Total Pageviews

Saturday, October 11, 2014

ಮಾಯೆಯಿಲ್ಲ, ಮರೆಹಿಲ್ಲ, ಅಭಿಮಾನವೂ ಇಲ್ಲ.



     

   ಚಿಕ್ಕವರಿದ್ದಾಗ ಶಾಲೆಗೆ ರಜೆ ಎಂದಾಗ ಎಷ್ಟೊಂದು ಖುಷಿಯಾಗುತ್ತಿತ್ತು. ಅಂಥ ಖುಷಿಯನ್ನು ಮತ್ತೆ ನಾನೀಗ ಬೆಂಗಳೂರೆಂಬ ಬೆಂಗಾಡಿನಲ್ಲಿ ಅನುಭವಿಸುತ್ತಿದ್ದೇನೆ. ಕನಿಷ್ಟ ಆ ದಿನ ಸುಜಾತಾ ಹಾಗೂ ಓಕುಳಿಪುರಂದ ಯಮಯಾತನೆಯ ಟ್ರಾಫಿಕ್‍ನಿಂದ ಮುಕ್ತನಾಗಿ, ಗದ್ದಲವಿಲ್ಲದ ನನ್ನ ಮನೆಯಲ್ಲಿ ಮಡದಿಯೊಂದಿಗೆ, ಬೆಂಗಳೂರಿನ ಸಂಜೆ ಮಳೆಯನ್ನು ಬಿಸಿಯಾದ ಚಹಾದೊಂದಿಗೆ ಎದೆಯೊಳಗೆ ಬಸಿದುಕೊಳ್ಳಬಹುದಲ್ಲ ಎಂಬ ಸಣ್ಣ ಆಶೆ. ಆದರೆ ದುರ್ದೈವ ನಿತ್ಯ ರಜೆ ಇರುವುದಿಲ್ಲ, ಮಳೆ ಬರುವುದಿಲ್ಲ, ಸಾವಿನ ಸಕ್ಕರೆಯ ಬೊಂಬೆಗಳ ಈ ಸಂಸಾರದಲ್ಲಿ ಮಡದಿಯೂ ನಿರಂತರಳಲ್ಲ.
     ಎರಡು ದಿನಗಳ ಹಿಂದಷ್ಟೆ ಓಕಳಿಪುರಂದ ಟ್ರಾಫಿಕ್‍ನಲ್ಲಿ, ಕಾರ್ಬನ್ ಕುಡಿಯುತ್ತ ನಿಂತಾಗ ನನ್ನ ಪಕ್ಕದಲ್ಲೊಂದು ಸ್ಕೂಟಿ. ಹೆಣ್ಣೊಂದರ ಮುಖಕ್ಕೆ ಮಪ್ಲರ್, ಮೇಲೆ ಹೆಲ್ಮೆಟ್ ಎಂಬ ಶಿರಸ್ತ್ರಾಣ ಬೇರೆ. ನನ್ನ ದೃಷ್ಠಿ ಆಕೆಯ ಕಾಲುಗಳೆಡೆಗೆ ಹೋದವು, ಎಂಥ ಮುದ್ದಾದ ಪಾದಗಳವು. ಅಷ್ಟೇ ಸುಂದರವಾಗಿ, ಒಪ್ಪವಾಗಿ ಒಂದೆಳೆಯ ಬೆಳ್ಳಿಯ ಕಾಲ್‍ಚೈನು, ಹಿಂದೆ ಕುಳಿತಿದ್ದ ನನ್ನ ಹೆಂಡತಿಗೆ ಅವುಗಳನ್ನು ತೋರಿಸುತ್ತ ಹೇಳಿದೆ, ‘ಇಂಥ ಬಿಸಿಲು, ಕಾರ್ಬನ್ನಿನ ಕಪ್ಪು ಹೊಗೆಯಲ್ಲೂ ಎಷ್ಟೊಂದು ಮುದ್ದಾದ ಪಾದಗಳು ಪದ್ದು! ನಾಳೆ ನನ್ನ ಮಗಳು ದೊಡ್ಡವಳಾದ ಮೇಲೆ, ಅವಳ ಪಾದಗಳೂ ಹೀಗಾಗಬಹುದೇ?’ ಎಂದು ಸಂಭ್ರಮಿಸುತ್ತಿರುವಾಗ, ಮಗಳು ದೊಡ್ಡವಳಾಗುವ ಕನಸು ನನ್ನನ್ನು ಮಹಾದೇವಿಯಕ್ಕನ ಒಂದು ವಚನ ನೆನಪಿಸಿಕೊಳ್ಳುವಂತೆ ಮಾಡಿತು –
 ಮದನಾರಿಯೆಂಬ ಮಳೆ ಹೊಯ್ಯಲು
ಶಿವಯೋಗವೆಂಬ ತೊರೆ ಬರಲು
ಕಾಮನೆ ಅಂಬಿಗನಾದ ನೋಡಾ
ಕರ್ಮದ ಕಡಲೆನ್ನೆಳೆದೊಯ್ಯುವಾಗ
ಕೈಯ ನೀಡು ತಂದೆ, ಚನ್ನಮಲ್ಲಿಕಾರ್ಜುನ.
       ಅಂದಹಾಗೆ, ಕಳೆದ ಎರಡು ತಿಂಗಳಿಂದ ನಾನು ಮತ್ತೆ ಮತ್ತೆ ಓದಿ ಸಮಾಧಾನಿಯಾದುದು ವಚನ ಸಾಹಿತ್ಯದಿಂದ. ಆಡಳಿತ ನನ್ನ ಒಟ್ಟು ಸೃಜನಶೀಲತೆಗೆ ಭಂಗ ತರುತ್ತದೆ ಎಂಬ ನನ್ನ ಅನೇಕ ಗೆಳೆಯರ ಆತಂಕವನ್ನು ಹುಸಿಗೊಳಿಸುವ ಶಕ್ತಿಯನ್ನು ನೀಡಿದ್ದು, ಈ ವಚನ ಸಾಹಿತ್ಯ. ಅದೇ ಓದಿನ ಸುಖದ ಮತ್ತಿನಲ್ಲಿರುವಾಗ, ಕರ್ನಾಟಕ ರಾಜ್ಯ ವೀರಶೈವ ವಿಚಾರ ವೇದಿಕೆ ಬೆಂಗಳೂರು, ಇವರು ದಿನಾಂಕ:11/10/2014  ರಂದು ರಾಜಾಜಿನಗರದ ಬಸವೇಶ್ವರ ಕಾಲೇಜಿನ, ಬಸವ ಸಭಾಂಗಣದಲ್ಲಿ ಉಪನ್ಯಾಸ ನೀಡಲು ಕೇಳಿಕೊಂಡರು. ಅದೆಷ್ಟೇ ಹಿಂಸೆಯಾದರೂ ಸರಿ, ಪ್ರೀತಿಯನ್ನು ಧಿಕ್ಕರಿಸಲಾಗದು ನನಗೆ, ಒಪ್ಪಿಕೊಂಡೆ.
     ಎರಡನೆ ಶನಿವಾರ ನಮಗಿಬ್ಬರಿಗೂ ರಜೆ. “ಸಾವಿರದ ಸಾಹಿತ್ಯ: ವಚನ” ಇದು ನನ್ನ ವಿಷಯ. ನನ್ನದೊಂದೇ ಉಪನ್ಯಾಸ. ಸಭೆಯಲ್ಲಿ ನನ್ನೊಂದಿಗೆ ಶ್ರೀ ಪಾಲನೇತ್ರ, ಅಧ್ಯಕ್ಯರು, ಕರ್ನಾಟಕ ವಿಚಾರ ವೇದಿಕೆ, ಶ್ರೀ ಗುರುಸ್ವಾಮಿ, ಆರ್.ಎಂ.ಸಿ ಯಾರ್ಡ್ ಮಂಡಿ ಕಾಂಟ್ರಾಕ್ಟರ್, ಯಶವಂತಪುರ, ಶ್ರೀಮತಿ ಕೆ.ಎನ್. ಪ್ರಮಿಳಾ, ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀ ಕೆ.ಆರ್. ಸಿದ್ದಲಿಂಗ ಆರಾಧ್ಯ, ಖಜಾಂಚಿ ಮತ್ತು ಶರಣಪ್ಪ ಕುಂಬಾರ, ಅಧ್ಯಕ್ಷರು, ಕರ್ನಾಟಕ ರಾಜ್ಯ ಬೋರ್‍ವೆಲ್ ಕಾರ್ಮಿಕರ ಒಕ್ಕೂಟ, ಶ್ರೀ ಶಂಕರ ಪಾಟೀಲ, ಅಧ್ಯಕ್ಷರು, ಕರ್ನಾಟಕ ಪ್ರತಿಭಾ ಅಕಾಡೆಮಿ, ಬೆಂಗಳೂರು ಹಾಗೂ ಹಿರಿಯ ಪತ್ರಕರ್ತ ರು. ಬಸಪ್ಪ.
       ಎಲ್ಲಕ್ಕೂ ಮಿಕ್ಕಿ ಈ ಸಮಾರಂಭದಿಂದ ನನಗೆ ಸಿಕ್ಕ ದೊಡ್ಡ ನಿಧಿ, ಆರು ಜನ ಸಾಫ್ಟವೇರ್ ಇಂಜಿನಿಯರಿಂಗ್ ಯುವ ಗೆಳೆಯರ ಬಳಗ. ಇವರು ಕಳೆದ ಅನೇಕ ಸಭೆಗಳಿಂದ ನನ್ನ ಬೆನ್ನು ಬಿದ್ದಿದ್ದಾರೆ. ನನ್ನ ನೇತೃತ್ವದಲ್ಲಿ ಏನೋ ಒಂದು ಮಾಡಬೇಕೆನ್ನುವ ಕನಸು ಅವರಿಗೆ. ನನಗೆ ಈಗೊಂದಿಷ್ಟು ಅಕ್ಕಮಹಾದೇವಿಯ ಸುತ್ತ ಸಿಳ್ಳೆ ಹೊಡೆಯುವ ಪಡ್ಡೆಗಳು ಸಿಕ್ಕರೆಂಬ ಖುಷಿ. ಅವರ ಬಳಿಕರೆದು ಹೇಳಿದೆ ಈ ಹುಚ್ಚು ಹುಡುಗಿ ನಮ್ಮ ಪ್ರೇಮಿಗಳಿಗೆ ಮಾದರಿಯಾಗಬೇಕು. ಅದಕ್ಕೆ ನಾನು ಏನೂ ಮಾಡಲು ಸಿದ್ಧ ಎಂದು ಆಕೆಯ ಕೆಲವು ಸಾಲುಗಳ ಹೇಳಿದೆ –
 “ಅಪ್ಪುಗೆ ಸಡಿಲಿದ ಸುಖವ ಮರಳಿ ಅರಸಿದರುಂಟೆ?
ನೋಡದಿರು, ಕಾಡದಿರು, ಮನ ಬಳಲಿಸದಿರು”
ನಮ್ಮ ಹುಡುಗರ ಮೈ ಬಿಸಿಯಾಯಿತೇನೊ . . . . ಮತ್ತೆ ಹೇಳಿದೆ –
 ನಾನು ನಿನಗೊಲಿದೆ, ನೀನು ನನಗೊಲಿದೆ
ನೀ ನನ್ನ ಅಗಲಿ ಇರಲಾರೆ, ನಾ ನಿನ್ನ ಅಗಲಿ ಇರಲಾರೆ. . .
ನೀ ಕರುಣಿ ಎಂಬುದು ಬಲ್ಲೆ
ನೀನಿರಿಸಿದ ಗತಿಯೊಳಗೆ ಇರುವೆ ನಾ
ನೀನೇ ಬಲ್ಲೆ ಚೆನ್ನಮಲ್ಲಿಕಾರ್ಜುನ
   ಹೀಗೆ ಹೇಳುತ್ತಾ ಹೋದರೆ ಈ ಹುಡುಗರಿಗೆ ಮದುವೆಯೂ ಕಷ್ಟವಾದೀತೆಂದು ವಿಚಾರಕ್ಕೆ ಬಂದೆ. ಇದುವರೆಗೆ ಇರುವ 21000 ವಚನಗಳಲ್ಲಿ, 2500 ವಚನಗಳು, 9 ಭಾಷೆಗಳಿಗೆ ಭಾಷಾಂತರಗೊಂಡಿವೆ. ನೂರಾರು ಶರಣರಲ್ಲಿ ಕೇವಲ 129 ಜನ ಶರಣರ ಮತ್ತು 31 ಜನ ಶರಣೆಯರ, 13 ಜನ ಅಜ್ಞಾತರ ಹೀಗೆ ಒಟ್ಟು 173 ಜನ ವಚನಕಾರರ 2500 ವಚನಗಳು ಭಾಷಾಂತರಗೊಂಡು ಪ್ರಚಲಿತದಲ್ಲಿವೆ. ಮಿಕ್ಕ ಸಾಹಿತ್ಯದ ಗತಿ ಏನು? ಇದು ನನ್ನ ಪ್ರಶ್ನೆ. ಅಕ್ಕಮಹಾದೇವಿ ಮೆಜಿಸ್ಟಿಕ್‍ಗೆ ಬಂದು ಮಾತಾಡಬೇಕು. ಇದಕ್ಕೆ ನಮ್ಮ ದಾರಿ ಏನು? ಅವಳಂತಹ ನಿಸ್ಸಂಗಿ ಮಾತಾಡದಿದ್ದರೆ ಸಂಗಕ್ಕೂ ಅರ್ಥ ಬರುವುದಿಲ್ಲ ಎನ್ನುತ್ತ ಅವಳ ವಚನ ಒಂದನ್ನು ಹೇಳಿದೆ –
 ಹಣ್ಣ ಮೆದ್ದ ಬಳಿಕ ಆ ಮರನಾರು ತರಿದಡೆನು?
ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿದಡೆನು?
ಗಾಬರಿಯಾದರು ನನ್ನ ಗೆಳೆಯರು. ಅವಳಂಥ ಛಲಬೇಕು ಬದುಕಿಗೆ. ಅವಳಂಥ ನಿಲುವುಬೇಕು ಕಾಮಕ್ಕೆ. ಹೀಗೆ, ಅಗ್ನಿಯುಗುಳುವ ಇವಳದು ಒಂದು ರೀತಿಯಲ್ಲಿ ಅಗ್ನಿಗಾನ. ಶುದ್ಧಕಾಮಿ, ಶುದ್ಧಾಂಗಿಯಾದ ಅವಳು ವಚನ ನೀಡುತ್ತಾಳೆ -
 “ಚೆನ್ನಮಲ್ಲಿಕಾರ್ಜುನನ ಕೈ ಹಿಡಿದು
ನಿಮ್ಮ ತಲೆಗೆ ಹೂವ ತರುವೆನಲ್ಲದೆ ಹುಲ್ಲ ತಾರೆನು”
       ****
“ನಯವಿಲ್ಲದ ಶಬ್ಧವನು ನುಡಿಯಲಾರೆನು”
ಆದರೆ,
“ಮನ ಬಂದುದನು ಬಯಸಿ ಬೆಯುತ್ತಿದ್ದೆನಯ್ಯ
ನನ್ನ ಮನದ ದುರಾಶೆಯನ್ನು ನೀಗಿಸು” ಎಂದು ಆತ್ಮ ಸಾಕ್ಷಿಯಾಗಿ, ತಲೆಬಾಗಿ ಬೇಡಿಕೊಳ್ಳುತ್ತಾಳೆ. ಇಂಥ ಬಾಗುವಿಕೆ ಮನುಷ್ಯರಿಗೆ ಮಾತ್ರ ಸಾಧ್ಯ. 
   
       ಭಾಷಣ ಮುಗಿದು ಕೆಳಗಿಳಿದಾಗ, ಸಮಯ ರಾತ್ರಿ 9 ಗಂಟೆ. ನನ್ನ ಮದಿರಾಲಯದ ಯೋಗಕ್ಕೆ ಸರಿಯಾದ ಮಹೂರ್ತ. ಈಗ ಹೊರಡಲೇಬೇಕು. ಮೈ ಮುಟ್ಟಿದ ಹೂ, ಹೆಣ್ಣು ಮತ್ತು ಹೊಗಳಿಕೆಯ ಭಾರ, ಬದಿ ಸರಿಸಿ ಹಗುರಾಗಬೇಕು, ಮತ್ತೆ ನಾ, ನಾಗಬೇಕು.




No comments:

Post a Comment