Total Pageviews

Tuesday, December 31, 2019

ಹೊರಟುಬಿಡಬೇಕಿದೆ ಇನ್ನು . . . . .


ಕಡಲಾಚೆಯ ಮಡಿಲೊ                             
ಉರಿದುಂಬಿದ ಕಾಡ ಒಡಲೊ
ಬಿತ್ತಿ, ಬುತ್ತಿಯಾದ ನೆಲವೊ
ನೆತ್ತಿಗಾಸರೆ ಎಂಬ ನೆರಳೊ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . .  .
 
ಮರಭೂಮಿಯೊಳು ಮೃತ್ಯುವೊ
ಬಾಗಿಲೋರೆಯಾಗಿಟ್ಟ ಬದುಕೊ
ಕನಸು ಕಣ್ಣಿಗೆ ಒರಸಿ
ಅಗ್ಗಿ ಹಾಯಲು ಕರೆವ ಕಾಳ ಕತ್ತಲೆಯೊ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . . . . . . .
 
ಅಭಯವೊ ಅವಘಡವೊ
ವಿಜಯವೊ ವಿನಾಶವೊ
ಮರುಹುಟ್ಟೊ ಮಹಾಮನೆಯೊ
ಅಲ್ಲಿರುವುದು ಬರೀ ಗುಹೆಯೊ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . . .  .  . . . . . . 
 
ನಟ್ಟಿರುಳ ನಿರಾಸೆಯೊ
ದಟ್ಟಿರುಳ ದುರಾಸೆಯೊ
ಮುನ್ನಡೆಸಿದ್ದು ದೈವವೊ
ಹಿಂದೆ ನಡೆಸುದುದೇನು ದೇವರೊ
ಇನ್ನಿಡುವ ಅಡಿಯತ್ತ
ಹುತ್ತ ಎಂಥದೋ ನಿನ್ನೊಳ ಚಿತ್ತ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . . . . . . . . .
 
ಹಿಂದೆ ರಮಿಸಿದಿರೇಕೊ
ಇಂದು ನಮಿಸುವರೇಕೊ
ಮುಂದೆ ಏನುಂಟೋ ಮಾನಾಪಮಾನ
ಇದ್ದ ಮನೆಯೊಂದು
ಕದ್ದ ಎದೆಯೊಂದು
ಎದ್ದು ನಿಲ್ಲಿಸಿದ್ದೆಲ್ಲಿ, ಯಾರ ಮುಂದೆ
ಗೊತ್ತಿಲ್ಲ, ಹೊರಡಲೇಬೇಕಿದೆ
ಇನ್ನು ಮರಳಿ ಬರದಂತೆ. . . . . . 
 
ಹೆರಿಗೆ ಇಲ್ಲದ ಹುಟ್ಟು ನಾನು
ನನಗ್ಯಾರು ತಂದೆ-ತಾಯಿ?
ಬೆರಗೆ ನಾನು, ಕ್ಷಣದ ಅರಗೆ?
ಒರೆಗೆ ಹಚ್ಚಲು ನಾನು
ಹೊರಟೇ ಬಿಡಬೇಕು
ಧರೆಗೆ ದಕ್ಕಲು ಇನ್ನು ಮರೆಯಾಗಲೇಬೇಕು . . . . . . . .






ಇವರೆಲ್ಲರನ್ನೂ ನನ್ನ ಸಾಹಿತ್ಯ ಬದುಕಿನ ಒಂದಿಲ್ಲಾ ಒಂದು ಹಂತದಲ್ಲಿ ಸಂಧಿಸಿದ್ದೆ, ಈ ವ್ಯಕ್ತಿ - ಶಕ್ತಿಗಳ ಅಪರೂಪದ ಬೆಳಕಿನಲ್ಲಿ ನನ್ನ ಬಾಳಿನ ಮುಂದಿನ ದಿಕ್ಕು - ದೆಸೆಗಳನ್ನು ರೂಪಿಸಿಕೊಂಡಿದ್ದೆ, ಭೂತಕಾಲಕ್ಕೆ ಜಾರುತ್ತಿರುವ 2019 ಇವರನ್ನು ನಮ್ಮಿಂದ ಭೌತಿಕವಾಗಿ ಅಳಸಿ ಹಾಕಿದೆ. ಆದರೆ ಭಾವಲೋಕದಲ್ಲಿ ನೆನಪುಗಳನ್ನು ಇನ್ನಷ್ಟು ಆಳಗೊಳಿಸಿದೆ. ಸಾವಿನೊಂದಿಗೆ ತಕರಾರವಿಲ್ಲ, ಯಾಕೆಂದರೆ ಸಾವಿಗೆ ಕಿವಿ ಇಲ್ಲ. ಇವರ ಸಾಧನೆಯ ಬೆಳಕು ಮುನ್ನಡೆಸಲಿ ನಮ್ಮನ್ನು. 

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.

1 comment:

  1. ಸರ್ ಸಾವಿನೊಂದಿಗೆ ತಕರಾರು ಇಲ್ಲ
    ಸಾವಿಗೆ ಕಿವಿ ಇಲ್ಲ
    ಸಾವಿಗೆ ಕಣ್ಣು ಇದ್ದಿರಲಿಕ್ಕಿಲ್ಲ

    ReplyDelete