ಬಂಧುಗಳೆ, ಸರ್ವಜನಾಂಗದ ಶಾಂತಿಯ ತೋಟವೆಂದು ಕರೆಯಿಸಿಕೊಳ್ಳುವ ಈ ಕರ್ನಾಟಕದ 12ನೇ ಶತಮಾನದ ಇತಿಹಾಸದಲ್ಲಿ ಇಡಿ ಮನುಕುಲವೇ ನಾಚಿಕೆ ಪಡುವ ರೀತಿಯಲ್ಲಿ ನಿಜವಾದ ಧರ್ಮಿಷ್ಠರ ಆಲೋಚಕರ ಹತ್ಯೆಯಾಯಿತು. ಭರತಭೂಮಿಯಿಂದ ಬೌದ್ಧರ ಪಲಾಯನವಾಯಿತು. ‘ಮಜಹಬ್ ನಹೀ ಸಿಖಾತಾ ಆಪಸ್ ಮೇಂ ಭೈರ್ ರಖನಾ’ ಎನ್ನುವ ಮೊಹಮ್ಮದ್ ಇಕ್ಬಾಲರ ಪಾಕಿಸ್ತಾನ ಮತ್ತು ಭಾರತದಲ್ಲಿ ಅಮೃತಸರದಿಂದ ಲಾಹೋರದವರೆಗೆ ಹೆಣಗಳ ರಾಶಿಯೇ ಬಿದ್ದಿತ್ತು. ಹೀಗೆ ಎಲ್ಲ ಧರ್ಮಗಳು ಮೂಲ ಪುರುಷನ ಕಾಳಜಿಗಳಿಂದ ದೂರವಾದ ವ್ಯವಹರಗಳೇ. ಹುಟ್ಟಿದ ಮಕ್ಕಳೆಲ್ಲರೂ ಅಪ್ಪನ ಆದರ್ಶಗಳ ವಾರಸುದಾರರಾಗುವುದಿಲ್ಲ. ವಸ್ತುಗಳಿಗಾಗಿ ನಡೆಯುವ ಅವರ ಹೋರಾಟಕ್ಕೆ ದೇವರಿಂಅಲೂ ಪರಿಹಾರ ಸಿಗುವುದಿಲ್ಲ. ನಮ್ಮ ನಮ್ಮ ಧರ್ಮಗಳ ಕಥೆಯೂ ಅಷ್ಟೆ, ಎಲ್ಲವೂ ತೂತು ಬಿದ್ದ ದೋಸೆಗಳೆ.
ಪ್ರಸ್ತುತ ಸಂಕಲನದಲ್ಲಿ ಇಸ್ಲಾಂದಲ್ಲಿ ಹುಟ್ಟಿಯೂ ಇಸ್ಲಾಮಿಕ್ ಕಟ್ಟರ್ವಾದಿಗಳಿಂದಲೇ ಹತ್ಯೆಯಾದ, ಬಹಿಷ್ಕ್ರತಗೊಂಡ ಲೇಖಕರೊಂದಿಗೆ ಕೆಲವು ಇಸ್ಲಾಂಯೇತರ ಅಪರೂಪದ ಚಿಂತಕರಿದ್ದಾರೆ. ಇದು ಎಲ್ಲ ಧರ್ಮಗಳಲ್ಲಿ ನಡೆಯುವ ನಿತ್ಯ ಮರಣಹೋಮ ಎಂದು ಈಗಾಗಲೇ ಹೇಳಿದೆ. ‘ಕಾವ್ಯಕ್ಕೆ ಉರುಳು’ ಅಂಕಣಮಾಲೆಯನ್ನು ಬರೆಯುತ್ತಾ ಪ್ರಪಂಚದಲ್ಲಿ ಆಲೋಚನೆ ಮಾತ್ರಕ್ಕಾಗಿ ಹತ್ಯೆಗೀಡಾದ ಲೇಖಕರ ಕುರಿತು ಬರೆಯುವಾಗ ಸಿಕ್ಕ ಅಪರೂಪದ ಮಾನವೀಯ ಪುಟಗಳಿವು. ಇದು ಯಾವುದೋ ಜನಾಂಗ ಹಾಗೂ ಧರ್ಮಗಳ ಕುರಿತ ಉದ್ದೇಶಿತ ಅನ್ವೇಷಣೆಯಲ್ಲ. ಆದರೆ ಇವರನ್ನೆಲ್ಲ ಒಂದೆಡೆ ಸೇರಿಸಿ ಒಂದು ಮೊತ್ತವಾದಾಗ ಈ ತೆರನಾದ ಗುಮಾನಿ ಬರುವುದಾದರೆ ಅದಕ್ಕೆ ನಾವು-ನೀವ್ಯಾರೂ ಕಾರಣವಾಗಬೇಕಿಲ್ಲ. ಒಂದಂತೂ ಸತ್ಯ, ಇವರೆಲ್ಲ ಲೇಖಕರು. ತಮ್ಮ ತಮ್ಮ ಪಾಲಿನ ಸತ್ಯವನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಯತ್ನಿಸಿದ ಸಹೃದಯಿ ಮನುಷ್ಯರು.
ಬರಹವೆನ್ನುವುದೇ ಅಪಾಯಕಾರಿ. ಅಂದುಕೊಂಡದೊಂದಾದರೆ ಆಕಾರ ಪಡೆಯುವುದು ಮತ್ತೊಂದು. ಇಂಥ ಅಪಾರ್ಥದ ಘಳಿಗೆಗಳಲ್ಲಿ ಏನೆಲ್ಲಾ ಘಟಿಸಿವೆ. ಕುಂಬಾರ ಸೃಷ್ಟಿಸಿದ ಎಲ್ಲ ಮಡಿಕೆಗಳೂ ಮಾರುಕಟ್ಟೆಗೆ ಬರುವುದಿಲ್ಲ. ಆದರೆ ಮಾರುಕಟ್ಟೆಗೆ ಬಂದ ಪ್ರತಿ ಮಡಿಕೆಯ ಹಿಂದೆ ಮಡಿದ ಅದೆಷ್ಟೊ ಮಡಿಕೆಗಳ ಕಥೆ ಇದೆ. ಅವುಗಳೆಲ್ಲದರಲ್ಲಿ ಪ್ರಯೋಗದ ನೆಲೆಯಲ್ಲಿಯೇ ಸತ್ತ ವಿಷಾದದ ಛಾಯೆ ಇದೆ. ಒಬ್ಬ ಪ್ರಜ್ಞಾವಂತ ಓದುಗನಿಗೆ ಅವುಗಳನ್ನು ಹೊರತುಪಡಿಸಿದ ಮಡಿಕೆಯ ನೀರು ತೃಷೆಯನ್ನು ಹಿಂಗಿಸುವುದಿಲ್ಲ. ಇದೇ ಕಾರಣ ನಾನಿವರೆಲ್ಲರನ್ನು ನಿಮ್ಮೆದುರು ತಂದು ನಿಲ್ಲಿಸಿದ್ದೇನೆ. ಇವರೆಲ್ಲರೂ ನಿಮ್ಮೊಳಗಿರುವ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಝರಾಸ್ಟ್ರಿಯನ್ ಇನ್ನೂ ಏನೇನೋ ಆಗಿರುವ ಒಡೆದ ಮಡಿಕೆಗಳು. ಆದರೆ ಇದೆಲ್ಲವನ್ನೂ ಮೀರಿದ ಸತ್ಯ ಇವರು ನಮ್ಮೊಳಗಿನ ಧ್ವನಿಗಳು. sorry ಇವರು ನೀವೆ.
ನೆಲದಲ್ಲಿ ಹುಟ್ಟಿದ ಕಾರಣ ಓರ್ವ ಹಿಂದೂವಾಗಿ ಕಳೆದ 700 ವರ್ಷಗಳಿಂದ ನನ್ನೆದೆಯೊಳಗೆ ಈ ಇಸ್ಲಾಂನ್ನು ಕಾಪಿಟ್ಟುಕೊಂಡು ಸೂಫಿಗಳನ್ನು ಹೆತ್ತು, ಶಾಂತಿಯನ್ನು ಬಯಸುವ ನಾನು ಅಂತಿಮವಾಗಿ ನಂಬುವುದಿಷ್ಟೆ-
“God
loves those who forgive their fellow beings. God is forgiving and is anxious to
forgive all those who will come to Him with contrite hearts.”
-Excellence in Islam