Total Pageviews

Tuesday, July 29, 2014

ಸಾಹಿತ್ಯ ಮಂಥನ


“ಅವನು ಸುಮ್ಮನೆ ಸರಿದು ಹೋದ
ಆಕಾಶದ ಚಂದ್ರ ತಾರೆಗಳು ಹಾಗೆಯೇ ಹೊಳೆಯುತ್ತಿದ್ದವು.
ಎದೆಯ ದೇವರ ಮನೆಯಲ್ಲಿನ ಪ್ರಣತಿ
ಎಣ್ಣೆ ಆರಿ ನಂದಿಹೋಗಿತ್ತು ಅರ್ಧ ಬರೆದ
ಹಾಳೆ ಮೇಜಿನ ಮೇಲೆ ಸುಮ್ಮನೆ ಮಂಕಾದ ಕ್ಷಣಗಳು.”
-      ಕಸ್ತೂರಿ ಬಾಯರಿ

     ಶ್ರಾವಣ ಎಂದರೆ ಬೇಂದ್ರೆ, ಜಿಟಿ ಜಿಟಿ ಮಳೆ, ಬೇಂದ್ರೆ ಎಂದರೆ ಉತ್ತರ ಕರ್ನಾಟಕ, ಉತ್ತರ ಕರ್ನಾಟಕವೆಂದರೆ ಬಾಯಿತುಂಬ ಮಾತು, ಹೊಟ್ಟೆ ತುಂಬ ಊಟ, ಸಾಕು ಸಾಕೆನ್ನುವಷ್ಟು ಹಬ್ಬಗಳ ಒಡ್ಡೋಲಗ. ಕಳೆದ ಎರಡು ತಿಂಗಳಲ್ಲಿ ಎರಡು ಅದ್ದೂರಿಯ, ದೀರ್ಘವ್ಯಾಪ್ತಿಯ ಬೇಟ್ಟಿಗಳನ್ನು ನಾನು ಉತ್ತರ ಕರ್ನಾಟಕಕ್ಕೆ ನೀಡಿದ್ದೇನೆ. ಅದು ಕುಟುಂಬ ಸಮೇತ ಚಾಲುಕ್ಯರ ನಾಡಾದ ಬಾಗಲಕೋಟೆ, ಬಾದಾಮಿ ಬಿಜಾಪುರಗಳ ಮಧ್ಯ ಹಳೆಯ ಬಳಗವನ್ನೆಲ್ಲ ಕಟ್ಟಿಕೊಂಡು ತಿರುಗಾಡುವುದೆಂದರೆ ತಾಯಿಯೊಂದಿಗೆ ಊರ ಜಾತ್ರೆ ಮಾಡಿಬಂದಂತೆ.
  
       ಭೀಮನ ಅಮವಾಸ್ಯೆ, ನಾಗರ ಪಂಚಮಿ ಮತ್ತು ರಂಜಾನ್‍ದ ಈ ಪವಿತ್ರ ಘಳಿಗೆಯಲ್ಲಿ ಹೆತ್ತವರನ್ನು, ಮಡದಿ ಮಕ್ಕಳನ್ನು, ಗೆಳೆಯ-ಗುರು-ಶಿಷ್ಯ ವೃಂದದೊಂದಿಗೆ ಅಪರೂಪದ ಮತ್ತು ಅದ್ಧೂರಿಯ ಅವಕಾಶ ಈ ಸಾರಿ ಬಂದಿದ್ದು ಬಾದಾಮಿಯ ಕಾವ್ಯಾಸಕ್ತರ ಕಾರಣದಿಂದ. ಅದರಲ್ಲೂ ವಿಶೇಷವಾಗಿ ಕಸ್ತೂರಿ ಬಾಯರಿ ಅವರಿಂದ. ಈ ಬಾಯರಿ ಎಂದರೆ ಬಾದಾಮಿಯ ಬೆಳಕಿನೊಂದಿಗಿನ ಭೆಟ್ಟಿಯೇ ಎಂದುಕೊಳ್ಳುತ್ತೇನೆ. ಮಹಿಳೆಯೊಬ್ಬಳ ಕಾರಣ, ಮನಸಾರೆ ಹೋಗಿ ಬಾದಾಮಿಯ ಬನಶಂಕರಿಯಿಂದ ಗುಡ್ಡಾಪುರದ ದಾನಮ್ಮನವರೆಗೂ ಶ್ರಾವಣ ಮಾಸದ ಮೊದಲ ದಿನಗಳಲ್ಲಿ ಪುಣ್ಯಕ್ಷೇತ್ರಗಳ ದರ್ಶನ ಪಡೆಯುವ ಭಾಗ್ಯ ಬರಬೇಕಾದರೆ ಅದಕ್ಕೂ ಪುಣ್ಯಬೇಕು.
    ವಿಶ್ವಚೇತನ ವೇದಿಕೆ, ಕನ್ನಡ ಸಂಸ್ಕತಿ ಇಲಾಖೆ, ಡಕ್‍ಟೈಲ್ ಆರ್ಯನ್ ವಕ್ರ್ಸ ಮತ್ತು ಪರಿಮಳಾ ಸ್ವೀಟ್ಸ್ ಬಾದಾಮಿ ಇವುಗಳ ಸಂಯುಕ್ತಾಶ್ರಯಗಳಲ್ಲಿ ಜುಲೈ 27 ರಂದು ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ಬಾದಾಮಿಯಲ್ಲಿ, ಕನ್ನಡದ ಹೆಸರಾಂತ ಕವಿಯತ್ರಿ ಹಾಗೂ ಕಥೆಗಾರ್ತಿಯಾದ ಕಸ್ತೂರಿ ಬಾಯರಿ ಅವರ ಇದುವರೆಗಿನ ಸಾಹಿತ್ಯ ಕುರಿತು ‘ಸಾಹಿತ್ಯ ಮಂಥನ’ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿದ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಲ್ಲಿ ನಾನು, ಶ್ರೀ ನಾಗರಾಜ ವಸ್ತಾರೆ, ಚಿತ್ರನಟಿ ಅಪರ್ಣಾ, ಡಾ.ಶೀಲಾಕಾಂತ ಪತ್ತಾರ ಹಾಗೂ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಉಪಸ್ಥಿತಿ ಇದ್ದು ನಮ್ಮೊಂದಿಗೆ ಗೆಳೆಯ ಜಯಂತ ಕಾಯ್ಕಿಣಿಯ ನಿರೀಕ್ಷೆಯು ಇತ್ತು. ಆದರೆ ಮಗಳ ಓದಿನ ದಿನಗಳಲ್ಲಿ ನಿರ್ವಹಿಸಲೇಬೇಕಾದ ಮಹತ್ವದ ಜವಾಬ್ದಾರಿಯೊಂದರ ಕಾರಣ ಬಂದಿರಲಿಲ್ಲ ಅಷ್ಟೆ.       
    ಕನ್ನಡದ ಲೇಖಕನಾಗಿ ಅನುಭವಿಸಿದ ಅಪರೂಪದ ನನ್ನ ಪಾಲಿನ ಅದ್ದೂರಿಯ ಸಮಾರಂಭವಿದು. ನಿರಂತರ ಒಂದು ತಿಂಗಳು ಕಾರ್ಯಕ್ರಮದ ಸಂಘಟಿಕರು ನಿಗಾ ವಹಿಸಿದ ರೀತಿ, ಕಾಳಜಿ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ಟು ಟೈರ್ ಎ.ಸಿಯಲ್ಲಿ ಪ್ರಾರಂಭವಾದ ಕುಟುಂಬ ಸಮೇತದ ನನ್ನ ಈ ಪ್ರವಾಸ ಕಾರಿನಿಂದ ಕಾರಿಗೆ , ಜಿಲ್ಲೆಯಿಂದ ಜಿಲ್ಲೆಗೆ, ಅಲ್ಲಿಂದ ಮಹಾರಾಷ್ಟ್ರದ ಮೂಲೆಗೆ ಇಡೀ ನಾಲ್ಕು ದಿನ ವ್ಯಾಪಿಸಿಕೊಂಡು ಹಳೆಯ ಎಷ್ಟೆಲ್ಲ ನೆನಪುಗಳಿಗೆ, ಹೊಸ ಭರವಸೆಯ ಬಾಂಧವ್ಯಗಳಿಗೆ ಕಾರಣವಾಯಿತು.

No comments:

Post a Comment