Total Pageviews

Thursday, December 4, 2014

ನಾನು ಹೆದ್ದಾರಿಯಲ್ಲಿ ಹೋಗಲೇ ಇಲ್ಲ!!!



     ನಾನು ಬೆಂಗಳೂರಿನ ಕೇಂದ್ರ ಕಛೇರಿಗೆ ಬರಲು ಪ್ರಮುಖ ಕಾರಣರಾದ ಎಡಿಷನಲ್ ಡೈರೆಕ್ಟರ್  ಶ್ರೀ ಟಿ.ಎನ್.ಪ್ರಭಾಕರ್ ದಿನಾಂಕ 28 ರಂದು ಸಾಯಂಕಾಲ ಫೋನಾಯಿಸಿ, ತಮ್ಮ ಚೇಂಬರಿಗೆ ಬರ ಹೇಳಿದಾಗ ನನಗೂ ನನ್ನ ಹೆಂಡತಿಗೂ ಎಷ್ಟೊಂದು ಖುಷಿ. ಕಾರಣವಿಷ್ಟೇ, ಇದೊಂದು ತ್ಯಾಗದ ಮತ್ತು ಆಧ್ಯಾತ್ಮದ ಹಿರಿಯ ಜೀವ. ಇವರ ಹಸ್ತ ಸ್ಪರ್ಶದಿಂದ ನನ್ನ‘'ಗಾಂಧಿ ಅಂತಿಮ ದಿನಗಳು'’ಕೃತಿಗೆ ಪ್ರಶಸ್ತಿ ಬಂತು, ಇವರ ಕಾಳಜಿಯಿಂದ ನಮ್ಮ ಕುಟುಂಬಕ್ಕೆ ಬೆಂಗಳೂರಿಗೆ ದಾರಿಯಾಯಿತು. ಈ ಸಾರಿಯ ಅವರ ಭೇಟಿಯ ಕಾರಣ ಬೆಂಗಳೂರಿನ ರಾಷ್ಟ್ರೋತ್ತಾನ ಪರಿಷತ್ತಿಗೆ ಭೇಟಿ ನೀಡಲಿದ್ದ ದೇಶದ ಖ್ಯಾತ ಅಂಕಣಕಾರ ಶ್ರೀ ಅರುಣ್ ಶೌರಿ ಯವರನ್ನು ಭೇಟಿ ಮಾಡಲು ನನ್ನನ್ನು ಕರೆದುಕೊಂಡು ಹೋಗುವುದು ಎಂದಾಗಿತ್ತು. ಅವರು ರಾಜ್ಯದ ಆಯ್ದ ಕೇವಲ 27 ಜನ ಸಂದರ್ಶಕರಲ್ಲಿ ಒಬ್ಬರಾಗಿದ್ದರು. ಇಂಥ ಒಂದು ಅವಕಾಶಕ್ಕೆ ಸಾಕ್ಷಿಯಾಗದೇ ಇರುವುದಕ್ಕೆ ನನಗೆ ಬೇಸರವೆನಿಸಿತು, ಏಕೆಂದರೆ ನನ್ನ ಇಲಾಖೆ ನನ್ನನ್ನು ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಕೂಡ್ರಿಸಿ, ವಹಿಸಿದ್ದ ಜವಾಬ್ದಾರಿ ಅತ್ಯಂತ ಜವಾಬ್ದಾರಿಯುತವಾಗಿತ್ತು. ಒಂದು ನಿಗಧಿತ ಅವಧಿಗೆ ನಾನು ಎತ್ತಿಕೊಂಡ ಕೆಲಸ ಮುಗಿಯಬೇಕಾಗಿದ್ದು, ಸಮಯ ಜಾರಿದರೆ ಇದಕ್ಕೆ ಯಾವ ಅರ್ಥವೂ ಇಲ್ಲ. ಸರಿ ಅವರ ಕ್ಷಮೆ ಕೋರಿಕೊಂಡು ಮರುದಿನ ಊರಿಗೆ ಹೊರಟೆ.
 ನಮಗೆ ಪ್ರಿಯರಾದ, ಗುರು-ಬಂಧುಗಳಾದ ಡಾ|| ಐ.ಎಂ.ಮೋಹನ್‍ರವರು 29 ರಂದು ತಾವು ಓದಿ, ಉಪನ್ಯಾಸಕರಾಗಿ ಸೇರಿ, ಪ್ರಾಂಶುಪಾಲರಾಗಿ ಅದೇ ಕಾಲೇಜಿನಿಂದ ನಿವೃತ್ತರಾಗುತ್ತಿದ್ದು ಒಂದು ಅಪರೂಪದ ಸಂದರ್ಭಕ್ಕೆ ನಾವಿರಲೇಬೇಕೆಂಬುದು ಅವರ ಒತ್ತಾಸೆ. ವೃತ್ತಿಯಿಂದ ನಿವೃತ್ತರಾಗಿದ್ದಾರೆ ಆದರೆ ಈಗ ಅವರು ಪ್ರವೃತ್ತಿಯಿಂದ ಕಾನೂನು ಸಲಹೆಗಾರರು.
    ಕಲಾವಿದ ಗೆಳೆಯ ಶ್ರೀ ಬಿ.ಎಸ್.ದೇಸಾಯಿ ರವರು 47.00 ಲಕ್ಷ ರೂಪಾಯಿಗಳನ್ನು ಕೊಟ್ಟು ಮನೆಯ ರೆಜಿಸ್ಟ್ರೇಷನ್‍ನ ಸಂತಸದಲ್ಲಿದ್ದಾರೆ, ಅದೊಂದು ಶ್ರದ್ಧಾವಂತ ಕುಟುಂಬ. ಅಂತಹವರೊಂದಿಗಿರುವುದು ನಮ್ಮ ಒಳಿತಿನ ಕ್ಷಣಗಳನ್ನು ವಿಸ್ತರಿಸಿಕೊಳ್ಳುವುದು ಎಂದೇ ಅರ್ಥ. ಇಷ್ಟರಲ್ಲಿಯೇ ನೂರು ವರ್ಷಗಳ, ನನ್ನ ಮೂರು ವರ್ಷ ವಾಸ್ತವ್ಯದ, ಚನ್ನಕೇಶವನ ಸಾನಿಧ್ಯದ ಹಳೆಯ ಮನೆಯನ್ನು ಖಾಲಿ ಮಾಡಬೇಕಿದೆ.
    ಸ್ವಲ್ಪ ಮೈಮರೆತ್ತಿದ್ದರೆ ಒಂದೇ ವಾರದಲ್ಲಿ ಎರಡು ಸಾವುಗಳಿಗೆ ಸಾಕ್ಷಿಯಾಗಬೇಕಾಗುತ್ತಿತ್ತೇನೋ. ಒಂದು ನನ್ನ ತಮ್ಮನದಾದರೆ, ಮತ್ತೊಂದು ನನ್ನ ಗುರುಗಳದ್ದು. ತಮ್ಮ ಉಳಿದ, ಗುರು ಬಯಲು ಆಲೆಯ ಸೇರಿಕೊಂಡರು. ದೈವಕ್ಕೆ ಧನ್ಯವಾದಗಳನ್ನು ಹೇಳುವಂತೆಯೂ ಇಲ್ಲ, ಹೇಳದಿರುವಂತೆಯೂ ಇಲ್ಲ.
     ನನ್ನ ಗುರುಗಳು ಆ ನಮ್ಮ ಚಡಚಣ ಎಂಬ ಕರ್ನಾಟಕದ ಗಡಿಯ ವ್ಯಾಪಾರಿ ಊರಿನಲ್ಲಿ, 77 ವರ್ಷಗಳ ಕಾಲ ಮಾಡಿದ ಪ್ರಯೋಗಗಳು ಅಷ್ಟಿಷ್ಟಲ್ಲ. ವೃತ್ತಿಯಲ್ಲಿ ಹಿಂದಿ ಉಪನ್ಯಾಸಕರಾಗಿದ್ದ ಅವರು, ಇತ್ತೀಚಿಗಷ್ಟೆ ನನ್ನ ‘ಮೈ ನಿರಾಲಾ ಹುಂ’ ಅಂಕಣ ಓದಿ ಎಷ್ಟೊಂದು ನಿರಾಳರಾಗಿ ಮಾತಾಡಿ ಆಶೀರ್ವದಿಸಿದ್ದರು.  ನಾಡ-ನುಡಿ ಮತ್ತು ಆನಂದ ಎಂಬ ಎರಡು ಪತ್ರಿಕೆಗಳನ್ನು ನಡೆಸುತ್ತಿದ್ದರು. ರವಿಕಿರಣ ಪ್ರಿಂಟಿಂಗ್ ಪ್ರೆಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಸಿಂಪಿ ಲಿಂಗಣ್ಣ, ಶ್ರೀ ಸಿದ್ದೇಶ್ವರ ಸ್ವಾಮಿಗಳು ಮತ್ತು ಪುರುಷೋತ್ತಮ ಗಲಗಲಿ ಯವರಂತಹ ನಾಡಿನ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿದರು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಸಂಯೋಜಕರಾಗಿ ಪರೀಕ್ಷೆಗಳನ್ನು ನಡೆಸಿ, ಪದವಿದರರನ್ನು ಪರಿಚಯಿಸಿದರು. ವೃತ್ತಿಯಿಂದ ನಿವೃತ್ತಿಯಾದ ಮೇಲೆ ಪಿಹೆಚ್.ಡಿ. ಮುಗಿಸಿದರು. ಇತ್ತಿಚೆಗೆ ಹಂಪಿ ವಿಶ್ವ ವಿದ್ಯಾಲಯದಿಂದ ಡಿ.ಲಿಟ್ ಪದವಿಗಾಗಿ ಮಹಾಪ್ರಬಂಧದ ರಜನೆಯಲ್ಲಿ ತೊಡಗಿದ್ದರು. ಅವರು ಮೇಧಾವಿಯಲ್ಲ, ಪ್ರಯತ್ನ ಶೀಲರು. ನಿರಂತರ-ನಿತಾಂತ ಮತ್ತು ಸಾಂತ ಯತ್ನ ಅವರದು.
  ಅವರ ಎರಡು ಮರೆಯದ ನೆನಪುಗಳು. ಹೈಸ್ಕೂಲ್ ದಿನಗಳಲ್ಲಿ ಖುರಾಕ್ ಎಂಬ ಹೆಸರಿನ ಪಾಠ ಮಾಡುತಿದ್ದ ಅವರು ಒಂದು ಮಾತನ್ನು ಹೇಳಿದ್ದರು –
ಏಕ್ ಸದೈ ಸಬ್ ಸದೈ
ಸಬ್ ಸದೈ, ಸಬ್ ಜಾಯೆ
ಅಂದರೆ, ನಿರಂತರವಾಗಿ ಒಂದನ್ನು ಸಾಧಿಸುವ ಮೂಲಕ ಎಲ್ಲವನ್ನೂ ಸಾಧಿಸಬಹುದು. ಆದರೆ ಎಲ್ಲವನ್ನೂ ಸಾಧಿಸುತ್ತೇನೆ ಎಂದು ಹೊರಟರೆ ಇರುವುದೆಲ್ಲವನ್ನು ಕಳೆದುಕೊಳ್ಳಬಹುದು ಎಂದರ್ಥ. ಈ ಎರಡು ಸಾಲುಗಳನ್ನು ಇಡೀ ಒಂದು ಗಂಟೆ ಅವರು ಪಾಠ ಮಾಡಿದ ನೆನಪಿದೆ ನನಗೆ.
      ಅವರ ಇನ್ನೊಂದು ನೆನಪು ಅವರ ಪ್ರಬಂಧಗಳ ಸಂಕಲನ, ‘ಬಟ್ಟಲ ತುಂಬ ಬಾರಿಕಾಯಿ’’ ಕುರಿತದ್ದು. ಯಾವುದೇ ಸಾಹಿತ್ಯವಿರಬಹುದು ನಾನು ಹೆದ್ದಾರಿಯಲ್ಲಿ ಹೋಗಲೇ ಇಲ್ಲ. ಯಾಕೆಂದರೆ ಅಲ್ಲಿ ಅಬ್ಬರಗಳೆ ಜಾಸ್ತಿ. ಕಾಡಿನ ಕಾಲುದಾರಿಗಳಿಗಿರುವ ಸೊಗಸು ಹೆದ್ದಾರಿಗಳಿಗಿಲ್ಲ. ಸಾಹಿತ್ಯದಲ್ಲಿಯೂ ಅಷ್ಟೇ. ಓಶೋ ಹೇಳಿದಂತೆ ನಾವಿಲ್ಲಿ ಓದದೇ ಇರುವ ಪುಟಗಳನ್ನು, ಪಾತ್ರಗಳನ್ನು ಗಮನಿಸಬೇಕಿದೆ, ಓದಬೇಕಿದೆ.
      ಅಂದಹಾಗೆ, ಹೋದ ವರ್ಷ ಇದೇ ಡಿಸಂಬರ್‍ದ ಒಂದು ರಾತ್ರಿ, ಚಳಿಯಲ್ಲಿ ನಿಂತು, ನನ್ನ ಗೆಳೆಯನ ಡಿ.ಎಂ.ಎಂಪೈರ್ ಉದ್ಘಾಟಿಸಿ, ಆತನ ಸತ್ಕಾರ ಸ್ವೀಕರಿಸಿ, ನಮ್ಮಿಬ್ಬರ ಜೋಡಿಯ ಕುರಿತು ಮಾತನಾಡಿದ ಅವರು ಈ ಡಿಸಂಬರ್‍ನಲ್ಲಿ ಭೂತಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಿದ್ದಾರೆ! ಈ ಒಂದು ಕ್ಷಣ, ತಾಯಿಯ ಮಡಿಲಲ್ಲಿ ಮೈ ಮುದ್ದೆಯಾಗಿಸಿಕೊಂಡು ಮಲುಗಿದ ಮಗುವಿನ ಚಿತ್ರ ಕಣ್ಣೀರಿನೊಂದಿಗೆ ಕಣ್ಮುಂದೆ ಸುಳಿಯುತ್ತದೆ. 
        ಬಾದಾಮಿಯ ಬಾಯರಿಯ ಸಮಾರಂಭದಲ್ಲಿ ವೇದಿಕೆ ಮೇಲೆ ನನ್ನೊಂದಿಗಿದ್ದ ಗದಗಿನ ಜಗದ್ಗುರುಗಳು, “ಈ ವೇದಿಕೆಯ ಎದುರುಗಡೆ ಕುಳಿತ ಸಭಿಕರಲ್ಲಿ ಜಗತ್ಪ್ರಸಿದ್ಧ ಕಲಾವಿದರೊಬ್ಬರಿದ್ದಾರೆ ಅವರ ಬಗೆಗೆ ಬಹುತೇಕ ನಿಮಗ್ಯಾರಿಗೂ ಗೊತ್ತಿದ್ದಂತಿಲ್ಲ. ಈ ಲಿಂಗಾಯತರ ಬುದ್ಧಿಯೇ ಇಷ್ಟು. ಇವರೊಂದು ರೀತಿ ಹೆಬ್ಬಾವಿನಂತೆ. ಅವಶ್ಯಕತೆಗೂ ಮೀರಿ ನುಂಗಿ ನೀರು ಕುಡಿದು ಮಲಗಿದರೆ ಮುಗಿಯಿತು, ಏಳುವುದರೊಳಗಾಗಿ ಆಯುಷ್ಯ ತಿರಿಯೇ ಹೋಗಿರುತ್ತದೆ. ಇವರು ಕಣ್ತೆರೆಯುವುದರಲ್ಲಿ ಪ್ರತಿಭೆಗಳು ಮಣ್ಣಾಗಿ ಹೋಗಿರುತ್ತವೆ.” ಎಂದು ಹೇಳಿದ್ದರು.
ಸಭೆ ಮುಗಿಯಿತು. ಆ ಕಲಾವಿದರೇ ನನ್ನ ಹತ್ತರ ಬಂದು, ಮನಸ್ಸಾರೆ ಹೊಗಳಿ, ಆಲಂಗಿಸಿ, ಆನಂದಪಟ್ಟು, ನಾನು ಊಟ ಮಾಡಿ ಅಲ್ಲಿಂದ ನಿರ್ಗಮಿಸುವವರೆಗೂ ನನ್ನ ಸುತ್ತಲೂ ಸುಳಿದಾಡಿ ಹೋಗಿದ್ದರು. ಕಾರು ಹತ್ತಿದ ನನಗೆ ಅವರ ಫೋನ್ ಅಥವಾ ವಿಳಾಸ ಏನೂ ತೆಗೆದುಕೊಳ್ಳಲೇ ಇಲ್ಲವಲ್ಲ ಎನ್ನುವ ಚಿಂತೆ ಆಮೇಲೆ ತುಂಬಾ ಕಾಡಿತು. ಮರುಕ್ಷಣವೆ ನನ್ನದೊಂದು ಸಮಾಧಾನ. ಯಾವುದೇ ಭೇಟಿ ಯೋಗಾಯೋಗವಾಗಿದ್ದರೆ, ಅದು ದೈವ ಸಂಕಲ್ಪದ ಪವಿತ್ರ ಪೀಠದ ಮೇಲೆ ನಿರ್ಧಾರಿತವಾಗಿದ್ದರೆ ನಾವು ಮತ್ತೆ ಸಂಧಿಸುತ್ತೇವೆ. ಪುಣ್ಯವಿಲ್ಲದ ಯಾವ ಪುಟವನ್ನೂ ಬದುಕಿನಲ್ಲಿ ಮತ್ತೆ ಓದಲಾಗದು. 
      ಬೆಂಗಳೂರಿಗೆ ಬಂದ ಮೂರು ತಿಂಗಳ ನಂತರ ಅವರ ಮತ್ತೆ ಸಿಕ್ಕೇ ಬಿಟ್ಟರು. ಅಂದಿನ ಖುಷಿಯೇ ಖುಷಿ. ಕಾನಿಷ್ಕಾದಲ್ಲಿ ಕುಳಿತು ಕಲಾವಿದನ ಕರಳು ಮಿಡಿಯುವ ಮಾತುಗಳು. ಇವರೊಂದಿಗೆ ಕಮಲಾದೇವಿ ಚಟ್ಟೋಪದ್ಯಾಯ ಪ್ರಶಸ್ತಿ ವಿಜೇತ ಶಿಲ್ಪಿಯೊಬ್ಬರಿದ್ದರು. ಕೇವಲ ಒಂದು ವಾರ, ನನ್ನ ಕಾವ್ಯಕ್ಕೆ ಉರುಳು ಸ್ವಪ್ನಾದಲ್ಲಿ ಕೊಂಡು, ಓದಿ ನನ್ನ ಪ್ರೀತಿಯ ನಂಟಾಗಿಬಿಟ್ಟರು. ಮನೆಗೆ ಬರಲೇಬೇಕೆಂದು ದುಂಬಾಲು. ಒಂದು ಗಂಟೆಯ ಭೇಟಿಗೆ ಐದು ಸಾವಿರ ರೂಪಾಯಿಗಳನ್ನು, ಕುಂಚವೆತ್ತಲು 25,000/- ರೂಗಳನ್ನು, ದಿನಕ್ಕೆ 18 ರಿಂದ 22 ಗಂಟೆ ಕುಳಿತು ಕಲಾಕೃತಿಯನ್ನು ಮುಗಿಸಿ ಲಕ್ಷಾಂತರ ರೂಪಾಯಿಗಳನ್ನು ಪಡೆಯುವ ದೇಶದ ಶ್ರೇಷ್ಠ ಕಲಾವಿದನೊಬ್ಬ ನಮಗಾಗಿ ಕಾಯುತ್ತಾನೆ ಎನ್ನುವುದು ನನ್ನೊಳಗಿನ ಸರಸ್ವತಿಯ ಗೆಲುವಷ್ಟೆ. 
   ಹೆಂಡತಿಯೊಂದಿಗೆ ಒಂದು ಸಾಯಂಕಾಲ ಬಸವನಗುಡಿಯ ಸುಭಾಶ ಅವರ ಕುಂಚ ಲೋಕಕ್ಕೆ ಕಾಲಿರಿಸಿಯೇ ಬಿಟ್ಟೆ. ಮನೆ ಎನ್ನುವುದು ಸಾಧಕರ ದೊಡ್ಡ ಕುಟೀರ. ನಮ್ಮ ದೇಶದ ಎಲ್ಲ ಇಸ್ಕಾನ್ ದೇವಸ್ಥಾನಗಳ ನೀಲ ನಕ್ಷೆಯನ್ನು ಸಿದ್ಧಪಡಿಸಿದವರು ಇವರ ಸಹೋದರ. ನಾನು ಹೋಗುವುದರೊಳಗಾಗಿ ನನ್ನ ಬದುಕಿನ ದೌರ್ಬಲ್ಯವೇ ಆದ ಮಂತ್ರಾಲಯದ ಗುರು ಸಾರ್ವಭೌಮ ರೂಪಗೊಳ್ಳುತ್ತಿದ್ದ. ಅವರು ರೂಪಗೊಳ್ಳುವ ಸ್ಥಳದಲ್ಲಿ ನಮ್ಮಿಬ್ಬರನ್ನೂ ಕೂಡ್ರಿಸಿ, ಆದರಿಸಿ, ಪ್ರಪಂಚದ ಮಹಾನ್ ವ್ಯಕ್ತಿಯೊಬ್ಬನನ್ನು ಕಂಡಂತೆ ಆನಂದಿಸಿರುವುದು ನನ್ನ ನಿದ್ರೆಗೆಡೆಸಿದೆ.
            ಕನಸೊಡೆದೆದ್ದಿದ್ದೇನೆ, ಮತ್ತೆ ಮಲಗಲು ಸಾಧ್ಯವೆ?

No comments:

Post a Comment