Total Pageviews

Tuesday, September 23, 2014

ಮನುಷ್ಯರನ್ನು ಬಿಟ್ಟು ಬದುಕಲಾಗದು ನನಗೆ



     ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ ದಿನಾಂಕ: 21/08/2014 ರಂದು ಬೆಂಗಳೂರಿನ ಅಧಿಕೃತ ನಿವಾಸಿ ಹಾಗೂ ವೃತ್ತಿ ದಾಖಲಾದ ನನಗೆ, ಸಪ್ಟೆಂಬರ್ 21 ರಂದು ಬೆಂಗಳೂರಿನ ಸೆಂಟ್ರೆಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಗಂಣದ ಸೆಮಿನಾರ್ ಹಾಲ್‍ನಲ್ಲಿ, ಅತಿಥಿಯಾಗಿ ಉಪಸ್ಥಿತನಿದ್ದು ಭಾಷಣ ಮಾಡಲು ಹಚ್ಚಿದವರು ಬಸವಕೇಂದ್ರ ಮತ್ತು ಅನಿಕೇತನ ಕನ್ನಡ ಬಳಗ ಬೆಂಗಳೂರು. 
    ಸೆಂಟ್ರಲ್ ಕಾಲೇಜಿನ ಆವರಣ ಸಾಕಷ್ಟು ಸಾಹಿತ್ಯದ ಮತ್ತು ಸಾಂಸ್ಕತಿಕ ಘಟಾನುಘಟಿಗಳನ್ನು ಕಂಡ ನೆಲ. ಈ ವೇದಿಕೆಯನ್ನು ಹತ್ತಬೇಕಾದರೆ ನನ್ನೊಳಗೆ ಭಯ, ದುಗುಡ ಮತ್ತು ಭಕ್ತಿ. ಕಾರಣ, ಇಂದು ನನ್ನ ಉಪನ್ಯಾಸದ ಕೇಳುಗ ವಲಯದಲ್ಲಿರುವವರು ಹಿರಿಯರಾದ ದೇ ಜವರೇಗೌಡ, ಡಾ. ಎಂ ವೀರಪ್ಪ ಮೊಯ್ಲಿ, ಪ್ರೊ. ಎಚ್.ಎಸ್.ಪಟೇಲ್, ಡಾ. ಮಲ್ಲಿಕಾರ್ಜುನಪ್ಪ, ಸಂಸ್ಕತ ವಿಶ್ವವಿದ್ಯಾಲಯ ಕುಲಪತಿ ಮಲ್ಲೇಪುರಂ, ಶೂದ್ರ, ಗುಡಿಹಳ್ಳಿ, ಜಿ.ಪ್ರಶಾಂತ, ಪ್ರೊ. ಹಂಪ ನಾಗರಾಜಯ್ಯ, ಪ್ರೊ. ಭಾಸ್ಕರ್ ಶೆಟ್ಟಿ (ಟೈಮ್ಸ್ ಆಫ್ ಕರ್ನಾಟಕ), ಶ್ರೀ ಕೆ.ವಿ. ಪ್ರಭಾಕರ, ನೀತು ತುಳಸಿಧರನ್, ಚಿತ್ರ ನಿರ್ದೇಶಕ ಜಿ. ಮೂರ್ತಿ, ಬಸವ ಸಮಿತಿಯ ಕಾಶಿನಾಥ ಕಾಡಾದಿ, ಬೆಲ್‍ನ ಚೀಪ್ ಎಕ್ಸಿಕ್ಯೂಟಿವ್ ವಾಯ್. ಮೃತ್ತುಂಜಯ ಹಾಗೂ ಇತರರು.
     ಕಳೆದ ಅನೇಕ ವರ್ಷಗಳಿಂದ ಸಾಹಿತಿ ಮತ್ತು ಸಾಂಸ್ಕತಿಕ ವಲಯದ ಹಲವು ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಹೈ ಕರ್ನಾಟಕ, ಕರಾವಳಿ ಕರ್ನಾಟಕ ಮಂಡಲಗಳನ್ನು ದಾಟಿಕೊಂಡು ಬರುತ್ತ ಬರುತ್ತ ಬೆಂಗಳೂರಿಗೂ ಬಂದಿದ್ದೆ. ಆದರೆ ಮತ್ತೆ ಮರಳಿಯೂ ಹೋಗಿದ್ದೆ. ಈ ಊರಲ್ಲೊಂದು ವಿಳಾಸಕ್ಕಾಗಿ ಬಾಲ್ಯದಿಂದಲೂ ದೇವರಿಗೆ ಮೊರೆ ಹೊಕ್ಕಿದ್ದೆ. ಒಂದು ಕೇಳಿದೆ ಆತ ಮೂರು ನೀಡಿದ. ನೀಡುವ, ನೀಗಿಸುವ ಕೈಗಳ ಮುಂದೆ ಬೇಡಬೇಕಂತೆ. ಕೊಲವೊಮ್ಮೆ ಬೇಡುವ, ನೀಡುವ ವ್ಯವಹಾರದಲ್ಲಿ ಯಾರೊಬ್ಬರೇ ಅಯೋಗ್ಯವಾದರೂ ಸಾಕು ಪ್ರಾರ್ಥನೆ ಹದಗೆಡುತ್ತದೆ.
     ಈ ದಿನದ ವಿಶೇಷವೂ ಇದೆ. ಇಂದು ಬೆಂಗಳೂರಿನ ಎರಡು ಕಾರ್ಯಕ್ರಮಗಳಲ್ಲಿ ಇರಬೇಕಾದವನು ನಾನು. ಖಂಡಿತವಾಗಿಯೂ ಇದ್ದೆ. ಒಂದರಲ್ಲಿ ಆಲೋಚನೆಯಾಗಿ ಮತ್ತೊಂದರಲ್ಲಿ ವ್ಯಕ್ತಿಯಾಗಿ. ವೃತ್ತಿ ನಿರತ ಪತ್ರಕರ್ತರ ಸಮಾರಂಭ ಪ್ರೆಸ್ ಕ್ಲಬ್‍ನಲ್ಲಿ ನಡೆದಿದ್ದು, 40 ಜನ ಸಾಧಕರನ್ನು ಗೌರವಿಸುವ ಕಾರ್ಯ ನೆರವೇರಿಸಬೇಕಿತ್ತು. ಆದರೆ ಆ ಕಾರ್ಯವನ್ನು ಪ್ರಕಾಶಕ ಮಿತ್ರ ಎಂ.ಆರ್ ಗಿರಿರಾಜು ಅವರಿಗೆ ವಹಿಸಿ, ನಾನು ಪುಸ್ತಕಗಳ ಲೋಕಾರ್ಪಣೆಯ ಈ ಸಮಾರಂಭದ ಮೊದಲ ಗೋಷ್ಠಿಯಲ್ಲಿ ಶ್ರೀಗಳ ಕಾವ್ಯ ಕುರಿತು ವಿಚಾರಗಳನ್ನು ಮಂಡಿಸಲು ಅಣಿಯಾದೆ. ಕಿಕ್ಕಿರಿದ ಸಭಾಂಗಣ, ಅದರೊಳಗೆ ನನ್ನ ಮೌನದಲೆಯ ಮಾತುಗಳು.
      “ರಾಮಾಯಣ ಮಹಾನ್ವೇಷಣೆಯನ್ನು ನಾನು ಬರೆದದ್ದು ನನ್ನೊಳಗಿನ ಶೋಧಕ್ಕಾಗಿ, ಹಾಗೆನೋಡಿದರೆ ಇಡಿಯಾಗಿ ಸಾಹಿತ್ಯದ ಒಟ್ಟು ಉದ್ದೇಶವೇ ನಾವು ಹಾಗೂ ನಮ್ಮೊಳಗಿನ ಶೋಧ. ಅದು ಸಾಧಿಸಿದಾಗ ನಮಗೆ ಯಾವುದೂ ವಿರುದ್ಧವಾಗಿ ಕಾಣುವುದಿಲ್ಲ. ಇಂದು ಹಿಂದೂಗಳು ತಮ್ಮ ವೈರಿಗಳೆಂದು ಪರಿಗಣಿಸುತ್ತಿರುವ ಮುಸ್ಲಿಂರು ವೈರಿಗಳಲ್ಲ. ನಿಜವಾದ ವಿಷಯವೆಂದರೆ ನಮಗೆ ‘ಹಿಂದೂ’ ಎಂಬ ಪದಕೊಟ್ಟವರೆ ಮಹಮ್ಮದೀಯರು.” ಎಂದು ಒಬ್ಬ ಚಿಂತಕನಂತೆ ಮಾತನಾಡಿದ ವೀರಪ್ಪ ಮೋಯ್ಲಿ ಮುಂದಿನ ನಮ್ಮೆಲ್ಲರ ಭಾಷಣಗಳಿಗೆ, ವಿಚಾರಗಳಿಗೆ ಒಂದು ಮುಕ್ತ ವಾತಾವರಣ ಸೃಷ್ಠಿಸಿಕೊಟ್ಟರು. ಅಂದಿನ ಅವರ ಆ ಭಾಷಣದಲ್ಲಿಯೂ ಅವರು ಅನ್ವೇಷಣೆಯ ಆ ದಾರಿಯನ್ನು ಬಿಟ್ಟುಕೊಡಲಿಲ್ಲ.
     ಶ್ರೀಗಳ ಎರಡು ವಚನ ಸಂಕಲನಗಳಾದ ‘ವಚನಸಿರಿ’ ಮತ್ತು ‘ವಚನಕ್ರಾಂತಿ’ಯನ್ನು ಕುರಿತು ಮಾತನಾಡಿದ ನನಗೆ, ಕವಿಯೊಬ್ಬನನ್ನು ಮುಂದೆ ಕೂಡ್ರಿಸಿಕೊಂಡು ಅವನ ಕಾವ್ಯ ಕುರಿತಾಗಿ ಮಾತನಾಡುವ ಮುಜುಗರದ ಸಂದರ್ಭ. ವೈಚಾರಿಕತೆ, ವಾಸ್ತವವಾದ, ಸ್ತ್ರೀ ಶೋಷಣೆ, ಮಾನವೀಯತೆ, ಬಡತನ, ಸಾಮಾಜಿಕ ನ್ಯಾಯ ಕುರಿತಾಗಿ ಸಾರುವ, ಶ್ರೀಗಳ ವಚನಗಳು ಆರಂಭದಲ್ಲಿ ಬಂಧದಲ್ಲಿ ಅತ್ಯಂತ ಸಡಿಲು, ಜಾಳು, ವಾಚಾಳಿಯಾಗಿದ್ದು, ವಚನಕ್ರಾಂತಿ, ಅವರ ಎರಡನೆ ಸಂಕಲನಕ್ಕೆ ಬರುವುದರೊಳಗಾಗಿ ಅವು ಸಾಕಷ್ಟು ಹುರಿಗೊಂಡದ್ದನ್ನು ಕಾಣಬಹುದು.

     ತತ್ವಚಿಂತನೆಯೂ ಅವರ ಕಾವ್ಯದ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದ್ದು, ವೇದಗಳ ಕಾಲದಿಂದ ಅಧುನಿಕ ಕಾಲದವರೆಗೂ ನಮ್ಮ ತತ್ವ ಚಿಂತನಾ ಪರಂಪರೆ ಕಾವ್ಯದ ಕೈಹಿಡಿದುಕೊಂಡೇ ಬಂದಿದೆ. ಎಲ್ಲ ತತ್ವ ಚಿಂತಕರೂ ತಮ್ಮ ಪ್ರಖರ ಚಿಂತನೆಗಳನ್ನೂ ಈ ಏಳೂ ಕಾಲಘಟ್ಟಗಳಲ್ಲಿ ಕಾವ್ಯದ ಮೂಲಕವೇ ಅಭಿವ್ಯಕ್ತಿಸಿದ್ದಾರೆ. ಇದಕ್ಕೆ ಹೊರತಾದವರಲ್ಲ ಶ್ರೀಗಳು. ಅವರ ಕೆಲವು ಮಹತ್ವದ ವಚನಗಳು –
 

ಅನುಭವವೆಂಬುದು ಬೀಜದೊಳಗಣ ವೃಕ್ಷ ಕಾಣಿರೊ,
ಮುಗಿಲ ಮರೆಯ ಮಿಂಚು, ಸಿಂಪಿನೊಳಗನ ಮುತ್ತು,
ಹಾಲಿನೊಳಗಣ ನವನೀತ, ರುಚಿಯೊಳಗಣ ತೃಪ್ತಿ,
ದೇಹದೊಳಗಣ ಪ್ರಾಣ,
ಅನುಭವವನು ಅನುಭಾವವಾಗಿಸಿಕೊಂಡಿಹ
ಮಹಾನುಭಾವಿಯ ತೋರಿ ಬದುಕಿಸಾ!
ಬಸವಪ್ರಿಯ ಮುರುಘರಾಜೇಂದ್ರ ಪ್ರಭುವೆ.
                *****
 ಅಯ್ಯಾ, ನಮ್ಮದು ಗುಡಿ ಸಂಸ್ಕತಿಯಲ್ಲವಯ್ಯ,
ಮಡಿ ಸಂಸ್ಕತಿಯಲ್ಲವಯ್ಯ, ಕಡಿ ಸಂಸ್ಕತಿಯಲ್ಲವಯ್ಯ,
ನುಡಿ ಸಂಸ್ಕತಿಯಲ್ಲವಯ್ಯ, ಬಸವಪ್ರಿಯ
ಮುರುಘರಾಜೇಂದ್ರ ಪ್ರಭುವೆ,
 ನಮ್ಮದು ಶರಣ ಸಂಸ್ಕತಿಯಯ್ಯ
          ***** 
ಶರಣರು ಜಾತಿವಾದಿಗಳಲ್ಲ
ಜ್ಯೋತಿ ಸ್ವರೂಪಿಗಳಯ್ಯ
ಸಂಕುಚಿತ ಮತಿಗಳಲ್ಲ
ವಿಶಾಲ ಮತಿಗಳಯ್ಯ
ಸರ್ವಾಧಿಕಾರಿಗಳಲ್ಲ
ಸೇವಾಧಿಕಾರಿಗಳಯ್ಯ
ಮುರುಘರಾಜೇಂದ್ರ ಪ್ರಭುವೆ,
ಶರಣರು ವಿಲಾಸಜೀವಿಗಳಲ್ಲ
ಕಾಯಕ ಜೀವಿಗಳಯ್ಯ
 
     ಎಲ್ಲ ಸಂದರ್ಭದಲ್ಲಿಯೂ ಕವಿ ಮತ್ತು ಕಾವ್ಯವನ್ನು ನೆಪಗಳು ಎಂದು ಪರಿಗಣಿಸಿದವನು ನಾನು. ಮನೆಯ ಒಂದು ಕಿಡಕಿ ನಿಸರ್ಗದ ಅನೇಕ ಶಕ್ತಿಗಳು ನಮ್ಮೊಳಗೆ ಬರಲು ಕಾರಣವಾಗುವಂತೆ, ನಮ್ಮ ಮಧ್ಯದ ಒಬ್ಬ ಕವಿ ಅನೇಕ ಸಾರಿ ಕಾವ್ಯ ಪರಂಪರೆಯ ಸಾವಿರಾರು ಪ್ರತಿಭೆಗಳ ಮರುದರ್ಶನಕ್ಕೆ ಕಾರಣವಾಗುತ್ತಾನೆ. ಅಂತೆಯೆ, ಇಂದು ಶ್ರೀಗಳ ಬರಹವೂ ಕೂಡಾ. ಅವರ ಕಾವ್ಯದ ಮೂಲಕ, ಶ್ಯಾಮ್ ತಬ್ರೀಜಿ, ಸರ್ಮದ್, ಕನಕದಾಸ, ಬಸವಣ್ಣ ನಮ್ಮವರು, ಹೊರಗಿನವರು ಹೀಗೆ ವೈಚಾರಿಕವಾಗಿ ಹತ್ತಿರವಾಗಿಸುವ, ಸೇರಿಸುತ್ತ ಸೇರಿಸುತ್ತ ಪರಂಪರೆಯ ಒಂದು ಹೂಹಾರವನ್ನು ನಿರ್ಮಿಸುವ ಶಕ್ತಿ ಕಾವ್ಯಕ್ಕಿದೆ. ಶ್ರೀಗಳ ಕಾವ್ಯ ಹೀಗೆ ಪ್ರಪಂಚದ ಹಲವಾರು ದಾರ್ಶನಿಕರ ಆಲೋಚನೆಗಳ ಒಂದು ಪವಣಿಸುವಿಕೆ.


    ನನ್ನ ಭಾಷಣ 35 ನಿಮಿಷ. ಆದರೆ ಅಂದು ಅದು ಬೆಂಗಳೂರಲ್ಲಿ ಕಟ್ಟಿಕೊಟ್ಟ ಬಳಗ ಮಾತ್ರ ದೊಡ್ಡದು. Swan Group ನ ಕೃಷ್ಣಮೂರ್ತಿ, ಸುಶೀಲಾಗೌಡ, ವಾಜ್‍ಮಯಿ ಎಲ್ಲವೂ ಅಂದು ಅರಳಿದ ಹೊಸ ಸಂಬಂಧಗಳು. ಕೆಲವೊಮ್ಮೆ ನಾನು ಒಂದು ಕ್ಷಣ ಮನಿಸಬಹುದುದೇನೊ, ಆದರೆ ಈ ಮನುಷ್ಯರನ್ನು ಬಿಟ್ಟು ಬದುಕಲಾಗದು ನನಗೆ.

       

No comments:

Post a Comment