Total Pageviews

Wednesday, October 22, 2014

ನನ್ನೆದೆ ಭಾವಕೆ ನಿನ್ನಯ ಒಲವು



ಕಣ್ಣೊರಿಸಿಕೊ, ತಣ್ಣನೆಯ ಮೌನ ಸರಸಿ
ದೀಪ ಹಚ್ಚಿಡು ತಾಯಿ,
ಮಣ್ಣೊಳಗೆ ಮಗ್ನರಾದ
ಮುದ್ದು ಗೊಲ್ಲರ ಕರೆದು ಗಲ್ಲ ತೀಡು
ರಂಗೋಲಿ ಇಟ್ಟು, ನೆನಪುಗಳ ಪಟಾಕಿ ಸುಡು
ತೇಲಿ ಬರಬಹುದೆಲ್ಲೋ ಸತ್ತವನ ಎದೆಯ ಹಾಡು
       14 ವರ್ಷಗಳ ಗಾಢ ನಿದ್ರೆಯಿಂದ ಎಚ್ಚತ್ತು, ಬೆಳಕಿನೆಡೆಗೆ ಮೊಗಮಾಡಬೇಡಿತ್ತು ನನ್ನ ಇಲಾಖೆ. ದೀಪ ಬೆಳಗುವ ಹೊತ್ತು, ಯಾರೂ ನಿದ್ರೆಯಲ್ಲಿರಬಾರದು, ಆಲಸ್ಯ ಅಲ್ಪ ಕತ್ತಲೆಯೂ ಶಿಕ್ಷಣದಂಥ ಕ್ಷೇತ್ರದಲ್ಲಿ ಸುಳಿಯಬಾರದು, ಎಂಥ ಏಳು-ಬೀಳುಗಳ ಮಧ್ಯಯೂ ಆತ್ಮಸಾಕ್ಷಿಯ ಪ್ರಭೆಯನ್ನು ಮುಂದಿರಿಸಿಕೊಂಡು, ಬಾಳಿನಲ್ಲಿ ದೀಪ ಹಿಡಿದುಕೊಂಡು, ಮುಂದೊರೆಯಬೇಕು ಎಂದು 59 ವರ್ಷಗಳ ವಯಸ್ಸಿನ ನಿವೃತ್ತಿಯಂಚಿನ ಆಯುಕ್ತರು, ಹರಸುವಾಗ ನನಗೆ ನಾಚಿಕೆಯಾಗುತ್ತಿತ್ತು, ಮನಸ್ಸು ಬಾಲ್ಯದ ನನ್ನ ಹಾಡೊಂದನ್ನು ಗುನುಗುನಿಸುತ್ತಿತ್ತು –
ಎತ್ತು ನಿನ್ನ ಮನವೆತ್ತು
ಹೃದಯಧನ ಏರು ಎಸೆದು ತೆಂಗು
ಏಳು ಏಳು ಜಗದಗ್ನಿಲಿಂಗವೆ ತತ್ವ ಮಸಿಯನುಂಡು
       ಆಯುಕ್ತರ ಈ ಕನಸಿನ ಫಲಶೃತಿಗಳು ಬೆಂಗಳೂರಿನ ನಮ್ಮ ಬಾಳುಗಳ ಅಸ್ತಿತ್ವಗಳು. ನಮ್ಮಗಳ ಮೊದಲ ಪ್ರಯೋಗವಾಗಿ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಎಂಟು ವಿಷಯಗಳ ರಾಜ್ಯ ಪರಿಣಿತರ, ಒಂದು ದಿನದ ಕಾರ್ಯಗಾರವನ್ನು ಕಾಲೇಜು ಶಿಕ್ಷಣ ಇಲಾಖೆಯ ನಮ್ಮ ತಂಡ ಆಯೋಜಿಸಿತು. ಫಲಿತಾಂಶ ನಿರೀಕ್ಷೆಯ ಮಟ್ಟದಲ್ಲಿರಲಿಲ್ಲ ಆದರೆ ತೀರ ನೀರಸವೇನೂ ಅಲ್ಲ. 
 ಈ ಬೆಂಗಳೂರು ಈಗ ನನ್ನ ಆ 20 ವರ್ಷಗಳ ಹಿಂದಿನ ನಗರವಲ್ಲ. ಕೆಲವು ಬಾರಿಯಂತೂ ಎಲ್ಲೋ ವಿಜಾಪುರ-ಬಾಗಲಕೋಟೆಗಳಲ್ಲಿದ್ದಂತೆ ಭಾಸವಾಗುತ್ತದೆ. ವಿಧಾನಸೌಧದಿಂದ ವಿನ್ಸೆಂಟ್ ಗ್ರೇವ್‍ಯಾರ್ಡ್ ವರೆಗೂ, ಕೋರಮಂಡಲದಿಂದ ನೆಲಮಂಗಲದವರೆಗೂ ಎಲ್ಲಿ ನೋಡಿದರಲ್ಲಿ ಕನ್ನಡಿಗರು. ತೆಲಗು, ತಮಿಳರ ಪಾರಮ್ಯ ಮೊದಲಿನಷ್ಟಿಲ್ಲ. ಇದರಲ್ಲಿ 60% ಕನ್ನಡಿಗರು ಬರೀ ವಿಜಾಪುರ-ಬಾಗಲಕೋಟೆ, ಹೈದ್ರಾಬಾದ್ ಕನ್ನಡಿಗರೆ. ನಾವಿರುವ ರಾಜಾಜಿನಗರದಿಂದ ಎಂ.ಎಸ್. ಬಿಲ್ಡಿಂಗ್ ವರೆಗೆ ಖಾನಾವಳಿಗಳದ್ದೆ ಕಾರುಬಾರು.
ಈ ತಿಂಗಳ 12 ರಿಂದ 22 ರವರೆಗೆ ನನ್ನ ಬೆಂಗಳೂರು ಬದುಕೊಂದು ವಿಚಿತ್ರ ಅನುಭವಗಳ ಕಲಸು ಮೇಲೋಗರ. ಪುಸ್ತಕಗಳ ಮಳಿಗೆಗಳಲ್ಲಿ ‘ಕಾವ್ಯಕ್ಕೆ ಉರುಳು’ ತಣ್ಣಗೆ ತನ್ನ ಮೂರನೇ ಸುತ್ತಿನ ಮಾರಾಟ ಮುಗಿಸಿಕೊಂಡಿದೆ. ನನ್ನ ಒಟ್ಟು 19 ಶಿರ್ಷಿಕೆಗಳು ಈ ಬದುಕು ಸಂಭ್ರಮವಾಗಿಸುವಷ್ಟು ಸುಂದರವಾಗಿ ಓಡುತ್ತಿವೆ. ಸಿದ್ಧಲಿಂಗಯ್ಯನವರ ಮನೆಯ ಮಗಳಾಗಿ ತನ್ನ ಎದೆಯ ನೋವ ಬಿಚ್ಚಿಕೊಳ್ಳುತ್ತ ಸಮಾಧಾನವಾಗಿ ಬರುತ್ತಿದ್ದಾಳೆ ನನ್ನ ಸಾಕಿ, ಅವಳಿಗಾಗಿ ರಾಜಭವನವೇ ಸಿದ್ಧಗೊಳ್ಳುವುದೆನೊ! ಓಶೋ ಬರುತ್ತಿದ್ದಾನೆ ಹೊಸ ವಿನ್ಯಾಸದಲ್ಲಿ.
ಸಂಕೀರ್ಣ ಅನುಭವಗಳ ಗುರುವಿನಂತೆ ನಿಂತು ಪಾಠ ಕಲಿಸಿದ 2014 ಕೊನೆಯ ಘಟ್ಟದಲ್ಲಿದೆ. ಇಲ್ಲಿ ಕರಗಿದುದಕ್ಕೆ ಬೇಸರವಿಲ್ಲ, ಬೇರಾದುದಕೆ ಶಾಪವೂ ಇಲ್ಲ, ನನ್ನ ಪ್ರಾಮಾಣಿಕ ಯತ್ನಗಳ ಸಂತೃಪ್ತಿಯೊಂದಿಗೆ ದಿನಾಂಕ:12/10/2014 ರಂದು ರಾಜಕುಮಾರ ಸಮಾಧಿಯ ಮುಂದೆ ಕೈ ಮುಗಿದು ನಿಂತಾಗ, ಅವರ ಇಷ್ಟದ ಪದ್ಯ
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ
ಹಾಯಾಗಿರುವೆ ರಾಘವೇಂದ್ರ
ರಾಜಕುಮಾರರ ಸಮಕಾಲೀನ ಇನ್ನೊಬ್ಬ ಪ್ರತಿಭಾವಂತ ಕನ್ನಡದ ಕೊನೆಯ ಹಿರಿಯ ನಟ ರಾಜೇಶ, ಅರ್ಜುನ ಮತ್ತು ಧೃವಸರ್ಜಾ ಅವರ ಮಾವ. ನನ್ನ ಸಾಹಿತ್ಯ ಪ್ರೇಮಿ. ಅವರು ಕಾಂಪ್ಲಿಮೆಂಟ್ರಿ ಓದುಗರಲ್ಲ. ತಿರುಗಾಡಿ ಪುಸ್ತಕ ಸಂಗ್ರಹಿಸಿದವರು. ಇಷ್ಟಪಟ್ಟವರಿಗೆ ಹುಡುಕಾಡಿ ಫೋನಾಯಿಸಿದವರು. ಕಳೆದ ಮೂರು ತಿಂಗಳಲ್ಲಿ ಅವರಿಗೆಲ್ಲೊ ನನ್ನ ಗಾಂಧಿ ಸಿಕ್ಕುಬಿಟ್ಟ, ಹೀಗೆ ನನ್ನನ್ನೊಯ್ದು ಅವರಿಗೆ ಕೊಟ್ಟುಬಿಟ್ಟ. ಈಗ ಅವರ ಫೋನು, ಮಾತು ನನ್ನ ನಿತ್ಯ ಕರ್ಮಗಳಲ್ಲಿ ಒಂದು.
21 ರಂದು ಅರ್ಜುನ ಸರ್ಜಾರ ‘ಅಭಿಮನ್ಯು’ ಮಾರುಕಟ್ಟೆಗೆ ಬರುವ ಸಡಗರ ಅವರ ಮನೆಯಲ್ಲಿದ್ದಾಗಲೂ ದಿನಾಂಕ 20 ರಂದು ನಾನು ಅವರೊಂದಿಗೆ ಇರಲೇಬೇಕು ಎಂದು ಪ್ರೀತಿಯ ಹಠಕ್ಕೆ ಬಿದ್ದವರು ಈ ಹಿರಿಯ ಜೀವ ರಾಜೇಶ. ಅದೇ ದಿನ ಇತ್ತ ಪೂರ್ವ ಚರ್ಚೆಗಾಗಿ ರಾಜಭವನಕ್ಕೆ ಹೋಗಬೇಕಾದ ಒತ್ತಡ. ಎರಡೂ ಪ್ರೀತಿ-ಗೌರವಗಳೇ. ಹ್ಯಾಗೋ ಎರಡಕ್ಕೂ ಅವಕಾಶ ಮಾಡಿಕೊಂಡೆ. ಗೆಳೆಯ ಶಂಕರ ಹೂಗಾರರ ಸಾರಥ್ಯದಲ್ಲಿ ವಿದ್ಯಾರಣ್ಯಪುರಂದ ಅವರ ಮನೆಯಲ್ಲಿ ಎರಡು ಗಂಟೆಗಳ ಚರ್ಚೆ, ಚರ್ಚೆ ಮತ್ತೂ ಚರ್ಚೆ. ಇಂಥ ಪ್ರೀತಿಯ ಸರಳ ನಟನೊಬ್ಬನನ್ನು ನಾನು ನೋಡಿಯೇ ಇಲ್ಲ ಎನ್ನಬೇಕು. ಅಬುದಾಬಿಯಿಂದ ಮಗಳು ತಂದ ಒಂದು ವ್ಯಾನಿಟಿ ಬ್ಯಾಗ್‍ನ್ನು ನನ್ನ ಮಡದಿಗೆ ಕಾಣಿಕೆಯಾಗಿ ನೀಡಿ, ಹಳೆಯ ಆ -          
ರವಿ ವರ್ಮನಾ, ಕುಂಚದಾ,
ಕಲೆ ಬಲೆ ಸಾಕಾರವೂ
ಗೀತೆಯನ್ನು ಹಾಡಿ ಅವರು ನಮ್ಮನ್ನು ಬೀಳ್ಕೊಡಲಿಲ್ಲ, ಬದಲಾಗಿ ತಮ್ಮ ಕುಟುಂಬದಲ್ಲಿ ಸ್ಥಾಪಿಸಿಕೊಂಡರು.
ವಿದ್ಯಾರಣ್ಯಪುರಂದಿಂದ ನೇರ ರಾಜಭವನಕ್ಕೆ ಅಲ್ಲಿ ಒಂದು ಗಂಟೆಯ ಚರ್ಚೆ, ಮುಂದಿನ ಸ್ವಾತಂತ್ರೋಧ್ಯಾನದ ಎದುರುಗಡೆಯ ನಮ್ಮ ಯುಜಿಸಿ ಕಛೇರಿಯಲ್ಲಿ ಮಹತ್ವದ ಸಭೆ, ರಾತ್ರಿ ಧಾರವಾಡದತ್ತ ಪ್ರವಾಸ, ‘ಬರೀ ಇದನ್ನೇ ಮಾಡುತ್ತೀರೋ? ಗಂಭೀರವಾದುದೇನಾದರೂ ಬರಿಯುತ್ತಿರೊ?’ ಅದೃಶ್ಯ ಗೆಳತಿಯ ಅಪರೂಪದ ಪ್ರಶ್ನಾರ್ಥಕ ಎಸ್‍ಎಂಎಸ್ ಎಚ್ಚರಿಕೆ ಒಂದುಕಡೆ, ‘ಯಾವುದಕ್ಕೂ ಚಿಂತಿಸಬೇಕಿಲ್ಲ ರಾಗಂ, ನಿಮ್ಮ ದಾರಿ ಸರಿಯಾಗಿದೆ, ಹೀಗೆಯೇ ಬೆಳೆಯುತ್ತೀರಿ, ದೈತ್ಯ ಪ್ರತಿಭೆ ಶುಕ್ರಾಚಾರ್ಯನಂತೆ’ ಎಂದು ಗುರುಗಳೊಬ್ಬರ ಆಶೀರ್ವಾದ ಮತ್ತೊಂದು ಕಡೆ.
 ಯಾವುದಕ್ಕೆ ಬಾಗಲಿ? ಮತ್ತ್ಯಾವುದಕ್ಕೆ ಎದೆಯುಬ್ಬಿಸಲಿ? ಸಾವಿರ ಸಾವಿರ ಕನಸು ಹೊತ್ತುಕೊಂಡು ಹೋಗುವಾಗ ಸಹಾಯ ಕೇಳಿ ನಿಮ್ಮ ದೈವಗಳನಲ್ಲದೆ ಇನ್ನ್ಯಾರಿಗೆ ಕೇಳಲಿ?
ಕ್ಷಮಿಸಿ, ನನ್ನ ಬದುಕೆಲ್ಲವೂ ಕವಿ ಸಮಯವೆ. ಇದೆ ತಿಂಗಳು 26 ಮತ್ತು 29 ರಂದು ಬೆಂಗಳೂರಿನ ಎರಡು ಮಹತ್ವದ ಕಾವ್ಯ ಸಂಜೆಗಳಲ್ಲಿ ನನ್ನ ಕವಿತೆಯೊಂದಿಗೆ ನಿಲ್ಲುತ್ತಿದ್ದೇನೆ. ಕನಸಿದ್ದವರು ಕೇಳಲು ಬನ್ನಿ. ಈಗ ನನ್ನೊಂದಿಗೆ ಕವಿತೆಯಾಗಿಯೇ ಅರಳಿದ ಕೂಸೊಂದರ ಕವಿತೆ ಹಂಚಿಕೊಳ್ಳೊಣ ಬನ್ನಿ –
 ಅರಳುವ ಹೂವಿಗೆ ದುಂಬಿಯ ಒಲವು
ಮೋಹದ ಮೀನಿಗೆ ನೀರಿನ ಒಲವು
ಬಾನಾಡಿಗೆ ಬಾನಿನ ಒಲವು
ನಲಿವ ಬಳ್ಳಿಗೆ ಗಾಳಿಯ ಒಲವು
ಒಡಲ ನೋವಿಗೆ ಹಾಡಿನ ಒಲವು
ಕಡಲಿನ ತೀರಕೆ ತೆರೆಯ ಒಲವು
ಕುಣಿಯುವ ನವಿಲಿಗೆ ಗಿರಿಯ ಒಲವು
ನನ್ನೆದೆ ಭಾವಕೆ ನಿನ್ನಯ ಒಲವು
                                                                       -   ನೀತು

No comments:

Post a Comment