ಚಿಕ್ಕವನಿದ್ದಾಗ ಕೇಳುತ್ತಿದ್ದ ಒಂದು ಕಥೆ. ಮುದಿ ಹನುಮಂತ ತನ್ನ ಬಾಲ ಹಾಸಿಕೊಂಡು ಹಾದಿಯ ಮೇಲೆ ಕುಳಿತಿದ್ದಾನೆ. ತನ್ನ ದೈಹಿಕ ಶಕ್ತಿಗೆ ಪ್ರಸಿದ್ಧನಾದ ಭೀಮ ಅದೇ ದಾರಿಯಿಂದ ಹೊರಟ್ಟಿದ್ದಾನೆ. ದಾರಿಗೆ ಅಡ್ಡ ಬಾಲ ಎಸೆದುಕೊಂಡು ಕುಳಿತ ಮುದಿ ಹನುಮಂತನ ಈ ಒರಸೆ ಅಮಂಗಳಕಾರಿ ಎನ್ನಿಸಿ ಕುಪಿತನಾದ ಭೀಮ, “ತಕ್ಷಣ ಬಾಲ ಆಚೆ ಸರಿಸಿ ತನಗೆ ಹೋಗಲು ದಾರಿಮಾಡಿಕೊಡಬೇಕೆಂದು” ಮುದಿ ಹನುಮಂತನಿಗೆ ಆಜ್ಞಾಪಿಸುತ್ತಾನೆ. ಆದರೆ, “ತಾನು ಮುಪ್ಪಿನಿಂದ ತ್ರಾಣವಿಲ್ಲದವನಾಗಿದ್ದು, ನೀನೇ ಅದನ್ನೆತ್ತಿ ಆಚೆ ಇಟ್ಟು, ಮುಂದೆ ಸಾಗು” ಎಂದು ಭಿನ್ನಯಿಸಿಕೊಳ್ಳುತ್ತಾನೆ ಹನುಮ. ಇದ್ಯಾವ ಘನ ಕಾರ್ಯ ಎಂದು ಹನುಮನ ಬಾಲ ಎತ್ತಿಡಲು ಹೋಗುತ್ತಾನೆ ಭೀಮ. ಆದರೆ ಸೋಲುತ್ತಾನೆ, ಮತ್ತೆ ಮತ್ತೆ ಸೋಲುತ್ತಾನೆ. ಎದೆಗೇರಿಸಿಕೊಂಡ ಗದೆಯನಾಚೆ ಇಟ್ಟು, ಬಾಲ ಎತ್ತಿಡಲು ಹೋಗಿಯೂ ಸೋಲುತ್ತಾನೆ.
ತನ್ನೊಳಗಿನ ಶಕ್ತಿ ಕುರಿತಾದ ಗರ್ವ ಅಳಿದು ಭೀಮನಲ್ಲಿ ಸಮರ್ಪಣೆಯ ಭಾವ ಘಟಿಸುವವರೆಗೂ ಭೀಮ ಮುದಿ-ಮಂಗನ ಬಾಲ ಎತ್ತಿಡಲಾಗದ ಬಡವನೇ ಆಗಿರುತ್ತಾನೆ. ಸೋಲುತ್ತಲೇ ಇರುತ್ತಾನೆ.
ಒಂದು ಕ್ಷಣದ ನಿಗರ್ವ, ಸಮರ್ಪಣೆ, ಅರಿವಿನ ಕಣ್ಣು ತೆರೆದ ಘಳಿಗೆ ಭಿಮನಲ್ಲಿ ಅನಂತ ಶಕ್ತಿ ಪ್ರವಹಿಸಲು ಕಾರಣವಾಗಿ ಆತನ ದಾರಿ ಸುಗಮವಾಗುತ್ತದೆ.
ನನ್ನನ್ನು ತುಂಬಾ ಕಾಡುವ ಕಥೆಯಿದು.
ನಮ್ಮ ಲಾಜಿಕ್ಗಳಿಗೆ ಇಲ್ಲಿ, ಈ ಕಥೆಯಲ್ಲಿ ಯಾವ ಆದ್ಯತೆಯೂ ಇಲ್ಲ. ಹನುಮ ತ್ರೇತಾಯುಗದವನು, ಭೀಮ ದ್ವಾಪರದವನು ಇವರಿಬ್ಬರೂ ಭೇಟ್ಟಿಯಾಗಲು ಸಾಧ್ಯವೆ? ಬಾಲ ಎತ್ತಿಡಲಾರದಷ್ಟು ಹನುಮ, ಎತ್ತಲಾಗದಷ್ಟು ಭೀಮ ದುರ್ಬಲರಾಗಿರಲು ಸಾಧ್ಯವೆ? ಇವೆಲ್ಲ ಬುದ್ಧಿಯ ಲದ್ದಿಯೇ ವಿನಃ ಭಾವ ಹಾಗೂ ಭವಿಷ್ಯದ ಬುತ್ತಿಯಲ್ಲ. ಪ್ರಶ್ನೆಗಳಲ್ಲ.
ಈ ಕಥೆ ಕಾಡಲು ಹಲವು ಕಾರಣಗಳಿವೆ. ಮುದಿ ಹನುಮನಂತೆ ನಮ್ಮೊಳಗಿನ ಕರಟದ ಹದ ಪರೀಕ್ಷಿಸುವ ಹಲವು ವಿಷಯ, ವಸ್ತು, ವ್ಯಕ್ತಿ, ಸತ್ಯಗಳು ನಾವು ನಿತ್ಯ ಸುತ್ತುವ ದಾರಿಯಲ್ಲೇ ಇದ್ದರೂ ಕೂಡಾ ಅಹಂಕಾರದ ಯಾವುದೋ ಉಮೇದಿನಲ್ಲಿ ಹೊರಟ ನಾವು ಕಾಲಿಗೆ ಬಳ್ಳಿಯಂತೆ ಹರಡಿಕೊಂಡಿರುವ ಇಂಥ ಹಲವಾರು ಸಂಗತಿಗಳನ್ನು ಅರಿಯದೇ ಹೋಗುತ್ತೇವೆ ಅಥವಾ ಅವುಗಳನ್ನು ಒಂದು ಕ್ಷಣ ನಿಂತು ಮುಖಾಮುಖಿಯಾಗುವ ಭಾವ ಪ್ರಮಾಣಿಕತೆ, ಸಮಯ, ಆತ್ಮಶಕ್ತಿ ಇಲ್ಲದಕ್ಕೆ ಮುಂದೆ ಸಾಗುವ ಹುನ್ನಾರಗಳಲ್ಲಿರುತ್ತೇವೆ, ಅಲ್ಲವೆ?
ನಮ್ಮ ಸಾಹಿತ್ಯ, ಶಿಕ್ಷಣ, ರಾಜಕಾರಣ ಹಾಗೂ ವಿಜ್ಞಾನ-ಗಳಲ್ಲಿಯೂ ನಾವು ಹೀಗೆಯೇ ಸಾಗಿದ್ದೇವೆ ಎನ್ನಿಸಿದೆ ನನಗೆ. ಕೌಶಲ್ಯ, ಸಕ್ಸೆಸ್, ಟಾರ್ಗೆಟ್ನ ಭಾಷೆಗೆ ಬೆಂಬತ್ತಿದ ನಾವು ಎಲ್ಲವನ್ನೂ ಏಕರೂಪಿ ನೆಲೆಗೆ ತಂದು, ಆಂತರ್ಯ ಹಾಗೂ ಅಂತಃಸತ್ವದ ಪ್ರಶ್ನೆಗಳು ಗೌಣವಾಗಿ ಅಬ್ಬರಗಳೇ ಆಲೋಚನೆಗಳಾಗುವ ಅಪಾಯದ ಘಟ್ಟ. ಇದು ನನ್ನಲ್ಲೂ ಹಾಗೂ ನನ್ನ ಸಮಕಾಲೀನ ಸುತ್ತಣದಲ್ಲೂ ವಿಸ್ತಾರಗೊಳ್ಳುತ್ತಿರುವ ವಿಷ.
ಬೇಲೂರಿನಲ್ಲಿದ್ದ ನನಗೆ ಕುವೆಂಪು ಅವರ ಜನ್ಮ ಭೂಮಿ ಕುಪ್ಪಳಿ ಅಥವಾ ಅವರು ಅಂತರ್ದಾನರಾದ ಕವಿಶೈಲ ದೂರದ್ದೇನಲ್ಲ. ಕೊಪ್ಪ, ಶೃಂಗೇರಿಗಳನ್ನು ಬಳಸಿಕೊಂಡು ಹೋಗಿದ್ದರೆ ಅಲ್ಲಿಗೆ ಹತ್ತಾರು ಬಾರಿ ಹೋಗಿ ಬರಬಹುದಿತ್ತು. ಆ ಕಾನನ, ಕಾಜಾಣಗಳ ಉಲಿ, ರಾಮತೀರ್ಥ, ನವಿಲು ಕಲ್ಲಿನ ಹಾಡು ಎಲ್ಲ ಕೇಳಿಸಿಕೊಳ್ಳಬಹುದಿತ್ತು. ಆದರೆ ಹಾಸನದುದ್ದಕ್ಕೂ ಸಾಗಿದ ನನ್ನ ಐದು ವರ್ಷಗಳ ಭಾಷಣ ಹಾಗೂ ಬದುಕಿನ ವ್ಯವಹಾರಿಕ ಅವಧಿ ಈ ದರ್ಶನದ ದೃಷ್ಟಿಗೆ ತೆರೆ ಹಾಕಿತ್ತು. ಮಂಕು ಕವಸಿತ್ತು. ಬಾಲ ಎತ್ತಿಡಲಾಗದ ಭೀಮನ ಗೋಳದು. ದಾರಿಯಲ್ಲಿದ್ದುದೇ ದೀಪವಾಗದ ಕತ್ತಲೆಯ, ಕುರುಡುತನದ ಅವಧಿ.
ನಿಸ್ಸಂಶಯವಾಗಿಯೂ ಆತ್ಮದೊಂದಿಗೆ ಸಂವಾದ ಸಾಧ್ಯವಾಗದ ಸಮಾಧಿಗೆ ಹೋಗುವುದೇಕೆ? ಎಂಬ ಪ್ರಶ್ನೆಯೂ ಈ ವಿಳಂಬಕ್ಕೆ ಕಾರಣವಾಗಿದೆ. ಕವಿಶೈಲಕ್ಕೆ ಕುಟುಂಬದೊಂದಿಗೆ ಪಿಕ್ನಿಕ್ಗೆ ಹೋಗುವಷ್ಟು ಉಡಾಫೆಯಾಗಿಲ್ಲ ಮನಸ್ಸು. ಯಥೇಚ್ಚವಾಗಿಲ್ಲ ಸಮಯ ಹಾಗೂ ವಯಸ್ಸು, ಒಂದು ತಲೆಮಾರನ್ನು ವಿಚಾರ ಕ್ರಾಂತಿಗೆ ಆಹ್ವಾನಿಸಿದ, ತಪಸ್ಸಿನಂತೆ ಬದುಕಿದ ಜೀವನವೊಂದರ ಸನ್ನಿಧಿಗೆ ನಾನು ಮನಸಾಕ್ಷಾತ್ಕಾರಕ್ಕೆ ಹೋಗಬಹುದೆ ವಿನಃ ಮನರಂಜನೆಗೆ ಹೋಗಲು ಸಾಧ್ಯವೆ? ಇದೂ ಒಂದು ಕಾರಣ ಕವಿಶೈಲದ ಭೇಟ್ಟಿ ವಿಳಂಬಗೊಳ್ಳಲು.
ತೀರ ಇತ್ತೀಚೆಗೆ ಬೆಂಗಳೂರಿನ ಕಾಜಾಣ ಹಾಗೂ ಅಭಿನವ ವೇದಿಕೆಗಳು ಕವಿಶೈಲದ ಕುವೆಂಪು ಪ್ರತಿಷ್ಠಾನದೊಂದಿಗೆ ಹಮ್ಮಿಕೊಂಡ ಕಾವ್ಯ ಕಮ್ಮಟಕ್ಕೆ ಜೂನ್ 2, 3 ಹಾಗೂ 4 ರಂದು ಸಂಪನ್ಮೂಲ ವ್ಯಕ್ತಿಯಾಗಿ ಕವಿಶೈಲಕ್ಕೆ ಹೋಗಿದ್ದೆ. ನನ್ನೊಂದಿಗೆ ಎಸ್.ಜಿ. ಸಿದ್ಧರಾಮಯ್ಯ, ಜಯಶಂಕರ, ವಿಕ್ರಮ ವಿಸಾಜಿ, ಎಲ್.ಜಿ. ಸುಮಿತ್ರ, ಪಿ. ಚಂದ್ರಿಕಾ, ವಾಸುದೇವ್ ನಾಡಿಗ್ ಹಾಗೂ ಅಭಿನವದ ನ. ರವಿಕುಮಾರ ಹೀಗೆ ಹಲವು ಗೆಳೆಯರು. ನಾಡಿನ ಮೂಲೆಮೂಲೆಗಳಿಂದ ಆಯ್ಕೆಯಾದ 45 ಜನ ಎಳೆಯ ಕವಿ ಗೆಳೆಯರು, ಮೌನ ಮುರಿಯುವ ಮಾತು, ಹಾಡು, ಕನಸುಗಳು.
ಒಂದರ್ಥದಲ್ಲಿ ಇದು ಗೆಳೆಯ ಬೇಲೂರು ರಘುನಂದನ ನೇತೃತ್ವದಲ್ಲಿ ಹೊರಟ ಕಾವ್ಯದ ದಿಂಡಿ. ಮೂರು ದಿನ ನೂರಾರು ಸಾರಿ ಕಾವ್ಯ ಕುರಿತೇ ಮಾತು. ಅಪರೂಪವಲ್ಲವೆ? ಕವಿತೆ, ನಮ್ಮೊಳಗಿನ ಶಾಲ್ಮಲೆ ಅದು.
ಬಿಜಾಪುರದಂಥ ಬಿಸಿಲು ಹಾಗೂ ಬಯಲು ಸೀಮೆಯ ನಾಡಿನಿಂದ ಹೊರಟ ನನ್ನ ಕಾವ್ಯದ ಬಂಡಿ ಇಲ್ಲೊಂದಿಷ್ಟು ವಿರಮಿಸಿ ವಿವೇಚನೆಗೊಳಗಾಗಿದ್ದು ಖುಷಿ ತಂದಿದೆ ನನಗೆ. ಕಾವ್ಯ ಕುರಿತು ನನ್ನ ಒಂದೂವರೆ ಗಂಟೆಗಳ ಆ ದಿನದ ವಿಭಿನ್ನ ಭಾಷಣ ಒಪ್ಪಿತವಾಗಿದೆ ಎಲ್ಲ ಹಿರಿ-ಕಿರಿಯ ಗೆಳೆಯರಿಗೆ.
ಅಂತಿಮವಾಗಿ ಹೇಳುವುದಿಷ್ಟೇ, ಕಾಲು ಬಳ್ಳಿಯಾಗಿದ್ದ ಕವಿಶೈಲಕ್ಕೆ ತಡವಾಗಿ ಹೋಗಿದ್ದೇನೆ, ಆದರೆ ಅಲ್ಲಿಯ ಅರಿವಿನ ಹೊಳಹುಗಳಿಂದಾಗಿ ಭೀಮನಂತೆ ಬಾಗಿದ್ದೇನೆ. ಅಲ್ಲಿಯ ಮಣ್ಣು ಎತ್ತಿ ತಂದು ನನ್ನ ‘ಜೋಳಿಗೆ’ಗೆ ಬೆರೆಸಿ ಮನುಕುಲ ಮರೆಯದ ಜೋಗುಳ ಹಾಡುವ ಸಂಕಲ್ಪ ಮಾಡಿದ್ದೇನೆ. ಕಾಲ ಕೈ ಹಿಡಿದು ನಡೆಯಿಸಬೇಕಷ್ಟೆ.