Total Pageviews

Monday, September 1, 2014

ಚಾರ್ಮಾಡಿಯಿಂದ ಚಂದ್ರಗಿರಿಯವರೆಗೆ. . . .



        ಎರಡೇ ಎರಡು ಕ್ಷಣ ಕಣ್ಣು ಮುಚ್ಚಿದರೆ ಸಾಕು ಧಾರೆಯಾಗುತ್ತವೆ ಸಾವಿರಾರು ನೆನಪುಗಳು. 2009 ರ ಒಂದು ಮುಂಜಾವು ನನ್ನ ಇಡೀ ಕುಟುಂಬದೊಂದಿಗೆ (ಸಿದ್ದು, ಪದ್ದು ಮತ್ತು ಗೌರಿ) ಬಯಲು ಸೀಮೆಯಿಂದ ಅರೆಮಲೆನಾಡಿನ ಊರಾದ ಬೇಲೂರಿಗೆ ಒಂದು ಸಾಯಂಕಾಲ ಬಂದಿಳಿದೆ. ಇಲ್ಲಿಗೆ ಬರಲು ಪ್ರಧಾನ ಕಾರಣ ಪದ್ದಿಯ ಆಯ್ಕೆ, ಆಕೆಯ ಆಯ್ಕೆಯ ಕಾರಣ ಜಗತ್ಪ್ರಸಿದ್ಧ ಚನ್ನಕೇಶವನ ಆಕರ್ಷಣೆ. ಅಂದು ಊರಿನ ಯಮಸಂಧಿ ದೇವೇಗೌಡ ದೇವಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜು ಎಂಬ ಕೊಂಪೆಗೆ ಬಂದು ನಿಂತಾಗ, ಜಡಿ ಮಳೆ, ಛಳಿ ಮಿಶ್ರಿತ ಗಾಳಿ, ಸಪ್ಟೆಂಬರ್ ತಿಂಗಳಿನ 5 ನೇ ತಾರೀಖು, ಭಾರತೀಯ ಗುರು ಪರಂಪರೆಯ ದಿನ, ಶಿಕ್ಷಕರ ದಿನಾಚರಣೆ ಹಾಗೂ ನನ್ನ ಮತ್ತು ನನ್ನ ಪ್ರೀತಿಯ ಪದ್ದಿಯ ಹುಟ್ಟುಹಬ್ಬದ ಸಂಭ್ರಮ. ಅತ್ತ ಮೂಡುಗೆರೆ ಎಂಬ ತೇಜಸ್ವಿಯವರ ಮಾಯಾಲೋಕದ ಸೇಳೆತ, ಕಾಫಿ ತೋಟಗಳಲ್ಲಿ ಹೀಚು- ಹೀಗೆ ಏನೆಲ್ಲ. ಜೊತೆಗೆ ನಮ್ಮನ್ನು ನೆರಳಿನಂತೆಯೇ ಅನುಸರಿಸಿ ನೋವಿನಲ್ಲೂ ನಗುವಿನಲ್ಲೂ ನಮ್ಮೊಂದಿಗಿದ್ದವಳು ನನ್ನ ಹುಚ್ಚಿನ ಗೌರಿ.
        ಹುಚ್ಚೆನ್ನುವುದು ಯಾವಾಗಲೂ ಅರಳುವ ಮತ್ತು ಕೆರಳುವ ಕ್ರಿಯೆ ಅಲ್ಲವೆ?
     ಐದು ವರ್ಷಗಳ ಈ ಅವಧಿಗೆ ನೌಕರಿ ಸಿಕ್ಕ ಆರಂಭದಲ್ಲಿ ಎಷ್ಟೊಂದು ಕನಸುಗಳು! ಎಷ್ಟೊಂದು ಆದರ್ಶಗಳು! ಎಷ್ಟೊಂದು ಸಂಕಲ್ಪಗಳು! ಹೇಗೊ ಕಾಲ ಉರುಳಿತು. ಮಾನ-ಅಪಮಾನ, ಅಬ್ಬರ-ಸುಮ್ಮಾನ, ಮೆರವಣೆಗೆ-ಅವಮಾನಗಳ ಮಧ್ಯ, ಐದು ವರ್ಷಗಳೆನ್ನುವವು ನನ್ನ ಅವಿಶ್ರಾಂತ ಕಣ್ಣು, ದೇಹಗಳ ಮಾಗಿಸಿ, ನೋಯಿಸಿ, ಬಾಗಿಸಿ, ಗೆಲ್ಲಿಸಿ ಹೋದ ರೀತಿ ಅರಿವಿಗೇ ಬರಲಿಲ್ಲ! ಇಲ್ಲಿ ನನ್ನ ಗಾಂಧಿ ಬಂದ, ಹಾಲ ಬೆಳದಿಂಗಳ ಮಗಳು ಹುಟ್ಟಿದಳು, ನಮ್ಮ ಸಿದ್ಧ-ಬುದ್ಧ ಕಣ್ಣೀರೊರೆಸಿದ, ಮತ್ತೆ ಮತ್ತೆ ಜಗಳ, ಪ್ರೀತಿ ಎಲ್ಲವೂ ಆಯಿತು. ಈಗ ಬೆಂಗಳೂರು ನಿವಾಸಿಯಾದ ಹೆಣ್ಣು ಜೀವ ಒಂದು, ಆಗ ಈ ತಂಗಾಳಿಗೆ ಹಂಬಲಿಸಿ ಬರುತಿತ್ತು. ಏನೆಲ್ಲ ಬರೆಯಬಹುದೇನೊ. ಬರಹವೆನ್ನುವುದು ಯಾವಾಗಲೂ ಅರ್ಧ ಸತ್ಯವೆ. ಒಪ್ಪಿ ಬಿಡುತ್ತೇನೆ, ಒಟ್ಟಾರೆ ನೆನಪುಳಿಯುವ ಬಾಳಾಯಿತು.
      ಕುರುಬರ ಕೇರೆಯಲ್ಲಿ ಮಗಳು ಹುಟ್ಟಿ, ವೈಕುಂಠ ಬೀದಿಯಲ್ಲಿ ಬಾಲ್ಯ ಕಳೆದಳು. ಇದೊಂದು ರೀತಿ ಕನಕನ ಪದ್ಯಗಳಲ್ಲಿ ಮೋಹನ ತರಂಗಿಣಿಯಾಗಿ, ವೈಕುಂಠದಾಸರ ಮನೆಯಲ್ಲಿ ನಿತ್ಯ ದಾಸೋಹಕ್ಕೆ ಬಾಳೆ ಎಲೆ ಹಾಸಿದ ವಿನೀತದ ಅನುಭವ. ಅಂದಹಾಗೆ, ಇಲ್ಲಿಯ ನನ್ನ ಎರಡೂ ಮನೆಗಳು ಪುಣ್ಯದ ಮನೆಗಳೆ. ಒಂದೆಡೆ ಹಾಲಿನ ಓಕುಳಿ ಮತ್ತೊಂದೆಡೆ, ತೇರಿನ ಸಂಭ್ರಮ. ಒಂದೆಡೆ ಬಬ್ಬಮ್ಮ, ಮತ್ತೊಂದೆಡೆ ರಾಶಿ ರಾಶಿ ಬಟ್ಟೆ, ತಿಂಡಿ ಹೊತ್ತುಕೊಂಡು ಬರುತ್ತಿದ್ದ ನಮ್ಮ ಗೌರಿ, ಒಂದೆಡೆ ಜಗಳಾಡುತ್ತಲೇ ಪ್ರೀತಿಸುವ ಜಯಣ್ಣ, ಮತ್ತೊಂದೆಡೆ ಪ್ರೀತಿಸುತ್ತಲೆ ಮೊಬೈಲ್ ಹಿಡಿದುಕೊಂಡು ಮಾಯವಾಗುತ್ತಿದ್ದ ಗೆಳೆಯ ಸತೀಶ.
     ಆದರೆ ಈ ಎಲ್ಲ ಕಾಲಕ್ಕೂ ನನ್ನಿಂದ ಹೋಳಾಗದೇ ಉಳಿದಿದ್ದ ಎರಡು ಗಟ್ಟಿ ವಸ್ತುಗಳು ಒಂದು ಘಟ್ಟದೆಡೆಗೆ ಚಾರ್ಮಾಡಿ ಬೆಟ್ಟ, ಮತ್ತೊಂದೆಡೆ ಬಾಹುಬಲಿ ಅಡಿಗೆ ಚಂದ್ರಗಿರಿ ಬೆಟ್ಟ. ಚಾರ್ಮಾಡಿಯ ಆಚೆಗೂ ಅವಳೇ ಇದ್ದಳು, ಚಂದ್ರಗಿರಿಯ ಬೆಟ್ಟದಲ್ಲೂ ಅವಳೇ ಗೆದ್ದಳು. ಆದರೆ ಈ ನಿರಂತರ ಪ್ರೀತಿಯ ಸೋಲಿಗೆ, ಶರಣಾಗತಿಗೆ ಯಾರ್ಯಾರನ್ನೋ ಕರೆದುಕೊಂಡು ಹಂಬಲಿಸಿ ಓಡಿ ಹೋಗುತ್ತಿದ್ದ ನನ್ನನ್ನು, ನಿತ್ಯ ಕಾಯ್ದವರು, ಕಲಿಸಿ ಮುನ್ನಡಿಸಿದ ತಾಯಂದಿರು ಇದೇ ಚಾರ್ಮಾಡಿ ಹಾಗೂ ಚಂದ್ರಗಿರಿ. ಚಾರ್ಮಾಡಿ ನನಗೆ ಕಾರಿನ ಚಾಲಕನಾಗುವುದನ್ನು ಕಲಿಸಿದರೆ, ಚಂದ್ರಗಿರಿ ನನಗೆ ಅವಳ ಅಪನಂಬಿಕೆಯ ತೊಡೆಯ ಮೇಲೂ ತಣ್ಣಗೆ ಮಲಗುವುದನ್ನು ಕಲಿಸಿದಳು. ಇವರ ಸುತ್ತಿ ಬರುವುದೆಂದರೆ ಅವ್ವ ಎನ್ನುವ ಜೀವದ ಬೆನ್ನ ಜಾರುಗುಂಡಿಯ ಮೇಲೆ ಆಟವಾಡಿದ ಅನುಭವ. 
       ಈ ಮಧ್ಯ ಬೇಲೂರು, ಅದರ ಸೀಮಿತ ಬಳಗ ನನ್ನನ್ನು ಬಂಧಿತನನ್ನಾಗಿಸಿತು. ನಾನೆಂದೂ ಅದರಿಂದ ಬಿಡುಗಡೆ ಹೊಂದಲಾರೆ, ಅಂತಿಮವಾಗಿ ಇದೇ ಊರಿನಲ್ಲಿ ನನ್ನ ಬಾಳನ್ನು ಕಳೆದು ಬಿಡುತ್ತೇನೆ, ಇಲ್ಲಿಗೆ ನನ್ನ ಬದುಕೇ ಮುಗಿಯಿತು ಎಂದು ಮೂದಲಿಸಿದವರನ್ನು ಮರೆಯಲಾಗುವುದಿಲ್ಲ. ಆದರೆ ನಿಂತ ನೆಲದಲ್ಲೊಂದು ಸಣ್ಣ ಹೆಜ್ಜೆಯ ಗುರ್ತನ್ನೂ ಉಳಿಸದೆ ನಾನು ಎಲ್ಲಿಂದಲೂ ಹೆಜ್ಜೆ ಕಿತ್ತಿದವನಲ್ಲ. ನಮ್ಮ ಬಾಳಿನ ದಾರಿಯ ಮೇಲೆ ಅನಿವಾರ್ಯ ಎನ್ನುವಂತೆ ಬರುವ ಈ ಊರುಗಳು, ರಸ್ತೆ ಬದಿಯ ಮೈಲು ಗಲ್ಲುಗಳಂತೆ. ಅವುಗಳನ್ನು ಗಮನಿಸದೇ, ಗುರ್ತಿಸದೇ, ಗೌರವಿಸದೇ ಮುಂದೆ ಹೋಗುವುದು ನಮ್ಮ ಬದುಕಿನ ಗಂತವ್ಯದ ಅನ್ವೇಷಣೆಯಲ್ಲಿ ಗುಮಾನಿಯನ್ನು ಹುಟ್ಟಿಸುತ್ತದೆ.
    ಬೇಲೂರಿನ ವೈ.ಡಿ.ಡಿ ಕಾಲೇಜು ಸೇರಿದ ಮೇಲೆ ಅತ್ಯಂತ ಪ್ರೀತಿಯಿಂದ ಜವಾಬ್ದಾರಿಯೊಂದನ್ನು ಹೊತ್ತುಕೊಂಡೆ. ಹೊತ್ತುಕೊಂಡ ಪ್ರೀತಿ ಹೊರೆಯಾಯಿತು ಆದರೂ ಹಾದಿಯ ಬದಿಯಲ್ಲೇ ಅದನ್ನಿಟ್ಟು ಓಡಿ ಹೋಗುವುದು ಜವಾಬ್ದಾರನೊಬ್ಬನ ಲಕ್ಷಣವಲ್ಲ. ಏನೆಲ್ಲ ಬಲಿಕೊಟ್ಟಾದರೂ ಅದನ್ನೊಂದು ನೆಲೆಗೆ ಹಚ್ಚಲೇಬೇಕು. ನಾಲ್ಕಕ್ಷರ ಇಂಗ್ಲೀಷ್ ಬರುತ್ತದೆ ಎಂದಾಗ ಸರಕಾರಿ ಕಾಲೇಜುಗಳಲ್ಲಿ ನ್ಯಾಕ್, ಐಕ್ಯೂಎಸಿ, ರೂಸಾ ಹೀಗೆ ಏನೆಲ್ಲ ನಮ್ಮ ಹೆಗಲೇರುವುದು ಸ್ವಾಭಾವಿಕ. ನಾನು ಈ ಕಾಲೇಜಿನ ಇಂಥ ಹಲವಾರು ಹೆಣಭಾರ ಯೋಜನೆಗಳನ್ನು ಹೊತ್ತುಕೊಂಡು ಹೈರಾಣಾಗುವುದಲ್ಲದೆ ಕೈ ಹಿಡಿದ ಹೆಂಡತಿ, ಮಕ್ಕಳು, ಗೆಳೆಯ, ಗೆಳತಿಯರನ್ನೂ ಈ ಕಾಯಕಕ್ಕೆ ಬಳಸಿಕೊಂಡಿದ್ದೇನೆ. ಕಾಲೇಜಿನ ನ್ಯಾಕ್ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು 2009 ರಲ್ಲಿ ಪ್ರಾಂಶುಪಾಲರಾದ ಡಾ. ಐ.ಎಂ.ಮೋಹನ ಪ್ರಾರಂಭಿಸಿದರು. ಆದರೆ ಅದು ಮುಗಿದು ‘ಸಿ’ ಮಾನ್ಯತೆಯ ಕಾಲೇಜು ‘ಬಿ’ ಮಾನ್ಯತೆಗೆ ಬಂದು ನಿಲ್ಲುವುದರೊಳಗಾಗಿ ಐದು ಜನ ಪ್ರಾಂಶುಪಾಲರುಗಳು ಬದಲಾದರು. ನಾನು ಸಾಕಷ್ಟು ಬಾರಿ ಸೋತೆ, ಬಿದ್ದೆ ಮತ್ತೆ ಎದ್ದೆ. ಒಟ್ಟಾರೆ 2014 ರಲ್ಲಿ ಈ ಕ್ರಿಯೆ ಪೂರ್ಣಗೊಂಡಾಗ ನಾನು ನಿರಾಳನಾಗಿದ್ದೆ. ದೈಹಿಕವಾಗಿ, ಮಾನಸಿಕವಾಗಿ ಬೆಂಗಳೂರಿನೆಡೆಗೆ ಮೊಗಮಾಡಿದ್ದೆ. ದಾರಿಗಾಗಿ ದೈವದ ಮೊರೆ ಹೊಕ್ಕಿದ್ದೆ.

     ಭ್ರಮೆ ಇರಲಿಲ್ಲ. ಬೇಲೂರಿಗಿಂತಲೂ ಬೆಂಗಳೂರು ಬೃಹತ್ತಾದುದು, ಮಹತ್ತಾದುದು ಎನ್ನುವ ಹುಚ್ಚು ಭ್ರಮೆಗಳೇನೂ ಇರಲಿಲ್ಲ. ಕರ್ನಾಟಕದ ಹಳ್ಳಿಯಿಂದ ಹೊರಟ ಹೈದ ನಾನು, ರಾಜಧಾನಿಯನ್ನೊಮ್ಮೆ ನೋಡಬೇಕು. ಅಲ್ಲಿಯ ಸಾಹಿತ್ಯ, ಸಂಸ್ಕತಿ, ರಾಜಕಾರಣಕ್ಕೆ ಮುಖಾಮುಖಿಯಾಗಬೇಕು ಎಂಬ ಶುದ್ಧ ಹಂಬಲ ಬಿಟ್ಟರೆ ಇನ್ನೇನೂ ಇರಲಿಲ್ಲ. ಹಾಗೆ ನೋಡಿದರೆ ಬೆಂಗಳೂರಿನ ಯಾವುದೇ ಪುಸ್ತಕ ಮಳಿಗೆಗಳಲ್ಲಿ ಅತ್ಯುತ್ತಮವಾಗಿ ಮಾರಾಟವಾಗುವ ನಮ್ಮ ನವೋದಯದ ಬರಹಗಾರರು, ತಮ್ಮ ತಮ್ಮ ಊರುಗಳಲ್ಲಿಯೇ ರಾಜ್ಯವನ್ನು, ರಾಷ್ಟ್ರವನ್ನು, ಜಾಗತಿಕ ಅಸ್ತಿತ್ವವನ್ನು ಆರಾಧಿಸಿದರು. ನವ್ಯದ ತೇಜಸ್ವಿಯೂ ಈ ನಿಟ್ಟಿನಲ್ಲಿ ನಮಗೆ ದೊಡ್ಡ ಆದರ್ಶ.
      ಸುಮ್ಮನೆ ಬದಲಾವಣೆಗಾಗಿ ಬೆಂಗಳೂರು ಕೇಳಿದರೆ, ಇಲಾಖೆ ಕೇಂದ್ರ ಕಛೇರಿಯಲ್ಲಿ ನನಗೆ ಮಹತ್ವದ ಸ್ಥಾನ ನೀಡಿ ಮನ್ನಿಸಿತು. ನೊಂದು ಮುದ್ದೆಯಾಗಿದ್ದ ಮನಸ್ಸು ಮತ್ತೆ ಹೂವಾಗಿ ಅರಳಿತು. ನನಗಿಂತಲೂ ಒಂದೇ ತಿಂಗಳು ಮುಂಚೆ ಬೆಂಗಳೂರಿಗೆ ಬಂದಿದ್ದ ಪದ್ದಿಯೊಂದಿಗೆ ಮತ್ತೆ ಕೈ ಕೈ ಸೇರಿಸಿ ಬಾಳಿನ ಹೊಸ ಕನಸು ಕಾಣುವ ಅವಕಾಶ ದೊರೆಯಿತು. ಈಗ ಬೆಂಗಳೂರಿಗೇನೊ ಬಂದಿದ್ದೇನೆ, ಆದರೆ ಸದಾಕಾಲ ಸುಡುಸುಡುವ ನನ್ನೂರು, ಚಾರ್ಮಾಡಿಯ ಬೆಟ್ಟ ಮತ್ತು ಚಂದ್ರಗಿರಿಯ ಜಾರುವಿಕೆಗಾಗಿ ಹಸಿಯುತ್ತಲೇ ಇರುತ್ತೇನೆ. ಎಷ್ಟಾದರೂ ಈ ಬಾಳೆಂದರೆ ನಿರಂತರ, “ಇರುವುದೆಲ್ಲವ ಬಿಟ್ಟು, ಇರದುದರ ಕಡೆಗೆ ತುಡಿಯುವ” ಕಥೆಯಲ್ಲವೆ?

      




No comments:

Post a Comment