ದಿನಾಂಕ: 14/10/2014 ರ ಮಂಗಳವಾರ,
ಕಾಲೇಜು ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರು ಮತ್ತು ನಿರ್ದೇಶಕರು ಅಪರಾಹ್ನ 04 ರಿಂದ 05 ವರೆಗೆ, ಕಾಲೇಜು
ಶಿಕ್ಷಣ ಇಲಾಖೆಯ, ಜ್ಞಾನತರಂಗ ವಾಹಿನಿ ಮೂಲಕ, ಎಜುಸ್ಯಾಟ್ ಆರ್‍ಓಟಿ ಸೌಲಭ್ಯ ಇರುವ ಎಲ್ಲ ಸರಕಾರಿ
411 ಪ್ರಥಮ ದರ್ಜೆ ಕಾಲೇಜುಗಳಿಗೆ, ಯುಜಿಸಿ ಯ 2(ಎಫ್) ಮತ್ತು 12(ಬಿ) ಮಾನ್ಯತೆಗಳ ಮೂಲಕ, ಧನಸಹಾಯ
ಆಯೋಗವು ಒದಗಿಸುವ ಸೌಲಭ್ಯಗಳನ್ನು ಪಡೆಯುವ ರೀತಿಯನ್ನು ಕುರಿತು ನೀವು ಒಂದು ಗಂಟೆಯ ಸಂವಾದವನ್ನು ಮಾಡಬೇಕು
ಎಂದು ಆದೇಶಿಸಿದಾಗ ನನಗೆ ಒಂದು ಕ್ಷಣ ತಬ್ಬಿಬ್ಬು.
ಮನಸ್ಸು ಬೇಲೂರಿನ ದಿನಗಳತ್ತ ಹೊರಳಿ
ನೋಡಿತು. ನಮ್ಮ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಉಪನ್ಯಾಸಕ ಗೆಳೆಯರೊಂದಿಗೆ ಕೂಡಿ ಎಜುಸ್ಯಾಟ್ ಮೂಲಕ
ಆಯುಕ್ತರು ಮತ್ತು ನಿರ್ದೇಶಕರು ಮಾತನಾಡುವಾಗಲೆಲ್ಲ ಪಕ್ಕದ ನನ್ನ ಗೆಳೆಯರಿಗೆ ಹೇಳುತ್ತಿದ್ದೆ, ‘ನಾನೊಂದು
ದಿನ ಅಲ್ಲಿ ಕುಳಿತು ಮಾತನಾಡುತ್ತೇನೆ, ನಿವು ಇಲ್ಲಿಯೇ ಕುಳಿತು ನೋಡುತ್ತಿರುತ್ತೀರಿ,’ ತಿರುಕನ ಕನಸೆಂದು
ಅವರು ಖೊಳ್ಳೆಂದು ನಕ್ಕು ಚಹಾ ಕುಡಿಯಲು ಕರೆದೊಯ್ಯುತ್ತಿದ್ದರು. ಗತಿ ಕಾಣದ ನಾನು ಅದೇ ಬೇಸರದಲ್ಲಿ
ರಾಯರ ಮೊರೆ ಹೊಕ್ಕು ಮೌನವಾಗುತ್ತಿದ್ದೆ. ಇಂದು ಆ ಅವಕಾಶ ಬಂದು, ರಾಜ್ಯದ 411 ಕಾಲೇಜುಗಳ 5 ಲಕ್ಷ
ವಿದ್ಯಾರ್ಥಿ ಸಮುದಾಯದ, ಯುಜಿಸಿ ವಿಭಾಗದ ಸಮನ್ವಯ ಅಧಿಕಾರಿಯಾಗಿ ಮಾತನಾಡುವ ಅವಕಾಶ ಬಂದಾಗ ಯಾರ ಸ್ಮರಿಸಬೇಕು?
ಯಾರಿಗೆ ಋಣಿಯಾಗಬೇಕು? ಯಾರಿಗೆ ಶಿರಬಾಗಬೇಕು? ಎನ್ನುವಾಗ ಬಸವಣ್ಣನ ಸಾಲೊಂದು ತಲೆಯಲ್ಲಿ ಸುತ್ತುತ್ತಿತ್ತು
–
ಬಾಗಿದ
ತಲೆಯ
ಮುಗಿದ
ಕೈಯಾಗಿರಿಸು
ಕೂಡಲಸಂಗಮದೇವಾ
ಕಾಲೇಜು ಶಿಕ್ಷಣ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಮಾನ್ಯ ಆಯುಕ್ತರ ಹಾಗೂ ನಿರ್ದೇಶಕರ
ವಿಶೇಷ ಕಾಳಜಿಯಿಂದ, ಯುಜಿಸಿ ಸೆಲ್ ಪ್ರಾರಂಭವಾಗಿ, ನಾನು ಘಟಕದ ಸಂಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಲೇಜುಗಳು 2(ಎಫ್) ಮತ್ತು
12(ಬಿ) ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಕುರಿತು ವಿಷಧವಾಗಿ
ತಿಳಿಸಿದೆ. ಜೊತೆಗೆ ಇದಕ್ಕೆ ಪೂರಕವಾಗಿ ಮಾಹಿತಿಯನ್ನು ಪಡೆಯಲು www.ugc.ac.in ವೆಬ್‍ಸೈಟ್‍ನ್ನು ಸಂಪರ್ಕಿಸಲು ತಿಳಿಸಿದೆ.
ಇದರೊಂದಿಗೆ ರಾಜ್ಯದ 411 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ
ಪ್ರಶ್ನೆಗಳನ್ನು ಹೊಂದಿದ್ದರೆ ಕಾ.ಶಿ.ಇಲಾಖೆಯ ಇಮೇಲ್: ugccell2014@gmail.com ಗೆ ಸಂಪರ್ಕಿಸಲು
ತಿಳಿಸಿದೆ.
ಒಂದು ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ, “ಜ್ಞಾನ-ವಿಜ್ಞಾನ ವಿಮುಕ್ತಯೆ”
ಎನ್ನುವ ಧ್ಯೇಯ ವಾಖ್ಯದೊಂದಿಗೆ, 28 ಡಿಸೆಂಬರ್ 1953 ರಲ್ಲಿ ಪ್ರಾರಂಭವಾದ ಯುಜಿಸಿಯು ಡಿಪಾರ್ಟ್‍ಮೆಂಟ್
ಆಫ್ ಹೈಯರ್ ಎಜುಕೇಷನ್ ಹಾಗೂ ಮಿನಿಸ್ಟ್ರಿ ಆಫ್ ಹ್ಯೂಮನ್ ರಿಸೋಸ್ ಡೆವಲಪ್‍ಮೆಂಟ್ ಇಲಾಖೆಗಳ ಸಹಯೋಗತ್ವದಲ್ಲಿ
ಸಾಗಿ ಬಂದು, ಕೋಆರ್ಡಿನೇಷನ್, ಡಿಟರ್ಮಿನೇಷನ್ ಹಾಗೂ ಮೆಂಟೇನನ್ಸ್ ಎಂಬ ವಿಚಾರಗಳನ್ನು ದೇಶದ ಶೈಕ್ಷಣಿಕ
ವ್ಯವಸ್ಥೆಯಲ್ಲಿ ಹೇಗೆ ಅಳವಡಿಸಿತು ಎಂಬುದನ್ನೂ ವಿವರಿಸಿದೆ.
ದೇಶದ ಆರು ಪ್ರಮುಖ ನಗರಗಳಾದ ಪುಣೆ, ಭೂಪಾಲ, ಕಲ್ಕತ್ತಾ, ಹೈದ್ರಾಬಾದ್ ಹಾಗೂ
ಬೆಂಗಳೂರುಗಳಲ್ಲಿರುವ ಯುಜಿಸಿಯ ಉಪಶಾಖೆಗಳ ಮೂಲಕ ಹಾಗೂ ದೇಶದ ರಾಜಧಾನಿ ದೆಹಲಿಯಲ್ಲಿರುವ ಮೂರು ಕಛೇರಿಗಳ
ಮೂಲಕ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು, 28 ಡಿಸೆಂಬರ್ 2002 ರಲ್ಲಿ ಅದು ಹೇಗೆ ಸುವರ್ಣ ಮಹೋತ್ಸವವನ್ನು
ಆಚರಿಸಿಕೊಂಡಿತು ಎಂಬುದನ್ನು ತಿಳಿಸಿದೆ.
21 ನೇ ಶತಮಾನದಲ್ಲಿ ಶಿಕ್ಷಣರಂಗದಲ್ಲಿ ಆಗುತ್ತಿರುವ ಮಹತ್ವದ ಬೆಳವಣಿಗೆಗಳನ್ನು
ಗಮನಿಸಿ, ಯುಜಿಸಿಯು ತನ್ನ ನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ ಎನ್ನುವ ವಿಚಾರವನ್ನು
ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ವ್ಯಕ್ತಪಡಿಸಿ, ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್‍ನನ್ನು
ಯುನಿವರ್ಸಿಟಿ ಎಜುಕೇಷನ್ ಡೆವಲಪ್‍ಮೆಂಟ್ ಕಮಿಷನ್ ಎಂದು ಪರಿವರ್ತಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದರು.
ಹೀಗೆ ಇಲಾಖೆಯ ಇತಿಹಾಸ ದೊಡ್ಡದು, ಈಗ ವಿಭಾಗದ ಇತಿಹಾಸ ರಚಿಸಬೇಕಾದ ಜವಾಬ್ದಾರಿ ನನ್ನದು.
ಇಷ್ಟು ತಿಳಿಸಿ, ಸ್ಟುಡಿಯೋದಿಂದ ಹೊರಬಂದಾಗ 90 ಕರೆಗಳು ಹಾಗೂ 19 ಪ್ರಶ್ನೆಗಳು.
ಒಂದು ಗಂಟೆಯ ಸ್ಟುಡಿಯೋ ಅನುಭವ, ಹೀಗೆ ನಮ್ಮನ್ನು ಜನಮುಖಿಯಾಗಿಸುವುದಾದರೆ ಮುಂದೊಮ್ಮೆ ಬದುಕೇ ಸ್ಟುಡಿಯೋದಲ್ಲಿ
ಕಳೆಯುವುದಾದರೆ ನನ್ನ ಗತಿ ಏನು? ಅಬ್ಬಾ, ಕಲ್ಪನೆಗೂ ಬೇಡ.
ಈ ದಿನದ ವಿಶೇಷತೆಯೇ ವಿಶೇಷತೆ. ನಾನೊಂದೆಡೆ ಹೀಗೆ ಹೊರಟರೆ, ಇನ್ನೊಂದೆಡೆ ಪ್ರೀತಿಯ
ಪದ್ದಿ ಇಂದಿನಿಂದ ಎನ್.ಹೆಚ್.ಆರ್.ಸಿಗೆ. ದೇವರೆ ಒಂದು ಅವಕಾಶ ನೀಡು ಎಂದು ಮೊರೆ ಹೊಕ್ಕಾಗ ಕೆ.ಎಚ್.ಆರ್.ಸಿಗೆ
ತಂದಿಟ್ಟವ ಮೂರೇ ತಿಂಗಳಲ್ಲಿ ಎನ್.ಹೆಚ್.ಆರ್.ಸಿಯ ಬಾಗಿಲಲ್ಲಿ ನಿಲ್ಲಿಸಿದಾಗ ಹೇಗಂತ ಅರಗಿಸಿಕೊಳ್ಳುವುದು?
ಏನಂತ ದೈವಕ್ಕೆ ಧನ್ಯವಾದ ಹೇಳುವುದು?
ಮನೆಗೆ ಹೊರಟಾಗ ನಮ್ಮ ಇಲಾಖೆಯ ಎಡಬದಿಯಲ್ಲಿರುವ ರಾಜ್ಯ ಸಿಐಡಿ ಕಛೇರಿಯಲ್ಲಿ ಶಿಷ್ಯರ
ಬಳಗೊಂದು ಕಾಯುತ್ತಿತ್ತು. ಪೋಲಿಸ್ ಅಧಿಕಾರಿಗಳಾಗಿ(ಪಿಎಸ್‍ಐ) ಅನೇಕ ಕಡೆ ಕೆಲಸ ಮಾಡುತ್ತಿರುವ ಇವರೆಲ್ಲ
ಸಿಐಡಿ ಕಛೇರಿಯಲ್ಲಿ ನಾಲ್ಕು ದಿನದ ಸೈಬರ್ ಕ್ರೈಂ ಕುರಿತಾದ ತರಬೇತಿಗಾಗಿ ಬಂದಿದ್ದರು. ಇವರೆಲ್ಲರ
ಮುಖಂಡ ನನ್ನ ಪರಮ ಶಿಷ್ಯ ಪ್ರಭುಲಿಂಗಯ್ಯ. ಗುಳೇದಗುಡ್ಡದಲ್ಲಿ ವಾರನ್ನ ಉಂಡು ಬೆಳೆದ ಬಡವರ ಕುಡಿ.
ಶಿಷ್ಯಳೊಬ್ಬಳು ಆನಂದರಾವ್ ಸರ್ಕಲ್‍ದಲ್ಲಿ ಕಾಯುತ್ತಿದ್ದಳು. ಇದೇ ದಿನ ಎಕ್ಸ್‍ಸೈಜ್ ಇಲಾಖೆಯ ಅಂತಿಮ
ಸುತ್ತಿನ ಸರ್ಟಿಫಿಕೇಟ್ ವೆರಿಫಿಕೇಷನ್ ಮುಗಿಸಿಕೊಂಡುಬಂದ ಅವಳಿಗೆ ಸ್ವರ್ಗ ಮೂರೇ ಗೇಣು. ಖುಷಿಯಾಗುತ್ತದೆ,
ಬಿಸಿಲು ನಾಡಿನ ಬಸವಳಿದ ಬದುಕುಗಳು ಎದೆಯ ತುಂಬ ಭರವಸೆಯ ಬೆಳಕು ತುಂಬಿಕೊಂಡು ಕುಣಿಯುವಾಗ ನನಗೆ ಕೃಷ್ಣನ
ಗೋಕುಲಾಷ್ಠಮಿ ನೆನಪಾಗುತ್ತದೆ.
ಮನೆಗೆ ಬಂದಾಗ ನಮಗಿಬ್ಬರಿಗೂ ಅತಿಯಾದ ಆನಂದದಿಂದ ಬಂದ ಮೈ-ಕೈ ನೋವು. ಏನೂ ತಿನ್ನಬೇಕೆನ್ನುವ,
ಕುಡಿಯಬೇಕೆನ್ನುವ ವಾಂಛೆಗಳಿಲ್ಲ. ಸಾಯಂಕಾಲದ ಚಹಾ ಕೂಡ ಬೇಡವಾಗಿತ್ತು ಬಾಯಿಗೆ. ಮಧ್ಯ ರಾತ್ರಿಯೂ ನಿದ್ದೆಯಿಂದೆದ್ದು
ಚಹಾ ಕುಡಿದು ಮಲಗುವ ನನಗೆ ಚಹಾ ಬೇಡಾಯಿತೆಂದರೆ! ಆಕೆಗೆ ಹೇಳಿದೆ, ಈ ಬೆಂಗಳೂರಿನಲ್ಲಿ ಅಪರೂಪಕ್ಕೆ
ಈ ಬೇಸರ ಬಂದಿದೆ. ಅದರೊಂದಿಗೂ ಒಂದಿಷ್ಟು ಮಾತನಾಡೋಣ, ತಲೆ ಕೆನ್ನೆ ನೇವರಿಸಿ ಸಂತೈಸೋಣ. 4 ತಿಂಗಳಾಯಿತು
ನಾವಿಬ್ಬರೂ ಹೀಗೆ ಕುಳಿತು. ಬೇಲೂರಿನಲ್ಲಿದ್ದಾಗ ಬೇಸರಕ್ಕೆ ಎಷ್ಟೊಂದು ಬಳಗ. ಅತ್ತ ಹೋದರೆ ಮಲಯಮಾರುತ,
ಇತ್ತ ಚಾಚಿದರೆ ಚನ್ನರಾಯಪಟ್ಟಣ-ಚಂದ್ರಗಿರಿಬೆಟ್ಟ. ಮಧ್ಯ ನಾದವಾಗಿ ನಮ್ಮ ಮೇಹಂದಿ ಹಸನ್. ಈ ಬದುಕಿನಲ್ಲಿ
ಹಾಡು ಎಂದೂ ಹಳೆಯದಾಗುವುದಿಲ್ಲ, ಸುಂದರ ನೆನಪುಗಳು ಎಂದೂ ಅಂದಗೆಡುವುದಿಲ್ಲ. ಅಲ್ಲವೆ?
No comments:
Post a Comment