Total Pageviews

Sunday, August 3, 2014

ಅನುಭಗಳ ನದಿಯಾಗು, ಅನುಭಾವದ ಕಡಲಾಗು.


“ಅಮ್ಮ ಹೇಳುತ್ತಿದ್ದಳು,
ಹರಿಯುವ ನದಿಯಾಗು ಮಗಳೇ
ಹಾಕಿದ ಪಾತ್ರೆಯ ಅಳತೆಯಾಗು, ಮತ್ತೆ
ಚೆಲ್ಲಿದರೆ ಸೋರಿ ಆವಿಯಾಗು
ಮೋಡ ತೇಲಿ ಭೋರೆಂದು ಸುರಿದು
ಹಗುರಾದ ನದಿಯಾಗು. . . .
                     ನೆಚ್ಚಿದ ನಲ್ಲನ ಎದೆಯ ಮಲ್ಲಿಗೆಯಾಗು” (ನದಿಯಾದವಳು)


ಬಾಯರಿಯವರ ಕಾವ್ಯಕ್ಕೆ ಹೋಗುವ ಮೊದಲು ಒಂದು ಮಾತು, ಒಂದು ಕ್ಷಣದ ಧನ್ಯತೆಯ ಭಾವ ಸಲ್ಲಬೇಕಾದುದು ಈ ಮಹಾ ಸಂಗಮಕ್ಕೆ ಕಾರಣರಾದ ವಿಶ್ವ ಚೇತನದ ಇಷ್ಟಲಿಂಗಪ್ಪನವರಿಗೆ, ಗುರುಗಳಾದ ಡಾ.ಶೀಲಾಕಾಂತರವರಿಗೆ, ಬಾಯರಿಯ ಸಹೋದರಿ ರೋಹಿಣಿಯವರಿಗೆ, ಡಾ. ವಿಜಯಕುಮಾರ ಅವರಿಗೆ ಹಾಗೂ ನನ್ನ ಮಾತುಗಳ ಮೂಲಕ ನಿರಂತರವಾಗಿ ಕಾವ್ಯ ಸುಧೆಯನ್ನು ಹೀರಿಯೂ ಮತ್ತೆ ಹಸಿವೆಯಿಂದ ನನ್ನನ್ನು ಕಾಡುವ ಬಾದಾಮಿಯ ಬಂಧುಗಳಿಗೆ.

 ಈಗ ಕಾವ್ಯಕ್ಕೆ ಬರೋಣ,
ಮತ್ತೆ ಮತ್ತೆ ನಾನು ಚಿಂತಿಸಿದ, ಇಷ್ಟಪಟ್ಟ ಕಸ್ತೂರಿ ಬಾಯರಿ ಅವರ ಅಪರೂಪದ ಸಾಲುಗಳಿವು. ‘ಸಂತೆ ಮನೆಯಾಗಬೇಕು, ಒಮ್ಮೊಮ್ಮೆ ಮನೆ ಸಂತೆಯಾಗಬೇಕು’ ಎನ್ನುವ ಬಾಯರಿಯವರ ಈ ಮೇಲಿನ ಸಾಲುಗಳು ಯಾವುದೇ ಪ್ರಜ್ಞಾವಂತ ಹೆಣ್ಣು ಮಗಳ ಸುಂದರ ಜೀವನಕ್ಕೆ ಸಾಕು ಎನಿಸುತ್ತವೆ. ಬಂಡೆಗಳ, ಹೆಬ್ಬಂಡೆಗಳ ಊರಿನಲ್ಲಿ ಅತ್ಯಂತ ಸಂವೇದನಾಶೀಲ ಮನಸ್ಸಿಟ್ಟುಕೊಂಡು ‘ಕಲ್ಲಾದಳು ಅಹಲ್ಯೆ’ ಎಂದು ಸಾರುತ್ತಲೇ, ಪ್ರೀತಗಾಗಿ ಹಪಹಪಿಸಿದ ಹಾಗೂ ಆ ಪ್ರೀತಿಯನ್ನು ತನ್ನ ಕವಿತೆ, ಕಥೆ, ಭಾಷಾಂತರ ಮತ್ತು ಪ್ರಭಂದಗಳ ಮೂಲಕ ಕಟ್ಟಿಕೊಟ್ಟ ಬಾಯರಿ ನಮ್ಮೊಂದಿಗಿದ್ದೂ ನಮ್ಮ ತೆರನಲ್ಲದವರು. ವರ್ತಮಾನದ ಒಳ ಸುಳಿಗಳಿಂದಲೇ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ನಮ್ಮಗಳ ಎದುರೇ ಇತಿಹಾಸದ ಪುಟವಾಗುವ ಪುಣ್ಯ ಪಡೆದ ಲೇಖಕಿ ಈ ಬಾಯರಿ. ಅವರ ಒಂದು ಕವಿತೆ ‘ಪಥಿಕ’ ನಾನು ಇಲ್ಲಿ ಮುರಿದು ಕಟ್ಟಿದ್ದೇನೆ-

“ಹರಿಯುವ ತೋಡಿಯಲಿ
ಕಾಗದದ ದೋಣಿ ತೇಲಿಬಿಟ್ಟಾಗ
ಕಪ್ಪೆ ಗೂಡು ಹೊಳೆ ದಂಡೆಯಲಿ ಕಟ್ಟಿದಾಗ
ಬಣ್ಣ ಎಳೆ ಕೈ ಮದರಂಗಿ ಗೆರೆ ಎಳೆದಾಗ
ಪ್ರೀತಿಗೆ ಹಂಬಲಿಸಿ ಏಕಾಂತದ ದಾರಿಯಲ್ಲಿದ್ದಾಗ
ಗೆಳೆಯ ನಿನೇಕೆ ಬೇಟ್ಟಿಯಾಗಲಿಲ್ಲ?”

2003 ರಿಂದ 2013 ವರೆಗಿನ ಈ ಒಂದು ದಶಕದ ಬೀಸಿನಲ್ಲಿ ಬಹಳವಾಗಿ ಕಾಡಿದ ಆತ್ಮೀಯ ಪಾತ್ರಗಳಲ್ಲಿ ಬಾಯರಿ ಒಬ್ಬರು. ನನ್ನ ‘ಚಲುವ’ ಎನ್ನುವ(ಪ್ರನಾಳ ಶಿಶು) ಪತ್ರಿಕೆಯೊಂದು ಬೆಂಗಳೂರಿನಿಂದ ಪ್ರಾರಂಭವಾದಾಗ ‘ಕಮಲಮ್ಮ ಮತ್ತು ರಾಜಕುಮಾರ’ ಎಂಬ ಕಥೆಯನ್ನು ಕೊಟ್ಟು ನನ್ನ ಸಾಹಿತ್ಯ ಕೃಷಿಯಲ್ಲಿ ಜೊತೆಯಾದ ಬಾಯರಿಯ ಬದುಕು ನಿರಂತರ ಅನಾರೋಗ್ಯ, ನರಳಿಕೆ, ಒಂಟಿತನ, ಅಪಮಾನ ಹಾಗೂ ಸಾವುಗಳ ದೊಡ್ಡ ಸರಮಾಲೆ. ಇಂಥದರ ಮಧ್ಯ ಅವರಿಗೆ ಜೀವ ಸಿಂಚನ ಮತ್ತು ಸಂಚಾರ ಈ ಸಾಹಿತ್ಯ ಕೃಷಿಯಿಂದ. ಅವರೇ ಬರೆಯುತ್ತಾರೆ “ಒಂದು ಹೊಸ ಹೊಳಹು, ಒಂದು ಹೊಸ ಪ್ರೀತಿ, ಒಂದು ಹೊಸ ಹುಟ್ಟು, ಒಂದು ಬೆಳಕಿನ ಕಿರಣ ಎಲ್ಲವೂ ನನಗೆ ಕವಿತೆಯ ಒಡಲಲ್ಲಿ ದೊರಕಿದೆ. ಬದುಕಿನ ಎಲ್ಲ ಕಳಕಳಿ, ಖುಷಿ, ತಲ್ಲಣ, ಕಂಪನ ಎಲ್ಲವೂ ಕವಿತೆಯ ಕನ್ನಡಿಯಲ್ಲಿ ಪ್ರತಿಬಿಂಬಿಸಿವೆ. ಅದಕ್ಕಾಗಿ ನಾನು ಈ ಜಗತ್ತಿನ ಎಲ್ಲಾ ಕವಿಗಳನ್ನು, ಕವಿತೆಗಳನ್ನು ತುಂಬ ಪ್ರೀತಿಸುತ್ತೇನೆ. ಮತ್ತೆ ಖಷಿಯಿಂಬ ಬಾಳುತ್ತೇನೆ.” ಬಾಯರಿ ಅನುಭವಗಳ ನದಿಯಾಗಿ ಹರಿದು ಅನುಭಾವದ ಕಡಲ ಸೇರುವ, ಮಮತೆಯ ಒಡಲುಳ್ಳ ಮಹಾ ಮಹಿಳೆ, ಮಾತೃಶ್ರೋತ.
 ಸಮುದ್ರ ಗೀತೆಯ ಗತಿಯನ್ನು ಗಮನಿಸುತ್ತ ಬಾಯರಿ ಬರೆಯುತ್ತಾರೆ-

ಈ ಬದುಕು ಒಂದು ಮೆರವಣಿಗೆ
ಹೆಜ್ಜೆ ಹಾಕಲಾಗದವರು
ಮೆಲ್ಲಕೆ, ಕಳ್ಳ ಹೆಜ್ಜೆಗಳಿರಿಸಿ ಹಿಂದೆ ಸರಿವರು
ಪಕ್ಷಕ್ಕೆ ಚಲಿಸುವ ಸೂರ್ಯಕಾಂತಿಯ ಹಾಗೆ.

ಹೀಗೆ ಸರಿದವರನ್ನೂ ಶಪಿಸದೆ, ಬಳಿಕರೆದು ‘ಉಡಿಯ ತುಂಬ ಉಡುತಡಿಯ ಬಾಳೆ ಹಾಕಿ ಬಿಂಬವಿಲ್ಲದ ಅಡಿಕೆ ಉಡಿಗೆ ಹಾಕಿ’ ಬಳಗ ಕಟ್ಟಿಕೊಂಡ ಬಾಯರಿ ಸುಟ್ಟ ಬೆಂಕಿಯನ್ನೂ ನಿಂದಿಸಿದವಳಲ್ಲ. ಸ್ತ್ರೀ ಸಂವೇದನೆಗಳ ಸಶಕ್ತ ಬರಹಗಾರ್ತಿಯಾಗಿಯೂ ಅದನ್ನೆಂದೂ ಹಣೆಪಟ್ಟಿಯಾಗಿಸಿಕೊಂಡು ಅವಕಾಶಗಳಿಗಾಗಿ ಆಕ್ರೋಶದ ತಮ್ಮಟೆ ಬಾರಿಸಲೇ ಇಲ್ಲ. ನವೋದಯ, ನವ್ಯ, ಬಂಡಾಯಗಳ ಎಳೆಎಳೆಗಳನ್ನೂ ತೆಗೆದುಕೊಂಡು ಕಾವ್ಯದ ಸೊಗಸಾದ ಹೊಸ ಕಸೂತಿ ಹೆಣೆದ ಬಾಯರಿ ಈ ಮಿಶ್ರಣದಿಂದಾಗಿಯೇ ಭಿನ್ನವಾಗುತ್ತಾರೆ. ಒಂದು ಅವರ ನವಿರಾದ ಕುಸುರಿಯನ್ನು ನೋಡಿ-

“ಅವನು ಅವಳ ಖಾಲಿ ಸಂಜೆ ನೆರಳುಗಳಲ್ಲಿದ್ದ
ಮುಂಜಾವಿನ ಹೊಳಲುಗಳಲ್ಲಿರಲಿಲ್ಲ
ಅಮವಾಸ್ಯೆ ರಾತ್ರಿಗಳ ನಕ್ಷತ್ರಗಳಲ್ಲಿದ್ದ
ಹುಣ್ಣಿಮೆಯ ಬೆಳದಿಂಗಳಲ್ಲಿರಲಿಲ್ಲ
ಅವನು ಮನದ ಪುಟ್ಟ ಝರಿಯಲ್ಲಿದ್ದ
ಅವಳೆದೆಯ ನದಿಯಲ್ಲಿರಲ್ಲಿಲ್ಲ
ಮನೆಯ ಮಲ್ಲಿಗೆಯ ಬಳ್ಳಿಯ ಚಿಗುರುಗಳಲ್ಲಿದ್ದ
ಮಾಲೆಯಾಗಿ ಮುಡಿಯೇರಲಿಲ್ಲ.”

ನಮ್ಮೊಳಗೆ ಹುಟ್ಟುವ ಕೋಟಿ ಕೋಟಿ ಭಾವಗಳಲ್ಲಿ ಯಾವುದು ಕವಿತೆಯಾಗುವ ಶಕ್ತಿ ಹೊಂದಿರುತ್ತದೆ ಎನ್ನುವುದನ್ನೂ ಆಲೋಚಿಸಿ ಬಾಯರಿ ಹೇಳುತ್ತಾರೆ-

ತುಂಬ ದೂರದಿಂದ ಭಾವಗಳು
ಯಾರ ಕೈ ಹಿಡಿದು ನಡೆಸುವುದಿಲ್ಲ
ಪೋರನ ಆಟವಾಡುವ ಗಾಲಿಯಂತೆ
ಉರುಳಬೇಕು ನುಣುಪಾದ ರಸ್ತೆಯಲಿ
ಮನಸ್ಸಿನಲ್ಲಿ ಹೊಸ ತಿರುವುಗಳ ರಿಂಗಣಗಳು.

ನದಿಯಾದವಳು, ಗಂಧವತಿ, ನೀನು ತೆರೆದ ಆಕಾಶ, ನೀಲಿ ಆಕಾಶಕ್ಕೆ ರೆಕ್ಕೆಗಳ ಬಿಚ್ಚಿ, ಕಾತ್ಯಾಯನಿ, ಇನ್‍ಕ್ರೆಡಿಬಲ್ ವೈಸಸ್ ಹೀಗೆ ಒಟ್ಟಾರೆ ಏಳು ಕಾವ್ಯ ಸಂಕಲನಗಳನ್ನು ಕನ್ನಡದ ಕಾವ್ಯಾಸಕ್ತರಿಗೆ ನೀಡಿರುವ ಕಸ್ತೂರಿ ಇನ್ನೂ ಅಪಾರ ಕನಸುಗಳನ್ನಿಟ್ಟುಕೊಂಡಿರುವ ದಣಿವರಿಯದ ಜೀವ.


ಕವಿಯೊಬ್ಬ ಮಹಾ ಕವಿಯನ್ನು ಕುರಿತು ಬರೆದಾಗ ಆ ಬರಹದ ಸೌಂದರ್ಯವೇ ಭಿನ್ನವಾಗಿರುತ್ತದೆ. ಇತ್ತೀಚೆಗೆ ಕಸ್ತೂರಿ ಬಾಯರಿ ಖಲೀಲ್ ಗಿಬ್ರಾನನ ಪ್ರೇಮ ಪತ್ರಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅದು ನಮ್ಮ ಹೆಮ್ಮೆಯಾಗಬೇಕಾದ ವಿಚಾರ, ಬಾಯರಿ ಕನ್ನಡಿಗರ ಅಭಿಮಾನವಾಗಬೇಕಾದ ಜೀವ.

No comments:

Post a Comment