ನೆನಪುಗಳ ಕೆದಕುತ್ತ ಹೋದಷ್ಟೂ ದಕ್ಕುವುದು ಬರೀ ಎಲುಬಿನ ಹಾಡು. ಈಗ ಕಾಲ ಕ್ರಮಿಸಿದೆ. ಕರೋನಾ ಕ್ಷಿಣಿಸುತ್ತಿರುವ ಸಂದರ್ಭ. ಮತ್ತೊಮ್ಮೆ ಆ ಸಂದರ್ಭವನ್ನು ಸ್ಮರಿಸಿಕೊಳ್ಳಲಾರದ ದಾಂಗುಡಿಯಲ್ಲಿ ಇದೆ ಇಂದಿನ ನಮ್ಮ ಜೀವನ. ಕರೋನಾ ಕಾಲದಲ್ಲಿ ವಿಳಂಬಗೊಂಡ ಎಲ್ಲ ಯೋಜನೆ-ಯೋಚನೆಗಳಿಗೂ ರಾಕೇಟ್ನ ವೇಗ ಸೇರಿಸಿಕೊಂಡು ನಾವೀಗ ಹಾರಾಡುತ್ತಿದ್ದೇವೆ.
ಆದರೆ, ರಾತ್ರಿಗೆ ದೇಹ ಚೆಲ್ಲಿ ನಿದ್ರೆಗೆ ಜಾರುವ ಮುನ್ನ ಮನಸ್ಸು ಮಾತಾಡುತ್ತಲೇ ಇರುತ್ತದೆ, ಇಂದು ನಮ್ಮೊಂದಿಗಿಲ್ಲದ ಅಂದಿನ, ಹಿಂದಿನ ಗೆಳೆಯರೊಂದಿಗೆ.
ವಿಶೇಷತಃ ಎರಡನೇ ಅಲೆಯ ಹೊಡೆತಕ್ಕೆ ತರಗೆಲೆಗಳಂತೆ ಹಾರಿಹೋದ ಅದೆಷ್ಟೋ ಪ್ರೀತಿಯ ಬರಹಗಾರರ ಕುರಿತು ಬರೆಯಲಾಗಲೇ ಇಲ್ಲ. ಸಾವಿನ ತೀವ್ರತೆ ಎಷ್ಟಿತ್ತೆಂದರೆ ಫೇಸ್ಬುಕ್, ವಾಟ್ಸ್ಪ್ಗಳನ್ನು ತೆಗೆದು ನೋಡಲಾಗದ ಭಯದ ಸಂದರ್ಭ.
ಅದು ಮೃದು-ಗಂಭೀರ ಧ್ವನಿ, “ನಾನು ಯೋಗಪ್ಪನವರ್. ನೀವು ರಾಗಂ. ಸಂಯುಕ್ತ ಕರ್ನಾಟಕದಲ್ಲಿಯ ನಿಮ್ಮ ಅಂಕಣವನ್ನು ಗಮನಿಸುತ್ತಿದ್ದೇನೆ. ಅದಕ್ಕೂ ಮೊದಲು ಮಹಾದೇವ ಪ್ರಕಾಶರ ‘ಈ ಭಾನುವಾರ’ ಪತ್ರಿಕೆಯಲ್ಲಿಯೂ ನಿಮ್ಮ ಗಾಂಧಿ, ಓಶೋ, ಅಬ್ಬಾಸರ ಕುರಿತು ಬರಹಗಳನ್ನು ಗಮನಿಸಿದ್ದೆ”
“ಹೌದು ಸರ್. ಅಂಕಣವನ್ನು ಗಮನಿಸಿದ್ದೆ. ಮುಂದೊಮ್ಮೆ ನಾನು ಮೈಸೂರುನಲ್ಲಿದ್ದಾಗ ತನು-ಮನು ಪ್ರಕಾಶನದ ಗೆಳೆಯ ಮಾನಸ ನನಗೆ ಆ ಪುಸ್ತಕ ಕೊಟ್ಟಿದ್ದರು” ಎಂದೆ.
“ನಿಮಗೆ ವಿಶೇಷ ಅಭಿನಂದನೆಗಳು ರಾಗಂ. ನಾವಿಬ್ಬರೂ ಸೇರಿ ಬರೆದದ್ದು ಕೇವಲ 60 ಲೇಖಕರನ್ನು ಕುರಿತು. ಆದರೆ, ನಿವೀಗ ಹತ್ತಿರ ಹತ್ತಿರಾ ಅಂದ್ರೂ, ನೂರಕ್ಕೆ ಸಮೀಪಿಸುತ್ತಿದ್ದೀರಿ. ಬೆಂಗಳೂರಿಗೆ ಬಂದ್ರೆ ಮರೆಯದೆ ಒಂದು ಫೋನ್ ಮಾಡಿ. ನಾನು ಇಲ್ಲೇ ವಿಧಾನಸೌಧದಲ್ಲಿ ಇರುತ್ತೇನೆ. ಜೊತೆಯಾಗಿ ಒಂದು ಕಪ್ಪು ಚಹಾ ಕುಡಿಯಬಹುದು” ಎಂದರು.
ದುಡ್ಡು-ಪ್ರಭಾವಗಳಿಲ್ಲದ, ಎಂದೂ, ಯಾರ ಮುಂದೆಯೂ ವೈಯಕ್ತಿಕವಾದ ಭಿನ್ನಹಗಳನ್ನಿಡದ, ವಿಜಿಟಿಂಗ್ ಕಾರ್ಡ್ ಕೊಟ್ಟು, ಕ್ಯೂದಲ್ಲಿ ನಿಂತು ಯಾರನ್ನೂ ಭೇಟಿಯಾಗದ, ಓಲೈಸದ ನನ್ನಂಥವರು ಎಂದಾದರೂ ರಾಜಧಾನಿ ಬೆಂಗಳೂರು ವಾಸಿಯಾಗಲು ಸಾಧ್ಯವೆ? ಈ ಬೇಲೂರೇ ಭಾಗ್ಯ ಎಂದು ಲೋಕಾರೂಢಿಯಾಗಿ ‘ಆಯ್ತು ಸರ್’ ಎಂದು ಹೇಳಿದೆ.
ಮಾತು ಮುಗಿಯಿತು. ಕಾಲವೂ ಉರುಳಿತು.
‘ಕಾವ್ಯಕ್ಕೆ ಉರುಳು’ ಅಂಕಣಗಳ ಮೊದಲ ಸಂಪುಟ ಪ್ರಕಟವಾಯ್ತು. ಓದಿ ಮತ್ತೊಂದು ಅಭಿಮಾನದ ಸಂದೇಶ ಕಳುಹಿಸಿದರು ಯೋಗಪ್ಪನವರ. ನಾನದನ್ನು ಎರಡನೇಯ ಸಂಪುಟದ ಬೆನ್ನುಡಿಯಾಗಿ ಬಳಸಿಕೊಂಡೆ. ಮುಂದೊಮ್ಮೆ ಬಾದಾಮಿಗೆ ಹೋದಾಗ ಲೇಖಕಿ ಕಸ್ತೂರಿ ಬಾಯರಿ ಅಂದು ನನಗೆ ಎಸ್.ಎಫ್.ವಾಯ್ ಅವರ ‘ಪ್ರೀತಿ ಎಂಬುದು ಚಂದಿರನ ದಯೆ’ ಕಾದಂಬರಿ ಕೊಟ್ಟರು. ,ನವಿರಾದ ಭಾವಗಳ ಅಪರೂಪದ ಕಾದಂಬರಿ’ ಎಂದು ನಾನು ಅವರಿಗೆ ಪ್ರತಿಕ್ರಿಯಿಸಿದೆ. ಈ ಸಂವಹನ ನಿರಂತರವಾಗಿತ್ತು.
ಸಾವಿನ ಒಂದು ಸಣ್ಣ ಸುಳಿವೂ ಇರಲಿಲ್ಲ.
ಅಚ್ಚರಿಗಳು ಬದುಕಿನಲ್ಲಿ ಹೀಗೂ ಘಟಿಸುತ್ತವೆ ಎನ್ನುವಂತೆ, 2014ರ ಕೊನೆ ಕೊನೆಯಲ್ಲಿ ನಾನು ಬೆಂಗಳೂರು ವಾಸಿಯಾದೆ. ಈ ಸಂಗತಿ ಮೊದಲು ತಿಳಿಯುತ್ತಲೇ ಅಭಿನಂದಿಸಿದವರು ಎಸ್.ಎಫ್.ವಾಯ್. ಮತ್ಸರ ಮತ್ತು ಕಪಟಗಳಿಲ್ಲದ ನನ್ನ ಪ್ರೀತಿಯ ಲೇಖಕನ ಬಳಿ ಬದುಕುವ ಅವಕಾಶವಾಯ್ತು ಎಂದು ನಾನೂ ಅಭಿಮಾನ ಪಟ್ಟೆ. ಆದರೆ, ಅದೇನು ಕರ್ಮವೊ, ಆನಂತರ ಎಂಟು ವರ್ಷಗಳ ನಮ್ಮಿಬ್ಬರ ಬೆಂಗಳೂರಿನ ದೀರ್ಘಾವಧಿಯ ವಾಸ್ತವ್ಯದಲ್ಲಿ ಬರೀ ಮೊಬೈಲೇ ನಮ್ಮ ಮಾತಿನ ಮಾಧ್ಯಮವಾಯಿತೆ ವಿನಃ ಭೇಟಿಯಾಗಲೇ ಇಲ್ಲ. ಪಕ್ಕದಲ್ಲಿದ್ದೂ ಹತ್ತಿರ ಹೋಗಲಿಲ್ಲ.
ಈ ಮಧ್ಯ ಬಾದಾಮಿಗೆ ಮತ್ತೆ ಹೋದೆ. ಹಿರಿಯ ಲೇಖಕ ಚನ್ನಪ್ಪ ಕಟ್ಟಿ ಅವರ ‘ದ ಸ್ಕಾರ್ಲೆಟ್ ಪ್ಲೇಗ್’ ಬಿಡುಗಡೆಗೆ. ಎಸ್.ಎಫ್.ವಾಯ್ ಅವರ ಕೊನೆಯ ಕೃತಿ ‘ನೀಲು: ಮಾತು ಮೀರಿದ ಮಿಂಚು’ನ್ನು ಅವರ ಸಹೋದರ ನನಗೆ ಅಲ್ಲಿ ನೀಡಿದರು. ಖಂಡಿತವಾಗಿಯೂ ಅಂದು, ಆ ನೀಲು ನನಗೆ ದೊರೆಯದೇ ಹೋಗಿದ್ದರೆ ನಮ್ಮ ಮಧ್ಯದ ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಲೇಖಕನೊಬ್ಬನ ಮಹತ್ವದ ಕೃತಿಯೊಂದನ್ನು ಕಳೆದುಕೊಳ್ಳುತ್ತಿದ್ದೆ ಎಂದು ಈಗ ಅನಿಸುತ್ತಿದೆ. ಹಾಗಂತ ಕಲಾವಿದ ಗೆಳೆಯ ಹಾದಿಮನಿಯವರಿಗೂ ತಿಳಿಸಿದೆ.
ಅಲ್ಲಿಂದ ಬೆಂಗಳೂರಿಗೆ ಬರುತ್ತಲೇ ನನ್ನ ಕಾದಂಬರಿ ‘ದಂಡಿ’ ಆಧಾರಿತ ಚಲನಚಿತ್ರದ ಶೂಟಿಂಗ್ ಪ್ರಾರಂಭವಾಯ್ತು. ಚಿತ್ರೀಕರಣಕ್ಕೆ ನಾನೂ ಹೋಗಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಎಸ್.ಎಫ್.ವಾಯ್ ಅವರ ‘ನೀಲು’ ಓದುವ ತಹತಹಿಕೆ ಇನ್ನೊಂದೆಡೆ. ಅಂತಿಮವಾಗಿ ಬೆಂಗಳೂರಿನ ಶಿಷ್ಯೋತ್ತಮ ರಮೇಶ ಡ್ರೈವಿಂಗ್ ಮಾಡುವ ಜವಾಬ್ದಾರಿ ಹೊತ್ತುದರಿಂದ ‘ನೀಲು’ ಎತ್ತಿಕೊಂಡು ನಾನು ಹೊನ್ನಾವರಕ್ಕೆ ಹೊರಟೆ.
ನಾನು ಪುಸ್ತಕಗಳನ್ನು ಓದುವುದಿಲ್ಲ ಬದಲಾಗಿ ಸಂಭ್ರಮಿಸುತ್ತೇನೆ. ಮುಂಜಾನೆ ದಾಬಸ್ಪೇಟೆಯಿಂದ ಈ ಪುಸ್ತಕ ಓದಲು ಪ್ರಾರಂಭಿಸಿದಾಗ ನನ್ನ ಶ್ರೀಮತಿ, ಮಕ್ಕಳು ಡ್ರೈವಿಂಗ್ದಲ್ಲಿದ್ದ ಶಿಷ್ಯ ಎಲ್ಲರೂ ಕಿವಿಗಳಾಗಿದ್ದರು. ಅಂತಿಮವಾಗಿ ತಾಳಗುಪ್ಪಕ್ಕೆ ಬಂದು ತಲುಪಿದಾಗ ಸಂಜೆಯಾಗಿತ್ತು. ‘ನೀಲು’ ನಮ್ಮ ಪಯಣದ ಮಹಾ ಸಂಗತಿಯಾಗಿತ್ತು, ಎದೆಯ ಸೊಗಸಾಗಿತ್ತು.
ಕಾಣದ ಲೇಖಕನ ಕಲ್ಪಿಸಿಕೊಳ್ಳಬಹುದು, ಮಾತಾಡದೇ ಇರಲಾಗದು. ಆದರೆ, ಕಾಡದ ಲೇಖಕನನ್ನು ಎದೆಗಿಳಿಸಿಕೊಳ್ಳಲಾಗದು, ಸಂಭ್ರಮಿಸಲಾಗದು. ಎಸ್.ಎಫ್.ವಾಯ್ರಿಗೆ ಫೋನಾಯಿಸಿಯೇ ಬಿಟ್ಟೆ. ಪ್ರೀತಿಯಿಂದ ಚರ್ಚೆಗಿಳಿದರು ಎಸ್.ಎಫ್.ವಾಯ್. ಆದರೆ ರಾತ್ರಿಯೊಳಗಾಗಿ ಕಾಡಿನ ದಾರಿ ಕ್ರಮಿಸಿ, ಘಟ್ಟ ಇಳಿದು, ನಾವು ಹೊನ್ನಾವರ ತಲುಪಬೇಕಾದುದರಿಂದ ನಾನು ಚರ್ಚೆ ಮೊಟಕುಗೊಳಿಸಿದೆ.
ಭಟ್ಕಳ, ಹೊನ್ನಾವರ, ಮಾಗೋಡ, ಅಂಕೋಲೆ ಅಂತಾ ಚಿತ್ರೀಕರಣದಲ್ಲಿದ್ದರೂ ನನ್ನ ಲಕ್ಷ್ಯ ಕಾರಿನಲ್ಲಿದ್ದ ಎಸ್.ಎಫ್.ವಾಯ್ರ ‘ನೀಲು’ ಪುಸ್ತಕದೆಡೆಗೇ ಇತ್ತು. ಅದನ್ನು ಓದುತ್ತ ಓದುತ್ತ ಗೆರೆಗಳೆಳೆದು ನನ್ನದಾಗಿಸಿಕೊಂಡ ‘ನೀಲು’ವನ್ನು ಯಾರಾದರೂ ಎತ್ತೊಯ್ದರೆ? ಅದೇ ಆತಂಕ. ಅದೊಂದು ಪುಸ್ತಕವಾಗಿ ಕಳೆದು ಹೋದರೆ ಭಯವಿಲ್ಲ ನನಗೆ. ಈ ‘ನೀಲು’ ಪುಸ್ತಕಕ್ಕೂ ಮಿಗಿಲಾಗಿ ಆವರಿಸಿಕೊಂಡಿತ್ತು ನನ್ನ. ಅದು ಜಾಲಾಡಿಬಿಟ್ಟಿತ್ತು ನನ್ನ.
ಇಡೀ ಪುಸ್ತಕವನ್ನು ಲಂಕೇಶರ ಕೇಂದ್ರಪ್ರಜ್ಞೆಯನ್ನು ಹಿಡಿಯುವ ಒಂದು ಪ್ರಯತ್ನ ಎಂದು ಎಸ್.ಎಫ್.ವಾಯ್ ಬರೆದುಕೊಂಡಿದ್ದರೂ, ನಾನದನ್ನು ಒಪ್ಪಿಕೊಂಡಿರಲಿಲ್ಲ. ಓದು, ಪ್ರಾಮಾಣಿಕತೆ ಮತ್ತು ಸ್ಪಷ್ಟ ನಿಲುವುಗಳು ಲಂಕೇಶರನ್ನು ಹೇಗೆ ನಮ್ಮಿಂದ ಭಿನ್ನಗೊಳಿಸಿದವು ಎನ್ನುವ ಎಸ್.ಎಫ್.ವಾಯ್ರ ಮಾತು ನನಗೆ ಇಷ್ಟವಾಗಿತ್ತು. ಜೊತೆಗೆ ಇಡೀ ‘ನೀಲು’ ತುಂಬ ನೀಲಾಕಾಶದ ನಿರಾಳತೆಯನ್ನು ತುಂಬಿಕೊಂಡ ಈ ಸಾಲುಗಳು -
• ಕಾವ್ಯದ ಸಾರ್ಥಕತೆ ಎಲ್ಲಿದೆ ಎಂದು ಹುಡುಕಲು ಹೋದಾಗ, ಅಲ್ಲಿ ವಿಶೇಷ ವಸ್ತುಗಳೇನು ಸಿಕ್ಕಲಾರವು, ಸಿಗುವ ಸಂಗತಿ ನೋವಿನ ಒಂದು ಉಸಿರು.
• ನಮ್ಮ ಭಾಷೆ ನಾವು ಹುಟ್ಟಿದ ಮಣ್ಣಿನಲ್ಲಿರುತ್ತದೆ.
• ಸೂರ್ಯ ಎಂದು ಒಂದು ಕಡೆ ಬೊಟ್ಟು ಮಾಡಿ ತೋರಿಸಿದರೂ ಅವನು ಎಲ್ಲ ಕಡೆಯೂ ಇರುತ್ತಾನೆ.
• ನಮ್ಮ ಕಣ್ಣೀರಿನ ತೇವದಂತೆಯೇ ಪ್ರಕೃತಿಯ ತುಂಬಾ ಕಾರುಣ್ಯದ ತೇವ ತುಂಬಿದೆ.
• ಅಪಾಯದ ಬೆಂಕಿಯಲ್ಲಿ ಓಡುವವರು ಕಡಿಮೆ, ಅದಕ್ಕೆ ವಿಚಿತ್ರ ಮಾನಸಿಕ ಸ್ಥಿತಿ ಬೇಕಾಗುತ್ತದೆ.
• ನಿಸರ್ಗ ಇಲ್ಲದಿದ್ದರೆ ಧರ್ಮವೂ ಇಲ್ಲ, ದೇವರೂ ಇಲ್ಲ.
ಕಾವ್ಯದಲ್ಲಿ ಹೈಕು, ಆಧ್ಯಾತ್ಮದಲ್ಲಿ ಝೆನ್ ಎತ್ತಿಕೊಂಡು ನಮಗೆ ಲಂಕೇಶರ ‘ನೀಲು’ ದಕ್ಕಿಸಲು ಹೊರಟ ಎಸ್.ಎಫ್.ವಾಯ್ ತುಂಬಾ ಜಾಗರೂಕ ಬರಹಗಾರರೂ ಕೂಡಾ. ಹೈಕು ಮತ್ತು ಝೆನ್ಗಳ ಗಾತ್ರ ಕಿರಿದು. ಆದರೆ, ಅರ್ಥ ವಿಸ್ತಾರ ದೊಡ್ಡದು. ಅಂತೆಯೇ ‘ನೀಲು’ವನ್ನು ಗ್ರಹಿಸಿದ್ದಾರೆ ಎಸ್.ಎಫ್.ವಾಯ್. ಹಾಗೇ ಈ ನೆಲದ ಮೂಲವಾದ ಶೋಕ, ವ್ಯಸನಗಳನ್ನೇ ಮುಂದಿಟ್ಟುಕೊಂಡು ‘ನೀಲು’ವಿನ ಶೋಕ ಈ ನೆಲದ ಎಲ್ಲ ಮಹಾಕಾವ್ಯಗಳ ಶೋಕದಂತೆಯೇ ಹರಿಯುತ್ತದೆ ಎನ್ನುತ್ತಾರೆ.
ಪುಸ್ತಕದ ನನ್ನ ಓದೇನೊ ಮುಗಿಯಿತು. ಆದರೆ, ನನ್ನೊಳಗೆ ಲಂಕೇಶರ ‘ನೀಲು’ ಕಾವ್ಯಕ್ಕೆ ಇಷ್ಟೊಂದು ಗಂಭೀರ ಅರ್ಥವ್ಯಾಪ್ತಿ ಇದೆಯೆ? ಅಥವಾ ಲಂಕೇಶರ ಕುರಿತಾದ ಎಸ್.ಎಫ್.ವಾಯ್ ಅವರ ಅಭಿಮಾನ ತುಸು ಹೆಚ್ಚೆನಿಸುವಂತೆ ಬರೆಯಿಸಿತೆ? ಸರಿ ಯಾವುದಕ್ಕೂ ಮಾತಾಡೇ ಬಿಡೋಣ ಎಂದು ಫೋನಾಯಿಸಿದೆ. ಯಾವುದಕ್ಕೂ ಇರಲಿ ಎಂದು ಮೊದಲು ನಮ್ಮಿಬ್ಬರ ಸಾಕ್ಷಿಗಲ್ಲಾದ, ಲಂಕೇಶ ಗರಡಿಯ ಕಲಾವಿದ ಟಿ.ಎಫ್. ಹಾದಿಮನಿ ಅವರಿಗೆ ಫೋನಾಯಿಸಿದೆ. ಅವರು ನಗುತ್ತ, ‘ನೀವು ಕೇಳ ಬಯಸಿದ್ದು ಸರಿ ಇದೆ ಅಂದ್ರು’.
ಈಗ ನನ್ನ ಸರದಿ. ಫೋನ್ ಮಾಡಿ ಒಂದೇ ಗುಕ್ಕಿಗೆ ಹೇಳಿದೆ, ‘ಗುರುಗಳೆ ನೀಲು ಓದಿದೆ, ಲಂಕೇಶರ ನೀಲು ಪದ್ಯಗಳನ್ನು ಮೊದಲೂ ಓದಿದ್ದೆ. ಯಾಕೋ ನಿಮ್ಮಿಂದಾಗಿ ನೀಲುಗೆ ಇಷ್ಟೆಲ್ಲ ವ್ಯಾಪ್ತಿ ದಕ್ಕಿದೆ. ಬಹುತೇಕ ಮೂಲ ಲಂಕೇಶರಿಗೆ ಒಂದು ಕಾಲಕ್ಕೆ ನಿಮ್ಮಿಂದಾಗಿ ನೀಲು ಇಂಥ ವಿಶಾಲ, ಘನ ಗಂಭೀರ ಅರ್ಥಕ್ಕೆ ಏರುತ್ತದೆ ಎಂಬ ತಿಳುವಳಿಕೆ ಇರಲಿಕ್ಕಿಲ್ಲ. ನಿಮ್ಮ ಈ ಕೃತಿಯಿಂದಾಗಿ ‘ನೀಲು’ ಮತ್ತು ಲಂಕೇಶ ಮರು ಓದಿಗೆ ಒಳಪಡುತ್ತಾರೆ’ ಎಂದೆ.
ಒಂದು ದೇಶಾವರಿ ನಗೆಯೊಂದಿಗೆ ಎಸ್.ಎಫ್.ವೈ ಸಮಾಧಾನದಿಂದ ಹೇಳಿದರು, ‘ಅವರು ನನ್ನ ಬರಹದಿಂದ ಬೆಳೆಯುವುದೆ? ಎಂದಾದರೂ ಉಂಟೆ ರಾಗಂ? ಅವರು ಬಹಳ ದೊಡ್ಡವರು. ಅವರೊಟ್ಟಿಗೆ ಸಾಹಿತ್ಯ ಸೇವೆಗೊಂದು ಅವಕಾಶವಾಯಿತಲ್ಲ ಅದೇ ಭಾಗ್ಯ. ನನ್ನದೊಂದು ಸಣ್ಣ ಪ್ರಯತ್ನ ಅಷ್ಟೆ. ‘ಅಂದಾಂಗ ನಮ್ಮ ಮಾತೆಲ್ಲ ಬರೀ ಮೊಬೈಲ್ದೊಳಗೇ ಆದವಲ್ಲಾ ರಾಗಂ, ಯಾವಾಗ ಸಿಗೋದು?’ ಅಂದ್ರು. ಪ್ರತಿಯಾಗಿ ‘ನೋಡಿ ಗುರುಗಳೆ, ಕಣ್ಣುರೆಪ್ಪೆ ಬಡಿಯುವಷ್ಟರಲ್ಲಿ ಇಲ್ಲಿಗೆ ಬಂದು 7 ವರ್ಷಗಳು ಮುಗಿದೇ ಹೋದವು. ಬೆಂಗಳೂರಿನ ಯಾವುದಾದರೂ ಸಾಹಿತ್ಯ ಸಮಾರಂಭಕ್ಕೆ ನಾನು ಬಂದಿದ್ದರೆ ನೀವು ಸಿಗುತ್ತಿದ್ದಿರೇನೊ. ಆದರೆ, ನಾನು ಆ ವಿಚಾರದಲ್ಲಿ ಗದ್ದಲಗಳಿಂದ ಸ್ವಲ್ಪ ದೂರ’ ಎಂದೆ. ಎಲ್ಲ ಕೇಳಿಸಿಕೊಂಡು ಎಸ್.ಎಫ್.ವೈ ಹೇಳಿದರು, ‘ನಾನು ಇಲ್ಲಿಗೆ ಬಂದು ಎಷ್ಟು ವರ್ಷಗಳಾದವು ಅಂತೀರಿ? ಮುಂದಿನ ವಾರ ಮಗನ ಮದುವೆ ಕಾರ್ಡು ಕೊಡಲು ನಿಮ್ಮ ಮನೆಗೆ ಬರ್ತೀನಿ ರಾಗಂ. ಆದರೆ, ಸಭೆಗಳಿಗಲ್ಲ. ಸಭೆ-ಸಮಾರಂಭಗಳ ವಿಚಾರದಲ್ಲಿ ನಾನು ನಿಮಗಿಂತ ದೂರ. ಒಂದರ್ಥದಲ್ಲಿ ಸಾಹಿತ್ಯದ ಇಷ್ಟು ದೀರ್ಘ ದಾರಿ ಕ್ರಮಿಸಿಯೂ ನಾನು ಸಾಹಿತಿಗಳಿಂದಲೂ ದೂರ. ನಾನು ಸಾಹಿತ್ಯದೊಳಗಿದ್ದೂ ಅದರೊಳಗಿಲ್ಲ. ಅದಕ್ಕೆ ಬೇಸರವೇನಿಲ್ಲ. ಅದರ ಅವಶ್ಯಕತೆ ನನಗೆ ಎಂದೂ ಅನ್ನಿಸಲಿಲ್ಲ. ಬರೆಯುತ್ತೇನೆ ಬರೆಯದೇ ಇರಲಾರದ್ದಕ್ಕಾಗಿ. ನಿಮ್ಮಂಥವರ ಜೊತೆ ಮಾತನಾಡುತ್ತೇನೆ ಇಷ್ಟು ಖುಷಿ ಸಾಕು ನನಗೆ’ ಎಂದರು.
ಮಾತು ಹೆಪ್ಪಾದ ನಿಶ್ಯಬ್ಧ.
ಇದು ನಮ್ಮ ಕೊನೆಯ ಸಾಹಿತ್ತಿಕ ಚರ್ಚೆ. ಆನಂತರ ಒಮ್ಮೆ ಮದುವೆಯ ಆಮಂತ್ರಣ ಕುರಿತು.
ಕೆಲವೇ ದಿನಗಳಷ್ಟೆ, ಕರೋನಾ ಕರೆಯಿತು, ಯೋಗಪ್ಪನವರು ಯಾವ ಹಂಗಿಲ್ಲದೆ ಸಾವಿನೊಂದಿಗೂ ಯೋಗಕ್ಕಿಳಿದರು. ಮಾತು ಮೀರಿದ ಮಿಂಚಂತೆಯೇ ಮರೆಯಾದರು, ಹೂ-ಹಾದಿಯ ಹಾಡು ಹಾಡುತ್ತಾ ಮಣ್ಣಿಗಿಳಿದರು.
ಅಭಿನಂದನೆ, ಸಮಗ್ರ ಸಾಹಿತ್ಯ, ಸನ್ಮಾನ, ಸಾಹಿತ್ಯಕ್ಕಾಗಿ ಪ್ರಶಸ್ತಿ, ಸಂಸ್ಮರಣೆ, ಗುಂಪುಗಾರಿಕೆ, ಪಂಥ-ಪುಂಡಾಟಿಕೆ ಹೀಗೆ ಎಲ್ಲದರಿಂದ ಅತೀತರಾಗಿದ್ದ ಎಸ್.ಎಫ್.ವೈ ನಮ್ಮ ಭಾವಲೋಕದ ಮಹಾ ಬೈರಾಗಿ. ನನ್ನನ್ನ್ಯಾರೂ ಗಮನಿಸಲಿಲ್ಲ, ಓದಲಿಲ್ಲ ಎಂದು ನಿತ್ಯ ಅವಲತ್ತುಕೊಳ್ಳುವವರ ಮಧ್ಯ ಮತ್ತೆ ಮತ್ತೆ ವಿವೇಕದ ಮಿಂಚಂತೆ ಮೂಡುವವರು ಯೋಗಪ್ಪನವರ.