Total Pageviews

Thursday, November 27, 2014

ಕಳೆದು ಹೋದ ಕೆಂಪು ಡೈರಿಯ ನೆನೆದು



ಯಹಾಂ ಕಾ ಹೈ ದಸ್ತೂರ್, ಖಾಮೋಷ ರೆಹೆನಾ
ದಿಲ್‍ಪೆ ಜೋ ಗುಜರೆ ಹೈ ಕಿಸಿಸೇ ನಾ ಕೆಹೆನಾ
ಯಹಾಂ ಫೂಲ್ ಖಿಲ್ತೆ, ಬಹಾರೋಂ ಸೆ ಮಿಲ್ತೆ
ಬಿಚಡತೆ ರಹೇಂ. . . .
                                                                                  -ಮೆಹಂದಿ ಹಸನ್
        ಎಂಥ ಎದೆಯೊಡೆಯುವ ಸಂದರ್ಭದಲ್ಲಯೂ ಮೌನದ ಮಹಾ ಪಾಠ ಕಲಿಸಿದ ನನ್ನ ಪಾಲಿನ ಮತ್ತಿನ ಗಾಯಕ ಈ ಮೆಹಂದಿ ಹಸನ್. ಈತನ ಕಂಠದಲ್ಲಿ ದೀಪದ ಶಾಂತಿ ಇದೆ ಎಂದಿದ್ದರು ಲತಾ ಮಂಗೇಶ್ಕರ್. ನಿಮ್ಮೊಂದಿಗೆ ಈತನ ಕುರಿತು ಹಂಚಿಕೊಳ್ಳುವುದು ಬಹಳಷ್ಟಿದೆ ಆದರೆ ಈಗಲ್ಲ. ಯಾಕೆಂದರೆ ಆತ ಇನ್ನೂ ನನ್ನೊಳಗೆ ಇಳಿಯಬೇಕಿದೆ. ಯಾರೇ, ಎಷ್ಟೇ ಅವಹೇಳಿಸುತ್ತಿದ್ದರೂ ನನ್ನ ತಲೆಯಲ್ಲಿ ಈತನ ಈ ಸಾಲುಗಳು ಸುತ್ತಿ ನಾನು ಮೌನವಾಗಿ ಬಿಡುತ್ತೇನೆ. 


     ಅಂದಹಾಗೆ, ದುರಾಲೋಚನೆಗಳ ಹಿನ್ನೆಲೆಯಲ್ಲಿ ಒಬ್ಬರನ್ನು ಅವಹೇಳಿಸುವುದರಿಂದ ಏನಾಗುತ್ತದೆ ನೋಡಿ ‘The discredit thrown on your relation reflects upon yourself and wounds your vanity’ ಇವು ಸಾಮರ್‍ಸೆಟ್‍ಮಾಮ್‍ನ ಸಾಲುಗಳು. ನೀಶ್ಚೆ ಮತ್ತು ಶಾಫನ್‍ಆವರ್‍ರಿಂದ ತೀರ್ವ ಪ್ರಭಾವಿತನಾಗಿದ್ದ ಈತನ ಬರಹಗಳೆಂದರೆ ಮಾಗಿದ ಮಸ್ತಕದೊಳಗೊಂದು ಅರಿವಿನ ಯಾತ್ರೆ. ಈ ಕೆಲವು ದಿನ ನಾನು ಈತನ A writer note book’ ಓದುತ್ತಿದ್ದೆ. ಅಂದಹಾಗೆ, ನೋಟ್‍ಬುಕ್ ಎಂದತಕ್ಷಣ ನಾನು ಕಳೆದುಕೊಂಡ ನನ್ನ ಕೆಂಪು ಡೈರಿಯ ಹಳೆತಾದ ಪುಟಗಳು, ನಿತ್ಯ ನವೀನವಾದ ಅದರೊಳಗಿನ ಪದ್ಯಗಳು ನೆನಪಾಗಿ ಈ ಕ್ಷಣವೆನ್ನುವುದು ಕಣ್ಣೀರಾಗುತ್ತದೆ. ಒಂದು ಡೈರಿಯಾಗಿ ಅದು ಕಳೆದು ಹೋಗಿದ್ದರೆ ಬೇಸರವಿರಲಿಲ್ಲ. ಬದಲಾಗಿ, ಅದು ನನ್ನ ಬಾಲ್ಯದ ಹಾಡುಗಳ, ಮಾರ್ಪಡುತ್ತ ಬಂದ ನನ್ನ ಕೈ ಬರಹಗಳ, ನನ್ನ ಮಕ್ಕಳಿಗಾಗಿ ಕೂಡಿಟ್ಟ ಪದ್ಯಗಳ ಒಂದು ಅಮೂಲ್ಯ ಸಂಗ್ರಹ. ಗೊತ್ತಿರಲಿ, ಅದು ನಾನು ಕಳೆದುಕೊಂಡ ನನ್ನ ಬದುಕಿನ ಮೊದಲ ಸಂಪಾದನೆ. ಸಂಪಾದನೆ ಮತ್ತು ಕಳೆದುಕೊಳ್ಳುವುದು ಎಂತ ತಕ್ಷಣ ನೆನಪಾಗುತ್ತಾರೆ ನನ್ನ ಜಗಮೊಂಡ ಗುರು ಲಿಂಗದೇವರು ಹಳೆಮನೆ. ಅವರು ಹೆಣ್ಣು ಹದ್ದು ಮೀರಿದ ದಿನವೆ ಸಂಸಾರ ಒದ್ದು, ಉಟ್ಟ ಬಟ್ಟೆಯ ಮೇಲೆ ಹೊರಬಿದ್ದು, ಪ್ರಪಂಚದ ಐದು ರಾಷ್ಟ್ರಗಳ ಸುತ್ತಿ, ಸಂಗ್ರಹಿಸಿದ್ದೆಲ್ಲ ತ್ಯಜಿಸಿ, ಬರಿಗೈ ದಾಸನಾಗಿ ಬಸ್ಟ್ಯಾಂಡಿನಲ್ಲಿ ಕುಳಿತುಕೊಂಡಿದ್ದರಂತೆ. ಈ ಸಂಘರ್ಷದಲ್ಲಿ ಅವರು ಕಳೆದುಕೊಂಡ ಒಂದು ಡೈರಿ ಅವರನ್ನು ಕೊನೆಯವರೆಗೂ ಕಾಡಿದ್ದ ಚಿಂತೆ. 
      ನನ್ನ ಕೆಂಪು ಡೈರಿ ನನ್ನ ಮೊದಲ ಸಂಪಾದನೆ ಎಂದೆ. ಹೌದು, ಶಾಲಾದಿನಗಳೊ ಅಥವಾ ಹೈಸ್ಕೂಲ್ ದಿನಗಳೊ ಈಗ ಸ್ಪಷ್ಟವಾಗಿ ನೆನಪಿಲ್ಲ. ಒಟ್ಟಾರೆ ನಾನೊಮ್ಮೆ ಮನೆಯಲ್ಲಿ ಹಣ ಕದ್ದೆ, ಸುಮಾರು 900 ರೂಗಳು. ಅಷ್ಟು ಕದಿಯಲು ತುಂಬಾ ಶ್ರಮಪಟ್ಟಿದ್ದೆ. ಹೀಗೆ ಸಂಪಾದಿಸಿದ ಈ ಹಣದಿಂದ ಹಂಬಲಿಸಿ ಕೊಂಡ ಎರಡೇ ವಸ್ತಗಳು, ಒಂದು ಈ ಕೆಂಪು ಡೈರಿ, ಮತ್ತೊಂದು ಪೆನ್ನು. ನೋರು ರೂಪಾಯಿಯೂ ಖರ್ಚಾಗಲಿಲ್ಲ. ಉಳಿದ ಹಣ ಅಪ್ಪನಿಗೇ ಪ್ರಾಮಾಣಿಕವಾಗಿ ಮರಳಿಸಿ ಬೆನ್ನುತುಂಬಾ ಬಾಸುಂಡೆ ಉಂಡೆ. ಕೆಂಪು ಡೈರಿಯ ಮೊದಲ ಪುಟದಲ್ಲಿ ‘ರಾಜಶೇಖರ ಆಫೀಸರ್’ ಎಂದು ಬರೆದೆ. ತುಂಬ ಜತನವಾಗಿರಿಕೊಂಡಿದ್ದ, ಭವಿಷ್ಯವಾಣಿ ದಾಖಲಿಸಿದ್ದ ಈ ಡೈರಿ ನಾನು ಆಫೀಸರ್ (ಈಗ ನನ್ನ ಹೆಸರಿನ ಕೆಳಗೆ ಯು.ಜಿ.ಸಿ ನೋಡಲ್ ಆಫೀಸರ್)ಆದಾಗ ನನ್ನೊಂದಿಗಿಲ್ಲದ್ದು ಎಷ್ಟೊಂದು ನೋವಿಗೆ ಕಾರಣವಲ್ಲವೆ?
ಅಂದಹಾಗೆ ನಾನು ಓದಿದ ಸಾಮರ್‍ಸೆಟ್ ಮಾಮ್‍ನ A writer note book’ ಇಂಥದೇ ನೆನಪುಗಳ ಸಂಗ್ರಹ. ಇದು ಆತನ ಕೊನೆಯ ಕೃತಿಯೂ ಹೌದು. ಇದನ್ನಾತ ಸಾವಿನ ಛಾವಣಿಯ ಮೇಲೆ ಕುಳಿತು ಬರೆದಿದ್ದಾನೆ. ಪ್ರತಿ ಪುಟವು ಪ್ರೊಫೌಂಡ್. ಪ್ರಬುದ್ಧ ಲೇಖಕನ ಕೊನೆಯ ಕೃತಿಯ ಸೊಗಸೇ ಇದು. ಕೃತಿಯ ಮುನ್ನುಡಿಯಲ್ಲಿ ಆತನ ಒಂದು ಮಾತು. ನನ್ನನ್ನು ತುಂಬಾ ಸಮಾಧಾನಿಸಿದೆ. ಆತನನ್ನು, ಅವನ ಸಾಹಿತ್ಯವನ್ನು ಅವಹೇಳಿಸಲು ಯಾವನೊ ಪುಣ್ಯಾತ್ಮ ಅವನಿಗೆ ಬರೆಯುತ್ತಾನೆ – In these days you are quickly forgotten if you do not by some new work keep your name before the public.’  ಹಂಗಿಸುವವರಿಗೆ ಇದಕ್ಕಿಂತ ಸುಂದರ ಉತ್ತರ ಬೇಕೆ. ಅದರೊಳಗಿನ ಕುಹಕವನ್ನು ಗಮನಿಸಿದ ಮಾಮ್ ಮುಗುಳ್ನಗುತ್ತ ಉತ್ತರಿಸುತ್ತಾನೆ – ‘I have said my say. Let others occupy my small place. I am prepared for that. When my obituary notice at last appears in the paper and they say, ‘what, I thought he died years ago, my ghost will gently chuckle.’ ಹಂಗಿಸುವವರಿಗೆ ಇದಕ್ಕಿಂತ ಸುಂದರ ಉತ್ತರ ಬೇಕೆ.
 ಛೇ, ಒಂದು ವಾರ ಉರುಳಿದೆ. ಕರ್ನಾಟಕದ ಐದು ಸಾವಿರ ಉಪನ್ಯಾಸಕರನ್ನು, ಹನ್ನೆರಡು ಸಾವಿರ ಅತಿಥಿ ಉಪನ್ಯಾಸಕರನ್ನು ಪ್ರತಿನಿಧಿಸಿದ ಈ ಎರಡು ನೂರು ಕಾಲೇಜುಗಳ ಪ್ರಾಂಶುಪಾಲರುಗಳ ನನ್ನ ವಿಭಾಗದ ಸಮಾವೇಶ, ಯಶಸ್ವಿಯಾಗಿ ಮುಗಿದಿದೆ. 
        ಸನ್ಮಿತ್ರ ಧರ್ಮದಾಸ್ ಮೂರು ನೂರು ಕೋಟಿ ರೂಪಾಯಿಯ ತನ್ನ ಯೋಜನೆಯನ್ನು ಡಿ.ಕೆ.ಶಿ ಯವರೊಂದಿಗೆ ಕರ್ನಾಟಕದಲ್ಲಿ ಪ್ರಾರಂಭಿಸಿದ್ದಾನೆ. ಇದೇ ಖುಷಿಯಲ್ಲಿ ನನ್ನ ಜೋಳಿಗೆಗೆ ತನ್ನ ಫೂಟಾನ್‍ದಿಂದ ಸುಮಾರು ಎರಡು ಲಕ್ಷ ರೂಪಾಯಿಗಳ ಸೋಲಾರ್ ಲೈಟ್ ಪ್ರಾಯೋಜಿಸಿದ್ದಾನೆ. ಸಾಕಿ ಮುದ್ದಾಗಿ ಮುದ್ರಣಗೊಂಡು ನನ್ನ ಗ್ಲಾಸುಗಳ ಮುಂದೆ ಮುಗುಳ್ನಗುತ್ತಿದ್ದಾಳೆ. ಇಷ್ಟರಲ್ಲೆ ಮಾರುಕಟ್ಟೆಗೆ ಬರುತ್ತಾಳೆ. ಛಳಿಯ ಈ ದಿನಗಳಲ್ಲಿ ನಿಮ್ಮೊಂದಿಗೆ ಬಿಸಿ ಬಿಸಿಯಾದ ಚರ್ಚೆಗಿಳಿಯುತ್ತಾಳೆ. ನೀವು ದೊಡ್ಡವರು, ಹೆಣ್ಣು ಹೆತ್ತವರು. ಅವಳ ಕೈ ಹಿಡಿದು ಬಾಳಿನೆಡೆಗೇ ನಡೆಸಬೇಕು. ಯಾಕೆಂದರೆ ಆರಿಸುವ, ಕೆರಳಿಸುವ, ಕೆಡಸುವ ಕೈಗಳಿಗಿಂತ ದೀಪ ಹೊತ್ತಿಸುವ, ಮೌನದಿಂದ ಮುನ್ನಡೆಸುವ ಕೈಗಳು ನೈತಿಕವಾಗಿ ಮೇಲಲ್ಲವೆ?

No comments:

Post a Comment