bhutayyana maga ayyu |
ಸಾಮಾಜಿಕತೆ ಮತ್ತು
ಸಾಹಿತ್ಯ, ಸಾಮಾಜಿಕತೆ ಮತ್ತು ಮಾಧ್ಯಮ, ಸಾಮಾಜಿಕತೆ ಮತ್ತು ಕ್ರೀಡೆ ಇವುಗಳ ಪರಸ್ಪರ ಕೊಡು-ಕೊಳ್ಳುವಿಕೆ,
ಬದ್ಧತೆಗಳ ಪ್ರಶ್ನೆ ಇಂದು ನಿನ್ನೆಯದಲ್ಲ. ಸೃಜನಶೀಲ ಈ ಆಯಾಮಗಳಿಗೊಂದು ಸಾಮಾಜಿಕ ಹೊಣೆಗಾರಿಕೆ ಬೇಕು
ಎನ್ನುವವರ ದೊಡ್ಡದೊಂದು ಗುಂಪನ್ನು ಜಾಗತಿಕ ಮಟ್ಟದಲ್ಲಿ ನಾವು ನೋಡಬಹುದು. ಆಪ್ಟೆನ್ ಸಿಂಕ್ಲೆರ್,
ಜಾನ್ ಗಿಲಾಸ್‌ವರ್ದಿ, ಅರ್ನೆಸ್ಟ್ ಹೆಮ್ಮಿಂಗ್ ವೇ, ಸಾಮರ್‌ಸೆಟ್ ಮಾಮ್, ದಾಸ್ತೋವಸ್ಕಿ, ಒಂದೇ, ಎರಡೇ
ಚಿಂತಕರ ದೊಡ್ಡ ಪಡೆಯೇ ಇದೆ ಇಲ್ಲಿ. ಭಾರತದಲ್ಲೂ ಈ ನಿಟ್ಟಿನಲ್ಲಿ ಆಲೋಚಿಸಿದವರ, ಕಾರ್ಯೋನ್ಮುಖರಾದವರ
ಕೊರತೆಯೇನು ಇಲ್ಲ. ಪ್ರೇಮಚಂದ್, ಸಜ್ಜದ್ ಜಾಹೀರ್,ಮುಲ್ಕರಾಜ ಆನಂದ್, ಯಶಪಾಲ್, ಧರ್ಮವೀರ್ ಭಾರತಿ,
ಶ್ರೀ, ಶ್ರೀ ಥಕಾಜಿ ಶಿವಶಂಕರ ಪಿಳ್ಳೆ,ಖುಷವಂತ್ ಸಿಂಗ್,
ಕರ್ತರ್ ಉಲ್ಲ್ ಹೈದರ್,ಬಲವಂತ್ ಗಾರ್ಗಿ ಹೀಗೆ
ಅನೇಕ ಹೆಸರುಗಳನ್ನು ಸೂಚಿಸಬಹುದು. ಠ್ಯಾಗೋರ್ ಮತ್ತು ಅರಬಿಂದರಿಗೆ ಈ ಸೆಳೆತವಿರಲಿಲ್ಲ. ಅವರೇನಿದ್ದರೂ
ಕಲೆ, ಕಲೆಗಾಗಿ ಎನ್ನುವ ವಾದಕ್ಕೆ ಬದ್ಧರಾದವರು. ಆದರೆ ಮೇಲೆ ಸೂಚಿಸಿದ ಲೇಖಕರುಗಳ ಮುಂಚೂಣಿಯಲ್ಲಿದ್ದವರು,
ಮಾರ್ಗದರ್ಶಕರಾದವರು ಗಾಂಧಿ ಎಂಬುವುದನ್ನು ಮರೆಯುಂತಿಲ್ಲ. ಈ ಗಾಂಧಿ ಎಂದರೆ ಹೀಗೆಯೇ, ಹೊಣೆಗಾರಿಕೆಯ
ವ್ಯಾಪ್ತಿಯಿಂದ ಹೊರೆತಾದುದ್ಯಾವುದನ್ನು ಅವರು ಗೌರವಿಸಲಿಲ್ಲ.ಕನ್ನಡಕ್ಕೆ ಬನ್ನಿ, ಇಡೀ ಪ್ರಗತಿಶೀಲ
ಘಟ್ಟದ ಎಲ್ಲ ಸೃಜನಶೀಲರು ಸಾಹಿತ್ಯ ಮತ್ತು ಮಾಧ್ಯಮಗಳ
ಹೊಣೆಗಾರಿಕೆಯನ್ನು ಅತ್ಯಂತ ಬಲವಾಗಿ ಪ್ರತಿಪಾದಿಸಿದವರು. ನವ್ಯದ ಕಥೆ ಬೇರೆ, ಆದರೆ ನವೋದಯದವರಲ್ಲಿ
ಮಾತ್ರ ಒಂದಿಷ್ಟು ಜನ ಹಾಗೆ, ಕೆಲವು ಜನ ಹೀಗೆ.
ಕನ್ನಡ ಸಿನಿಮಾ
ಒಂದು ನಿಶ್ಚಿತ ಆಕಾರ ಪಡೆಯಲು ಪ್ರಾರಂಭಿಸಿದ್ದು ಕನ್ನಡ ಸಾಹಿತ್ಯದ ಪ್ರಗತಿಶೀಲ ಸಾಹಿತ್ಯ ಘಟ್ಟದ ಅವಧಿಯಲ್ಲಿಯೇ.
ಸಮಾಜಮುಖಿಯಾದ ಚಿತ್ರ ನಿರ್ಮಾಪಕರ, ನಿರ್ದೇಶಕರುಗಳ, ಸಾಹಿತಿಗಳ ದೊಡ್ಡ ಪಡೆಯೊಂದು ಈ ಸಂದರ್ಭದಲ್ಲಿ
ಕ್ರಿಯಾಶೀಲವಾಯಿತು. ಇದರ ಮುಂಚೂಣಿಯಲ್ಲಿದ್ದವರು ಬಿ.ಆರ್. ಪಂತುಲು. ಅವರನ್ನು ಹಿಂಬಾಲಿಸಿದವರು ಕಣಗಾಲ್
ಪ್ರಭಾಕರ ಶಾಸ್ತ್ರಿ, ನಾಗೇಂದ್ರ ರಾವ್, ಸುಬ್ಬಯ್ಯನಾಯ್ಡು, ಎ.ವಿ ವರದಾಚಾರ್, ಗಂಗಾಧರ ರಾಯ, ಸಿ.ಬಿ.ಮಲ್ಲಪ್ಪ, ರಾಮನಾಥನ್, ಶಿವರಾಮ್, ಪುಟ್ಟಣ್ಣ ಕಣಗಾಲ್, ಲಕ್ಷ್ಮಿ ನಾರಾಯಣ್,
ಸಿದ್ಧಲಿಂಗಯ್ಯ, ಎಸ್. ಪಿ. ವರದರಾಜ್, ಟಿ.ಎಸ್. ನಾಗಾಭರಣ, ಗಿರೀಶ್ ಕಾಸರವಳ್ಳಿ, ಕಾಶೀನಾಥ, ಬರಗೂರ್
ರಾಮಚಂದ್ರಪ್ಪ, ಟಿ.ಎಸ್ /ಬಿ,ಎಸ್ ರಂಗಾ ಇವರೆಲ್ಲ ಕನ್ನಡ ಸುಸಂಸ್ಕೃತ ಸಾಮಾಜಿಕ ಜವಾಬ್ದಾರಿಯ ಪ್ರೇಕ್ಷಕ
ಎಂದೂ ಮರೆಯಲಾಗದ ಚಿತ್ರರಂಗದ ಹೆಸರುಗಳು. ಸಾಮಾಜಿಕ
ಬದ್ಧತೆಯ ಈ ಪಡೆ ತಮ್ಮ ಚಿತ್ರಗಳಲ್ಲಿ ಮಾನವೀಯತೆ, ಮನುಷ್ಯ ಗೌರವ ಮತ್ತು ಮನುಕುಲದ ಭವಿಷ್ಯವನ್ನು ಅತ್ಯಂತ
ಗಂಭೀರವಾಗಿ ಚರ್ಚಿಸಿತು. ಚಿತ್ರದ ಆರ್ಥಿಕ ಯಶಸ್ಸಿನೊಂದಿಗೆ ಅದು ಸಮಾಜಕ್ಕೆ ಎನನ್ನು ತಿಳಿಸಬೇಕು ಎನ್ನುವುದು
ಅವರ ಬಹಳ ದೊಡ್ಡ ಚಿಂತನೆಯಾಗಿತ್ತು.
ಕನ್ನಡ ಚಿತ್ರ
ಅಥವಾ ಭಾರತೀಯ ಯಾವುದೇ ಚಿತ್ರರಂಗ ಉದ್ಯಮವಾಗಿ ಬದಲಾದದ್ದು ತೀರ ಇತ್ತೀಚಿಗೆ. ಆರಂಭದಲ್ಲಿ ಈ ತಂತ್ರಜ್ಞಾನವನ್ನು
ಈ ದೇಶದ ಇತಿಹಾಸ , ಭವ್ಯ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಪರಿಚಾರಿಕತೆಗೆ ಬಳಸಿಕೊಳ್ಳಲಾಯಿತು
ಮತ್ತು ಅದನ್ನೇ ಸರಿಯೆಂದು ಪರಿಗಣಿಸಿ ಒಂದು ವಾದವಾಗಿ ಸ್ಥಾಪಿಸಲಾಯಿತು. ಆದರೆ ಕಾಲಾಂತರದಲ್ಲಿ ಇದು
ಹಣ ಹೂಡಿಕೆಯ ಅತ್ಯಂತ ಆಕರ್ಷಕ ಮತ್ತು ದಿಢೀರ್ ಶ್ರೀಮಂತಿಕೆಯ ದಾರಿಯಾಗಿ ಮಾರ್ಪಟ್ಟು ಉದ್ಯಮವಾಗಿ ಬದಲಾಯಿತು.
ಹಾಗಂತ ತನ್ನ ಸಾಮಾಜಿಕತೆಯಿಂದ ಮನವೀಯ ಮೌಲ್ಯಗಳ ಬಗೆಗಿದ್ದ
ಕಾಳಜಿಂದ ಸಂಪೂರ್ಣ ವಿಮುಖವಾಯಿತು ಎಂದು ನಾವು ಹೇಳುವಂತಿಲ್ಲ. ಮಾನವೀಯತೆಯನ್ನೇ ಗಮನದಲ್ಲಿರಿಕೊಂಡು
ಈ ಅರ್ಧಶತಮಾನದಲ್ಲಿ ಬಂದ ಅನೇಕ ಚಿತ್ರಗಳನ್ನು ನಾವು ನೋಡಿದ್ದೇವೆ. ದೋ ಭಿಗಾ ಜಮೀನ್, ದೋ ಆಂಖೇ ಬಾರಾ
ಹಾಥ್, ಶ್ರೀ ೪೨೦, ಜಿಸ್ ದೇಶ್ ಮೇ ಗಂಗಾ ಬೆಹತಿ ಹೈ,ಮದರ್ ಇಂಡಿಯಾ, ರಾಮ್ ತೇರಿ ಗಂಗಾ ಮೈಲಿ, ವಾರಿಸ್,
ಅಂತರ್‌ಮಹಲ್, ಸ್ಲಂ ಡಾಗ್ ಮಿಲೇನಿಯರ್, ಪಿಪ್ಲಿ ಲೈವ್,
ಹೀಗೆ ಸಾವಿರಾರು ಚಿತ್ರಗಳನ್ನು ಉದ್ಧರಿಸಬಹುದು. ಕನ್ನಡಕ್ಕೆ ಬಂದರೆ ಸಾಕುಮಗಳು, ಬಂಗಾರದ
ಮನುಷ್ಯ, ಚಂದವಳ್ಳಿಯ ತೋಟ,ಬಡವರ ಬಂಧು, ಚೋಮನದುಡಿ, ನಮ್ಮ ಮಕ್ಕಳು, ಸ್ಕೂಲ್‌ಮಾಸ್ಟರ್, ಬೆಟ್ಟದ ಹೂ,
ಗಜ್ಜೆಪೂಜೆ,ಧರ್ಮಸೆರೆ, ಮಸಣದ ಹೂ, ಭೂತಯ್ಯನ ಮಗ ಅಯ್ಯು, ಫಣಿಯಮ್ಮ,ಬರ, ಪಟ್ಟಣಕ್ಕೆ ಬಂದ ಪತ್ನಿಯರು, ಘಟಶ್ರಾದ್ಧ, ಕಾಕನಕೋಟೆ, ಕಾಡು, ಮಕ್ಕಳ ಸೈನ್ಯ, ಬೆತ್ತಲೆ
ಸೇವೆ, ಕಪ್ಪು-ಬಿಳುಪು, ಕಾರ್ಮಿಕ ಕಳ್ಳನಲ್ಲ, ಬ್ಯಾಂಕರ್ ಮರ್ಗಯ್ಯ, ಹುಲಿಯಾ, ಹಸೀನಾ, ದ್ವೀಪ,
ಗುಲಾಬಿ ಟಾಕೀಜ್, ಮೊಗ್ಗಿನ ಮನಸ್ಸು, ನಾನು ನನ್ನ ಕನಸು,ಮಠ, ಎದ್ದೇಳು ಮಂಜುನಾಥ, ಜಾಕಿ,
ತೀರ ಇತ್ತೀಚಿಗೆ ಬಂದ ದಂಡುಪಾಳ್ಯ, ಇವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕತೆಯನ್ನು ಮೈಗೂಡಿಸಿಕೊಂಡು
ಮಾನವೀಯ ಮೌಲ್ಯಗಳನ್ನೇ ಆಧರಿಸಿದ ಮಹತ್ವದ ಚಿತ್ರಗಳು.
ಈ ಮೇಲಿನ ಪಟ್ಟಿ ನನ್ನ ದೃಷ್ಟಿಯ ಮಿತಿಯೊಳಗೆ ನಾನು ಸಾಗಿದ ಚಿತ್ರವಿಕ್ಷಣೆಯ ದಾರಿಯೊಳಗಿನ ಸಾಕ್ಷಿಗಳು.
ಅಂದ ಮಾತ್ರಕ್ಕೆ ಇದು ಇಡೀ ಕನ್ನಡ ಚಿತ್ರರಂಗದಲ್ಲಿಯ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಚಿತ್ರಗಳ
ಸಂಪೂರ್ಣ ಪಟ್ಟಿಯಲ್ಲ. ಆದರೆ ಮಾನವೀಯ ಮೌಲ್ಯವನ್ನೇ ಪ್ರಧಾನ ವಿಚಾರವಾಗಿಸಿಕೊಂಡು ನಾನು ನೋಡಿದ ಚಿತ್ರಗಳು.
ಸಿನಿಮಾ ರಂಗವನ್ನು ಹಣಹೂಡಿಕೆಯ, ಹಣಗಳಿಕೆಯ ಮಾರ್ಗವೆಂದು ಪರಿಗಣಿಸಿದವರ ಮಧ್ಯದಲ್ಲಿಯೇ
ಇದನ್ನೊಂದು ಸಾಮಾಜಿಕ ಕ್ರಾಂತಿಯ, ಮನುಷ್ಯತ್ವದ ಸಾಧನೆಯ
ಸಾಧನವಾಗಿಸಿಕೊಂಡವರ ದೊಡ್ಡ ಪಡೆ ವರ್ತಮಾನದಲ್ಲಿರುವುದು ಅತ್ಯಂತ ಸಂತಸದ ಸಂಗತಿ. ಮೃಣಾಲ್ ಸೇನ್‌ರಿಂದ
ಪ್ರಾರಂಭವಾಗಿ ವಿ.ಶಾಂತಾರಾಂ, ಕೆ.ಎ.ಅಬ್ಬಾಸ್, ರಾಜಕಪೂರ್, ಯಶ್ ಚೋಪ್ರಾ, ವಿ.ವಿ ಚೋಪ್ರಾ, ಅಶೋಕ
ಕಶ್ಯಪ್, ಅಮೀರ್ ಖಾನ್, ಗಿರೀಶ ಕಾರ್ನಾಡ್, ಕರಣ್ ಜೋಹರ್, ಬಿ.ವಿ.ಕಾರಂತ, ಜಿ,ವಿ ಅಯ್ಯರ್, ಎಮ್,
ಎಸ್, ಸತ್ಯು, ಗಿರೀಶ ಕಾಸರವಳ್ಳಿ, ಟಿ.ಎಸ್. ನಾಗಾಭರಣ, ಗುರುಪ್ರಸಾದ್-ಇವರೆಲ್ಲಾ ಸಿನಿಮಾ ಸಾರಬೇಕಾದ
ಮಾನವೀಯತೆಯನ್ನು ಕುರಿತೇ ತಲೆಕೆಡಿಸಿಕೊಂಡವರು. ಶ್ರೇಷ್ಟ
ಸಿನಿಮಾ ಚಿಂತಕನೊಬ್ಬ ಒಂದು ಸಿನಿಮಾ ಏನಾಗಿರಬೇಕು ಅನ್ನುವುದನ್ನು ತುಂಬ ಚೆನ್ನಾಗಿ ಹೇಳಿದ್ದಾರೆ,
“ “Great cinema, like all great art must serve the spiritual needs of the people, express their unexpressed
thoughts and emotions, their joys and sorrows, their urges and aspirations. It
must make the people laugh and cry, it must make them think, it must stimulate
their imagination, make them indignant against social injustice, must help them
to understand and its complexities, it must help them to understand themselves.”
ಸಾಮಾಜಿಕತೆಯ
ಬುನಾದಿಯೇ ಮಾನವೀಯತೆ. ಎಲ್ಲಿ ಮಾನವೀಯತೆ ಉಪೇಕ್ಷೆಗೊಳಗಾಗಿರುತ್ತದೆಯೋ ಅಲ್ಲಿ ಒಂದು ಆರೋಗ್ಯಕರ ಸಾಮಾಜಿಕತೆಯನ್ನು
ನಾವು ನಿರೀಕ್ಷಿಸಲಾಗದು. ಹೀಗಾಗಿ ಕನ್ನಡದ ಎಲ್ಲ ಸಾಮಾಜಿಕ ಚಿತ್ರಗಳನ್ನು ಮಾನವೀಯ ಮೌಲ್ಯಗಳನ್ನು ಚಿತ್ರಗಳೆಂದೇ
ಸಾರಾಸಗಟಾಗಿ ಸ್ವೀಕರಿಸಬಹುದು. ಕನ್ನಡ ಚಿತ್ರಗಳ ಪಾಲಿಗೆ ಗಮನಿಸಬೇಕಾದ ವಿಚಾರ- ಕಪ್ಪು-ಬಿಳುಪಿನ ಅವಧಿಯನ್ನು
ಭಕ್ತಿ ಮತ್ತು ವ್ಯಕ್ತಿ ಪ್ರಧಾನದ ಚಿತ್ರಗಳ ಕಾಲ ಎನ್ನಬಹುದು. ಈಸ್ಟಮನ್ ಕಲರ್‌ದ ಘಟ್ಟವನ್ನು ಸಾಮಾಜಿಕ
ಚಿತ್ರಗಳ ಘಟ್ಟ ಎನ್ನಬಹುದು. ಈ ಸಾಮಾಜಿಕತೆಯ ವ್ಯಾಪ್ತಿಯಲ್ಲಿಯೇ “Angry Young Man movement ಮತ್ತು
ಹೊಸ ಅಲೆಯ ಚಿತ್ರಗಳನ್ನು ಸೇರಿಸಿಬಿಡಬಹುದು. ಇನ್ನು ಅಲ್ಟ್ರಾಸೌಂಡ್, ಮಲ್ಟಿಟೇಕ್ ಮತ್ತು ಪಿ.ವಿ.ಆರ್‌ಗಳ
ಈ ಕಾಲಘಟ್ಟವನ್ನು ಉದ್ಯಮ ಪರ ಚಿತ್ರಗಳ ಘಟ್ಟವೆಂದು ಗುರುತಿಸಬಹುದೇನೋ. ಈ ವಿಭಜನೆ ತೀರ ಕಟ್ಟು ನಿಟ್ಟಿನದಲ್ಲ.
ಚಿತ್ರಗಳ ಸಂಖ್ಯಾವಾರು ಫಲಿತಾಂಶವನ್ನು ಆಧರಿಸಿದ್ದು.
ಸಿನಿಮಾ ಎಂಬ ಭ್ರಮಾಲೋಕಕ್ಕೆ ಮಾನವೀಯ ಮೌಲ್ಯಗಳನ್ನು
ಆಧರಿಸಿದ ಹೊಸ ಅಲೆಯ ಚಿತ್ರಗಳು ಎಂತಹ ಹೊಡೆತವನ್ನು ಕೊಟ್ಟವು ಎನ್ನುವುದನ್ನು ಇಲ್ಲಿ ಗಮಿನಿಸಿ-“”
The new wave is valid because it is iconoclastic, it is helping to break the
images that many of have worshipped so long, the great golden calf of the
box-office the shadow gods and goddess of the star system, the oracles of “
Give the public what it wants”. ಇಲ್ಲಿ ಕನ್ನಡದ ಎರಡು ಮಹತ್ವದ ಚಿತ್ರಗಳನ್ನು ಹೆಸರಿಸಬಹುದು-ಕಾಡು
ಮತ್ತು ಸಂಸ್ಕಾರ. ನಮ್ಮ ಸಾಹಿತ್ಯದಲ್ಲಿ ಮಡಿವಂತರ ಒಂದು ಗುಂಪಿರುವಂತೆ ಚಿತ್ರರಂಗದಲ್ಲಿಯೂ ಕೂಡ. ಹೀಗಾಗಿ
ಇವು ಮಾಸ್ ಮೂವಿಗಳ ತೆಕ್ಕಗೆ ಬೀಳಲಿಲ್ಲ. ಸಿನಿಮಾ ಒಂದೆಡೆಯಾದರೆ ಆಲೋಚನೆ ಮತ್ತೊಂಡೆಯಾಯಿತು. ಇವೆರಡನ್ನು
ಎರಕ ಹೊಯ್ದು ಕನ್ನಡದ ಎರಡು ಮಹತ್ವದ ಸಂಸ್ಥೆಗಳು ಚಿತ್ರಗಳನ್ನು ಮಾಡಿವೆ. ಒಂದು ಅಂಕಲಗಿ ಬ್ರದರ್ಸ
ಮತ್ತೊಂದು ರಾಶಿ ಸಹೋದರರು. ಆದರೆ ಅವು ಈಗ ಮರೆತು ಹೋದ ಪುಟಗಳೇ. ಆದರೆ ಹೊಸ ಅಲೆಯ ಚಿತ್ರಗಳ ಮಾನವೀಯ
ಕಾಳಜಿ ಆಕ್ಯಾಡೆಮಿಕ್ ಶಿಸ್ತನ್ನು ಸೇರಿಸಿಕೊಂಡು ಜನಮುಖಿಯಾದ ಸಿನಿಮಾಗಳನ್ನು ಮಾಡಿದ ಕೆಲವು ಮಹನೀಯರನ್ನು
ಇಂದಿಗೂ ನಾವು ಮರೆತಿಲ್ಲ. ಉದಾಹರಣೆಗೆ ಬಿ.ಆರ್. ಪಂತುಲು, ಪುಟ್ಟಣ್ಣ ಕಣಗಾಲ್, ಎಮ್. ಎಸ್. ಸತ್ಯು,
ಸಿದ್ಧಲಿಂಗಯ್ಯ, ಅಬ್ಬಯ್ಯ ನಾಯ್ಡು, ಸುರೇಶ ಹೆಬ್ಳಿಕರ್,
ನಾಗಭರಣ ,ಬರಗೂರು ಹಾಗೂ ಅನೇಕರು.
ಮಾನವೀಯ ಮೌಲ್ಯಗಳನ್ನು
ಪ್ರತಿಪಾದಿಸುವ ಕನ್ನಡ ಚಿತ್ರಗಳ ದೊಡ್ಡ ಸಂಖ್ಯೆಯಿದೆ. ಕರುಳಿನ ಕರೆ, ಸಾಕುಮಗಳು, ಬಂಗಾರದ ಮನುಷ್ಯ,
ಸಂಪತ್ತಿಗೆ ಸವಾಲ್, ಗಿರಿಕನ್ಯೆ, ಜಿಮ್ಮಿಗಲ್ಲು, ಅಂತ, ಚಕ್ರವ್ಯೂಹ, ತಾಯಿಯ ಮಡಿಲಲ್ಲಿ,ನ್ಯೂ ಡೆಲ್ಲಿ, ತಾಯಿಯ ನುಡಿ ಹೀಗೆ ನೂರಾರು ಚಿತ್ರಗಳನ್ನು ಹೇಳುತ್ತಾ ಹೋಗಬಹುದೇನೋ.
ಆದರೆ ಇವೆಲ್ಲ ಚಿತ್ರಗಳಿಗೆ ಮಾನವೀಯ ಮೌಲ್ಯಗಳ ಪ್ರತಿಪಾದನೆಯೊಂದಿಗೆ ಬೇರೆ ಆಯಾಮಗಳು ಇವೆ. ಮನುಷ್ಯತ್ವವನ್ನೇ
ಮುಖ್ಯವಾಗಿಟ್ಟುಕೊಂಡ ಅನೇಕ ಚಿತ್ರಗಳಲ್ಲಿ ನನಗೆ ಅತ್ಯಂತ ಮುಖ್ಯವಾಗಿ ಕಾಣುವುದು ಸಿದ್ಧಲಿಂಗಯ್ಯನವರ
ಬಂಗಾರದ ಮನುಷ್ಯ ಮತ್ತು ಭೂತಯ್ಯನ ಮಗ ಅಯ್ಯು. ನಾಯಕ ಪ್ರಧಾನವಾದ, ನಾಯಕನ ಆರಾಧನೆಯ ಎಡೆಗೆ ಒಂದಿಷ್ಟು
ವಾಲಿದ್ದರಿಂದ ನಾನು ಬಂಗಾರದ ಮನುಷ್ಯನನ್ನು ಎತ್ತಿಕೊಳ್ಳುತ್ತಿಲ್ಲ. ಬದಲಾಗಿ ಇವುಗಳಿಂದ ಮುಕ್ತವಾಗಿ
ಒಂದು ವಿಚಾರವನ್ನೇ ಕೇಂದ್ರವಾಗಿಸಿಕೊಂಡು ಅದನ್ನು ಸಾಧಿಸುವದಕೊಸ್ಕರ ಪಾತ್ರಗಳನ್ನು ಬಳಸಿಕೊಂಡ ಭೂತಯ್ಯನ
ಮಗ ಅಯ್ಯುನನ್ನು ಚರ್ಚಿಸುವುದು ಯೋಗ್ಯ ಎಂದುಕೊಂಡಿದ್ದೇನೆ.
kannada actor M P Shankar |
ಭೂತಯ್ಯ- ಹೆಸರೇ ಸೂಚಿಸುವಂತೆ ಮನುಷ್ಯರು, ಮನುಷ್ಯತ್ವ
ಮತ್ತು ಮಾನವೀಯತೆಗಳಿಂದ ಹೊರತಾದ ಒಂದು ಪಾತ್ರ. ಈತ ಜೀವಂತವಿದ್ದೂ ತನ್ನ ಕ್ರೂರತೆಯಿಂದಾಗಿ ಸಮಾಜದ
ಕಣ್ಣಿನಲ್ಲಿ ಭೂತವಾಗಿ ಕಾಣಿಸಿಕೊಂಡವನು. ಹಣ ಬಿಟ್ಟರೆ ಆತನ ಕಣ್ಣಿಗೆ ಏನೂ ಕಾಣುವುದಿಲ್ಲ. ಶವದ ಮೆರವಣಿಗೆಯನ್ನು
ನಿಲ್ಲಿಸಿಯೂ ಸುಲಿಗೆ ಮಾಡುವ ಸೈತಾನ ಈ ಭೂತಯ್ಯ. ಈತ ಸಮಾಜ ಕಂಟಕ, ಮನುಷ್ಯಲೋಕದ ಕಳಂಕ.ಮನುಷ್ಯತ್ವ
ಮತ್ತು ಮೃಗತ್ವದ ಮಧ್ಯ ನಡೆಯುವ ಹೋರಾಟಕ್ಕೆ ಇದಕ್ಕಿಂತಲೂ ಉತ್ತಮವಾದ ಒಂದು ಸಿನಿಮಾ ಕನ್ನಡದಲ್ಲಿ ಬರಲಿಲ್ಲವೆಂದು
ಗಟ್ಟಿಯಾಗಿ ಹೇಳಬಹುದು.
ಜೈನ್ ಕಂಬೈನ್ಸ್‌ನ
‘ಭೂತಯ್ಯನ ಮಗ ಅಯ್ಯು’‘ ಈಸ್ಟಮನ್ ಕಾಲದಲ್ಲಿ ಬಂದ
ಮೊದಲ ಔಟ್‌ಡೋರ್ ಶೂಟಿಂಗ್ ಮಾಡಿದ ಚಿತ್ರ. ಕನ್ನಡದಲ್ಲಿ ಔಟ್‌ಡೋರ ಶೂಟಿಂಗ್‌ನ ರುಚಿ ಹಚ್ಚಿಸಿದವರು
ಪುಟ್ಟಣ್ಣ ಕಣಗಾಲ್. ಕಣಗಾಲರ ಒಂದೊಂದು ಚಿತ್ರವೆಂದರೆ ಕರ್ನಾಟಕದ ಒಂದೊಂದು ಪ್ರದೇಶದ ದರ್ಶನ. ‘ಫಲಿತಾಂಶ‘ದಲಿ
ಬಿಜಾಪೂರಕ್ಕೆ ಕರೆದುಕೊಂಡು ಹೋಗುವ ಕಣಗಾಲ್, ‘ಮಾನಸ ಸರೋವರ‘ದಲ್ಲಿ ಸೆಂಡೂರಿಗೆ ಕರೆದುಕೊಂಡು ಹೋದರು.
‘ನಾಗರಹಾವಿ‘ನಲ್ಲಿ ಚಿತ್ರದುರ್ಗವನ್ನು ಸುತ್ತಿಸಿದ ಕಣಗಾಲ್ ‘ಉಪಾಸನೆ‘ಯಲ್ಲಿ ಕನ್ಯಾಕುಮಾರಿಗೆ ಕರೆದೊಯ್ಯುತ್ತಾರೆ. ‘ಋಣಮುಕ್ತಳು‘
ಚಿತ್ರದಲ್ಲಂತೂ ಮೌಂಟ್‌ಅಬು ಹತ್ತಿ ಇಳಿಯುತ್ತೀರಿ. ಈ ಜಾಡಿನಲ್ಲಿದ್ದುದೇ ಸಿದ್ಧಲಿಂಯ್ಯನವರ ‘ಭೂತಯ್ಯನ
ಮಗ ಅಯ್ಯು‘. ಕಳಸಾಪೂರ, ಕೆಳಗೂರು ಟೀ ಎಸ್ಟೇಟ್, ಗೋರೂರುಗಳ ಸುತ್ತ ಚಿತ್ರಿಕರಣಗೊಂಡ ‘ಭೂತಯ್ಯನ ಮಗ
ಅಯ್ಯು‘,ಮೂಲ- ಗೋರೂರು ರಾಮಸ್ವಾಮಿ ಅಯ್ಯಂಗಾರರ ‘ವೈಯ್ಯಾರಿ‘ ಕಥಾಸಂಕಲನದಿಂದ ಎತ್ತಿಕೊಂಡ ಒಂದು ಕಥೆಯನ್ನು
ಆಧರಿಸಿದ್ದು. ಎನ್.ವೀರಾಸ್ವಾಮಿ, ಎಸ್.ಪಿ ವರದರಾಜ್, ಸಿದ್ಧಲಿಂಗಯ್ಯ ಹಾಗೂ ಚಂದುಲಾಲ್ ಜೈನ್‌ರ ಸಾಮೂಹಿಕ
ನಿರ್ಮಾಣದಲ್ಲಿ ಬಂದ ಈ ಚಿತ್ರಕ್ಕೆ ಸಿದ್ಧಲಿಂಗಯ್ಯನವರ ಚಿತ್ರಕಥೆ ಮ್ತತು ನಿರ್ದೇಶನವಿದೆ. ಹುಣಸೂರು
ಕೃಷ್ಣಮೂರ್ತಿಯವರ ಸಾಹಿತ್ಯ, ಎಮ್.ಪಿ ಶಂಕರ್.ಲೋಕೆಶ್, ಲೋಕನಾಥ್, ವಿಷ್ಣುವರ್ಧನ್, ಬಾಲಕೃಷ್ಣ,ಭವಾನಿ,
ವಿ.ಶಾರದಾ, ದೀನೇಶ, ವೈಶಾಲಿ ಕಾಸರವಳ್ಳಿ, ಧೀರೆಂದ್ರಗೋಪಾಲ್ ಹಾಗೂ ಜಯಮಾಲಾರ ತಾರಾಗಣವಿದೆ.
Kannada actor M P Shankar with Lokanath |
ಮಲೆನಾಡಿನ ಹಳ್ಳಿಯೊಂದರಲ್ಲಿ ಹಣ ಸುಲಿಯುವವನೊಬ್ಬ
ರೈತರನ್ನು ದೋಚುವ ಅಮಾನವೀಯತೆ ಅಂತಿಮವಾಗಿ ಅವನ ಮಗನನ್ನು
ಗೆಲ್ಲುವ ಮಾನವೀಯತೆ ಈ ಚಿತ್ರದ ತಾಕಲಾಟ. ಕೋರಿಯೋಗ್ರಾಫಿ ಇಷ್ಟೊಂದು ಶುದ್ಧವಾಗಿರುವ ಚಿತ್ರವೊಂದು
ಸಿಗುವುದು ಅಪರೂಪವೇ. ಪ್ರತಿ ಪಾತ್ರವೂ ಮಣ್ಣಿನಿಂದ, ಬಡತನದಿಂದ, ಹಿಂಸೆಯಿಂದ ಎದ್ದುಬಂದಿವೆ. ಇದು
ಒಂದು ಮಾಸ್ ಚಿತ್ರವಾಗಿದ್ದರೂ ಕೂಡ ಕಲಾತ್ಮಕತೆಗೆ ಕುಂದಿಲ್ಲ. ಮಾರುಕಟ್ಟೆಯಲ್ಲಿ ಗೆಲ್ಲಿಸುವದಕ್ಕಾಗಿ
ಸನ್ನಿವೇಶಗಳನ್ನು ಎರ್ರಾಬಿರ್ರಿಯಾಗಿ ಎಳೆದಾಡಿಲ್ಲ.ಮೂಲ ಕಥೆಗೆ ಧಕ್ಕೆ ಉಂಟಾಗುವ ಯಾವ ತಪ್ಪು ಇಲ್ಲಿ
ಆಗಿಲ್ಲ ಎನ್ನುವುದೇ ಇದೊಂದು ಅಪರೂಪದ ಚಿತ್ರ ಎನ್ನಲಿಕ್ಕೆ ಕಾರಣ.
ಭೂತಯ್ಯ ಮತ್ತು ಆತನ ಮಗ ಅಯ್ಯು ವಾಸಿಸಿದ ಊರಿನಲ್ಲಿಯೇ ತನ್ನ ಮಗ ಬುಳ್ಳನೊಂದಿಗೆ ಬಡ, ಸಂಸ್ಕಾರವಂತ
ರೈತನೊಬ್ಬ ವಾಸಿಸಿದ್ದಾನೆ. ಈತ ಭೂತಯ್ಯನ ಕಪಿಮುಷ್ಟಿಗೆ ಸಿಕ್ಕಿಲ್ಲ ಎನ್ನುವುದೇ ಒಂದು ಹೆಗ್ಗಳಿಕೆ.
ಹಾಡುಹಗಲೇ ರಕ್ತ ಹೀರುವ ಈ ಭೂತಯ್ಯನಿಗೆ ಈಗಾಗಲೇ ಎರಡು ಬಾರಿ ಪಾರ್ಶ್ವ ಹೊಡೆದಿದೆ. ಸಾವು ಮತ್ತು ಅಸಹಾಯಕತೆಗಳನ್ನು
ಹೆಗಲ ಮೇಲೆ ಹೊತ್ತು ತಿರುಗುವ ಈ ಭೂತಯ್ಯನಿಗೆ ಹೆಣಗಳು ಕೂಡ ಹಣ ಗಳಿಸುವ ಮಾರ್ಗಗಳು. ಸತ್ತು ಮಣ್ಣು
ಸೇರಿದ ರೈತರ ಗೋರಿಗಳನ್ನು ಬಗಿದು ಹೆಬ್ಬಟ್ಟು ಒತ್ತಿಸಿಕೊಳ್ಳುವ ಈ ಭೂತಯ್ಯ ಮನೆಗೆ ಬಂದ ಅತಿಥಿಗಳು,
ಬೀಗರು ಹೆಚ್ಚು ಊಟ ಮಾಡಿದರೂ ಹಣ ವಸೂಲಿ ಮಾಡುವ ಕ್ರೂರಿ. ರೈತನೊಬ್ಬನ ಅಂತ್ಯ ಸಂಸ್ಕಾರಕ್ಕೆ ಈ ಭೂತಯ್ಯ
ಅಡ್ಡಿಪಡಿಸುತ್ತದುದನ್ನು ನೋಡಲಾಗದೇ ಬುಳ್ಳನ ತಂದೆ ಭೂತಯ್ಯನಿಗೆ ತನ್ನ ಜಮೀನು ಅಡವಿಟ್ಟು ಸಂಸ್ಕಾರ
ಕ್ರಿಯೆಗೆ ದಾರಿ ಮಾಡಿಕೊಡುತ್ತಾನೆ. ಜಮೀನು ಗೆದ್ದ ಭೂತಯ್ಯ ಕೊನೆಗೊಂದು ದಿನ ಸೇಡು, ಪ್ರತಿಕಾರ ಮತ್ತ
ಸುಲಿಗೆ ಮಂತ್ರವನ್ನು ತನ್ನ ಮಗ ಅಯ್ಯುವಿಗೆ ಭೋದಿಸಿ ಕೊನೆಯುಸಿರೆಳುತ್ತಾನೆ. ಸಾಯುವಾಗ ಆತ ಮಗನಿಗೆ
ಕೊಡುವ ಮಹತ್ವದ ಕಾಣಿಕೆ ಬಂದೂಕು.ಇಷ್ಟೊಂದು ಮೆರೆದ ಭೂತಯ್ಯ ಸತ್ತಾಗ ಹೆಣ ಎತ್ತಲು ಒಬ್ಬನೇ ಒಬ್ಬ ಬರುವುದಿಲ್ಲ.
ಬುಳ್ಳಯ್ಯನ ತಂದೆ ಅಂತ್ಯಸಂಸ್ಕಾರಕ್ಕೆ ಹೋದರೆ ಭೂತಯ್ಯನ ಮಗ ಅಯ್ಯು ಆತನನ್ನು ಧಿಕ್ಕರಿಸುತ್ತಾನೆ.
ಚಕ್ಕಡಿಯಲ್ಲಿ ಹೊರಟ ಭೂತಯ್ಯನ ಹೆಣಕ್ಕೆ ಹಳ್ಳಿಗರ ಶಾಪದ ಸುರಿಮಳೆಯಾಗುತ್ತದೆ. ಆತ ಮಣ್ಣು ಸೇರುತ್ತಾನೆ.
kannada actor lokesh |
ಎರಡನೇ ತಲೆಮಾರಿನ ಅಯ್ಯು ತನ್ನ ತಂದೆ ಕಾಲದ ಒಪ್ಪಂದದ
ಪ್ರಕಾರ ಬುಳ್ಳನ ತಂದೆಗೆ ಜಮೀನು ಕೇಳುತ್ತಾನೆ. ಕೇಸು ಕೋರ್ಟಿಗೆ ಬೀಳುತ್ತದೆ. ಕೋರ್ಟಿನಲ್ಲಿ ಸೋತ
ಬುಳ್ಳಾ ಮನೆ- ಜಮೀನು ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಅಪಮಾನ ಸಿಸಿಕೊಳ್ಳಲಾಗದ ಬುಳ್ಳನ ತಂದೆ ಆತ್ಮಹತ್ಯೆ
ಮಾಡಿಕೊಳ್ಳುತ್ತಾನೆ. ಇದನ್ನು ಸಹಿಸಿಕೊಳ್ಳಲಾಗದ ಬುಳ್ಳ ಅಯ್ಯುನ ವಿರುದ್ಧ ಕತ್ತಿ ಮಸೆಯಲಾರಂಭಿಸುತ್ತಾನೆ.
ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು ಸೇರು ಇಡೀ ಊರು
ಪಂಗಡಗಳಾಗಿ ದ್ವೇಷದಲ್ಲಿ ಹೊತ್ತಿ ಉರಿಯಲಾರಂಭಿಸುತ್ತದೆ. ಆಗ ತೇಲಿ ಬರುವ ಜಿ.ಕೆ.ವೆಂಕಟೇಶರ ಈ ಗೀತೆ-
“ ವಿರಸವೆಂಬ ವಿಷಕೆ ಬಲಿಯಾದೆ ಏತಕೆ
ಸುಖ ಶಾಂತಿ ನಾಶಕೆ, ಮರುಳಾ." ಜೀವನದುದ್ದಕ್ಕೂ ನಿಮ್ಮನ್ನು ಕಾಡುತ್ತದೆ.
ಇಡೀ ಚಿತ್ರಕ್ಕೆ ಹೊಸ ತಿರುವನ್ನು ಕೊಡುವ ಪಾತ್ರ ಅಯ್ಯುವಿನ
ಹೆಂಡತಿ. ಸ್ರ್ತೀ ಪಾತ್ರವೊಂದು ಚಿತ್ರದ ಪೂರ್ವಾರ್ಧದಲ್ಲಿ ಮೌನವಾಗಿದ್ದು ಎರಡನೆ ಭಾಗದಲ್ಲಿ ಈಡೀ ಚಿತ್ರದ
ಪಾತ್ರಗಳನ್ನು ನಿರ್ದೇಶಿಸುವ ಇಂಥ ಮತ್ತೊಂದು ಕನ್ನಡ ಚಿತ್ರವಿರಲಿಕ್ಕಿಲ್ಲ. ಅತ್ಯಂತ ಕಡಿಮೆ ಮಾತನಾಡಿದ
ಪಾತ್ರವಿದು, ಆದರೆ ಆಕೆ ಆಡುವ ಒಂದೊಂದು ಮಾತು ಅಯ್ಯುನನ್ನ
ಮನುಷ್ಯತ್ವದೆಡೆಗೆ ಕರೆದುಕೊಂಡು ಹೋಗುವ ಹೊಸದಾರಿಗಳು. ಭಾರತಲ್ಲಿ ಹೆಂಡತಿಯೊಬ್ಬಳು ಸಹಧರ್ಮಿಣಿಯಾಗಿರುವುದರೊಂದಿಗೆ
ಏನಾಗಿರುತ್ತಾಳೆ, ಏನಾಗಿರಬೇಕು ಎನುವದಕ್ಕೂ ಇದೊಂದು ಅತ್ಯುತ್ತಮ ನಿದರ್ಶನ. ಇವಳು ಕ್ಷಮಯಾ ಧರಿತ್ರಿ,
ಮಂತ್ರಿಯಂತೆ ಮಾರ್ಗದರ್ಶಿಸುತ್ತಾ ಅಯ್ಯುನನ್ನು ರಕ್ಷಿಸಿಕೊಳ್ಳುವುದರೊಂದಿಗೆ ತನ್ನ ಮಾಂಗಲ್ಯವನ್ನು
ಬುಳ್ಳನ ಹೆಂಡತಿಯ ಮಾಂಗಲ್ಯವನ್ನು ಬಡ ರೈತರ ಸಂಸಾರಗಳನ್ನು ರಕ್ಷಿಸುತ್ತಾರೆ. ಬುಳ್ಳನ ನೇತ್ರತ್ವದಲ್ಲಿ
ಹಾಡು ಹಗಲೇ ಪುಂಡರ ಗುಂಪೊಂದು ಅಯ್ಯುವಿನ ಮನೆ ಹೊಕ್ಕು ದೋಚಿದರೂ ಪೋಲಿಸರ ಸಮಕ್ಷಮದಲ್ಲಿ ಊರಿನವರೆಲ್ಲಾ
ನನ್ನ ಬಂಧುಗಳು, ಅವರ್ ಯಾರು ತನಗೆ ಕೇಡು ಬಗೆಯಲಿಲ್ಲ ಎನ್ನುವ ಮಾತನ್ನು ಅಯ್ಯುವಿನ ಮೂಲಕ ಹೇಳೀಸಿ
ಮನಪರಿವರ್ತನೆಗೆ ನಾಂದಿ ಹಾಡುತ್ತಾಳೆ. ಚಿತ್ರದ ಕೊನೆಯ ದೃಶ್ಯ ಹೀಗೆದೆ-ವಿಪರೀತ ಮಳೆ, ಅಯ್ಯು ಊರಲಿಲ್ಲ
.ತುಂಬಿ ಬಂದ ಹೊಳೆಯಲಿ ಆತನ ಹೆಂಡತಿ, ಮಕ್ಕಳು ನೀರುಪಾಲಾಗುತ್ತಿದ್ದಾರೆ, ಈಗ ಬುಳ್ಳಾ ತನ್ನ ಪ್ರಾಣವನ್ನು
ಲೆಕ್ಕಿಸದೇ ಅಯ್ಯುವಿನೊಂದಿಗಿನ ಹಳೆಯ ಹಗೆತನವನ್ನು ಮರೆತು ಅವರನ್ನು ರಕ್ಷಿಸುತ್ತಾನೆ. ಆ ಮೂಲಕ ಮಾನವೀಯತೆಯ
ಗೆಲುವನ್ನು ಸಾರುತ್ತಾನೆ
ಆದರೆ ಈ ಚಿತ್ರದ ಶಕ್ತಿಯೇ ನಟ ಲೋಕೆಶ್. ಇಂಥ ಒಬ್ಬ
ನಟನನ್ನು ಕನ್ನಡ ಚಿತ್ರರಂಗ ಮತ್ತೆ ಕಾಣುವುದು ಕನಸಿನ ಮಾತೇ. ಒರಟು ತಂದೆಯಾಗಿ ಎಮ್. ಪಿ. ಶಂಕರ್ ಆತನ
ಮಗನಾಗಿ ಅಷ್ಟೇ ಒರಟಾದ ಲೋಕೆಶ್ ಎಂಥ ಅದ್ಭುತ ಜೋಡಿ! ಲೋಕೆಶ್ ಯಾವುದೇ ಪಾತ್ರವನ್ನು ನಟಿಸಲಿಲ್ಲ ಅವುಗಳನ್ನು
ಬದುಕಿಬಿಟ್ಟರು ಮತ್ತು ಬದುಕಿಸಿಬಿಟ್ಟರು. ಇಡೀ ಚಿತ್ರದ
ತುಂಬಾ ಅವರ ಆಂಗಿಕತೆಯನ್ನು ಗಮನಿಸಬೇಕು. ಅವರ ಮುಖವಂತೂ ಮಹಾರಂಗಭೂಮಿ. ಭಾಷೆಯನ್ನು ಬರೀ ಕಣ್ಣು ಮೂಗಿನಲ್ಲಿ
ಬಿಂಬಿಸಿಬಿಡುವ ಕಲಾವಿದ ಲೋಕೆಶ್. ಇವರ ಅಭಿನಯದ ಮುಂದೆ ವಿಷ್ಣುವರ್ಧನ ತುಂಬಾ ಪೇಲವ. ಈ ಚಿತ್ರದ ಮೂಲಕ
ಅಭಿನಯ ಲೋಕದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟವರು ನಟ ಲೋಕನಾಥ್. ಮೋಚಿಯ ಪಾತ್ರದ ಲೋಕನಾಥ್ ಎಂದರೆ ಉಪ್ಪಿನಕಾಯಿ,
ಉಪ್ಪಿನಕಾಯಿ ಎಂದರೆ ಲೋಕನಾಥ್ ಎನ್ನುವಷ್ಟು ಆಗ ಅವರು ಮನೆ ಮಾತಾಗಿಬಿಟ್ಟರು. ಚಿತ್ರದ ವಿಶೇಷತೆಯೇ
ಇದು. ಧೀರೆಂದ್ರಗೋಪಾಲ್, ದೀನೇಶ್, ಜಯಮಾಲಾ ಇಲ್ಲಿ
ಕೇವಲ ಪೋಷಕ ಪಾತ್ರಗಳು.
ಒಟ್ಟು ಚಿತ್ರದ
ಶಕ್ತಿ ಸಿದ್ಧಲಿಂಗಯ್ಯನವರ ನಿರ್ದೇಶನ. ಇಲ್ಲಿ ಅವಸರಕ್ಕೆ ಆಸ್ಪದವಿಲ್ಲ. ಅಬ್ಬರದ ಸಂಭಾಷಣೆಯಿಲ್ಲ. ಅಂತಹ
ಅದ್ಭುತವಾದ ಸಂಗೀತವೂ ಇಲ್ಲ. ಆದರೂ ಒಂದು ಚಿತ್ರ ಯಾಕೆ ನಮ್ಮನ್ನು ಕಾಡುತ್ತದೆ ಮತ್ತೆ ಮತ್ತೆ ಕೇಳಿಕೊಳ್ಳುವಂತೆ
ಯಾವುದೋ ಆಕರ್ಷಣೆಯನ್ನು ಸಿದ್ಧಲಿಂಗಯ್ಯನವರು ಇಲ್ಲಿಟ್ಟಿದ್ದಾರೆ. ಇದನ್ನು ನಿರ್ದೇಶಕನ ಕೈಚಳಕ ಎನ್ನದೇ
ಮತ್ತಿನ್ನೇನೆಂದು ಗ್ರಹಿಸಲಾದೀತು? ಇದು ಸತ್ಯ ಎನ್ನುವುದಾದರೆ ಕನ್ನಡದಲ್ಲಿ ಈ ತೆರನಾಗಿ ಕಾಡುವ ಚಿತ್ರಗಳ
ಸಂಖ್ಯೆ ಎಷ್ಟು ನೀವೇ ಉತ್ತರಿಸಬೇಕು.