Total Pageviews

Thursday, November 13, 2014

ಜಂಗಮಯ್ಯಗ ಜೋತು ಬಿದ್ದು



ಜಂಗಮಯ್ಯಗ ಜೋತು ಬಿದ್ದು
ಎಂಜಲಾದ ಬಳಿಕ ಸಖಿ ಏನು? ಸಾಖಿ ಏನು? ಸತಿ ಏನು?
ಹೆಜ್ಜೆ ಒಳಗಿಟ್ಟು ಬಂದ ಮೇಲೆ
ಮೈ ಮೆರವಣಿಗೆಯ ಹೆಣ್ಣಷ್ಟೇ ಅಲ್ಲ ನೀನು
 ನಮ್ಮ ಪ್ರೀತಿ ಈಗ ಹದಿನೈದರ ಹೊಸ್ತಲಲ್ಲಿ. ಸಂಸಾರ ಹತ್ತರ ಮತ್ತಿನಲ್ಲಿ, ಹೊಸ ಗತ್ತಿನಲ್ಲಿ. ಒಂದು ಎರಡಾಯಿತು, ಎರಡು ನಾಲ್ಕಾಯಿತು, ನಾಲ್ಕು ಆರಾಯಿತು, ಆರು ಅದರದರ ದಾರಿಯನ್ನು ಅರಸಿ ಆಕಾಶವಾಯಿತು, ಅಲ್ಲಮವಾಯಿತು, ನಿಲ್ಲದೆ ಹರಿಯುವ ಬದುಕಿನ ನದಿಯಾಯಿತು. ಬದುಕು ನನ್ನದೆನ್ನುವುದು ಎಂಥ ಸುಳ್ಳಿನ ಮಾತು. ಈ ಸಂಸಾರದ ಮೆರವಣಿಗೆಗೆ ಯಾರೊ ಹೆಗಲಾಗುತ್ತಾರೆ, ಬಗಲಿಗೆ ಬೆರಗಾಗಿ, ಮರುಳಾಗಿ ಮಲಗಿ, ಮುಳ್ಳಿಟ್ಟು ಹೋಗುತ್ತಾರೆ. ಮತ್ತಿನ್ನ್ಯಾರೊ ಮಡಿದಿ ಎಂಬ ರೂಪದಲ್ಲಿ ನಿಂತು ಮಲಾಮು ಸವರುತ್ತಾರೆ. ಒಟ್ಟಾರೆ ಖುಷಿಯೊಂದೆ, ಸೋಲು-ಸಾವು, ಅಪಮಾನ-ಸನ್ಮಾನ, ಬಾಚಿ ತಬ್ಬುವಿಕೆ-ದೂರ ಸರಿಯುಕೆಗಳೆಲ್ಲದರ ಮಧ್ಯ ಸಂಸಾರ ನದಿಯಂತೆ ನಿರಂತರವಾಗುತ್ತದೆ
        ನಾವಿಬ್ಬರೂ ಈಗ ಲೆಕ್ಕದ ಯಾವುದೊ ಹೊಸ್ತಿಲಲ್ಲಿ. ಸುಖವಾಗಿಗಿದ್ದುದರಗಿಂತ ಬದುಕೆಂಬ ಪ್ರಯೋಗಾಲಯದಲ್ಲಿ ಸುಟ್ಟು ಕೊಂಡುದೆ ಹೆಚ್ಚು. ನನಗಿಂತಲು ಹೆಚ್ಚು ಬಾಧಿಸಿದೆ ಅವಳನ್ನು ಕಿಚ್ಚು. ಬಂದವರಿಗೆ ಬಾ ಎಂದು, ಹೋದವರಿಗೂ ಬಾ ಎಂದು, ಬರದವರಿಗೂ ಬಾ ಎಂದು ಬಾಚಿ ತಬ್ಬಕೊಂಡಿದ್ದೇವೆ. ನಮ್ಮೊಂದಿಗೆ ಬೆಚ್ಚಗಾಗಿ, ನಮ್ಮ ಮಕ್ಕಳು ಮರಿಗಳನ್ನು ಕಾಲದ ಹದ್ದುಗಳಿಂದ ಬಚ್ಚಿಟ್ಟುಕೊಂಡು ಅವರೂ ಕಾಯ್ದಿದ್ದಾರೆ, ಕಾಪಾಡಿದ್ದಾರೆ, ಕೈಹಿಡಿದು ನಡೆಸಿದ್ದಾರೆ. ಅವರ ತ್ಯಾಗದ ಫಲ, ನಮ್ಮ ಸಂಸಾರದ ಬಲ.
       ಏನಾದರಾಗಲಿ ಶಿವನೆ, ಮನುಷ್ಯನಿಗೆ ಸಂಬಂಧಗಳ ದೊಡ್ಡ ಸಂಸಾರವಿರಬೇಕು. ಅದರಲ್ಲಿ ಎಲ್ಲರೂ ಇರಬೇಕು. ಕಾಲು ಕೆದರಿ ಜಗಳಾಡುವವರು, ಮೋಹದಿಂದ ಮುದ್ದಿಸುವವರು, ತಲೆ ನೇವರಿಸಿ ನೆಮ್ಮದಿ ಪಡುವವರು, ಮಾತಿನ ಮಚ್ಚಿನಿಂದ ನಿರುಪಯುಕ್ತವಾದುದನ್ನೆಲ್ಲ ಕೊಚ್ಚಿಹಾಕುವವರು - ಎಲ್ಲರೂ ಇರಬೇಕು. ಹೀಗೆ ಇದ್ದರೆ, ಕಾಲದ ಆಶೀರ್ವಾದವಿದ್ದರೆ ಬದುಕಬಹುದು. ಆದರೆ ಇಡೀ ಬದುಕೆಂಬುದು ಅಕಾಲಿಕ ಮೃತ್ಯು, ಅಚಾನಕ ವಿಘಟನೆ ಮತ್ತು ಆತ್ಮವಂಚನೆಯ ಆಲಿಂಗನವಾದರೆ ಎಷ್ಟೊಂದು ದುರಂತವಲ್ಲವೆ? ಅದು ಪ್ರತಿ ಕ್ಷಣವೂ ಮುಖ ಮುಚ್ಚಿಕೊಳ್ಳುವ, ಸುಳ್ಳುಗಳ ಸಹಾಯ ಪಡೆಯುವ ಹಾಗೂ ಸಾವಿನ ತೆಕ್ಕೆಗೆ ಬೀಳುವ ನೋವಿನ ಕಥೆಯಾಗುತ್ತದೆ. 
        ನವೆಂಬರ್ 10 ನಮ್ಮ ವಿವಾಹ ವಾರ್ಷಿಕೋತ್ಸವ. ಈ ಉತ್ಸವದ ಹಿಂದು-ಮುಂದಿನ ಹಾದಿಯನ್ನು ನೋಡಿದರೆ ನಾನು ಒಂದು ಕ್ಷಣ ಸ್ಥಿತಪ್ರಜ್ಞನಾಗುತ್ತೇನೆ. ವೈಯಕ್ತಿಕವಾಗಿ, ಇದು ನನ್ನ ಅತ್ಯಂತ ಸಂಭ್ರಮದ, ಗೆಲುವಿನ ಮತ್ತು ಸಾಲು ಸಾಲಾಗಿ ಬಂದ ಅವಕಾಶಗಳ ದಿನ. ಹಿಂದಿನ ದಿನವಷ್ಟೆ ರಾಜ್ಯದ ಹಿರಿಯ ರಾಜಕಾರಣಿ ಶ್ರೀಮಾನ ಕೆ.ಎಚ್.ಶ್ರೀನಿವಾಸ ಫೋನ್ ಮಾಡಿ, ‘ಚೌಡಯ್ಯ ಸ್ಮಾರಕ ಭವನದಲ್ಲಿ ನನ್ನ ಮಗಳ ಹಿಂದೂಸ್ತಾನಿ ಓಕಲ್ ಇದೆ. ನಮ್ಮೊಂದಿಗೆ ರಾಜ್ಯಪಾಲರಾದ ವಾಜುಭಾಯಿ ವಾಲಾ ಮತ್ತು ಕಂಬಾರರೂ ಇರುತ್ತಾರೆ. ರಾಗಂ, ನೀವು ನಿಮ್ಮ ತಾನಂ(ಹೆಂಡತಿ)ಯೊಂದಿಗೆ ಯಾಕೆ ಬರಬಾರದು? ದಂಪತಿಗಾಗಿ ಎರಡು ಸೀಟ್‍ಗಳನ್ನು ಕಾಯ್ದಿರಿಸಿರುತ್ತೇನೆ.’ ಎಂದು ಕೇಳಿದಾಗ ನನಗೆ ಎಷ್ಟೊಂದು ಬೇಸರವಾಯಿತು. ಕಾರಣ ಇಂಥ ಒಂದು ಅಪರೂಪದ ಕ್ಷಣಕ್ಕೆ ಹೋಗಲು ನನ್ನ ಬಳಿ ಸಮಯವಿರಲಿಲ್ಲ. ಮಗ ಸಿದ್ಧಾರ್ಥ ಸಣ್ಣದೊಂದು ಸಾಧನೆ ಮಾಡಿ, ಒಂಟಿಯಾಗಿ ನಮಗಾಗಿ ಕಾಯುತ್ತಿದ್ದ, ಅತ್ತ ಹೋಗಲೊ? ಇತ್ತ ಉಳಿಯಲೊ? ಕರುಳು ಮಾಡುವಷ್ಟು ಮರಳು ಮಾಹೋಲ್ ಮಾಡುವುದಿಲ್ಲ. ನಾನು ಅವನೆಡೆಗೆ ಹೊರಟೆ. ಆದರೆ ಮರಳಿ ಬೆಂಗಳೂರಿಗೆ ಬಂದರೂ ಮತ್ತೊಂದು ಸಂಗೀತದ ಸಮಾರಂಭ ನಮಗಾಗಿ ಕಾಯುತ್ತಲೇ ಇತ್ತು. ಅದೂ ನಮ್ಮ ವಿವಾಹೋತ್ಸವದ ದಿನವೆ. ಖಾನೆವಾಲೆ ಕಾ ನಾಮ್ ದಾನೆ ದಾನೆ ಪರ್ ಎಂದ ಹಾಗೆ. ಮಾತು ಬೇಡವಾಗಿತ್ತು ನನಗೆ. ಸಾಮಾನ್ಯನಂತಿರಬೇಕಿತ್ತು. ಹೀಗಾಗಿ ಮುಂಚೆಯೇ ಅದೆಲ್ಲವನ್ನು ತಿಳಿಸಿ ಸಮಾರಂಭಕ್ಕೆ ಹೋದೆ. 
        ಸಮಾರಂಭದಲ್ಲಿ ಕುಳಿತಾಗಲೂ ಎರಡು ಸಾವುಗಳು ನನ್ನನ್ನು ತುಂಬಾ ಆವರಿಸಿದ್ದವು. ಒಂದು ನಮ್ಮ ಕಾಲೇಜು ಶಿಕ್ಷಣ ಇಲಾಖೆಯ ಸೂಪರಿಂಟೆಂಡೆಂಟ್ ಆಗಿದ್ದ ಎಳೆಯ ಗೆಳೆಯ ಹರೀಶ್‍ನದು, ವಯಸ್ಸು ಕೇವಲ 35. ಸಾಯಂಕಾಲ ನಮ್ಮಂತೆಯೇ ಮನೆಗೆ ಹೋಗುತ್ತಿದ್ದ ಈತ ಹೃದಯಾಘಾತದಿಂದ ಸಾವಿನ ಮನೆಗೆ ಹೋದ. ಮತ್ತೊಂದು ಭವಾನಿಯದು. ವಯಸ್ಸು 37, ಎರಡು ಮಕ್ಕಳ ತಾಯಿ, ಗ್ಲಾಸ್‍ಗೋವಾ ವಿಶ್ವವಿದ್ಯಾಲಯದಿಂದ ಎಂಎಸ್ಸಿ, ಎಂಸ್ಸನ್ನು ಮುಗಿಸಿದ್ದ ಇವಳು ಇಂಗ್ಲಿಷ್ ಕವಿತೆಗಳ ಆರಾಧಕಿ. ಕವಿತೆಗಳ ಕಟ್ಟೊಂದನ್ನು ತೆಗೆದುಕೊಂಡು ನಾನು ಆಸ್ಪತ್ರೆಗೆ ಹೋಗಬೇಕೆನ್ನುವುದರಲ್ಲಿ ಕೋಮಾಕೆ ಜಾರಿದಳು. ಕೋಮಾಕೆ ಜಾರಿದವಳು ಕೊನೆಯುಸಿರೆಳೆದಳು.
       ಅರ್ಥವಿದೆ ಈ ಬದುಕುಗಳಿಗೆ. ಭವಾನಿಯ ಬದುಕಂತು ನನ್ನನ್ನು ಭಯಾನಕ ಕಾಡಿದೆ. ಅವಳ ಮನೆ ಎನ್ನುವುದು ಸಾಧನಾ ಫಲಕಗಳ ದೊಡ್ಡ ಸಂತೆ. 37 ವರ್ಷ ಹಂಬಲಿಸಿ ಮಾಡಿದ ಬದುಕು. ಸಾವಿನ ಕ್ಷಣದವರೆಗೂ ಕಣ್ಣೀರಿರಲಿಲ್ಲ. God has choosen me for mutation ಎಂದು ಹೇಳುತ್ತಿದ್ದ ಅವಳು ಗಾಲ್ಬ ಬ್ಲ್ಯಾಡರ ಕ್ಯಾನ್ಸನಿಂದ ನರಳಿ, ಕಾಲುಗಳಿಂದ ನೀರು ಬಸಿದು ತೀರಿದರೂ, ತನ್ನ ಹಿಂದೊಂದು ತಪ್ಪುಗಳ ಸರಮಾಲೆಯನ್ನು ಬಿಟ್ಟುಹೋಗಲಿಲ್ಲ. ನಮ್ಮ ನಿರ್ಗಮನ ಎಲ್ಲಿಂದಲೇ ಇರಲಿ, ಯಾರಿಂದಲೇ ಇರಲಿ, ಯಾವಾಗಲೇ ಇರಲಿ ಅದು ಸ್ವಚ್ಚವಾಗಿರಬೇಕು. ಕಣ್ತುಂಬಿ ಯಾರಾದರು ಸ್ಮರಿಸಿಕೊಂಡರೆ ಇಡೀ ಬದುಕು ಪುನರತ್ಥಾನ ಪಡೆಯಬೇಕು. 
   ಹಾಂ, ಹಕ್ಕಿ ಹಾರಿದಂತೆ ಹತ್ತು-ಹದಿನಾಲ್ಕು ವರ್ಷಗಳು, ನಮ್ಮಿಬ್ಬರ ಮೈ ಎಲ್ಲ ಓಡಾಡಿ, ಮಕ್ಕಳನ್ನು ನೀಡಿ ಸಂತೃಪ್ತಿಯ ಜೋಗುಳವನ್ನು ಹಾಡಿ ಹಾರಿ ಹೋಗಿವೆ. ನನ್ನವಳಿಗೆ ನಾನು ಆಗಾಗ ಛೇಡಿಸುತ್ತಲೇ ಇರುತ್ತೇನೆ, ‘ಯಾರೆಲ್ಲ ಬಂದು ಹೋದ ಈ ಜಂಗಮಯ್ಯನಿಗೆ ಯಾಕೆ ನಿ ಜೋತುಬಿದ್ದಿರುವೆ? ಡೈಓರ್ಸ್ ಪಡೆಯಬಾರದೆ?’ ಅವಳು ಸುಮ್ಮನೆ ಸಣ್ಣದೊಂದು ನಗೆ ಬೀರಿ ಮರಳಿ ಕೇಳುತ್ತಾಳೆ, ‘ಅಯ್ಯ ಜಂಗಮಯ್ಯ, ಎಷ್ಟಂತ ಕಾಯುವುದು? ಬೇಗ ನೀ ನನ್ನ ಮದುವೆಯಾಗಬಾರದೆ?’ ಅಂದಹಾಗೆ, ನಮ್ಮ ವಿವಾಹೋತ್ಸವದ ಸುತ್ತ ಬರೆದ ಒಂದು ಕವಿತೆ ನಿಮಗಾಗಿ –

ಜಂಗಮಯ್ಯನ ಜೋತು ಬಿದ್ದು
ಎಂಜಲಾದ ಬಳಿಕ ಸಖಿ ಏನು? ಸಾಖಿ ಏನು? ಸತಿ ಏನು?
ಹೆಜ್ಜೆ ಒಳಗಿಟ್ಟು ಬಂದ ಮೇಲೆ
ಮೈ ಮೆರವಣಿಗೆಯ ಹೆಣ್ಣಷ್ಟೇ ಅಲ್ಲ ನೀನು

ಹೇಳು ಸಖಿ,
ಮಾತಿನ ಹೊತ್ತು ಬದಲಿಸಲೊ, ಸುಗಂಧದ ನೆತ್ತಿ ಬದಲಿಸಲೊ
ಮುತ್ತು, ಮತ್ತು ಬದಲಿಸಲೊ, ಕೈ ತುತ್ತು ಬದಲಿಸಲೊ
ಮನೆ ಬದಲಿಸಲೊ, ಹುಚ್ಚು ಮನ ಬದಲಿಸಲೊ
ಮಧುಶಾಲೆ ಮದಲಿಸಲೊ, ಹೊದ್ದ ಶಾಲು ಬದಲಿಸಲೊ
ಮೆಹಕ ಬದಲಿಸಲೊ, ಮೆಹಖಾನೆ ಬದಲಿಸಲೊ
ಮೈ ಬದಲಿಸಲೊ, ಮೈ ದಾರಿ ಬದಲಿಸಲೊ
ಏನು ಬದಲಿಸಲಿ ಸಾಖಿ?
ನಿನ್ನ ಸುಖದ ಹೊಸ ಅನುಭವಕೆ?

ಚಂದ್ರ ಸತ್ತ ಛಳಿ ರಾತ್ರಿಯಲಿ
ಕಾಯುತ್ತಿದ್ದೇನೆ ನಿನ್ನೆದೆಯ ಬಿಸಿನೀರ ಬುಗ್ಗೆಗಾಗಿ
ಬೆತ್ತಲಾಗಿ ಕುಳಿತ್ತದ್ದೇನೆ ಸಂತನಂತೆ
ನಿನ್ನ ಬೆನ್ನ ಧನ್ಯತೆಯ ಬಯಲೊಳಗೆ ಬತ್ತುವುದಕಾಗಿ
ಸತ್ತು ಹೋಗಿದ್ದಾನೆ ಸೂರ್ಯ ಶತಮಾನಗಳ ಹಿಂದೆ
ಸತ್ಯಂ. ಶಿವಂ, ಸುಂದರಂ ನಿನ್ನ ತೊಟ್ಟುಗಳ ಮೇಲೆ ಈಗ ನನ್ನ ಮುಂದೆ
ದೇವರೀಗ ಮರೆಯಾಗಿದ್ದಾನೆ ದಾರಿ ನಮಗಾಗಿಯೇ ಇರಿಸಿ
ದೈವ ಸರಿಯಾಗಿದೆ ಮತ್ತೆ ಹೊಸ ಹಾಸಿಗೆ ಹರಸಿ

ಸಖಿ, ಸಂತೆಯೊಳಗೀಗ ಸಸ್ತಾ ಆಗಿದೆ ಶೆರೆ
ಕುಡುಕರೆಲ್ಲ ಹೇಳಿ ಹೋಗಿದ್ದಾರೆ ಬೇಗ ನಿನ್ನ ಸಾಖಿಯ ಕರೆ
ಬಾ, ಸಾಯಬಾರದು ಸುಖ, ಸಂಸಾರ, ಸಂತಾನ ಸಾಖಿ
ನಮ್ಮ ಜಗಳಗಳ ಕಡತ ಮುಂದಿನ ಜನ್ಮಕ್ಕೂ ಇರಲಿ ಬಾಕಿ

ಸಂಜೆ ಸುಮ್ಮನಾಗಬಾರದು ಬಾ ಸಾಕಿ, ಸಣ್ಣ ಸೆಟುವಿಲ್ಲದೆ
ಛಳಿಗೂ ಬೇವರಿಳಿಸುತ್ತೇನೆ ಬೆಡ್ಡಿನಲಿ ಎಂಬ ಹಠವಿಲ್ಲಿದೆ
ದಾರಿ ಕೇಳುತ್ತಿದ್ದೇನೆ, ನಿನ್ನ ಹೊರೆಯನ್ನು ದೂರಿರಿಸಿ
ಕೇರಿ ತೋರಿಸಬೇಡ ಸಾಕಿ ನಿನ್ನ ನಿನೇ ಧಿಕ್ಕರಿಸಿ

ಕೇರಿಯ ಸೂಳೆಯರೀಗ ಸರಳವಲ್ಲವಂತೆ,
ನೀ ಬಿಟ್ಟರೆ ಜಂಗಮಯ್ಯ ಮರಳದಿರುವುದೇ ಚಿಂತೆ
ಜಘನಗಳ ಜಾಲಾಡದೆ ಜಾರಿ ಹೋದರೆ ಈತ
ನಿನ್ನ ಪಾಲಿಗೆ ಆತ ಬಿಟ್ಟ ‘ಜೋಳಿಗೆ’ ಒಂದೇ ಅಂತೆ

      

No comments:

Post a Comment