Total Pageviews

Sunday, September 21, 2014

ಆಲೋಚನೆ – ಅಡ್ಡಮಳೆ – ಅಭಿಮಾನ



     11 ನೇ ತಾರೀಖು, ಇನ್ನೊಂದೇ ದಿನ ಹುಟ್ಟುಹಬ್ಬಕ್ಕೆ. ರಾತ್ರಿಯಲ್ಲ ಕುಳಿತು ವರ್ಷಗಳ ನೆನಪುಗಳನ್ನು ವ್ಯವಸ್ಥಿತವಾಗಿ ವಿಭಜಿಸಿ ಕಡತಗಳಲ್ಲಿ ಕಟ್ಟಿಡುತ್ತಿದ್ದೆ. ಆಗಷ್ಟ 21 ರಂದು ಬಂದು ವೆಸ್ಟಆಫ್ ಕಾರ್ಡರೋಡ್‍ನ ಮಂಜುನಾಥ ನಗರದ ನನ್ನ ಮನೆ ಎದುರಿನ ಗಿಡದ ನೆರಳಿನಲ್ಲಿ ನಿಂತ ನನ್ನ ಪ್ರೀತಿಯ ನಿರುಪದ್ರವಿ, ಉಭಯ ಉಪಕಾರಿ(ಝೆನ್ ಕಾರ್) 15 ದಿನಗಳವರೆಗೂ ಆ ಸ್ಥಳ ಬಿಟ್ಟು ಕದಲಿರಲಿಲ್ಲ. ರಾತ್ರಿಯೆ ಗಂಡ-ಹೆಂಡತಿ ಇಬ್ಬರೂ ಅದನ್ನು ಸ್ವಚ್ಛಗೊಳಿಸಿ, ಸಮಾಧಾನಿಸಿ, 12 ರ ಮಧ್ಯಾಹ್ನ, ಅರ್ಧ ದಿನದ ರಜಾ ಅನುಮತಿಯ ಮೇರೆಗೆ ಎಂ.ಎಸ್ ಬಿಲ್ಡಿಂಗ್‍ನಿಂದ ಪ್ರವಾಸ ಪ್ರಾರಂಭಿಸಿದರೆ ಯಾರ್ಯಾರಿಗೊ ಆತಂಕ. ಹುಟ್ಟುಹಬ್ಬ ಹುಷಾರಾಗಿ ಕಾರು ಚಲಾಯಿಸು ಎನ್ನುವ ಎಚ್ಚರಿಕೆಗಳು ಗೆಳೆಯರಿಂದ, ಹೆತ್ತವರಿಂದ, ಬಂದುಗಳಿಂದ ಕೊನೆಗೆ ನನ್ನ ಮಕ್ಕಳಿಂದಲೂ. ಆದರೆ ಹಿಂದಿನ ದಿನವಷ್ಟೇ ಎಂ.ಎಸ್ ಬಿಲ್ಡಿಂಗ್‍ನ Principal secretary ಇರುವ 6 ನೇ ಮಹಡಿಯಿಂದ ಕೆಳನೋಡುತ್ತ ನನ್ನ ಹೆಣವನ್ನು ಹುಡುಕಾಡಿದನುಭವದ ಕವಿತೆಯೊಂದನ್ನು, ಹೆಂಡತಿ ಕೊಡಿಸಿದ ವಿಶೇಷ ಬಟ್ಟೆಗಳನ್ನು ತೊಟ್ಟು, ತೆಗೆದುಕೊಂಡ ಫೋಟೊದೊಂದಿಗೆ ಫೇಸ್‍ಬುಕ್‍ಗೆ ರವಾನಿಸಿದ್ದೆ. 
     ಭಯ, ಬೇಸರ, ಆತಂಕಗಳೊಂದಿಗೆಯೇ ನಾನು ಈ ಬೆಂಗಳೂರಿಗೆ ಬಂದದ್ದು. ಕೇವಲ 15 ದಿನಗಳಲ್ಲಿ ಇಲ್ಲೊಂದು ಪ್ರೀತಿಯ ಮನೆ, ಬಳಗ, ಜಗಭಂಡರ ಗುಂಪು ಕಟ್ಟಿಕೊಂಡು ಹಬ್ಬಲಾರಂಭಿಸಿದ್ದು. ಬೆಂಗಳೂರಿಗೆ ನನ್ನ ಆಗಮನವನ್ನು ಸಂಭ್ರಮಿಸಿದ ಹಿರಿಯರು ಕೃಷ್ಣಮೂರ್ತಿರಾವ್, ಚಂಪಾ, ಜಿ.ಪಿ.ಬಸವರಾಜು, ಮುಕ್ತಾ, ಪ್ರಾನ್ಸಿಸ್, ರಂಗನಾಥ, ಪಂಡಿತ, ಬೆಂಗಳೂರು ಕೇಂದ್ರ ಖಜಾನೆ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಭಾಗ್ಯಲಕ್ಷ್ಮಿ(ಕೆ.ಎ.ಎಸ್), ಚೀಪ್ ಗೌವರ್ನರ್ ಸೆಕ್ರೆಟರಿ ಶ್ರೀ ವಿಜಕುಮಾರ್ ತೋರಗಲ್ಲ, ರೋರಿಚ್-ದೇವಿಕಾರಾಣಿ ಫೌಡೇಶನ್‍ನ ಶ್ರೀ ಮನು ಬಳಿಗಾರ ಜೊತೆಗೆ ‘ಕಾವ್ಯಕ್ಕೆ ಉರುಳು’ ಓದುಗ ಬಳಗದ ಬೆಂಗಳೂರು ನಿವಾಸಿಗಳು ಹಾಗೂ ಇದಕ್ಕೆ ಕಾರಣರಾದ ಸಂಪಾದಕ ಮಿತ್ರ ರಾಜು ಮಳವಳ್ಳಿ. ನನ್ನ ಬೆಳೆಸಿದ ಹಿರಿಯ ಜೀವ ಸಿಂಪಿ ಲಿಂಗಣ್ಣ, ಒಂದು ಪದ್ಯ ಪದೇ ಪದೇ ಹೇಳುತ್ತಿದ್ದರು – 
 ಊರೆಲ್ಲ ನೆಂಟರು
ಕೇರಿಯೆಲ್ಲವೂ ಬಳಗ
ಧಾರಣಿಯೇ ದೈವವಾಗಿರಲು
ಯಾರನ್ನು ನೆನೆಯಲಿ?
     ಒಂದಿಷ್ಟು ತಗ್ಗಿದ ಬಿಸಿಲಿನಲ್ಲಿ ನನ್ನ ಸತಿ-ಸಾರಥಿ ಪದ್ದಿಯ ನಿರ್ದೇಶನಕ್ಕನುಸಾರ ನೆಲಮಂಗಲದತ್ತ ನನ್ನ ಕಾರು ಓಡುತ್ತಿದ್ದರೆ, ಮನಸ್ಸು ಧರ್ಮ-ಕರ್ಮಗಳ ವಿಚಾರ ಮಾಡುತ್ತಿತ್ತು. ಬಹಳ ದಿನಗಳಿಂದ ಬೆಂಗಳೂರಿಗೆ ಬಂದಾಗಲೆಲ್ಲ ಇಳಿದುಕೊಳ್ಳುತ್ತಿದ್ದ ಸ್ಥಳ ‘ಬಾಲಾಜಿ ರೆಸಿಡೆನ್ಸ್’, ಅದರ ಹಿಂದುಗಡೆಯೆ ನಾನೊಂದು ಮನೆ ಮಾಡುತ್ತೇನೆ, ನಿತ್ಯ ರಾಜಾಜಿನಗರ, ಇಎಸ್‍ಐ, ಸುಜಾತಾ, ಮಲ್ಲೇಶ್ವರಂ, ರೇಸ್‍ಕೋರ್ಸ್ ಕೊನೆಗೆ ಮಹಾರಾಣಿ ಕಾಲೇಜ ಮತ್ತೆ ಸಾಯಂಕಾಲವಾಗುತ್ತಲೇ ಇಲ್ಲಿಂದ ಅಲ್ಲಿಗೆ ಹೀಗೊಂದು ಪರಿಭ್ರಮಣದ ಬದುಕು ನಾವಿಲ್ಲಿ, ಇಷ್ಟು ಬೇಗ ಪ್ರಾರಂಭಿಸುತ್ತೇವೆ ಎಂದು ಎಂದೂ ಅಂದುಕೊಂಡಿರಲಿಲ್ಲ. 
    ಅಪಾತ್ರರಿಗೆ ಸಲಾಮು ಹೊಡೆದೊ, ಯಾವುದೋ ಅನೈತಿಕ ಒಪ್ಪಂದ ಮಾಡಿಕೊಂಡೊ ಬರುವ ಜಾಯಮಾನ ನನ್ನದಲ್ಲ. ಮಧುರಚನ್ನ ಹಾಡಿದಂತೆ “ಬಯಕೆ ಬರುವುದರ ಕಣ್ಸನ್ನೆ”. ಬಯಕೆ ಹುಟ್ಟಿತ್ತು, ಎಲ್ಲವೂ ಇಷ್ಟರಲ್ಲಿಯೇ ಬದಲಾಗಬಹುದು ಎಂದುಕೊಂಡೆದ್ದೆ, ಆಯಿತಷ್ಟೆ. ಜೊತೆಗೆ ಎದೆಯಲ್ಲಿ ಆಗಲೇ ಮತ್ತೊಂದು ಎಚ್ಚರಿಕೆಯ ಗಂಟೆ ಬೆಂಗಳೂರಲ್ಲಿ ಬಹಳ ದಿನವಿರಬಾರದು. ಇಲ್ಲಿಯ ಟ್ರಾಫಿಕ್ ಸಂತೆಯಲಿ ಕೆಪ್ಪನಾಗಬಾರದು ನಾನು. ಕಾರ್ಬನ್ ಕುಡಿತಕ್ಕೆ ಕಪ್ಪಾಗಬಾರದು ನನ್ನ ಬಾಳು. ಹಿಮಗಿರಿಯ ಸಾಲುಗಳನ್ನು ಹಿಡಿದು ಹೊರಟುಬಿಡಬೇಕು ಅಲೆಮಾರಿ. ‘ಗುರು’ ಕೃಪೆಯಾದರೆ ಯಾವದೂ ಅಸಾಧ್ಯವಲ್ಲ.
  ಆಲೋಚನೆಗಳ ಅಡ್ಡಮಳೆಯಲ್ಲಿ ತೋಯ್ಯಿಸಿಕೊಳ್ಳುತ್ತ ನಾನು, ನನ್ನ ಕಾರು ಎರಡು ಗಂಟೆಗಳ ಕಾಲ ವಿರಮಿಸಿದ್ದು ಚನ್ನರಾಯಪಟ್ಟಣದಲ್ಲಿ. ಈ ಸಪ್ಟೆಂಬರ್‍ನ ಬೃಹತ್ ಶಿಕ್ಷಕರ ದಿನಾಚರಣೆಯಂದು ಇಲ್ಲಿ ಅತಿಥಿಯಾಗಬೇಕಾದವನು ನಾನು. ಚಿತ್ರದುರ್ಗದ ಕಾರ್ಯಕ್ರಮದ ಪೂರ್ವ ನಿಗಧಿತವಾದುದರಿಂದ, ನನ್ನ ಪಾತ್ರವನ್ನಿಲ್ಲಿ ಹಾಸನ ಆಕಾಶವಾಣಿಯ ಗೆಳೆಯ ವಿಜಯ ಅಂಗಡಿ ನಿಭಾಯಿಸಿದರು. ವಿಚಿತ್ರ ಬದುಕು. ಊರು ಬಿಟ್ಟ ಮೇಲೆಯೇ ನೂರೊಂದು ಸತ್ಯಗೊತ್ತಾಗುತ್ತವೆ. ಚನ್ನರಾಯಪಟ್ಟಣದಲ್ಲಿ ನನ್ನ ಅಭಿಮಾನಿಗಳ ಒಂದು ದೊಡ್ಡ ದಂಡಿದೆ ಎಂದು ಗೊತ್ತಾದುದೆ ಇತ್ತೀಚಿಗೆ. ಇಲ್ಲಿಯ ‘ಶಿವಾ ಕಾಫಿ’ ನಮ್ಮ ಮೆಚ್ಚಿನ ಸ್ಥಳ. ಅಲ್ಲಿಯೇ ಎಲ್ಲರನ್ನು ಸೇರಿಸಿ, ಕ್ಷಮೆಕೇಳಿ ಹುಟ್ಟುಹಬ್ಬಕ್ಕೆ ಬೇಲೂರು ತಲುಪಿದರೆ ರಾತ್ರಿ 9. ತಿಂಗಳುಗಳಿಂದ ಪೊರಕೆ ಕಾಣದ ಮನೆಗೆ, ಆಕಾರ ಕೊಡಲು ಬಂದವ ಚನ್ನೇಗೌಡ.
   ಒಂದೆಡೆ ಹುಟ್ಟುಹಬ್ಬಕ್ಕೆ ಮನೆ, ಮಡದಿ-ಮಕ್ಕಳು ಸಿದ್ಧಗೊಳ್ಳುತ್ತಿದ್ದರೆ ಇನ್ನೊಂದೆಡೆ ಊಟದೊಂದಿಗೆ ಸಿದ್ಧವಾದ ಗೆಳೆಯರ ಬಳಗ. ಕೆಲವೊಮ್ಮೆ ಪ್ರೀತಿಯ ರಾತ್ರಿಗಳನ್ನು ನಿಭಾಯಿಸುವುದು ಎಷ್ಟೊಂದು ಕಷ್ಟ ಅಲ್ಲವೆ? ಗೆಳೆಯರೊಂದಿಗೆ ಕೆಲ ಗಂಟೆಗಳು ಕಳೆದು ಬರುವುದರೊಳಗಾಗಿ ಮಧ್ಯರಾತ್ರಿಯವರೆಗೂ ಕೇಕ್-ಕ್ಯಾಂಡಲ್‍ಗಳೊಂದಿಗೆ ಕಾಯುತ್ತಿದ್ದ ವಿದ್ಯಾರ್ಥಿ ಬಳಗ. ಅಬ್ಬಾ! ಈ ಹುಟ್ಟುಹಬ್ಬ ಇಷ್ಟೊಂದು ಸಂಪ್ರದಾಯ ಬದ್ಧವಾಯಿತಲ್ಲ? ಇರಲಿ, ಉರಿ ಬರಲಿ ಸಿರಿ ಬರಲಿ
ಬಂದುದೆಲ್ಲವೂ ‘ಗುರುರಾಯ’ನ
ಪಾದಕರ್ಪಿತವಾಗಲಿ.
     ಎಲ್ಲರೂ ಹೋದಾಗ ಮಧ್ಯರಾತ್ರಿ ಮೂರು ಗಂಟೆ. ಮಡದಿ-ಮಕ್ಕಳು ನಿದ್ರೆಯಲ್ಲಿ. ಗ್ಲಾಸಿನ ಕೊನೆಯ ರೌಂಡಿಗೆ ಚೀಯರ್ಸ್ ಹೇಳಲು ಇನ್ನ್ಯಾರಿದ್ದಾರೆ? Hello out there? Yes. ಕಣ್ಣುಮಿಟುಕಿಸುವ ದೊಡ್ಡದೊಂದು Teddy beare.
 

     

No comments:

Post a Comment