Total Pageviews

Tuesday, April 5, 2011

ಜಗತ್ತಿನಲ್ಲಿ ಅತೀ ರೋಮಾಂಚಕಾರಿ ಶಬ್ದ....(the world's mesmerising word-mother)


ಜಗತ್ತಿನಲ್ಲಿ ಅತೀ ರೋಮಾಂಚಕಾರಿ ಶಬ್ದ…….

         ನಿಮಗೆ ಬೇಜಾರಾದರೂ ಚಿಂತೆಯಿಲ್ಲ, ನಾನು ಮತ್ತೆ ಮತ್ತೆ ಹೇಳುತ್ತೇನೆ-ತಾಯಿಗೂ ನಾಯಿಗೂ ಬಹಳ ಸಾಮ್ಯತೆಗಳಿವೆ. ಮುಪ್ಪಿನ ದಾರಿದ್ರ್ಯದಲ್ಲಿ ಅವ್ವನ ಪಾಡು, ನಾಯಿ ಪಾಡಾಗಿರುತ್ತದೆ. ತನ್ನ ಕಂದಮ್ಮಗಳ ರಕ್ಷಣೆಗೆ ಅವಳು ನಾಯಿಯಂತೆ ಕಾಲು ಕೆದರಿ ಜಗಳಕ್ಕೂ ಸಿದ್ಧಳಾಗುತ್ತಾಳೆ. ಮಕ್ಕಳ ಬೆಳೆಯುವಿಕೆಯ ಪ್ರಕ್ರಿಯೆ ಅವ್ವ ಕಳೆದುಕೊಳ್ಳುವ ವ್ಯಥೆಯ ಹಾಡಾಗುತ್ತದೆ. ನಾವು ಹೆಂಡಂದಿರ ತೋಳುಗಳ ಬಿಸುಪಿಗೆ ಹೋದಷ್ಟೂ ಅವ್ವ ಬರಿದಾಗುತ್ತಾಳೆ. ನಾವು ಗಹನವಾದಷ್ಟೂ ಅವಳು ವಾಚಾಳಿಯಗುತ್ತಾಳೆ. ಮುಪ್ಪು ಆಕೆಯ ಮೈ ಏರಿದಷ್ಟೂ ಅವಳು ಹತಾಶಳಾಗುತ್ತಾಳೆ, ಜಗಳಗಂಟಿಯಾಗುತ್ತಾಳೆ, ಮಣ್ಣುಮಯವಾಗಿ ಕಣ್ಣು ಮುಚ್ಚುವವರೆಗೂ ಅವಳು ಪ್ರೀತಿಗಾಗಿ ಹಪಹಪಿಸುತ್ತಾಳೆ. ನಮ್ಮ ಕವಿಗಳ ಸಾಲುಗಳಲ್ಲಿಯೇ ಅವಳನ್ನು ವ್ಯಾಖ್ಯಾನಿಸಬೇಕೆಂದರೇ, ಅವಳು ‘ಬನದ ಕರಡಿ’, ‘ಭುವನದ ಬಾಗ್ಯ’, ‘ಎದೆಯ ಬೂದಿ’, ‘ಛಲದ ಹಾದಿ’,‘ ನೆಲದ ಕೋಟಿ ಕೋಟಿ ಜೀವ ಜನ್ಮದ ಧಾರೆಯದಾರಿ’.
              
             ಜಗತ್ತಿನಲ್ಲಿ ಅತೀ ರೋಮಾಂಚಕಾರಿ ಶಬ್ದ ಯಾವುದು? ಎಂದು ಯಾರಾದರೂ ನನ್ನನ್ನು ಕೇಳಿದರೆ ‘ಅವ್ವ’ ಎಂದೇ ಹೇಳುತ್ತೇನೆ.  ಅವ್ವನನು ಹುಗಿದು ಬಂದು ನಿರಮ್ಮಳವಾಗಿರುವುದು ಯಾರಿಗಾದರೂ ಸಾಧ್ಯವೇ?

             ಗಯ್ಯಾಳಿಯಾಗಿದ್ದ ಹೆಂಡತಿಯ ಕಪಿಮುಷ್ಟಿಯಿಂದ ಮುಪ್ಪಿನ ತಾಯಿಯನ್ನು  ಉಳಿಸಿಕೊಳ್ಳಲು ಹೋರಾಡಿದ,ತಮ್ಮ ಸಂಸಾರವನ್ನೇ ಬಲಿಕೊಟ್ಟ        ನನ್ನಗುರುಗಳೊಬ್ಬರನ್ನುನೋಡಿದ್ದೇನೆ. “ಮಗನ ಮದುವೆಯೆಂಬುದು ತಾಯಿಗೆ ಯವ ಕಾಲಕ್ಕೂ ನೆಮ್ಮದಿ ತರುವ ವಿಷಯವಲ್ಲ. ಅದು ಪ್ರೀತಿಗಾಗಿ ಹೋರಾಟ ಪ್ರಾರಂಭವಾಗುವುದರ ದಿನ. ಹೀಗಾಗಿ ಯಾವ ಕಾಲಕ್ಕೂ ಮದುವೆಯ ವಿಷಯದಲ್ಲಿ ತಾಯಿಯ ವಿರುದ್ಧ ಹೋಗಬಾರದು” ಎಂದು ಗುರುಗಳೊಬ್ಬರು ಹೇಳುತ್ತಿದ್ದುದನ್ನು ಕೇಳಿದ್ದೇನೆ.
       
             ಅವು ಸಂಶೋಧನೆಗಾಗಿ ನಾನು ಅಲೆಮಾರಿಯಾಗಿದ್ದ ದಿನಗಳು. ಬಾಲ್ಯ ಸ್ನೇಹಿತನೊಂದಿಗೆ ಸೇರಿಕೊಂಡು ಪುಣೆಗೆ ಹೋಗಿದ್ದೆ. ಅಲ್ಲಿ ಅವನ ಅವ್ವ ವೇಶ್ಯಾವೃತ್ತಿ  ಮಾಡಿಕೊಂದು ಬದುಕಿದ್ದಳು. ಪುಟ್ಟ ಕೋಣೆ. ಅದರಲ್ಲೇ ಒಂದು ಮಂಚ. ರಾತ್ರಿ ನಾವಿಬ್ಬರು ಗೆಳೆಯರು(ಮಕ್ಕಳು) ಮಂಚದ ಮೇಲೆ ಮಲಗಿದರೇ ಅವಳು ಅದರ ಕೆಳಗೆ ಮಲಗಿಕೊಂಡು ಈ ಸಮಾಜದಿಂದ, ಮನೆಯವರಿಂದ ತಾನು ಮೊಸ ಹೋದ ಕಥೆಯನ್ನು ಹೇಳುತ್ತಿದ್ದಳು.

            ಅವಳದು ಚಿಕ್ಕ ವಯಸಿನಲ್ಲಿಯ ಮದುವೆ. ಕುಗ್ರಾಮದಿಂದ ಗಂಡನನ್ನು ಅನುಸರಿಸಿ ಬೊಂಬಾಯಿಗೆ ಹೋದಳು. ಇದ್ದಕ್ಕಿದ್ದಂತೆ ಕುಡುಕ ಗಂಡ ಸತ್ತು ಹೋದ. ಆಗಲೇ ಮೂರು ಮಕ್ಕಳ ತಾಯಿ. ಮರಳಿ ತವರಿಗೆ ಬರಬೇಕೆಂದರೆ ತಾಯಿಯೂ ದೈವಾಧಿನ. ಅಷ್ಟರಲ್ಲಿಯೇ ಬೊಂಬಾಯಿಯ ಕೆಂಪು ದೇಪದ ಪ್ರಪಂಚ ಅವಳಿಗೆ ಸದಸ್ಯತ್ವ ಕೊಟ್ಟಿತ್ತು. ಮೂರು ಮಕ್ಕಳನ್ನು  ಯಥೀಮಖಾನೆ(ಅನಥಾಶ್ರಮ)ಯಲ್ಲಿ ಹಾಕಿ ಅವಳು ದುಬೈಗೆ ಹೋದ ಸುದ್ದಿಯನ್ನು ಕೇಳುತ್ತಲೇ ಆಕೆಯ ದುಷ್ಟ ಸಹೋದರನೊಬ್ಬ ಓಡಿ ಹೋಗಿ ಈಕೆಯ ಮೂರು ಮಕ್ಕಳನ್ನು ತಂದು ತನ್ನ ಬಳಿ ಇರಿಸಿಕೊಂಡ. ಈ ಅವ್ವ ಆಗ  ಚಿನ್ನದ ಮೊಟ್ಟೆ ಇಡುವ ಕೋಳಿಯಾದಳು. ಯೌವ್ವನವನ್ನು ಮಾರಿಕೊಂಡು ತನ್ನ ಹಣವನ್ನೆಲ್ಲಾ ಮಕ್ಕಳಿಗಾಗಿ ಕಳುಹಿಸಿದಳು. ಈಕೆಯ ಮಕ್ಕಳ ಹೆಸರಿನಲ್ಲಿ ಅಣ್ಣ ಶ್ರೀಮಂತನಾದ, ಮಕ್ಕಳು ಭಿಕಾರಿಗಳಾಗಿಯೇ ಉಳಿದರು. ದುಬೈಯಿಂದ ಆಕೆ ಬಂದಾಗ ಮತ್ತೆ ಬಾಡಿಗೆ ಮನೆಯೇ ಗತಿಯಾಗಿತ್ತು. ಹಿರಿಯ ಮಗನ ಮದುವೆಯಾಯಿತು. ವೇಶ್ಯಾವೃತ್ತಿಯ ಹಿನ್ನೆಲೆ ಹೊಂದಿದ್ದಈ ಅತ್ತೆ ಸೊಸೆಗೆ ಕಾಲಕಸವಾದಳು. ಒಂದು ದಿನ ಈ ತಾಯಿಯ ಗಂಟುಮೂಟೆಗಳನ್ನು ಸೊಸೆ ಎತ್ತಿ ರಸ್ತೆಗೆಸೆದಳು. ತಾಯಿಯ ಬಾಳು ಮತ್ತೆ ನಾಯಿಯ ಬಾಳಾಯಿತು. ತನಗೆ ತನ್ನ ವೃತ್ತಿಯೇ ಗತಿಯೆಂದು ಮತ್ತೆ ಪೂನಾಕ್ಕೆ ಓಡಿದಳು. ವಯಸ್ಸಾಗಿತ್ತು, ಯಾರು ಬರಬೇಕು ಈಗವಳ ಬಳಿ? ಮತ್ತೆ ಮರಳಿದಳು ಮಗನ ಆಸರೆ ಬಯಸಿ. ಮಗ ಪ್ರೀತಿಸಿದ, ಸೊಸೆ ಧಿಕ್ಕರಿಸಿದಳು. ಹೃದಯ ಬೇನೆಯಿಂದ ಬಳಲುತ್ತಿದ್ದ ತಾಯಿ ಹೀಗೊಂದು ದಿನ ಕೊನೆಯುಸಿರೆಳೆದಳು. ಮಗ ದುಖಿಃಸಿದ, ಸೊಸೆ ಸ್ವಾತಂತ್ರೋತ್ಸವ ಆಚರಿಸಿದಳು. ನಾನು ಈ ಅವ್ವನ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದೆ.ಬರೀ ಬೆತ್ತಲಾಗಿದ್ದ ದೇಹಕ್ಕೆ ಬಿಳಿ ಬಟ್ಟೆ ಸುತ್ತಿದ್ದರು. ಆಕೆಯ ತೋಳುಗಳಲ್ಲಿ ಒದ್ದಾಡಿದ ಗಂಡಸರು ಆಕೆಗೆ ಮೋಕ್ಷದ ದಾರಿ ತೋರಿಸುತ್ತಿದ್ದರು.

         ಸಾವಿರಾರು ಗಾವುದ ಈ ಮಕ್ಕಳಿಗಾಗಿ ಹಂಬಲಿಸಿ ಬಂದಿದ್ದ ಆ ಅವ್ವನಿಗೆ ಸಾವು ನೀಡಿದಷ್ಟು ಸುಖವನ್ನು ಸೊಸೆಯಾಗಲೀ,ಮಗನಾಗಲೀ, ಸಮಜವಾಗಲೀ, ನೀಡಲಿಲ್ಲ ಎನಿಸುತ್ತದೆ. ಯಾರೋ ಬರೆದ ಕವನ ನೆನಪಾಗುತ್ತದೆ-

               “ಹುಗಿದ ನೆಲದೊಳಗೊಂದಿಷ್ಟು
               ಸುಮ್ಮನಿರಬಹುದು  ನನ್ನವ್ವ
               ನರಳುವ ನಾಯಿ ಬಾಳಿನಿಂದ ಮುಕ್ತಿ ಪಡೆದು
               ಅವ್ವ ತಣ್ಣಗಿರಬಹುದು”

                                          

                       ಡಾ.ರಾಜಶೇಖರ ಮಠಪತಿ(ರಾಗಂ)
              
    

            

1 comment:

  1. story or real whatever it is, tears are coming out from heart. its too good ............

    ReplyDelete