Total Pageviews

Monday, November 28, 2011

(ಚಂಪಾಗೆ ಪಂಪ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಅವರ ಮಹತ್ವದ ಕೃತಿಯೊಂದರ ರಸದೌತನ ಕನ್ನಡಿಗರಿಗೆ)

                               ಚಂಪಾ ಚುಂಬಿಸಿದ ‘ಅರ್ಧ ಸತ್ಯದ ಹುಡುಗಿ’

ವ್ಯಕ್ತಿ ಸಾಯುವುದರೊಂದಿಗೆ ಸತ್ಯದ ಪ್ರಯಾಣ ನಿಂತುಹೋಗುತ್ತದೆ ಎಂದು ಯಾರು ಹೇಳುತ್ತಾರೆ. ಇನ್ನರ್ಧ ಸತ್ಯದ ಪೀಠಿಕೆ ಪ್ರಾರಂಭವಾಗುವುದೇ ಅಲ್ಲಿಂದ ಅಲ್ಲವೆ? ನಮ್ಮ ಶರಣರು, ಸೂಫಿಗಳು, ದಾರ್ಶನಿಕರು, ಜನಪದ ಬರಹಗಾರರು ಇದನ್ನೇ ಬೇರೆ ಬೇರೆ ಶಬ್ಧಗಳಲ್ಲಿ, ರೀತಿಗಳಲ್ಲಿ ಹಾಡಿದ್ದು, ಬರೆದದ್ದು, ಅಂಥ ಜಾತಿಯದೇ ಒಂದು ಪದ್ಯ ಹೀಗೆ

ಸಮಾಧಿಯ ಗೂಡಿನತ್ತ
ನಿರ್ಜೀವವಾಗಿ ಹೊರಟ ನನ್ನ
ಅಂತ್ಯಯಾತ್ರೆಯಲ್ಲೂ ನಾನು ಮಾತನಾಡುತ್ತಿರುತ್ತೇನೆ -

ಯಾರವು ಈ ಸಾಲುಗಳು? ಸ್ಪಷ್ಟವಾದ ನೆನಪಿಲ್ಲ. ಆದರೆ ಮತ್ತೆ ಮತ್ತೆ ನಮ್ಮನ್ನು ಚಿಂತನೆಗೀಡುಮಾಡುವ ಸಾಲುಗಳು ಇವು. ಚಿಕ್ಕ ಜಗತ್ತಿನ ಅದ್ಭುತ ಪ್ರಜ್ಞೆಯಾಗಿ ಬಾಳಿದ ಜೀವವೊಂದು ಈ ಸಾಲುಗಳನ್ನು ಹೇಳಲು ಸಾಧ್ಯ. ಇಂಥ ಶಕ್ತಿ ಒಬ್ಬ ಕವಿ, ಕಲಾವಿದ ಅಥವಾ ತತ್ವಜ್ಞಾನಿಗೆ ಮಾತ್ರ ಸಾಧ್ಯ. ಯಾಕೆಂದರೆ ಶಬ್ದಗಳಲ್ಲಿ ಮರುಹುಟ್ಟು ಬಲ್ಲ ಇವರು ಸಾವಿನ ಮುಖಕ್ಕೆ ಹೊಡೆಯುವ ಧಾರ್ಷ್ಟ್ಯ ತೋರಬಲ್ಲರು.

“ನಮ್ಮ ಲಯಬದ್ಧ ಸದ್ದುಗಳು
ಗುಡಿಸಲಲ್ಲಿ ಗುಡುಗು ಮೊಳಗಿಸುವುದಿಲ್ಲ
ನಮ್ಮ ಸ್ಪೋಟಗಳು
ಬೆಚ್ಚಗಿನ ಬಂಗಲೆಗಳ ನಡುಗಿಸುವುದಿಲ್ಲ”

ಎಂಬ ಸತ್ಯದ ಅರಿವಿನೊಂದಿಗೆ ದಲಿತ - ಬಂಡಾಯೋತ್ತರದ ಕೆಲವು ಭ್ರಮ ನಿರಸನಗಳ ನಂತರ ಬರೆದ “ಅರ್ಧ ಸತ್ಯದ ಹುಡುಗಿ” ಕವಿ ಚಂದ್ರಶೇಖರ ಪಾಟೀಲರ ಕಾವ್ಯ ಕ್ರಮಿಸಿದ ರೀತಿಯ ಪ್ರಾತಿನಿಧಿಕ ಸಂಕಲನಷ್ಟೇ ಅಲ್ಲ. ಬದಲಾಗಿ ನವ್ಯ-ನವೋತ್ತರ, ದಲಿತ-ಬಂಡಾಯ, ಕಾವ್ಯ ಘಟ್ಟಗಳ ನಂತರ ಮತ್ತೆ ಪ್ರಾರಂಭವಾದ ನವೋದಯ ನಮೂನೆಯ ಕಾವ್ಯದ ಪ್ರತಿನಿಧಿಯೂ ಹೌದು. ಉತ್ತರಾಧಿಕಾರಿ, ಪೀಠಾರೋಹಣ, ಪ್ರಾತಿನಿಧಿಕತೆಗೆಗಳಂಥ ಶಬ್ಧಗಳನ್ನು ಕೇಳಿದರೆ ಕೇರಿಯ ಕಂಡು ದೂರ ಹಾರುವ ಹಾರುವರಂತೆ ಪಾಟೀಲರು ಸಿಡಿಮಿಡಿಗೊಳ್ಳುವರಾದರೂ ಶಬ್ಧಗಳ ನನ್ನ ಮಿತಿ ಅವರನ್ನು ಈ ಪಟ್ಟಕ್ಕೆ ಆಹ್ವಾನಿಸುತ್ತದೆ. ನಿರೀಕ್ಷೆ ನಿರಪರಾಧಿಯಲ್ಲ. ಅದು ಕೆಲವೊಮ್ಮೆ ಸಾಂಪ್ರದಾಯಿಕ ಉತ್ಪತ್ತಿಯ ಸರಣಿಯನ್ನು ನಿರೀಕ್ಷಿಸುತ್ತಾ ಆ ದಾರಿಯನ್ನು ಅತಿಕ್ರಮಿಸಿದವರೆಲ್ಲರನ್ನೂ ಹುತಾತ್ಮ, ಮಹಾತ್ಮ ಅಥವಾ ಅಪರಾಧಿಯ ಅತಿರೇಕಗಳಿಗೆ ಆಪಾದಿಸಿ ಬಿಡುತ್ತದೆ.
ಕ್ರಿಯಾಶೀಲತೆ ಬದುಕಿನ ಸಂಕೇತ ಎನ್ನುವುದಾದರೆ, ಹುಟ್ಟು, ಸಾವಿನ ಪುನರ್ ನಿರ್ಮಾಣ ಎನ್ನುವುದಾದರೆ ಬರಹ ಹರಿಯುವ ಹೊಳೆಯಾಗಬೇಕು. ಇಷ್ಟೆಲ್ಲ ಪ್ರಸ್ತಾವನೆಗೆ ಕಾರಣ ಇಷ್ಟೆ ಚಂದ್ರಶೇಖರ ಪಾಟೀಲ ಒಬ್ಬ ಅಸಂಗತ ನಾಟಕಕಾರ, ಬಂಡಾಯದ ಕವಿ, ಮೂರ್ತಿಭಂಜಕ ಅಂಕಣಕಾರ ಎಂದು ಹೇಳುವ ಮಾತಿನಲ್ಲಿರುವ ಅರ್ಧಸತ್ಯವನ್ನು ಬಯಲಿಗೆಳೆಯುವುದು. ಇದನ್ನೆ ಪಾಟೀಲರು - ಕಾವ್ಯ “ಲಕ್ಷ್ಮಣ ಗೆರೆಗಳನ್ನು ಉಲ್ಲಂಘಿಸುತ್ತಲೇ ರಾವಣನೊಂದಿಗೆ ಲಂಕೆಯ ಕಡೆಗೋ ಬೆಂಕಿಯ ಉಡಿಗೋ ಜಿಗಿಯುವ ಸೀತೆಯಾಗುತ್ತಿರಬೇಕು” ಎಂದು ಅಥವಾ ನನಗೆ ನೆನಪಿರುವಂತೆ ‘ನನ್ನ ಹಾಡಿನ ಹಳ್ಳ ಎಲ್ಲಿ ಹೊರಳುವದೇನೊ! ಗಚ್ಚಿನ ಗಟಾರವನು ಕಟ್ಟಬೇಡ’ ಎಂದು ದೊಹರಾಯಿಸುತ್ತಾ ವಿಮರ್ಶೆಯ ಸೂತ್ರೀಕೃತ ಬೆಳವಣಿಗೆಯನ್ನು ಕಾವ್ಯದಲ್ಲಿ ಸಾರಾಸಗಟಾಗಿ ನಿರಾಕರಿಸುತ್ತಾರೆ. ಇಂಥ ಹಲವು ನಿರಾಕರಣೆಗಳೇ ಚಂದ್ರಶೇಖರ ಪಾಟೀಲರ ಕಾವ್ಯದ ನಿರಂತರ ವಿಷಯ ವಸ್ತುಗಳು ಹಾಗೂ ಕಾವ್ಯ ಪರಂಪರೆಯಲ್ಲಿ ಅವರ ನಿರಂತರತೆಗೆ ಕಾರಣಿಕ ಅಂಶಗಳು. ಹೀಗಾಗಿ ಅವರು ೭೦ರ ನಂತರವೂ ೨೦ರ ಹುಡುಗ.
ಎಲ್ಲ ಸಾವುಗಳು ಎಲ್ಲರನ್ನೂ ಕಾಡುವುದಿಲ್ಲ. ಆದರೆ ಸಾವನ್ನು ಇಡಿಯಾಗಿ ನೋಡಿದಾಗ ಅದು ಯಾವ ಕಾಲಕ್ಕೂ ಕಾಡದೇ ಇರುವ ಒಂದು ವಿಷಯ ಅನ್ನಿಸುವುದಿಲ್ಲ. ಇದು ಸೂಕ್ಷ್ಮ, ಸ್ಪಂದನೆಯ ಮನಸ್ಸೊಂದರ ಅಕ್ಕಪಕ್ಕದ ವಿಷಯವಾದರಂತೂ ತಾಳುವ ರೂಪವೇ ಬೇರೆ. ಎಮಿಲಿ ಡಿಕಿನ್ಸನ್, ಅಮರ್ತ್ಯಸೇನ್, ನಮ್ಮ ಮಧುರ ಚೆನ್ನ ಇವರೆಲ್ಲ ಅನವರತ ಅದರ ನೆರಳಿನಲ್ಲಿ ನರಳುತ್ತಲೇ ದೈತ್ಯ ಪ್ರತಿಭೆಗಳಾಗಿ ಬೆಳೆದು ಸಾವಿನ ಮೇಲೂ ನೆರಳು ಕೆಡವಿ ಹೋದವರು. ಇತ್ತೀಚಿನ ನಮ್ಮ ಲಂಕೇಶ ಹಾಗೂ ಡಿ. ನಾಗರಾಜ ಕೂಡಾ ಇದೇ ಸಾಲಿಗೆ ಸೇರಬೇಕಾದವರು. ಚಂದ್ರಶೇಖರ ಪಾಟೀಲರ “ಅರ್ಧ ಸತ್ಯದ ಹುಡುಗಿ” ಸ್ಮಿತಾ ಪಾಟೀಲ್ ಸತ್ತ ಕಾಲಾವಧಿಯ ಸುತ್ತ ಆಕೃತಿ ಪಡೆದ ಒಂದು ಸಂಕಲನ. ಈ ಹಾಡು ಒಂದರ್ಥದಲ್ಲಿ ಸಾವಿನ ಕವಿತೆ. ನಾಲ್ಕು ಭಾಗಗಳಲ್ಲಿ  ವಿಂಗಡಿಸಲಾಗಿರುವ ಇಲ್ಲಿಯ ಎಂಬತ್ತೆರಡು ಕವನಗಳಲ್ಲಿ ಬಹುಪಾಲು ಸಾವಿನ ಹಿನ್ನೆಲೆಯಿಂದಲೇ ಹುಟ್ಟಿದವುಗಳು - ಎಂದರೆ ಯಾರೂ ಗಾಬರಿಯಾಗಬೇಕಿಲ್ಲ. ಒಂದು ಕವಿತೆಯಂತೆ ಬದುಕಿದ್ದ ಸ್ಮಿತಾ ಪಾಟೀಲ ತೀರಿ ಹೋದಾಗ ಹುಟ್ಟಿದ “ಅರ್ಧ ಸತ್ಯದ ಹುಡುಗಿ” ಕವನದಂತೆಯೇ, ಇಲ್ಲಿಯ ಕವನಗಳು ವಿಭಿನ್ನ ಹಿನ್ನೆಲೆಗಳಲ್ಲಿ ಕನಸು, ಆದರ್ಶ, ಮಾತು, ಸಂಸ್ಕೃತಿ ಒಟ್ಟಾರೆ ಮನುಷ್ಯರು ಸತ್ತಾಗಲೂ ಹುಟ್ಟಿಕೊಂಡಿವೆ.
ಸಾವು ಒಂದು ಸರಳವಾದ ಸತ್ಯ. ಯಾವ ವಕ್ರರೇಖೆಗಳಿಗೂ ಇಲ್ಲಿ ಆಸ್ಪದವೇ ಇಲ್ಲ. ಆದರೆ ಸರಳತೆಯೇ ಸಂಕೀರ್ಣಗಿಂತ ಹೆಚ್ಚು ಕಾಡುವ ವಿಷಯ ಎಂದು ಗಾಂಧಿ ಹೇಳುತ್ತಿದ್ದ ಮಾತು ಸತ್ಯ ಎನ್ನಲು ಸಾವು ಒಂದೇ ಸಾಕು. ಕವಿ ಚಂಪಾ ಬರೆಯುತ್ತಾರೆ “ಸಾವು ನನ್ನನ್ನು ಯಾವಾಗಲೂ ಗಾಢವಾಗಿ ಕಲಕುತ್ತದೆ. ನಮ್ಮ ಬೆಕ್ಕಿರಬಹುದು, ಟಾಮಿ ಇರಬಹುದು, ಗೆಳೆಯನಿರಬಹುದು, ಸ್ಮಿತಾ ಇರಬಹುದು, ಮೊಲಾಯಿಸ್ ಇರಬಹುದು. ಹೇಳದೇ ಕೇಳದೇ ಬರುವ ಸಾವು ಅರ್ಧ ಸತ್ಯವನ್ನೇ ಅಳಿಸಿ ಹಾಕುತ್ತದೆ. ಕಂಡ ಅರ್ಧಂಬರ್ಧ ಸತ್ಯದ ಆಚೆ ಇರಬಹುದಾದ ಸತ್ಯದ ಹುಡುಕಾಟದ ತಳಮಳವೇ ಬದುಕು ನಮಗೆ ಕೊಡುವ ಬಳುವಳಿ ಇರಬಹುದೇನೋ”. ಬಿಚ್ಚಿಕೊಳ್ಳುವುದಕ್ಕಿಂತ ಬಚ್ಚಿಟ್ಟುಕೊಳ್ಳುವುದು ಹಾಗೂ ಬೆಚ್ಚುಬೀಳಿಸುವಂದರಂಥ ವಾಸ್ತವಗಳಿಗೆ ವಾಲುವ ಸಾವು ಒಂದು ಕಲಾತ್ಮಕ ವಿಷಯದ ಸುತ್ತಲೂ ಜರುಗಿದಾಗ ಆಗುವ ಪರಿಣಾಮವೇ ವಿಶೇಷ, ಎನ್ನಲು “ಅರ್ಧ ಸತ್ಯದ ಹುಡುಗಿ” ಉದಾಹರಣೆಯಾಗುತ್ತದೆ. ಒಂದು ನಿಗದಿತ ಕಾಲಘಟ್ಟದಲ್ಲಿ ಜೀವನ ಒಂದು ಪೂರ್ಣ ಸತ್ಯ ಎಂದು ಶತಮಾನಗಳಿಂದ ನಂಬಿಕೊಂಡ ಮನುಷ್ಯನಿಗೆ ಎಲ್ಲ ಅಕಾಲಿಕ ಮರಣಗಳೂ ಅರ್ಧಸತ್ಯ ಎನ್ನಿಸುತ್ತವೆ. ಇದ್ದಕ್ಕಿದ್ದಂತೆ ಹೇಳದೆ ಕೇಳದೇ ಖಾಲಿಯಾಗುವ ಸ್ಥಳದಲ್ಲಿ ಇನ್ನಾರನ್ನೋ ತಕ್ಷಣ ತುಂಬಲಾಗದ ಮನಸ್ಸು ವಿವ್ಹಲಗೊಳ್ಳುತ್ತದೆ. ಹೀಗೆ ಸಾವಿನ ಪ್ರಶ್ನೆ ಖಾಲಿತನದ, ಪುನಃಸ್ಥಾಪನೆಯ, ಅಪೂರ್ಣ ಮಾತಿನ ಪ್ರಶ್ನೆಯಾಗಿ ಮಾರ್ಪಡುತ್ತದೆ. ಇದೇ ಲೆಕ್ಕಾಚಾರ ಎನ್ನಬಹುದಾದುದು. ಸಾವು ಹೇಳಲೇಬೇಕಾದ ಸತ್ಯ ಒಂದಿದೆ. ಅದು ಭೌತಿಕ ಜಗತ್ತಿನ ಭೌದ್ಧಿಕ ಕಸರತ್ತುಗಳೆಲ್ಲ ನಿಶ್ಚಲವಾದ ಮೇಲೆ ಪ್ರಾರಂಭವಾಗುತ್ತದೆ.
“ಅರ್ಧ ಸತ್ಯದ ಹುಡುಗಿ” ಒಂದು ಕಲಸುಮೆಲೊಗರ, ಬಂಡಾಯದಿಂದ ಭಿನ್ನವಾದ ಧ್ವನಿ, ಹನಿಗವನ, ಕಿರುಗವನ, ಕೆಲವು ನೀಳ್ಗವನ, ಪದ್ಯದ ಆಕೃತಿಯಲ್ಲಿ ಇವೆ ಎಂಬ ಕಾರಣಕ್ಕೆ ಇವುಗಳನ್ನು ಪದ್ಯ ಎನ್ನಬೇಕು, ಎನ್ನಬಹುದಾದ ಕವನಗಳು. ಹೀಗೆ ಹಲವು ಪ್ರಕಾರದ ಕಾವ್ಯ ಇಲ್ಲಿ ಕಾಣಸಿಗುತ್ತವೆ. ಇಡೀ ಸಂಕಲನದ ಧ್ವನಿ ಹಾಗೂ ಭಾವವನ್ನು ಸಮೀಕರಿಸುವ ಕ್ರಿಯೆಯನ್ನು ಅವರದೇ ಒಂದು ಕವನ ಸಮರ್ಥವಾಗಿ ನಿಭಾಯಿಸುತ್ತದೆ-

ಎಷ್ಟು ನಮೂನೆಯ ಹಕ್ಕಿಗಳಿವೆ ಈ ಸೃಷ್ಟಿಯಲ್ಲಿ!
ಒಂದೊಂದು ದಿಕ್ಕಿನಿಂದ ಒಂದೊಂದು ದನಿ
ಹಾಡುವ ದನಿ, ಚೀರುವ ದನಿ
ಬೆಸಗೂಡುವ ದನಿ, ಹಸಿವಿನ ದನಿ

ಹೀಗೆ ಹಲವಾರು ದನಿಗಳು ಇಲ್ಲಿ, ಆದರೆ ಎಲ್ಲ ಬಣ್ಣಗಳು ಸೇರಿ ಒಂದು ಬಣ್ಣವಾಗುವಂತೆ, ಎಲ್ಲ ದೇಹಗಳು ಸತ್ತು ಮಣ್ಣಾಗುವಂತೆ ಇಲ್ಲಿ ಹೊರಡುವ ತಿರುಳು ಮಾತ್ರ ಸಾವು. ಗೆಳೆಯ ವಿಶುಕುಮಾರ, ಮನೆಯ ನಾಯಿ ಟಾಮಿ, ವರಕವಿ ಬೇಂದ್ರೆ, ಬಂಧೀಖಾನೆಯಲ್ಲಿ ಒಂದು ಸೊಳ್ಳೆ, ಕನ್ನಡ ಕಾವ್ಯ, ಗಾಂಧಿ ಮಹಾತ್ಮ, ಪ್ರೀತಿ, ವಿಮರ್ಶಕರ ಕೈಯಲ್ಲಿ ಕವಿ, ಆಂಟೇನಾದ ಮೇಲಿನ ಹಕ್ಕಿ, ತಾರೆ ಸ್ಮಿತಾ ಹೀಗೆ ಇಲ್ಲಿಯ ಒಂದೊಂದು ಕವನಕ್ಕೂ ಒಂದೊಂದು ಗೋಚರ ಅಥವಾ ಅಗೋಚರ ಸಾವಿನ ಹಿನ್ನೆಲೆಯಿದೆ. ಸಾವನ್ನು ಪಾಟೀಲರು ಎಲ್ಲಿಯೂ ಒಂದು ಮುಗಿದು, ಮರೆಯಾಗಿ ಹೋಗುವ ಘಟನೆಯಂತೆ, ಪೂರ್ಣ ವಿರಾಮದಂತೆ ಚಿತ್ರಿಸುವುದಿಲ್ಲ. ಬದಲಾಗಿ ಸತ್ತ ಮೇಲೆ ಎಲ್ಲಿಯೂ ಹೋಗದ ಮನುಷ್ಯರು

ಇದ್ದವನ ನೆನಪಿನ ಗುದ್ದಿನಲ್ಲಿ
ಗೆದ್ದಲಿಯಾಗುತ್ತಾರೆ
ಅವರ ಶ್ವಾಸೋಚ್ಛಾಸದ ಹಳ್ಳಕೊಳ್ಳಗಳಲ್ಲಿ
ಹಾವಾಗಿ ಹರಿದಾಡುತ್ತಾರೆ
ಅವರ ಆಕಾಶದ ತುಂಬ
ಹುಡಿಯಾಗಿ ಅಡರುತ್ತಾರೆ
ಹಕ್ಕಿಯಾಗಿ ರೆಕ್ಕೆ ಬಿಚ್ಚುತ್ತಾರೆ
ಚಿಟ್ಟೆಯಾಗಿ ಚಿಮುಕುತ್ತಾರೆ
ಎಲ್ಲಿಯ ತನಕ?
ಇದ್ದವರೂ ಸಾಯುವ ತನಕ.
ಸಾವು ಎಷ್ಟೇ ಕ್ಷೀಷೆಯಾದ ವಿಷಯವಾದರೂ ಪ್ರತಿ ಸಾವಿಗೂ ಪ್ರತಿಕ್ರಿಯೆ ಭಿನ್ನಭಿನ್ನವಾಗಿಯೇ ಇರುತ್ತದೆ. ವೈಯಕ್ತಿಕ ನೆಲೆಯ ಪ್ರತಿಕ್ರಿಯೆ ಮೂರ್ತತೆಯ ಪೊರೆ ಕಳಚಿಕೊಂಡು ಯಾವಾಗಲೂ ಅಮೂರ್ತವಾಗಿಯೇ ಇರುತ್ತದೆ. ಆ ಅಮೂರ್ತವೇ “ಅರ್ಧ ಸತ್ಯದ ಹುಡುಗಿ”. ಇಲ್ಲಿಯ ಸಾವಿನ ಚಿಂತನೆ ಹುಟ್ಟಿನ ಬಾಗಿಲಿಗೆ ಒಯ್ಯುವಂಥದ್ದು. ಇಲ್ಲಿ ಜರುಗುವುದು ಜಡದ ಮಾತಲ್ಲ, ಚೈತನ್ಯದ ಚಿಂತನೆ. ಆದರೆ “ಅರ್ಧ ಸತ್ಯದ ಹುಡುಗಿ”, ನೆನಪಿನ ಉಗ್ರಾಣದಲ್ಲಿ ಉಳಿಯುವುದು ಮಾತ್ರ ಬರೀ ಈ ಒಂದು ಕವನಕ್ಕಾಗಿ ಅಲ್ಲ, ಬದಲಾಗಿ ಇಲ್ಲಿಯ ವಿಷಯ ವೈವಿಧ್ಯಕ್ಕಾಗಿ.
ಸುಮಾರು ಮೂರು ನಾಲ್ಕು ದಶಕಗಳ ವಿಶಾಲವಾದ ಕಾಲಾವಧಿಯ ಹತ್ತು ಸಂಕಲನಗಳಷ್ಟು ಕಾವ್ಯ ಕೃಷಿ ಪಾಟೀಲರದಾಗಿದ್ದರೂ ಕೂಡಾ ಅವರು ಪುನಃ ಪುನಃ ಬರೆದದ್ದು ಚಿಂತಿಸಿದ್ದು ಮಾತ್ರ ನಮ್ಮ ಕಾವ್ಯದ ಸ್ವರೂಪ, ಹದಗೆಡುತ್ತಿರುವ ಸಾಮಾಜಿಕ ಸ್ಥಿತಿಗತಿ ಮತ್ತು ತುಟಿಯ ಅಂಚಿನಲ್ಲಿಯೇ ಉಳಿಯುವ ಸತ್ಯಗಳ ಕುರಿತು. ‘ನಿಧಾನವಾಗಿ ಆಲಿಸಿದರೆ ಪ್ರತಿಯೊಂದು ಶಬ್ದವೂ ಒಂದೊಂದು ಕವನವೇ.’ ‘ಕಾವ್ಯವೆಂದರೆ ಒಂದು ವಾಕ್ಯದಂತೆ’, ‘ವಿಮರ್ಶಕರ, ರಿವ್ಯೊಕಾರರ ಮಾನದಂಡಗಳ, ಸೂತ್ರಗಳ, ಕುಂಡಲಿಗಳ ಹಾವಳಿಯಲ್ಲೂ, ನಮ್ಮ ಕವಿಗಳು ಇಂದು ಹಕ್ಕಿಗಳ ಬಗ್ಗೆ, ಗಿಡಗಳ ಬಗ್ಗೆ, ಆಕಾಶದ ಬಗ್ಗೆ ಕವನ ಕಟ್ಟುತ್ತಿದ್ದಾರಲ್ಲ - ಅದೇ ಸಮಾಧಾನ’. ಇಂಥ ಅನೇಕ ವಿಚಾರಗಳನ್ನು ಸಂಕಲನದ ಹಲವಾರು ಕಡೆ ಚರ್ಚಿಸುವ ಕವಿ ಕ್ಷೀಣವಾಗುತ್ತಿರುವ ಕಾವ್ಯ ಪರಂಪರೆಯ ಬಗ್ಗೆ ಚಿಂತಿತರಾಗುತ್ತಾರೆ. ಅಂತೆಯೇ ಮೌಲ್ಯಗಳು ಸಮಾಜದಲ್ಲಿ ಕುಸಿಯುತ್ತಿರುವ ಕುರಿತು, ಅದರ ಶಿಶುವಾದ ಮನುಷ್ಯ ಶುಷ್ಕವಾಗುವುದರ ಕುರಿತು ಬರೆಯುತ್ತಾರೆ -

ಪ್ರೀತಿಗೆ ಪ್ರತಿಯಾಗಿ ಕಡ್ಡಾಯವಾಗಿ ಪ್ರೀತಿಯನ್ನು ಬಯಸದ ಸುತ್ತಲಿನ ಸೃಷ್ಟಿಯನ್ನು
ಕಣ್ತೆರೆದು ನೋಡುವ, ಎದೆ ತುಂಬಿ ಹಾಡುವ
ಕಲೆಯನ್ನು ನಾವು ಕಲಿತಾಗ
ಮುಂದೊಂದು ದಿನ ನಮ್ಮ ಸುತ್ತಲಿನ ಮನುಷ್ಯರನ್ನೂ
ಪ್ರೀತಿಸುವ ಕಾಲ ಬರಬಹುದು.

ಆದರೆ ಸಮಾಜವನ್ನು ವ್ಯಂಗ್ಯ, ಗೇಲಿಯ ಭಾವದಿಂದ ನೋಡುವ ಈ ಪ್ರತಿಕ್ರಿಯೆ ಸಮಾಜ ಸುಧಾರಕನದಲ್ಲ. ವ್ಯವಸ್ಥೆಯ ಹೊರಗೆ ನಿಂತು ನಿರಪರಾಧಿಯಂತೆ ಮಾತನಾಡುವುದಲ್ಲ. ಎಲ್ಲ ಅಪರಾಧ, ಪ್ರಶ್ನೆಗಳು ವೈಯಕ್ತಿಕ ನೆಲೆಯಿಂದ ಹೊರಟು ಸಾರ್ವತ್ರಿಕ ಸ್ಪಂದನಯನ್ನು ನಿರೀಕ್ಷಿಸುತ್ತವೆ. ವಸ್ತುವಿನ ಇನ್ನೊಂದು ದೃಷ್ಟಿಕೋನದಿಂದ ನೋಡಿದಾಗ ಚಂಪಾರವರ ನಾಟಕ, ಅಂಕಣ ಹಾಗೂ ಕಾವ್ಯದ ಮಧ್ಯದ ವ್ಯತ್ಯಾಸದ ನಾಡಿಯನ್ನು ಹಿಡಿಯುವುದು ಬಲುಕಷ್ಟ. ಅಂತೆಯೇ ಅವರ ‘ಕೊಡೆಗಳು’ ಕವನವಾಗಿರಲೂ ಸಾಧ್ಯವಿದೆ. ಬೇಕೆನ್ನಿಸಿದರೆ ವಿಸ್ತರಿಸಿ ನಾಟಕದ ಆಕೃತಿ ಪಡೆಯಲೂ ಸಿದ್ಧವಿದೆ. ಈ ಸಂಕಲನದ ‘ನಮ್ಮ ಚೆನ್ನಣ್ಣ’, ‘ಸಾಧನ ಕೇರಿಯ ದಾರಿಯಲ್ಲಿ’, ‘ದಲಿತ ಕವಿ ರಾಮಣ್ಣನಿಗೆ’, ‘ನಮ್ಮ ಸ್ವಾತಂತ್ರ್ಯ’, ‘ಸಂಜೆಗಾವಳದವರು’ ಹಾಗೂ ಇನ್ನೂ ಅನೇಕ ಕವನಗಳು ಪ್ರಕಾರ ಪ್ರಕಾರದ ಮಧ್ಯದ ಭೇದ ಮರೆಸಿ ಓದಿಸಿಕೊಂಡು ಹೋಗುವಂಥವುಗಳು. ಅವರೇ ಹೇಳಿಕೊಂಡಂತೆ ‘ಗದ್ಯ’, ‘ಪದ್ಯ’ ಎಂಬ ಪದಗಳ ಬಳಕೆಯ ಬಗ್ಗೆ ಸಂದೇಹ ಪಡುವ ಅವರಿಗೆ ಬದುಕು ಒಂದು ನಿರಂತರ ಪ್ರಯೋಗ ಶಾಲೆ. ಆದರೆ ಆ ಪ್ರಯೋಗ ಬರೀ ಸಲಕರಣೆಗಳನ್ನು ಕಲೆಹಾಕುವ ಹಂತದಲ್ಲಿಯೇ ಉಳಿಯುವಂತಾದರೆ ಏನರ್ಥ? “ಅರ್ಧ ಸತ್ಯದ ಹುಡುಗಿ” ಶಬ್ದಗಳ ಜಾತ್ರೆ ಮಾಡುವ ಸಂಭ್ರಮದಲ್ಲಿರುವಷ್ಟೇ ತೀವ್ರವಾಗಿ ಅಂತರಂಗದ, ಕಾರುಣ್ಯದ ಕದ ತಟ್ಟುವಲ್ಲಿ ಯಶಸ್ಸಾಗುತ್ತದೆಂದು ಅನ್ನಿಸಲಾರದು. ಸಾರ್ವಜನಿಕ ಭಾಷಣದಂತೆ, ಸಾರುವ ಅಯ್ಯನ ಶಬ್ದಜಾಲದಂತೆ, ಸುಡಗಾಡು ಸಿದ್ಧನ ಪವಾಡದಂತೆ, ಆಟದಲ್ಲಿ ಮೋಡಿಗೊಳಿಸುವ ಈ ಸಂಕಲನ ನೆನಪಿನಂಗಳದಲ್ಲಿ ಉಳಿದರೂ ಭಾವದ ಬೀಟ್ಸ್‌ಗಳೊಂದಿಗೆ ಬೆರೆಯುವುದಿಲ್ಲ.
ಸಂಕಲನದ ಶೀರ್ಷಿಕೆಯೇ ಹೇಳುವಂತೆ ಇವು ಹುಡುಗಿಯೊಬ್ಬಳ ಸುತ್ತಲಿನ ಹಾಡುಗಳು. ಈ ಹುಡುಗಿ ಗಜಲ್ ಗುಂಡಮ್ಮನಾಗಿರಬಹುದು, ಸ್ಮಿತಾ ಪಾಟೀಲ ಅಥವಾ ಅನಾಮಿಕಳಾದ ಇನ್ಯಾರೋ ಆಗಿರಬಹುದು. ಅಥವಾ ಇವರಾರೂ ಅಲ್ಲದವಳೂ ಆಗಿರಬಹುದು. ಪಾಟೀಲರ ‘ತುಳುಕಿದವರು’ ಕವನ ನೋಡಿ -

ಯಾರವಳು?
ಮೈಸೂರಿನ ಸಿಂಗಾರಿಯೋ
ಬೆಂಗ್ಳೂರಿನ ಬಂಗಾರಿಯೋ
ಹಾಂಕಾಂಗಿನ ಹಾದರಗಿತ್ತಿಯೋ
ಇಂಗ್‌ಲಾಂಡಿನ ಇದಿಮಾಯಿಯೋ
ಆಫೀಸಿನ ಅರಗಿಣಿಯೋ
ಕಾಲೇಜಿನ ಕರಿಮಣಿಯೋ
ಹಿತ್ತಲ ಕಡೆ ಹೆಮ್ಮಾರಿಯೋ
ಮಗ್ಗುಲು ಮನೆ ಮೂದೇವಿಯೋ
ನಿಮ್ಮ ಕನಸೆಲ್ಲ ತುಂಬಿ
ಕನವರಿಕೆಯಲ್ಲಿ ತುಳುಕಿದವಳು
ಯಾರವಳು ಹೇಳಿ?

ನಿರಂತರವಾದ ಅನ್ವೇಷಣೆಗಳಿಗೆ ಕಾರಣವಾದ ವಿಷಯಗಳಲ್ಲಿ ಒಂದಾದ ಹೆಣ್ಣು ಈ ಸಂಕಲನದಲ್ಲಿ ಹಲವಾರು ರೂಪಗಳಲ್ಲಿ ಕಾಣಸಿಗುತ್ತಾಳೆ. ವಿಷಾದ, ಉಕ್ಕುವ ಜೀವನ ಪ್ರೀತಿ, ಸಂಗಾತಿ, ಮೋಸದ ಬಲೆ, ಚಿತ್ರ, ಕಷ್ಟಕ್ಕೆ ಬರುವ ಜೀವನ ಮಿತ್ರನ ನೂರು ನೂರು ಬಣ್ಣಗಳನ್ನು ಆಕೆಯಲ್ಲಿ ಕಂಡುಕೊಳ್ಳುತ್ತಾರೆ ಕವಿ.

ನಿನ್ನ ಕಣ್ಣಿನ ಎಣ್ಣೆ
ಸುರಿಸುರಿದು ಉರಿಸಲು
ಬರುವೆಯಾ ಒಮ್ಮೆ ನೀನು ಅಥವಾ
ನಿನ್ನ ಬೆಂಕಿಗೆ ತುತ್ತಾಗಿ
ಬೆಳಗು ಹರಿದಾಗ
ನಾನು ಇರುಳಿನ ಬೂದಿ

ಅಥವಾ ಎಲ್ಲ ಈ ತಹತಹಿಕೆಗಳು ಮುಗಿದು ಮೂಡುವ ಈ ಕೆಳಗಿನ ಸಾಲುಗಳಿರಬಹುದು.

ಅಂತ್ಯಗೊಂಡು ಮತ್ತೆ
ಮಂಜು ಮುತ್ತಿದ ಕ್ಷಿತಿಜದತ್ತ ಸವಾಲಾಗಿ ಸಮಾಂತರದಲ್ಲಿ
ನಾನು-ನೀನು
ರೈಲು ಹಳಿಗಳ ಹಾಗೆ.......

ಇಲ್ಲಿಯೂ ಕೂಡಾ ಪಾಟೀಲರ ನಿಲುವು ಉಳಿದೆಲ್ಲ ಕನ್ನಡ ಕವಿಗಳಿಗಿಂತ ಭಿನ್ನ. “ದ್ರೌಪದೀಕಿ ಸಾಪ್ತಾಹಿಕಿ” ಮತ್ತು “ಒಂದು ಪ್ರಾಮಾಣಿಕ ಸಲಹೆ” ಯಂಥ ಕವಿತೆಗಳಲ್ಲಿ ನಾವು ಈ ಭಿನ್ನತೆಯನ್ನು ಗ್ರಹಿಸಬಹುದು. ತಾಯಿ, ದೇವತೆ, ಸ್ಫೂರ್ತಿಯ ಸೆಲೆ, ಸದಾ ಅನುಕಂಪ ಬಯಸುವ ಜೀವ ಇವೆಲ್ಲ ಹಿಂದಿನ ಪರಂಪರೆಯ ಕವಿ ಮಹೋದಯರೆಲ್ಲ ಒಬ್ಬರು ಇನ್ನೊಬ್ಬರಿಗೆ ಅಂಜಿ ಅಥವಾ ಎಲ್ಲರೂ ಒಟ್ಟಾಗಿ ಸಂಸ್ಕೃತಿ ಎಂಬ ವಿಕೃತಿಗೆ ಅಂಜಿ ಹೆಣ್ಣಿಗೆ ಆಪಾದಿಸಿದ ಶಬ್ದಗಳು. ಸಾಹಿತ್ಯ ಎಂದರೆ ಕೆಲವು ಬಾರಿ ಬರೀ “ಹಸಿ ಹಸಿ ಸುಳ್ಳುಗಳ ದಾಖಲಾತಿ” ಎಂದು ಮಾಮ್ ಬರೆಯುತ್ತಾನೆ. ಇದು ಇಂಥದೇ ಕೆಲವು ಸಂದರ್ಭಗಳಲ್ಲಿರಬಹುದೇನೋ. ಪಾಟೀಲರು ಭೂಮಿಯನ್ನು ಕಲ್ಪಿಸುವ ಬಗೆ ನೋಡಿ. ಅವರಿಗೆ ಆಕೆ ತಾಯಿಯಲ್ಲ. ಭೂಮಿಯನ್ನು ಅಗೆದು, ಬಿಗಿದು, ಬಿತ್ತಿ, ಹಸಿರ ಚಿಮ್ಮಿಸಿ, ಹೂ ಹಣ್ಣಾಗಿಸುವ ನಾವು -

ಇಂಥ ಭೂಮಿಗೆ ತಾಯಿ
ಅಂತ ಕರೆದು ತಾಯ್ಗಂಡರು ಅಂತ
ಕರೆಸಿಕೊಳ್ಳುವುದಕ್ಕಿಂತ
ಭೂಮಿ ಒಬ್ಬ ಗೆಳತಿ, ಸಖಿ,
ಅಂತ ಕರೆಯಬಹುದಲ್ಲವೆ?

ಭಾವ ಬುದ್ಧಿಗಳೆರಡನ್ನೂ ಸಹಜವಾಗಿ ಒಪ್ಪಿಸುವಂತೆ ಬರೆಯುವ ಪಾಟೀಲರು ಕನ್ನಡ ಕಾವ್ಯ ಪರಂಪರೆ ಕಂಡ ಅಪೂರ್ವ, ವೈವಿಧ್ಯಮಯ ಆಸಕ್ತಿ, ವಿಷಯಗಳ ಅನನ್ಯ ಕವಿ. ನವೋದಯದ ಋಷಿಗಳು, ನವ್ಯದ ಅರೆ ಬೆಂದವರು, ದಲಿತ-ಬಂಡಾಯದ ಭಾಷಣಕಾರ ಕವಿಗಳಾರಲ್ಲೂ ಸಿಗಲಾರದ ವಸ್ತು, ವಿಷಯ ವಿಸ್ತಾರ ಪಾಟೀಲರ ಕಾವ್ಯದಲ್ಲಿ ಇದೆ ಎಂದರೆ ಅತಿಶಯೋಕ್ತಿಯಾಗಲಾರದು. ಪಾಟೀಲರ ಕಾವ್ಯದ ಅತೀ ಮುಖ್ಯ ಕಾಳಜಿಗಳಲ್ಲಿ ಛಾಪು ಬಿಂಬಿಸುವುದೂ ಒಂದು. ತಮ್ಮನ್ನು ತಾವು ತೂಗಿ ನೋಡಿಕೊಳ್ಳುವ, ವಿಮರ್ಶಿಸಿಕೊಳ್ಳುವ, ಆ ಮೂಲಕ ಸಮಕಾಲೀನ ಸಂದರ್ಭಗಳನ್ನು ನೋಡುವ ಗುರಿಯಿಂದ ಪ್ರಾರಂಭವಾಗುವ ಅವರ ಹಾಡಿನ ಹಳ್ಳ ತನ್ನದೇ ಆದ ಛಾಪು ಮೂಡಿಸುವ ಗತ್ತಿನಲ್ಲಿ ಹರಿದು ಕಾವ್ಯ ಪರಂಪರೆಯ ಸಮುದ್ರವನ್ನು ಸೇರುತ್ತದೆ.
ನವೋದಯದ ಮೂಲದಿಂದಲೇ ಅವರು ಕಾವ್ಯ ಕೃಷಿಯನ್ನು ಪ್ರಾರಂಭಿಸಿದ್ದರೂ ಕೂಡಾ ತಮ್ಮ ರಸಯಾತ್ರೆ ಇಂಥ ಇಂಥ ಮೇರೆಗಳ ಉಲ್ಲಂಘನೆಯಾಯಿತು ಎಂದು ಹೇಳಿದ್ದಾರೆಯೆ ವಿನಃ ಇಂಥದೇ ಪರಂಪರೆಯನ್ನು ಸೇರಿತು ಎಂದು ಹೇಳಿಕೊಂಡಿಲ್ಲ. ಪ್ರತಿ ಬರಹದ ಸಂದರ್ಭದಲ್ಲಿ ತಟ್ಟನೆ ಎಚ್ಚರವಾಗಿ ಉಲ್ಲಂಘನೆ, ವ್ಯಂಗ್ಯ, ಟೀಕೆಯ ಪ್ರಹಾರಗಳತ್ತ ಎಳೆದೊಯ್ಯುವ ಅವರ ಮನಸ್ಸು, ಇವುಗಳಷ್ಟೇ ಸತ್ಯವಾದ ದಾರ್ಶನಿಕತೆ, ಸಹಜ ಸೌಂದರ್ಯ, ನವಿರಾದ ಹಾಸ್ಯ ಬಿಳಿ ತಿಳಿ ಮೋಡದಂಥ ರಮ್ಯ ಹಾಗೂ ಮೋಹಕತೆಯತ್ತ ಕೆಲವೊಮ್ಮೆ ನೋಡುವುದೇ ಇಲ್ಲ. ಬರೀ ಶಬ್ದ ಹಾಗೂ ಚರ್ಮಗಳ ನೆಲೆಯಲ್ಲಿ ಹುಟ್ಟೆ ಇಂಗಿ ಹೋಗುವ ಹಾಡುಗಳು ಶೀರ್ಷಿಕೆಯಲ್ಲಿ ಮಾತ್ರ ‘ಎಲುಬಿನ ಹಾಡು’ಗಳಾಗುತ್ತವೆ. ಸಮಾಜ ಸುಧಾರಣೆಯ ತೀವ್ರ ಬಯಕೆ ಇರುವ ಅವರಲ್ಲಿ ಸಮಸ್ಯೆಗಳಿವೆ ಆದರೆ ಸಮಸ್ಯೆಗಳ ಪರಿಹಾರಕ್ಕೆ ದಾರಿಗಳಿಲ್ಲ. ಯಯಾತಿಯ ಚಂಚಲ ಮನಸ್ಸಿನಂತೆ ಓಡಾಡುವ ಅವರ ಕಾವ್ಯ ಗುರಿಯಲ್ಲಿ ಕೆಲವು ಕಠಿಣ ಭೀಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
ಬೇಂದ್ರೆ, ಕುವೆಂಪು, ಪುತಿನ, ಡಿ.ವಿ.ಜಿಯವರ ಗಿಡಗಂಟಿಗಳ ಕೊರಳಿಂದ ಉಲಿದ ಹಕ್ಕಿಯ ಹಾಡುಗಳನ್ನು ಆಲಿಸುತ್ತಲೇ ಬೆಳೆದ ಚಂಪಾ ಆನಂತರದ ಕಾಂಕ್ರೀಟ್ ಪ್ರಪಂಚದ ಭೀಷಣ ಪರಿಣಾಮಗಳನ್ನು ತಮ್ಮ ಕವಿತೆಗಳಲ್ಲಿ ಅದೇ ವ್ಯಂಗ್ಯ ಲೇವಡಿಗಳಿಂದ ದಾಖಲಿಸಿದ್ದಾರೆ. ಹಾಗೆ ದಾಖಲಿಸುವುದರ ಮೂಲಕ ಹಿಂದಿನವರು ಕಂಡಿರದ ಇನ್ನರ್ಧ ಸತ್ಯವನ್ನು ಕಾವ್ಯದ ಇತಿಹಾಸದ ಪುಟಗಳಿಗೆ ಸೇರಿಸಿ ಭೂತ ವರ್ತಮಾನಗಳ ಮಧ್ಯದ ವ್ಯತ್ಯಾಸಕ್ಕೆ ಕನ್ನಡಿ ಹಿಡಿಯುತ್ತಾರೆ. ನಿಸರ್ಗ ಕಾಸ್ಮ್ಯಾಟಿಕ್ಸ್ ಪರಿಕಲ್ಪನೆಗೆ ಒಳಗಾಗಿ ಹಿಂದಿನ ವಿಜೃಂಬಣೆಯೆಲ್ಲ ಹ್ಯಾಗೆ ಮರೆಯಾಗಿದೆ ಎಂಬುದನ್ನ ಬಹಳ ಸುಂದರವಾಗಿ ವಿವರಿಸುತ್ತಾರೆ. ಅರ್ಧ ಸತ್ಯದ ಹುಡುಗಿಯ ‘ಬೆಳಗು ಹರಿಯುವ ಮುನ್ನ’ ಅದಕ್ಕೊಂದು ಉತ್ತಮ ಉದಾಹರಣೆ. ಈ ಕವನದಲ್ಲಿ ಅತ್ಯಂತ ಪ್ರಾಮಾಣಿಕವಾದ ನಿಸರ್ಗ ಹಾಗೂ ಸಂಸ್ಕೃತಿಯ ಕಾಳಜಿಗಳಿದ್ದು ಅವುಗಳಿಗೆ ಮಾರಕವಾಗುತ್ತಿರುವ ವಿಷಯಗಳ ಕುರಿತು ಮಾನವೀಯ ತಲ್ಲಣವಿದೆ. ಸರಳ ಸರಳ ‘ಡಾವರ್ ಬೀಚ್’ನಂತೆ ಓದಿಸಿಕೊಂಡು ಹೋಗುವ ಈ ಕವನ ನಮ್ಮ ಬುದ್ಧಿ ಹೃದಯಗಳ ಮೂಲೆ ಮೂಲೆಯನ್ನು ತಟ್ಟಿ ಎಚ್ಚರಿಸುತ್ತದೆ. ಮರ ಮರಗಳ ಮಧ್ಯ ನಾದದ ಜೋಕಾಲಿ ಕಟ್ಟುವ ಹಕ್ಕಿಗಳ ಕಾಲ ಮುಗಿದು -

ನಿಧಾನವಾಗಿ ಸೂರ್ಯ ಮೂಡುತ್ತಾನೆ
ಕಾರು, ಸ್ಕೂಟರು, ರಿಕ್ಷಾಗಳ ಕರ್ಕಶ ದನಿ
ಗಾಳಿಯನ್ನೂ ಸೀಳುತ್ತವೆ, ಜನ
ಕೆಮ್ಮುತ್ತಾರೆ, ಕ್ಯಾಕರಿಸುತ್ತಾರೆ
ನೀರಿನ ನಳದ ಸುತ್ತ
ಖಾಲಿ ಕೊಡಗಳ ಜಗಳ ಶುರುವಾಗುತ್ತದೆ ಮತ್ತೆ ರಾತ್ರಿಯವರೆಗೆ ಜಂಜಾಟ
ಗೊತ್ತ ಪಡಿಸಿದ ದಾರಿಯಲ್ಲಿ ಕವಾಯತು,
ಅವೇ ಮುಖಗಳು, ಅವೇ ಮಾತುಗಳು, ಅವೇ ವಿಮರ್ಶೆಗಳು.

ಇಲ್ಲಿಯ ಈ ಚಿತ್ರಣ ಎಲ್ಲೋ ನಮ್ಮೊಳಗಿನ ವಿಕೃತಿಯ ಪ್ರತೀಕ. ಇನ್ನುಳಿದ ಕವಿತೆಗಳಲ್ಲಿಯಂತೆ ಪಾಟೀಲರ ಚಿಂತನೆಗಳು, ಮಾತುಗಳು ಇಲ್ಲಿ ನನಗೆ ವಾಚ್ಯವೆನ್ನಿಸುವುದಿಲ್ಲ. ಅಪಾರ ಜೀವನ ಪ್ರೀತಿಯ ತಳಹದಿಯಿಂದ ಹೊರಟು ದಡ ಸೇರಿಯೇ ತೀರುವ ದೋಣಿಗಳಂತೆ ಕಾಣಿಸುತ್ತವೆ. ಇಂಥವುಗಳ ಮೂಲಕವೇ ಅವರು ಇಂದಿಗೂ ಪ್ರಸ್ತುತರಾಗುತ್ತಾರೆ. ಚಿಂತಕ ಡಿ.ಆರ್.ನ ಮಾತುಗಳಲ್ಲಿ ಹೇಳಬೇಕೆಂದರೆ “ಊರೇ ಉರಿದು ಹೋಗುತ್ತಿರುವಾಗ ಗುಲಾಬಿಯ ಬಗ್ಗೆ ಚಿಂತೆ ಮಾಡದೆ ಮನುಷ್ಯರ ಬಗ್ಗೆ, ಸಮಾಜದ ಬಗ್ಗೆ, ಸಮಾಜದ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಾ ನಮ್ಮ ಈ ಹೊತ್ತಿನ ಪ್ರಮುಖ ಕವಿ” ಆಗುತ್ತಾರೆ.
ಯುಗ ಹಾಗೆಯೇ ಇದೆ. ಚಿಂತನೆ ಬದಲಾಗಿದೆ. ಕಾವ್ಯದ ಆಶಯ, ಆಕೃತಿ ಎಲ್ಲವೂ ಬದಲಾಗಿವೆ. ಅಬ್ಬರಗಳು ಪೊರೆ ಕಳಚಿಕೊಂಡ ಹಾವಿನಂತಾಗಿವೆ. “ಅರ್ಧ ಸತ್ಯದ ಹುಡುಗಿ” ಇದೆನ್ನೆಲ್ಲ ದಾಖಲಿಸುತ್ತದೆ. ಸಾವಿನಂಥ, ರಾಜಕೀಯದಂಥ ಗಂಭೀರ ಚಿಂತನೆಯೊಂದಿಗೆ ಪ್ರಾರಂಭವಾಗುವ ಈ ಸಂಕಲನ.
ಕನ್ನಡ ಕಾವ್ಯದ
ಭೂತ ಭವಿಷ್ಯ
ಬಣ್ಣಿಸಿ ಹೇಳೋ ಗಾಂಪಾ

ನಮ್ಮ ಆದಿಕವಿ
ಪಂಪಾ ಗುರುವೇ
ನಮ್ಮ ಅಂತ್ಯ ಕವಿ ಚಂಪಾ
ಎಂಬ ಲಘುದಾಟಿಯ ಹನಿಗವನಕ್ಕೆ ನಿಲ್ಲುತ್ತದೆ.
ಇದು ಯುಗ ಧರ್ಮವೇ ಬದಲಾಗುತ್ತಿರುವ ಸಂದರ್ಭ. ಟಕ್ಕನೆ ಕಂಪ್ಯೂಟರ್ ಗುಂಡಿಯೊಂದನ್ನು ಅದುಮಿ ಇಪ್ಪತ್ತೆರಡು ಇಂಚುಗಳ Sಛಿಡಿeeಟಿ ಮೇಲೆ ಇಡೀ ಪ್ರಪಂಚವನ್ನೇ ನೋಡಲು ಕುಳಿತ ಇಂದಿನ ಕವಿಕಾವ್ಯದ ಪ್ರಶ್ನೆಗಳೂ ಬದಲಾಗಿವೆ. ಚಂಪಾ ಯಾವುದನ್ನು ಸಾಧಿಸಲು ಕಾವ್ಯ ಕೃಷಿಗಿಳಿದರೋ ಅದು ಒಂದು ಹಂತದಲ್ಲಿ ಸಾಧಿಸಿಯಾಗಿದೆ. ವ್ಯಕ್ತಿ ಪೂಜೆ ಮರೆಯಾಗುತ್ತಿದೆ. ಯಾರು ಯಾರನ್ನೂ ಈಗ ತಡೆಯಬಲ್ಲರು. ಫೋಸ್ಟ ಸ್ಟ್ರಕ್ಚರಲ್‌ದ ಈ ಗಾಳಿಯಲ್ಲಿ ವಿಮರ್ಶಕ ಮೂಲೆ ಗುಂಪಾಗಿದ್ದಾನೆ. ಆತನ ಪ್ಯಾರಾಮೀಟರ್‌ಗಳ ಸರ್ಟಿಫಿಕೇಟ್‌ಗಳೆಲ್ಲ ಗೆದ್ದಲು ತಿಂದಿವೆ. ಕಾವ್ಯ ಖಿ.ಗಿ. Sಛಿಡಿeeಟಿಮೇಲೆ ಕಾಣೂವ ಅಲ್ಪ ಅವಧಿಯ ಮುದ್ದು ಮುಖದ ಹುಡುಗಿಯಂತಾಗಿದೆ. ಇದು ಒಂದು ಹಂತದ ನಿರೀಕ್ಷೆಯೂ ಕೂಡಾ. ಅತ್ಯಂತ ಸಮಕಾಲೀನವಾದ ವ್ಯಕ್ತಿ (ಶಾಂತರಸ, ಚೆನ್ನಣ್ಣ, ವಿಶುಕುಮಾರ, ರಾಮಣ್ಣ, ಕುವೆಂಪು, ಶರ್ಮ ಕುರಿತು ಇಲ್ಲಿ ಕವನಗಳಿವೆ) ಆದರೆ ಜಾಗತಿಕ ಸ್ವರೂಪ ಉಳ್ಳ ವಿಚಾರಗಳನ್ನು ಕವಿ ಚಂಪಾ ತಮ್ಮ ಬಹುಪಾಲು ಕವಿತೆಗಳಿಗೆ ಅಳವಡಿಸಿಕೊಂಡಿದ್ದಾರೆ. ಸಮನ್ವಯದ, ಸೌಜನ್ಯದ ದಾರಿಯಿಂದ ಸಾವಿರ ಮೈಲು ದೂರವಿರುವ ಕವಿ ಎಲ್ಲ ವೈವಿಧ್ಯಗಳನ್ನು ಈ ಸಂಕಲನದಲ್ಲಿ ಒಂದು ಏಕತಾನತೆಗೆ ಅಳವಡಿಸುವ ಹುಚ್ಚು ಪ್ರಯತ್ನಕ್ಕೆ ಎಳೆಸುವುದಿಲ್ಲ. ಎಲ್ಲ ವಿಷಯ ವಿಚಾರಗಳೂ ಅವರ “ಅರ್ಧ ಸತ್ಯದ ಹುಡುಗಿ” ಯ ಹಾಗೆ ಅರ್ಧಂಬರ್ಧ, ಅಪೂರ್ಣ. ಈ ಎಲ್ಲ ಅಪೂರ್ಣತೆಗಳು ಬೆರೆತು ಒಂದು ಪೂರ್ಣತೆಯತ್ತ ಸಾಗುವುದಾದರೆ ಸಾಗಲಿ ಆದರೆ ಕವಿಯ ಗುರಿ ಮಾತ್ರ ಇದು ಅಲ್ಲ. ಸಾಹಿತ್ಯ ಕೃಷಿಯ ಈ ದೀರ್ಘ ಪ್ರವಾಸದ ನಂತರವೂ ಚಂಪಾ ಅವರ “ಅರ್ಧ ಸತ್ಯದ ಹುಡುಗಿ” ಕಾಯುತ್ತಾಳೆ ಕೆನೆಗಟ್ಟಬೇಕಾದ ಈ ಕೆಳಗಿನ ಕನಸಿಗಾಗಿ,

ಗೋಡೆ ಗೋಡೆಗೆ ಢಿಕ್ಕಿ ಹೊಡೆಯುತ್ತಿವೆ ಮಾತುಗಳು
ಕಾಯುತ್ತಿರುವೆ
ಈ ಮಾತುಗಳ ನಡುವಿನ ಮೌನಕ್ಕಾಗಿ
ಈ ಮೌನಗಳ ಸಂಧಿಸುವ
ಸೇತು ಬಂಧಕ್ಕಾಗಿ.




No comments:

Post a Comment