Total Pageviews

Thursday, October 30, 2014

ಕವಿತೆ, ಏಕಾಂತ, ಲೋಕಾಂತ



  ತುಳಿ ತುಳಿದು ಮಣ್ಣೆನಿಸಿದಿರಿ ನನ್ನ
ಬೈಗುಳಗಳ ಬೆಂಕಿಯುಗುಳಿ ಮಡಿಕೆಯಾಗಿಸಿದಿರಿ
ಸುಮ್ಮಸುಮ್ಮನೆ ಶಪಿಸಿ ಸಾಧನೆಗೆ ಅಣಿಗೊಳಿಸಿದಿರಿ
ಜಡವಾಗಿ ಸಾಯುವವನನ್ನು ಆಲೋಚನೆಯಾಗೆಂದು ಹರಸಿ
ನಿಜ ಜಂಗಮನಾಗಿಸಿದಿರಿ ನನ್ನ
ಕೋಟಿ ಪ್ರಣಾಮವೆನ್ನದೆ ಏನೆನ್ನಲಿ ಇನ್ನ

      ಬಹಳ ದಿನಗಳಿಂದ ಅಲ್ಲಿಗೆ ಹೋಗಿಬರಬೇಕೆಂಬುದು ಒಂದು ಹಂಬಲ. ನನ್ನೊಳಗೊಂದು ಆಲಯವಿಟ್ಟುಕೊಂಡು ಮತ್ತೆ ಮತ್ತೆ ನಾನು ಮಂತ್ರಾಲಯಕ್ಕೆ ಏಕೆ ಹೋಗುತ್ತೇನೆ? ಎಂದು ಪ್ರಶ್ನಿಸಿಕೊಂಡರೆ ನೆನಪಾಗುತ್ತವೆ ಹಲವು ಸಂಗತಿಗಳು.
        ಬಹಳ ಚಿಕ್ಕನಿದ್ದಾಗ ನಾವು ಆಂದ್ರದ ಶ್ರೀಶೈಲಕ್ಕೆ ಹೋಗಬೇಕಾದರೆ, ಒಂದಿಷ್ಟು ಕಾಲ ಬಳ್ಳಾರಿ, ಗುಂಟೂರು, ಕರ್ನೂಲ ಹೀಗೆ ಹೋಗಬೇಕಾಗುತ್ತಿತ್ತು. ಮುಂದಿನ ದಿನಗಳಲ್ಲಿ ರಾಜಕೀಯವಾಗಿಯೂ ಆಂದ್ರದಲ್ಲಿ ನಮ್ಮ ಮಾವ ಪ್ರವರ್ಧಮಾನರಾದ ಬಳಿಕ ಹೈದ್ರಾಬಾದಿನಲ್ಲಿ ತಮ್ಮ ರಾಜಕೀಯ ಕಾರ್ಯಗಳನ್ನೆಲ್ಲ ಮುಗಿಸಿಕೊಂಡು ಅಲ್ಲಿಂದ ಗುಲ್ಬರ್ಗಾ ಮಾರ್ಗವಾಗಿ ಇತ್ತ ಬರುವ ಅತ್ತ ಹೋಗುವ ಚಟುವಟಿಕೆ ಶರುವಿಟ್ಟುಕೊಂಡಿತು ನನ್ನ ಮನೆತನ. ಆದರೆ ನಾನು ದೊಡ್ಡವನಾದಂತೆ ನನ್ನ ತಾಯಿ ರಾಯಚೂರು, ಮಂತ್ರಾಲಯ ಮತ್ತು ಶ್ರೀಶೈಲ ಹೀಗೆ ಹೊಸದಾರಿ ಕಂಡುಕೊಂಡಳು.
        ರಾತ್ರಿಯೆಲ್ಲ ಪ್ರವಾಸ ಮಾಡಿ ನಾವು ಮಂತ್ರಾಲಯಕ್ಕೆ ಬರಬೇಕು. ಅಲ್ಲಿ ಇಡೀ ದಿನ ತುಂಗಾ ತೀರದ ರಾಯರ ವೃಂದಾವನದ ಸುತ್ತ ನಮ್ಮ ಗಿರಕಿ. ಆಗಿನ ಮಂತ್ರಾಲಯ ಇಗಿನದಲ್ಲ. ಬರೀ ಒಂದು ಪುಟ್ಟ ಹಳ್ಳಿ, ಪ್ರಶಾಂತ ವೃಂದಾವನ. ರಾಜಕುಮಾರರು ಪ್ರತಿ ಗುರುವಾರ ಇಲ್ಲಿಗೆ ಬರುತ್ತಾರೆ ಎಂಬ ಸುಳ್ಳಿಗೆ ನಾನೂ ತಲೆದೂಗಿದ್ದೆ. ಆದರೆ ಅದೇಕೊ ಗೊತ್ತಿಲ್ಲ, ಅತ್ಯಂತ ಬಾಲ್ಯದಲ್ಲಿ ನಾನು ರಾಯರ ವೃಂದಾವನಕ್ಕೆ ತಲೆಬಾಗಿದ್ದೆ. ಈಗಲೂ ಅಷ್ಟೆ. ಈ ದೇಶದ ನೂರು ಪ್ರತಿಶತ ಯಾತ್ರಾ ಸ್ಥಳಗಳಲ್ಲಿ 60% ಸಮಾಧಿಗಳೆ. ಹಾಗೆ ನನ್ನ ಮನ ಸೆಳೆದ ನಾಲ್ಕೇ ಸಮಾಧಿಗಳುಒಂದು ಗಾಂಧಿಯದು, ಮತ್ತೊಂದು ಶರೀಫ, ಇನ್ನೊಂದು ಮಂತ್ರಾಲಯ ಮಗದೊಂದು ಅಜ್ಮೇರಿನ ಖ್ವಾಜಾ ಬಂದೇ ನಮಾಜರದ್ದು.
    ನನಗೆ ಮಾತೃಕಾರುಣ್ಯದ ಅತ್ಯಂತ ಹಿರಿಯ ಗೆಳೆಯರೊಬ್ಬರು ನನ್ನ ಬಳಿ ಬರುತ್ತಿದ್ದ ನೆನಪು. ಸಮಾಧಾನದಿಂದ ಊಟ ಮಾಡುವುದನ್ನು ಕಲಿಸಿದ ಅವರು ಒಂದು ಮಾತು ಹೇಳುತ್ತಿದ್ದರು, “ಧಾರವಾಡಕ್ಕೆ ಹೋದಾಗ ಮಹಂತ ಅಪ್ಪಗಳ ಗದ್ದುಗೆಗೆ ಹೋಗಿ ನನಗಾಗಿ ನಂದಾದೀಪಕ್ಕೆ ಒಂದಿಷ್ಟು ಎಣ್ಣೆ ಹಾಕಿ ಬನ್ನಿ.” ಇದು ಸಣ್ಣ ಕೋರಿಕೆ ಆದರೆ ಜೀವನವನ್ನು ಸಾವರಿಸಿಕೊಳ್ಳುವ ದೊಡ್ಡ ದಾರಿ. ಅನುಸರಣೆ, ಅವಜ್ಞೆ ನಮ್ಮ ನಮ್ಮ ಚಿತ್ತ.
ಸಮಯ ಸಿಕ್ಕಾಗ ಹೀಗೆ ನಮ್ಮ ಹಿರಿಯರ ಸಂವೇದನೆಗಳ ಸುತ್ತ ಸುತ್ತಿ ಬರುವ ಪರಿಪಾಠವಿದೆ. ಹೀಗೆ ಸುತ್ತಾಡುವಾಗ ತಲೆ ತುಂಬಾ ದೀಪಗಳ ಹಾವಳಿ. ಹಣತೆಗಳ ದೀಪಾವಳಿ. ಮರಳಿ ಬೆಂಗಳೂರಿಗೆ ಬಂದು ಎರಡು ಕವಿಗೋಷ್ಠಿಗಳನ್ನು ಹಾಜರಾಗಬೇಕಿತ್ತು. ಒಂದು ಶೂದ್ರರ ನೇತೃತ್ವದಲ್ಲಿ, ಜೆ.ಪಿ.ನಗರದಲ್ಲಿ, ಮತ್ತೊಂದು ಚಂಪಾ ನೇತೃತ್ವದಲ್ಲಿ ಚಾಮರಾಜಪೇಟೆಯ ಕಸಾಪದಲ್ಲಿ. ಪ್ರಯಾಣದ ಆಯಾಸ ಒಂದಕ್ಕೆ ಹೋಗುವ ಮನಸ್ಸಾಗಲಿಲ್ಲ. ಇನ್ನೊಂದೂ ಅಷ್ಟೆ, ದಿನಾಂಕ 28 ಮತ್ತು 29 ರ ಮೀಟಿಂಗ್‍ಗಳ ಒತ್ತಡ ನೋಡಿದರೆ ಇದಕ್ಕೂ ಅದೇ ಗತಿ ಎಂದುಕೊಂಡಿದ್ದೆ. ಆದರೆ ಎಷ್ಟೇ ತಡವಾದರೂ ಸರಿ ಬರಲೇಬೇಕೆಂಬುದು ಚಂಪಾಜ್ಞೆ.
      ಇಂದು ಮಗನ ಹುಟ್ಟುಹಬ್ಬ. ಎಳೆಯರ ಮುಂದೆ ಏರಿನಿಂದ ಬದುಕಬೇಕಾದುದು ಪ್ರತಿ ಹಿರಿಯನ ಜವಾಬ್ದಾರಿ. ಮೇಲಾಗಿ ಆಯ್ದ ಅತ್ಯಂತ ಹಿರಿಯ ಕವಿಗಳೊಂದಿಗಿನ ಈ ಗೋಷ್ಠಿಗಳು ಹೇಗಿರುತ್ತವೆ ಎಂಬ ಕುತೂಹಲ. ಆಫೀಸು ಮುಗಿಸಿಕೊಂಡು ಟ್ರಾಫಿಕ್ ಎಂಬ ಚಕ್ರವ್ಯೂಹ ಬೇಧಿಸಿಕೊಂಡು ಗೋಷ್ಠಿ ತಲುಪಿದಾಗ 6.45 ನಿಮಿಷ. ನಿಸಾರ್ ಆಗಲೇ ಸುಂದರ ಪದ್ಯ ಒಂದನ್ನು ಓದಲಾರಂಭಿಸಿದ್ದರು. ವೇದಿಕೆಯ ಕೊನೆಯ ಸಾಲಿನಲ್ಲಿ ನಾನು, ಸುಜಾತಾ ಕುಮಟಾ, ‘ಮಹಾಪರ್ವ’ದ  ಸುಷ್ಮಾ ಭಾರದ್ವಾಜ್. ಏಕೋ ಹಿಂದೆ ಕುಳಿತು ಕವಿತೆ ಕೇಳುವುದು ಅಸಹ್ಯ. ಕವಿತೆ ಅನಾವರಣಗೊಳ್ಳುವುದೇ ಕವಿಯ ಮುಖವೆಂಬ ಮಹಾರಂಗಸ್ಥಳದಲ್ಲಿ. ವೇದಿಕೆಯನ್ನಿಳಿದ ನಾನು ಸುಜಾತಾ ಕೇಳುಗರ ಮೊದಲ ಸಾಲಿನಲ್ಲಿ ಕುಳಿತು ಕವಿತೆಗಳಿಗೆ ಕಿವಿಗೊಡಬೇಕೆಂದರೆ ಮತ್ತೆ ಚಂಪಾಜ್ಞೆ. ಸರಿ, ವೇದಿಕೆಯನ್ನು ಹತ್ತಲೇ ಬೇಕಾಯಿತು. 
 ಒಂದು ತಪ್ಪೊಪ್ಪಿಗೆ, ಹಿಂದಿಯ ‘ಕಾವ್ಯಸಂಧ್ಯಾ’ ಉರ್ದುವಿನ ಮಶಯರಾ ಮತ್ತು ಮೆಹಫಿಲ್‍ಗಳಿಗೆ ಮನಸೋತ ನಾನು ನಮ್ಮ ಕನ್ನಡದ ಕವಿ ಗೋಷ್ಠಿಗಳನ್ನು ಪೇಲವ ಎಂದೇ ಪರಿಗಣಿಸಿದವನು. ಆದರೆ ಈ ನನ್ನ ಗ್ರಹಿಕೆ ತಪ್ಪೆನಿಸಿತು ಈ ದಿನ ನನಗೆ. ಕಾವ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ, ಆಂಗಿಕ ಆಸ್ಥೆಯೊಂದಿಗೆ ಉಣಬಡಿಸುವ ಅಪರೂಪದ ಕವಿಗಳು ನಮ್ಮಲ್ಲಿದ್ದಾರೆ ಎನ್ನಿಸಿತು. ನಿಸಾರ್, ಎಸ್.ಜಿ.ಸಿದ್ಧರಾಮಯ್ಯ, ಬರಗೂರು, ಸುಷ್ಮಾ, ಆರ್.ಜಿ. ಹಳ್ಳಿ, ಎಲ್. ಹನುಮಂತಯ್ಯ, ಚಂಪಾ ಪ್ರೇಕ್ಷಕ ಮುಖಿಯಾದ ಕಾವ್ಯ ವಾಚನ ಮಾಡಬಲ್ಲರು. ಖಂಡಿತ, ಕವಿತೆ ಯಾವಾಗಲೂ ಧ್ಯಾನಸ್ಥವೆ. ಆದರಿದು ಸಂತೆ ಮತ್ತು ಚಿಂತೆಯೊಂದಿನ ಧ್ಯಾನ. ಇದರಲ್ಲಿ ಏಕಾಂತವಿರುವಂತೆ ಲೋಕಾಂತವೂ ಇದೆ. ಇದರೊಳಗೆ ಮೌನವಿಯವಂತೆ ಶಬ್ಧಸ್ಪೋಟವೂ ಇದೆ.


No comments:

Post a Comment