Total Pageviews

Monday, October 6, 2014

ಇವಳು, ಗಾಂಧಿ ಮತ್ತು ರೋಮಾಂಚನ



    ಕಳೆದ ಹದಿನೈದು ವರ್ಷಗಳಿಂದ ನನ್ನೊಳಗೆ ಬೀಸಿದ ಗಾಂಧಿಯ ಗಾಳಿಗೆ ಇದೇ ಅಕ್ಟೋಬರ್ ಎರಡರಂದು ಒಂದು ರೀತಿಯಲ್ಲಿ ತವರು ಸನ್ಮಾನ. ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದ ಮಿನಿ ಆಡಿಟೋರಿಯಂನಲ್ಲಿ (ಸ್ಥಳೀಯ ವೈದ್ಯರು, ವ್ಯಾಪಾರಿಗಳು, ಎಂಜಿನೀಯರ್‍ಗಳು, ಶಿಕ್ಷಕರು ಹಾಗೂ ಕೈಗಾರಿಕೋದ್ಯಮಿಗಳು ಸೇರಿಕೊಂಡು ಕಟ್ಟಿಕೊಂಡ ವೇದಿಕೆ) ‘ಗೆಳೆಯರ ಬಳಗದ’ ವತಿಯಿಂದ ಹಮ್ಮಿಕೊಳ್ಳುವ ಪ್ರತಿ ವರ್ಷದ ಏಕೈಕ ಕಾರ್ಯಕ್ರಮ ‘ಗಾಂಧಿ ಜಯಂತಿ’. ಹಿಂದಿನ ಸಾರಿ ಇದೇ ಸಮಾರಂಭಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಮುಖ್ಯ ಅತಿಥಿಗಳಾದರೆ ಈ ಸಾರಿಯದು ನನ್ನ ಪಾಳಿ. ಶಿಸ್ತಾಗಿ, ಗಂಭೀರವಾಗಿ, ನಿಗಧಿತ ವೇಳೆಯ ವ್ಯಾಪ್ತಿಯಲ್ಲಿ ನಡೆಯುವ ಇದು ಚಿಂತಕರ ಸಭೆಯೇ ವಿನಃ ಪುಂಡರಗೋಷ್ಠಿಯಲ್ಲ. ಗಾಂಧೀಜಿಯ ಪ್ರೀತಿಯ ರಾಮ್‍ಧುನ್‍ದೊಂದಿಗೆ ಪ್ರಾರಂಭವಾಗಿ ರಾತ್ರಿಯ ಊಟದೊಂದಿಗೆ ಮುಗಿಯುವ ಈ ಸಮಾರಂಭದಲ್ಲಿ ಎಲ್ಲವೂ ಶಿಸ್ತು ಮತ್ತು ಕಾಲಪ್ರಜ್ಞೆಯ ಕ್ರಿಯೆ.
       ವಿಚಿತ್ರ ನೋಡಿ, ಬಾಗಲಕೋಟೆಯ ಪಕ್ಕದ ಮೂರು ಪ್ರಮುಖ ಊರುಗಳಲ್ಲಿ ನನ್ನ ಗಾಂಧಿ ರೂಪಗೊಂಡ. ಗುಳೇದಗುಡ್ಡದಲ್ಲಿದ್ದಾಗ “ಗಾಂಧಿ ಮತ್ತು ಗೂಂಡಾ” ಬರೆದೆ, ಮಹಾಲಿಂಗಪುರದಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿಗಳಿಂದ ಅದರ ಪ್ರದರ್ಶನವಾಯಿತು. ಇತ್ತೀಚಿಗೆ ಕೂಡಲಸಂಗಮದಲ್ಲಿ ನನ್ನ “ಗಾಂಧಿ ಅಂತಿಮ ದಿನಗಳು” (2013) ರಂಗಪ್ರದರ್ಶನವಾಯಿತು. ಆದರೆ ಸ್ಥಳೀಯ ಬಾಗಲಕೋಟೆಯಲ್ಲಿಯೇ ಈ ನನ್ನ ಗಾಂಧಿ ಮಾತಾಡಿರಲಿಲ್ಲ ಎಂಬ ಬೇಸರ ನನಗಿತ್ತು. ಆದರೆ ಗಾಂಧಿ ಯಾವಗಲೂ ನಿಧಾನ, ಬರಬೇಕಾದಾಗಲೇ ಬರುತ್ತಾನೆ. ಈ ಸಾರಿಯೂ ಬಂದ ಅತ್ಯಂತ ಗಂಭೀರವಾಗಿ, ಪರಿಣಾಮಕಾರಿಯಾಗಿ. 
    ಅಂದಹಾಗೆ, ಸರಿಯಾಗಿ ಸಾಯಂಕಾಲ 6.30 ಕ್ಕೆ ಮಾತನಾಡಲಾರಂಭಿಸಿದ ನಾನು, ಭಾಷಣ ಮುಗಿಸಿದಾಗ ಸಮಯ 8 ಗಂಟೆ. ಒಂದೂವರೆ ಗಂಟೆಗಳ ಈ ವಾಗ್ಝ್‍ರಿಗೆ ಜನ ಹುರುದುಂಬಿಸಿ, ಹರಸಿ ಕಳುಹಿಸಿದ ಅಭಿಮಾನಿಗಳ ರೀತಿಗೆ ನಾನು ಚಿರಋಣಿ. ಪುಸ್ತಕಗಳ ಭರ್ಜರಿ ವ್ಯಾಪಾರ, ಕಿಕ್ಕಿರಿದ ಸಭಾಂಗಣ, ಬೀಳೂರು ಗುರುಬಸವ ಸಮಾಧಿಯ ದರ್ಶನ, ಜೊತೆಗೆ ಬಾದಾಮಿಯ ಅಭಿಮಾನಿಗಳು, ಹೆಂಡತಿ, ಮಕ್ಕಳು ಎಲ್ಲವೂ ಯೋಗಾಯೋಗ.
        1869 ಅಕ್ಟೋಬರ್ 2 ರಂದು ಹುಟ್ಟಿ, 1948 ಜನೇವರಿ 30 ರಂದು ಕೊಲೆಯಾಗುವ ಗಾಂಧಿಯ ಆಯುಷ್ಯ 78 ವರ್ಷ, 3 ತಿಂಗಳು, 28 ದಿನಗಳು. ಆದರೆ ನನ್ನ ಚರ್ಚೆಯ ಗಾಂಧಿಯ ಬದುಕು ಕೇವಲ ಆರೇ ತಿಂಗಳದ್ದು. 1947 ಜುಲೈ 18 ರಿಂದ 1948 ಜನೆವರಿ 30 ರ ವರೆಗಿನ ಈ ನನ್ನ ಗಾಂಧಿಯೊಂದಿಗೆ ಮಾನಸ ಪುತ್ರ ಮಹಾದೇವ ದೇಸಾಯಿ ಇಲ್ಲ, 62 ವರ್ಷ ಸಂಸಾರ ಮಾಡಿದ ಮಡದಿ ಬಾ ಇಲ್ಲ, ಇವನ ಕರಸಂಜಾತರಾದ ಪಟೇಲ-ನೆಹರೂ ಇವನೊಂದಿಗಿದ್ದೂ ಇವನೊಂದಿಗಿಲ್ಲ. ಒಂದೆಡೆ ದೇಶ ವಿಭಜನೆಯ ನೆಪದಲ್ಲಿ 42000 ಸಂಸಾರಗಳು, ನಿರಾಶ್ರಿತರಾದ ಒಂದು ಕೋಟಿ ಜನ, ನಿರಂತರವಾಗಿ ಕಾಡುತ್ತಿದ್ದ ದೆಹಲಿಯ ಮಳೆ, 47 ರ ವಯಸ್ಸಿನ ಕೊಲೆಗಡುಕ ಸುಹರ್‍ವರ್ಧಿ, ಪ್ರಶ್ನೆಗಳ-ಪತ್ರಗಳ ಸುರಿಮಳೆ, ಒಂಟಿತನ, ಕೆಮ್ಮು, ನಿದ್ರಾಹೀನ ರಾತ್ರಿಗಳು ಮತ್ತು ಎಲ್ಲ ತಲ್ಲಣಗಳ ಮಧ್ಯ ಸಮಾಧಾನಿಸುತ್ತಿದ್ದ ಈ ಸಾಲುಗಳು –
ವೇದ ಪುರಾನ ಕುರಾನ ಯಹ ಸಬ ಕಹಾನಿ
ಗಂಗಾ ಜಮುನಾ ತೀರಥ ಯಹಬಸಬ ಪಾನಿ
ತೋ ಮತ ಹೋ ಇನಕಾ ಅಭಿಮಾನಿ
ಯಹ ಸಬ್ ಛೋಡ್, ಹೋ ಆತಮ ಗ್ಯಾನಿ
      ಇಷ್ಟೆ, ಇಂದು ನಾನೆತ್ತಿಕೊಂಡ ಗಾಂಧಿ. ಒಂದು ಬಾರಿಗೆ 25 ಲಕ್ಷ ಜನರನ್ನು ಸಭೆಗಳಲ್ಲಿ ಸೇರಿಸಬಲ್ಲವನಾಗಿದ್ದ ಗಾಂಧಿ ಈಗ ಮುಷ್ಠಿಯಷ್ಟು ಶ್ರದ್ಧಾವಂತರನ್ನು ನಂಬಿ ಸಮಾಧಾನಿಯಾಗಿರಬೇಕಿತ್ತು. ಈ ಸ್ಥಿತಪ್ರಜ್ಞೆ, ನಿರ್ಲಿಪ್ತ, ನಿರ್ವಿಕಾರದ ಗಾಂಧಿ ನನಗೆ ಅದೆಷ್ಟೋ ವರ್ಷ ಬರೀ ಪ್ರಶ್ನೆಯಾಗಿ ಕಾಡಿ, ಕೃತಿಗಳಾಗಿ ಹೊರಬಂದು, ನಾಟಕ ಮತ್ತು ಭಾಷಣಗಳಾಗಿ ಮಾತಾಡಿದ್ದೆನೆ ಹೊರತು ಬದುಕಿನ ಕ್ರಮವಾಗಿರಲಿಲ್ಲ. ಆದರೆ ಈ ಸಾರಿ ತ್ರಿಕರ್ಣ ಪೂರ್ವಕಾಲವಾಗಿ ಆತನನ್ನು ನಂಬಿದ್ದರಿಂದಲೇನೋ ಮತ್ತೆ ಬದುಕು, ಭರವಸೆ ಸತ್ಯವಾಯಿತು. 
    ನನ್ನ ಪಾಲಿಗೆ ಗಾಂಧಿ ಎಂದರೆ ನಂಬಿಕೆ. ಆತ ನಂಬಿ, ಮೋಸ ಹೋಗಿ, ಮಹಾತ್ಮನಾದ. ಮೋಸ ಹೋಗುವುದರಲ್ಲಿ ಇರುವ ಸುಖ ಮೋಸ ಮಾಡುವುದರಲ್ಲಿ ಇಲ್ಲ. ಮೊಲೆಕೊಟ್ಟು ಜಾರಣಿಯಾಗುವವಳಿಗಿಂತ ಮೊಲೆ ಕುಡಿಯುವ ಮಗು ದೇವ ಸ್ವರೂಪಿ. ಅದು ನಂಬಿಕೆ, ಅವಳು ಜಾರಣಿ.
        ಇಂದಿನ ಈ ವೇದಿಕೆಯ ಆರಂಭದಲ್ಲಿ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಗೀತ ವಿಭಾಗದಿಂದ ಗಾಂಧಿ ಭಜನ್ ಬಿಟ್ಟರೆ, ಉದ್ಘಾಟನೆ, ಅಧ್ಯಕ್ಷಿಯ ಶರಾ, ಪರಿಚಯ ಏನೂ ಇಲ್ಲ. ನಾನು, ನನ್ನ ಗಾಂಧಿ ಎದುರಿಗೆ ಪ್ರಜ್ಞಾವಂತ ಕೇಳುಗ ಬಳಗ.
   ಅಕ್ಟೋಬರ್ 1 ರಾತ್ರಿ ಬೆಂಗಳೂರಿನ ಪೀಣ್ಯಾ ದಾಟಬೇಕಾದರೆ ರಾತ್ರಿ 1.30. ಬಾಗಲಕೋಟೆಗೆ ಹೋದಾಗ ಬೆಳಗಿನ 10 ಗಂಟೆ. ಯಥಾ ಪ್ರಕಾರ ಅದೇ ಅನುಗ್ರಹ-ಆರಾಧನಾ ಹೋಟೆಲ್, ಐದು ತಿಂಗಳಲ್ಲಿ ಇದು ನನ್ನ ಮೂರನೇ ವಾಸ್ತವ್ಯ ನಿರಾತಂಕ ನಿದ್ರೆ. ಮಧ್ಯಾಹ್ನ 1.30 ಕ್ಕೆ ನವನಗರದ 50ನೇ ಸೆಕ್ಟರ್‍ನಲ್ಲಿರುವ ಯಡಹಳ್ಳಿ ವಕೀಲರ ಭವ್ಯ ಬಂಗಲೆಯಲ್ಲಿ ನಾನು, ಶ್ರೀ ವಿನೋದ, ಶ್ರೀ ಬಸವರಾಜ ಭಗವತಿ, ಸಿನಿಮಾ ಪ್ರೀತಿಯ ನಗರದ ಹಿರಿಯ ವೈದ್ಯ ಡಾ. ಸೋರೆಗಾವಿ, ಡಾ.ಯೋಗಪ್ಪನವರ ಮತ್ತು ಇತರರೊಂದಿಗೆ ಕುಟುಂಬ ಸಮೇತನಾಗಿ ಮಾತು, ಪ್ರೀತಿ ಮತ್ತು ಊಟ. ಈ ಮನೆಯಲ್ಲಿಯ ಅದ್ಭುತ, ಮಾರ್ಬಲ್‍ನಲ್ಲಿಯ ಮೀರಾಬಾಯಿಯ ಮೂರ್ತಿ. ಇವಳೊಂದು ನನ್ನ ಬಾಳಿನ ಅಳಿಯದ ರೋಮಾಂಚನ. ಬಾಗಲಕೋಟೆಗೂ ನನಗೂ ನೆನಪಿನ ಬಂಧನ.


        ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದಾಗ ಅಭಿಮಾನದಿಂದ ಬಾಚಿ ತಬ್ಬಿದವರು ಅದೆಷ್ಟು ಹಿರಿಯರು! ಎದೆಯುಬ್ಬಿಸಿ ಅಭಿಮಾನ ಪಟ್ಟವರು ಅದೆಷ್ಟು ಕಿರಿಯರು! ಆದರೆ ಮೋಹಗೊಂಡು ಎಲ್ಲಿಯೂ ನಿಲ್ಲುವ ಹಾಗಿರಲಿಲ್ಲ. ಡಾ|| ಮುಕ್ತಾ ಅವರ ಆತಿಥ್ಯ ಅವರ ಕಾರಿನೊಂದಿಗೆ ಸಿದ್ಧವಾಗಿತ್ತು.
    ಡಾ|| ಮುಕ್ತಾ ಹಾಗೂ ಅವಳ ಒಟ್ಟು ಕುಟುಂಬ ಕಳೆದ ನಾಲ್ಕು ತಿಂಗಳಿಂದ ನನಗಾಗಿ ಕಾಯುತ್ತಿತ್ತು. ಇಲ್ಲಿಂದ 70 ಕಿ.ಮಿ ಹೋದರೆ ಅವಳ ಪ್ರೀತಿಯ ಫಾರ್ಮ ಹೌಸ್. ಇಲ್ಲಿ ಎರಡು ದಿನನೆಮ್ಮದಿಯಾಗಿರಬೇಕೆಂದು ನನ್ನ ಮಹದಾಸೆ. ಆಶೆಗಳ ಹಾವಳಿಯಲ್ಲಿ ದೇಹದಣಿದದ್ದೇ ಕೆಲವೊಮ್ಮೆ ಗೊತ್ತಾಗುವುದಿಲ್ಲ. ವಿಶ್ರಾಂತಿಯ ಕನಸು ಮರಿಚಿಕೆಯಾಗಿಯೇ ಉಳಿಯುತ್ತದೆ. ಈಗ ಇದೆಲ್ಲದಕ್ಕೂ ಡಾ|| ಮುಕ್ತಾ. ಜಗಳವಾಡಲು, ಮುನಿಸುಕೊಳ್ಳಲು ಪ್ರೀತಿಯ ಗೆಳೆಯ ರಾಮು(ನಾಯಿ). ದಿನಾಂಕ 2 ರಂದು ರಾತ್ರಿ ಇಲ್ಲಿ. ಇಂದು ಸೇರಿದ ನಾವು ದಿನಾಂಕ 05 ರವರೆಗೆ ಪ್ರೀತಿಯ ಅಮಲಿನಲ್ಲಿ.



   ಇನ್ನೆರಡು ದಿನ ಧಾರವಾಡದಲ್ಲಿ ತಮ್ಮ, ತಂದೆ-ತಾಯಿ, ಮೈಯೆಲ್ಲ ಮಾತಾಡುವ ಮಗಳು, ಮುಟ್ಟುವ ಮುಂಚೆಯೇ ನಕ್ಕು ಬಿಡುವ ಮಗ, ನಮ್ಮ ಸಂಸಾರ ಸಿನಿಮಾ ನಿರ್ದೇಶಕಿ ನೀತು, ಮಧ್ಯ ಬೆಂಗಳೂರಿನ ಕಛೇರಿಯಿಂದ ರಿಂಗಣಿಸುವ ಫೋನುಗಳು, ಎಲ್ಲದಕ್ಕೂ ಮೌನ, ಮಹಾಮೌನ.
   



No comments:

Post a Comment