ಸಾಕಿಯರು ಬರುತ್ತಾರೆ, ಸಾವಧಾನ !!!
ಎಷ್ಟು ಭಾಷೆಗಳೋ ಅಷ್ಟು ಹೆಸರುಗಳು ಈ ಸಾಕಿಗೆ. ಎಷ್ಟು ಸಂಸ್ಕ್ರತಿಗಳೋ ಅಷ್ಟು ಮುಖಗಳು ಅವಳಿಗೆ. ಎಷ್ಟು ಭೂಖಂಡಗಳೋ ಅಷ್ಟು ಮೈಗಳು, ಎಷ್ಟು ಹೂಗಳೋ ಅಷ್ಟು ಕನಸುಗಳು ಅವಳ ಕಣ್ಣೊಳಗೆ. ಅವಳೆನ್ನುವುದೇ ಒಂದು ಆಗಾಧ ಲೋಕ. ನನ್ನ ಭಾವದ ಸುಖಕ್ಕಾಗಿ ಈಗ ನನ್ನ ಮುಂದೆ ಸಾಕಿಯಾಗಿ ಕುಳಿತಿದ್ದಾಳೆ. ನನಗೆ ಈ ಪದ ಮೋಹವೋ, ಪದದೊಳಗಿನ ಆಕೆಯ ಮೋಹವೋ ಇನ್ನೂ ಷ್ಪಷ್ಟವಾಗಿಲ್ಲ. ದ್ವಂದ್ವದಲ್ಲಿದ್ದೇನೆ. ಪದಕ್ಕಾಗಿ ಅವಳನ್ನು,ಅವಳಿಗಾಗಿ ಪದವನ್ನು ಮೋಹಿಸುತ್ತಾ ಮದಮಸ್ತನಾಗಿದ್ದೇನೆ. ಈ ದ್ವಂದ್ವವೇ ಜೀವಂತಿಕೆ ಅಲ್ಲವೇ?ಹೀಗೆ ನನ್ನಂತೆಯೇ ಸಾಕಿಯೊಂದಿಗೆ ಮೋಹಕ್ಕೆ ಬಿದ್ದ ಷಾಜಹಾನ್ ಆಕೆಯನ್ನು ಕುರಿತು ಬರೆಯುತ್ತಾನೆ.” ಎಂದೆಂದಿಗೂ ಈ ಜಗತ್ತು ಆಕೆಯ ಮೊಲೆ ಕುಡಿಯುವ ಹಸೂಗೂಸು” ಎಂದು.
ನಾನು ಷಾಜಹಾನನ ಈ ಸಾಲುಗಳಲ್ಲಿಯೇ ಹೆಜ್ಜೆ ಹಾಕುತ್ತಾ, ಈ ಸಾಕಿ ಎಂದರೇನು? ಇವರ ಕೈ ಸೋಕಿ ನಡೆಯುವ ಚಮತ್ಕಾರವಾದರೂ ಏನು? ಎಂದು ಪ್ರಶ್ನಿಸಿಕೊಂಡೇ ಹಿಂದೊಮ್ಮೆ ಬರೆದಿದ್ದೆ, “ಅವಳು ಎಂಬುವುದೊಂದು
ನನಗೆ ಯಕ್ಷ
ಪ್ರಶ್ನೆ. ಈ
ಭೂಮಿಗೆ ಬಿದ್ದ
ಮರುಕ್ಷಣವೇ ಅವಳು
ನನ್ನ ಕಣ್ಣಾಲೆಗಳ
ವಿಶ್ರಾಂತಿಯಾದಳು. ನಾನು
ಬೆಳದಂತೆ ನನ್ನ
ದಾರಿಗೆ ಬೆಳಕಾದಳು ‘ಅವಳು’. ಯೌವ್ವನದ
ಬಿಸಿ ಮಾಂಸ
ನನ್ನ ಕೈಯೊಳಗಿಟ್ಟು
ನನ್ನ ಮೈಯೊಳಗೆ
ಮುಳುಗಿ, ಕಣ್ಣುಮುಚ್ಚಿ
ಇದು ಯೋಗ
ಎಂದಳು ‘ಅವಳು’. ಕೆಲವು ಬಾರಿ ಕಾದಾಡಿ ಸಾಮಾಜಿಕ
ಅಪರಾಧಿಯಾಗಿ ನನ್ನನ್ನು
ನಿಲ್ಲಿಸಿ ಮುಸಿನಕ್ಕಳು. ಮತ್ತೆ ಕೆಲವು ಬಾರಿ ‘ಸುಟ್ಟ
ಬತ್ತಿಯ ಹಾಗೆ
ಸುಮ್ಮನಿರುವವಳು, ಒಳಗೆ
ದೀಪವನ್ನಿಟ್ಟು ಹೊರಗೆ
ಹೋದವಳು ‘ಅವಳು’. ಈಗ
ಒಂದಿಷ್ಟು ಕಾಲಾವಕಾಶ, ಮೂವತ್ತೈದರ ಈ ನಡುಯೌವ್ವನದಲ್ಲಿ ಕುಳಿತು
ಚಿಂತಿಸುತ್ತಿದ್ದೇನೆ. ಅವಳೊಂದಿಗೆ
ಗಾಳಿ ಧೂಳಿನೊಡನಾಡಿದಂತೆ
ಆಡಿಯೂ ಹೊರಗುಳಿದ
ನನ್ನನ್ನೇ ನಾನು
ಪ್ರಶ್ನಿಸಿಕೊಳ್ಳುತ್ತಿದ್ದೇನೆ ಯಾರು ‘ಅವಳು’? ಯಾವ ನೆಲೆಯ ಚೈತನ್ಯ ‘ಅವಳು’?
ನನ್ನ ಹೊರಗೂ ಅಷ್ಟೇ ‘ಅವಳು’. ಬೊದಿಲೇರನ ಮಾಂಸದಲ್ಲಿ
ಮುಳ್ಳಾದವಳು. ಟ್ರಾಯ್
ನಗರದ ಪತನದ
ಪತಾಕೆ ಹಾರಿಸಿದವಳು, ಲಂಕೆಗೆ ಸೇತು ಬಂಧವ ಕಟ್ಟಿಸಿದವಳು, ಏಟ್ಸ್ನಿಗೆ ಒಲವಾಗಿ
ಕಾಡಿ ಮಗಳಾಗಿ
ಹುಟ್ಟಿದವಳು, ಬೆಬಿಲೋನಿಯಾದಿಂದ
ಬಂದು ಈ
ದೇಶದ ನೆಲದ
ಪವಿತ್ರ ಧೂಳಾದವಳು. ಕಿಂಗ್ ಓಡಿಸ್ಸಿಯಸ್ಸ್, ರಾಮ, ಲಕ್ಷ್ಮಣರಿಗೆ ಬರೀ
ಕಾಯುತ್ತಲೇ ಹಾಳಾದವಳು, ಎದೆಯ ಮೇಲೆ ನೆಮ್ಮದಿಯ ನಿದ್ರೆ
ನೀಡಿ, ಮೊಲೆ
ಕೊಟ್ಟೂ ಜಾರಣಿಯಾದವಳು, ಮೌನದ ಓರೆನೋಟದಿಂದಲೇ
ಕದನ ಹೂಡಿದವಳು, ಉಮರ್ ಖಯ್ಯಾಮನಿಗೆ
ಬರೀ ಭೋರಿಡುವ
ಗಾಳಿಯಾದವಳು, ಗಾಲಿಬ್ನ ಗೆಳತಿಯಾದವಳು, ಶರಣರ
ಭ್ರಮಾಲೋಕದಲ್ಲಿ ಸತಿ, ಪತಿ, ಮಾಯೆ, ಮಗಳು, ಮನದ ಮುಂದಣ ಅಶೆಯಾಗಿ ಕಾಡಿದವಳು, ಕಿಂಗ್ ಅಗೆಮೆಮ್ನಾನ್ನಿಗೆ ರಕ್ತಾಕ್ಷಿಯಾಗಿ, ಬೆನ್ಜಾನ್ಸ್ನನ್ನು ಬರೀ ಕಣ್ಣಿನಿಂದಲೇ
ಕುಡಿದು ಅಮರಳಾಗಿಸಿದವಳು. ಯಾರವಳು? ‘ಹಾಡ-ಹಸೆ’, ‘ಕೊಂಚ
ಕೊಂಚ ಮೋಹ’, ‘ದಾರಿಯ ಗುಲಾಬಿ’, ‘ಕಾಡಕಂಬನಿ’, ಮನದ
ಮಲ್ಲಿಗೆ’, ‘ಎದೆಯ ಹೂ’, ‘ಎರಡು ಬಾಯಿಯ ವಿಷಪೂರಿತ ಹಾವು’, ನಡುರಾತ್ರಿಯ ನೋವು’, ಹೀಗೆ ಏನೆಲ್ಲ
ಆದವಳು, ಯಾರು ‘ಅವಳು’? ನಾವು
ಜರಿದಷ್ಟೇ ಪ್ರಮುಖವಾಗುವವಳು, ಜಗವೇ ಉರಿದು ಹೋದರು ಅಮರಳಾಗುವವಳು, ಸನ್ಯಾಸಿಯ ಸಾವನ್ನೂ
ಅರ್ಥಹೀನಗೊಳಿಸುವವಳು, ನಿರ್ಮೋಹದ
ಕೌಪೀನು ತೊಟ್ಟವರೂ
ಕೂಡಾ ಕದ್ದು, ಬೆತ್ತಲಾಗಿ ಅವಳ ಒಸಗೆಗಾಗಿ ಕಾಯುವಂತಾಗಿಸುವವಳು, ಸತ್ತರೂ ಸಾಯದವಳು, ಪಂಚಮವೇದವನ್ನು ಬರೆಸಿದವಳು, ಸದನಕ್ಕೆ ಸೊಸೆ, ಮೋಹದ ಹೆಂಡತಿ, ಮುದ್ದಿನ ಮಗಳಾಗಿ
ಮಾತಾಡುವವಳು, ಭಾಷೆ
ಕಲಿಸಿಯೂ ಭಾಷೆಗೆ
ಸಿಗದವಳು, ಆಸೆಗಣ್ಣನ್ನು
ಒಳಗೆ ನೆಟ್ಟವಳು, ಯಾರವಳು? ಯಾರವಳು? ಎಂಬುದೇ
ನನ್ನ ಪಾಲಿಗೆ
ಯಕ್ಷ ಪ್ರಶ್ನೆ.
ಈ ಸಾಕಿ ಹೆತ್ತಾಗ ತಾಯಿ, ಬಿತ್ತಿಗೆ ಭೂಮಿ, ನಡೆದಾಗ ಗೆಳತಿ, ನನ್ನೊಂದಿಗೆ ಹೊಡೆದಾಡಿ ನಕ್ಕಾಗ ಹೆಂಡತಿ, ಕದ್ದು ಕೂಡಿದಾಗ ರತಿ, ಇದೆಲ್ಲವೂ ಸರಿ. ಆದರೆ ಕೆಲವೊಮ್ಮೆ ಖಾಲಿಯಾದ ಸೀಟಿನಲ್ಲಿಯ ಬರೀವಾಸನೆ, ಬಿಟ್ಟು ಹೋದ ಬಟ್ಟೆಯೊಂದಿಗೆ ಕಬೋರ್ಡಿನಲ್ಲಿ ನೆರಳು, ಹಿಂದಿನ ಬಸ್ಟ್ಯಾಂಡಿನಲ್ಲಿ ಕಂಡ ಮಾಸದ ಮುಗಳ್ನಗೆ, ಮನದ ಕ್ಯಾನ್ವಾಸ್ ಮೇಲೆ ಬಣ್ಣಗಳ ಗೆರೆ ಎಳೆದು ತಟ್ಟನೆ ಮರೆಯಾಗುವ ಆ ‘ಅವಳ’ನ್ನು ಏನೆಂದು ಕಟ್ಟಿ ಹಾಕಲಿ ಭಾಷೆಯೊಳಗೆ? ಹರಿವ ಹೊಳೆಯೊಳಗೆ, ಮೊರೆವ ಅಲೆಗಳೊಳಗೆ, ಜಗದ ಸಚರಾಚರ ಜೀವಗಳೊಳಗೆ ಬದುಕಿನ ವ್ಯಾಪಾರಕ್ಕೆ ಕಾರಣವಾದ, ಕಣ್ಣೀರ ಹನಿಗೂ, ಹವಳದಾ ಕುಡಿಗೂ, ಜೀವಧಾರೆಯಾಗುವ ಆ ಶಕ್ತಿಯನ್ನು ‘ಅವಳು’ ಎನ್ನಬೇಕೆ? ಇಲ್ಲಾ, ಸಾಕಿ ಎಂದು ಕುಡಿದುಬಿಡಬೇಕೇ?”
ಭಾರತಕ್ಕೆ ಪರ್ಷಿಯನ್ನರ ಕೊಡುಗೆ ಏನು? ಎಂದು ಯಾರಾದರೂ ಕೇಳಿದರೆ ನಾನು ಈ ಸಾಕಿಯನ್ನೇ ಸೂಚಿಸುತ್ತೇನೆ. ಈ ಪದದಲ್ಲಿಯೇ ಎಷ್ಟೊಂದು ಸುಖವಿದೆಯಲ್ಲಾ? ಈಕೆಯನ್ನು ಕುಡಿದು ಸತ್ತವರ ನೆನಪಿಲ್ಲ ನನಗೆ. ಅಂದಹಾಗೆ ಬರಹದ ನನ್ನ ಜನ್ಮಾಂತರದ ದಾರಿಯಲ್ಲಿ ಸತ್ತವರ ಕುರಿತು ನಾನು ಬರೆಯಲೂ ಇಲ್ಲ. ಗೊತ್ತಿರಲಿ, ಬರೆಸಿಕೊಂಡವರು ಸತ್ತವರಲ್ಲ. ಅಯ್ಯೋ! ಎಲ್ಲೋ ಹೋದೆ. ಈ ಸಾಕಿಯ ಹುಚ್ಚೇ ಅಂತಹದು. ಈಕೆಯನ್ನೇ ಮುಂದೆ ಕೂಡ್ರಿಸಿಕೊಂಡಿದ್ದ ಹಾದಿಸ್, ಫರ್ದುಸ್, ಹಾಲಿ, ಗಾಲಿಬ್ ಮತ್ತು ಖಯ್ಯಾಮ್ ಯಾಕಾದರೂ ಸೆರೆ ಕುಡಿದರೋ? ಈಕೆ ಸೋಕಿದಷ್ಟೇ ಸಾಕಾಗಿತ್ತೇನೋ. ಪಾಪ, ನಮ್ಮ ಎಡ್ವರ್ಡ್ ಫಿಡ್ಜರಾಲ್ಡನಂತೂ ಈ ಸಾಕಿಯ ಸೀರೆಗಳನ್ನು ಪೇರಿಸಿಟ್ಟೇ ಧನ್ಯನಾದ.
ಈ ನನ್ನ ಸಾಕಿಯ ಹುಡುಕಾಡುತ್ತಾ ನೀವೆಲ್ಲೂ ಹೋಗಬೇಕಿಲ್ಲ. ಸುಖವನರಿಯದ ಸೂಳೆಯಾಗಿ, ಮಗಳಾಗಿ, ಮನದನ್ನೆಯಾಗಿ, ಗೆಳತಿಯಾಗಿ, ಅಂತರಂಗದ ಧ್ವನಿಯಾಗಿ ಇವಳಿದ್ದಾಳೆ ನಿಮ್ಮೊಂದಿಗೆ. ನೀವು ಸ್ವಲ್ಪ ಸಮಯ ಕೊಡುವಷ್ಟು ಕರುಣಾಳುಗಳಾದರೇ ಸಾಕು, ನಿಮ್ಮ ಬದುಕುಗಳನ್ನು ಸೋಕಿ ನಿಮ್ಮನ್ನು ಸಾವಿನಿಂದ ಮುಕ್ತಳಾಗಿಸುತ್ತಾಳೆ. ನಾನು ಅವಳನ್ನು ಕುರಿತು ಏನೆಲ್ಲಾ ಬರೆದೂ ವಿಫಲನಾಗಿದ್ದೇನೆ, ಯಾಕೆಂದರೆ, ಅವಳು’ ಕಾಮನ ಬಿಲ್ಲಿನಂತೆ. ಏಳೂ ಬಣ್ಣಗಳನ್ನು ಸೇರಿಸಿ ಕಾಮನ ಬಿಲ್ಲು ಎಂದು ಕರೆದೆ. ಆದರೆ ಬಣ್ಣ ಬಣ್ಣಗಳು ಸಂಧಿಸಿ ಹೊರಹೊಮ್ಮುವ ಚೆಲುವಿಗೆ ಏನೆಂದು ಹೆಸರಿಸಲಿ? ಮಾತಿಗೆ ಮಾತೆಂದೆ, ಮೌನಕ್ಕೆ ಮೌನ. ಮಾತು ಮತ್ತು ಮೌನಗಳು ಸಂಧಿಸುವ ಸುಮ್ಮನಕ್ಕೆ ಯಾವ ಹೊಸ ವ್ಯಾಖ್ಯಾನ ನೀಡಲಿ?
ನನ್ನ ಈ ಬರಹ ‘ಈ ಸಾಕಿಯರ ಕೈ ಸೋಕಿ‘ ಇಂತಹದೇ ಒಂದು ವಿಫಲ ಯತ್ನ ಎಂದುಕೊಳ್ಳುತ್ತೇನೆ ನಾನು. ನೀವು ಧಿಕ್ಕರಿಸಿದ, ಹೇಳಿಕೊಳ್ಳಲು ನಾಚಿಕೆ ಪಡುವ, ಹಂಚಿಕೊಳ್ಳಲು ಹೇಸಿಗೆ ಪಡುವ ಆದರೆ ಸಮಯ ಸಿಕ್ಕರೆ ಕತ್ತಲಲಿ ಬಿಕ್ಕಳಿಸಿ ಅತ್ತು ವಂದನೆಗಳನ್ನು ಹೇಳಬಹುದಾದ ಹದಿನೈದು ಜನ ಸಾಕಿಯರನ್ನು ನಿಮ್ಮ ಮುಂದೆ ಸಾಲಾಗಿ ಈ ಬರಹದ ಮೂಲಕ ನಿಲ್ಲಿಸುತ್ತಿದ್ದೇನೆ. ಇವರೆಲ್ಲಾ ಹೀಗೆ , ಸಭ್ಯತೆಯ ಚೌಕಟ್ಟಿನಲ್ಲಿಯೇ ಸುಳಿಯದ ಯಾವುದೋ ಸತ್ಯಕ್ಕಾಗಿ ತಮ್ಮನ್ನೇ ಸುಟ್ಟುಕೊಂಡವರು. ದೀಪವನ್ನು ಸುತ್ತುವ ಪತಂಗಕ್ಕೂ, ಇಂತಹ ಒಂದು ಭ್ರಮೆಯನ್ನು ಸುತ್ತಿದ ಇವರಿಗೂ ಬಹಳ ವ್ಯತ್ಯಾಸವಿಲ್ಲ. ನನಗೆ ಗೊತ್ತು, ಸಭ್ಯ ಸಮಾಜದ ಯಾವುದೇ ನ್ಯಾಯಿಕ ವ್ಯವಸ್ಥೆ ಇವರನ್ನು ಆದರ್ಶಪ್ರಾಯರು ಎಂದು ಘೋಷಿಸಲು ಸಾಧ್ಯವಿಲ್ಲ. ಮೋಜಿನ ಸಂಗತಿಯೆಂದರೆ ನಿಮ್ಮ ಘೋಷಣೆಗಳನ್ನು ಈ ಸಾಕಿಯರು ಫೋಷಿಸಲೇ ಇಲ್ಲ. ಸಭ್ಯತೆ ಎನ್ನುವ ಸೊಕ್ಕಿನ ಏರಿನಲ್ಲಿ ನಾವು ಬದುಕಿದರೆ,
ಪ್ರಾಮಾಣಿಕತೆ ಎಂಬ ತೇರಿನಲ್ಲಿ ಸಮಾಜ-ಸಂಸಾರಗಳ ಹುಸಿ ಹರಕೆಗಳ ಕೇಳಿ, ನೋಡಿ ಸಾಗಿಹೋದವರು ಈ ಸಾಕಿಯರು.
ನಮ್ಮ ಒಂದು ಬದುಕಂತೂ ಇವರ ಸುಖವರಿಯದೇ ಸೊರಗಿ ಹೋಯಿತು. ಬರುವ ನಮ್ಮ ಇನ್ನೊಂದು ಬದುಕಿಗಾದರೂ ಇವರನ್ನು ಅರ್ಥೈಸಿಕೊಳ್ಳುವುದು ಅರ್ಥಪೂರ್ಣ ಎಂದುಕೊಳ್ಳೊಣವೇ?