“ಸ್ನೇಹ
ದೂರದ ಮಾತು
ಸಾವಿನ
ಟಿಪ್ಪಣೆಯೂ ಬರೆಯಲಿಲ್ಲ”
‘ನನಗೆ
ದೀಪ ಅರುವ ಭಯವಿಲ್ಲ’ ಎನ್ನುವ ನನ್ನ ಕವಿತೆಯ ಸಾಲುಗಳ ಮೂಲಕ ಮೊನ್ನೆಯಷ್ಟೇ ಸಂಯುಕ್ತ ಕರ್ನಾಟಕದ ಮುಖಾಂತರ
ಜನತೆಯೊಂದಿಗೆ ದೀಪಾವಳಿ ಆಚರಿಸಿಕೊಂಡ ಸಂಭ್ರಮದಲ್ಲಿದ್ದ ನನಗೆ ನಿನ್ನೆ ಅತೀವ ಆಘಾತದ ಕ್ಷಣಗಳೇ ಕಾದಿದ್ದವು.
ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಡಿ.ರಾಜೇಂದ್ರಬಾಬು(D.Rajendrababu) ತೀವ್ರ ಹೃದಯಾಘಾತದಿಂದ ಸಾವನಪ್ಪಿದ್ದು,
ಬಣ್ಣದ ಲೋಕಕ್ಕೆ ಈಗಷ್ಟೇ ಅಂಬೆಗಾಲಿಕ್ಕುತ್ತ ಅದರ ಬೆರಗಿಗೆ ಬಲಿಯಾಗಿ ಹೋದ, ಜಂಗಲ್‍ಜಾಕಿ(Jangal Jaaki) ಎಂದು ಹೆಸರು
ಮಾಡಿದ್ದ ರಾಜೇಶ್(Rajesh) ಎನ್ನುವ ಹುಡುಗ ಮಾನಸಿಕ ಅಸ್ವಸ್ಥತೆಗೊಳಗಾಗಿ, ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ
ಮಾಡಿಕೊಂಡಿದ್ದು ಹಾಗೂ ನನ್ನ ಸಾಹಿತ್ಯದ, ಅಸ್ತಿತ್ವದ, ನೆನಪುಗಳ, ಕನಸುಗಳ, ಅನುಭವಗಳ ಭಾಗವೇ ಆಗಿದ್ದ
ನನ್ನ ದೊಡ್ಡಪ್ಪ, ಪಾರಿಜಾತ ಕಲಾವಿದ ಶ್ರೀ ಮಲ್ಲಯ್ಯಸ್ವಾಮಿ ಮಠಪತಿ (ಅಥಣಿ)ಯವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದು.
ಮೂವರು ಒಂದಲ್ಲಾ ಒಂದು ರೀತಿಯಲ್ಲಿ ಕಲಾದೇವಿಯ ಮಕ್ಕಳೇ, ಈ ಬೆಳಕಿನ ಹಬ್ಬ ಅದ್ಯಾಕೆ ಇವರ ಬಾಳಿನಲ್ಲಿ
ಶಾಶ್ವತ ಕತ್ತಲೆಯನ್ನು ಹೊತ್ತು ತಂದಿತೋ ಅರ್ಥವಾಗುತ್ತಿಲ್ಲ.
ಬಯಲುಸೀಮೆಯ
ಸೊಗಡು, ಕೃಷ್ಣಾ(Krishna) ತೀರದ ಜಾಡು, ಎರಡನ್ನೂ ಮೇಳೈಸಿಕೊಂಡು ಹುಟ್ಟಿದ ಅಭಿಜಾತ ಕಲೆಗಳಾದ ದೊಟ್ಟಾಟ, ಬಯಲಾಟಗಳು
50 ರ ದಶಕದಿಂದ 90 ರ ದಶಕದವರೆಗೂ ಜನರ ಮನರಂಜನೆಯ ಮಾಧ್ಯಮಗಳಷ್ಟೇ ಅಲ್ಲದೆ ಪರಂಪರೆಯ ಕೊಂಡಿಗಳಂತಿದ್ದವು.
ಅವುಗಳಲ್ಲಿ ಶ್ರೀ ಕೃಷ್ಣ ಪಾರಿಜಾತ(Parijata)ವೂ ಒಂದು. ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಪ್ರಾರಂಭವಾಗುವ
ಆಟಗಳು ಪ್ರಚಲಿತ ತಲ್ಲಣ, ತಾಕಲಾಟಗಳನ್ನು ಅದರೊಂದಿಗೆ ಮೈಗೂಡಿಸಿಕೊಂಡು ಜನರಲ್ಲಿ ಅರಿವಿನೊಂದಿಗೆ ಸಧಭಿರುಚಿಯನ್ನು
ಮೂಡಿಸುತ್ತಿದ್ದ ಕಾಲವದು. ನನ್ನ ದೊಡ್ಡಪ್ಪನು ಈ ಕಲೆಯ ಬಲೆಯೊಳಗೆ ತನ್ನ ಬದುಕನ್ನು ಕಟ್ಟಿಕೊಂಡ ಒಬ್ಬ
ಕಲಾವಿದ. ‘ಶ್ರೀ ಕೃಷ್ಣ ಪರಮಾತ್ಮನಿಗೆ ಇದು ನನ್ನ ಅಳಿಲು ಸೇವೆ’ ಎನ್ನುವ ಧ್ಯೇಯದೊಂದಿಗೆ ಆತ ‘ವೆಂಕಟೇಶ್ವರ
ಕೃಷ್ಣ ಪಾರಿಜಾತ ಕಂಪನಿ’ಯನ್ನು ಬೆಳಗಾವಿ(Belgaum) ಜಿಲ್ಲೆ ಅಥಣಿ(Athani)ಯಲ್ಲಿ ಕಟ್ಟಿ ಬೆಳೆಸಿದ್ದು ಈಗ ಇತಿಹಾಸ. ವರ್ಷಕ್ಕೆ
150 ಪ್ರದರ್ಶನಗಳಂತೆ ನಿರಂತರ 55 ವರ್ಷ ಕರ್ನಾಟಕ(Karnatak), ಮಹಾರಾಷ್ಟ್ರ(Maharastra), ಗೋವಾ(Goa) ಸೇರಿದಂತೆ ಇನ್ನೂ ಅನೇಕ ಕಡೆ
ಆತನ ‘ಶ್ರೀ ಕೃಷ್ಣ ಪಾರಿಜಾತ ಕಂಪನಿ’ ಪ್ರದರ್ಶಿಸಿದ್ದು ಸರಿಸುಮಾರು 8000 ಕ್ಕೂ ಹೆಚ್ಚು ಪ್ರದರ್ಶನಗಳನ್ನು.
ಅವರ
ಹೆಸರು ಮಲ್ಲಯ್ಯಸ್ವಾಮಿ ಮಠಪತಿ(Mallayyaswami Mathapati), ಕರ್ನಾಟಕದ ಜನೆತೆಗೆ ‘ಶ್ರೀ ಕೃಷ್ಣ ಪಾರಿಜಾತ’ದ ಮೂಲಕ ಮಲ್ಲಯ್ಯಸ್ವಾಮಿ
ಅಥಣಿ ಎಂದೇ ಹೆಸರುವಾಸಿಯಾಗಿದ್ದವರು. ಅನ್ನ, ಅಂಬಲಿ, ಹೆಸರು ನೀಡಿದ ಸ್ಥಳವನ್ನು ಮರೆಯಬಾರದು ಎನ್ನುವ
ಉದ್ದೇಶದಿಂದ ಅವರು ಮಠಪತಿ ಎನ್ನುವ ಅಡ್ಡಹೆಸರಿನ ಬದಲಾಗಿ ಅಥಣಿಯನ್ನೇ ತಮ್ಮ ಅಡ್ಡ ಹೆಸರನ್ನಾಗಿ ಮಾಡಿಕೊಂಡಿದ್ದರು.
ತಮ್ಮನ್ನು ಬೆಳೆಸಿದ ತಾಯ್ನೆಲದ ಬಗೆಗೆ ಅವರಿಗಿರುವ ಕೃತಜ್ಞತೆ ಅಂಥದ್ದು. ಬೆಳಗಾವಿ ಜಿಲ್ಲೆಯ ಮೈಗುರು
ಎಂಬಲ್ಲಿ 1939 ರಲ್ಲಿ ಜನಿಸಿದ ಅವರದು ಮೂಲತಃ ಗೌಡಿಕೆ ಮತ್ತು ಕುಸ್ತಿಪಟುಗಳ ಮನೆತನ. ಯಾವುದೇ
ಆರ್ಥಿಕ ತೊಂದರೆಗಳು ಇಲ್ಲದ ಮನೆತನದಿಂದ ಬಂದ ಅವರಿಗೆ ಕಲಾಸೇವೆಯ ಮೂಲಕವೇ ಹೊಟ್ಟೆ ಹೊರೆದುಕೊಳ್ಳಬೇಕಾದ
ಅವಶ್ಯಕತೆಯೇನೂ ಇರಲಿಲ್ಲ. ಆದರೆ ಕಲೆ ಅವರ ಆತ್ಮದ ಹಸಿವಾಗಿತ್ತು. ತಂದೆ ಗುರುಪಾದಯ್ಯ ಮತ್ತು ತಾಯಿ ಕಾಶೀಬಾಯಿಯವರ 8 ಜನ ಮಕ್ಕಳಲ್ಲಿ
5 ನೇ ಮಗನಾಗಿ ಜನಿಸಿದ ಅವರಿಗೆ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆಯಲಾಗಲಿಲ್ಲ. ಅಪ್ಪಟ ನಿರಕ್ಷರಿಗಳು.
ಆದರೆ ಕಲಾಸರಸ್ವತಿಯನ್ನು ತಮ್ಮ ಹುಟ್ಟುಪ್ರತಿಭೆ, ಕಠಿಣಶ್ರಮ ಮತ್ತು ಅನಂತ ಪ್ರಯತ್ನಗಳಿಂದ ಒಲಿಸಿಕೊಂಡವರು. ತಾನು ಓದು-ಬರಹ ಬಲ್ಲವನಲ್ಲವಾದರೂ ಅಕ್ಷರ ಕಲಿತು, ಶಿಕ್ಷಕ
ವೃತ್ತಿಯಲ್ಲಿ ಹೆಸರು ಮಾಡಿದ್ದ ತಮ್ಮ ಸಹೋದರ ಗಂಗಯ್ಯ ಗುರುಪಾದಯ್ಯ ಮಠಪತಿಯವರಿಂದ ಶ್ರೀ ಕೃಷ್ಣ ಪಾರಿಜಾತ
ಹಾಗೂ ಇನ್ನು ಹಲವಾರು ಪೌರಾಣಿಕ ಕಥೆಗಳ ಸನ್ನಿವೇಶಗಳನ್ನು ಓದಿಸಿಕೊಂಡು, ಬರೀ ಮನನ ಶಕ್ತಿಯಿಂದಲೇ ನಿರಂತರ
8 ರಿಂದ 10 ಗಂಟೆಗಳ ಕಾಲ ಪ್ರದರ್ಶನ ನೀಡುವ ತಾಕತ್ತನ್ನು ಬೆಳೆಸಿಕೊಂಡಿದ್ದರು.
ಹುಟ್ಟಿದ್ದು
ಮೈಗುರು, ಕಂಪನಿ ಕಟ್ಟಿದ್ದು ಅಥಣಿ ಮತ್ತು ನೆಲೆಸಿದ್ದು ಜಮಖಂಡಿಯಲ್ಲಾದರೂ ಅವರ ಸಂವೇದನೆಗಳಿಗೆ ಸಾಕ್ಷಿಯಾಗಿದ್ದು
ಕೋಹಳ್ಳಿ, ಅಡಹಳ್ಳಿ, ಅಡಳಹಟ್ಟಿ ಎನ್ನುವ ಅಷ್ಟೆನು ಜನರಿಗೆ ಚಿರಪರಿಚಿತವಲ್ಲದ ಚಿಕ್ಕ ಚಿಕ್ಕ ಊರುಗಳು.
ಆದರೆ ಆ ನೆಲದ ಕಂಪು ನನ್ನ ದೊಡ್ಡಪ್ಪನ ಬಾಲ್ಯದುದ್ದಕ್ಕೂ ಮೈಹಾಸಿದ್ದವು ಮತ್ತು ಮುಂಬರುವ ಭವ್ಯ ಭವಿಷ್ಯಕ್ಕೆ
ಅಡಿಪಾಯ ಹಾಕಿ ಕೊಟ್ಟಿದ್ದವು.
ಹೆಸರಾಂತ
ಅಭಿಜಾತ ಕಲಾವಿದರಾದ ಅಪ್ಪಾಲಾಲ್ ನದಾಫ್, ಬರಗಿ ರಾಚಯ್ಯಸ್ವಾಮಿ ಹಾಗೂ ಕೇರುರು ಹೆಳವರಂತ ಗುರುಗಳ ಗರಡಿಯಲ್ಲಿ
ಪಳಗಿದ ಅವರು ಕೆಲಕಾಲದ ನಂತರ ತಮ್ಮದೇ ಸ್ವಂತ `ವೆಂಕಟೇಶ್ವರ ಕೃಷ್ಣ ಪಾರಿಜಾತ ಕಂಪನಿ’ಯನ್ನು ಬೆಳಗಾವಿ
ಜಿಲ್ಲೆ ಅಥಣಿಯಲ್ಲಿ ಕಟ್ಟಿದರು. ಬ್ರಾಹ್ಮಣ, ದಲಿತ, ಕುರುಬ, ಲಿಂಗಾಯತ, ಮುಸ್ಲಿಂ ಎನ್ನುವ ಯಾವುದೇ
ಜಾತಿ-ಮತಗಳ ಬೇಧವಿಲ್ಲದೆ ಬರೀ ಕಲೆಯನ್ನು ಉಸಿರಾಗಿಸಿಕೊಂಡವರ ದೊಡ್ಡ ಬಳಗವೇ ಅವರೊಂದಿಗಿತ್ತು.
ಎಡಬಿಡದೆ
ಕಲಾದೇವಿಯ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರಿಗೆ ಎಲ್ಲೆಲ್ಲೂ ಅಭಿಮಾನಿ ಬಳಗ ನಿರ್ಮಾಣವಾಗಿತ್ತು. ಕಾಲಕ್ರಮೇಣ
ಬಯಲಾಟಗಳಷ್ಟೇ ಅಲ್ಲದೆ ಆಕಾಶವಾಣಿ, ದೂರದರ್ಶನಗಳಲ್ಲೂ ಅವರ 'ಶ್ರೀ ಕೃಷ್ಣ ಪಾರಿಜಾತ’ ಹೆಸರುವಾಸಿಯಾಗಿತ್ತು.
ಅಷ್ಟೇ ಅಲ್ಲದೆ ನಾಡಿನ ಹೆಮ್ಮೆಯ ಉತ್ಸವಗಳಾದ 'ಮೈಸೂರು ದಸರಾ’, 'ಹಂಪಿ ಉತ್ಸವ’, 'ಚಾಲುಕ್ಯ ಉತ್ಸವ’, 'ನವರಸಪುರ ಉತ್ಸವ’ ಹಾಗೂ ಇನ್ನು ಹಲವಾರು ಕಡೆ ಅವರು ತಮ್ಮ ಪ್ರತಿಭೆಯನ್ನು ಮೆರೆದಿದ್ದರು. 2004 ರಲ್ಲಿ
ಶ್ರೀಮತಿ ರಮಾದೇವಿ(Ramadevi) ರಾಜ್ಯಪಾಲರಾಗಿ, ಎಸ್.ಎಮ್ ಕೃಷ್ಣ(S.M.Krishna) ಅವರು ಮುಖ್ಯಮಂತ್ರಿಯಾಗಿದ್ದ ಆವಧಿಯಲ್ಲಿ ಅವರಿಗೆ ಕನ್ನಡ ನಾಡಿನ ಅತ್ಯುನ್ನತ ಪ್ರಶಸ್ತಿಯಾದ
`ರಾಜ್ಯೋತ್ಸವ ಪ್ರಶಸ್ತಿ’ವೂ ಒಲಿದುಬಂದಿತ್ತು. ತಮ್ಮ ಹೆಸರು ರುಜು ಮಾಡುವುದನ್ನು ಬಿಟ್ಟು ಮತ್ತೇನನ್ನು
ಬರೆಯಲು ಆಗದ ಅನಕ್ಷರಸ್ಥ ವ್ಯಕ್ತಿಯೊಬ್ಬರು ಬರೀ ತವi್ಮ ಕಲಾ ನೈಪುಣ್ಯದಿಂದ ಎಲ್ಲೆಲ್ಲೂ ಮನೆಮಾತಾಗಿದ್ದರು.
ತಮಗೆ
ದೊರೆತ ಗೌರವ, ಮನ್ನಣೆಗಳನ್ನು ತಲೆಗೆರಿಸಿಕೊಳ್ಳದೆ ವಿನಯಶೀಲರಾಗಿ ಬದುಕಿದ್ದ ಅವರು ನಾಡಿನ ಪ್ರಮುಖ
ಅಕಾಡೆಮಿಗಳಲ್ಲೊಂದಾದ ಲಲಿತಕಲಾ ಆಕೆಡೆಮಿಯ ಸದಸ್ಯರಾಗಿದ್ದರು. ತಮ್ಮ ಅವಧಿಯಲ್ಲಿ ಹಲವಾರು ವೃತ್ತಿನಿವೃತ್ತ
ಕಲಾವಿದರಿಗೆ ಮಾಶಾಸನಗಳನ್ನು ಕೊಡಿಸಿದರು, ಪ್ರತಿಭಾನ್ವಿತರನ್ನು ಪ್ರಚೋದಿಸಿ ಬೆಳೆಸಿದರು. ಅವರಿಗಾಗಿ
ಹಲವಾರು ವೇದಿಕೆ, ಅವಕಾಶಗಳನ್ನು ಕಲ್ಪಿಸಿಕೊಟ್ಟರು.
ಆಧುನಿಕತೆಯ
ಬಿರುಗಾಳಿಗೆ ಸಿಕ್ಕು ನಶಿಸಿಹೋದ ಕಲೆಗಳು ಲೆಕ್ಕವಿಲ್ಲದಷ್ಟು. ದೀನೆ-ದೀನೆ ಜನರ ಆಸಕ್ತಿಗಳು, ಆಲೋಚನೆಗಳು,
ಮನಸ್ಥಿತಿಗಳು ಬದಲಾದವು, ದಿನಗಟ್ಟಲೇ ಆಟ ನೋಡುವಷ್ಟು ವ್ಯವಧಾನವಿಲ್ಲದ ಸಂದರ್ಭಗಳು ಸೃಷ್ಟಿಯಾದವು.
ಶ್ರೀ ಕೃಷ್ಣ ಪಾರಿಜಾತವನ್ಯಾಕೆ ನಾವು ಇಡೀ ರಾತ್ರಿಯಾಟದ ಬದಲಾಗಿ ಬರೀ ಮೂರುವರೇ ಗಂಟೆಗಳಷ್ಟು ಕಡಿಮೆ
ಅವಧಿಗಿಳಿಸಿ ಪ್ರದರ್ಶಿಸಬಾರದು ಎಂದು ಅವರ ಕಂಪನಿಯ ಸದಸ್ಯರೊಬ್ಬರು ಕೇಳಿದಕ್ಕೆ ಅವರು ಹೇಳಿದ್ದರಂತೆ,
“ನಾನು ತೀರಿಹೋಗುವವರೆಗೂ ಅಂಥ ಬದಲಾವಣೆಗೆ ನಾನು ಸಮ್ಮತಿಸುವುದಿಲ್ಲ” ಎಂದು. ಕಲೆ ಅವರಿಗೆ ಹೊಟ್ಟೆ
ತುಂಬಿಸಿಕೊಳ್ಳುವ ಮಾಧ್ಯಮವಾಗಿರಲಿಲ್ಲ ಬದಲಾಗಿ ಅವರ ಆರಾಧ್ಯ ದೈವವಾಗಿತ್ತು.
ತಮ್ಮ
ಇಡೀ ಕುಟುಂಬವನ್ನೇ ಅವಾರು ಕಂಪನಿಯ ನಿರಂತರ ಏಳಿಗೆಗಾಗಿ ತೊಡಗಿಸಿದ್ದರು. ಹೆಂಡತಿ, ಮಕ್ಕಳು ಯಾರೂ
ಈ ಚೌಕಟ್ಟಿನಿಂದ ಹೊರತಾಗಿರಲಿಲ್ಲ, ಅಷ್ಟೇ ಅಲ್ಲದೇ ಸ್ವತಃ ಅವರಿಗೆ ಪಾರಿಜಾತ ಕಲಿಸಿದ ಹೆಸರಾಂತ ಕಲಾವಿದರಾದ
ಅಪ್ಪಾಲಾಲ್ ನದಾಫ್, ಬರಗಿ ರಾಚಯ್ಯಸ್ವಾಮಿ ಹಾಗೂ ಕೇರುರು ಹೆಳವರಂತ ಗುರುಗಳು ಕೂಡ ತಮ್ಮ ಶಿಷ್ಯನ ಕಂಪನಿಯಲ್ಲಿ
ಕೆಲಸ ಮಾಡಿದರು. ಆ ಕಾಲದಲ್ಲೇ ನರ್ಸ್ ಆಗಿದ್ದ ಕಮಲಾಕ್ಷಿ ಎನ್ನುವ ದಲಿತ ಸಮುದಾಯದ ಮಹಿಳೆ ಮತ್ತು ಹೆಸರಾಂತ
ಕಲಾವಿದೆಯೊಬ್ಬರು ತಮ್ಮ ಸರಕಾರಿ ವೃತ್ತಿಯನ್ನು ಧಿಕ್ಕರಿಸಿ ಪಾರಿಜಾತಕ್ಕೆ ಮನಸೋತು ತಮ್ಮ ಕೊನೆಯ ಉಸಿರಿರುವವರೆಗೂ
ಆ ಕಂಪನಿಯಲ್ಲೇ ದುಡಿದರು. ಮುಸ್ಲಿಂ ಕಲಾವಿದರೊಬ್ಬರು ಸತ್ಯಭಾಮೆಯ ಪಾತ್ರದ ಮೂಲಕವೇ ಮನೆಮಾತಾಗಿದ್ದರು.
ಅವರ ಹೆಂಡತಿ ಮಹಾದೇವಿಯವರಾಗಿರಬಹುದು, ಪ್ರಸ್ತುತ ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ
ಅವರ ಎರಡನೆಯ ಮಗ ಮುರುಗೇಶ ಮಠಪತಿ ಆಗಿರಬಹುದು, ಉಪನ್ಯಾಸಕನಾಗಿದ್ದುಕೊಂಡು ತಂದೆಯ ಆಶೋತ್ತರಗಳಿಗೆ
ನಿರಂತರವಾಗಿ ಸ್ಪಂದಿಸುತ್ತಿದ್ದ ಅವರ ಮೊದಲ ಮಗ ಕೃಷ್ಣಕುಮಾರ ಮಠಪತಿ ಇರಬಹುದು, ಹೀಗೆ ಅವರ ಬಳಗ ಕಲಾಸೇವೆಯನ್ನೇ
ಬದುಕಿನ ಧ್ಯೆಯವಾಗಿಸಿಕೊಂಡು ಪ್ರಚಾರದ ವ್ಯಾಮೋಹಕ್ಕೆ ಬೀಳದೆ ತಮ್ಮ ಬದುಕನ್ನು ಸಾರ್ಥಕವಾಗಿಸಿಕೊಂಡವರು.
ಅವರೊಂದಿಗಿನ
ನನ್ನ ಅನುಭವಗಳು ಕವಿತೆ, ಕಥನ, ಅಂಕಣಗಳ ರೂಪದಲ್ಲಿ ಹಲವಾರು ಆಯಾಮಗಳಲ್ಲಿ ಪ್ರಕಟಗೊಂಡಿವೆ. ‘ಅಕ್ಕ’
ಎನ್ನುವ ನನ್ನ ಕವಿತೆ ಇರಬಹುದು, ಇತ್ತಿಚಿಗೆ ‘ಸಿಹಿಗಾಳಿ’ಯಲ್ಲಿ ಪ್ರಕಟಗೊಂಡ `ಪಾರಿಜಾತವೆಂದರೆ ಅವಳೇ’
ಎನ್ನುವ ನನ್ನ ಅಂಕಣವಿರಬಹುದು, ನನ್ನ ಬರಹಗಳಲ್ಲಿ ಆಗಾಗ ಬಂದು ಮಿಂಚಿ ಹೋಗುವ ಹಲವಾರು ಪಾತ್ರಗಳಿರಬಹುದು,
ಪ್ರಕಟನೆಯ ಹಂತದಲ್ಲಿರುವ ನನ್ನ ‘ಈ ಸಾಕಿಯರ ಕೈ ಸೋಕಿ’ ಎನ್ನುವ 15 ಮಹಿಳೆಯರ ತುಡಿತದ ಬದುಕಿರಬಹುದು,
ಇದೆಲ್ಲವೂ ನನ್ನ ದೊಡ್ದಪ್ಪ ಎನ್ನುವ ಜಂಗಮನ ಜೋಳಿಗೆಯಿಂದಲೇ ನಾನು ಆಯ್ದುಕೊಂಡ ಮುತ್ತುಗಳು. ಅವರೇ
ಈ ಎಲ್ಲ ನಿವೇದನೆಗಳ ಮೂಲ ಸೆಲೆ. ಜಗದ ಲೆಕ್ಕಾಚಾರಗಳನ್ನು ಮುರಿದು ತನ್ನದೆ ಶೈಲಿ, ಗತ್ತು, ಗೈರತ್ತಿನಿಂದ
ಬದುಕಿದ ನನ್ನ ದೊಡ್ದಪ್ಪ ಮೊಗೆದಷ್ಟು ಸಿಗುವ ಬತ್ತದ ಖಣಜ. ಹಾಡು, ಹೆಣ್ಣು, ಹೆಂಡ, ಕಲೆ ಎಲ್ಲವನ್ನು
ಸಮನಾಗಿ ಆರಾಧಿಸಿಕೊಂಡು ಬಂದ ಅವರಿಗೆ ಬೇಧ ಗೊತ್ತಿರಲಿಲ್ಲ.
`ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಬದುಕಿದ್ದ ಅವರಿಗೆ ಅವರೇ ಸಾಟಿ. ಮಲ್ಲಯ್ಯಸ್ವಾಮಿ
ಮಠಪತಿ ಈಗುಳಿದಿದ್ದ `ಶ್ರೀ ಕೃಷ್ಣ ಪಾರಿಜಾತ’ ಪರಂಪರೆಯ ಕೊನೆಯ ಕೊಂಡಿ. ಈಗ ಅದೂ ಕಳಚಿ ಬಿದ್ದಿತು.
ಅಭಿಜಾತ ನಾನಿನ್ನೂ ಅವರೊಂದಿಗೆ ಸಾಕಷ್ಟು ಮಾತನಾಡುವುದಿತ್ತು, ಕೇಳುವುದಿತ್ತು, ಹೇಳುವುದಿತ್ತು, ಆದರೆ
ನನ್ನ ಎಣಿಕೆಗೆ ಸಿಗದಂತೆ ಆ ಪಾತ್ರ ನನ್ನಿಂದ ಧಿಡಿರನೇ ಕಣ್ಮರೆಯಾಗಿಬಿಟ್ಟಿದೆ. ಎಷ್ಟೋ ಅಮೂಲ್ಯ ಅನುಭವಗಳಿಂದ
ನಾನು ವಂಚಿತನಾಗಿಬಿಟ್ಟೆ ಎನ್ನುವ ದುಃಖ ನನ್ನನ್ನು ಕಾಡುತ್ತಿದೆ. ಈಗ ನಾನು ನನ್ನದೇ ಸಾಲುಗಳನ್ನು
ಮತ್ತೇ ನೆನಪಿಸಿಕೊಳ್ಳುವಂತಾಗಿದೆ-
“ಯಾರು
ಹೂವಿನ ಹಾಗೆ ಸೋಕಿ ಹೊದವರು
ಎದೆಯ
ಬಟ್ಟಲ ತುಂಬಾ ಒಲವನೆರೆದವರು
ಒಳಗೆ
ದೀಪವನಿಟ್ಟು ಹೊರಗೆ ಹೋದವರು”