Total Pageviews

Sunday, October 6, 2024

ಸಿದ್ಧೇಶ್ವರ ಶ್ರೀ : ಗಗನಂ ಗಗನಾಕಾರಂ

ಕೆಲವರು ಹಾಗೇನೇ. ಅವರು ಅವರ ಹಾಗೇನೇ!! ಅವರು ಸಂಸ್ಕೃತದ ಅನನ್ವಯ ಅಲಂಕಾರದ ಹಾಗೆ. ಅವರು ಗಗನಂ ಗಗನಾಕಾರಂ ಹಾಗೂ ಸಾಗರಂ ಸಾಗರೋಪಮದ ಹಾಗೆ. 

ಸಿದ್ಧೇಶ್ವರ ಶ್ರೀಗಳು ಯಾರಂತೆಯೂ ಬದುಕಲಿಲ್ಲ. ಅವರು ತಮ್ಮಂತೆಯೇ ತಾವು ಬದುಕಿದರು, ಸಾವಲ್ಲೂ ಸಹ, ನೋವಲ್ಲೂ ಸಹ!! 

ಅವರು ಅವರಿವರಂತೆ ಬದುಕಲಿಲ್ಲ ಮತ್ತು ಅವರು ಅವರಿವರಿಗಾಗಿ ಬದುಕಲಿಲ್ಲ. ಅವರು ಅವರಂತೆಯೇ ಬದುಕಿದರು. ಅವರದು ಅಧೀನದ ಬದುಕಲ್ಲ. ಅವರು ಯಾರದೇ ಅರ್ಜಿ, ಮರ್ಜಿ, ಮುತುವರ್ಜಿಗಳಿಗಾಗಿ ಬದುಕಿದವರಲ್ಲ. ಏಕೆಂದರೆ, ಅವರು ಸರ್ವತಂತ್ರ ಸ್ವತಂತ್ರ ಸಿದ್ಧೇಶ್ವರ. ಅವರದು “ಅಲಕ್ ನಿರಂಜನ” ವ್ಯಕ್ತಿತ್ವ. ಅವರು ತಮ್ಮ ಬದುಕಿನದ್ದುಕ್ಕೂ ದಾಹ, ಮೋಹ, ವ್ಯಾಮೋಹಗಳನ್ನು ಹತ್ತಿರಕ್ಕೆ ಕೂಡ ಬಿಟ್ಟುಕೊಳ್ಳಲಿಲ್ಲ. 

ಅಕ್ಕಮಹಾದೇವಿಯ ಚೆನ್ನಮಲ್ಲಿಕಾರ್ಜುನ ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವನಾದರೆ ಸಿದ್ಧೇಶ್ವರ ಶ್ರೀಗಳು ದಾಹವಿಲ್ಲದ ಮೋಹವಿಲ್ಲದ ವ್ಯಾಮೋಹವಿಲ್ಲದ ಚೆಲುವರು!!  

ಸಿದ್ಧೇಶ್ವರರು ವಿರಳರಲ್ಲಿ ವಿರಳರು; ಅವರು ಸರಳರಲ್ಲಿ ಸರಳರು.

ಸಿದ್ಧೇಶ್ವರರಂಥವರು ಲೋಕದಂತೆ ಬಾರರು ಮತ್ತು ಲೋಕದಂತೆ ಇರ್ಪರಲ್ಲ ಅವರು!!

ಕೆಲವರು ಅವರನ್ನು “ಅಭಿನವ ಬುದ್ಧ” ಎಂದರು. ಕೆಲವರು ಅವರನ್ನು “ಅಭಿನವ ಬಸವಣ್ಣ” ಎಂದರು. ಕೆಲವರು ಅವರನ್ನು ಸಂತ ಸುಕರಾತನಿಗೆ ಹೋಲಿಸಿದರು. ಇನ್ನೂ ಹಲ-ಕೆಲವರು ಅವರನ್ನೇನೋ ಅಂದುಕೊಂಡು ತಮ್ಮನ್ನು ತಾವು ಸಮಾಧಾನಿಸಿಕೊಂಡರು. ಇವೆಲ್ಲ ಅನಿಸಿಕೆ, ಅಭಿವ್ಯಕ್ತಿಗಳು ಅವರವರ ವೈಯಕ್ತಿಕ!! ಶ್ರೀಗಳು ಈ ಎಲ್ಲ ವಿಷಯದಲ್ಲೂ ನಿರ್ಲಿಪ್ತರು. ಅವರು ಮಾತ್ರ ಎಂದೂ ತಮ್ಮನ್ನು ತಾವು ಬುದ್ಧ, ಮಹಾವೀರ, ಬಸವಣ್ಣ ಎಂದುಕೊಳ್ಳಲಿಲ್ಲ.

ಅವರಿಗೆ ಬುದ್ಧನಾಗುವುದು ಬೇಕಿರಲಿಲ್ಲ. ಅವರಿಗೆ ಪರಿಶುದ್ಧನಾಗುವುದು ಬೇಕಿತ್ತು.


ಅವರು ಬಸವಣ್ಣನಾಗುವುದು ಬೇಕಿರಲಿಲ್ಲ. ಅವರಿಗೆ ತಾವು ಬಸವಸಂಹಿತೆಗೆ ನ್ಯಾಯ ಒದಗಿಸುವುದು ಬೇಕಿತ್ತು. ಶ್ರೀಗಳನ್ನು ಕೆಲವರು ನಡೆದಾಡುವ ದೇವರೆಂದರು. ಕೆಲವರು ಅವರನ್ನು ಮಾತನಾಡುವ ದೇವರೆಂದರು. ಕೆಲವರು ಅವರನ್ನು ನಡೆದಾಡುವ ಜ್ಞಾನದಾಸೋಹವೆಂದರು. ಈ ಯಾವ ಪದಗಳನ್ನೂ ಅವರು ತಲೆಗೇರಿಸಿಕೊಳ್ಳಲಿಲ್ಲ. ಈ ಪದಗಳನ್ನು ಅವರು ಮುಡಿದುಕೊಳ್ಳಲಿಲ್ಲ. 

ಈ ಎಲ್ಲ ಪದಗಳಿಂದ ಅವರು “ಸುರಕ್ಷಿತ” ಅಂತರವನ್ನು ಕಾಯ್ದುಕೊಂಡಿದ್ದರು. ಅವರನ್ನು ಶಬ್ಧಗಳಿಂದ ಕೊಳ್ಳುವುದಾಗಲಿ ಅಥವಾ ಅವರನ್ನು ಹೊಗಳಿಕೆಯಿಂದ ಸಂತೋಷಪಡಿಸುವುದಾಗಲಿ ಸಾಧ್ಯವಿರಲಿಲ್ಲ. ಅವರು ಹೊಗಳಿಕೆಗೆ ಯಾವತ್ತೂ ಹೆಗಲುಕೊಟ್ಟವರಲ್ಲ. 

ಬಸವಣ್ಣನವರ ಹಾಗೆ ಅವರಿಗೂ ಸಹ ಹೊಗಳಿದವರು ಹೊನ್ನಶೂಲಕ್ಕೆ ಏರಿಸುತ್ತಾರೆ ಎಂಬುವುದು ಗೊತ್ತಿತ್ತು. ಯಾರಾದರೂ ಅವರನ್ನು ಹೊಗಳಲು ಶುರುಮಾಡಿದರೆ ಅವರು ತಕ್ಷಣ ಅಲ್ಲಿಂದ ಜಾಗ ಖಾಲಿಮಾಡುತ್ತಿದ್ದರು; ಇಲ್ಲವೆ ಅವರು ಆ ಕೂಡಲೇ “ವಿಷಯಾಂತರ” ಪರ್ವಕ್ಕೆ ನಾಂದಿಹಾಡುತ್ತಿದ್ದರು. 

ಪೂಜ್ಯ ಸಿದ್ಧೇಶ್ವರ ಶ್ರೀಗಳು ಯಾವತ್ತೂ ಸಂತೆಯಾಗಲು ಇಚ್ಛಿಸಿದವರಲ್ಲ. 

ಅವರು ಸಂತೆಯಾಗಲು ಇಚ್ಛಿಸಲಿಲ್ಲ. ಸಂತೆಯಾಗುವ ಮನಸ್ಥಿತಿಯಿಂದ ಗಾವುದ ಗಾವುದ ದೂರದಲ್ಲಿದ್ದರು. ಅವರಿಗೆ ಚೆನ್ನಾಗಿ ಗೊತ್ತಿತ್ತು, ಅದೊಮ್ಮೆ ಸಂತೆಯಾದರೆ ಆಯಿತು, ಅಕ್ಕಮಹಾದೇವಿಯ ಹಾಗೆ “ಸಂತೆಯೊಳಗೊAದು ಮನೆಯ ಮಾಡಿ ಶಬ್ಧಕ್ಕೆ ನಾಚಿದೊಡೆಂತಯ್ಯ?” ಎಂದು ತಮ್ಮನ್ನೇ ತಾವು ಸಮಾಧಾನಿಸಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು!!

ಶ್ರೀಗಳು ತಮ್ಮ ಉಸಿರಿನ ಕೊನೆಯವರೆಗೂ ಸಂತೆಯಿAದ ಸುವ್ಯವಸ್ಥಿತವಾಗಿ ಅಂತರವನ್ನು ಕಾಯ್ದುಕೊಂಡು ಸಂತರಾಗಿಯೇ ಬದುಕಿದರು. ಆದರೆ ಸಾವಿನ ನಂತರ ಅವರಾದರೂ ಏನು ಮಾಡಲಿಕ್ಕಾಗುತ್ತದೆ? 

ಅವರೂ ಸಹ ಆಗ ನಿರುಪಾಯರು ಮತ್ತು ನಿರುತ್ತರರು!!

ಇದು ಕಾರಣ, ಅವರ ಸಾವಿನ ನಂತರ ಅವರನ್ನು ಬರೀ ಸಂತೆಯಲ್ಲ, ಜಾತ್ರೆ ಮಾಡಿಹಾಕಲಾಯಿತು.

ಇನ್ನೂ ಒಂದು ವಿಪರ್ಯಾಸವೇನೆಂದರೆ, ಅವರು ತಮ್ಮ ಬದುಕಿನುದ್ದಕ್ಕೂ ಯಾವತ್ತೂ ರಾಜಕಾರಣಕ್ಕೆ ಮತ್ತು ರಾಜಕಾರಣಿಗಳಿಗೆ ಹೆಗಲು ಕೊಟ್ಟವರಲ್ಲ. ಆದರೆ ಅಗ್ನಿದೇವನಿಗೆ ಅರ್ಪಿತವಾಗುವ ಮುನ್ನ ಅವರ ಪಾರ್ಥಿವ ಶರೀರಕ್ಕೆ ರಾಜಕಾರಣ ಮತ್ತು ರಾಜಕಾರಣಿಗಳು ಹೆಗಲುಕೊಟ್ಟರು. ಪಾಪ, ಅವರ ಆತ್ಮ ಆಗ ಅದೆಷ್ಟು ವಿಲವಿಲ ಎಂದಿರಬಹುದು?

ಅದುವರೆಗೆ ರಾಜಕಾರಣಿಗಳಿಂದ ಮೈಲು ಮೈಲು ದೂರದ ಅಂತರವನ್ನು ಕಾಯ್ದುಕೊಂಡಿದ್ದ ಅವರನ್ನು ರಾಜಕಾರಣಿಗಳೆಲ್ಲ ಸೇರಿ ಮೈಲಿಗೆ ಮಾಡಿಹಾಕಿದರು. ಬೆಂಗಳೂರಿನ ರಾಜಕಾರಣವೆಲ್ಲ ಬಂದು ಅವರ ಅಂತಿಮಯಾತ್ರೆಯನ್ನು ಆವರಿಸಿಕೊಂಡಿತು. 

ಸಿದ್ಧೇಶ್ವರ ಶ್ರೀಗಳು ಯಾವತ್ತೂ ಮತ್ತು ಯಾವುದೇ ಕಾರಣಕ್ಕೂ ವೈಭವೀಕರಣಕ್ಕೆ ಬಲಿಯಾದವರಲ್ಲ. ಆದರೆ, ಅವರ ಸಾವಿನ ನಂತರ ಅವರನ್ನು ತುಂಬ ವೈಭವೀಕರಿಸಲಾಯಿತು. ಸಿದ್ಧೇಶ್ವರ ಸ್ವಾಮಿಗಳು ಯಾರು? ಏನು? ಎತ್ತ? ಎಂಬುವುದರ ಅ ಬ ಕ...ಗಳು ಕೂಡ ಗೊತ್ತಿರದ ವ್ಯಕ್ತಿಗಳು ಮಾಧ್ಯಮಗಳ ಮುಂದೆ ಸಹಸ್ರನಾಲಿಗೆಯಾದರು ಮತ್ತು ಸಹಸ್ರಬುದ್ಧಿಯಾದರು.

ಒಂದೆಡೆ, ಶ್ರೀಗಳ ಅಂತಿಮಯಾತ್ರೆಯ ಜಾತ್ರೆ ನಡೆದುಕೊಂಡಿದ್ದರೆ, ಇನ್ನೊಂದೆಡೆ, ಆಜೀವನದುದ್ದಕ್ಕೂ ಸಿದ್ಧೇಶ್ವರ ಶ್ರೀಗಳನ್ನು ತುಂಬ ತುಂಬಾನೇ ಆಪ್ತವಾಗಿ ಪ್ರೀತಿಸುತ್ತಿದ್ದ ದನಗಾಹಿ, ಕುರಿಗಾಹಿ ಜನಗಳು ಮತ್ತು ಶ್ರೀಸಾಮಾನ್ಯರು ಸಿದ್ಧೇಶ್ವರ ಶ್ರೀಗಳ ಸಾವನ್ನು ಜೀರ್ಣಿಸಿಕೊಳ್ಳಲಾಗದೆ ತೆರೆಯ ಮರೆಯಲ್ಲಿ ಕಂಬನಿಯಾಗಿ ಹರಿದುಹೋಗುತ್ತಿದ್ದರು.

ಆ ಒಂದು ಸಂದರ್ಭದಲ್ಲಿ ಒಂದಂತೂ ಸಾಬೀತಾಯಿತು. ಮರಣದವರೆಗೆ ನಾವು ನಮ್ಮಂತೆ ಬದುಕಬಹುದು. ಮರಣೋತ್ತರ ಕಾಲದಲ್ಲಿ ನಮ್ಮಂತೆ ನಾವು ಬದುಕುವುದಕ್ಕೆ ಆಗುವುದಿಲ್ಲವೆಂದು!!

ಸಿದ್ಧೇಶ್ವರ ಶ್ರೀಗಳ ಸಾವಿನ ನಂತರ ಅವರಿಗೆ ಬೇಕಾಗದೆ ಇರೋದೆಲ್ಲ ನಡೆದುಹೋಯಿತು. ಅಂತಿಮಯಾತ್ರೆಯ ದಿನ ಸಿದ್ಧೇಶ್ವರರು ಅಗ್ನಿಸ್ಪರ್ಶಕ್ಕೆ ಒಳಗಾಗಿ ಬೂದಿಯಾಗುವುದಕ್ಕೆ ಮುನ್ನ ಜ್ಞಾನಯೋಗಾಶ್ರಮವು ರಾಜಕಾರಣದ ವೇದಿಕೆಯಾಗಿ ಹೋಯಿತು. ಬಯಲು ಬಯಲಾಗುವ ಮುನ್ನ ಒಂದಷ್ಟು ಮುಜುಗರಕ್ಕೆ ಒಳಗಾಗಬೇಕಾಯಿತು.

ಸಿದ್ಧೇಶ್ವರರ ಕೈಯಲ್ಲಿ ಏನೂ ಇರಲಿಲ್ಲ. ಏಕೆಂದರೆ, ಅವರು ಕೊನೆಯದಾಗಿ ಒಂದು ನಿರಾಳದ ನಿಟ್ಟಿಸಿರುಬಿಟ್ಟು ಲೋಕವಾರ್ತೆಗೆ ಮತ್ತು ಲೋಕಕೀರ್ತಿಗೆ ಕೈಮುಗಿದು ಹೊರಟುಹೋಗಿದ್ದರು.  

ಸಿದ್ಧೇಶ್ವರ ಶ್ರೀಗಳು ತಮ್ಮ ಜೀವಮಾನದುದ್ದಕ್ಕೂ ಪ್ರಸಿದ್ಧಿಯನ್ನೂ ಬಯಸಲಿಲ್ಲ; 

ಅವರು ಪದ್ಮಶ್ರೀಯನ್ನೂ ಬಯಸಲಿಲ್ಲ. ಅವು ತಾವಾಗಿಯೇ ಅವರ ಬಳಿ ಬಂದರೂ ಅವುಗಳಿಗೆ ಅವರು “ಮಾ ಸ್ಪೃಶ, ಮಾ ಸ್ಪೃಶ” ಎಂದು ಹೇಳಿ ಅವುಗಳನ್ನು ತಡೆಹಿಡಿದು ದೂರ ದೂರ, ಬಹುದೂರ ನಿಲ್ಲಿಸಿಬಿಟ್ಟರು. ಅವರು ಲೋಕವಾರ್ತೆ, ಕೀರ್ತಿವಾರ್ತೆಗಳಿಂದ ಅಭೇದ್ಯ ಹಾಗೂ ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿದ್ದರು.

ಸಿದ್ಧೇಶ್ವರ ಶ್ರೀಗಳ ಪೂಜ್ಯ ಗುರುದೇವರಾದ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳು ಶ್ರೀಗಳನ್ನು ಬಾಲ್ಯದಿಂದಲೇ ಒಲವು, ವಾತ್ಸಲ್ಯದಿಂದ ಬೆಳೆಸಿದರು. ಮಲ್ಲಿಕಾರ್ಜುನ ಅಪ್ಪಗಳು ತಾವಿರುವಾಗಲೇ ಸಿದ್ಧೇಶ್ವರರನ್ನು “ಗುರುವ ಮೀರಿಸಿದ ಶಿಷ್ಯ” ಎಂದು ಬಾಯ್ತುಂಬ ಹೊಗಳಿ ಶಿಷ್ಯಪಾರಮ್ಯವನ್ನು ಎತ್ತಿಹಿಡಿದಿದ್ದರು. ಅವರದು ಮಾತೃಹೃದಯ. ಅವರು ಮಮತಾಮಯಿ. ಶ್ರೀ ಮಲ್ಲಿಕಾರ್ಜುನ ಅಪ್ಪಗಳು “ಶಿಷ್ಯಾದಿಚ್ಛೇತ್ ಪರಾಜಯಮ್” ಎಂಬ ಮಾತನ್ನು ತಮ್ಮ ಪ್ರವಚನಗಳಲ್ಲಿ ಮತ್ತೆ ಮತ್ತೆ ಹೇಳುತ್ತಿದ್ದರು. 

“ಶಿಷ್ಯ ಗುರುವನ್ನು ಸೋಲಿಸಬೇಕು” ಮತ್ತು “ಶಿಷ್ಯನಿಂದಾದ ಸೋಲು, ಪರಾಭವವನ್ನು ಗುರು ಒಪ್ಪಿಕೊಳ್ಳಬೇಕು” ಎಂದು ಹೇಳುತ್ತಿದ್ದ ಮಲ್ಲಿಕಾರ್ಜುನ ಅಪ್ಪಗಳು ಆ ಮಾತಿಗೆ ತಮ್ಮನ್ನೇ ತಾವೇ ನಿದರ್ಶನವಾಗಿಸಿಕೊಂಡರು. 

ಗುರುದೇವರು ಸಿದ್ಧೇಶ್ವರರನ್ನು “ಸಿದ್ಧ, ಬುದ್ಧ, ಪರಿಶುದ್ಧ” ಎಂದು ಒಪ್ಪಿಯಾಗಿತ್ತು. 

ಗುರು ಒಪ್ಪಿದ ಮೇಲೆ ಇನ್ನೇನಿದೆ? ಗುರುಕಾರುಣ್ಯಕ್ಕಿಂತ ಇನ್ನು ಕಾರುಣ್ಯಗಳುಂಟೆ? ಸಿದ್ಧೇಶ್ವರ ಶ್ರೀಗಳು ಕೂಡ ಅಷ್ಟೇ. ಅವರು ಅವರ ಗುರುಗಳೊಂದಿಗೆ ಅನನ್ಯ ಮತ್ತು ಅನ್ಯೋನ್ಯ. ಗುರು ಹಾಕಿದ ಗೆರೆಯನ್ನು ಅವರು ಎಂದೂ ದಾಟಲಿಲ್ಲ. ಅಷ್ಟು ಮಾತ್ರವಲ್ಲ, ಗುರು ಕೊಟ್ಟ ಗುರಿಯನ್ನು ಅವರು ತಲುಪದೇ ಇರಲಿಲ್ಲ.

ಮಹಾಭಾರತದ ಗುರು ದ್ರೋಣರಿಗೆ ಬೆರಳುಕೊಟ್ಟ ಏಕಲವ್ಯನನ್ನು ನಾವುಗಳು ನಿತ್ಯದಲ್ಲೂ ಸ್ಮರಿಸಿಕೊಳ್ಳುತ್ತೇವೆ. ಅದೇ ರೀತಿ, ತಮ್ಮ ಗುರುದೇವ ಮಲ್ಲಿಕಾರ್ಜುನ ಶಿವಯೋಗಿಗಳ ಆಧ್ಯಾತ್ಮಿಕ ಸಂದೇಶವನ್ನು ಭಕ್ತಜನಕ್ಕೆ ತಲುಪಿಸಲು ತಮ್ಮ ಬದುಕನ್ನೇ ಮುಡಿಪಾಗಿಟ್ಟ ಸಿದ್ಧೇಶ್ವರರನ್ನು ನಾವು-ನೀವುಗಳು ಸ್ಮರಿಸಿಕೊಳ್ಳದೆ ಇರಲು ಆಗುತ್ತೇನು? 

ಮಲ್ಲಿಕಾರ್ಜುನ ಶಿವಯೋಗಿಗಳಿಗೆ ಸಿದ್ಧೇಶ್ವರರು ಮನಸ್ಸಾಕ್ಷಿಯಾದರೆ ಸಿದ್ಧೇಶ್ವರ ಶ್ರೀಗಳಿಗೆ ಮಲ್ಲಿಕಾರ್ಜುನ ಶಿವಯೋಗಿಗಳು ಆತ್ಮಸಾಕ್ಷಿ ಮತ್ತು ಅಂತಃಸ್ಸಾಕ್ಷಿಯಾದರು.

ಸಿದ್ಧೇಶ್ವರ ಶ್ರೀಗಳು ಕಾವಿ ಬಟ್ಟೆಗಳನ್ನು ಧರಿಸುತ್ತಿರಲಿಲ್ಲ.

ಕಾವಿ ಧರಿಸಿದ ಕಾರಣದಿಂದ ಮಾತ್ರ ಪೂಜ್ಯರಾಗುವುದು ಅವರಿಗೆ ಬೇಕಿರಲಿಲ್ಲ. ಪೂಜ್ಯತೆ ಮತ್ತು ಸನ್ಯಾಸವನ್ನು ಅವರು ಕಾವಿ ಹಾಗೂ ಕಾಷಾಯಾವಲಂಬಿಯಾಗಿಸಲಿಲ್ಲ. ಅವರು ಪೂಜ್ಯತೆ ಮತ್ತು ಸನ್ಯಾಸವನ್ನು ಸ್ವಾವಲಂಬಿಯಾಗಿಸಿದರು; ಮತ್ತದನ್ನು ಅವರು ಅರ್ಹತಾವಲಂಬಿಯಾಗಿಸಿದರು ಹಾಗೂ ಆಚರಣಾವಲಂಬಿಯಾಗಿಸಿದರು. 

ಪೂಜ್ಯರು ಕಾವಿಯನ್ನು ಹಿಂದಿಟ್ಟು ಆಚಾರ, ವಿಚಾರಗಳನ್ನು ಮುಂದಿಟ್ಟು  ಬೆಳೆದರು. ಅವರು ಕಾವಿಯನ್ನು ಧರಿಸದೆಯೇ ಕಾವಿಯ ಘನತೆ ಮತ್ತು ಗೌರವವನ್ನು ಹೆಚ್ಚಿಸಿದರು. ಅವರದು ಬಣ್ಣದಿಂದಾಗಲಿ ಅಥವಾ ಬಣದಿಂದಾಗಲಿ ಗುರುತಿಸಿಕೊಳ್ಳುವ ಜಾಯಮಾನವಲ್ಲ. ಬಣ್ಣ ಹಾಗೂ ಬಣ - ಇವೆರಡರಿಂದ ಅವರನ್ನು ಕಟ್ಟಿಹಾಕುವುದು ಸಾಧ್ಯವಿರಲಿಲ್ಲ. ಇವೆಲ್ಲ ಈಚೆ, ಈಚೆ. ಅವರೋ ಇವೆಲ್ಲವುಗಳ ಆಚೆ ಆಚೆ!! 

ಸಿದ್ಧೇಶ್ವರ ಶ್ರೀಗಳು ಶ್ವೇತವಸನರು ಮತ್ತು ಅವರು ಶ್ವೇತಪ್ರಿಯರು. 

ಅವರ ದೇಹವದು ಶ್ವೇತವಸ್ತ್ರವನ್ನು ಕಡ್ಡಾಯವಾಗಿಸಿಕೊಂಡಿತ್ತು. “ವಾಸಾಂಸಿ ಜೀರ್ಣಾನಿ” ಎಂಬ ಸತ್ಯದ  ಆಳವನ್ನು ಹುಡುಕುತ್ತಿರುವ ಯೋಗಿಗೆ ವಸ್ತ್ರ ಹೇಗಿದ್ದರೇನು ಮತ್ತು ಅದು ಎಂತಿದ್ದರೇನು? 

ಸಿದ್ಧೇಶ್ವರ ಶ್ರೀಗಳು “ಸ್ವಾಮೀಜಿ” ಪದದ ವ್ಯಾಖ್ಯೆ, ವ್ಯಾಖಾನಗಳನ್ನೇ ಬದಲಾಯಿಸಿಬಿಟ್ಟರು. ಅವರು “ಸ್ವಾಮೀಜಿ” ಪದದ ಕ್ಷಿತಿಜ ಮತ್ತು ವಿಸ್ತಾರವನ್ನು ಹೆಚ್ಚಿಸಿದರು. ಅವರು ಸ್ವಾಮಿತ್ವವನ್ನು ಸರಳೀಕರಣದ ವಸ್ತು ಹಾಗೂ ವೇದಿಕೆಯಾಗಿಸಿದರು.

ಸಿದ್ಧೇಶ್ವರ ಶ್ರೀಗಳು ಸರಳರೇಖೆಯಂತೆ ಇದ್ದರು. ಅವರು ನೇರ, ನೇರವಾಗಿ ಮತ್ತು ಎತ್ತರ ಎತ್ತರವಾಗಿ ಬೆಳೆದರು. ಅವರು ವಕ್ರರೇಖೆಯಂತೆ ಅತ್ತ ಇತ್ತ ಮತ್ತು ಅಲ್ಲಿ ಇಲ್ಲಿ ತಮ್ಮನ್ನು ವಿಸ್ತರಿಸಿಕೊಳ್ಳಲಿಲ್ಲ.

ಶ್ರೀಗಳು ಭಾರತೀಯ ಹಾಗೂ ಪಾಶ್ಚಿಮಾತ್ಯ ದರ್ಶನ ಹಾಗೂ ತತ್ವಶಾಸ್ತ್ರಗಳ ಕೂಡಲಸಂಗಮ. ಅವರು ಭಾರತೀಯ ತತ್ವಶಾಸ್ತ್ರದ ಆಮೂಲಾಗ್ರ ಅಧ್ಯಯನ ಮತ್ತು ಪಾಶ್ಚಿಮಾತ್ಯ ತತ್ವ ಜ್ಞಾನದ ಆಪಾದಮಸ್ತಕ ಅಧ್ಯಯನ ಮಾಡಿದ್ದರು. ಅವರು ಭಾರತೀಯ ದಾರ್ಶನಿಕರ ಹಾಗೆ ಪಾಶ್ಚಿಮಾತ್ಯ ದಾರ್ಶನಿಕರನ್ನೂ ಆಪ್ತವಾಗಿಸಿಕೊಂಡಿದ್ದರು. ಪೌರ್ವಾತ್ಯವೇ ಇರಲಿ, ಪಾಶ್ಚಿಮಾತ್ಯವೇ ಇರಲಿ, ಯಾವುದೇ ವಿಷಯವನ್ನು ತೆಗೆದುಕೊಂಡರೂ ಅದರಲ್ಲಿ ಅವರದು ಪ್ರಭುತ್ವಪೂರ್ಣ ವಕ್ತವ್ಯ ಮತ್ತು ವಿಶ್ಲೇಷಣೆ.

ಸಿದ್ಧೇಶ್ವರ ಶ್ರೀಗಳು ಅಕ್ಷರಪ್ರಿಯರು. ಅವರ ಅಕ್ಷರಪ್ರೇಮವದು ಅನಂತ. 

ಅವರು ಪುಸ್ತಕ ಪ್ರಿಯರು. ಅವರ ಪೂಜೆ ಎಂದರೆ ಅದು, ಓದು ಮತ್ತು ಓದು!!

ಹನ್ನೆರಡನೆಯ ಶತಮಾನದ ಶರಣರಿಗೆ ಕಾಯಕವೇ ಕೈಲಾಸವಾಗಿದ್ದ ಹಾಗೆ ಸಿದ್ಧೇಶ್ವರರಿಗೆ ಓದೇ ಕೈಲಾಸವಾಗಿತ್ತು; ಮತ್ತದುವೇ ಅವರ ಕೈವಲ್ಯವಾಗಿತ್ತು. ಸಿದ್ಧೇಶ್ವರ ಶ್ರೀಗಳು “ಜ್ಞಾನಾದೇವ ತು ಕೈವಲ್ಯಮ್” ಎಂಬ ಉಪನಿಷದ್ವಾಣಿಯನ್ನು ಅಕ್ಷರಶಃ ಸಾಕ್ಷಾತ್ಕರಿಸಿಕೊಂಡಿದ್ದರು. 

ಶ್ರೀಗಳಿಗೆ ಅವರ ಓದೇ ಗಂಟೆ, ಅವರ ಓದೇ ಗುಗ್ಗುಳ; ಓದೇ ಅವರ ಧೂಪ. ಓದೇ ಅವರ ದೀಪ. ಪುಸ್ತಕದಲ್ಲಿನ ಅಕ್ಷರಗಳೇ ಅವರ ಮಂತ್ರಗಳು. ಇದು ಅವರ ಪೂಜಾವೈಭವ. ಪೂಜ್ಯರ ಪೂಜೆ ಸದ್ದು ಮಾಡುತ್ತಿರಲಿಲ್ಲ. ಏಕೆಂದರೆ ಅಲ್ಲಿ ಗಂಟೆ, ಜಾಗಟೆಗಳಿರುತ್ತಿರಲಿಲ್ಲ. ಅವರದು ಸದ್ದು, ಗದ್ದಲವಿಲ್ಲದ ಪುಸ್ತಕಪೂಜೆ ಮತ್ತು ಮಸ್ತಕ ಪೂಜೆ. 

ಸಿದ್ಧೇಶ್ವರ ಶ್ರೀಗಳು ತಮ್ಮ ಬಾಲ್ಯದಲ್ಲಿ ತುಂಬ ಭಾವುಕರು. ಅವರು ಪರಮ ಆಸ್ತಿಕರು. ಆಗ ಅವರಿಗೆ ಸಾಕಾರವೇ ದೈವ. ಅವರು ದಿನ, ದಿನಗಳವರೆಗೆ, ಗಂಟೆ ಗಂಟೆಗಳವರೆಗೆ, ಗುಡಿ, ದೇವಸ್ಥಾನಗಳಲ್ಲಿನ ಸ್ಥಾವರಲಿಂಗಗಳನ್ನು ಅಪ್ಪಿಕೊಂಡು ಕುಳಿತುಕೊಳ್ಳುತ್ತಿದ್ದರಂತೆ!! (ಪ್ರಸ್ತುತ ಪುಸ್ತಕದಲ್ಲೂ ಅದರ ಪ್ರಸ್ತಾಪವಿದೆ.) ಮುಂದೆ ಬೆಳೆದಂತೆಲ್ಲ ಅವರ ಜ್ಞಾನದ ಬಲವು ಅವರನ್ನು ಸ್ಥಾವರದಿಂದ ಜಂಗಮಕ್ಕೆ ಕರೆತಂದಿತು. 

ಮುಂದಿನ ದಿನಗಳಲ್ಲಿ ಸಾಕಾರಪ್ರಿಯರಾಗಿದ್ದ ಅವರು ನಿರಾಕಾರಪ್ರಿಯರಾಗುತ್ತಾರೆ. ನಿರಾಕಾರದ ವಕ್ತಾರರಾಗುತ್ತಾರೆ.

ಸಿದ್ಧೇಶ್ವರರು ನಮ್ಮ ಹಿಂದೂ ಫಿಲಾಸಫಿಯಂತೆ ಸಾಕಾರದಿಂದ ಶುರುವಾಗಿ ನಿರಾಕಾರದಲ್ಲಿ  ನಿಂತುಕೊಳ್ಳುತ್ತಾರೆ. 

“ಅದಃ ಪೂರ್ಣಂ, ಇದಂ ಪೂರ್ಣಂ, ಪೂರ್ಣಾತ್ ಪೂರ್ಣಮುದಚ್ಯತೇ” – “ಅದೂ ಪೂರ್ಣ, ಇದೂ ಪೂರ್ಣ” - ವಸ್ತುಸ್ಥಿತಿ ಮತ್ತು ವಾಸ್ತವ ಸ್ಥಿತಿ ಹೀಗಿರುವಾಗ “ನಾನೇಕೆ ಅಪೂರ್ಣನಾಗಿ ನಿಂತುಕೊಳ್ಳಬೇಕು? ನಾನೇಕೆ ಪೂರ್ಣನಾಗಬಾರದು?” ಎಂದು ಅವರು ತಮ್ಮನ್ನೇ ತಾವು ಕೇಳಿಕೊಂಡು ಬದುಕಿದವರು. ಇದು ಕಾರಣ, ಅವರ ನಡೆ ಯಾವಾಗಲೂ ಪೂರ್ಣದೆಡೆಗೆ. ಅವರ ನಡಿಗೆ ಪೂರ್ಣತ್ವದೆಡೆಗೆ!! 

ಅವರು ರಾಷ್ಟ್ರ ಕವಿ ಕುವೆಂಪುರವರು ಹೇಳುವ ಹಾಗೆ ವಿಶ್ವಪಥದ ಪಥಿಕರೂ ಅಹುದು; ಅವರು ಪೂರ್ಣಪಥದ ಪೂರ್ಣ ಪ್ರಮಾಣದ ಪಥಿಕರು ಕೂಡ ಅಹುದು. 

“ಪೂಜ್ಯರಿಗೆ ಜೇಬಿರಲಿಲ್ಲ” ಎಂಬ ಮಾತಿದು ಅವರ ಮರಣೋತ್ತರ ಕಾಲದಲ್ಲಿ ಬಹುಚರ್ಚಿತ ವಿಷಯ. ಅಹುದು, ಪೂಜ್ಯರಿಗೆ ಜೇಬಿರಲಿಲ್ಲ. ಏಕೆಂದರೆ, ಬಹುಮುಖ್ಯವಾಗಿ ಅವರಿಗದು ಬೇಕಿರಲಿಲ್ಲ. ಆಸೆ, ಆಕಾಂಕ್ಷೆಗಳನ್ನು ಕಟ್ಟಿಕೊಂಡು ಬದುಕುವವರಿಗೆ ಜೇಬೂ ಬೇಕು, ಜೋಳಿಗೆಯೂ ಬೇಕು.

“ಸ್ಕೂಲು, ಕಾಲೇಜುಗಳನ್ನು ಕಟ್ಟಬೇಕು” ಎನ್ನುವವರಿಗೆ ಜೇಬು ಬೇಕು. ಪಾಠಶಾಲೆ, ಪ್ರಯೋಗಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎನ್ನುವವರಿಗೆ ಜೇಬು ಬೇಕು. ಸಿದ್ಧೇಶ್ವರ ಶ್ರೀಗಳಿಗೆ ಆ ವಿಷಯದಲ್ಲಿ ತಿಲಮಾತ್ರವೂ ಆಸೆಯಾಗಲಿ, ಆಸಕ್ತಿಯಾಗಲಿ, ಇರಲಿಲ್ಲ.

ಸಿದ್ಧೇಶ್ವರ ಶ್ರೀಗಳ ಹಾಗೆ, ಸ್ಕೂಲು, ಕಾಲೇಜುಗಳಲ್ಲಿ ಓದುವವರಿಗೆ ಮತ್ತು ವಿದ್ಯಾರ್ಥಿ ಹಾಗೂ ಶಿಕ್ಷಕ ಸಮುದಾಯದ ಬದುಕಿಗೆ ಪಾಠವಾಗಬೇಕು ಮತ್ತು ಪಠ್ಯವಾಗಬೇಕು ಎನ್ನುವವರಿಗೆ ಜೇಬೂ ಬೇಕಿರುವುದಿಲ್ಲ; ಜೋಳಿಗೆಯೂ ಬೇಕಿರುವುದಿಲ್ಲ. 

ಸಿದ್ಧೇಶ್ವರ ಶ್ರೀಗಳು ಕೋಟ್ಯಧೀಶರಲ್ಲ. ಅವರು ಪಾಠಾಧೀಶರು ಮತ್ತು ಪಠ್ಯಾಧೀಶರು!!

ಶ್ರೀ ಶ್ರೀಗಳೇ ಒಂದು ಪಾಠಶಾಲೆ. ಅವರೇ ಒಂದು ಗ್ರಂಥಾಲಯ ಮತ್ತು ಅವರೇ  ವಿಶ್ವವಿದ್ಯಾಲಯ. ಸಿದ್ಧೇಶ್ವರ ಶ್ರೀಗಳು ಬಸವಣ್ಣನವರ ಹಾಗೆ ತಲೆ ಬಾಗಿ ಕೈಮುಗಿದು ಬದುಕಿದವರು. ಅವರೆಂದೂ “ಕಳಬೇಡ, ಕೊಲಬೇಡ, ಮುನಿಯಬೇಡ” ಎಂಬ ಈ ಬಸವನೀತಿಸಂಹಿತೆಯನ್ನು ಉಲ್ಲಂಘಿಸಲಿಲ್ಲ. ಅವರು ತಮ್ಮನ್ನು ತಾವು ‘ಸಿ’ ಎಂದು ಗುರುತಿಸಿಕೊಳ್ಳುತ್ತಿದ್ದರು. 

‘ಸಿ’ ಇದು ಅವರ ಅಂಕಿತನಾಮ. 

ಅವರು ತಮ್ಮ ಹಸ್ತಾಕ್ಷರ ಮತ್ತು ಹೆಸರನ್ನು ಉದ್ದವಾಗಿಸಿಕೊಳ್ಳಲಿಲ್ಲ. ಅವರು ಹೆಸರಲ್ಲಿ ವಾಮನಮೂರ್ತಿ; ವಿಸ್ತಾರದಲ್ಲಿ ಅವರು ಉರುಗಾಯ ಮತ್ತು ಉರುಕ್ರಮ!!

ಸಿದ್ಧೇಶ್ವರ ಶ್ರೀಗಳು ಹೊಟ್ಟೆ ತುಂಬ ನಗುತ್ತಿದ್ದರು. ಅವರು ಮಗುವಿನಂತೆ ನಗುತ್ತಿದ್ದರು. ಅವರದು ನಿರ್ಮಲ ನಗು. ಅವರು ನಕ್ಕು ನಕ್ಕು ಹಗುರಾಗುತ್ತಿದ್ದರು. 

ಸಂತನ ಆ ಮುಕ್ತ ಮುಕ್ತ ನಗೆಯಲ್ಲಿ ವಸಂತದ ಸಂಭ್ರಮ ಇರುತ್ತಿತ್ತು.

ಸಿದ್ಧೇಶ್ವರ ಶ್ರೀಗಳ ಪ್ರವಚನವನ್ನು ಕೇಳಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನಗಳು ಸೇರುತ್ತಿದ್ದರು. ಶ್ರೀಗಳವರ ಪ್ರವಚನಗಳು ವಿದ್ವತ್ಪೂರ್ಣ ಪ್ರವಚನಗಳು ಅಲ್ಲವೇ ಅಲ್ಲ. ಅವರ ಪ್ರವಚನಗಳು ವಿದ್ವತ್ಪೂರ್ಣವಾಗಿದ್ದರೆ ಅವುಗಳಿಗೆ ಲಕ್ಷ ಲಕ್ಷ ಜನ ಸೇರುವುದು ಸಾಧ್ಯವಾಗುತ್ತಿತ್ತಾ? ಅವರ ಪ್ರವಚನಗಳು ಅನುಭವಪೂರ್ಣ!! ವಿದ್ವತ್‌ಪ್ರವಚನಗಳು “ಇನ್‌ಡೋರ್ ಸ್ಟಫ್” ಅಷ್ಟೇ!! ಅವು “ಔಟ್‌ಡೋರ್ ಸ್ಟಫ್” ಅಲ್ಲವೇ ಅಲ್ಲ.

ಶ್ರೀಗಳ ಪ್ರವಚನಗಳು ಸಾಮಾನ್ಯ, ಅತಿಸಾಮಾನ್ಯನಿಗೂ ಅರ್ಥವಾಗುವಂಥ ಸರಳಭಾಷೆಯಲ್ಲಿ ಇರುತ್ತಿದ್ದವು. ಸಿದ್ಧೇಶ್ವರ ಶ್ರೀಗಳ ಮಾತನ್ನು ಕೇಳಲು ಕಾಮನ್ ಮ್ಯಾನ್‌ನಿಂದ ಮೊದಲುಮಾಡಿಕೊಂಡು ಕಾರ್ಪೋರೇಟ್ ಜಗತ್ತಿನ ಅತಿರಥ, ಮಹಾರಥರು, ಕುತೂಹಲದಿಂದ ಕಾದುಕೊಂಡಿರುತ್ತಿದ್ದರು. ಶ್ರೀಗಳ ಮಾತುಗಳನ್ನು ಹಳ್ಳಿಯ ಹೈದನಿಂದ ಮೊದಲುಮಾಡಿಕೊಂಡು ದಿಲ್ಲಿ ಪ್ರಭುಗಳುವರೆಗೆ ಎಲ್ಲರೂ ಸಮಾನ ಮನಸ್ಕರಾಗಿ ಕೇಳಿಸಿಕೊಳ್ಳುತ್ತಿದ್ದರು.

ಸಿದ್ಧೇಶ್ವರರ ಮಾತುಗಳಲ್ಲಿ ಆಡಂಬರವಿರುತ್ತಿರಲಿಲ್ಲ, ಆಕ್ರೋಶವಿರುತ್ತಿರಲಿಲ್ಲ; ಅತಿಶಯವಿರುತ್ತಿರಲಿಲ್ಲ ಮತ್ತು ಅತಿಶಯೋಕ್ತಿಗಳಿರುತ್ತಿರಲಿಲ್ಲ. 

ಅವರ ಮಾತುಗಳು ರಾಗದ್ವೇಷದಿಂದ ಮುಕ್ತ ಮುಕ್ತವಾಗಿರುತ್ತಿದ್ದವು. 

ಅವರ ಮಾತುಗಳಲ್ಲಿ ಬದುಕಿನ ಅನಾವರಣದೊಂದಿಗೆ ನಿಸರ್ಗದ ಪೂಜೆ ಇರುತ್ತಿತ್ತು.

ಶ್ರೀಗಳು ಜನಗಳಿಗೆ ಆಪ್ತವಾಗಿ ಬದುಕುವುದನ್ನು ಕಲಿಸುತ್ತಿದ್ದರು.  

ಅವರು ಜನರಿಗೆ ಸಣ್ಣ ಸಣ್ಣ ಕಥೆಗಳನ್ನು ಹೇಳಿ ಆ ಸಾಮಾನ್ಯ ಕಥೆಗಳ ಹಿಂದೆ ಇರುವ ನೀತಿಸಂಹಿತೆಯನ್ನು ಅನಾವರಣಗೊಳಿಸಿ ಅದನ್ನು ಜನಗಳ ನಿತ್ಯದ  ಬದುಕಿನೊಂದಿಗೆ ಸಮೀಕರಿಸುತ್ತಿದ್ದರು. ಅವರ ಪ್ರತಿಯೊಂದು ಮಾತು ಬದುಕು, ಮತ್ತದರ ಬವಣೆಯನ್ನು ವಿಶ್ಲೇಷಿಸುತ್ತಿತ್ತು.

 ಇದು ಕಾರಣ, ಜಾತಿಬೇದ, ವಯೋಬೇದ, ಲಿಂಗಬೇದ, ಪಕ್ಷಬೇದ, ವರ್ಗಬೇದÀಗಳನ್ನು ಲೆಕ್ಕಿಸದೆ ಅವರ ಪ್ರವಚನಗಳು ಬಹುಸಂಖ್ಯೆಯಲ್ಲಿ ಜನಗಳನ್ನು ಆಕರ್ಷಿಸುತ್ತಿದ್ದವು. 

ಅವರ ಪ್ರವಚನವೆಂದರೆ ಅದೊಂದು ಹಬ್ಬ!!

ನಾವು ಗಮನಿಸಿದ ಹಾಗೆ, ಪೂಜ್ಯರು ತಮ್ಮ ಬದುಕಿಗೆ “ಸಾಕು” ಹಾಗೂ “ಬೇಡ” ದೀಕ್ಷೆಯನ್ನು ಕೊಟ್ಟುಕೊಂಡಿದ್ದರು.

ಅವರೆಂದೂ “ಬೇಕು, ಬೇಕು” ಎಂದವರಲ್ಲ. ಕೊನೆಗಾಲದಲ್ಲೂ ಹಾಗೇನೇ!! ಅವರು “ಬೇಕು” ಎಂದರೆ ಇನ್ನೊಂದಷ್ಟು ದಿನ ಬದುಕ ಬಹುದಾಗಿತ್ತೇನೋ? ಅವರು ತಮ್ಮ ಬದುಕಿಗೂ ಕೂಡ ‘ಸಾಕು’ ದೀಕ್ಷೆಯನ್ನು ಕೊಟ್ಟುಕೊಂಡು ಬಹುಬೇಗನೇ ನಮ್ಮಗಳ ಮಧ್ಯದಲ್ಲಿಂದ ಎದ್ದುಹೋದರು. 

ಸಿದ್ಧರು, ಬುದ್ಧರು, ಪ್ರಸಿದ್ಧರು ಮತ್ತೊಮ್ಮೆ ಹುಟ್ಟಿಬರಬಹುದೇನೋ? 

ಆದರೆ ಸಿದ್ಧೇಶ್ವರರು ಮತ್ತೊಮ್ಮೆ ಹುಟ್ಟಿಬರುವುದಿಲ್ಲ. ಏಕೆಂದರೆ ಅವರು ಸಾಕೆಂದುಕೊಂಡು ಹೋದವರು. ಯಾರು ಎಷ್ಟೇ, ಅದೆಷ್ಟೇ ಅವಲತ್ತುಕೊಂಡರೂ, ದಯನೀಯವಾಗಿ ಬೇಡಿಕೊಂಡರೂ ಅವರು ಮತ್ತೊಮ್ಮೆ ಹುಟ್ಟಿಬರುವುದಿಲ್ಲ. 

ಅವರು ಇದೀಗ ಜಗದ್ಗುರು ಶ್ರೀ ಶಂಕರಾಚಾರ್ಯರು ಹೇಳುವ ಹಾಗೆ, “ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ” ಎಂಬ ಮಾಲಿಕೆಯನ್ನು ಸೇರಿಕೊಂಡಾಗಿದೆ. 

ಸಿದ್ಧೇಶ್ವರ ಶ್ರೀಗಳು ಈಗ ನಮ್ಮೊಂದಿಗೆ ಇಲ್ಲವೆನ್ನುವ ಹಾಗಿಲ್ಲ. ಈಗ ಅವರು  ದೇಹದಲ್ಲಿ ಇಲ್ಲ ಅಷ್ಟೇ. ಅವರು ದರ್ಶನವಾಗಿ, ದಾರ್ಶನಿಕರಾಗಿ, ತತ್ವವಾಗಿ, ತತ್ವಜ್ಞಾನಿಯಾಗಿ; ನಾದ, ಬಿಂದು, ಕಲಾತೀತರಾಗಿ, ವ್ಯೋಮಕಾಯರಾಗಿ ನಮ್ಮಗಳ ಮಧ್ಯ ಬದುಕಿದ್ದಾರೆ.  

ಏಕೆಂದರೆ ಅವರೊಂದು ಮುಗಿಯದ ಅಸ್ತಿತ್ವ. ಅವರೊಂದು ಕೊನೆಗೊಳ್ಳದ ಪಯಣ. ಅವರೊಂದು ತಲ್ಲಣ, ತಳಮಳಗಳಿಗೆ ಒಳಗಾಗದ ಇರುವಿಕೆ. 

ಅವರ ಅಸ್ಥಿಗಳನ್ನು ವಿಸರ್ಜಿಸಬಹುದು. ಆದರೆ ಅವರ ಅಸ್ತಿತ್ವವನ್ನು ವಿಸರ್ಜಿಸುವುದಕ್ಕೆ ಆಗುವುದಿಲ್ಲ. 

ಸಿದ್ಧೇಶ್ವರ ಶ್ರೀಗಳ ವಿಷಯದಲ್ಲಿ ತುಂಬ ತುಂಬಾನೇ ಕಠಿಣವಾದ ಕೆಲಸವೆಂದರೆ, ಅವರನ್ನು ವ್ಯಾಖ್ಯಾನಿಸೋದು, ಅವರನ್ನು ವಿಮರ್ಶಿಸೋದು, ಮತ್ತವರನ್ನು ವಿಶ್ಲೇಷಿಸೋದು ಹಾಗೂ ಅವರನ್ನು ಪದಬಂಧದಲ್ಲಿ ಬಂಧಿಸಿ ಇಡೋದು!!

ಸಿದ್ಧೇಶ್ವರ ಶ್ರೀಗಳು ವ್ಯಾಖ್ಯೆ, ವ್ಯಾಖ್ಯಾನಗಳಿಗೆ ಸಿಕ್ಕೋದಿಲ್ಲ. ಇದು ಕಾರಣ, ಅವರನ್ನು ವ್ಯಾಖ್ಯಾನಿಸಲಿಕ್ಕೆ ಹೋಗಬಾರದು. ಅವರನ್ನು ವಿಮರ್ಶಿಸಲಿಕ್ಕೆ ಹೋಗಬಾರದು. ಏಕೆಂದರೆ ಅವರು ಅದರಾಚೆಯವರು.

ಅಲ್ಲಮಪ್ರಭುಗಳು ಹೇಳುವ ಹಾಗೆ, ಅವರು ಅತ್ತತ್ತ, ಅತ್ತತ್ತ; 

ಬಯಲತ್ತ, ನಿರ್ವಯಲಿನತ್ತ್ತ!!

ಪ್ರಸ್ತುತ “ಯೋಗಸ್ಥಃ” ಗ್ರಂಥದ ಕರ್ತೃಗಳಾದ ರಾಜಶೇಖರ ಮಠಪತಿಯವರು ಸಿದ್ಧೇಶ್ವರ ಶ್ರೀಗಳ ಪ್ರಭಾ ಮತ್ತು ಪ್ರಭಾವಳಿಯಲ್ಲಿ ಬೆಳೆದವರು. ಅವರ ತಂದೆ ಗಂಗಯ್ಯರವರು ಕೂಡ ಸಿದ್ಧೇಶ್ವರ ಶ್ರೀಗಳ ಆಪ್ತ ಒಡನಾಟದಲ್ಲಿದ್ದವರು. ತಂದೆಯAತೆ ಮಗ!! ರಾಜಶೇಖರರವರು ತಂದೆಗೆ ತಕ್ಕ ಮಗ. 

ರಾಜಶೇಖರ ಮಠಪತಿಯವರು ಅವರ ತಂದೆ ಗಂಗಯ್ಯರವರ ಸಿದ್ಧೇಶ್ವರ ಭಕ್ತಿಯ ಮುಂದುವರಿದ ಭಾಗ!!

ರಾಜಶೇಖರ ಮಠಪತಿಯವರು ತಮ್ಮ ತಂದೆಯನ್ನು ಸೇರಿಕೊಂಡು ರಾಗವಾಗಿದ್ದಾರೆ; ಮತ್ತವರು “ರಾಗಂ” ಆಗಿದ್ದಾರೆ. ಸಿದ್ಧೇಶ್ವರ ಶ್ರೀಗಳ ವಿಷಯದಲ್ಲಿ ರಾಗಂರವರು ತುಂಬ “ಪೊಜೆಸ್ಸಿವ್” ಆಗಿದ್ದಾರೆ. 

ರಾಗಂರವರಿಗೆ ಸಿದ್ಧೇಶ್ವರ ಶ್ರೀಗಳ ವಿಷಯದಲ್ಲಿ ಅರ್ಜುನ ಏಕಾಗ್ರತೆ ಇದೆ. 

ರಾಗಂ ಅವರನ್ನು ಸಿದ್ಧೇಶ್ವರ ಶ್ರೀಗಳು ಆಪಾದಮಸ್ತಕ ಆವರಿಸಿಕೊಂಡು ಬಿಟ್ಟಿದ್ದಾರೆ. ಒಂದರ್ಥದಲ್ಲಿ, ಈಶಾವಾಸ್ಯದ ಹಾಗೆ ರಾಗಂರವರು “ಸಿದ್ಧೇಶ್ವರಾವಾಸ್ಯ”. 

ರಾಗಂರವರು ತಮ್ಮ ಎಲ್ಲ ಸಾಧನೆಗಳ ಶ್ರೇಯಸ್ಸನ್ನು ನಿರ್ವ್ಯಾಜವಾಗಿ ಸಿದ್ಧೇಶ್ವರರಿಗೆ ಅರ್ಪಿಸುತ್ತಾರೆ. ಇದು ಭಕ್ತನೊಬ್ಬ ಗುರುವಿಗೆ ನೀಡುವ ಬಹುದೊಡ್ಡ ಗುರುಕಾಣಿಕೆ ಮತ್ತು ಗುರುದಕ್ಷಿಣೆ.

ಗ್ರಂಥವಿದು ರಾಗಂರವರ ಆತ್ಮಕಥನ ಮತ್ತು ಅನುಭವ ಕಥನದ ಕೂಡಲಸಂಗಮದಂತಿದೆ. 

ಈ ಗ್ರಂಥದಲ್ಲಿ ಬರೀ ಯೋಗಸ್ಥನ ಗುಣಗಾನವಿಲ್ಲ. ಗ್ರಂಥವಿದು ಓದುಗರಿಗೊಂದು ಸಾಹಿತ್ಯದ ಯಾತ್ರೆ ಮಾಡಿಸುತ್ತದೆ. 

ಈ ಸಾಹಿತ್ಯ ಯಾತ್ರೆ, ಜಾತ್ರೆಯಲ್ಲಿ ಆಂಗ್ಲ, ಕನ್ನಡ, ನವ್ಯ, ಜನಪದ, ಗದ್ಯ, ಪದ್ಯವೆಂಬ ಭೇದಭಾವವಿಲ್ಲ. ಸಾಹಿತ್ಯದ ವಿವಿಧ ಆಯಾಮಗಳ ನವಿರಾದ ವಿಶ್ಲೇಷಣೆ ಇದೆ. ಇಲ್ಲಿರುವುದೆಲ್ಲವೂ ಆಪ್ತ ಮತ್ತು ಪರಮಾಪ್ತ. ಲೇಖಕರ ಗ್ರಂಥದ ತುಂಬೆಲ್ಲ ಆಪ್ತ ಮತ್ತು ಆಸಕ್ತಿದಾಯಕ ವಿಷಯಗಳಿವೆ.

ಗ್ರಂಥದಲ್ಲಿ ಪ್ರಸ್ತಾಪಗೊಂಡ ಎಲ್ಲ ವಿಷಯಗಳ ಮೇಲೂ ಸಿದ್ಧೇಶ್ವರರ ಪ್ರಭಾವವಿದೆ. 

ಈ ಗ್ರಂಥಕ್ಕೆ ರಾಗಂರವರು “ಯೋಗಸ್ಥಃ” ಎಂದು ನಾಮಕರಣ ಮಾಡಿದ್ದಾರೆ.

ಇದರ ಕೆಳಗೆ “ಸಂತೆಯಿಂದ ಸಂತನೆಡೆಗೆ” ಎಂಬ ಗಮನಾರ್ಹ ಉಲ್ಲೇಖವಿದೆ.

“ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |

ಸಿದ್ಧ್ಯ ಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ||’’ 

ಇದು ಗೀತೆಯಲ್ಲಿನ ೨ನೇ ಅಧ್ಯಾಯದ ೪೮ನೇ ಶ್ಲೋಕ. ಈ ಶ್ಲೋಕದಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ “ಆಸಕ್ತಿಯನ್ನು ತ್ಯಾಗಮಾಡಿ, ಸಿದ್ಧಿ ಮತ್ತು ಅಸಿದ್ಧಿಗಳನ್ನು ಸಮವೆಂದು ಭಾವಿಸಿ ಯೋಗದಲ್ಲಿದ್ದುಕೊಂಡೇ ಕರ್ಮ ಮಾಡು” ಎಂದು ಹೇಳುತ್ತಾನೆ. 

ಸಿದ್ಧೇಶ್ವರ ಶ್ರೀಗಳು ತಮ್ಮ ಜೀವನದುದ್ದಕ್ಕೂ ಹೇಳಿದ್ದು ಇದನ್ನೇ!! ಅವರು ಯಾವಾಗಲೂ ಆಸಕ್ತಿಯನ್ನು ಕಳೆದುಕೊಂಡು ಬದುಕು. ಅಂಟಿಸಿಕೊಂಡು ಬದುಕಬೇಡ” ಎಂದು  ಹೇಳುತ್ತಿದ್ದರು. 

ಆಸಕ್ತಿಯನ್ನು ತ್ಯಾಗ ಮಾಡಿದಾಗ ಯೋಗವದು ತಾನೇ ತಾನಾಗಿ ಸಮನಿಸುತ್ತದೆ. 

ರಾಗಂರವರು ಸಾಹಿತ್ಯಲೋಕದಲ್ಲಿ ಈಗಾಗಲೇ ಬಹುದೂರದ ದಾರಿಯನ್ನು ಕ್ರಮಿಸಿದ್ದಾರೆ. ಸಾಹಿತ್ಯಕ್ಷೇತ್ರದಲ್ಲಿ ನೂರು ಕೃತಿಗಳನ್ನು ಬರೆದು ದಾಖಲಿಸಿದ ಅವರ ಸಾಧನೆ ನಿಜಕ್ಕೂ ಪ್ರಶಂಸನೀಯ ಮತ್ತು ಪುನಃ ಪುನಃ ಅಭಿನಂದನೀಯ.

ರಾಗಂರವರು ಬರೀ ತಮ್ಮ ಮನೆಯನ್ನು ಮಾತ್ರವಲ್ಲ, ಅವರು ತಮ್ಮ ಮೈ ಮತ್ತು ಮನಸ್ಸು ಎರಡನ್ನೂ ಸಾಹಿತ್ಯವಾಗಿಸಿಕೊಂಡಿದ್ದಾರೆ ಅವರು ತಮ್ಮ ಅವಿಶ್ರಾಂತ ಬದುಕಿನ ಪ್ರತಿಯೊಂದು ಕ್ಷಣವನ್ನೂ ಸಾಹಿತ್ಯ ಮತ್ತು ಸಾಹಿತ್ಯ ಚಿಂತನದೊಂದಿಗೆ ಓತಪ್ರೋತಗೊಳಿಸಿಕೊಂಡಿದ್ದಾರೆ. 

ರಾಗಂರವರಿಗೆ ಭಾಷೆಯ ಮೇಲೆ ಹಿಡಿತವಿದೆ. ಅವರು ಆಂಗ್ಲಸಾಹಿತ್ಯವನ್ನು ಆಳವಾಗಿ ಓದಿದ್ದಾರೆ. ಅವರ ಮೇಲೆ ಆಂಗ್ಲ ಕವಿ, ಚಿಂತಕ ಮತ್ತು ದಾರ್ಶನಿಕರ ಪ್ರಭಾವವಿದೆ. 

ಯೋಗಸ್ಥಃ ಗ್ರಂಥದಲ್ಲಿ ಅವರೊಂದು ಸಾಹಿತ್ಯದ ಜಾತ್ರೆಯನ್ನು ಮಾಡಿಬಿಟ್ಟಿದ್ದಾರೆ. 

ಗ್ರಂಥದಲ್ಲಿ ೩೦ ಲೇಖನಗಳಿವೆ. ಪ್ರತಿಯೊಂದು ಲೇಖನವೂ ವಿಭಿನ್ನ ಶೀರ್ಷಿಕೆಯೊಂದಿಗೆ ನಮ್ಮನ್ನೊಂದು ಸಾಹಿತ್ಯದ ರಸಲೋಕಕ್ಕೆ ಕರೆದೊಯ್ಯುತ್ತದೆ.

ಪ್ರತಿಯೊಂದು ಲೇಖನಕ್ಕೂ ಅನುಭವವೇ ಹಿನ್ನೆಲೆ. ಅನುಭವದ ಹಿನ್ನೆಲೆಯಲ್ಲಿ ನವಿರಾಗಿ ಗ್ರಂಥದ ಉದ್ದೇಶವು ವಿಸ್ತರಿಸಿಕೊಂಡಿದೆ. ಗ್ರಂಥದಲ್ಲಿನ ಶೀರ್ಷಿಕೆಗಳು ಓದುಗರನ್ನು ಅನಾಯಾಸವಾಗಿ ಗ್ರಂಥವಿಷಯದತ್ತ ಆಕರ್ಷಿಸುತ್ತವೆ.

ಇಡೀ ಗ್ರಂಥವಿದು ಸಿದ್ಧೇಶ್ವರರಿಂದ ಶುರುವಾಗಿ ಸಿದ್ಧೇಶ್ವರರಿಂದಲೇ ಮುಗಿಯುತ್ತದೆ.

ಗ್ರಂಥದಲ್ಲಿ ಸಾಹಿತ್ಯದ ಭೂರಿ ಭೂರಿ ರಸಭೋಜನವಿದೆ. ಗ್ರಂಥದಲ್ಲಿ ಆಡುಮಾತಿನ ಸವಿ ಇದೆ. ಉತ್ತರ ಕರ್ನಾಟಕದ ಗಡಸುಭಾಷೆಯ ಗಟ್ಟಿ ಸೊಗಡಿದೆ. ಗ್ರಂಥದ ತುಂಬೆಲ್ಲ ಲೇಖಕರ ಮನದಾಳದ ಮಾತುಗಳಿವೆ. 

ಲೇಖಕರು ತಮ್ಮ ಪ್ರಾಥಮಿಕ ಶಾಲಾದಿನಗಳಿಂದ ಮೊದಲುಮಾಡಿಕೊಂಡು ಇದುವರೆಗೆ ಅವರ ಮೇಲೆ ಮೇಲೆ ಪ್ರಭಾವ ಬೀರಿದ ಎಲ್ಲರನ್ನೂ ಅಂದರೆ ಶಾಲಾಗುರುಗಳು, ಕವಿ, ಲೇಖಕರು, ಸಾಹಿತಿಗಳು, ಪ್ರಾಧ್ಯಾಪಕರು, ಅಕ್ಕಪಕ್ಕದವರು, ವಿಮರ್ಶಕರು, ವಿಶ್ಲೇಷಕರು - ಇವರನ್ನೆಲ್ಲ  ಸಮಯ, ಸಂದರ್ಭಗಳಿಗೆ ತಕ್ಕ ಹಾಗೆ ಅಲ್ಲಲ್ಲಿ ಉಲ್ಲೇಖಿಸಿದ್ದಾರೆ.  

ಗ್ರಂಥದ ತುಂಬೆಲ್ಲ ಲೇಖಕರು ತಮ್ಮ ಒಡನಾಟ, ಓಡಾಟಗಳ ಪ್ರಸ್ತಾಪ ಮಾಡಿದ್ದಾರೆ.

ರಾಗಂರವರು ಯಾವುದನ್ನೇ ಆಗಲಿ, ಅಷ್ಟೊಂದು ಸುಲಭವಾಗಿ ಒಪ್ಪಿಕೊಳ್ಳುವ ಮನಸ್ಥಿತಿಯವರಲ್ಲ. ಅವರು ಏನನ್ನೇ ಕಂಡರೂ ಸರಿ, ಅವರದನ್ನು ಒರೆಗೆ ಹಚ್ಚುತ್ತಾರೆ. ಒರೆಗೆ ಹಚ್ಚಿ ಒಪ್ಪಿತವಾದ ಮೇಲೆ ಅವರದನ್ನು ಜನ ಸನ್ನಿಧಾನಕ್ಕೆ ಕೊಂಡೊಯ್ಯುತ್ತಾರೆ.  ಯಾವುದೇ ವಿಷಯವಿರಲಿ ಅದನ್ನು ಅವರು ದಡಮುಟ್ಟಿಸುವವರೆಗೆ ತಮ್ಮ ಅಕ್ಷರಯಾನವನ್ನು ನಿಲ್ಲಿಸುವುದಿಲ್ಲ.

“ಯೋಗಸ್ಥಃ” ಇದು ಬರೀ ಕೃತಿಯಲ್ಲ; ಇದೊಂದು ಶ್ರುತಿ. 

ಏಕೆಂದರೆ ಇದನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ; ಮತ್ತು ಇದನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಇದೊಂದು ಹೃದ್ಯಗ್ರಂಥ. ಇದೊಂದು ಮನಸ್ಸಿನ ಆಳಕ್ಕೆ ನೇರವಾಗಿ ಇಳಿಯುವ ಅನುಭವಮಂಟಪ. ರಾಗಂರವರು ತಾವು ತಿಳಿದುಕೊಂಡದ್ದನ್ನು ಮತ್ತು ತಾವು ಅರ್ಥೈಸಿಕೊಂಡದ್ದನ್ನು ಆಪ್ತವಾಗಿ ಮತ್ತು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.

ರಾಗಂರವರು ಪ್ರಭಾವೀ ಲೇಖಕರೂ ಅಹುದು. ಅವರು ಪರಿಣಾಮಕಾರಿ ವಾಗ್ಮಿಗಳೂಅಹುದು.

ಈ ನಾಡಿನ ಪ್ರಜ್ಞಾವಂತ ಸಾಹಿತಿಗಳಲ್ಲೊಬ್ಬರಾದ ಅವರು ತಮ್ಮನ್ನು ತಾವು ನಿರಂತರವಾಗಿ ಸಾಹಿತ್ಯಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯಸೇವೆ ಹಾಗೂ ಸಾರಸ್ವತಸೇವೆಯನ್ನು ನಾವು ಮುಕ್ತಕಂಠದಿಂದ ಪ್ರಶಂಸಿಸುತ್ತೇವೆ.

ಹಾಗೆಯೇ ಪ್ರಸ್ತುತ ಈ “ಯೋಗಸ್ಥಃ” ಗ್ರಂಥವು ಪ್ರತಿಯೊಬ್ಬ ಪ್ರಜ್ಞಾವಂತ ಓದುಗರ ಮೊದಲ ಆದ್ಯತೆಯಾಗಲಿ. 

ಕರ್ನಾಟಕದ ಮನೆ ಮನೆಯನ್ನೂ ಈ ಗ್ರಂಥ ತಲುಪಲಿ. ಲಕ್ಷಾಂತರ ಜನಗಳು ಈ ಕೃತಿಯನ್ನು ಓದಿ ಕೃತಕೃತ್ಯರಾಗಲಿ. 

ರಾಗಂರವರಿಂದ ವರುಷ ವರುಷಕ್ಕೂ, ಮಾಹೆ ಮಾಹೆಗೂ ಇದೇ ರೀತಿ ನಿತ್ಯೋತ್ಸವದ ಮಾದರಿಯಲ್ಲಿ ನಿರಂತರವಾಗಿ ಮತ್ತು ನಿರರ್ಗಳವಾಗಿ ಸಾಹಿತ್ಯಸೇವೆ ಮತ್ತು ಗ್ರಂಥರಚನಾ ಕಾರ್ಯ ನಡೆದುಕೊಂಡಿರಲಿ ಎಂದು ಹೇಳುತ್ತ ರಾಗಂರವರಿಗೆ ನಾವು ತುಂಬು ಹೃದಯದಿಂದ ಮತ್ತು ಹೃದಯಾಂತರಾಳದಿಂದ ಹದುಳ ಹಾರೈಸುತ್ತೇವೆ.

|| ಶಿವಂ ಭೂಯಾತ್ ||  

                                                       ಡಾ.  ಶಿವಾನಂದ ಶಿವಾಚಾರ್ಯ ಸ್ವಾಮಿಗಳು

                                                              ಹಿರೇಮಠ, ತಪೋವನ, ತುಮಕೂರು