Total Pageviews

Tuesday, August 26, 2014

ರಾಜಭವನದಿಂದ ‘ಬನವಾಸಿ’ಯವರೆಗೆ. . . . .


        ಅದೊಂದು ಅಪರೂಪದ ದಿನ. ಯಾವ ಪುಣ್ಯಾತ್ಮರ ಹರಕೆ ಮತ್ತು ಆಶೀರ್ವಾದದ ಫಲದಿಂದ ಅದು ನನ್ನದಾಗಿತ್ತೊ, ಅಗಸ್ಟ 18 ರ ಮುಂಜಾನೆ ಮಹತ್ವದ ಅವಧಿಯನ್ನು ರಾಜಭವನದ ಆತಿಥ್ಯ ಸ್ವೀಕರಿಸುವುದರೊಂದಿಗೆ ಕಳೆಯುವ ಅವಕಾಶ ದೊರೆತಿತ್ತು. ಈ ಸಂತೋಷ ನನಗೆ ದಕ್ಕಿದ್ದು ನನ್ನ ವೃತ್ತಿ, ಜಾತಿ ಅಥವಾ ಇನ್ನಾವುದೇ ಕಾರಣಕ್ಕಾಗಿಯೂ ಅಲ್ಲ. ಬದಲಾಗಿ ಬರೀ ಓರ್ವ ಲೇಖಕನಾಗಿರುವುದಕ್ಕಾಗಿ. ಓರ್ವ ಬರಹಗಾರನಾಗಿ, ಅಂಕಣಕಾರನಾಗಿ ಕಳೆದ ಎರಡೂವರೆ ದಶಕಗಳಿಂದ ನಾನು ಕ್ರಮಿಸಿದ ದಾರಿಗೆ ಸಾಧನೆಗೆ ಇಂದು ದಕ್ಕಿದ ಗೌರವ ಎಂದುಕೊಂಡಿದ್ದೇನೆ. ಅನೇಕ ನನ್ನ ಓದುಗರಲ್ಲಿ ರಾಜಭವನದ ಹಿರಿಯರೂ, ಗೌವರ್ನರ್ ಅವರ ಆಪ್ತ ಸಲಹೆಗಾರರೂ ಆದ ಶ್ರೀ ವಿಜಯಕುಮಾರ್ ತೋರುಗಲ್ಲ ಅತ್ಯಂತ ಮಹತ್ವದವರು. 

   18 ರ ಮುಂಜಾವು ನನ್ನ ಬರಮಾಡಿಕೊಂಡ ರಾಜಭವನದ ಪೋಲಿಸ್ ಪರಿಚಾರಕರು ಹಾಗೂ ಮಾಧ್ಯಮ ಬಳಗ ತೋರಿಸಿದ ಪ್ರೀತಿ ಅನುಪಮವಾದುದು.
     ಈ ಅಪೂರ್ವ ಘಳಿಗೆಯಲ್ಲಿ ನನ್ನೊಂದಿಗೆ ಬರಲು ಯಾರೂ ಖಾಲಿಯಿಲ್ಲ. ಖಾಲಿ ಇದ್ದವರು ಬರುವಷ್ಟು ಹತ್ತಿರವಿಲ್ಲ. ತಂದೆ-ತಾಯಿ-ಬಳಗ ದೂರದ ಊರುಗಳಲ್ಲಿ, ಹೆಂಡತಿ ಮಾನವ ಹಕ್ಕುಗಳ ಆಯೋಗದ ವೃತ್ತಿಯ ಆರಂಭಿಕ ದಿನಗಳಲ್ಲಿ, ಮಕ್ಕಳು ಪಾಠ-ಪ್ರವಚನಗಳಲ್ಲಿ, ಹೀಗಾಗಿ ಜೊತೆಯಾದವರು ಪ್ರೊ. ಜಯಣ್ಣಗೌಡ, ಬಿಟ್ಟುಬಂದ ನನ್ನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ. ಸಂಭ್ರಮದ ಮನುಷ್ಯ. ರಾಜಭವನದ ಆ ಕ್ಷಣಗಳನ್ನು ನನಗಿಂತಲೂ ಅದ್ಭುತವಾಗಿ ಅನುಭವಿಸಿದವನು ಆತನೆ. ಬದುಕಿನ ನನ್ನ 43ನೇ ವಯಸ್ಸಿನಲ್ಲಿ ಲೇಖಕನಾಗಿ ನಾನು ಆನಂದಿಸಿದ ಈ ಗೌರವಕ್ಕೆ ಗೆಳೆಯನೊಬ್ಬ ಸಾಕ್ಷಿಯಾಗುತ್ತಿರುವುದು ಒಂದು ಮಹತ್ವದ ಬೆಳವಣಿಗೆಯೆಂದೇ ನಾನು ಪರಿಗಣಿಸಿದ್ದೇನೆ. 
     ನನ್ನ ಬಹಳಷ್ಟು ಮೊಕದ್ದಮೆಗಳು ದೇವರ ನ್ಯಾಯಾಲಯದಲ್ಲಿ ತುಂಬಾ ವಿಳಂಬವಾಗಿ ಇತ್ಯರ್ಥಗೊಂಡಿವೆ. ಆದರೆ ಆತನ ಪುಣ್ಯ ದೃಷ್ಠಿಯಿಂದ ಧಿಕ್ಕರಿಸಲ್ಪಟ್ಟಿಲ್ಲ.
        ಬೆಳಗಿನಂತೆಯೇ ಮುಸ್ಸಂಜೆ. ಈ ದಿನದ ಸಂಜೆ ರಾಜರಾಜೇಶ್ವರಿ ನಗರದ “ಬನವಾಸಿ” ಡಾ.ಸಿದ್ಧಲಿಂಯ್ಯನವರ ಮನೆ ಹಾಗೂ “ದಿ ಕ್ಲಬ್”ನಲ್ಲಿ. 

    ಅವರೀಗ ಅಜ್ಜ. ಮೊಮ್ಮಗಳು ಹುಟ್ಟಿ ಕೇವಲ 20 ದಿನ. ನನ್ನ ಗಾಂಧಿ, ಓಶೋ, ಕಾವ್ಯಕ್ಕೆ ಉರುಳುವಿನ  ನಿರಂತರ ಓದುರು, ಮಾರ್ಗದರ್ಶಿಗಳೂ ಕೂಡ. ಸುಮಾರು 10 ಸಾವಿರ ಪುಸ್ತಕಗಳ ಅದ್ಭುತ ಗ್ರಂಥಾಲಯ, ಮನೆ ತುಂಬ ಹೆಜ್ಜೆ ಹೆಜ್ಜೆಗೂ ಮುಗುಳ್ನಗುವ ಬುದ್ಧ, ನಿರಾಡಂಭರ ಕೌಟುಂಬಿಕ ಸಂಬಂಧಗಳ ಮಧ್ಯ ಬದುಕುವ ಸಿದ್ಧಲಿಂಗಯ್ಯನವರು, ಆನಂತರ ನಮ್ಮನ್ನು ಕರೆದುಕೊಂಡು ಹೋದುದು ‘ದಿ ಕ್ಲಬ್’ನ ರಮಣೀಯ ಸಂಜೆಗೆ. ಶ್ರೀರಾಂಪುರದ ಸ್ಮಶಾನದಲ್ಲಿ ಸಮಾಧಿಗಳ ಮೇಲೆ ಕುಳಿತು ಕನಸು ಕಾಣುತ್ತ ಬೆಳೆದ ಸಿದ್ಧಲಿಂಗಯ್ಯಾ ಸಾಗಿಬಂದ ದಾರಿಯನ್ನೊಮ್ಮೆ ಅನಾವರಣಗೊಳಿಸುತ್ತ ಹೋದರೆ ಒಂದು ಕ್ಷಣ ಭಯಾನಕ ಅನುಭವ. ಅದು ಹೇಳಿ ಮುಗಿಸುವುದೂ ಅಲ್ಲ, ಕೇಳಿ ಕುಳಿತುಕೊಳ್ಳುವುದೂ ಅಲ್ಲ.

      ಪ್ರೀತಿಗೆ ಉಪಸ್ಥಿತಿ ಒಂದೇ ಆಧಾರ.








No comments:

Post a Comment