- To ask for the perfect relation is to ask for the moon.
ಕಳೆದ ಒಂದು ವಾರದಲ್ಲಿ ತಿನ್ನುವ ಅನ್ನಕ್ಕೆ
ಸಮಾಧಾನ ಪಟ್ಟುಕೊಳ್ಳುವಷ್ಟು ಕೆಲಸಗಳಾಗಿವೆ. ನನ್ನ ಸಾಕಿ ತನ್ನ ಅರ್ಧಸತ್ಯಗಳ ಬುಟ್ಟಿಹೊತ್ತುಕೊಂಡು
ನನ್ನ ಓದುಗರ ಓಣಿಯಲ್ಲಿ, ಜಾಣಮಾತುಗಳನ್ನಾಡುತ್ತ, ತಾನು ಜಾರಿದ ಕತೆ ಹೇಳುತ್ತ, ನಿಮ್ಮ ಆತ್ಮದ ಕನ್ನಡಿಗಳಲ್ಲಿ
ತನ್ನ ಬಿಂಬ ನೋಡಿಕೊಳ್ಳುತ್ತಿದ್ದಾಳೆ. ಎಷ್ಟಾದರೂ ಹೆಣ್ಣವಳು, ತನ್ನ ಸುತ್ತಲು ಜೀವಂತಿಕೆಯ ಒಂದು ಮಾಹೋಲ್
ಇರಬೇಕೆಂಬ ಹಂಬಲ. ಹಂಬಲ ಅಪರಾಧವಾಗದಿರಲಿ. ನಿಮ್ಮ ಬಳಿಯೇ ಬರುತ್ತಾಳೆ. ಬರಮಾಡಿಕೊಂಡು ಆರತಕ್ಷತೆಗೆ
ಬಂದ ಹೆಣ್ಣುಮಗಳನ್ನು ಬೀಳ್ಕೊಡುವಂತೆ ಹರಸಿ ಕಳುಸುವಿರಾ?
ಮೊದಲ ದಿನವೇ ನೂರು ಪ್ರತಿಗಳ ಮಾರಾಟದ
ದಾಖಲೆ ಅವಳದು. ಅದೇನು ಸಾವಿರಗಳ ಸಂಖ್ಯೆಯೆ? ಎಂದು ಮೂದಲಿಸುವ ನಾದನಿಯರೂ ಅವಳ ಪಕ್ಕದಲ್ಲಿಯೇ ಇದ್ದಾರೆ.
ಆದರೆ ಅವರ ಈ ಮೂದಲಿಸುವಿಕೆಯೆ ಅವಳ ಬಾಳದೋಣಿಯ ಕೈವುಟ್ಟು. ಇಂಗ್ಲೀಷ್‍ನಲ್ಲಿ ಒಂದು ಸುಭಾಷಿತವಿದೆ, “Those who kicked us they don’t know how they
helped us to move towards our goal”.

ಅವರೊಬ್ಬ ಅಪರೂಪದ ಮನುಷ್ಯ. ಧಾರವಾಡದ ನಮ್ಮ ಆರಂಭಿಕ ದಿನಗಳಲ್ಲಿ ಸಹೋದರರಿಬ್ಬರಿಗೂ
ನೆರಳಾಗಿ ನಿಂತು, ನಮ್ಮ ನೆತ್ತಿಕಾಯ್ದು ನಿರ್ಮೋಹಿಯಂತೆ ಹೊರ ಹೋದವರು. ಮೊನ್ನೆಯೂ ಅಷ್ಟೇ, ಯಾಕೋ ನನಗೆ
ಬೆಂಗಳೂರು, ಈ ಇಲಾಖೆ ಎಲ್ಲ ಬಿಟ್ಟು ನನ್ನ ಜೋಳಿಗೆಗೆ ಹೋಗಿ ಬಿಡಬೇಕಿನ್ನಿಸಿತು. ಆದರೆ ನವಕರ್ನಾಟಕದ
ತಮ್ಮ ಆಫೀಸಿಗೆ ಕರೆಯಿಸಿಕೊಂಡು ಅಲ್ಲಿದ ಚಿತ್ರಕಲಾ ಪರಿಷತ್‍ವರೆಗೂ ಕರೆದೊಯ್ದು, ಸಮಾಧಾನಿಸಿ, ಈ ಬೆಂಗಳೂರಲ್ಲಿ
ಕೆಲಸಗಳನ್ನು ಯಾವ ಅಂತರದಿಂದ ನೋಡಬೇಕೆಂಬುದನ್ನು ಕಲಿಸಿದವರವರು.
ಬೆಂಗಳೂರಲ್ಲಿ ಒಂದು ವಾರವೆಂದರೆ ಸರಕಾರಿ ಕಚೇರಿಗಳಲ್ಲಿ 5 ದಿನವಷ್ಟೆ. ಸೋಮವಾರ
ಸುಧಾರಿಸಿಕೊಳ್ಳಲು, ರವಿವಾರ ವಿರಮಿಸಿಕೊಳ್ಳಲು, ಇರುವ ಐದೇ ಐದು ದಿನಗಳಲ್ಲಿ ನನ್ನ ಕೈಕೆಳಗೆ ಏಳು
ಜನ ಕೆಲಸಗಾರರು ಬದಲಾಗಿದ್ದಾರೆ. ಯಾರಿಗೂ ದೂಷಿಸುವಂತಿಲ್ಲ. ಎಜೆನ್ಸಿಗಳ ಮೂಲಕ ಕೆಲಸಕ್ಕೆ ಬರುವ ಈ
ಗೆಳೆಯ-ಗೆಳೆತಿಯರಿಗೆ ಎಂಟು ತಿಂಗಳಿಂದ ಸಂಬಳವಿಲ್ಲ. ಇದು ಮನುಷ್ಯ ಲೋಕವೆ? ಭಯವಾಗುತ್ತದೆ ನನಗೆ.
ತೆರೆ ಎಳೆಯುವ ಮುನ್ನ, ಈತನನ್ನು ನೋಡಿ, ಈತ ನಮ್ಮ ಉನ್ನತ ಶಿಕ್ಷಣ ಪರಿಷತ್‍ನ
ನಮ್ಮ ಸೆಕ್ಯೂರಿಟಿ. ಹೆಸರು ದೇವರಾಜ. ಈ ಇಲಾಖೆಗೆ ಬಂದಾಗಿನಿಂದ ನನ್ನ ಗಮನ ಸೆಳೆದಿದ್ದಾನೆ. ಕಾರಣ,
ಈತ ಕೈಯಲ್ಲಿ ಪುಸ್ತಕವಿರದೆ ಕುಳಿತ-ನಿಂತ ಒಂದೇ ಒಂದು ಕ್ಷಣವನ್ನು ನಾನು ನೋಡಲಿಲ್ಲ. ನಮ್ಮ ಶಿಕ್ಷಣ
ಸಚಿವ ಆರ್.ವಿ.ದೇಶಪಾಂಡೆಯವರು ಚೇಂಬರ್‍ಗೆ ವರಗಿಯೋ ಅಥವಾ ನನ್ನ ಚೇಂಬರ್‍ನ ಮುಂದೋ, ಜಗವೇ ಉರಿದು ಹೋಗುತ್ತಿದ್ದರೂ
ಕೈಯಲೊಂದು ಪುಸ್ತಕ ಹಿಡಿದುಕೊಂಡು, ನಿಂತುಕೊಂಡೇ ತನ್ನ ಡ್ಯೂಟಿ ಮಾಡುತ್ತಿರುತ್ತಾನೆ. ಅಂದಹಾಗೆ ಈತನ
ಶಿಕ್ಷಣ ಕೇವಲ 7ನೇ ಇಯತ್ತೆ. ಒಳ್ಳೆ ಅಥ್ಲೇಟ್, ಚಹಾ
ಕುಡಿಯಲಾರ, ಹೆಚ್ಚಿಗೆ ಮಾತಾಡಲಾರ, ದಿನಕ್ಕೊಂದು ಪುಸ್ತಕ, ಅದರಲ್ಲಿ ಇಂಗ್ಲೀಷ್ ಮತ್ತು ಕನ್ನಡದ ಘಟಾನುಘಟಿಗಳೆಲ್ಲ
ಸೇರಿದ್ದಾರೆ. ಖುಷವಂತಸಿಂಗ್, ಮಿಲ್ಕಾಸಿಂಗ್, ರಾಬಿನ್ ಶರ್ಮಾ, ನೆಪೋಲಿಯನ್ ಹಿಲ್, ಪೆಟ್ರಿಕ್ ಕಾರ್ನ್‍ವೆಲ್,
ನಿಕ್, ಭೈರಪ್ಪ, ತೇಜಸ್ವಿ, ಬೀಚಿ, ನಾನು ಎಲ್ಲ ಸೇರಿಕೊಂಡಿದ್ದಾರೆ.

ನಮ್ಮ ಉನ್ನತ ಶಿಕ್ಷಣ ಪರಿಷತ್ತ್‍ನಲ್ಲಿಯ ಸಭೆಗಳಲ್ಲಿ ಸಾಮಾನ್ಯವಾಗಿ ಆರ್ಥಿಕವಾಗಿ
ಸಬಲರಾಗಿರುವವರೆ ಸೇರಿಕೊಂಡಿರುತ್ತಾರೆ. ಒಂದು ದಿನ ಚಿನ್ನದ ಬ್ರಾಸ್ಲೆಟ್ ಒಂದು ಯಾರದೋ ಕೈಯಿಂದ ಜಾರಿ
ಅಲ್ಲಿಯೇ ಬಿದ್ದುಕೊಂಡಿತ್ತು. ಈ ನಮ್ಮ ದೇವರಾಜ ಅದನ್ನು ತಂದು ನಮ್ಮ ಕೈಗಿಟ್ಟು, 'ಇದು ಇಲ್ಲಿಯೇ ಬಿದ್ದಿತ್ತು
ಸಾರ್, ಯಾರದು ಕೇಳಿ ತಲುಪಿಸಿಬಿಡಿ.'”ಎಂದಿಟ್ಟು ಮತ್ತೆ ತನ್ನ ಪುಸ್ತಕ ಲೋಕಕ್ಕೆ ಹೊರಟುಹೋದ. ಇದು
ಆತ ಬೆಳೆದು ಬಂದ ಸಂಸ್ಕತಿಗೆ ಹಿಡಿದ ಕನ್ನಡಿ.
ಒಂದು ದಿನ ಮಧ್ಯಾಹ್ನ ನಮ್ಮ ಕಚೇರಿಗೆ ಹೊಂದಿಕೊಂಡೆ ಇರುವ ಕೇಂದ್ರ ಪೋಸ್ಟ್ ಅಫೀಸ್‍ನ
ಒಂದು ನೂರು ವರ್ಷಗಳಷ್ಟು ಹಳೆಯ ಕಟ್ಟಡಕ್ಕೆ ಅವನನ್ನು ತಿಂಡಿಗೆ ಕರೆದೊಯ್ದೆ. ನನ್ನ ಅಂಚೆ ಮನೆಯ ಕವಾಟುಗಳ
ಮೋಹ ಇನ್ನೂ ಸತ್ತಿಲ್ಲ. ಹಾಲು ಕುಡಿಯುತ್ತ ಆತ ಕೇಳಿದ, 'ನಿಮ್ಮ ಮುಂದಿನ ಪುಸ್ತಕ ಯಾವುದು ಸಾರ್?'
ನಾನು ಮುಸಿನಕ್ಕು ಪ್ರೇಮಿಗಳ ದಿನಾಚರಣೆಯೆಂದು ನಾನು ನೀಡಲಿರುವ ಕೊಡುಗೆಯ ಬಗೆಗೆ ಹೇಳಿದೆ. ಅದನ್ನು
ಆಲಿಸಿದ ಆತ ಕೇಳಿದ,“'ಸಾರ್, ನಮ್ಮ ಗದ್ದೆಗಳಲ್ಲಿ, ಮನೆಗಳಲ್ಲಿ, ಹಳ್ಳಿಗಳಲ್ಲಿ ಅನೇಕ ಕಾರ್ಮಿಕ ಗಂಡ-ಹೆಂಡತಿಯರನ್ನು
ನೋಡುತ್ತೇವೆ. ಅವರು ಪರಸ್ಪರ ಮಾತು ಕಡಿಮೆ, ಬಹಿರಂಗ ಪ್ರೀತಿ ಕಡಿಮೆ, ದೂರದೂರವೇ ಕುಳಿತಿರುತ್ತಾರೆ.
ರಾತ್ರಿ ಒಂದಷ್ಟು ಕೂಡಿರುವುದು ಬಿಟ್ಟರೆ, ಅವರು ಉಳಿದಂತೆ ಹಾಗೆಯೇ ಇರುತ್ತಾರೆ. ಆದರೆ ಅರಗಳಿಗೆ ಗಂಡ
ಕಾಣದಿದ್ದರೆ ತಮ್ಮ ಪ್ರಾಣವೇ ಹೋದಂತೆ, ಏನೋ ಕಳೆದುಕೊಂಡಂತೆ ಚಡಪಡಿಸುತ್ತಾರೆ. ಆದರೆ ನಮ್ಮ ಬೆಂಗಳೂರಿನ ಗಾರ್ಡನ್‍ಗಳಲ್ಲಿ, ಬೈಕುಗಳ ಹಿಂಬದಿಯಲ್ಲಿ,
ಇವರೇನೊ ಕೂಡಿಯೇ ಸಾಯುತ್ತಾರೆ ಎನ್ನುವಂತೆ ಕುಳಿತುಕೊಳ್ಳುವ ನಮ್ಮ ಪ್ರೇಮಿಗಳು, ಒಂದೇ ವರ್ಷದಲ್ಲಿ
ಫ್ಯಾಮಿಲಿ ಕೋರ್ಟ್‍ಗಳಲ್ಲಿರುತ್ತಾರೆ. ನನಗ್ಯಾಕೊ
ನಮ್ಮ ಹಳ್ಳಿಯ ಅಪ್ಪ-ಅಮ್ಮಂದಿರದ್ದೇ ನಿಜವಾದ ಪ್ರೀತಿ. ಈ ಪ್ರೇಮಿಗಳದ್ದು ಬರೀ ಕಾಮ ಎನಿಸುತ್ತಿದೆ. ಇದಕ್ಕೆ ನೀವೇನೆನ್ನುತ್ತೀರಿ?' ಎಂದು ನನ್ನ ತಲೆಕೆಡಿಸಿಬಿಟ್ಟ.
ಯಾಕೋ ಈಗ ನನ್ನ ಇಡೀ ಬರಹವನ್ನೇ ಭಿನ್ನವಾಗಿ ನೋಡಬೇಕು ಎನ್ನಿಸಿತ್ತು.
ಸಾಧ್ಯವಾದರೆ ನೀವು ಇಂಥವರನ್ನು ಗುರ್ತಿಸಿ ಗುರಿತೋರಿಸಬಹುದಲ್ಲಾ?
ನಾನು ನಂಬಿದ್ದೇನೆ ಮತ್ತು ಮೌನವಾಗಿದ್ದೇನೆ,
ಯಾಕೆಂದರೆ- The love that lasts longest is the love that is never returned.
No comments:
Post a Comment