Total Pageviews

Thursday, March 7, 2013

ಮತ್ತೆ ಹೂ ಅರಳಿವೆ ಮಲೆನಾಡಿನಲ್ಲಿ

 

      2012ರ ಡಿಸೆಂಬರ 28 ರಿಂದ ಶುರುವಾದ ನನ್ನ ಸಂಚಾರ ಇಂದಿನ ಈ ಕ್ಷಣದವರೆಗೂ ನಿರಂತರವಾಗಿದೆ. ಪ್ರವಾಸ ಎಲ್ಲ ಕಾಲಕ್ಕೂ ಹಿತಕರವಾಗಿರುವುದಿಲ್ಲ. ಅದೆಷ್ಟೋ ಬಾರಿ ಅದು ನೋವು, ತಬ್ಬಲಿತನ, ಬೇಸರ ಮತ್ತು ಬಳಲಿಕೆಗಳ ಮಧ್ಯ ಸಾಗುತ್ತಿರುತ್ತದೆ. ನನ್ನ ಪಾಲಿಗಂತೂ ಅದೆಷ್ಟೋ ಪ್ರವಾಸಗಳು ಸಂಯಮದ ಪರೀಕ್ಷೆಗಳು ಹಾಗೂ ನಾನು ಹಿಂಜರಿಯಲಾಗದ ಬದ್ಧತೆಗಳು. ಜಗವೇ ಉರಿದು ಹೋಗುತ್ತಿದ್ದರೂ, ನನ್ನವರೇ ಹೆಣವಾಗಿ ಬಿದ್ದುಕೊಂಡಿದ್ದರೂ, ನಾನೇ ಕೆಲವೊಮ್ಮೆ ಒಂದು ಹೆಜ್ಜೆ ಮುಂದಿಡಲಾಗದಷ್ಟು ಬಳಲಿದ್ದರೂ ನಾನು ಸಾಗಲೇ ಬೇಕು, ನನ್ನುಳುವಿಗಾಗಿ ಹಾಗೂ ನನ್ನ ತಂದೆಯ ಮಹಾನ್ ಕನಸಿಗಾಗಿ


            ಈ ಸಾರಿಯೂ ಅಷ್ಟೆ, ಹಿಂದಿನ ದಿನ ರಾತ್ರಿ ಮೂರಕ್ಕೆ ಬಂದು ಮುಟ್ಟಿದ್ದ ನಾನು ಸುಮ್ಮನೆ ಮಲಗಬೇಕೆಂದರೂ ಒತ್ತರಿಸಿ ಬಂದ ನೆನೆಪುಗಳು, ನನ್ನ ಕಾರನ್ನು ಸಕಲೇಶಪುರದ ದಾರಿಯೆಡೆಗೆ ಹೋಗುವಂತಾಗಿಸಿದವು. ನನ್ನ ಮಗ ಸಿದ್ಧಾರ್ಥ ಈಗ ಅಲ್ಲಿ ಒಬ್ಬನೆ. ಆತನ ಮುಗ್ಧ ಮುಖ ನೆನಪಾದರೆ ನಾನೊಂದು ಕ್ಷಣ ನನ್ನನ್ನೇ ಕ್ಷಮಿಸಿಕೊಳ್ಳಲಾಗದಂಥ ಅಪರಾಧಿಯಾಗಿ ಬಿಡುತ್ತೇನೆ. ಏನೆಲ್ಲ ಯಮಯಾತನೆಯನ್ನು ಸ್ಮರಿಸಿಕೊಂಡು ಮನಸ್ಸು ಗೊಳೋ ಎನ್ನುತ್ತಿರುವಾಗ ಗಾಳಿಯಲ್ಲಿ ತೇಲಿ ಬಂದ  ಯಾವುದೋ ಗಾಢ ವಾಸನೆ ನನ್ನನ್ನು ಗಕ್ಕನೆ ನಿಲ್ಲಿಸಿತು. ಕಾರಿಳಿದು ಮಲೆನಾಡಿನ ಕಾಡಿಗೆ ಮೊಗ ಮಾಡಿದರೆ ಕಣ್ತುಂಬ ಕಾಫಿ ಹೂಗಳ ವಿರಾಟ ದರ್ಶನ. ಎಲೆಗೆ ಒಂದುಷ್ಟೂ ಆಸ್ಪದ ಕೊಡದೆ, ಕಣ್ಣೊಳಗೆ ಕಣ್ಣಿಟ್ಟು ಹುಡುಕಾಡಿದರೂ ಕಾಂಡವೆನ್ನುವುದು ಕಾಣದಷ್ಟು ಈ ಕಾಫಿಯ ಹೂಗಳು ಅಂಟಿಕೊಂಡಿರುವುದನ್ನ ನೋಡಿದರೆ ನನಗೆ ತಟ್ಟನೆ ನೆನಪಾಗುವುದು ಮಲ್ಲಿಗೆಯಲ್ಲಿ ಮುಳುಗಿ ಹೋದ ಮದುವೆ ಮನೆ ಹೆಣ್ಣು. ಗುಪ್ಪೆ ಗುಪ್ಪೆಯಾಗಿ ಅರಳುವ ಕಾಫಿಯ ಹೂಗಳಿಗೆ ಅದೆಷ್ಟು ಗಾಢ ವಾಸನೆ ಇರುತ್ತದೆ ಅಂತಿರಾ? ಮೂಗಿದ್ದವರು, ಕಣ್ಣಿದ್ದವರು ಒಂದು ಕ್ಷಣ ಈ ಸುಖಕ್ಕೆ ಸಂಭ್ರಮಿಸದೆ ಇರುವದಕ್ಕಾಗುವದಿಲ್ಲ. ಅಂದಹಾಗೆ ಮತ್ತೆ ಹೂ ಅರಳಿವೆ ಮಲೆನಾಡಿನಲ್ಲಿ, ವಸಂತ ಬಂದಿದೆ, ಹಳೆಯ ಎಲೆಗಳು ಉದುರಿ ಹೊಂಗೆಗೆ ಬಂದ ಯವ್ವನದ ಸೊಕ್ಕು ನೋಡಿದರೆ ಎಂಥ ಮುದಿ ಜೀವಕ್ಕೂ ಒಂದು ಕ್ಷಣ ಒಸಗೆಯ ಹಳೆಯ ದಿನಗಳು, ಹಸಿ ಹಸಿಯಾದ ಕ್ಷಣಗಳು ನೆನಪಾಗದೆ ಇರಲಾಗುವುದಿಲ್ಲ. ನನ್ನ ಈ ಬದುಕಂತೂ ಇಂಥ ಹೂಗಳ ಮಧ್ಯದ ಕಾಲು ದಾರಿಯ ಕಥೆ. ಬದುಕಿನ ಈ ಸಂಭ್ರಮವನ್ನು ಗೌರವಿಸದವರಿಗೆ ಇಡೀ ಬದುಕೇ ವ್ಯಥೆ. . . .

            ಬನ್ನಿ, ಈಗ ಮತ್ತೆ ಹೂ ಅರಳಿವೆ ಮಲೆನಾಡಿನಲ್ಲಿ.

            ಇಷ್ಟು ಸಾಕಾಗಿತ್ತು ಹಿಂದಣ ಎಲ್ಲ ನೋವನ್ನು ಮರೆಯಲು. ಮರುದಿನ, ಮತ್ತೆ ಮೂರು ದಿನ ಬೆಂಗಳೂರಿಗೆ. ಅಲ್ಲಿಂದ ಮತ್ತೆ ಬಾಗಲಕೋಟೆಗೆ. ಮನಸು ಮುದಗೊಂಡಾಗ, ಮೌನ ಸ್ಥಿರವಾದಾಗ ನಾವು ಕಟ್ಟಿಕೊಳ್ಳುವ ಲೋಕವೆ ಅದ್ಭುತ. ಅಮಿನಗಡದ ಅಕ್ಕ-ಪಕ್ಕ ಇದ್ದಾಗ ಬೆಳಗಿನ ಜಾವ ಎದ್ದು ಕುಳಿತು, ಬಸ್ಸಿನ ಕಿಡಕಿಯ ಗ್ಲಾಸುಗಳನ್ನು ಸರಿಸಿ ಮುಖವಿಟ್ಟರೆ ನನ್ನ ನೆಲದ ವಾಸನೆ ಗಂಗೆಯಂತೆ ಮನಸ್ಸನ್ನು ಪವಿತ್ರಗೊಳಿಸಿ ಬಿಡುತ್ತದೆ. ಮಲೆನಾಡಿನ ಕಾಫಿ ಮಲ್ಲಿಗೆಯ ವಾಸನೆಗೂ, ಬಯಲು ಸೀಮೆಯ ಮಣ್ಣಿನ ವಾಸನೆಗೂ ಯಾವುದೋ ಅದ್ಭುತ ಸಂಬಂಧ ಸಾಧ್ಯವಾಗುತ್ತದೆ. ನಾಡು-ನುಡಿ, ಜಾತಿ, ಸಂಸ್ಕೃತಿಯ ಗೋಡೆಗಳು ಬಿದ್ದು ಅಖಂಡತೆ ಸಾಧ್ಯವಾಗುತ್ತದೆ. ಅಂದಹಾಗೆ ಒಂದು ವರ್ಷದ ವ್ಯಾಪ್ತಿಯಲ್ಲಿ ದಿನಾಂಕ 03/03/13, ರವಿವಾರದ ಬಾಗಲಕೋಟೆಯ ಈ ಭೆಟ್ಟಿ ಮೂರನೆಯದಿರಬಹುದು. ಇದು ನೂರಾಗುವುದಾದರೂ ಬೇಸರವಿಲ್ಲ, ಕಾರಣ ಮಧುರಚನ್ನರನ್ನು ಉದ್ದರಿಸಿದ ಈ ಬಾಗಲಕೋಟೆ ನನ್ನ ಬದುಕಿನ ಅದೆಷ್ಟೋ ಮಹತ್ವದ ಪುಟಗಳ ಮೊದಲ ಸಾಲನ್ನು ಬರೆದಿದೆ. ಇಲ್ಲಿಯ ನೆನಪುಗಳ ಬೆನ್ನು ಹತ್ತಿ ಹೊರಟರೆ ಒಂದು ಮಹಾನ್ ಕಾದಂಬರಿಯನ್ನೇ ಬರೆಯಬಹುದು. ಈ ಕಾರಣಕ್ಕಾಗಿಯೇ ಈಗ ಆ ನೆನಪುಗಳ ಪ್ರಸ್ತಾಪ ಬೇಕಿಲ್ಲ. ಇಷ್ಟೆ ಇಲ್ಲಿ ನನ್ನ ಜೀವಗಳಿವೆ, ನೆಟ್ಟ ಮರಗಳಿವೆ, ಬಿಟ್ಟೂ ಬಿಡಲಾಗದ ಸಂಬಂಧಗಳಿವೆ, ಬಗೆಹರಿದೂ ಬಗೆಹರಿಯದ ಜಗಳಗಳಿವೆ.
        ಇದಕ್ಕೊಂದು ಉದಾಹರಣೆ ಬೇಕೆ? ಹಾಗಿದ್ದರೆ ನನ್ನನ್ನು ಅಳಿಯ-ಗೆಳೆಯ ಎಂದು ನನ್ನ ಲೋಕವನ್ನೆಲ್ಲ ಆವರಿಸಿಕೊಳ್ಳುವ ಬಾಳಾಸಾಹೇಬ ಲೋಕಾಪುರ ಒಬ್ಬರೇ ಸಾಕು. ಅಂದಹಾಗೆ ಈ ಸಾರಿಯ ನನ್ನ ಭೆಟ್ಟಿಗೆ ಕಾರಣವೇ ಲೋಕಾಪುರರ ‘ಆಯ್ದ ಕಥೆಗಳು’ ಸಂಕಲನ ಹಾಗೂ ಕವಿಮಿತ್ರ ಉಮೇಶ ತಿಮ್ಮಾಪುರರ ‘ಸಮುಕ್ಷ’. ಕ.ಸಾ.ಪ ಬಾಗಲಕೋಟ, ಕಾಲ ಮತ್ತು ಕ್ರಿಯೇಟಿವ್ ಪಬ್ಲಿಕೇಶನ ಬೆಂಗಳೂರು ಸಹಯೋಗದಲ್ಲಿ ನಡೆದ ಈ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿದ್ದವರು ಹಂಪಿಯ ಗೆಳೆಯ ಡಾ.ವಿರೇಶ ಬಡಿಗೇರ, ಡಾ.ಎಸ್.ಕೆ.ಮೇಲ್ಕಾರ, ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಅಶೋಕ ಕಂದಗಲ್, ಎಚ್.ಎನ್.ಯಾದವಾಡ ಹಾಗೂ ಅಬ್ಬಾಸ ಮೇಲಿನಮನಿ. ಅತ್ಯಂತ ಸರಳ ಮತ್ತು ಪ್ರೀತಿಯ ಸಮಾರಂಭ.

       ‘ಸಮುಕ್ಷ’ ಬಹುಪಾಲು ಉತ್ತರ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಮತ್ತು ಜನಪದದ ಸುತ್ತ ಹೆಣೆದ ತಿಮ್ಮಾಪುರರ ಲೇಖನಗಳ ಗುಚ್ಚ. ಪ್ರಾದೇಶಿಕತೆಯ ಪ್ರಶ್ನೆಯಲ್ಲಿ ಖಂಡಿತವಾಗಿಯೂ ಈ ಸಂಕಲನಕ್ಕೆ ಅರ್ಥವಿದೆ. ಆದರೆ ಸಮಗ್ರ ಕರ್ನಾಟಕವನ್ನು ಗಮನದಲ್ಲಿರಿಸಿಕೊಂಡು ಚರ್ಚಿಸುವುದಾದರೆ ಲೇಖಕರ ಆಲೋಚನೆಗಳು ವಿಸ್ತೃತವಾಗಬೇಕಾದ ಅವಶ್ಯಕತೆ ಇದೆ. ತಿಮ್ಮಾಪುರರಿಗೆ ಭಾಷೆ ಇದೆ, ಬಯಕೆ ಇದೆ ಜೊತೆಗೆ ಓದಿನ ವೈವಿದ್ಯ ಇನ್ನೂ ಸಾಧಿಸಬೇಕಾಗಿದೆ.

      ಲೋಕಾಪುರರು ನಿಸ್ಸಂಶಯವಾಗಿಯೂ ಕನ್ನಡದ ಮಹತ್ವದ ಕಥೆಗಾರ. ಎಗ್ಗಿಲ್ಲದೆ ಮಾತನಾಡುವ ಪ್ರೀತಿಯ ಮನುಷ್ಯ. ಅವರ ಪ್ರತಿ ಕಥೆಯೂ ಅವರ ಅನುಭವದ ಸುತ್ತ ಹುಟ್ಟಿಕೊಂಡ ಹುತ್ತ. ಪ್ರತಿ ಪಾತ್ರವೂ ಅವರ ಮನಸ್ಸಿನಿಂದ ಹೊರಡುವ ಪ್ರೀತಿಯ ಚಿತ್ರ. ಬದುಕಿನ ಇಂಥ ತಹತಹಿಕೆಯ ಪಾತ್ರಗಳನ್ನು ಕಟ್ಟಿಕೊಡುವ ಮತ್ತೊಬ್ಬ ಕಥೆಗಾರ ವಿರಳ. ಭಾಷೆಯ ಲಾಲಿತ್ಯ, ನಾಟಕೀಯತೆ, ಒಪ್ಪಿಸುವ ರೀತಿಯಲ್ಲಿಯೂ ಲೋಕಾಪುರರು ಸಮಕಾಲಿನರಿಗಿಂತ ಭಿನ್ನ. ಒಂದಿಷ್ಟು ಮುದ್ರಣದ ಬಗೆಗೆ ಕಾಳಜಿ ವಹಿಸಿದ್ದರೆ ಇದೊಂದು ಅಭಿಮಾನದ ಸಂಗ್ರಹವೆ.

    ಕೆಲವೊಮ್ಮೆ ಪ್ರೀತಿಯ ಜನರನ್ನು ಕುರಿತು ಬಹಳಷ್ಟು ಮಾತನಾಡುವುದು ಆಗುವುದೇ ಇಲ್ಲ. ಈ ಸಾರಿ ಬಾಗಲಕೋಟೆಯ ವಿಷಯದಲ್ಲಿ ಹಾಗೆಯೇ ಆಯಿತು. ಅಲ್ಲಿಂದ ಹೊರಟು ಧಾರವಾಡದಲ್ಲಿ ತಂದೆ-ತಾಯಿ, ತಮ್ಮ, ಮಗ ಎಲ್ಲರನ್ನು ಕಂಡು ಮರುದಿನ ಮತ್ತೆ ಹಾಜರಿರಬೇಕಾದುದು ಹಾಸನದ ಸಮಾರಂಭದಲ್ಲಿ. ನಸುಕಿನ 5 ಕ್ಕೆ ಬೇಲೂರು ತಲುಪಿದರೆ ಮುಂಜಾನೆಯ 9 ಕ್ಕೆ ಮತ್ತೆ ಹಾಸನದ ಅತ್ಯಂತ ಪುರಾತನ ಮತ್ತು ಪ್ರತಿಷ್ಠಿತ ಕಲಾ ಕಾಲೇಜಿನಲ್ಲಿ. ಇಲ್ಲಿ ನಮ್ಮೊಂದಿಗೆ ಹಿರಿಯ ಪತ್ರಕರ್ತ ಆರ್.ಪಿ.ವಿ, ಜನಪದ ತಜ್ಞ ಡಾ.ಹಂಪನಹಳ್ಳಿ ತಿಮ್ಮೇಗೌಡ, ಕೇಂದ್ರಿಯ ವಿಶ್ವವಿದ್ಯಾಲಯದ ಮಿತ್ರ ಬಸವರಾಜ ಡೋಣುರ ಹಾಗೂ ಡಾ.ಐ.ಎಮ್.ಮೋಹನ. ಇದು ನನ್ನ ‘ಗಾಂಧಿ:ಮುಗಿಯದ ಅಧ್ಯಾಯ’ದ ಮರು ಬಿಡುಗಡೆ ಮತ್ತು ಚರ್ಚಾ ಸಮಾರಂಭ. ಎರಡೂವರೆ ಗಂಟೆಗಳ ಈ ಸಮಾರಂಭಕ್ಕೆ ಮಾಧ್ಯಮ ಮಿತ್ರರು ಸಹಕರಿಸಿದ ರೀತಿಯಂತೂ ಅದ್ಭುತ. ‘ದ ಹಿಂದೂ’ ಪತ್ರಿಕೆಯಂತೂ ಇದನ್ನು ಇಡೀ ರಾಜ್ಯದ ವರದಿಯಾಗಿ ಬಿತ್ತರಿಸಿ ಪ್ರೋತ್ಸಾಹಿಸಿತು.

       ಈಗ ಎಲ್ಲದಕ್ಕೆ ಗಾಂಧಿ ಕಾರಣ. ಆತನ ತಪಸ್ಸು ಕಾರಣ. ಇದರೊಂದಿಗೆ ನನ್ನ ಹಿಂದಣ ಅನಂತವಾಗಿ ಕಾಡುವ, ನನ್ನನ್ನು ಪ್ರೀತಿಯಿಂದ ಸಾವರಿಸುವ, ಬೆಳೆಸುವ ನೀವೂ ಕಾರಣ.

No comments:

Post a Comment