Total Pageviews

Thursday, December 18, 2014

‘ಜೋಳಿಗೆ’: ಲೋಕದ ಮನೆಗೆ ನಾಲ್ಕು ದಿನ ಬನ್ನಿ



ಗೋಡೆಯಿಲ್ಲದ ಮನೆಗೆ
ಯಾರೂ ಬರಬಹುದಯ್ಯ
ಗೂಡಂಥ ಎದೆಯೊಳಗೆ
ಮೊಟ್ಟೆ ಇಡಬಹುದಯ್ಯ
ದೃವದಿಂದ ದೃವಕ್ಕೆ
ಚುಂಬನದ ಛಳಿ ಹೊತ್ತ
ಗಾಳಿ ಬರಬಹುದಿಲ್ಲಿ ತೂರಿಕೊಂಡು
ನಭದಿಂದ ನೆಲಕೆ
ಬೆಳಕು ಬಿತ್ತುವ
ಸೂರ್ಯ ಬರಬಹುದಿಲ್ಲಿ
ನೆರಳ ಬಯಸಿ
ನಿಂತ ನೆಲದಲ್ಲೆಲ್ಲ ನೆಲೆಯೂರುವ ಕನಸು ಕಂಡವ ನಾನು. ನನ್ನ ಈ ಮೈಗೆ ಅಲ್ಲಲ್ಲಿ, ಮಲಗಿದಲ್ಲಿ, ನಿಂತಲ್ಲಿ, ಕುಂತಲ್ಲಿ ಕೈತುತ್ತು ಉಂಡಲ್ಲಿ ಒಂದೊಂದು ದೇಹ ಬಿಟ್ಟುಬರುವ ಭಾಗ್ಯವಿದ್ದಿದ್ದರೆ, ಖಂಡಿತ ಅದನ್ನು ಬಿಟ್ಟು, ಹೊಸದೊಂದನ್ನು ತೊಟ್ಟು ಬರುತ್ತಿದ್ದೆನೇನೊ. ಆ ಭಾಗ್ಯವಿಲ್ಲದಿರುವುದೇ ಎಷ್ಟೊಂದು ಬೇಸರಗಳಿಗೆ, ನಮ್ಮ ಮೈಗಳ ಧಿಕ್ಕರಿಸಿದವರ ಸುತ್ತ ಆಪಾದನೆಗಳಿಗೆ ಕಾರಣವಾಗುತ್ತದೆ.
‘ಅಹಂ’ ಎನ್ನುವುದೇ ಹಾಗೆ. ಅದು ಏನನ್ನು ಸೇರಿಕೊಂಡಿತೊ ಆ ಮೂಲಧಾತುವಿನಲ್ಲಿಯ elasticity ಯನ್ನೇ ಹಾಳುಮಾಡಿತು. ಛೆ, ವಿಚಾರ ಎಲ್ಲೋ ಹೋಯಿತು. ನಾನು ಹೇಳುತ್ತಿದ್ದುದು ನನ್ನ ನೆಲದ ನಂಟಿನ ಕುರಿತು.
 ಬಹಳ ಚಿಕ್ಕವನಿದ್ದಾಗಿನಿಂದ ನಾನು ನೋಡದೆಯೂ ನನ್ನನ್ನು ಕಾಡಿದ ಮೂರು ಊರುಗಳು. ಒಂದು ಧಾರವಾಡ, ಮತ್ತೊಂದು ಬೆಳಗಾವಿ, ಇನ್ನೊಂದು ಮೈಸೂರು. ಸರಿ, ಈ ಧಾರವಾಡದ ಕುರಿತು ಏನು ಹೇಳುವುದು? ಇದು ಕಾಡಿಸಿದ-ಛೇಡಿಸಿದ, ಸೋಲಿಸಿದ-ಗೆಲ್ಲಿಸಿದ ರೀತಿಗೊಂದು ಕಾದಂಬರಿಯನ್ನೇ ಬರೆಯಬೇಕು. ಆದರೂ ವಿಚಿತ್ರ, ಒಂದರ್ಥದಲ್ಲಿ ಏನೆಲ್ಲ ಕೊಟ್ಟ ಈ ಧಾರವಾಡ, ತನ್ನನ್ನೇ ನನಗೆ ಕೊಡಲಿಲ್ಲವೊ ಅಥವಾ ನಾನದರ ಮೋಸದ ಮತ್ತಿನಿಂದ ದೂರಾದೆನೊ ಇಂದಿಗೂ ಗೊತ್ತಿಲ್ಲ. ಒಟ್ಟಾರೆ ಹಂಬಲಿಸಿ ನನ್ನ ಪದ್ದಿ ಮತ್ತು ತಮ್ಮನೊಂದಿಗೆ ಕಟ್ಟಿಕೊಂಡ ಅಂಗಡಿ, ಅಲ್ಲಿಯ ಮನೆ ಎಲ್ಲ ಹಂಪು ಹರಿದುಕೊಂಡು ಹೊರಬಂದೆ.
 ಮತ್ತೊಂದು ಹಂತ, ವೃತ್ತಿ ಜೀವನ ಆರಂಭಿಸಿದ ಬೆಳಗಾಂದ್ದು. ಚೆಂದುಳ್ಳ ಹುಡುಗಿಯರಿಗೆ ಮಲೆನಾಡ ಸೆರಗ ಸಿರಿಗೆ ಮನಸೋತು, ಎಂ.ಎ ಮುಗಿಸಿದ ತಕ್ಷಣವೇ ಪುಡಿಕಾಸು ನೌಕರಿಯನ್ನೇ ಹೇಗೆಲ್ಲ ಸಂಭ್ರಮಿಸಿ ಬೆಳಗಾಂ ಎಂಬ ಬೆಳಗಾಂನ್ನು ಬಿಗಿಯಾಗಿ ಹಿಡಿಯಲು ಹೋದೆ. ಅದು ಸಿಕ್ಕಿತು. ಆದರೆ ನನಗಲ್ಲ ನನ್ನ ತಂಗಿಗೆ. ಪರವಾಗಿಲ್ಲ, ಮಕ್ಕಳು ಸಂಸಾರದೊಂದಿಗೆ ಮನೆಯ ಮೇಲೆ ಮನೆ ಕಟ್ಟಿಸಿಕೊಂಡು, ಆರೋಗ್ಯವಂತಳಾಗಿ ಸಮಾಜದೊಂದಿಗೆ ಈ ಬೆಳಗಾಂದಲ್ಲಿ ಆಕೆ ಇರೋದು ನಾನಿದ್ದಷ್ಟೇ ಖುಷಿ ನೀಡಿದೆ.
ಮಧ್ಯದಲ್ಲೊಂದು ಪ್ರಹಸನ ಅಥವಾ ಭ್ರಮನಿರಸನ. ಬಾಗಲಕೋಟೆಗೆ ಅಂಟಿಕೊಂಡದ್ದು. ನೀರಿದ್ದ ಊರು. ನನ್ನ ಸಂಸಾರ ಪಲ್ಲವಿಸಿದ, ಸಾಹಿತ್ಯ ವಿಸ್ತಾರಗೊಂಡ, ಪ್ರೀತಿ ದ್ವಿಗುಣಗೊಂಡ, ಮಕ್ಕಳು ಹುಟ್ಟಿ ಅಂಬೆಗಾಲಿಟ್ಟು ದೊಡ್ಡವರಾದ ಈ ಊರಲ್ಲೂ ದನದ ದೊಡ್ಡಿಯಾಗಿದ್ದ ನೆಲ ಒಂದನ್ನು ನಾಕವಾಗಿಸುವ ಕನಸೇ ಕನಸು. ಖುಷಿ ಇದೆ. ಮರನೆಟ್ಟಿದೆ, ಅಂಗಳದ ತುಂಬ ನೆರಳಿದೆ, ಪ್ರತಿ ಮುಂಜಾವಿಗೂ ನೀರು-ರಂಗವಲ್ಲಿಯ ಚಿತ್ತಾರಕ್ಕೆ ಅವಕಾಶವಿದೆ. ಇದನ್ನೆಲ್ಲ ನೋಡಲು ಸಾಕ್ಷಿ ಕಲ್ಲಿನ ಹಾಗೆ ಒಂದು ತುಳಸಿ ಕಟ್ಟೆಯೂ ಇದೆ. ಆದಾಗ್ಯೂ ಅಲೆಮಾರಿಯ ಯಾತ್ರೆಗೆ ಇಲ್ಲಿಯ ಜಾತ್ರೆ ಸರಿಯನ್ನಿಸಲಿಲ್ಲವೆನೊ. ಹಂಗಿನರಮನೆಗಿಂತ . . . . 
 ಬೇಡ ದೂರ ಬಂದು ಬಿಡೋಣ ಎಂದು, ಶುದ್ಧ ಮಲೆನಾಡಿನ ಹಾಸನ ಜಿಲ್ಲೆಯ ಬೇಲೂರು ಸೇರಿಕೊಂಡು, ಇಲ್ಲಯ ಕಾಡಿಗೆ ಹುಚ್ಚನಾಗಿ ಬಿಟ್ಟೆ. ತೇಜಸ್ವಿಯ ಮೂಡಗೆರೆ, ನಮ್ಮ ಗೌರಿಯ ಸಕಲೇಶಪುರ, ನನ್ನ ರಾತ್ರಿಗಳ ಅಟ್ಟಾಡಿಸುವ ಕೊಟ್ಟಿಗೆಹಾರ, ಆಚೆ ಇಳಿದರೆ ಹೊಳೆವ ಮೂಡಬಿದಿರೆ ಇಲ್ಲಿ ಏಲ್ಲಾದರೂ ನನಗೊಂದು ಮನೆ ಇರಬಹುದೆ? ಎಂದುಕೊಳ್ಳುವಾಗ ಆಸರೆಯ ಕೈನೀಡಿ ಕರೆದದ್ದು ನನ್ನ ಬಾಲ್ಯದ ಕನಸುಗಳ ಆವರಿಸಿಕೊಂಡಿದ್ದ ಮೈಸೂರು. ಸರಿ, ಗೆಳೆಯನೊಬ್ಬನಿಗೆ ನೂರು ನಮನ ಹೇಳಿ ನಿನ್ನಿಂದ ನನ್ನ ದೇಹದ ಅಂತಿಮ ನೆಲೆ ನನಗೆ ಸಿಕ್ಕಿತು ಎಂದು ಹೇಳಬೇಕೆನ್ನುವುದರಲ್ಲಿ ದೈವವೆನ್ನುವ ಬೆರಗು ಗಣ್ಣಿನ ಹೆಣ್ಣು ಮತ್ತೆಲ್ಲೊ ಬೆರಳು ತೋರಿಸಿ ಮುಸಿ ನಕ್ಕಿತು. 
 ಈಗ ಇಲ್ಲಿ ನಿಂತಿದ್ದೇನೆ. ಎಲ್ಲಿಂದ ಸಿಂಬಳು ಮೂಗು ಸರಿಪಡಿಸಿಕೊಂಡು ಸರಳ-ಸಂಕೋಚದ ಯಾತ್ರೆ ಆರಂಭಿಸಿದ್ದೆನೊ, ಯಾವ ರಸ್ತೆ ರಸ್ತೆಗಳ ಸುತ್ತಿ ಜಂಗಮರ ಪಿಂಡವಾಗಿ ಉಂಡು ದೇಹ ಬೆಳಸಿದ್ದೆನೊ, ಆ ದೇಹವನ್ನು ಮತ್ತೆ ಅದೇ ನೆಲಕ್ಕೆ ತಂದು ನಿಲ್ಲಿಸಿದ್ದೇನೆ. ಅಂದಹಾಗೆ, ನಿಂತ ಈ ಜಂಗಮನ ನೆಲಕ್ಕೆ ‘ಜೋಳಿಗೆ’ ಎಂದು ಹೆಸರಿಸಿದ್ದೇನೆ.
ಇದು ಯಾರ ಮನೆಯೊ? ಈ ಹಿಂದೆ ಯಾರ ನೆಲವೊ? ಇದರ ಪೂರ್ವವೆನೊ? ಭವಿಷ್ಯವೆನೊ? ವರ್ತಮಾನದ ಒಡೆತನ ನನ್ನದಿರಬಹುದಷ್ಟೆ. ಬಿಜಾಪುರದ ಬುರುಜುಗಳನ್ನು ನೋಡುತ್ತ ಬೆಳೆದವ ನಾನು. ಗತಕಾಲದ ಕಟ್ಟಡಗಳ ಹಿಂದಿನ ಕಾರಣಗಳನ್ನು ಹೇಳುವ ಒಬ್ಬ ವ್ಯಕ್ತಿಯೂ ಇಂದು ನಮ್ಮೊಂದಿಗಿಲ್ಲ. ಭೂಮಿ, ಬಂಗಾರ ಎಂದೂ ಯಾರದ್ದೂ ಅಲ್ಲ. ಇರುವಷ್ಟು ಕಾಲ ನಮ್ಮ ಮುದ್ರೆಗಳನ್ನೊತ್ತಿ ನಮ್ಮದೆಂದುಕೊಳ್ಳುತ್ತೇವೆ. ಈ ನಮ್ಮತನದ ಭ್ರಮೆಯನ್ನ ಒಂದಷ್ಟು ಕಾಲ ಸಂಭ್ರಮಿಸುತ್ತೇವೆ.
ಅಂದಹಾಗೆ ಇದು ಜಂಗಮನ ‘ಜೋಳಿಗೆ’. ಜಾತಿ, ಧರ್ಮ, ಲಿಂಗ, ವಯಸ್ಸುಗಳ ಬೇಧವಿಲ್ಲದೆ ಬಯಲೊಳಗೆ ಆಲಯವಾಗಿ ನಿಂತ ಈ ಜೋಳಿಗೆಯನ್ನು ನೋಡಿದಾಗ ಹೇಳಬೇಕೆನಿಸುವುದಿಷ್ಟೆ.
 ಇದು ‘ಜೋಳಿಗೆ’, ಲೋಕದ ಮನೆಗೆ ನಾಲ್ಕು ದಿನ ಬನ್ನಿ.
 ಕೈ ನೀಡಿದವರಷ್ಟೆ ಕೈ ಹಿಡಿದವರೂ ಪ್ರಾಮಾಣಿಕರಾಗಿದ್ದರೆ ಕನಸುಗಳು ಹೇಗೆ ಕೈಗೂಡುತ್ತವೆ ಎನ್ನುವುದಕ್ಕೊಂದು ಸಾಕ್ಷಿ, ಈ ‘ಜೋಳಿಗೆ’. ಕಳೆದ ವರ್ಷ ಡಿಸೆಂಬರ್ 19 ರಂದು ಗೆಳೆಯನ ‘ಡಿ.ಎಂ.ಎಂಪಾಯರ್’ ದ ಉದ್ಘಾಟನೆಗೆ ಹೋದ ನಾನು, ಆತನ ಪ್ರೀತಿಗೆ ಮಣಿದು ಈ ‘ಜೋಳಿಗೆ’ಯ ಶಂಕು ಸ್ಥಾಪನೆಗೆ ಸಾಕ್ಷಿಯಾಗಿದ್ದೆ. ಆದರೆ ಇಡೀ ವರ್ಷವೆಂಬ ವರ್ಷದಲ್ಲಿ ಎಷ್ಟೆಲ್ಲಾ ಕೆಲಸಗಳು, ಹಿಂಜರಿಕೆಗಳು, ಧಾವಂತದ ದಾರಿಗಳು, ಭರವಸೆಗಳು, ಮತ್ತೆ ಸೋಲಿಸುವ ಹೊಸ ಒರಸೆಗಳು, ಅಬ್ಬಾ! ನೆನಸಿಕೊಂಡರೆ ಇದನ್ನೆಲ್ಲ ಹೇಗೆ ಕ್ರಮಿಸಿಕೊಂಡು ಬಂದೆ! ಭಯವಾಗುತ್ತದೆ ನನಗೆ. ಇಂಥವುಗಳ ಮಧ್ಯ ಈ ‘ಜೋಳಿಗೆ’ಯ ಬಾಲ್ಯ-ಬೆಳವಣಿಗೆಯನ್ನು ಗಮನಿಸಲು ನನಗೆಲ್ಲಿ ಸಮಯವಿತ್ತು? ಸಿಮೆಂಟ್, ಕಲ್ಲು, ಮರಳು, ಕಬ್ಬಿಣ, ಕೆಲಸಗಾರರು ಅವರ ಸಮಸ್ಯೆಗಳು ಯಾವುದನ್ನೂ ನನ್ನ ಕಿವಿಗೆ ಹಾಕದೆ ನನ್ನ ಈ ಕನಸನ್ನು ಪೂರೈಸಿದವನು ಗೆಳೆಯ ಬಸೀರ್ ಮುಲ್ಲಾ ಮತ್ತು ಅಪಾರ ಸಂಖ್ಯೆಯ ಚಡಚಣದ ಅಭಿಮಾನಿಗಳು. ಇದರ ಕುರಿತು ಇಷ್ಟೇ ಹೇಳ ಬಲ್ಲೆ. ಗೆಳಯನಿಗಾಗಿ ಹೆಣ್ಣು ನೋಡಲು ಹೋಗಿ, ನಾನೇ ಮದುವೆ ಮಾಡಿಕೊಂಡು ಬಂದಂತಾಗಿದೆ. 
 ಒಟ್ಟಾರೆ ಒಂದು ನೆಲೆಯಾಗಿದೆ, ಇನ್ನೂ ಹಲವು ನೆಲಗಳ ಆಸೆ ಇದೆ. ಸಂಘಮಿತ್ರೆಯ ಸಮಾಗಮಕ್ಕಾಗಿ ಇನ್ನೂ ಆಸೆ ಇದೆ. ಈ ‘ಜೋಳಿಗೆ’ಗೆ ನಿಮ್ಮನ್ನೆಲ್ಲ ಹೇಗೆ ಬರಮಾಡಿಕೊಳ್ಳಲಿ? ಆದರೆ ನೀವು ಬರಬೇಕು, ಬೆಳೆಸಬೇಕು, ಬಳಸಬೇಕು, ಮತ್ತೆ ಬೆಳಕಾಗಬೇಕು ಯಾಕೆಂದರೆ -
 ‘ಜೋಳಿಗೆ’ ಬರೀ ಮನೆಯಲ್ಲ
ನೀರಿಗಿದು ನೆಲೆಯಲ್ಲ
ನಿಂತು ಮಲೆಯದೆ ಸಾಗಲು
ನದಿಯೂ ಬರಬಹುದಿಲ್ಲಿ ನೀರ ಬಯಸಿ
ತೊರೆದವರೂ ಬರಬಹುದು
ತಿಳಿದದ್ದು ತೋಚಿದ್ದು
ಸಾಕಾಗಿ ಉಳಿದದ್ದು
ಮುಚ್ಚಿಟ್ಟು ಮಾತಾಡಿ
ತುಟಿ ಕಚ್ಚದೆ ಅತ್ತು
ಹಚ್ಚಿ ಹೋಗಲೂಬಹುದು
ಒಂದು ಸಸಿ
ನೆನಪು ಉಳಿಯಲು ಹಾಗೇ ಹಸಿ

No comments:

Post a Comment