ದಿನಾಂಕ
14 ಏಪ್ರಿಲ್ 2014 ರಂದು ನನ್ನ ಕೇಳುಗರು ಜಮಖಂಡಿಯ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು.
2003 ರಿಂದ 2014 ವರೆಗಿನ 11 ವರ್ಷದ ಅವಧಿಯಲ್ಲಿ
ಈ ಕಾಲೇಜಿಗೆ ಬಹುತೇಕ ಎರಡನೆಯ ಭೇಟ್ಟಿ. ಈ ಎರಡು ಸಂದರ್ಭಗಳಿಗೆ ಕಾರಣ ವ್ಯಕ್ತಿ ಹಾಗೂ ಕಾಲೇಜಿನ ಇಂಗ್ಲೀಷ್
ವಿಭಾಗದ ಮುಖ್ಯಸ್ಥ ಗೆಳೆಯ ವಿಠ್ಠಲ್ ದಳವಾಯಿ. ನನ್ನ ಸಾಹಿತ್ಯ ಸೃಷ್ಠಿಯ ಹಲವು ಹಂತಗಳ ಪ್ರೀತಿಯ ಉದ್ಧರಣೆ.
ಈತನ ಕಾರಣಕ್ಕಾಗಿಯೇ ನನ್ನ ‘ಅವಳು ಎನ್ನುವ ಅಪಾರ್ಥ’ ಸೃಷ್ಠಿಯಾಯಿತು. ಈತ ಅಪರೂಪಕ್ಕೊಮ್ಮೊಮ್ಮೆ ಕುಳಿತು
ಗುಂಡು ಹಾಕಿದಂತೆ ನನ್ನ ಸಾಹಿತ್ಯಕ್ಕೂ ನೀರೆರೆದಿದ್ದಾನೆ, ಬೆಳೆಸಿದ್ದಾನೆ, ಬೆಳೆದ ಮರವನ್ನು ಕಂಡು
ಹೆಮ್ಮೆ ಪಟ್ಟಿದ್ದಾನೆ. ನನ್ನನ್ನು ಅಲೆಮಾರಿಯಾಗಿಸಿ ತಾನು ಮಾತ್ರ ಕೃಷ್ಣಾ ನದಿ ತೀರದ ಜಮಖಂಡಿ ಮತ್ತು
ಟಕ್ಕಳಕಿಯ ಮಧ್ಯ ಕೃಷ್ಣಸುಧೆಯನ್ನು ಅನುಭವಿಸುತ್ತಾ ಅಮರನಾಗಿದ್ದಾನೆ.
ಹಿಂದಿನ ಸಾರಿ ಇಲ್ಲಿ ಬಂದಾಗ ನನ್ನ ಕೈಯಲ್ಲಿ ರಜನೀಶ್(Rajanisha,
OSho) ಇದ್ದರೆ, ಈ ಸಾರಿ ನನ್ನೊಂದಿಗೆ ಬಂದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್(Dr. Ambedkar).
2009 ಕ್ಕೆ ಬೇಲೂರಿಗೆ ಬಂದ ನಾನು ನಿರಂತರ ಮೂರು ವರ್ಷ ಅಂದರೆ 2012 ವರೆಗೆ ನಾನು ಮತ್ತೆ ಮತ್ತೆ ಸಾರ್ವಜನಿಕವಾಗಿ
ಕುರಿತು ಮಾತನಾಡಿದ, ಚರ್ಚಿಸಿದ ಚಿಂತಕ ಯಾರದರು ಇದ್ದರೆ ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಒಂದು
ಜನಾಂಗದ ಆಮೂಲಾಗ್ರ ಅಭಿವೃದ್ಧಿಗೆ ಕಾರಣವಾದ ಒಬ್ಬ ವ್ಯಕ್ತಿಯಾಗಿ ಅವರು ನನ್ನನ್ನು ಕಾಡಿದುದರಕ್ಕಿಂತಲೂ
ಹೆಚ್ಚಾಗಿ ಓರ್ವ ಇತಿಹಾಸ ತಜ್ಞನಾಗಿ, ಸಮಾಜ ಶಾಸ್ತ್ರಜ್ಞನಾಗಿ ಹಾಗೂ ಮಾನವ ಥಳಿಶಾಸ್ತ್ರದ ವಿಜ್ಞಾನಿಯಾಗಿ
ಕಾಡುವ ರೀತಿ ಅನನ್ಯವಾದುದು. ಭಾರತೀಯ ಎಲ್ಲ ಸಾಮಾಜಿಕ ಸುಧಾರಕರಿಂದ ಅಂಬೇಡ್ಕರ್ ಭಿನ್ನವಾಗಿ ನಿಲ್ಲುವುದು
ಈ ಸಮಾಜದ ನ್ಯೂನ್ಯತೆಯನ್ನು ಹುಡುಕುವುದರಲ್ಲಿ. ಉದಾಹರಣೆಗೆ ಜಾತಿ ಪದ್ಧತಿಯ ಮೂಲವನ್ನು ಹುಡುಕುತ್ತ
ಹೋಗಿ ಅವರು ಹೇಳುವ ಈ ಸಾಲುಗಳನ್ನು ಓದಿ “
People
are not in observing Caste. In my view, what is wrong is their religion, which
has inculcated this notion of Caste. If this is correct, then obviously the
enemy, you must grapple with, is not the people who observe Caste, but the
Shastras which teach them this religon of Caste. ”
1936 ರಲ್ಲಿ ಇಂದಿನ ಪಾಕಿಸ್ತಾನದ ಲಾಹೋರ್‍ನಲ್ಲಿ ಜಾತಪಥ್ ತೋಡಕ್ ಮಂಡಳಿಯನ್ನು ಉದ್ಧೇಷಿಸಿ ಅವರು
ಮಾಡಿದ ಈ ಭಾಷಣದಲ್ಲಿ ಇಂಥ ಒಬ್ಬ ಸಮ ದೃಷ್ಠಿಯ, ನಿರ್ವಿಕಾರದ ಹಾಗೂ ನ್ಯಾಯ ಪರವಾದ ಚಿಂತಕನನ್ನು ನಾನು
ನೋಡಿದ್ದೇನೆ. ‘ಅನಿಹಿಲೇಶನ್ ಆಪ್ ಕಾಸ್ಟ್’ ಎಂಬ ಶಿರ್ಷಿಕೆಯ ಅವರ ಈ ಬರಹ ನನ್ನ ಪಾಲಿನ ಕಾವ್ಯವೇ ಆಗಿದೆ.
ಜಮಖಂಡಿಯ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಅಂಬೇಡ್ಕರ್ ಜಯಂತಿಯ ಈ ದಿನ ನನ್ನಿಂದ ಮಾತನಾಡಿಸಿದ್ದು
ಸುಮಾರು ಒಂದುವರೆ ಗಂಟೆ. ಅಪರೂಪಕ್ಕೆ ಇಂಥ ಸಹನೆಯ ವೇದಿಕೆಗಳು ನಮಗೆ ಸಿಗುತ್ತವೆ.
ಕಾರ್ಯಕ್ರಮದ ಎರಡನೆಯ ಭಾಗ ಇದೇ ಕಾಲೇಜಿನ ಇಂಗ್ಲೀಷ್
ವಿಭಾಗಕ್ಕೆ ಸಂಬಂಧಿಸಿದ್ದು. ‘ಮೀಟ್ ದಿ ಆಥರ್’ ಯೋಜನೆಯಡಿ ನನ್ನ ಮೊದಲ ಉಪನ್ಯಾಸ ಕಾವ್ಯವನ್ನು ಕುರಿತು.
ಅದಕ್ಕೊಂದು ವಿಶೇಷ ಶಿರ್ಷಿಕೆ ‘My Poetry My Life’. ಇತ್ತೀಚಿಗಷ್ಟೆ ಬಂದ ನನ್ನ ಕಾವ್ಯ ಸಂಕಲನ
‘ಇರುವಷ್ಟು ಕಾಲ, ಇರುವಷ್ಟೇ ಕಾಲ’ ಮುಂದಿಟ್ಟುಕೊಂಡು ಸುಮಾರು ಒಂದು ಗಂಟೆಯ ಮಾತು, ಚರ್ಚೆ ಮತ್ತು
ಕಾವ್ಯ ಕಟ್ಟುವ ಪ್ರಯತ್ನಗಳು ಇಲ್ಲಿ ನಡೆದವು. ನಾನು ಹೇಳಿದೆ: ತುಂಡು ತುಂಡುಗಳ ಮಧ್ಯದ ಬೆಸುಗೆಯಿಂದ
ಹುಟ್ಟುವ ಈ ಕೌದಿ ಮಾತ್ರ ಬರೀ ತುಂಡಲ್ಲ. ಅದು ಅಖಂಡ. ಅದು ಅಪೂರ್ಣವಲ್ಲ. ಪೂರ್ಣ-ಸಂಪೂರ್ಣ. ಅದಕ್ಕೆ
ಹೇಳಿದೆ ಕೌದಿ ಕವಿತೆಯಂತೆ ಅಥವಾ ಕವಿತೆ ಕೌದಿಯಂತೆ ಹೇಗಾದರೂ ಅಂದುಕೊಳ್ಳಿ. ಕವಿತೆ ಹುಟ್ಟಿಕೊಳ್ಳುವುದು
ಕೌದಿಯಂತೆಯೆ. ಮುಂದೊಮ್ಮೆ ಸಿದ್ಧವಾಗಬಹುದಾದ ಕೌದಿಗಾಗಿ ಸಂಗ್ರಹವಾಗುವ ಬಣ್ಣ ಬಣ್ಣದ ಬಟ್ಟೆಯ ತುಂಡುಗಳು
ಸಂಗ್ರಹವಾಗುವಂತೆಯೇ ಕಾವ್ಯದ ಸಾಮಗ್ರಿಯೂ ಹಲವು ಕಾಡುವ ನೆನಪು, ಸಂವೇದನೆ, ಘಾಯ, ರಮಿಸುವಿಕೆ, ಅಚ್ಛರಿ,
ಆಲೋಚನೆ ಹೀಗೆ ಏನೆಲ್ಲ ಸ್ವರೂಪದಲ್ಲಿ ನಮ್ಮಲ್ಲಿ ಸಂಗ್ರಹವಾಗತೊಡಗುತ್ತವೆ. ಒಂದೊಮ್ಮೆ ಕವಿತೆಯಂತೆ
ಸಂಪೂರ್ಣವಾಗಿ ಹೊರಬಂದು ಬಿಡುತ್ತದೆ. ಹೀಗೆ ಹುಟ್ಟಿಕೊಂಡದ್ದು ನನ್ನ ‘ಇರುವಷ್ಟು ಕಾಲ... ಇರುವಷ್ಟೇ
ಕಾಲ!’. ಹಾಗೆಯೇ ಕಾವ್ಯವೆನ್ನುವುದು ನನ್ನ ಪಾಲಿಗೆ
ಸಖಿಯಂತೆ. ಎಲ್ಲ ಸಂದರ್ಭದಲ್ಲಿಯೂ ಸಿದ್ಧಳಿರುವ ಇವಳನ್ನು ಆರಾಧಿಸುವುದೇ ಅಭಿಮಾನದ ಸಂಗತಿ.
ಗೆಳೆಯ ವಿಠ್ಠಲನ ಮನೆಯ ಊಟ, ಕೃಷ್ಣೆಯಂತೆ ಮೈದುಂಬಿ
ನಿಂತ ಮಗಳು ಕಿರಣಮಯಿ. ಅಲ್ಲಿಂದ ಬಿಜಾಪುರದ ರೈಲು ನಿಲ್ದಾಣದವರೆಗೆ ಸಾಕು ಸಾಕೆನಿಸುವಷ್ಟು ಕಾರಿನಲ್ಲಿ
ಹರಟೆ ಹೊಡೆಯಲು ಎಳೆಯ ಗೆಳೆಯ ಫಯಾಜ್, ರಾತ್ರಿಗೆ ಗೆಳೆಯನ ಮನೆಯಿಂದ ತಂದ ರೊಟ್ಟಿಯ ಬುತ್ತಿ, ಮತ್ತೆ
ಮಧ್ಯದಲ್ಲಿ ಬಾಗಲಕೋಟೆಯ ಬಜಿ. ಇದಕ್ಕೇ ಹೇಳುವುದು ‘ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’. ಪ್ರೀತಿಯ
ವರತೆ ಇಲ್ಲದ ಯಾವುದೇ ಬೌದ್ಧಿಕ ಮತ್ತು ಭಾವನಾತ್ಮಕ ಚಟುವಟಿಕೆ ಹೆಣದ ಮುಂದಿನ ಅಳುವಿನಂತಿರುತ್ತದೆ.