Total Pageviews

Tuesday, September 30, 2014

ಕವಿ ಅಳಿದೂ, ಕವಿತೆ ಉಳಿಯುತ್ತದೆ.



     ಸ್ವಾಭಿಮಾನಿ ಕರ್ನಾಟಕ ವೇದಿಕೆ, ಪುಷ್ಪದೀಪಿಕಾ ಮತ್ತು ಕಣ್ವ ಪ್ರಕಾಶನ ಬೆಂಗಳೂರು - ಈ ಮೂರು ವೇದಿಕೆಗಳ ಆಶ್ರಯದಲ್ಲಿ ದಿನಾಂಕ: 28/09/2014 ರಂದು ಸಂಯುಕ್ತ ಕರ್ನಾಟಕದ ಪ್ರತಿ ಭಾನುವಾರ, ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾಗುವ ನನ್ನ ‘ಕಾವ್ಯಕ್ಕೆ ಉರುಳು’ ಅಂಕಣದ ಮೊದಲ ಭಾಗದ ಬಿಡುಗಡೆಯ ಸಮಾರಂಭ ಜರುಗಿತು. ಸರಿಯಾಗಿ 11 ಗಂಟೆಗೆ ಪ್ರಾರಂಭವಾದ ಸಮಾರಂಭ ಮಧ್ಯಾಹ್ನ 3.30 ರ ವರೆಗೂ ನಿರಂತರವಾಗಿ ನಡೆದುದು ಬೆಂಗಳೂರಿನಲ್ಲಿ ಒಂದು ಸಾಧನೆಯೇ ಸರಿ. ಯಾಕೆಂದರೆ ಬೆಂಗಳೂರಿಗರ ಪಾಲಿಗೆ ಒಂದು ಮಾತು ಸತ್ಯ. ಎಲ್ಲ ಇರುವ, ಸಿಗುವ ಬೆಂಗಳೂರಿನಲ್ಲಿ ತಣ್ಣಗೆ ಒಂದಿಷ್ಟು ನಿದ್ರೆ, ಮಾತು ಮತ್ತು ಪ್ರೀತಿಗೆ ಸಮಯ ಮಾತ್ರ ಇಲ್ಲ. ಹೀಗೆ ಸಮಯದ ತುಟಾಗ್ರತೆಯಿಂದ ನರಳುವ ಬೆಂಗಳೂರಿಗರನ್ನು ಕೂಡಿಹಾಕಿ ಕೂಡ್ರಿಸುವುದು, ಅದೂ ನಾಲ್ಕೂವರೆ ಗಂಟೆಗಳ ಕಾಲ! ಇದು ಪವಾಡವಲ್ಲದೆ ಮತ್ತೇನು?
      ಸಮಾರಂಭಕ್ಕೆ ಎಲ್ಲಕ್ಕೂ ಮೊದಲು ಬಂದವರು ಪ್ರೊ. ಚಂಪಾ, ಆನಂತರ ನನ್ನ ಕಾಲೇಜು ಶಿಕ್ಷಣ ಇಲಾಖೆಯ ಡೈರೆಕ್ಟರ್ ಡಾ. ಬಿ.ಎಲ್ ಭಾಗ್ಯಲಕ್ಷ್ಮಿ, ಇವರೊಂದಿಗೆ ಹರಟೆಯಲ್ಲಿ ಮಗ್ನನಾಗಿರುವಾಗ ಮೌನವಾಗಿ, ಮುಗ್ಧವಾಗಿ ಎಲ್ಲಿಂದಲೋ ನುಸುಳಿದ್ದ ಮಹಾ ಪುಸ್ತಕ ಮೋಹಿ ಡಾ. ಸಿದ್ಧಲಿಂಗಯ್ಯ ಸದ್ಧಿಲ್ಲದೆ ತಮ್ಮ ಪುಸ್ತಕ ಖರೀದಿಯ ಖುಷಿಯಲ್ಲಿ ವಿಹರಿಸುತ್ತಿದ್ದರು. ರಾತ್ರಿಯೆಲ್ಲ ಬಳ್ಳಾರಿಯ ಪ್ರವಾಸ ಮುಗಿಸಿಕೊಂಡು ಕಳೆದ ಒಂದು ವಾರದಿಂದ ಟೌನ್‍ಹಾಲ್ ಮುಂದೆ ಮುಷ್ಕರದಲ್ಲಿ ನಿರತರಿದ್ದೂ ಬಂದು ಸೇರಿದವರು ಕಾಮ್ರೆಡ್ ಡಾ. ಸಿದ್ಧನಗೌಡ ಪಾಟೀಲ, ಮತ್ತೆ ಬಂದವರು ಸರಕಾರಿ ವ್ಯವಸ್ಥೆಯ ಅದು ರಾಜ್ಯದ ಖಜಾನೆ ಇಲಾಖೆಯಲ್ಲಿದ್ದೂ ಪ್ರಭುತ್ವದ ವಿರುದ್ಧ ಗುಡುಗುವ ಪಾರದರ್ಶಕ ವ್ಯಕ್ತಿತ್ವ ಉಳಿಸಿಕೊಂಡಿರುವ ಶ್ರೀಮತಿ ಭಾಗ್ಯಲಕ್ಷ್ಮಿ ಬಂದರು.
     ಮುಂದುವರೆದಂತೆ, ಮುಂದಿನ ಚುನಾವಣೆಯ ಸ್ಪರ್ದಾಕಾಂಕ್ಷಿ, ಬೆಂಗಳೂರಿನ ಅನಿಕೇತನ ವೇದಿಕೆಯ ಅಧ್ಯಕ್ಷ ಮಾಯಣ್ಣ, ಸ್ವಾಭಿಮಾನದ ಖಜಾಂಚಿ ಗೆಳೆಯ ಗಂಗಾಧರ ಪಂಡಿತ್, ಕರ್ನಾಟಕ ರಾಜ್ಯ ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷರು, ಜಲಮಂಡಳಿ, ತನಿಖಾ ಇಲಾಖೆ, ಅಂಚೆ ಪ್ರಧಾನ ಕಛೇರಿಯ ಪ್ರಧಾನ ಅಧಿಕಾರಿ, ಬೆಂಗಳೂರು ಮಿರರ್ ಪತ್ರಿಕೆಯ ಸಂಪಾದಕರು ಹಾಗೂ ಬೀದರಿನಿಂದ ಬೆಂಗಳೂರುವರೆಗಿನ ಓದುಗ ಬಳಗ, ಬಹಳ ವರ್ಷಗಳಿಂದ ಬೆಂಗಳೂರು ನಿವಾಸಿಗಳಾದ ನನ್ನ ದೊಡ್ಡಪ್ಪ-ದೊಡ್ಡವ್ವ, ಮೈಸೆಮ್‍ದಲ್ಲಿ ಮಹತ್ವದ ಸ್ಥಾನದಲ್ಲಿರುವ ಸಹೋದರ ಉದಯ, ಮಗ ಶ್ರೀನಿಧಿ, ಮುಖ್ಯವಾಗಿ ಉದಯ ಟಿವಿಯ ಮಾಧ್ಯಮ ಮಿತ್ರರು, ದೂರದ ಗುಲ್ಬರ್ಗಾದಿಂದ ರೊಟ್ಟಿಗಳ ಬಾಕ್ಸ್‍ಗಳನ್ನು ಪ್ರೀತಿಯಿಂದ ತಂದ ಕವಿ ಗೆಳತಿ ಅನುಪಮಾ ಹೀಗೆ ಒಟ್ಟಾರೆ ಪ್ರೀತಿ ಮತ್ತು ಸಂಬಂಧಗಳ ಮಹಾ ಜಾತ್ರೆ ಈ ಸಮಾರಂಭ.
    ಪ್ರತಿ ಸಂಭ್ರಮದ ಮೇಲೂ ನೋವಿನ ಒಂದು ಸಣ್ಣ ಮೋಡ. ಇದೇ ದಿನ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಹಿರಿಯ ಕವಿ ಗೆಳೆಯ ಶಂಕರ ಕಟಗಿ, ಡಾ. ರಾಜೇಶ್ವರಿ ದೊಡ್ಡರಂಗೇಗೌಡ, ಇದೇ ವೇದಿಕೆಯಲ್ಲಿ ಒಂದೊಮ್ಮೆ ನನ್ನ ಪಕ್ಕದವರಾಗಿದ್ದ ಚಿಂತಕ ಅನಂತಮೂರ್ತಿಯವರ ನಿಧನದ ವಾರ್ತೆಗಳು, ನನ್ನ ಸಮಾರಂಭಗಳಲ್ಲಿ ಕಣ್ಣ ಕನ್ನಡಿಯಾಗಿರುತ್ತಿದ್ದ ಅನೇಕ ಗೆಳೆಯ-ಗೆಳತಿಯರು ಹಾಗೆ ತಲೆಯಲ್ಲಿ ಸುತ್ತುತ್ತಿದ್ದರೆ, ಮನದ ಮೂಲೆಯಲ್ಲಿ “ಜೋಕರ್” ಹಾಡುತ್ತಿದ್ದ –
ಕಲ್ ಖೇಲ ಮೇ, ಹಮ್ ಹೊ ನ ಹೊ
ಗರ್ದಿಶ್ ಮೆ ತಾರೆ ರಹೆಂಗೆ ಸದಾ
    ಅತ್ಯಂತ ಗಂಭೀರವಾಗಿದ್ದ ಸಮಾರಂಭವನ್ನು ಹಾಡ-ಹಡಗಿನಲ್ಲಿ ಹಗುರಾಗಿ ತೇಲಿಸಿಕೊಂಡು ಮೂರುವರೆ ಗಂಟೆಗಳ ಕಾಲದ ಕಡಲ ಯಾತ್ರೆಯನ್ನು ಸುಗಮಗೊಳಿಸಿದವರು ಉದಯ ಲಿಟಲ್ ಚಾಂಪಿಯನ್ಸ್‍ನ ಹೀರೋಗಳಾದ ಮಲ್ಲಿಕಾರ್ಜುನ ಹೂಗಾರ ಹಾಗೂ ಆತನ ಸಹೋದರ ಪುಟ್ಟರಾಜ. ಅವರಿಂದಾಗಿ ನಮ್ಮೊಂದಿಗೆ ಬಸವಣ್ಣ, ಸಿ.ಅಶ್ವಥ್, ಜಿ.ಎಸ್.ಎಸ್, ರಾಜಕುಮಾರ ಹೀಗೆ ನೂರಾರು ನೆನಪುಗಳ ಅನಾವರಣ ಭಾವ ತೀರದ ಪಯಣ.
   ನಿರಾಳವಾಗಿತ್ತು ಸಮಾರಂಭ. ಇದರ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕಾದುದು ಶಂಕರ ಹೂಗಾರ ಅವರಿಗೆ. ಹಾಗೆಯೇ ಒಂದಿಷ್ಟು ಕಣ್ವ ಮತ್ತು ಸ್ವಾಭಿಮಾನಿ ಬಳಗಕ್ಕೂ ಕೂಡ. ಪ್ರಭುತ್ವ ಮತ್ತು ಪ್ರತಿರೋಧದ ಪರಂಪರೆಯನ್ನು ಬಿಚ್ಚಿಟ್ಟವರು ಡಾ.ಸಿದ್ದನಗೌಡ ಪಾಟೀಲ, ಅದೇ ರೀತಿಯಲ್ಲಿ ಉರಿ ಉರಿಯಾದ ಆಲೋಚನೆಗಳನ್ನು, ಬೆಂಕಿ ಹೂಗಳನ್ನು ತಮ್ಮ ಭಾಷಣದ ಮೂಲಕ ಹಾಸಿದವರು ಭಾಗ್ಯಲಕ್ಷ್ಮಿ, ಅಕ್ಷರ ಲೋಕದ ಅದ್ಭುತಗಳನ್ನು ತಬ್ಬಿ ಮಾತಾಡಿದವ ಗೆಳೆಯ ರಾಜು ಮಳವಳ್ಳಿ, ಕರುಳು ತುಂಬ ಕಳ್ಳು, ಹೊಟ್ಟೆ ತುಂಬ ಊಟ, ಕಣ್ತುಂಬ ನಿದ್ರೆ ಎಂಬ ಬೆಂಗಳೂರಿಗರ ಸಂಡೇ ಸಿಸ್ಟಮ್ ಬದಲಾಗಬೇಕಿದೆ ಎಂದು ಹಂಬಲಿಸಿದ. ನನ್ನ ತಲ್ಲಣ, ತಾಕಲಾಟ ಪದ ವಿಶ್ಲೇಷಣೆಯನ್ನು ಕವಿತೆಯಂತೆ ಸಂಭ್ರಮಿಸಿದವರು ಚಂಪಾ, ಬೆಂಬಲಿಸಿದವರು ಬೆಂಗಳೂರಿನ ಮಾಜಿ ಮೇಯರ್ ಮಗಳು, ಕಾಲೇಜು ಇಲಾಖೆಯ ನಿರ್ದೇಶಕಿ ಡಾ. ಬಿ.ಎಲ್.ಭಾಗ್ಯಲಕ್ಷ್ಮಿ. ಎಲ್ಲದಕ್ಕೂ ಕಳಸವಿಟ್ಟಂತೆ “ಬದುಕಿನಲ್ಲಿ ಪುಸ್ತಕಗಳನ್ನು ಕೊಂಡೋದಿ, ಲೇಖಕನ ಫೋನ್ ಸಂಖ್ಯೆಗಾಗಿ ಅವರಿವರನ್ನು ಸಂಪರ್ಕಿಸಿ, ಪ್ರಥಮವಾಗಿ ನಾನು ಮಾತಾಡಿದ್ದು ರಾಗಂ” ರನ್ನು ಎಂದು ಅಭಿಮಾನಿಸಿ, ಸಂಭ್ರಮ ಪಟ್ಟವರು ಸಿದ್ಧಲಿಂಗಯ್ಯ. ದೊಡ್ಡವರ ಮನಸ್ಸು ದೊಡ್ಡದಾಗಿರುತ್ತದೆ, ಅವರ ಮಾತೂ ಕೂಡ ಎನ್ನುವುದಕ್ಕೊಂದು ಸಾಕ್ಷಿ ಇದು.
 
   ರಾತ್ರಿ ಕವಿಯತ್ರಿ ಸುಜಾತಾ ವಿಶ್ವನಾಥ, ಅಂತರ್ ರಾಷ್ಟ್ರೀಯ ಸಾಫ್ಟ್‍ವೇರ್ ಕಂಪನಿಯಲ್ಲಿದ್ದುಕೊಂಡು ಬೆಂಗಳೂರಿನ ಯುವಕ-ಯುವತಿಯರು ನಮ್ಮ ವಚನಕಾರರ ಗೆಳೆಯ-ಗೆಳತಿಯರಾಗಬೇಕು, ಅದನ್ನು ನಿಮ್ಮ ಭಾಷಣ ಮಾಡುತ್ತದೆ., ಕಾರಣ ನವೆಂಬರ್ ಎರಡನೇ ಶನಿವಾರ ರಾಜಾಜಿನಗರದ, ಬಸವೇಶ್ವರ ಕಾಲೇಜಿನ ಸಂಜೆ ಬೆಳದಿಂಗಳಲ್ಲಿ ನನ್ನ ‘ನರಸಾಯದ ಸಖಿ-ಸಾಕಿ’ ಅಕ್ಕಮಹಾದೇವಿಯ ಕುರಿತು ಮಾತನಾಡಿಸಲು ದುಂಬಾಲು ಬಿದ್ದ ರೇಣುಕಾಪ್ರಸಾದ್, ‘ಕಾವ್ಯಕ್ಕೆ ಉರುಳಿ’ನ ಭಾಷೆಯ ಮೋಹಕ್ಕೆ ಬಿದ್ದ ಕನ್ನಡದ ಹಿರಿಯ ನಟರೂ, ಅರ್ಜುನ್‍ಸರ್ಜಾ ಅವರ ಮಾವನವರೂ ಆದ ನಟ ರಾಜೇಶ್ ಎಲ್ಲ ಒಂದು ಪ್ರವಾಹ.
ರಾತ್ರಿಯಾಗಿದೆ, ಈಗ ನಿಶ್ಯಬ್ದ. ನಾನು-ರಾತ್ರಿ-ಬಿಸಿಹಾಲು ಸಕ್ಕರೆಯ ಸಂಬಂಧ. ನಾವಿಬ್ಬರೂ ಮಾತನಾಡುತ್ತಲೇ ಇರುತ್ತೇವೆ. ಬಾದಾಮಿಯ ಕವಿ ಮಿತ್ರನೊಬ್ಬನ ಸಾಲುಗಳು ನೆನಪಾಗುತ್ತಿವೆ

ಪಠ್ಯ ಪಾಠವಿಲ್ಲ, ಗೋಡೆಗಳಿಲ್ಲ, ಮೌನವೇ ಎಲ್ಲ.
ಅಸಲಿಗೆ ಅದರೆದುರು ನಾನೇ ಇಲ್ಲ
ಅದು ಕಲಿಸುತ್ತದೆ, ನಾನು ಕಲಿಯುತ್ತಿದ್ದೇನೆ.
   ಸಭೆ ಮುಗಿಸಿ ನಾನು ಮನೆಗೆ ಬರುತ್ತೇನೆ, ಲೋಕದ ಚಿಂತೆ-ಸಂತೆ ಮುಗಿಸಿದ ಗೆಳೆಯ ಶಂಕರ ಕಟಗಿಯ ಸಂಪಿಗೆ ತಾಯವ್ವನ ಹೆಣ ರಾಜಧಾನಿಯಿಂದ ಹಳ್ಳಿಗೆ ಹೊರಡುತ್ತದೆ. ಕವಿ ಅಳಿಯುತ್ತಾನೆ, ಕವಿತೆ ಉಳಿಯುತ್ತದೆ.
ಟೂಟ್ ಗಯಿ ಮರ್ಕತ್ ಕಿ ಪ್ಯಾಲಾ
ಖಾಲಿ ಹೋಗಯಿ ಮಧುಶಾಲಾ

No comments:

Post a Comment