Total Pageviews

Thursday, November 20, 2014

ಇಲ್ಲಿ ಇರಲಾಗದು ಇನ್ನೆಲ್ಲಿಯೂ ಹೋಗಲಾಗದು

                                                                ಮುಂಜಾನೆ ಎದ್ದು
ನೀರೆರೆದು ರಂಗೋಲಿ, ಅರಿಶಿಣ-ಕುಂಕುಮ
ಹೊಸ್ತಿಲಿಗೆ ಹೂ ಇಡುವ ಹೆಣ್ಣು ನೋಡಿದಾಗ
ಸಣ್ಣದೊಂದು ಗುಮಾನಿ ಶುರುವಾಗುತ್ತದೆ
ನಾ ಸತ್ತ ಮೇಲೆ ಹೀಗೆಯೇ ನನ್ನ ಸಮಾಧಿಗೆ
ಹೂ ಇಡುವ ಅವಳ ನೆನೆದು
ವರ್ತಮಾನವೂ ತಣ್ಣಗಾಗುತ್ತದೆ.
ಈ ಬೆಂಗಳೂರಿನಲ್ಲಿ ಭ್ರಮೆ ಮತ್ತು ಬದುಕಿನ ಮಧ್ಯ ವ್ಯತ್ಯಾಸ ಕಾಣುವುದು ಎಷ್ಟೊಂದು ಕಷ್ಟವಲ್ಲವೆ? ಇಡೀ ವಾರ ರಸ್ತೆಗಳ ಮೇಲೆ ಶರವೇಗದಲ್ಲಿ ಹೊರಟ ವಾಹನಗಳಂತೆ ಓಡುತ್ತಲೇ ಇರುತ್ತದೆ ಬದುಕು. ಬೆಳಗಾದರೆ ಒಂದು ಭ್ರಮೆ. ಅದನ್ನು ಸುತ್ತಿ ಎನೋ ಸಾಧಿಸಿ ಬಂದೆ ಎಂದು ನಿರಾಳದ ಉಸಿರು ಬಿಟ್ಟು ಸಂಭ್ರಮಿಸುವುದು ಮತ್ತೊಂದು ಭ್ರಮೆ. ಕಛೇರಿಯಲ್ಲಿ ಕುಳಿತು ಸುತ್ತಲು ನಡೆಯುವ ಒಟ್ಟು ಚಟುವಟಿಕೆಯನ್ನು ಗಮನಿಸಿದಾಗ ಇಡೀ ದಿನವನ್ನೊ, ವಾರವನ್ನೊ ಅವಲೋಕಿಸಿದಾಗ, ಏನು ಸಾಧನೆಯಾಯಿತು ಎಂದು ಪ್ರಶ್ನಿಸಿಕೊಂಡಾಗ ಸಿಗುವ ಉತ್ತರ ಪುಟಗಳಿಂದ ಭಾರವಾದ ಸಾಲು ಸಾಲು ಕಡತಗಳು. ಒಂದು ಕಡೆಯಿಂದ ಇನ್ನೊಂದು ಕಡೆ ಅದು ಹೋಗುತ್ತದೆ ಮತ್ತೆ ಯಥಾವತ್ತಾಗಿ ಬಂದು ಕುಳಿತುಕೊಳ್ಳುತ್ತದೆ. ಹೊತ್ತು ತಿರಗುವ ಜವಾನರ ಚಪ್ಪಲಿ ಸವಿಯುತ್ತದೆ ಸಮಸ್ಯೆ ಮಾತ್ರ ಹಾಗೆಯೇ ಇರುತ್ತದೆ. ಕಳೆದ ನಾಲ್ಕು ತಿಂಗಳಲ್ಲಿಯೇ ಈ ನಡಿಗೆಯನ್ನು ಗಮನಿಸಿದ ನಮಗೆ ನಾವೆಲ್ಲಿದ್ದೇವೆ? ನಮ್ಮ ಬುದ್ಧಿ ಭಾವಕ್ಕೆ ಏನು ಸೇರಿದೆ? ಶುದ್ಧ ಗಾಳಿಯಲ್ಲಿ ಅದ್ದಿ ತೆಗೆಯಲಾದ ಬದುಕಿಗೆ ಏನು ದಕ್ಕಿದೆ? ಹೀಗೆ ನಿರುತ್ತರ ಪ್ರಶ್ನೆಗಳು.
        ಗೆಳೆಯ ಮೂರ್ತಿ ಜ್ಞಾನಜ್ಯೋತಿ ಸಭಾಂಗಣದ ನನ್ನ ಮೊದಲ ಭಾಷಣಕ್ಕೆ ಮಾರುಹೋದ ಮಹತ್ವದ ಸಿನಿಮಾ ನಿರ್ದೇಶಕ. ಮನೆವರೆಗೂ ಬಂದು, ಪ್ರೀತಿಯಿಂದ ನಳಪಾಕಕ್ಕೆ ಕರೆದೋಯ್ದು ಗಂಟೆಗಳವರೆಗೆ ನನ್ನ ಶಕ್ತಿಗಳನ್ನು ನನಗೇ ಪರಿಚಯಿಸಿ, ನನ್ನಿಂದ ಹೊಸದೇನನ್ನೋ ಬಯಸುತ್ತಿದ್ದ ಅವರಿಗೆ ಇಂದಿಗೂ ನಿಖರವಾಗಿ ಏನೂ ಹೇಳಲಾಗುತ್ತಿಲ್ಲ. ಜಿ.ವಿ ಅಯ್ಯರ್‍ರ ಪರಮ ಶಿಷ್ಯರಾದ ಅವರು ‘ಹಂಸಗೀತೆ’, ‘ಸಿದ್ಧಗಂಗಾ’ ಮತ್ತು ‘ಶಂಕರ ಪುಣ್ಯಕೋಟಿ’ ಚಿತ್ರಗಳನ್ನು ಮಾಡಿ ಕನ್ನಡ, ತಮಿಳು, ಮಲಿಯಾಳಿ ಮತ್ತು ಹಿಂದಿ ಸೇರಿ 90 ಚಿತ್ರಗಳ ನಿರ್ದೇಶಕನಾಗಿ, ಆಧ್ಯಾತ್ಮ ಜೀವಿಯಾಗಿ ಉಳಿಸಿಕೊಂಡ ಶಿಸ್ತು, ವಿನಯ ಮತ್ತು ಅವರ ಪ್ರೀತಿ ಒಂದು ಆದರ್ಶ. ಕಳೆದ ಅನೇಕ ವರ್ಷಗಳಿಂದ ನಿದ್ರೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ನನಗೆ ಉತ್ಸಾಹದ ಕೊರತೆಯಾಗುತ್ತಿದೆಯೇ? ಏನು ಬೇಡ ಎನಿಸುತ್ತಿದೆಯೇ? ಒಂದು ಸಣ್ಣ ಗುಮಾನಿ. 
 ಸಾಕಿ ಈ ವಾರಾಂತ್ಯಕ್ಕೆ ಸಿದ್ಧವಾಗಿ ಅಂಗಡಿಗಳ ಸೇರಬೇಕು. ರಶ್ಮಿ ಬನ್‍ಸಲ್‍ಗಾಗಿ ವೆಸ್ಟಲೈನ್ ಪಬ್ಲಿಕೇಷನ್ ಅವರೊಂದಿಗಿನ ಯೋಜನೆ ಪೂರ್ಣವಾಗಬೇಕು. ಇದೇ 26 ಕ್ಕೆ ಇಲಾಖೆಯ ನನ್ನ ವಿಭಾಗದಿಂದ ಉನ್ನತ ಶಿಕ್ಷಣ ಪರಿಷತ್‍ನಲ್ಲಿ ಬೃಹತ್ ಸಮಾವೇಷವಾಗಬೇಕು, ಗೆಳೆಯನೊಬ್ಬನ ಹಗಲು-ರಾತ್ರಿಯ ನಿರಂತರ ಪ್ರಾಮಾಣಿಕ ಪರಿಶ್ರಮದಿಂದ ಸಿದ್ಧಗೊಂಡ ಲೋಕದ ಮನೆ ‘ಜೋಳಿಗೆ’ ಲೋಕಾರ್ಪಣೆಯಾಗಬೇಕು, ನನ್ನ ಪ್ರೀತಿಯ ಪದ್ದಿಗಾಗಿ ಫೆಬ್ರುವರಿ 14 ಕ್ಕೆ ಚಿತ್ರರಂಗದ ಗಣ್ಯರನ್ನೆಲ್ಲಾ ಸೇರಿಸಿ ಗಂಭೀರವಾದುದೆನನ್ನೋ ನೀಡಬೇಕು, ಬೆಂಗಳೂರಿನ ರಾಜಕುಮಾರ ಅಭಿಮಾನಿ ಸಂಘಗಳು ನನ್ನ ಹೆಗಲಿಗೆ ಹಾಕಿರುವ ‘ಮುತ್ತು ರಾಜ್’ ಮತ್ತೆ ಮಾತಾಗಬೇಕು. ಅಬ್ಬಾ! ನಿದ್ರೆ ಹತ್ತುವುದಿಲ್ಲ, ನಿದ್ರಿಸದೆ ಬದುಕಲಾಗುವುದಿಲ್ಲ. ಬೆಂಗಳೂರಿನಲ್ಲಿ ಇರಲಾಗದು ಇನ್ನೆಲ್ಲಿಯೂ ಹೋಗಲಾಗದು. ಯಾವ ನಿರೀಕ್ಷೆಗಳು ಇಲ್ಲದೆ ನಿರಾಳವಾಗಿ ಈ ನಗರ ಸೇರಿದೆ ಆದರೆ ಅನಿರೀಕ್ಷಿತವಾಗಿ ಏನೆಲ್ಲ ತಂದು ನಿಲ್ಲಿಸಿದ ದೇವರು. ಎಷ್ಟೊಂದು ಮುಗಿಸುತ್ತೇನೊ, ಇನ್ನೆಷ್ಟನ್ನು ಅರ್ಧ ಮುಗಿಸುತ್ತೆನೊ ದೈವ ಇಚ್ಛೆ. 
      ಸಂಯುಕ್ತ ಕರ್ನಾಟಕದ ನನ್ನ ಮೂರುವರೆ ಲಕ್ಷ ಬಂಧುಗಳು ನಿರಂತರ ಹೀಗೆಯೇ ಹರಸುತ್ತಾ, ನನ್ನ ಇರುವನ್ನು ಮರೆಸುತ್ತಾ ಕೈಹಿಡಿದು ನಡೆಸಿದರೆ ಏನೆಲ್ಲ ಚಮತ್ಕಾರವಾಗಬಹುದು. ಹಾಗೆ ನೋಡಿದರೆ ಬದುಕೇ ಒಂದು ಚಮತ್ಕಾರ. ಎಲ್ಲಿ? ಯಾವಾಗ? ಯಾರಿಂದ? ನೆಳಕಿನ ಕಿರಣಗಳು ಈ ಜಡ ಬಾಳಿನೊಳು ಹೊಕ್ಕು ನಮ್ಮ ಬೆಳಕಾಗಿಸಿಬಿಡುತ್ತವೊ ಅದು ಆ ಭಗವಂತನಿಗೊಬ್ಬನಿಗೆ ಗೊತ್ತು. ನಿದ್ರೆ ಬರುತ್ತಿದೆ ಜಾರುವ ಮುನ್ನ ಒಂದು ಪ್ರೀತಿಯ ಪದ್ಯ –
ನನ್ನ ಬೆಳಕಿನ ಪ್ರಭೆ ನಿನ್ನದೇ ಇತ್ತು
ನನ್ನ ಕಾವ್ಯದ ಕಮನೀಯತೆ ನಿನಗಷ್ಟೆ ಗೊತ್ತು
ಉಸಿರಿದರೆ ಕೆಸರಾಗಿ ಸವರಿಕೊಳ್ಳುತ್ತಿದ್ದ ನೀನಗೆ
ನನ್ನ ಹಣೆ ನೇವರಿಸಿ ಕನಸು ಅರಳಿಸುವ
ಮನಸ್ಸು-ಮುದ-ಆ ಕೈಗೊಂದು ಹದ ಮತ್ತೆ
ಛೇಡಿಸುವ ಪದ ಎಲ್ಲ ನಿನ್ನಲ್ಲಿತ್ತು
ಹೀಗಾಗಿಯೇ ಇರಬಹುದು
ನಿನೆಂದರೆ ಅನುಗಾಲವೂ ಮತ್ತು

No comments:

Post a Comment