ಮಧ್ಯಾಹ್ನ
ಬೆಂಗಳೂರು ಬಿಟ್ಟು, ಸಾಯಂಕಾಲವಾಗುತ್ತಲೇ ದುರ್ಗಕ್ಕೆ ಬಂದಿಳಿದಾಗ ಸ್ವಲ್ಪ ಬಿರುಸುಗೊಂಡ ಮಳೆ. ರಸ್ತೆಯ
ಬದಿಯ ಚಹಾದ ಅಂಗಡಿಯಲ್ಲಿ ನನ್ನ ಕಾರು ಚಾಲಕ, ಸುಲ್ತಾನ್‍ನನ್ನು ಕರೆದುಕೊಂಡು ಚಹಾ ಕುಡಿಯುವಾಗ ಪ್ರಧಾನಿ
ಮೋದಿಯ ಭಾಷಣ ಅಲೆ ಅಲೆಯಾಗಿ ರೆಡಿಯೋದಿಂದ ನಮ್ಮ ಕಿವಿಗಳಿಗೆ.
ಮಠದ ಮ್ಯಾನೇಜರ್ ಪರಮಶಿವಯ್ಯ, ಉಪನ್ಯಾಸಕ ಮಿತ್ರ
ಜಯಣ್ಣ, ಆಡಳಿತಾಧಿಕಾರಿ ಮಲ್ಲಿಕಾರ್ಜುನಪ್ಪ ಹಾಗೂ ಶ್ರೀಗಳ ಪ್ರೀತಿಗೆ ಬಾಗಿ ನಾನು ದುರ್ಗಕ್ಕೆ ಬಂದಿದ್ದೆ. ಯಾವುದೇ ಆಧುನಿಕ ರಂಗಭೂಮಿಯನ್ನೂ
ನಾಚಿಸುವಂಥ ಮಠದ ಆವರಣದೊಳಗಿನ ವಾತಾವರಣ,
ಜೊತೆಗೆ ‘ಅಲ್ಲಮ’ದ ಕೋಣೆ ಸಂಖ್ಯೆ 6 ರಲ್ಲಿ ನನ್ನ ವಾಸ್ತವ್ಯದ
ವ್ಯವಸ್ಥೆಯಾಗಿತ್ತು. ತಿಂಡಿಯ ನಂತರ ಒಂದು ಕ್ಷಣ ಬೆಟ್ಟಕ್ಕೆ ಮೊಗಮಾಡಿ ನಿಂತುಕೊಂಡೆ, ಎಷ್ಟೊಂದು ನೆನಪುಗಳು!
ಬಹಳ ಹಿಂದೆ ನನ್ನ ಸೋದರ ಮಾವನ (ಮಲ್ಲಿಕಾರ್ಜುನ
ಮಠದ) ವೃತ್ತಿಯ ಆರಂಭಿಕ ದಿನಗಳಲ್ಲಿ ನಾನಿಲ್ಲಿಗೆ ನನ್ನ ತಂಗಿಯ ಪ್ರೀತಿಯ ಸಂದೇಶಿಯಾಗಿ ಬಂದಿದ್ದೆ.
ಬಾಲ್ಯದಲ್ಲಿ ತ.ರಾ.ಸು ಅವರ ದುರ್ಗಾಸ್ಥಮಾನ ಓದಿದ ನೆನೆಪೂ ಕೂಡ. ಹೆಜ್ಜೆ ಹೆಜ್ಜೆಗೂ ರಕ್ತ ರಾತ್ರಿ,
ಕಂಬನಿಯ ಕುಯಿಲು ಮತ್ತು ತಿರುಗು ಬಾಣದ ನೆನಪು. ಹಿಂದಿನ ಭೇಟ್ಟಿಯಲ್ಲಿ ಭರಮಣ್ಣ ನಾಯಕನ ಕಾಲದ ವ್ಯಾಯಾಮ
ಶಾಲೆಯಲ್ಲಿ ಬಂಡೆಗಳ ಮೇಲೆ ಜಾರಿದ ನೆನಪು.
ಸಂಜೆ 6 ಗಂಟೆಗೆ ಶರಣರಿಂದ ಬುಲಾವ್. ಅರ್ಧ ಗಂಟೆಯ
ಉಭಯಕುಶಲೋಪರಿ. ಸರಿಯಾಗಿ ಒಂದು ವರ್ಷದ ಹಿಂದೆ ನಾವಿಬ್ಬರೂ ಮಾನ್ವಿಯಲ್ಲಿ ಒಂದೇ ವೇದಿಕೆಯನ್ನು ಹಂಚಿಕೊಂಡ
ಕ್ಷಣಗಳ ನೆನಪು. ಮುಂದಿನ ಯೋಜನೆ, ಯೋಚನೆ, ವಿಚಾರ ಏನೆಲ್ಲ.
ರಾಧಾಕೃಷ್ಣರ ಜನ್ಮ ದಿನಾಚರಣೆಯನ್ನು ನೆಪವಾಗಿಸಿಕೊಂಡು
ಈ ದೇಶದ ಗುರು ಪರಂಪರೆಯ ಸುತ್ತ ನಾನು 50 ನಿಮಿಷಗಳ ಕಾಲ ಸುತ್ತಾಡಿ ಬಂದೆ. ಶರಣರೂ ಹೆಚ್ಚು-ಕಡಿಮೆ
ಅಷ್ಟೆ ಅವಧಿ. ಅಕ್ಷರ ಗುರು, ವೈಧಿಕ ಗುರು ಹಾಗೂ ಸೈದ್ಧಾಂತಿಕ ಗುರುಗಳನ್ನು ಪರಿಚಯಿಸುತ್ತಾ - ಬಸವಣ್ಣ
ಒಬ್ಬ ಸೈಧಾಂತಿಕ ಗುರು. ಕಾರಣ 770 ಶರಣ ಗಣಗಳನ್ನು ಕನಿಷ್ಟ 36 ಜನ ಶರಣೆಯರನ್ನೂ ಕರೆದುಕೊಂಡು ಹೊರಾಟಕ್ಕಿಳಿದ
ಬಸವಣ್ಣನಿಗೆ, ತನ್ನ ಮುಂದಿದ್ದ ಗುರು ಪರಂಪರೆಯಲ್ಲಿದ್ದವರಿಗಿಂತಲೂ ತಾನು ಹೇಗೆ ಭಿನ್ನವಾಗಬೇಕು ಎಂಬ
ಸ್ಪಷ್ಟತೆ ಇತ್ತು.
ಹೀಗಾಗಿಯೇ ಆತ ಸೈದ್ಧಾಂತಿಕ ಗುರುವಾಗಲು ಸಾಧ್ಯವಾಯಿತು. ಅನುಭವ ಎಂದರೆ ಅಲ್ಲಮ,
ವಿರಕ್ತಿ ಎಂದರೆ ಅಕ್ಕಮಾಹಾದೇವಿ, ಶಕ್ತಿ ಎಂದರೆ ಸಿದ್ಧರಾಮ ಎನ್ನುವಂತೆ, ಭಕ್ತಿ ಎಂದರೆ ಬಸವಣ್ಣ ಎನ್ನುವ
ಸಿದ್ಧಿಯಾಯಿತು, ಸಿದ್ಧಾಂತವಾಯಿತು. ಒಟ್ಟಾರೆ, ಅಲ್ಲಮ ಹೇಳಿದಂತೆ ‘ಕಿಚ್ಚಿನೊಳಗೆ ಕೋಲ ಬಚ್ಚಿಟ್ಟಂತೆ’,
ಬಸವಣ್ಣನವರ ಬದುಕಾಯಿತು.
ಕಿಚ್ಚಿನೊಂದಿಗೆ ಸಂಘ ಮಾಡುವ ಕೋಲು, ಕಿಚ್ಚೆಂಬ
ಶಕ್ತಿಯಾಗಿ ಮಾರ್ಪಡುವಂತೆ, ಬಸವಣ್ಣ ಶರಣರ ಮಹಾ ಸಂಗದಲ್ಲಿ ಶಕ್ತಿಯಾಗಿ ಹೊರಹೊಮ್ಮಿದರು. ಗುರುವಾಗಿ
ಉಳಿದುಕೊಂಡರು ಎನ್ನುವ ಶರಣರ ವಿವರಣೆ ತಲೆದೂಗುವಂತಿತ್ತು.
ರೈತರಿಗ ಭೂ ಹಂಚಿಕೆ, ಸ್ಮಶಾನದೆಡೆಗೆ ನಡಿಗೆ, ಮಲಾಲ್,
ಗಧರ್‍ರಂಥವರಿಗೆ ಸನ್ಮಾನ ಹೀಗೆ ಸದಾ ಪ್ರಗತಿಶೀಲ ಹೆಜ್ಜೆಗಳನ್ನಿಡುತ್ತ, ಭಿನ್ನವಾಗಿ ಆಲೋಚಿಸುತ್ತ,
ವಿಭಿನ್ನವಾಗಿಯೇ ನಿಂತ ಶರಣರು ಎಲ್ಲರಿಂದಲೂ ಬರೀ ಪ್ರೀತಿಗೇ ಭಾಜನರಾಗಿಲ್ಲ. ಸಾಕಷ್ಟು ಸಿಟ್ಟು-ಸೆಣಸಾಟವನ್ನೂ
ಬೆನಿಗೇರಿಸಿಕೊಂಡಿದ್ದಾರೆ. ವೈಚಾರಿಕತೆಯ ಅಪಾಯವೇ ಅದು. ವಿಚಾರ ಎಲ್ಲರಿಗೂ ಬೇಕಾಗಿಲ್ಲ.
ಕಾರ್ಯಕ್ರಮ ಮುಗಿಯುವದರೊಳಗಾಗಿ ಸಮಯ ರಾತ್ರಿಯ
9.30. ಆನಂತರ ಹಿರಿಯರೂ, ಕವಿಗಳೂ ಆದ ಮಲ್ಲಿಕಾರ್ಜುನಪ್ಪ ಹಾಗೂ ಗೆಳೆಯರೊಂದಿಗೆ ಚಿತ್ರದುರ್ಗದ ಹೊರವಲಯದ
ಐಷಾರಾಮಿ ಹೊಟೇಲ್ ಒಂದರಲ್ಲಿ ಅವರ ಕಾವ್ಯದ ಓದು, ಮಾತು ಮತ್ತು ನೆನಪುಗಳ ಮೆರವಣಿಗೆ. ಇವರೆಲ್ಲರ ಪ್ರೀತಿಯಿಂದ
ಬಿಡಿಸಿಕೊಂಡು ಬಾಗಲಕೋಟೆಯಡೆಗೆ ಬಸ್ಸು ಹತ್ತುತ್ತಿರಬೇಕಾದರೆ ಮಧ್ಯರಾತ್ರಿಯ 1.30. ನಿದ್ರೆಯೊಳಗೆ
ನಾಡು ಕ್ರಮಿಸುವ ನಡಿಗೆ. ಮನಸ್ಸು ಮಾತ್ರ ನೆನಪುಗಳ ಉಡಿಗೆ.
No comments:
Post a Comment