ಮತ್ತೆ ಬರಲಾರಿರಾ ನೀವು
ಹೊತ್ತು ಮುಳುಗುವ ಮುನ್ನ?
ಹುಚ್ಚು ಕನಸುಗಳ
ದೀಪ ಹಚ್ಚಿಡುವೆ ನಾ
ಸೋತಿಲ್ಲ,
ನನ್ನೆದೆಯ ಆಸೆಗಳ ಎಣ್ಣೆ ತೀರಿಲ್ಲ
ಮುರಿಯಲಾರದ ಮಂಚ
ಮುಗಿಸಲಾಗದ ಕತೆ ಹೇಳಿವೆ ಕೊಂಚ
ಮತ್ತೆ ಬರಲಾರಿರಾ
ಹೊತ್ತು ಮುಳುಗುವ ಮುನ್ನ?
ಮನದ ಹಚ್ಚಡದಲ್ಲಿ
ಮೈಯ ಹೂವಾಗಿರಿಸಿ
ಕಾಮನ ಬಿಲ್ಲಿನ
ಕಾಡಿಗೆ ಎಳೆದುಕೊಂಡು
ಕದಳಿ ಗಂಧವನ್ನೆಲ್ಲ ಬಳಿದುಕೊಂಡು
ನಡುವೆಲ್ಲ ನೀರಾಗಿ
ಕಾಯುತಿರುವ ಕೀಲು ಗೊಂಬೆ ನಾ
ಒಮ್ಮೆ ಹೇಳಿಬಿಡಿ
ಮತ್ತೆ ಬರಲಾರಿರಾ
ಹೊತ್ತು ಮುಳುಗುವ ಮುನ್ನ?
ಸತ್ತವರು ಅತ್ತರು
ಅತ್ತವರೂ ಸತ್ತರು
ನೆತ್ತರದಲಿರದ ನಿನ್ನ
ಕಾಯದಲೆ ಕಂಡರೆ?
ಮಾಯದಲೆ ಉಂಡರೆ?
ಯಾರದೇನದು ಕತೆಯೊ
ನನಗೆ ಬೇಕಿಲ್ಲ
ನನ್ನ ಧ್ಯಾನದ ಹಣತೆ
ಶಾಂತವಾಗುವ ಮುನ್ನ
ಕಾಣಬೇಕಿದೆ ಹರಿದು
ಹಂಬಲಿಸಿ ನಿನ್ನ
ಹೇಳಿಬಿಡಿ ಸುಮ್ಮನೆ
ಮತ್ತೆ ಬರಲಾರಿರಾ ನೀವು
ಹೊತ್ತು ಮುಳುಗುವ ಮುನ್ನ?
No comments:
Post a Comment