I am consistent, constantly consistent
Contradicting on the surface
But the inner current remains same
My talking is just like poetry
Because I am not a philosopher
I may be a poet, wild as wine, arrogant, aggressive
But my poetic flow is like, the flow of the life
-
Ragam
ನಾನು ಕವಿಯಾಗುತ್ತಿರುವೆನೆ? ಭಯವಾಗುತ್ತದೆ ನನಗೆ.
ಕಛೇರಿಯ ಕಡತಗಳಲ್ಲಿ ಕವಿಯಾಗುವುದೊಂದು ಅಪರಾಧವೆ ಸರಿ! ನಾನು ಹಂಚಿಕೊಳ್ಳಬೇಕಾದುದು ಕವಿಯನ್ನಲ್ಲ,
ಕಾಲದೊಂದಿಗೆ ಕರಿಗಿ ಹೋದ ಕನಸಿನ ಆ ಕ್ಷಣಗಳನ್ನು. ಮನೆಲಾಡಿನಂತೆಯೇ ಹಚ್ಚು ಹಸಿರಾದ ಆ ದಿನಗಳನ್ನು.
ಇದೊಂದು ರೋಮಾಂಚನದ ಕ್ಷಣ. ಈ ವೇದಿಕೆಯಿಂದ
ಮಾತಾಡುತ್ತಿರಬೇಕಾದರೆ ನೆನಪುಗಳ ಸುರಳಿ ಎಷ್ಟೊಂದು ಸರಕನ್ನು ಅನಾವರಣಗೊಳಿಸುತ್ತಿತ್ತು. ಕನ್ನಡ, ಇಂಗ್ಲಿಷ್,
ಹಿಂದಿ, ತಮಿಳು, ಉರ್ದು, ಸಂಸ್ಕತ, ಭೌತವಿಜ್ಞಾನ ಮತ್ತು ಜೀವ ವಿಜ್ಞಾನಗಳ ಹಲವಾರು ವರ್ಷಗಳ ಬೋಧನಾನುಭವದ
ಪರಿಣಿತರೊಂದಿಗೆ ಎರಡು ಮಹತ್ವದ ಚರ್ಚೆಗಳು. ಒಂದು ನೃಪತುಂಗ ರಸ್ತೆಯ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ,
ಮತ್ತೊಂದು ವಿ.ಹೆಚ್.ಡಿ ಗೃಹ ವಿಜ್ಞಾನ ಕಾಲೇಜಿನಲ್ಲಿ. ವೇದಿಕೆಯಿಂದ ಮಾತಾಡುತ್ತಿರಬೇಕಾದರೆ ಮನಸ್ಸು
2009ರ ಸಪ್ಟೆಂಬರ್‍ನ ಕ್ಷಣಗಳನ್ನು ಮೆಲಕು ಹಾಕುತ್ತಿತ್ತು.
ದಿನಾಂಕ 02 ಸಪ್ಟೆಂಬರ್ 2009 ರಂದು ಇದೇ ಆಡಿಟೋರಿಯಂನಲ್ಲಿ
ನನ್ನ ಉಪನ್ಯಾಸ ವೃತ್ತಿಯ ಆದೇಶ ಪತ್ರ ಪಡೆದಿದ್ದೆ. ಸರಿಯಾರಿ ಒಂಬತ್ತುನೂರು ಗೆಳೆಯರು, ಇಡೀ ದಿನ ನಾನು,
ನನ್ನ ಪದ್ದು ಊಟ ಮಾಡಿರಲಿಲ್ಲ. ಮಗ ನನ್ನ ಶಿಷ್ಯ ಮಿತ್ರರ ಕೈಗೊಂಬೆಯಾಗಿದ್ದ. ನಾವು, ದಾರಿ ಯಾವುದಿರಬಹುದು
ನಮ್ಮ ದೈವಕ್ಕೆ ಎಂದು ಕುತೂಹಲದಿಂದ ಕ್ಷಣಗಣನೆಯಲ್ಲಿದ್ದರೆ, ಸಿಕ್ಕದ್ದು ಬೇಲೂರಿನ ಚನ್ನಕೇಶವನ ಸಾನಿಧ್ಯ.
ಈ ದಿನದ, ಈ ಕಾಲೇಜಿನ, ಈ ಕ್ಷಣದ ಒಂದು ವಿಚಿತ್ರವೆಂದರೆ, ಇದೇ ಕೋಣೆಯಿಂದ ಆದೇಶ ಪತ್ರ ಪಡೆದು ನಾನು
ಹೊರಬಂದಾಗ ನನ್ನ ವಿದ್ಯಾರ್ಥಿ ಗೆಳೆಯರೆಲ್ಲರಿಗೂ ಒಂದು ಕುತೂಹಲ. ನಾನು ಯಾವ ಸ್ಥಳ ಆಯ್ಕೆ ಮಾಡಿಕೊಂಡಿರಬಹುದು?
ಎಂದು. ಕೊನೆಗೆ ನನ್ನ ಆದೇಶ ಪತ್ರ ಅವರ ಕೈಗಿಟ್ಟಾಗ ಕೆಲವರಿಗೆ ಬೇಸರ, ಇನ್ನು ಕೆಲವರದ್ದು ಪ್ರೀತಿಯ
ಸಿಟ್ಟು, ಮತ್ತೆ ಕೆಲವರದ್ದು ಉಪೇಕ್ಷೆ.
ಮಾಡುವುದೆನು? ನನ್ನ ಪದ್ದಿ ಮುಗ್ಧವಾಗಿಯೇ
ಈ ಸ್ಥಳವನ್ನು ಆಯ್ದುಕೊಂಡಿದ್ದಳು. ಅಂದು ಈ ಸಭಾಂಗಣದಲ್ಲಿ ಅದ್ಯಾವ ಭಾವ ಸಂಚರಿಸುತ್ತಿತೊ? ಅದೇನು
ಕತೆಯೊ? ತಳ್ಳಿದೆಡೆ ತಾಳ್ಮೆಯಿಂದ ಸಂಸಾರದೊಂದಿಗೆ ಹೊರಟೆ. ತಲೆತುಂಬ ತಲುಪದ ಊರಿನ ಕನಸು. ಆಂದ್ರದ
ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯ ಸಾವು, ಕಾಯುತ್ತಿದ್ದ ಶಿಕ್ಷಕರ ದಿನಾಚರಣೆ ಎಷ್ಟೊಂದು ಸಂಕೀರ್ಣವಾಗಿತ್ತು
ಕಾಲ. ಅಂದಹಾಗೆ, ಬೇಲೂರಿನ ಆನಂತರದ ಐದು ವರ್ಷಗಳ ಅವಧಿ ಅಷ್ಟೇ ಸಂಕೀರ್ಣವಾಗಿ ಉರುಳಿ ಹೋಯಿತು. ಈಗ
ಇಲ್ಲಿ ನಾನಿದ್ದೇನೆ, ಈ ಸಭಾಂಗಣವಿದೆ, ಅಂದು ನಡೆಸಿದ ಶಕ್ತಿಯೇ ಇಂದು ಮತ್ತೆ ನಿಲ್ಲಿಸಿ ಮಾತಾಡಿಸುತ್ತಿದೆ.
ಈಗಲೂ ಮಾತಿಗೆ, ಪ್ರೀತಿಗೆ ಮುಖಗಳಿವೆ, ಥೇಟ್ ಅಂದಿನಂತೆಯೆ. ಇತಿಹಾಸ ಮರುಕಳಿಸುತ್ತದೆ ಎಂದರೆ ಇದೇ
ಇರಬಹುದೇನೊ.
ಇಲ್ಲಿಂದ, ಇಂದು ಮಧ್ಯಾಹ್ನ ಕಾರ್ಯಕ್ರಮ
ವಿ.ಹೆಚ್.ಡಿ ಗೃಹ ವಿಜ್ಞಾನ ಕಾಲೇಜಿನಲ್ಲಿ. ಕಾಲ ಬದಲಾಗುತ್ತಿದೆ. ನಮ್ಮ ಪಠ್ಯ-ಪಾಠ ಬದಲಾಗಬೇಕಿದೆ.
ನನ್ನ ಭಾಷಾ ವಿಭಾಗದ ಗೆಳೆಯರಿಗೆ ನನ್ನ ಇಂದಿನ ಮುಖ್ಯ ಪ್ರಶ್ನೆಯೆ ಇದು. ಸಾಹಿತ್ಯ ಒಂದೆಡೆ ಇರಲಿ,
ಕಳೆದ ಅನೇಕ ವರ್ಷಗಳಿಂದ ನಾನು ಸತ್ತು ಹೋದ ಭಾಷೆ ಮತ್ತು ವ್ಯಾಕರಣವನ್ನು ಕಲಿಸುತ್ತಿದ್ದೇನೆಯೆ? ಎಂಬ
ಪ್ರಶ್ನೆ ಅದೆಷ್ಟೋ ಕಾಡಿದೆ ನನ್ನನ್ನು, ನನ್ನಂತೆಯೇ ಅನೇಕರನ್ನು. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ
ಇ-ಕಂಟೆಂಟನ್ನು ಅಭಿವೃದ್ಧಗೊಳಿಸಿ, ನಮ್ಮ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಿರುವ ಖಾನ್ ಅಕಾಡೆಮಿ,
ಸಿಇಸಿ, ಎಂಆಯ್‍ಟಿ, ಎನ್‍ಟಿಎನ್‍ಗಳ ಬೋಧನಾ ಕ್ರಮ ಗಮನಿಸಿದ ಮೇಲಂತೂ ಇಂಥ ಬೆಳವಣಿಗೆ ನಮ್ಮಲ್ಲಿ ಬೇಕೆನಿಸಿದೆ.
ಈ ಕಾರಣ ವೈ.ಸಿ ಕಮಲಮ್ಮ ಮತ್ತು ನಾಗಲಕ್ಷ್ಮಿರಾವ್ ರವರ ನೆರೆವಿನಿಂದ ಭಾಷೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ
ಗೆಳೆಯರನ್ನು ಕಲೆಹಾಕಿಕೊಂಡು, ಇಲಾಖೆಯ ನೆರವಿನಿಂದ ಹಮ್ಮಿಕೊಂಡ ಕಾರ್ಯಾಗಾರ ಫಲಪ್ರದವೆಂದುಕೊಂಡೆ.
ಹಿಡಿ ಅನ್ನದ ಋಣ, ಪ್ರೀತಿಯ ಮೋಹಕ್ಕಾಗಿ ಗೆಳೆಯ ಗುರುನಾಥನನ್ನು, ಜಯಣ್ಣನನ್ನೂ ಸೇರಿಸಿಕೊಂಡೆ. ಇವರಿಬ್ಬರೂ
ನಾನು ಕಂಡ ಅಪರೂಪದ ಮೋಹಿಗಳು, ದಣಿವರಿಯದ ಜೀವಗಳು. ಇವರಿರಬೇಕು ನನ್ನೊಂದಿಗೆ, ನಾನು ಬಿಟ್ಟು ಹೋದರು
ನನ್ನ ಇಲಾಖೆಯೊಂದಿಗೆ. ಇಲಾಖೆ ಹೆಮ್ಮರ, ನಾನೊಂದು ಟೊಂಗೆ ಮಾತ್ರ. ಐದು ಲಕ್ಷದಲ್ಲಿ ನಾನೊಂದು ಸಂಖ್ಯೆ.
ಆದರೆ ಇವರು ಪ್ರಾಮಾಣಿಕತೆಯ ಅಂಕೆ. ಜ್ಞಾನದ ತೀಟೆಗಾಗಿ ಸಾಗರದ ಹೆಚ್.ಆರ್ ಅಮರನಾಥ. ಆದರೆ ಅಮರನಾಥ
ಅಂತಿಂಥವರಲ್ಲ. ಅವರು ಸಣ್ಣದಕ್ಕೆ ತೆಕ್ಕೆ ಹೊಡೆಯುವವರೂ ಅಲ್ಲ. ಅವರು ನಮ್ಮ ಇಲಾಖೆಯ ಗರ್ವ. ಇವರೊಂದಿಗೆ
ಇಡೀ ದಿನವೆನ್ನುವುದು ಒಂದು ಸಾಹಸ ಅಥವಾ ಕನಸಿನ ಮೇಲಿನ ಸವಾರಿ ಎನ್ನಬಹುದು.
ಸಾಯಂಕಾಲ ಐದಕ್ಕೆ ನಿಟ್ಟುಸಿರುಬಿಟ್ಟು ಗೆಳೆಯ ಗುರುನಾಥನೊಂದಿಗೆ
ಸಪ್ನಾಕ್ಕೆ ಹೋಗುತ್ತಿದ್ದರೆ, ಆತ ಒಂದು ಪ್ರೀತಿಯ ಪದ್ಯ ಹಾಡುತ್ತಿದ್ದ –
“ನಾಯಿ ತೆಲಿಮ್ಯಾಲಿನ ಬುತ್ತಿ ಈ ಸಂಸಾರ
ಅಂತ ಅಂತಾರ” ಏನೇನೊ. . . . .
ನಾನು ಈ ಕಲ್ಪನೆಗೆ ಕಾಲ್ದಾರಿ ಕಳೆದುಕೊಳ್ಳುತ್ತಿರಬೇಕಾದರೆ,
ಕರುಳು ಮಿಡಿದಂತೆ ಫೋನಿನ ಕರೆ ಗಂಟೆ. ಹಾಂ, ಸತ್ಯ. ಅತ್ತ ಕರುಳ ಮಿಡಿಯುತ್ತಿತ್ತು, ಮಗ ಸಿದ್ಧಾರ್ಥ
ತಾಲ್ಲೂಕು ಮಟ್ಟವನ್ನು ಮೀರಿ ಜಿಲ್ಲಾ ಮಟ್ಟಕ್ಕೆ ಗಾಯನದಲ್ಲಿ ಆಯ್ಕೆಯಾದ ಸುದ್ದಿ ತಿಳಿಸಲು ಫೋನಾಯಿಸಿದ್ದ.
ಏನೆಲ್ಲ ನೆನಪುಗಳು ಒತ್ತರಿಸಿ ಕಣ್ಣೀರಾದೆ, ಆದರೆ ಕಕ್ಕಲಿಲ್ಲ. ಬೆಂಗಳೂರಿನ ಕಾರ್ಬನಿನಲ್ಲಿ ಕಣ್ಣೀರೂ
ಕಪ್ಪಾಗಿಯೇ ಹರಿಯುತ್ತವೆ. ಸತ್ಯವೂ ಈ ಕಪ್ಪು ಕತ್ತಲೆಯಲ್ಲಿಯೇ ಕೊನೆಯುಸಿರೆಳೆಯುತ್ತದೆ. ಕಣ್ಣೀರು
ರೆಪ್ಪೆಯಲ್ಲೇ ಇಂಗಿಸಿಕೊಂಡು, ನಿರ್ಮೋಹದ ರೆಕ್ಕೆ ಬಿಚ್ಚಿಕೊಂಡೆ. ನನ್ನನ್ನೇ ನಾನು ಬೆಂಗಳೂರಿನ ಬಾಝಾರಿಗಂಜಿ
ಬಚ್ಚಿಟ್ಟುಕೊಂಡೆ.
ಕಾಯುತ್ತಿರಿ ನನ್ನ ಅಭಿಮಾನಿಗಳೆ, ಮಲಗುವ ಮುನ್ನ ನನಗೊಂದು
ಅಚ್ಚರಿಯ ಸುದ್ದಿ ಬಂದಿದೆ. ಇದು ನಿಮ್ಮ ಪ್ರಾರ್ಥನೆಗಳ ಫಲವೆನ್ನದೆ ಇನ್ನೇನು ಅಂದುಕೊಳ್ಳಲಾದೀತು?
No comments:
Post a Comment