Total Pageviews

Saturday, December 31, 2011

ಬಸವಳಿದ ಗ್ರೀಸ್ : ಬೆಳೆಯುತ್ತಿರುವ ಭಾರತ


 ದಿನಾಂಕ 31/12/2011 ರ ವರ್ಷದ ಕೊನೆಯ ದಿನ ಮೈಸೂರು ಮಾರ್ಗವಾಗಿ ಬೇಲೂರಿಗೆ ಬಂದಿದ್ದ ಗ್ರೀಸ್ ದೇಶದ ಮಹಿಳೆ ಓಲ್ಗಾ ಹಾಗೂ ಅವರ ಪತಿ ಡಿಮಿಟ್ರಿಯಸ್(ಮಿಮ್) ಬೇಲೂರಿನ ಖ್ಯಾತ ಸಾಹಿತಿಗಳು, ರಂಗ ಚಿಂತಕರು ಆದ ಡಾ.ರಾಜಶೇಖರ ಮಠಪತಿಯವರೊಂದಿಗೆ ಬದಲಾಗುತ್ತಿರುವ ಎರಡು ಮಹಾನ್ ದೇಶಗಳಾದ ಭಾರತ ಮತ್ತು ಗ್ರೀಸ್ಗಳ ಅನೇಕ ವಿದ್ಯಮಾನಗಳನ್ನು ಕುರಿತು ಚರ್ಚಿಸಿದರು. ಗ್ರೀಸ್ ದೇಶದಲ್ಲಿ ಜರ್ಮನ್ ಶಿಕ್ಷಿಯಾದ ಓಲ್ಗಾ, ಸ್ಪ್ಯಾನಿಷ್ ಶಿಕ್ಷಕನಾದ ಡಿಮಿಟ್ರಿಯಸ್, ಭಾರತದಲ್ಲಿ ಇಂಗ್ಲೀಷ ಶಿಕ್ಷಕರಾದ ಡಾ.ಮಠಪತಿ ಭಾಷಿಕ ಕಾರಣಗಳಿಂದಾಗಿ ವ್ಯಕ್ತಿ ಬೇರುಗಡಿತನಾಗುವ ತಲ್ಲಣಗಳನ್ನು ಕುರಿತು ಮುಖ್ಯವಾದ ಚರ್ಚೆಗಳನ್ನು ಮಾಡಿದರು. ಗ್ರೀಸ್ ಹಾಗೂ ಅವರ ಸುತ್ತಲಿನ ರಾಷ್ಟ್ರಗಳಲ್ಲಿ ಉಂಟಾಗಿರುವ ರಾಜಕೀಯ ಅರಾಜಕತೆ, ಮಾಧ್ಯಮಗಳ ಹೊಣೆಗೇಡಿತನ, ಇಸ್ಲಾಂದ ಮೂಲಭೂತತನ, ಹಾಗೂ ಅದು ಉಂಟುಮಾಡಿರುವ ಭೀತಿ, ಒಂದು ಕಾಲಕ್ಕೆ ಜಗತ್ತಿಗೇ ಮಾರ್ಗದರ್ಶಿಯಾಗಿದ್ದ ಅಥೆನ್ಸ್ದ ಅಧಃ ಪತನ, ಗ್ರೀಸ್ ದೇಶದಲ್ಲಿ ನಶಿಸುತ್ತಿರುವ ಶೈಕ್ಷಣಿಕ ಕಾಳಜಿ ಮತ್ತು ಅಲ್ಲಿಯ ಸರಕಾರದ ಬೇಜವಾಬ್ದಾರಿತನಗಳನ್ನು ಪ್ರಮುಖವಾಗಿ ಚರ್ಚಿಸಿದರು. ಒಂದು ದೇಶ ಎಂದರೆ ಪುಸ್ತಕ ಸಂಸ್ಕೃತಿ, ಒಂದು ಕಾಲಕ್ಕೆ ಇಡೀ ಯೂರೋಪಿಗಷ್ಟೇ ಅಲ್ಲ, ಪೂರ್ವದ ದೇಶಗಳಿಗೂ ಗ್ರಂಥ ಸಂಸ್ಕೃತಿಗೆ ಮಾದರಿಯಾಗಿದ್ದ ಗ್ರೀಸ್ ದೇಶ ಈಗ ಸಾಹಿತ್ಯ ಸೃಷ್ಠಿಯಲ್ಲಿ ಎಷ್ಟೊಂದು ಹಿಂದೆ ಉಳಿದಿದೆ ಹಾಗೂ ಸಾಹಿತಿಗಳ ಸ್ಥಿತಿ ಎಷ್ಟೊಂದು ಚಿಂತಾಜನಕವಾಗಿದೆ ಎನ್ನುವ ವಾಸ್ತವಗಳನ್ನು ಅವರು ಬಿಚ್ಚಿಟ್ಟರು. ಡಾ.ಮಠಪತಿ ಅವರು ಹೇಳಿದ ರಂಗ ಚಟುವಟಿಕೆಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಗ್ರೀಸ್ ದೇಶದ ಪುನರುತ್ಥಾನಕ್ಕೆ ಈಗ ಉಳಿದಿರುವ ಎಕೈಕ ದಾರಿ ರಂಗಭೂಮಿ ಎಂದು ಓಲ್ಗಾ ದಂಪತಿಗಳು ಉತ್ತರಿಸಿದರು.
 ಸಾಯಂಕಾಲದ ನಾಲ್ಕು ಗಂಟೆಯಿಂದ ಮಧ್ಯರಾತ್ರಿ ಹನ್ನೆರಡು ಗಂಟೆಯವರೆಗೆ ಡಾ.ಮಠಪತಿಯವರೊಂದಿಗಿದ್ದ ಈ ತಂಡ ಭಾರತದ ಶೈಕ್ಷಣಿಕ ಕ್ರಾಂತಿ, ಮುಕ್ತ ಮನಸ್ಸು, ಆತಿಥ್ಯದ ಪರಿ, ಸಾಮಾಜಿಕ ಸೌಖ್ಯ ಮತ್ತು ಈ ಶತಮಾನದಲ್ಲಿ ಭಾರತ ಬೆಳೆಯುತ್ತಿರುವ ರೀತಿಯನ್ನು ಮುಕ್ತವಾಗಿ ಹೊಗಳಿದರು. ಅಮೇರಿಕಾ, ಇಂಗ್ಲೆಂಡ್, ಪೆರು, ಉರುಗ್ವೆ, ದಕ್ಷಿಣ ಆಫ್ರಿಕಾಗಳನ್ನು ಸುತ್ತಿದ ಈ ಚಿಂತಕರು ಭಾರತವನ್ನು ನೋಡದೆ ಹೋದರೆ ಬಹುತೇಕ ಈ ಪ್ರಪಂಚವನ್ನು ಅವರು ತಪ್ಪಾಗಿ ಬಿಂಬಿಸುತ್ತಿದ್ದರು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಹೊಸ ವರ್ಷದ ಮೊದಲ ಕ್ಷಣವನ್ನು ಭಾರತದಲ್ಲಿ ಅತ್ಯಂತ ಆತ್ಮತೃಪ್ತಿಯಿಂದ ಅನುಭವಿಸಿದ ಈ ದಂಪತಿಗಳು ಇದು ವರ್ಷದುದ್ದಕ್ಕೂ ನಿರಂತರವಾಗಿರಲಿ ಎಂದು ಚೆನ್ನಕೇಶವನಲ್ಲಿ ಪ್ರಾರ್ಥಿಸಿದರು. 



Sunday, December 4, 2011

ನಾವು, ಸಿ.ಪಿ.ಕೆ ಅವರಿಗೊಂದು Sorry ಹೇಳಬೇಕೆ?


              

“ಈ ಸಿ.ಪಿ.ಕೆ ಯಾರು ಸರ್? ಪತ್ರಿಕೆಗಳಲ್ಲಿ, ಅಲ್ಲಿ-ಇಲ್ಲಿ ಇವರ ಸಣ್ಣ-ಪುಟ್ಟ ಕವನಗಳನ್ನು ಬಿಟ್ಟು ಮತ್ತೇನನ್ನು ನಾನು ನೋಡಿಯೇ ಇಲ್ಲ”. ಇವೆಲ್ಲವೂ ನನ್ನ ಆಲೋಚನೆಗೆ ಈಡು ಮಾಡಿತು. ನಿಜಕ್ಕೂ ಕನ್ನಡಿಗರಿಗೆ ಸಿ.ಪಿ.ಕೆ ಬಗ್ಗೆ ಎಷ್ಟು ಗೊತ್ತು? ಸಿ.ಪಿ.ಕೆ ಇಷ್ಟೊಂದು ಕೃತಿಗಳನ್ನು ಬರೆದವರೇ? ಎಂದು ಹೇಳಿ ನಮ್ಮ ಸಾರಸ್ವತ ಲೋಕ ಅದೇಕೇ ಅಚ್ಚರಿ ಪಡಬೇಕು? ಇದು ಪ್ರಶ್ನೆಯೇ. ಒಂದಂತೂ ಸತ್ಯ. ಸಿ.ಪಿ.ಕೆ ಮತ್ತು ಅವರ ಸಾಹಿತ್ಯ ಕುರಿತ ಸಿ.ಪಿ.ಕೆ ಮತ್ತು ಅವರ ಸಾಧನೆ ಕುರಿತ ಒಂದು ಗಂಭೀರ ಆಲೋಚನೆ ಬಹುತೇಕ ನಡೆಯಲಿಲ್ಲವೇನೋ. ಕನ್ನಡಿಗರ ಸಾಹಿತ್ಯಿಕ ಮತ್ತು ಸಾಂಸ್ಕ್ರತಿಕ  ಕಾಶಿ ಎನಿಸಿಕೊಂಡ ಈ ಮೈಸೂರಿನಲ್ಲಿ ಏನೆಲ್ಲಾ ನೋಡಿದ್ದೇನೆ. ಲೇಖಕರ ದೊಡ್ಡ ದಂಡೇ ಹಾಯ್ದು ಹೋಗಿದೆ. ಆದರೆ ದಾರಿಯ ಮೇಲೆ ಕುಳಿತಿದ್ದ ನಮ್ಮ ಸಿ.ಪಿ.ಕೆ ಸಾಹಿತ್ಯ ಪಥಿಕರಿಗೆ ಬಹುತೇಕ ಕಾಣಿಸಲಿಲ್ಲವೇನೋ. ನಮ್ಮಿಂದ ಅವಜ್ಞೆಯಾಗಿದೆ. ಅದಕ್ಕೊಂದು Sorry.

          ಮಹಾರಾಷ್ಟ್ರಕ್ಕೆ ಹತ್ತಿಕೊಂಡ ನನ್ನೂರು ಚಡಚಣದಲ್ಲಿ, ನನ್ನ ಪಿಯುಸಿ ದಿನಗಳಲ್ಲಿ ನಾನು ಸಿ.ಪಿ.ಕೆ ಅವರನ್ನು ಓದಿದ್ದೆ. ಆಗ ಅವರ ಕೃತಿಗಳ ಸಂಖ್ಯೆ ೧೫೦. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಬಂದಿತ್ತು. ಜೊತೆಗೆ ಮೈಸೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ  ಪ್ರಾಧ್ಯಾಪಕ, ನಿರ್ದೇಶಕ. ನಾನು ಅವರಿಗೆ ಮುಖತಃ ಭೇಟ್ಟಿಯಾದದ್ದು ೨೦೦೩ ರಲ್ಲಿ. ಮೈಸೂರು ಮುಕ್ತ ವಿವಿಯ ಸಭೆಯೊಂದರಲ್ಲಿ ಚಂಪಾ ಮತ್ತು ಸಿ.ಪಿ.ಕೆ ಮುಖ್ಯ ಮಾತುಗಾರರು. ‘ಸಿ.ಪಿ.ಕೆಯವರನ್ನು ಪರಿಚಯಿಸುತ್ತೇನೆ ಬಾ’, ಎಂದು ಚಂಪಾ ಫೋನಾಯಿಸಿದಾಗ ನನ್ನೊಳಗೆ ಎಷ್ಟೊಂದು ಖುಶಿ. ಕಾರಣ, ನಾನು ಓದಿದ್ದ ಅವರ ಸಾಹಿತ್ಯ. ನನ್ನನ್ನು ಎಳೆವಯಸ್ಸಿನಲ್ಲಿ ಪ್ರಭಾವಿಸಿದ್ದ ಅವರ ಒಂದು ಮಹತ್ವದ ಪುಸ್ತಕ ‘ಅಂತರತಮ’. ಬಹುತೇಕ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದಲೋ ಅಥವಾ ಪುಸ್ತಕ ಪ್ರಾಧಿಕಾರದಿಂದಲೋ ಅದು ಮುದ್ರಣಗೊಂಡಿರಬಹುದು. ಆದರೆ ನಾನು ನೀವೆಲ್ಲರೂ ಓದಲೇಬೇಕಾದ ಪುಸ್ತಕ. ಸಣ್ಣ-ಸಣ್ಣ ನುಡಿಗಟ್ಟುಗಳ, ಮಾಗಿದ, ಜೀವನಾನುಭವ ತುಂಬಿದ ಆ ಸಣ್ಣ ಹೊತ್ತಿಗೆ ನಮ್ಮನೊಂದಿಷ್ಟು ಕಾಲ ಆಲೋಚನೆಗೀಡು ಮಾಡುತ್ತದೆ. ಈ ಪುಸ್ತಕ ಒಂದೇ ಸಾಕು, ಸಿ.ಪಿ.ಕೆಯೊಳಗಿರುವ ಕವಿ, ಪ್ರಬಲ ಆಲೋಚಕ, ಜೀವನ ಪ್ರೇಮಿ ಮತ್ತು ಸಂತನ ಸೆಳಕುಗಳನ್ನು ನೋಡಲು. ನನಗೀಗ ಆ ಸಾಲುಗಳು ನೆನೆಪಿಲ್ಲ, ಆದರೆ ಮನೆಯ ಕಬರ್ಡಿನಲ್ಲಿ ಆಡಿನ ಹಿಕ್ಕೆಗಳನ್ನು ಪೊಟ್ಟಣದಲ್ಲಿ ಕಟ್ಟಿಟ್ಟ ಮಗು, ಮಾನವನ ಕುರಿತಾದ ಆಲೋಚನೆಗೆ ಕಾರಣವಾಗುವುದನ್ನು ಸಿ.ಪಿ.ಕೆ ತುಂಬಾ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಸಣ್ಣ ಘಟನೆ, ಆದರೆ ದೊಡ್ಡ ಚಿಂತನೆ. ಮೈಸೂರಿನ ಸಿ.ಪಿ.ಕೆ ಅವರನ್ನು ಸಮಕಾಲೀನ ಲೇಖಕರೊಂದಿಗೆ ತೌಲನಿಕವಾಗಿ ನೋಡಿದರೆ ಗಮನಕ್ಕೆ ಬರುವ ಅತೀ ದೊಡ್ಡ ಅಂಶವೇ ಅವರ ಬರಹಕ್ಕಿರುವ ಕಾವ್ಯದ ಸೂಕ್ಷ್ಮತೆ. ಎಲ್ಲವನ್ನು ಕವಿತೆಯಂತೇ ಬರೆದ ಸಿ.ಪಿ.ಕೆ ತಮ್ಮದಾದ ಒಂದು ಕಾವ್ಯ ಬರೆಯಲೇ ಇಲ್ಲ. ಅನೇಕ ಸಾರಿ ಹಲವು ಸಾಧ್ಯತೆ ಇರುವ ಲೇಖಕನಿಗೆ ಇಂತಹ ಸಮಸ್ಯೆ ಇರುತ್ತದೆ.

ಒಂದಿಷ್ಟು ಮಧ್ಯಂತರದ ನಂತರ ಮತ್ತೆ ಸ್ನಾತಕೊತ್ತರ ವಿಭಾಗದ ಉಪನ್ಯಾಸಕನಾಗಿ ಪಾಠ ಮಾಡುವಾಗ ನನಗೆ ಈ ಸಿ.ಪಿ.ಕೆ ಅವರ ಬಗೆಗೆ ಕುತೂಹಲ ಹೆಚ್ಚಾಯಿತು. ಕಾರಣವಿಷ್ಟೇ, ಈಸ್ಕಿಲಸ್ ಕವಿಯ ಅಗೆಮೆಮ್ನನ್(Agememnon) ನಾಟಕವನ್ನು ನಮ್ಮ ಸಿ.ಪಿ.ಕೆ ಗ್ರೀಕ್‌ನಿಂದ ಕನ್ನಡಕ್ಕೆ ಅದೆಷ್ಟು ಸುಂದರವಾಗಿ ಭಾಷಾಂತರಿಸದ್ದಾರೆ. ಅವರ ಸಾಹಿತ್ಯದ ಶಕ್ತಿ ಸಾಮರ್ಥ್ಯಗಳನ್ನು ತಿಳಿದುಕೊಳ್ಳಬೇಕೆನ್ನುವ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕವದು. ಇಂಗ್ಲಿಷ್ ಎಮ್.ಎ ಮಕ್ಕಳಿಗಾಗಿ ಈ ನಾಟಕವನ್ನು ಪಾಠ ಮಾಡುತ್ತಿದ್ದ ನಾನು ಕನ್ನಡದಲ್ಲಿ ಅದರ ಅಷ್ಟೇ ಸಮರ್ಥವಾದ ಭಾಷಾಂತರವನ್ನು ನೋಡಿ ಸಿ.ಪಿ.ಕೆ ಗಿನ ಬಗೆಗಿನ ನನ್ನ ಅಭಿಮಾನ ನೂರ್ಮಡಿಯಾಯಿತು. ಅಗೆಮೆಮ್ನನ್(Agememnon)  ಎಂತಹ ದುರಂತ ನಾಯಕ. ತನ್ನ ಹೆಂಡತಿ ಕ್ಲೈತೆಮೆಸ್ತ್ರಳಿಂದ ಕೊಲೆಯಾಗುವ ಅಗೆಮೆಮ್ನನ್ ದುರಂತ, ವಿರಹದ ಬೆಂಕಿಯಲಿ ಬೆಂದು, ಸೇಡಿನ ಅನ್ನವುಂಡು ಅನ್ಯನೊಂದಿಗೆ ಹಾಸಿಗೆ ಹಂಚಿಕೊಂಡು ಅರ್ಗೊಸ್ ಸಾಮ್ರಾಜ್ಯದ ಪ್ರಜೆಗಳ ಮುಂದೆ ನಿಂತು ಮಾತನಾಡುವ ಕ್ಲೈತಮೆಸ್ತ್ರ, ಅಪ್ಪ ಅಗೆಮೆಮ್ನನ್ ನ ಮಹದಾಸೆಗೆ ಬಲಿಪಶುವಾಗುವ ಮಗಳು ಎಲ್ಲ ಓದಬೇಕು ನೀವು. ಇಲ್ಲಿಯ ಒಂದೊಂದು ಸಾಲು-

                   **ನನ್ನ ಹಾಸಿಗೆಯೀಗ ಇರುಳ ಇಬ್ಬನಿಯಲ್ಲಿ ತೋಯ್ದು ಹೋಗಿದೆ
                     ಜೊತೆಗಿಲ್ಲ ಕರುಣಾಳು ಕನಸುಗಳು

                   **ಸಿರಿಯ ಸೊಕ್ಕಿನಲ್ಲಿ ಧರ್ಮದ ಸ್ಥಿರಪೀಠವನ್ನು ಕತ್ತಲೆಗೆ
                     ಒತ್ತರಿಸುವ ಮನುಷ್ಯನಿಗಿಲ್ಲ ಯಾವುದೇ ಕಾಯವ ಕವಚ

                   **ಹಕ್ಕಿಗಳೆಲ್ಲಾ ಸತ್ತಂತೆ ಚಳಿಗಾಲ
           
                   **ಮುಪ್ಪಿನೊಡನೆ ಮುಪ್ಪಾಗುವುದಿಲ್ಲ ಕಲಿಕೆ
        
                   **ಬೆಳೆದಾಗ ಸಿರಿ, ಪರಮಾವಧಿಗೆ
                     ಮರಿಹಾಕುತ್ತದೆ, ಅಥವಾ ಸಾಯುವುದಿಲ್ಲ ಸಂತಾನರಹಿತ
                      ಸೌಭಾಗ್ಯದೆತ್ತರದಿಂದ ನೆತ್ತರಿನಲ್ಲಿ ಅರಳುತ್ತದೆ ತಣಿವಿಲ್ಲದಳಲು

                   **ಕಾಲ ಕಳೆದಂತೆ ಬತ್ತಿ ಹೋಗುತ್ತದೆ ಲಜ್ಜೆ

                   **ಆಸೆಯ ಖಾಲಿ ಕನಸುಗಳನ್ನುಂಡೂ ಬದುಕುತ್ತಾರೆ ದೇಶಬ್ರಷ್ಠರು.

          ಇದು ನಮ್ಮ ಸಿ.ಪಿ.ಕೆ.. ಎಂತಹ ಉಜ್ವಲ ಬರಹ ನೋಡಿ. ಹೆಜ್ಜೆ-ಹೆಜ್ಜೆಗೂ ಜೀವನಾನುಭವದ ರಸಪಾಕ. ಒಂದೊಂದು ಸಾಲಿಗೂ ಅರ್ಥ, ಆಲೋಚನೆಗಳ ವಿಶಾಲ ವ್ಯಾಪ್ತಿ, ಮಹಾನ್ ಕವಿಯೊಬ್ಬನನ್ನು ತೆಕ್ಕಗೆ ಹಾಕಿಕೊಂಡು ಭಾಷಾಂತರದ ಗುದುಮುರಿಗೆ ಬೀಳಬೇಕಾದರೆ ತಾಕತ್ತು ಬೇಕಾಗುತ್ತದೆ. ಸಿ.ಪಿ.ಕೆಯವರು ಅಂತಹ ಒಬ್ಬ ತಾಕತ್ತಿನ ಬರಹಗಾರ.

ಅದಾಗ್ಯೂ ಎಲ್ಲೋ ಅಂದುಕೊಂಡುಬಿಡುತ್ತೇನೆ, ಕೆಲವೊಮ್ಮೆ ಜೊಳ್ಳಿನ ಮಧ್ಯ ಗಟ್ಟಿಯೂ ಅವಜ್ಞೆಗೊಳಗಾಗುತ್ತದೆ. ಪ್ರೊ. ಕ.ವೆಂ. ರಾಘವಚಾರ್ಯ, ರಾ.ಕ ನಾಯಕ, ವಿ ನಾಗರಾಜರಾವ್, ಶಾ ಬಾಲುರಾವ್, ಇವೆಲ್ಲಾ ಸಿ.ಪಿ.ಕೆ ಯವರಸಂತಹ ದೈತ್ಯ ಪ್ರತಿಭೆಗಳೇ. ಇವರ ಕುರಿತು ಒಂದು ಓದು, ಆಲೋಚನೆ ಅನಿವಾರ್ಯವಾಗುವ ಸಂದರ್ಭವನ್ನು ನಮ್ಮ ಸಾರಸ್ವತ ಲೋಕ ಅಂದುಕೊಳ್ಳಲೇ ಇಲ್ಲ. ನಮ್ಮ ಸುತ್ತಲಿನ ಶಬ್ದಗಳ ಅಬ್ಬರದ ಜಾತ್ರೆಯಲ್ಲಿ ಇಂತವರ ಮೌನದ ಆಲಾಪ ನಮಗೆ ಕೇಳಿಸಲೇ ಇಲ್ಲ. ತುಂಬಾ ತಡವಾಗಿದೆ, ಹಿರಿಯರಾದ ಸಿ.ಪಿ.ಕೆ ಅವರಿಗೆ, ಇಂತವರಲ್ಲಿ ಒಬ್ಬರಾಗಿದ್ದವರಿಗೆ ಒಂದಿಷ್ಟು ಗೌರವ ಸಂದಿದೆ. ಉಳಿದವರಿಗೇನೂ ಮಾಡಬೇಕು? ನಾವು Sorry ಹೇಳಬೇಕಷ್ಟೇ.