Total Pageviews

Monday, October 27, 2014

ಹಣತೆಯೆ, ಹಂಚಿಕೊಳ್ಳಲೆ ನಿನ್ನ?

ಹಣತೆಯೆ,
ನಿನ್ನೆದೆಗೆ ಬಿದ್ದ ಹನಿ ಎಣ್ಣೆಗೂ ನರನಾಡಿಗಳಿರುತ್ತವೆ,
ಅದೂ ಚಲಿಸುತ್ತದೆ ನಿನ್ನೊಳಗೇ ಸೇರಿ
ತನ್ನದೆಲ್ಲವ ನೀಗಿ, ಒಂದಾಯಿತೆಂಬ ಹರುಷದಿ ಮಾಗಿ
ಬೆಳಕ ಹೆರುವ ತಾಯಿಯಾಗಿ ತುಡಿಯುತ್ತದೆ,
ದುಡಿಯುತ್ತದೆ, ಹರಸುತ್ತದೆ ಮಾಯೆಯಾಗಿ



ಹಣತೆಯೆ,
ಬೆಳಕಿನಿಂದ ಲಾಸ್ಯವಾಡುತ್ತ
ನೀ ಸುಡುವ ರೀತಿ, ಮೋಸದಿಂದ ರಕ್ತ ಹೀರಿದ ಪ್ರೀತಿ,
ಎಲ್ಲ ತಿಳಿಯುತ್ತದೆ ಹನಿ ಎಣ್ಣೆಗೂ
ಆದರೂ ಅದ್ಯಾಕೆ ಅದು ತಣ್ಣಗೊ?
ತನ್ನದೊಂದು ಪುಟ್ಟ ತಕರಾರೂ ಇಲ್ಲ ಅದರೊಳಗೆ ಸಣ್ಣಗೆ
 ಹಣತೆಯೆ
ಹನಿ ಎಣ್ಣೆಯ ಬಗಲ ಬೆವರಲೇ ಬೆಳೆದ ನೀ
ಬೆಳಕಾದೆ, ದೀಪವಾದೆ, ದಾರಿಯಾದೆ, ದೇವರಾದೆ
ಕತ್ತಲೆಗೆ ಕುಠಾರಳೆಂದು, ಆದಿಯೆಂದು, ಅಗ್ನಿಯೆಂದು
ದೀಪಗಳ ಹಾವಳಿಯೆಂದು, ದೀಪಾವಳಿಗೆ ಬಂದು
ನಿನ್ನ ಹಮ್ಮು ನೀಗಿಸಿಕೊಂಡೆ

ಹಣತೆಯೆ,
ನಿನ್ನ ಹೊಳಪಿಗೆ ಕಣ್ಣು ಮಿಟುಕಿಸಿ
ಹಂಬಲಿಸಿ ಬಂದ ಚಿಟ್ಟೆಗಳ ಸುಟ್ಟೆ
ಚಿಣ್ಣ-ಚಿನ್ನಾರಿಗಳ ಹೊಸ ಬಟ್ಟೆಗೂ ಬೆಂಕಿ ಇಟ್ಟೆ
ನಿನ್ನೊಂದಿಗಿನ ಪ್ರೀತಿಯನ್ನೇ ಮಸಣಕ್ಕೆ ಅಟ್ಟೆ
ನಿನ್ನ ಒಂದು ಮುತ್ತಿಗೆ ಬದುಕು ಸತ್ತ ಬಟ್ಟೆ
 
ಆದರೆ
ನಿನ್ನೆದೆಯೊಳಗಿನ ಎಣ್ಣೆ
ಬೊಬ್ಬೆಯಿಂದ ಬಾಯಿಬಿಟ್ಟ ಕೈಗೆ
ಸುಟ್ಟ ಮೈಗೆ, ಸಮಾಧಾನವಾಗಿ
ತಂಪೆರೆವ ಮಲಾಮಾಗಿ ಸವರುತ್ತಲೇ ಇದೆ
ನೀ ಸುಟ್ಟು ಹಾಕಿದ ಹೆಣದ ನೆನಪಿನೆದೆಯ ಮೇಲೆ
ಉರಿವ ಹಣತೆಯಲ್ಲಿ ಒಂದಾಗಿ ತಣ್ಣಗೆ ಹರಿಯುತ್ತಲೇ ಇದೆ.


No comments:

Post a Comment