Total Pageviews

Monday, December 29, 2014

ಮೊಲ್ಲೆ-ಮಲ್ಲಿಗೆಯ ತೋರಣವ ಕಟ್ಟಿ



“ಅಮೃತವನ್ನು ಉಣ್ಣುವ ಶಿಶುವಿಗೆ ವಿಷವನು ಉಣಿಸುವರೇ ಅಯ್ಯ?
ನೆರಳ ತಂಪಿನಲಿ ಬೆಳೆದ ಸಸಿಗೆ ಉರಿಯ ಬೇಲಿಯ ಕಟ್ಟುವರೆ ಅಯ್ಯ”
 ಅಣ್ಣನ ಈ ಸಾಲುಗಳನ್ನು ಮೆಲುಕು ಹಾಕುತ್ತ, ಬೆಂಗಳೂರಿಗೆ ಬಂದ ಹೊಸದರಲ್ಲಿ ನಮಗೆ ಸಹಾಯಕನಾಗಿ ಸಹಕರಿಸಿದ ಕಿರಿಯ ಬಸವರಾಜನ ದುರ್ಗತಿಯನ್ನು ನೆನಪಿಸಿಕೊಳ್ಳುತ್ತ, ಇಲ್ಲೊಂದು ಝರಾಕ್ಸ್ ಇಟ್ಟುಕೊಂಡು ತಾಯಿಯನ್ನು ಸಲಹುತ್ತ ಬದುಕಿದ್ದ ಬಸವರಾಜನಿಗೆ ಬಡತನವಿತ್ತು. ಆದರೆ ಅಕ್ರಮದ ಆಕರ್ಷಣೆ ಇರಲಿಲ್ಲ. ಇಂಥ ಹುಡುಗ ಬಿ.ಎಂ.ಟಿ.ಸಿ ಎಂಬ ರಕ್ಕಸ ವಾಹನದ ಬಾಯಿಯಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನದೊಂದಿಗೆ ಚರಂಡಿಗೆ ಜಿಗಿದ. ಬಸವರಾಜ ಜೀವ ಉಳಿಸಿಕೊಂಡ ಆದರೆ ಕಾಲು ಕಳೆದುಕೊಂಡ. ದಿನಕ್ಕೆ 400 ಗಳಿಸುವ ಯುವಕನಿಗೆ 4 ಲಕ್ಷ ರೂಪಾಯಿಗಳ ಆಸ್ಪತ್ರೆ ಬಿಲ್ಲು. ಕಣ್ಣೀರಾಗುತ್ತದೆ ಈ ಕ್ಷಣ. ಯಾವ ಯಾವ ಆಕರ್ಷಣೆಗೋ ಪ್ರಪಂಚ ಗೆಲ್ಲುವ ಹುಮ್ಮಸ್ಸಿನಲ್ಲಿ ನಿತ್ಯ ಬೆಂಗಳೂರೆಂಬ ಮಾಯೆಯ ಮೋಹಿಸಿ ಬರುವವರಲ್ಲಿ ಅದೆಷ್ಟು ಜನ ಮರಳಿ ಹೋಗುತ್ತಾರೊ.  
 ಅಂದಹಾಗೆ, ಗೆಳೆಯ ವಾದಿರಾಜರ ತಂದೆ ವೈಕುಂಠದ ದಾರಿಯಲ್ಲೋ? ಲೋಕದ ಜಂಜಾಟದಲ್ಲೋ ಎಂದು ದುಗುಡ ಪಡುತ್ತ ಕಳೆದ ಆರು ದಿನಗಳಿಂದ ಕರ್ನಾಟಕದ ರಾಜಧಾನಿಯಿಂದ ಮಹಾರಾಷ್ಟ್ರದ ಜತ್ತವರೆಗೆ ಕಾರು ಓಡಿಸುತ್ತಲೇ ಇದ್ದೆ.
ಕಳೆದವಾರ ಪೆಶಾವರದಲ್ಲಿ ಮಕ್ಕಳ ಮಕ್ಕಳ ಮಾರಣಹೋಮದ ಮರುದಿನ ನಮ್ಮ ಎಂ.ಎಸ್.ಬಿಲ್ಡಿಂಗ್ ಸುತ್ತ ಪೋಲಿಸ್ ಸರ್ಪಗಾವಲು. ಕಾರಣ, ಬಾಂಬ್ ಇಟ್ಟಿದ್ದಾರೆಂಬ ಹುಸಿ ಸುದ್ದಿ. ನಾವಾರೂ ಬ್ಲಾಸ್ಟ್ ಆಗಲೇ ಇಲ್ಲ. 
 ಜಮಖಂಡಿಯಲ್ಲಿ ಕಳೆದ ಮೂರು ದಿನಗಳಿಂದ ಜನಪದ ಕಲಾ ಮತ್ತು ಶರಣ ಸಂಸ್ಕøತಿ ಉತ್ಸವ. 2 ನೇ ದಿನದ(26.12.2014) ಮುಂಜಾನೆ ಗೋಷ್ಠಿಯ ಮುಖ್ಯ ಅತಿಥಿ ನಾನು. ಅದರ ಹಿಂದಿನ ದಿನವೇ ನನ್ನ ‘ಅರ್ಧ ಸತ್ಯದ ಹೆಣ್ಣ’ನ್ನು ಮೋಹಿಸಿ ಕುಳಿತಿದ್ದ ಹಿರಿಯರ ಬಳಗ ಒಂದನ್ನು ಉದ್ದೇಶಿಸಿ ನನ್ನ ಮಾತು ಶುರುಮಾಡಿಕೊಂಡಿದ್ದು, ಅಣ್ಣನ ಒಂದು ಅಪರೂಪದ ವಚನದಿಂದ-
  “ಭಕ್ತಿ-ರತಿ ಎಂಬ ಮದುವೆಗೆ
ಕಣಗಿಲೆಯ ಉಂಗುರವನ್ನಿಕ್ಕಿ
ಮೊಲ್ಲೆ-ಮಲ್ಲಿಗೆಯ ತೋರಣ ಕಟ್ಟಿ
ಸೇವಂತಿಗೆಯ ಚಪ್ಪರವನ್ನಿಕ್ಕಿ
ಪುಷ್ಪ ಜಾತಿಗಳೆಲ್ಲ ನಿಬ್ಬಣವ ಬನ್ನಿರೆ
ನಮಗೆಯೂ ನಮ್ಮ ಕೂಡಲಸಂಗಮ ದೇವನಿಗೂ ಮದುವೆ”
ಅಬ್ಬ! ಎಂಥ ಹೆಣ್ಣಾಗಿದ್ದ ನಮ್ಮ ಬಸವಣ್ಣ! ಅಂತಯೇ ಅಲ್ಲವೆ ಬೇಡಿದ ಶರಣರಿಗೆ ನೀಡದಿರ್ದೆಡೆ ತಲೆದಂಡ ಎಂದು ತನಗೆ ತಾನೇ ಅಂಕೆ ಹಾಕಿಕೊಂಡು ಅಸಂಖ್ಯ ಶರಣರನ್ನು ತಾಯಿಯಂತೆ ಸಲಹುವುದು ಆತನಿಗೆ ಸಾಧ್ಯವಾದುದು.
ಶರಣ ಮಂಟೂರರ ಬಸವಾಶ್ರಮದ ಮಹಾ ವೇದಿಕೆಯ ಮುಂದಿನ ದಾರಿಯ ಕುರಿತು ನಾನು ಮಾತನಾಡಿದೆ. ಮೂರು ಜನ ಮಹಾನ್ ಸಾಧಕರ ಸಾಧನೆಗೆ ಸಾಕ್ಷಿಯಾದ ದಾರಿ ಅದು. ಈ ದಾರಿಯ ಆರಂಭದಲ್ಲಿ ಐದು ಎಕರೆಯಷ್ಟು ವಿಸ್ತಾರ ಭೂಮಿಯಲ್ಲಿ ಅಂತರ್ ರಾಷ್ಟ್ರೀಯ ಕುಸ್ತಿ ಖ್ಯಾತಿಯ ನನ್ನ ಸಹೋದರ ರತನ ಮಠಪತಿಯ ಕುಸ್ತಿ ತರಬೇತಿ ಕೇಂದ್ರವಿದ್ದರೆ, ಈ ದಾರಿಯ ಕೊನೆಗೆ ಸತ್ಯ ಕಾಮರ ಸಮಾಧಿ. ಮಧ್ಯದಲ್ಲಿ ಮಂಟೂರರ ಮಹಾಮನೆ. ಇವೆಲ್ಲ ಮನುಷ್ಯ ಹೃದಯ ಸೌಂದರ್ಯಕ್ಕೆ ಸಾಕ್ಷಿಯಾದ ಸ್ಥಾವರಗಳು. 
 “ಮಾಡಿ ಆಡಲೇತಕ್ಕೆ? ಸಲಹಿ ಕೊಲ್ಲಲೇತಕ್ಕೆ?” ಇದು ಶರಣರ ಪ್ರಶ್ನೆ. ಮಂಟೂರರು ನನ್ನನ್ನು ಆ ದೊಡ್ಡ ಸಭೆಗೆ ಮುಖಾ-ಮುಖಿಯಾಗಿಸುವಾಗ ಹೇಳಿದ ಒಂದು ಮಾತು, “ರಾಗಂರ ಸಾಹಿತ್ಯ ನಿಮಗೆಲ್ಲರಿಗೂ ಗೊತ್ತು ಆದರೆ ಅವರ ಭಾಷಣ ಮತ್ತು ಅವರ ಶಬ್ಧಗಳೊಳಗೆ ಇರುವ ಮೌನ ಮತ್ತು ಅವರ ಆಂಗಿಕ ಶೈಲಿಗಳನ್ನು ನೀವೆಲ್ಲ ಗಮನಿಸಬೇಕು ಎನ್ನುವುದೇ ನನ್ನ ಈ ಬರಮಾಡುಕೊಳ್ಳುವಿಕೆಯ ಮುಖ್ಯ ಉದ್ದೇಶವಾಗಿತ್ತು. ಹೀಗಾಗಿ ಇಡೀ ಕೃಷ್ಣಾ ತೀರದ ಬಂಧುಗಳ ಪರವಾಗಿ ನಾನವರನ್ನು ಸನ್ಮಾನಿಸುತ್ತಿದ್ದೇನೆ. ಅವರ ಶ್ರೀಮತಿಯನ್ನು ಈ ಆಶ್ರಮದ ಮಗಳೆಂದು ಒಪ್ಪಿಕೊಂಡು ಈ ತವರಿಗೆ ಬರಲು ಮತ್ತೆ ಮತ್ತೆ ಕೋರಿಕೊಳ್ಳುತ್ತೇನೆ.” ಎಂಥ ಪ್ರೀತಿಯ ಸ್ವಾಗತ.
       ಮರುದಿನ ಸತ್ಯಕಾಮರ ಕಲ್ಲೊಳ್ಳಿಯ ‘ಸುಮ್ಮಾನ’ಕ್ಕೆ ಗೆಳೆಯ ಅರ್ಜುನ್ ಕೋರಟ್ಕರ್ ಮತ್ತು ಹಿರಿಯ ಸಾಹಿತಿ ನಾ. ಮೊಗಸಾಲೆಯವರಿಂದ ಆಹ್ವಾನ. ಲೇಖಕಿ ವೀಣಾ ಬನ್ನಂಜೆ ನಮಗಾಗಿ ಕಾಯುತ್ತಿದ್ದರು. ಆದರೆ ಹಿಂದಿನ ದಿನದ ಗುಡ್ಡ ಸುತ್ತಾಟದಿಂದ ದಣಿದಿದ್ದ ನನಗೆ ಏನೂ ಬೇಡವಾಗಿತ್ತು. ಜೊತೆಗೆ ಸಂಯುಕ್ತ ಕರ್ನಾಟಕದ ವ್ಯಾಪ್ತಿಯಿಂದ ಪ್ರಾಪ್ತವಾಗಿದ್ದ ಮಹಾರಾಷ್ಟ್ರದ ಅಭಿಮಾನಿ ಬಳಗವನ್ನು ನಾನು ಉದ್ದೇಶಿಸಬೇಕಾಗಿತ್ತು. 

 ಬೆಂಗಳೂರು ಬಿಡುತ್ತಲೆ, ಶರಣ ಈಶ್ವರ ಮಂಟೂರ ಮತ್ತೆ ಮತ್ತೆ ನನಗೆ ಹೇಳಿದ ಒಂದೇ ಮಾತು, ನಮ್ಮೊಂದಿಗೆ ಸಭಾಪತಿ ಶ್ರೀ ವೀರಣ್ಣ ಮತ್ತಿಕಟ್ಟಿ, ಹಿರಿಯ ರಾಜಕಾರಣಿ ದೊಡ್ಡಣ್ಣವರ ಮತ್ತು ಹುಕ್ಕೇರಿ ಮಠದ ಶ್ರೀಗಳು ಇರುತ್ತಾರೆ. ಇಡೀ ದಿನ ನೀವು ನಮ್ಮೊಂದಿಗಿರಬೇಕು. ಖಂಡಿತವಾಗಿಯೂ ಅವರ ಮಾತಿಗೆ ಅರ್ಥವಿತ್ತು. ಸುಮಾರು ಹತ್ತು ಸಾವಿರ ಜನ ಸೇರಿದ ಈ ಸಮಾರಂಭದಲ್ಲಿ ಅವರು ನನ್ನ ಸಾಹಿತ್ಯಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಅವಕಾಶವು ನನಗೆ ಸಂತಸ ನೀಡಿತು. 
 ದಿನಾಂಕ 25 ಮತ್ತು 26 ಡಿಸೆಂಬರ್, ಈ ಎರಡು ದಿನಗಳು ನನ್ನ ಪಾಲಿಗೆ ಅತ್ಯಂತ ಮಹತ್ವದವುಗಳು. ಒಂದೆಡೆ ಉಜರೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ. ಎ. ಸತ್ಯನಾರಾಯಣ ಹಾಗೂ ಡಾ. ಅವಿನಾಶ ನನ್ನ ಗಾಂಧಿ, ಕಾವ್ಯ, ಸಾಕಿ ಕುರಿತೇ ಮಾತಾಡಿ ನಮ್ಮ ಉತ್ತರ ಭೂಪರ ಗರ ಬಿಡಿಸಿದ್ದಾರೆ. ಇನ್ನೊಂದೆಡೆ ಅದೇ ದಿನ ಬೆಂಗಳೂರಿನ ಜೆ.ಪಿ.ನಗರದಲ್ಲಿ ಶ್ರೀ ನಾಗತಿಹಳ್ಳಿ ನನ್ನ ‘ಕಾವ್ಯಕ್ಕೆ ಉರುಳು’ ಮತ್ತು ‘ಹೆಣ್ಣು ಹೇಳುವ ಅರ್ಧ ಸತ್ಯ’ ಬಿಡುಗಡೆ ಮಾಡಿ ನನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಇವೆರಡರಲ್ಲೂ ಅನುಪಸ್ಥಿತನಿದ್ದ ನಾನು ಅಣ್ಣನ ಒಂದು ಸಾಲನ್ನು ವರ್ಷಾಂತ್ಯಕ್ಕೆ ತಲೆಯಲ್ಲಿ ಸೇರಿಸಿಕೊಂಡು ನನ್ನೊಳಗೇ ಇಳಿಯುತ್ತಿದ್ದೇನೆ. ಹೊರ ಬರಬೇಕಾದ ನನ್ನ ಬುದ್ಧನ ಬೆಳಕಿಗಾಗಿ ಸಿದ್ಧನಾಗುತ್ತಿದ್ದೇನೆ. 
 ಗೆಳೆಯ ವಿಠ್ಠಲ ದಳವಾಯಿ ಹಾಗೂ ಸಮಗ್ರ ಕುಟುಂಬ, ಶ್ರೀ ಸುತಾರ, ಹಾದಿಮನಿ, ಜಮಖಂಡಿ, ಬನಹಟ್ಟಿ ಮತ್ತು ಇಡೀ ಉತ್ತರ ಮತ್ತು ಗಡಿ ಕರ್ನಾಟಕದ ಅಭಿಮಾನಿ ಬಳಗಕ್ಕೆ ನನ್ನದೊಂದೇ ಸಾಲು-
 “ನಿಮ್ಮ ಪಾದವ ಹಿಡಿದಿಪ್ಪ ಮಹಾ ಪದವಿಯ ಕರುಣಿಸಿದಿರಿ”

Thursday, December 18, 2014

‘ಜೋಳಿಗೆ’: ಲೋಕದ ಮನೆಗೆ ನಾಲ್ಕು ದಿನ ಬನ್ನಿ



ಗೋಡೆಯಿಲ್ಲದ ಮನೆಗೆ
ಯಾರೂ ಬರಬಹುದಯ್ಯ
ಗೂಡಂಥ ಎದೆಯೊಳಗೆ
ಮೊಟ್ಟೆ ಇಡಬಹುದಯ್ಯ
ದೃವದಿಂದ ದೃವಕ್ಕೆ
ಚುಂಬನದ ಛಳಿ ಹೊತ್ತ
ಗಾಳಿ ಬರಬಹುದಿಲ್ಲಿ ತೂರಿಕೊಂಡು
ನಭದಿಂದ ನೆಲಕೆ
ಬೆಳಕು ಬಿತ್ತುವ
ಸೂರ್ಯ ಬರಬಹುದಿಲ್ಲಿ
ನೆರಳ ಬಯಸಿ
ನಿಂತ ನೆಲದಲ್ಲೆಲ್ಲ ನೆಲೆಯೂರುವ ಕನಸು ಕಂಡವ ನಾನು. ನನ್ನ ಈ ಮೈಗೆ ಅಲ್ಲಲ್ಲಿ, ಮಲಗಿದಲ್ಲಿ, ನಿಂತಲ್ಲಿ, ಕುಂತಲ್ಲಿ ಕೈತುತ್ತು ಉಂಡಲ್ಲಿ ಒಂದೊಂದು ದೇಹ ಬಿಟ್ಟುಬರುವ ಭಾಗ್ಯವಿದ್ದಿದ್ದರೆ, ಖಂಡಿತ ಅದನ್ನು ಬಿಟ್ಟು, ಹೊಸದೊಂದನ್ನು ತೊಟ್ಟು ಬರುತ್ತಿದ್ದೆನೇನೊ. ಆ ಭಾಗ್ಯವಿಲ್ಲದಿರುವುದೇ ಎಷ್ಟೊಂದು ಬೇಸರಗಳಿಗೆ, ನಮ್ಮ ಮೈಗಳ ಧಿಕ್ಕರಿಸಿದವರ ಸುತ್ತ ಆಪಾದನೆಗಳಿಗೆ ಕಾರಣವಾಗುತ್ತದೆ.
‘ಅಹಂ’ ಎನ್ನುವುದೇ ಹಾಗೆ. ಅದು ಏನನ್ನು ಸೇರಿಕೊಂಡಿತೊ ಆ ಮೂಲಧಾತುವಿನಲ್ಲಿಯ elasticity ಯನ್ನೇ ಹಾಳುಮಾಡಿತು. ಛೆ, ವಿಚಾರ ಎಲ್ಲೋ ಹೋಯಿತು. ನಾನು ಹೇಳುತ್ತಿದ್ದುದು ನನ್ನ ನೆಲದ ನಂಟಿನ ಕುರಿತು.
 ಬಹಳ ಚಿಕ್ಕವನಿದ್ದಾಗಿನಿಂದ ನಾನು ನೋಡದೆಯೂ ನನ್ನನ್ನು ಕಾಡಿದ ಮೂರು ಊರುಗಳು. ಒಂದು ಧಾರವಾಡ, ಮತ್ತೊಂದು ಬೆಳಗಾವಿ, ಇನ್ನೊಂದು ಮೈಸೂರು. ಸರಿ, ಈ ಧಾರವಾಡದ ಕುರಿತು ಏನು ಹೇಳುವುದು? ಇದು ಕಾಡಿಸಿದ-ಛೇಡಿಸಿದ, ಸೋಲಿಸಿದ-ಗೆಲ್ಲಿಸಿದ ರೀತಿಗೊಂದು ಕಾದಂಬರಿಯನ್ನೇ ಬರೆಯಬೇಕು. ಆದರೂ ವಿಚಿತ್ರ, ಒಂದರ್ಥದಲ್ಲಿ ಏನೆಲ್ಲ ಕೊಟ್ಟ ಈ ಧಾರವಾಡ, ತನ್ನನ್ನೇ ನನಗೆ ಕೊಡಲಿಲ್ಲವೊ ಅಥವಾ ನಾನದರ ಮೋಸದ ಮತ್ತಿನಿಂದ ದೂರಾದೆನೊ ಇಂದಿಗೂ ಗೊತ್ತಿಲ್ಲ. ಒಟ್ಟಾರೆ ಹಂಬಲಿಸಿ ನನ್ನ ಪದ್ದಿ ಮತ್ತು ತಮ್ಮನೊಂದಿಗೆ ಕಟ್ಟಿಕೊಂಡ ಅಂಗಡಿ, ಅಲ್ಲಿಯ ಮನೆ ಎಲ್ಲ ಹಂಪು ಹರಿದುಕೊಂಡು ಹೊರಬಂದೆ.
 ಮತ್ತೊಂದು ಹಂತ, ವೃತ್ತಿ ಜೀವನ ಆರಂಭಿಸಿದ ಬೆಳಗಾಂದ್ದು. ಚೆಂದುಳ್ಳ ಹುಡುಗಿಯರಿಗೆ ಮಲೆನಾಡ ಸೆರಗ ಸಿರಿಗೆ ಮನಸೋತು, ಎಂ.ಎ ಮುಗಿಸಿದ ತಕ್ಷಣವೇ ಪುಡಿಕಾಸು ನೌಕರಿಯನ್ನೇ ಹೇಗೆಲ್ಲ ಸಂಭ್ರಮಿಸಿ ಬೆಳಗಾಂ ಎಂಬ ಬೆಳಗಾಂನ್ನು ಬಿಗಿಯಾಗಿ ಹಿಡಿಯಲು ಹೋದೆ. ಅದು ಸಿಕ್ಕಿತು. ಆದರೆ ನನಗಲ್ಲ ನನ್ನ ತಂಗಿಗೆ. ಪರವಾಗಿಲ್ಲ, ಮಕ್ಕಳು ಸಂಸಾರದೊಂದಿಗೆ ಮನೆಯ ಮೇಲೆ ಮನೆ ಕಟ್ಟಿಸಿಕೊಂಡು, ಆರೋಗ್ಯವಂತಳಾಗಿ ಸಮಾಜದೊಂದಿಗೆ ಈ ಬೆಳಗಾಂದಲ್ಲಿ ಆಕೆ ಇರೋದು ನಾನಿದ್ದಷ್ಟೇ ಖುಷಿ ನೀಡಿದೆ.
ಮಧ್ಯದಲ್ಲೊಂದು ಪ್ರಹಸನ ಅಥವಾ ಭ್ರಮನಿರಸನ. ಬಾಗಲಕೋಟೆಗೆ ಅಂಟಿಕೊಂಡದ್ದು. ನೀರಿದ್ದ ಊರು. ನನ್ನ ಸಂಸಾರ ಪಲ್ಲವಿಸಿದ, ಸಾಹಿತ್ಯ ವಿಸ್ತಾರಗೊಂಡ, ಪ್ರೀತಿ ದ್ವಿಗುಣಗೊಂಡ, ಮಕ್ಕಳು ಹುಟ್ಟಿ ಅಂಬೆಗಾಲಿಟ್ಟು ದೊಡ್ಡವರಾದ ಈ ಊರಲ್ಲೂ ದನದ ದೊಡ್ಡಿಯಾಗಿದ್ದ ನೆಲ ಒಂದನ್ನು ನಾಕವಾಗಿಸುವ ಕನಸೇ ಕನಸು. ಖುಷಿ ಇದೆ. ಮರನೆಟ್ಟಿದೆ, ಅಂಗಳದ ತುಂಬ ನೆರಳಿದೆ, ಪ್ರತಿ ಮುಂಜಾವಿಗೂ ನೀರು-ರಂಗವಲ್ಲಿಯ ಚಿತ್ತಾರಕ್ಕೆ ಅವಕಾಶವಿದೆ. ಇದನ್ನೆಲ್ಲ ನೋಡಲು ಸಾಕ್ಷಿ ಕಲ್ಲಿನ ಹಾಗೆ ಒಂದು ತುಳಸಿ ಕಟ್ಟೆಯೂ ಇದೆ. ಆದಾಗ್ಯೂ ಅಲೆಮಾರಿಯ ಯಾತ್ರೆಗೆ ಇಲ್ಲಿಯ ಜಾತ್ರೆ ಸರಿಯನ್ನಿಸಲಿಲ್ಲವೆನೊ. ಹಂಗಿನರಮನೆಗಿಂತ . . . . 
 ಬೇಡ ದೂರ ಬಂದು ಬಿಡೋಣ ಎಂದು, ಶುದ್ಧ ಮಲೆನಾಡಿನ ಹಾಸನ ಜಿಲ್ಲೆಯ ಬೇಲೂರು ಸೇರಿಕೊಂಡು, ಇಲ್ಲಯ ಕಾಡಿಗೆ ಹುಚ್ಚನಾಗಿ ಬಿಟ್ಟೆ. ತೇಜಸ್ವಿಯ ಮೂಡಗೆರೆ, ನಮ್ಮ ಗೌರಿಯ ಸಕಲೇಶಪುರ, ನನ್ನ ರಾತ್ರಿಗಳ ಅಟ್ಟಾಡಿಸುವ ಕೊಟ್ಟಿಗೆಹಾರ, ಆಚೆ ಇಳಿದರೆ ಹೊಳೆವ ಮೂಡಬಿದಿರೆ ಇಲ್ಲಿ ಏಲ್ಲಾದರೂ ನನಗೊಂದು ಮನೆ ಇರಬಹುದೆ? ಎಂದುಕೊಳ್ಳುವಾಗ ಆಸರೆಯ ಕೈನೀಡಿ ಕರೆದದ್ದು ನನ್ನ ಬಾಲ್ಯದ ಕನಸುಗಳ ಆವರಿಸಿಕೊಂಡಿದ್ದ ಮೈಸೂರು. ಸರಿ, ಗೆಳೆಯನೊಬ್ಬನಿಗೆ ನೂರು ನಮನ ಹೇಳಿ ನಿನ್ನಿಂದ ನನ್ನ ದೇಹದ ಅಂತಿಮ ನೆಲೆ ನನಗೆ ಸಿಕ್ಕಿತು ಎಂದು ಹೇಳಬೇಕೆನ್ನುವುದರಲ್ಲಿ ದೈವವೆನ್ನುವ ಬೆರಗು ಗಣ್ಣಿನ ಹೆಣ್ಣು ಮತ್ತೆಲ್ಲೊ ಬೆರಳು ತೋರಿಸಿ ಮುಸಿ ನಕ್ಕಿತು. 
 ಈಗ ಇಲ್ಲಿ ನಿಂತಿದ್ದೇನೆ. ಎಲ್ಲಿಂದ ಸಿಂಬಳು ಮೂಗು ಸರಿಪಡಿಸಿಕೊಂಡು ಸರಳ-ಸಂಕೋಚದ ಯಾತ್ರೆ ಆರಂಭಿಸಿದ್ದೆನೊ, ಯಾವ ರಸ್ತೆ ರಸ್ತೆಗಳ ಸುತ್ತಿ ಜಂಗಮರ ಪಿಂಡವಾಗಿ ಉಂಡು ದೇಹ ಬೆಳಸಿದ್ದೆನೊ, ಆ ದೇಹವನ್ನು ಮತ್ತೆ ಅದೇ ನೆಲಕ್ಕೆ ತಂದು ನಿಲ್ಲಿಸಿದ್ದೇನೆ. ಅಂದಹಾಗೆ, ನಿಂತ ಈ ಜಂಗಮನ ನೆಲಕ್ಕೆ ‘ಜೋಳಿಗೆ’ ಎಂದು ಹೆಸರಿಸಿದ್ದೇನೆ.
ಇದು ಯಾರ ಮನೆಯೊ? ಈ ಹಿಂದೆ ಯಾರ ನೆಲವೊ? ಇದರ ಪೂರ್ವವೆನೊ? ಭವಿಷ್ಯವೆನೊ? ವರ್ತಮಾನದ ಒಡೆತನ ನನ್ನದಿರಬಹುದಷ್ಟೆ. ಬಿಜಾಪುರದ ಬುರುಜುಗಳನ್ನು ನೋಡುತ್ತ ಬೆಳೆದವ ನಾನು. ಗತಕಾಲದ ಕಟ್ಟಡಗಳ ಹಿಂದಿನ ಕಾರಣಗಳನ್ನು ಹೇಳುವ ಒಬ್ಬ ವ್ಯಕ್ತಿಯೂ ಇಂದು ನಮ್ಮೊಂದಿಗಿಲ್ಲ. ಭೂಮಿ, ಬಂಗಾರ ಎಂದೂ ಯಾರದ್ದೂ ಅಲ್ಲ. ಇರುವಷ್ಟು ಕಾಲ ನಮ್ಮ ಮುದ್ರೆಗಳನ್ನೊತ್ತಿ ನಮ್ಮದೆಂದುಕೊಳ್ಳುತ್ತೇವೆ. ಈ ನಮ್ಮತನದ ಭ್ರಮೆಯನ್ನ ಒಂದಷ್ಟು ಕಾಲ ಸಂಭ್ರಮಿಸುತ್ತೇವೆ.
ಅಂದಹಾಗೆ ಇದು ಜಂಗಮನ ‘ಜೋಳಿಗೆ’. ಜಾತಿ, ಧರ್ಮ, ಲಿಂಗ, ವಯಸ್ಸುಗಳ ಬೇಧವಿಲ್ಲದೆ ಬಯಲೊಳಗೆ ಆಲಯವಾಗಿ ನಿಂತ ಈ ಜೋಳಿಗೆಯನ್ನು ನೋಡಿದಾಗ ಹೇಳಬೇಕೆನಿಸುವುದಿಷ್ಟೆ.
 ಇದು ‘ಜೋಳಿಗೆ’, ಲೋಕದ ಮನೆಗೆ ನಾಲ್ಕು ದಿನ ಬನ್ನಿ.
 ಕೈ ನೀಡಿದವರಷ್ಟೆ ಕೈ ಹಿಡಿದವರೂ ಪ್ರಾಮಾಣಿಕರಾಗಿದ್ದರೆ ಕನಸುಗಳು ಹೇಗೆ ಕೈಗೂಡುತ್ತವೆ ಎನ್ನುವುದಕ್ಕೊಂದು ಸಾಕ್ಷಿ, ಈ ‘ಜೋಳಿಗೆ’. ಕಳೆದ ವರ್ಷ ಡಿಸೆಂಬರ್ 19 ರಂದು ಗೆಳೆಯನ ‘ಡಿ.ಎಂ.ಎಂಪಾಯರ್’ ದ ಉದ್ಘಾಟನೆಗೆ ಹೋದ ನಾನು, ಆತನ ಪ್ರೀತಿಗೆ ಮಣಿದು ಈ ‘ಜೋಳಿಗೆ’ಯ ಶಂಕು ಸ್ಥಾಪನೆಗೆ ಸಾಕ್ಷಿಯಾಗಿದ್ದೆ. ಆದರೆ ಇಡೀ ವರ್ಷವೆಂಬ ವರ್ಷದಲ್ಲಿ ಎಷ್ಟೆಲ್ಲಾ ಕೆಲಸಗಳು, ಹಿಂಜರಿಕೆಗಳು, ಧಾವಂತದ ದಾರಿಗಳು, ಭರವಸೆಗಳು, ಮತ್ತೆ ಸೋಲಿಸುವ ಹೊಸ ಒರಸೆಗಳು, ಅಬ್ಬಾ! ನೆನಸಿಕೊಂಡರೆ ಇದನ್ನೆಲ್ಲ ಹೇಗೆ ಕ್ರಮಿಸಿಕೊಂಡು ಬಂದೆ! ಭಯವಾಗುತ್ತದೆ ನನಗೆ. ಇಂಥವುಗಳ ಮಧ್ಯ ಈ ‘ಜೋಳಿಗೆ’ಯ ಬಾಲ್ಯ-ಬೆಳವಣಿಗೆಯನ್ನು ಗಮನಿಸಲು ನನಗೆಲ್ಲಿ ಸಮಯವಿತ್ತು? ಸಿಮೆಂಟ್, ಕಲ್ಲು, ಮರಳು, ಕಬ್ಬಿಣ, ಕೆಲಸಗಾರರು ಅವರ ಸಮಸ್ಯೆಗಳು ಯಾವುದನ್ನೂ ನನ್ನ ಕಿವಿಗೆ ಹಾಕದೆ ನನ್ನ ಈ ಕನಸನ್ನು ಪೂರೈಸಿದವನು ಗೆಳೆಯ ಬಸೀರ್ ಮುಲ್ಲಾ ಮತ್ತು ಅಪಾರ ಸಂಖ್ಯೆಯ ಚಡಚಣದ ಅಭಿಮಾನಿಗಳು. ಇದರ ಕುರಿತು ಇಷ್ಟೇ ಹೇಳ ಬಲ್ಲೆ. ಗೆಳಯನಿಗಾಗಿ ಹೆಣ್ಣು ನೋಡಲು ಹೋಗಿ, ನಾನೇ ಮದುವೆ ಮಾಡಿಕೊಂಡು ಬಂದಂತಾಗಿದೆ. 
 ಒಟ್ಟಾರೆ ಒಂದು ನೆಲೆಯಾಗಿದೆ, ಇನ್ನೂ ಹಲವು ನೆಲಗಳ ಆಸೆ ಇದೆ. ಸಂಘಮಿತ್ರೆಯ ಸಮಾಗಮಕ್ಕಾಗಿ ಇನ್ನೂ ಆಸೆ ಇದೆ. ಈ ‘ಜೋಳಿಗೆ’ಗೆ ನಿಮ್ಮನ್ನೆಲ್ಲ ಹೇಗೆ ಬರಮಾಡಿಕೊಳ್ಳಲಿ? ಆದರೆ ನೀವು ಬರಬೇಕು, ಬೆಳೆಸಬೇಕು, ಬಳಸಬೇಕು, ಮತ್ತೆ ಬೆಳಕಾಗಬೇಕು ಯಾಕೆಂದರೆ -
 ‘ಜೋಳಿಗೆ’ ಬರೀ ಮನೆಯಲ್ಲ
ನೀರಿಗಿದು ನೆಲೆಯಲ್ಲ
ನಿಂತು ಮಲೆಯದೆ ಸಾಗಲು
ನದಿಯೂ ಬರಬಹುದಿಲ್ಲಿ ನೀರ ಬಯಸಿ
ತೊರೆದವರೂ ಬರಬಹುದು
ತಿಳಿದದ್ದು ತೋಚಿದ್ದು
ಸಾಕಾಗಿ ಉಳಿದದ್ದು
ಮುಚ್ಚಿಟ್ಟು ಮಾತಾಡಿ
ತುಟಿ ಕಚ್ಚದೆ ಅತ್ತು
ಹಚ್ಚಿ ಹೋಗಲೂಬಹುದು
ಒಂದು ಸಸಿ
ನೆನಪು ಉಳಿಯಲು ಹಾಗೇ ಹಸಿ

Thursday, December 11, 2014

ಚಡಪಡಿಕೆ ಇಲ್ಲದ ಪ್ರೀತಿ ಚಂದವೇ???


  •  To ask for the perfect relation is to ask for the moon.
     ಕಳೆದ ಒಂದು ವಾರದಲ್ಲಿ ತಿನ್ನುವ ಅನ್ನಕ್ಕೆ ಸಮಾಧಾನ ಪಟ್ಟುಕೊಳ್ಳುವಷ್ಟು ಕೆಲಸಗಳಾಗಿವೆ. ನನ್ನ ಸಾಕಿ ತನ್ನ ಅರ್ಧಸತ್ಯಗಳ ಬುಟ್ಟಿಹೊತ್ತುಕೊಂಡು ನನ್ನ ಓದುಗರ ಓಣಿಯಲ್ಲಿ, ಜಾಣಮಾತುಗಳನ್ನಾಡುತ್ತ, ತಾನು ಜಾರಿದ ಕತೆ ಹೇಳುತ್ತ, ನಿಮ್ಮ ಆತ್ಮದ ಕನ್ನಡಿಗಳಲ್ಲಿ ತನ್ನ ಬಿಂಬ ನೋಡಿಕೊಳ್ಳುತ್ತಿದ್ದಾಳೆ. ಎಷ್ಟಾದರೂ ಹೆಣ್ಣವಳು, ತನ್ನ ಸುತ್ತಲು ಜೀವಂತಿಕೆಯ ಒಂದು ಮಾಹೋಲ್ ಇರಬೇಕೆಂಬ ಹಂಬಲ. ಹಂಬಲ ಅಪರಾಧವಾಗದಿರಲಿ. ನಿಮ್ಮ ಬಳಿಯೇ ಬರುತ್ತಾಳೆ. ಬರಮಾಡಿಕೊಂಡು ಆರತಕ್ಷತೆಗೆ ಬಂದ ಹೆಣ್ಣುಮಗಳನ್ನು ಬೀಳ್ಕೊಡುವಂತೆ ಹರಸಿ ಕಳುಸುವಿರಾ?

 
ಮೊದಲ ದಿನವೇ ನೂರು ಪ್ರತಿಗಳ ಮಾರಾಟದ ದಾಖಲೆ ಅವಳದು. ಅದೇನು ಸಾವಿರಗಳ ಸಂಖ್ಯೆಯೆ? ಎಂದು ಮೂದಲಿಸುವ ನಾದನಿಯರೂ ಅವಳ ಪಕ್ಕದಲ್ಲಿಯೇ ಇದ್ದಾರೆ. ಆದರೆ ಅವರ ಈ ಮೂದಲಿಸುವಿಕೆಯೆ ಅವಳ ಬಾಳದೋಣಿಯ ಕೈವುಟ್ಟು. ಇಂಗ್ಲೀಷ್‍ನಲ್ಲಿ ಒಂದು ಸುಭಾಷಿತವಿದೆ, “Those who kicked us they don’t know how they helped us to move towards our goal”.

   ಕಳೆದ ಒಂದು ವಾರದಿಂದ ನಗರದಲ್ಲಿ ಅಂತರ್‍ರಾಷ್ಟ್ರೀಯ ಚಲನಚಿತ್ರೋತ್ಸವ ನಡೆದಿದೆ.  ಇಬ್ಬರು ಹಿರಿಯರಾದ ಪ್ರೊ. ದೊಡ್ಡರಂಗೇಗೌಡ ಹಾಗೂ ಶ್ರೀ ಮೂರ್ತಿ ನನಗಾಗಿ ಪಾಸು ಕಾಯ್ದಿರಿಸಿಕೊಂಡು ಬೇಸತ್ತು ಸಿಟ್ಟಿಗೇರಿದರೇನೊ. ದಿನವೆಲ್ಲ ಹೋಗಲಿ, ಸಾಯಂಕಾಲ 6 ರಿಂದಾದರೂ ಒಂದು ಶೋಕ್ಕೆ ಬರಬಹುದಿತ್ತಲ್ಲಾ? ಅವರ ಸಾತ್ವಿಕ ಸಿಟ್ಟು. ಸರ್ಧೆಯಲ್ಲಿರುವ ನನ್ನ ಅತ್ಯಂತ ಪ್ರೀತಿಯ ನಟ ಮುಮ್ಮಟಿಯವರ ಒಂದು ಚಿತ್ರ ನೋಡಲಾಗದೆ ಕೈ ತಪ್ಪಿದೆ. ಕಂಕಣಂ, ಇದು ನನ್ನನ್ನು ಅವರ ಅಭಿಮಾನಿಯಾಗಿಸಿದ ಚಿತ್ರ. ವಾಡಿಯಾ ಸಭಾಂಗಣದ ಡಾ|| ಸಿದ್ಧನಗೌಡ ಪಾಟೀಲರ ಪುಸ್ತಕ ಬಿಡುಗಡೆಗೂ ಹೋಗಲಾಗಲಿಲ್ಲ ಎಂಬ ಬೇಸರವಿದೆ.
  ಅವರೊಬ್ಬ ಅಪರೂಪದ ಮನುಷ್ಯ. ಧಾರವಾಡದ ನಮ್ಮ ಆರಂಭಿಕ ದಿನಗಳಲ್ಲಿ ಸಹೋದರರಿಬ್ಬರಿಗೂ ನೆರಳಾಗಿ ನಿಂತು, ನಮ್ಮ ನೆತ್ತಿಕಾಯ್ದು ನಿರ್ಮೋಹಿಯಂತೆ ಹೊರ ಹೋದವರು. ಮೊನ್ನೆಯೂ ಅಷ್ಟೇ, ಯಾಕೋ ನನಗೆ ಬೆಂಗಳೂರು, ಈ ಇಲಾಖೆ ಎಲ್ಲ ಬಿಟ್ಟು ನನ್ನ ಜೋಳಿಗೆಗೆ ಹೋಗಿ ಬಿಡಬೇಕಿನ್ನಿಸಿತು. ಆದರೆ ನವಕರ್ನಾಟಕದ ತಮ್ಮ ಆಫೀಸಿಗೆ ಕರೆಯಿಸಿಕೊಂಡು ಅಲ್ಲಿದ ಚಿತ್ರಕಲಾ ಪರಿಷತ್‍ವರೆಗೂ ಕರೆದೊಯ್ದು, ಸಮಾಧಾನಿಸಿ, ಈ ಬೆಂಗಳೂರಲ್ಲಿ ಕೆಲಸಗಳನ್ನು ಯಾವ ಅಂತರದಿಂದ ನೋಡಬೇಕೆಂಬುದನ್ನು ಕಲಿಸಿದವರವರು.
       ಬೆಂಗಳೂರಲ್ಲಿ ಒಂದು ವಾರವೆಂದರೆ ಸರಕಾರಿ ಕಚೇರಿಗಳಲ್ಲಿ 5 ದಿನವಷ್ಟೆ. ಸೋಮವಾರ ಸುಧಾರಿಸಿಕೊಳ್ಳಲು, ರವಿವಾರ ವಿರಮಿಸಿಕೊಳ್ಳಲು, ಇರುವ ಐದೇ ಐದು ದಿನಗಳಲ್ಲಿ ನನ್ನ ಕೈಕೆಳಗೆ ಏಳು ಜನ ಕೆಲಸಗಾರರು ಬದಲಾಗಿದ್ದಾರೆ. ಯಾರಿಗೂ ದೂಷಿಸುವಂತಿಲ್ಲ. ಎಜೆನ್ಸಿಗಳ ಮೂಲಕ ಕೆಲಸಕ್ಕೆ ಬರುವ ಈ ಗೆಳೆಯ-ಗೆಳೆತಿಯರಿಗೆ ಎಂಟು ತಿಂಗಳಿಂದ ಸಂಬಳವಿಲ್ಲ. ಇದು ಮನುಷ್ಯ ಲೋಕವೆ? ಭಯವಾಗುತ್ತದೆ ನನಗೆ.
       ತೆರೆ ಎಳೆಯುವ ಮುನ್ನ, ಈತನನ್ನು ನೋಡಿ, ಈತ ನಮ್ಮ ಉನ್ನತ ಶಿಕ್ಷಣ ಪರಿಷತ್‍ನ ನಮ್ಮ ಸೆಕ್ಯೂರಿಟಿ. ಹೆಸರು ದೇವರಾಜ. ಈ ಇಲಾಖೆಗೆ ಬಂದಾಗಿನಿಂದ ನನ್ನ ಗಮನ ಸೆಳೆದಿದ್ದಾನೆ. ಕಾರಣ, ಈತ ಕೈಯಲ್ಲಿ ಪುಸ್ತಕವಿರದೆ ಕುಳಿತ-ನಿಂತ ಒಂದೇ ಒಂದು ಕ್ಷಣವನ್ನು ನಾನು ನೋಡಲಿಲ್ಲ. ನಮ್ಮ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆಯವರು ಚೇಂಬರ್‍ಗೆ ವರಗಿಯೋ ಅಥವಾ ನನ್ನ ಚೇಂಬರ್‍ನ ಮುಂದೋ, ಜಗವೇ ಉರಿದು ಹೋಗುತ್ತಿದ್ದರೂ ಕೈಯಲೊಂದು ಪುಸ್ತಕ ಹಿಡಿದುಕೊಂಡು, ನಿಂತುಕೊಂಡೇ ತನ್ನ ಡ್ಯೂಟಿ ಮಾಡುತ್ತಿರುತ್ತಾನೆ. ಅಂದಹಾಗೆ ಈತನ ಶಿಕ್ಷಣ ಕೇವಲ 7ನೇ ಇಯತ್ತೆ.  ಒಳ್ಳೆ ಅಥ್ಲೇಟ್, ಚಹಾ ಕುಡಿಯಲಾರ, ಹೆಚ್ಚಿಗೆ ಮಾತಾಡಲಾರ, ದಿನಕ್ಕೊಂದು ಪುಸ್ತಕ, ಅದರಲ್ಲಿ ಇಂಗ್ಲೀಷ್ ಮತ್ತು ಕನ್ನಡದ ಘಟಾನುಘಟಿಗಳೆಲ್ಲ ಸೇರಿದ್ದಾರೆ. ಖುಷವಂತಸಿಂಗ್, ಮಿಲ್ಕಾಸಿಂಗ್, ರಾಬಿನ್ ಶರ್ಮಾ, ನೆಪೋಲಿಯನ್ ಹಿಲ್, ಪೆಟ್ರಿಕ್ ಕಾರ್ನ್‍ವೆಲ್, ನಿಕ್, ಭೈರಪ್ಪ, ತೇಜಸ್ವಿ, ಬೀಚಿ, ನಾನು ಎಲ್ಲ ಸೇರಿಕೊಂಡಿದ್ದಾರೆ.
     ಲಕ್ಷ ಲಕ್ಷ ಸಂಬಳ ನೀಡಿ ನಮ್ಮ ಶಿಕ್ಷಕರಿಗೆ ugc ಯ ಎಲ್ಲ ಸೌಲಭ್ಯಕೊಟ್ಟೂ ನಮಗೆ ಓದಿಸಲಾಗಲಿಲ್ಲ. ಓದುವ ದೇವರಾಜನಂಥ ಯುವಕರಿಗೆ ನಮ್ಮ ಶಿಕ್ಷಣ ವ್ಯವಸ್ಥೆಗಳು ಕದ ತೆರೆಯಲಿಲ್ಲ. ನನ್ನ ತಪ್ಪನ್ನು ನಾನು ಸರಿಪಡಿಸಿಕೊಂಡಿದ್ದೇನೆ. ಈತನಿಗೆ ಕೈ ತುಂಬ ಪುಸ್ತಕ ನೀಡಿ ಬಳಿ ಇರಿಸಿಕೊಂಡಿದ್ದೇನೆ. ನನ್ನ ಸಾಕಿಯ ಮೊದಲ ಪ್ರತಿಯನ್ನು ಈತನಿಗೇ ನೀಡಿ ಧನ್ಯತೆಯ ಭಾವ ಅನುಭವಿಸಿದ್ದೇನೆ.

     ನಮ್ಮ ಉನ್ನತ ಶಿಕ್ಷಣ ಪರಿಷತ್ತ್‍ನಲ್ಲಿಯ ಸಭೆಗಳಲ್ಲಿ ಸಾಮಾನ್ಯವಾಗಿ ಆರ್ಥಿಕವಾಗಿ ಸಬಲರಾಗಿರುವವರೆ ಸೇರಿಕೊಂಡಿರುತ್ತಾರೆ. ಒಂದು ದಿನ ಚಿನ್ನದ ಬ್ರಾಸ್ಲೆಟ್ ಒಂದು ಯಾರದೋ ಕೈಯಿಂದ ಜಾರಿ ಅಲ್ಲಿಯೇ ಬಿದ್ದುಕೊಂಡಿತ್ತು. ಈ ನಮ್ಮ ದೇವರಾಜ ಅದನ್ನು ತಂದು ನಮ್ಮ ಕೈಗಿಟ್ಟು, 'ಇದು ಇಲ್ಲಿಯೇ ಬಿದ್ದಿತ್ತು ಸಾರ್, ಯಾರದು ಕೇಳಿ ತಲುಪಿಸಿಬಿಡಿ.'”ಎಂದಿಟ್ಟು ಮತ್ತೆ ತನ್ನ ಪುಸ್ತಕ ಲೋಕಕ್ಕೆ ಹೊರಟುಹೋದ. ಇದು ಆತ ಬೆಳೆದು ಬಂದ ಸಂಸ್ಕತಿಗೆ ಹಿಡಿದ ಕನ್ನಡಿ.
        ಒಂದು ದಿನ ಮಧ್ಯಾಹ್ನ ನಮ್ಮ ಕಚೇರಿಗೆ ಹೊಂದಿಕೊಂಡೆ ಇರುವ ಕೇಂದ್ರ ಪೋಸ್ಟ್ ಅಫೀಸ್‍ನ ಒಂದು ನೂರು ವರ್ಷಗಳಷ್ಟು ಹಳೆಯ ಕಟ್ಟಡಕ್ಕೆ ಅವನನ್ನು ತಿಂಡಿಗೆ ಕರೆದೊಯ್ದೆ. ನನ್ನ ಅಂಚೆ ಮನೆಯ ಕವಾಟುಗಳ ಮೋಹ ಇನ್ನೂ ಸತ್ತಿಲ್ಲ. ಹಾಲು ಕುಡಿಯುತ್ತ ಆತ ಕೇಳಿದ, 'ನಿಮ್ಮ ಮುಂದಿನ ಪುಸ್ತಕ ಯಾವುದು ಸಾರ್?' ನಾನು ಮುಸಿನಕ್ಕು ಪ್ರೇಮಿಗಳ ದಿನಾಚರಣೆಯೆಂದು ನಾನು ನೀಡಲಿರುವ ಕೊಡುಗೆಯ ಬಗೆಗೆ ಹೇಳಿದೆ. ಅದನ್ನು ಆಲಿಸಿದ ಆತ ಕೇಳಿದ,“'ಸಾರ್, ನಮ್ಮ ಗದ್ದೆಗಳಲ್ಲಿ, ಮನೆಗಳಲ್ಲಿ, ಹಳ್ಳಿಗಳಲ್ಲಿ ಅನೇಕ ಕಾರ್ಮಿಕ ಗಂಡ-ಹೆಂಡತಿಯರನ್ನು ನೋಡುತ್ತೇವೆ. ಅವರು ಪರಸ್ಪರ ಮಾತು ಕಡಿಮೆ, ಬಹಿರಂಗ ಪ್ರೀತಿ ಕಡಿಮೆ, ದೂರದೂರವೇ ಕುಳಿತಿರುತ್ತಾರೆ. ರಾತ್ರಿ ಒಂದಷ್ಟು ಕೂಡಿರುವುದು ಬಿಟ್ಟರೆ, ಅವರು ಉಳಿದಂತೆ ಹಾಗೆಯೇ ಇರುತ್ತಾರೆ. ಆದರೆ ಅರಗಳಿಗೆ ಗಂಡ ಕಾಣದಿದ್ದರೆ ತಮ್ಮ ಪ್ರಾಣವೇ ಹೋದಂತೆ, ಏನೋ ಕಳೆದುಕೊಂಡಂತೆ ಚಡಪಡಿಸುತ್ತಾರೆ.  ಆದರೆ ನಮ್ಮ ಬೆಂಗಳೂರಿನ ಗಾರ್ಡನ್‍ಗಳಲ್ಲಿ, ಬೈಕುಗಳ ಹಿಂಬದಿಯಲ್ಲಿ, ಇವರೇನೊ ಕೂಡಿಯೇ ಸಾಯುತ್ತಾರೆ ಎನ್ನುವಂತೆ ಕುಳಿತುಕೊಳ್ಳುವ ನಮ್ಮ ಪ್ರೇಮಿಗಳು, ಒಂದೇ ವರ್ಷದಲ್ಲಿ ಫ್ಯಾಮಿಲಿ ಕೋರ್ಟ್‍ಗಳಲ್ಲಿರುತ್ತಾರೆ.  ನನಗ್ಯಾಕೊ ನಮ್ಮ ಹಳ್ಳಿಯ ಅಪ್ಪ-ಅಮ್ಮಂದಿರದ್ದೇ ನಿಜವಾದ ಪ್ರೀತಿ. ಈ ಪ್ರೇಮಿಗಳದ್ದು ಬರೀ ಕಾಮ ಎನಿಸುತ್ತಿದೆ.  ಇದಕ್ಕೆ ನೀವೇನೆನ್ನುತ್ತೀರಿ?' ಎಂದು ನನ್ನ ತಲೆಕೆಡಿಸಿಬಿಟ್ಟ.

       ಯಾಕೋ ಈಗ ನನ್ನ ಇಡೀ ಬರಹವನ್ನೇ ಭಿನ್ನವಾಗಿ ನೋಡಬೇಕು ಎನ್ನಿಸಿತ್ತು.
       ಸಾಧ್ಯವಾದರೆ ನೀವು ಇಂಥವರನ್ನು ಗುರ್ತಿಸಿ ಗುರಿತೋರಿಸಬಹುದಲ್ಲಾ?
ನಾನು ನಂಬಿದ್ದೇನೆ ಮತ್ತು ಮೌನವಾಗಿದ್ದೇನೆ, ಯಾಕೆಂದರೆ
- The love that lasts longest is the love that is never returned.