ದರ್ಶನಸದೃಶ್ಯವಾಗುತ್ತದೆ.
ವೃತ್ತಿ ಕಾರಣಕ್ಕೆ ನಾನು ಮೈಸೂರು, ಹಾಸನ, ಭಟ್ಕಳ ಹಾಗೂ ಬೆಂಗಳೂರುಗಳಲ್ಲಿದ್ದಾಗ ಬಿಸಿಲು ನಾಡಾದ ನನ್ನ ತಾಲೂಕು ಇಂಡಿ, ಎಷ್ಟೊಂದು ತೀವ್ರ, ಭಿನ್ನ ಹಾಗೂ ಸ್ಪೋಟಕ ಎನ್ನಿಸುತ್ತಿತ್ತು. ಆದರೆ ಜೀವ ಮಾಗಿದಂತೆ ಮಲೆನಾಡ ಹಸಿರಿಗೂ, ನನ್ನ ನೆಲದ ಬಯಲು ಸೀಮೆಯ ಬಿಸಿಲಿಗೂ ಒಂದು ವಿಚಿತ್ರವಾದ ಸಂಬಂಧ ಸ್ಪಷ್ಟವಾಗುತ್ತಿದೆ. ಹೀಗಾಗಿಯೇ ಬಹಳ ಹಿಂದೆಯೇ ನಾನು ಬಿಸಿಲೂ ಒಂದು ಬೆಸುಗೆಎಂದು ಬರೆದೆ.
ಇಲ್ಲಿಯ ಲಿಂಬೆ, ದಾಳಿಂಬೆ, ದ್ರಾಕ್ಷಿ ಹಾಗೂ ಜೋಳದ ಹುಡಿ ನೋಡುತ್ತ ಬೆಳೆದುದರ ಪರಿಣಾಮ ನಾನು ಕರ್ನಾಟಕದ ಕರಾವಳಿ ತೀರದ ಭಟ್ಕಳ, ಸಹ್ಯಾದ್ರಿ ಸೆರಗಿನ ಶಿವಮೊಗ್ಗ, ಪಶ್ಚಿಮ ಘಟ್ಟಗಳ ಬೇಲೂರುಗಳನ್ನು ಆನಂದಿಸಲು ಸಾಧ್ಯವಾಯಿತು. ಹೀಗಾಗಿ ದಶಕಗಳವರೆಗೂ ಕಾಫಿ ಬೋರ್ಡ್, ಏಲಕ್ಕಿ ಬೆಳೆಗಾರರ ಸಂಘ, ತೆಂಗು ಅಭಿವೃದ್ಧಿ ಸಮಿತಿಗಳನ್ನು ನೋಡಿದ್ದ ನನಗೆ, 2017ರಲ್ಲಿ ಇಂಡಿ ತಾಲ್ಲೂಕು ಕೇಂದ್ರದಲ್ಲಿ ಲಿಂಬೆ ಮಂಡಳಿ ಸ್ಥಾಪನೆಯಾದದ್ದು  ಅತ್ಯಂತ ಹರ್ಷದ ಸಂಗತಿಯಾಗಿದೆ. 59 ಸೆಂ.ಮೀ ವಾರ್ಷಿಕ ಮಳೆಯ 2225 .ಕಿ.ಮೀ ವಿಸ್ತೀರ್ಣದ ಇಡೀ ನಾಡಿಗೆ ಜೋಳ, ಗೋಧಿ, ತೊಗರೆ ಮುಂತಾದ ಧ್ಯಾನಗಳನ್ನು ನೀಡಿ ಜೀವಧರ್ಮ ಪೊರೆಯುವ; ಕನ್ನಡ ಹಿಂದಿ, ಮರಾಠಿ, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳನ್ನು ತನ್ನ ಬುದ್ಧಿ-ಭಾವಗಳ ತೆಕ್ಕೆಯೊಳಗಿರಿಸಿಕೊಂಡಿರುವ; ಎಪ್ಪತ್ತು ಪ್ರತಿಶತ ನೇಗಿಲಯೋಗಿಗಳ, ಕಾಯಕ ಜೀವಿಗಳ ನೆಲದಲ್ಲಿಯೇ ನನ್ನ ಹೆಜ್ಜೆ ಗುರುತುಗಳಿವೆ.
ನನ್ನ ಅಖಂಡ ಇಂಡಿ ತಾಲ್ಲೂಕಿನ ನೆಲದ ಮೋಹ ಜಗತ್ತಿನ ಶ್ರೇಷ್ಠ ಅವಿಭಜಿತ ಭಾರತದ ಕಥೆಗಾರ ಸಾದತ್ ಹಸನ್ ಮಾಂಟೋನ ಹುಚ್ಚಿನಂತೆ. 2013ರಲ್ಲಿ ನನ್ನ ಐದನೆಯ ಕಾವ್ಯ ಸಂಕಲನಇರುವಷ್ಟು ಕಾಲಪ್ರಕಟವಾಯಿತು. ನೆಲದ ನಂಟಿನ ಕರುಳ ಸಂವಾದ ಅಲ್ಲೊಂದು ಕವಿತೆಯಾಯಿತು. ಆಗ ಅಲ್ಲಿ ಬರೆದಿದ್ದೆ
ಇಲ್ಲೆಲ್ಲೋ ಇವೆ
ನನ್ನ ಹೆಜ್ಜೆ ಗುರ್ತುಗಳು
ಸದ್ದಡಗಿ, ಧೂಳಿಡಿಗಿ ಮಸುಕು-ಮಸುಕಾದರೂ
ಎದೆಯ ಹಸಿ ಕೆದಕಿ, ಗತಕೋ, ವರ್ತಮಾನಕೋ
ನೆನಪು ಹೊಸೆಯುವ
ಗುರ್ತುಗಳು ಇಲ್ಲೆಲ್ಲೋ ಇವೆ
ಮಣ್ಣು ಮೃಷ್ಟಾನ್ನವಾಗಿ, ಕೈ ತುತ್ತಾಗಿ
ಬಿದ್ದ ಗಾಯಕೆ ಮಲಾಮಾಗಿ ಮಣ್ಣೇ
ಮಾಗಿದ ಮುಷ್ಠಿಗೆ ಸಿಕ್ಕು
ಕೊಸರಿ ಕೆಸರಾಗಿ
ಅಂದಗೇಡಿ ಅಂದವಾಗಿ
ಮೂರ್ತಿ ಮಹಾನವಮಿಯಾಗಿ
ಬಾಯ್ಗಿಟ್ಟು ಮೆತ್ತಿದ್ದ ನೆಲದಲ್ಲಿಯೆ
ಇಲ್ಲೇ ಎಲ್ಲೊ ಇವೆ ನನ್ನ ಹೆಜ್ಜೆ ಗುರ್ತುಗಳು

ಇರುವಷ್ಟು ಕಾಲ !
ಹಾಲ್ಗೆನ್ನೆಯ ರಂಗೇರಿಸಿ,
ಸುರಿದ ಕಣ್ಣೀರ ಮುತ್ತುಗಳ
ಮೆತ್ತಗೆ ಲಾಲಿ ಹಾಡಿ ಮಲಗಿಸಿ
ಮಳೆಗೆ ಮಕರಂದವಾಗಿ
ಇಲ್ಲೇ ಇಲ್ಲೇ ಇಲ್ಲೇ
ಮಣ್ಣೊಳಗೆ
ಎಲ್ಲೊ ಇವೆ ನನ್ನ ಹೆಜ್ಜೆ ಗುರ್ತುಗಳು

No comments:

Post a Comment