ಆಧುನಿಕ ಇಂಗ್ಲೀಷ ಸಾಹಿತ್ಯದಲ್ಲಿ ಬದಲಾವಣೆಯ ದೊಡ್ಡ ಗಾಳಿ ಇವಳಿಂದಲೆ
ಪ್ರಾರಂಭವಾಯಿತು ಎನ್ನುತ್ತಾರೆ. 20ನೇ ಶತಮಾನದ ಮಾಡರ್ನಿಸ್ಟ್ ಬರಹಗಾರರಲ್ಲಿ ಇವಳ ಹೆಸರು ಅಗ್ರಪಂಕ್ತಿಯಲ್ಲಿದೆ. ಲಂಡನ್ನಿನ ಲಿಟರರಿ ಸೋಸೈಯಿಟಿ ಇರಬಹುದು ಅಥವಾ ಬ್ಲೂಮ್ಸ್ಬರಿ ಚಿಂತಕರ ಚಾವಡಿಯಿರಬಹುದು ಇವೆರಡರಲ್ಲೂ ಮತ್ತು ಇವುಗಳನ್ನು ಹೊರತಾಗಿ ಮಹಾಯುದ್ಧಗಳ ಕಾಲದ ಅವಧಿಯಲ್ಲಿ ಇವಳು ಮಹತ್ವದವಳೆ. ಬರಹಗಾರ್ತಿಯಾಗಬೇಕೆನ್ನುವ ಮಹಿಳೆ ತನ್ನದೇ ಆದ ಆರ್ಥಿಕ ಭದ್ರತೆ ಮತ್ತು ಒಂದು ಮನೆ ಹೊಂದಿರಲೇಬೇಕು ಎಂದು ಸಾರಿದವಳು ಇವಳು.
ಪ್ರಪಂಚವನ್ನು ಪ್ರಭಾವಿಸಿದ ಇಂಗ್ಲೀಷ್ ಸಾಹಿತ್ಯದಲ್ಲಿ ಬದಲಾವಣೆ ತಂದ ಇವಳ ಬದುಕಿನಲ್ಲಿ ಮಾತ್ರ ಸಾವಿನ ಕೊನೆಯವರೆಗೂ ಬದಲಾವಣೆಯ ಗಾಳಿ ಬಿಸಲೇ ಇಲ್ಲ. ಸುಳಿದ ಗಾಳಿಯಂತೆಯೇ ಸೆಳೆ ಸೆಳೆಯಾಗಿಯೇ ಇದ್ದಳು. 60ರ ಹೊಸ್ತಿಲಲ್ಲಿ ಕಾಲಿಡದೆ ನೀರಿಗಿಳಿದು ಆತ್ಮಹತ್ಯೆ ಮಾಡಿಕೊಂಡ ಇವಳ ಬದುಕು ಅಂತ್ಯಗೊಳ್ಳುವುದು ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಕೇವಲ ಆರು ವರ್ಷಗಳ ಮುಂಚೆ. ಅಂದರೆ 1941ರಲ್ಲಿ. ಹೆಸರು ವರ್ಜೀನಿಯಾ ಊಲ್ಫ.
ಭಾರತದ ಸ್ವಾತಂತ್ರ್ಯಕ್ಕೂ ಇವಳ ಸಾವಿಗೂ ಸಂಬಂಧವನ್ನು ನಾನು ಸುಮ್ಮನೆ ಕಲ್ಪಿಸಲಿಲ್ಲ. ಇವಳ ಬರಹದ ಪ್ರಭಾವಕ್ಕೆ ಒಳಗಾಗದ ಬಹುತೇಕ ಭಾರತೀಯ ಆಧುನಿಕ ಮಹಿಳೆಯರೂ ಇಲ್ಲ ಪುರುಷರೂ ಇಲ್ಲ. ಈಕೆ ಹುಟ್ಟಿದ್ದು ಲಂಡನ್ನಿನ ಕಿಂಗ್ಸ್ಟನ್ನಲ್ಲಿ. ಹೆಸರಾಂತ ಇತಿಹಾಸಕಾರ, ವಿಮರ್ಶಕ ಸರ್ ಲೆಸ್ಲಿಫ ಸ್ಟಿಫನ್ ಇವಳ ತಾಯಿ ಜೂಲಿಯಾಳನ್ನು ಮದುವೆಯಾಗುವ ಮುಂಚೆಯೇ ಮೂರು ಮಕ್ಕಳ ತಂದೆ. ತಾಯಿ ಜೂಲಿಯಾ ಒಂದು ಮಗುವಿನ ತಾಯಿ. ಆನಂತರ ಮತ್ತೆ ಇಬ್ಬರೂ ಸೇರಿ ವೆನೆಸ್ಸಾ, ಥೋಬಿ, ವರ್ಜೀನಿಯಾ ಮತ್ತು ಎಡ್ರೈನ್ ಎಂಬ ನಾಲ್ಕು ಮಕ್ಕಳನ್ನು ಹೆರುತ್ತಾರೆ. ಒಟ್ಟಾರೆ ಎಂಟು ಮಕ್ಕಳ ದೊಡ್ಡ ಸಂಸಾರ.
ಊಲ್ಫಳ ತಾಯಿ ಭಾರತದಲ್ಲಿ ಹುಟ್ಟಿದವಳು ಎನ್ನುವುದಿದೆ. ಇವಳ ಸಂಬಂಧಿ ಕೆನೆರಾನ್ ಜಗತ್ತಿನ ಶ್ರೇಷ್ಠ ಛಾಯಾಗ್ರಾಹಕ. ಸ್ವಯಂ ಇವಳೂ ಕೂಡ ಇಂಗ್ಲೀಷ್ನ ಫ್ರಿ ರೆಫಲೈಟ್ ಕವಿಗಳಿಗೆ ಮತ್ತು ಚಿತ್ರಕಾರರಿಗೆ ಮಾಡಲ್ ಆಗಿ ಸೇವೆ ಸಲ್ಲಿಸಿದವಳು. ಶ್ರೇಷ್ಠ ಕಾದಂಬರಿಕಾರ ಸರ್ ವಿಲಿಯಂ ಥ್ಯಾಕರೆಯ ಸಂಬಂಧಿಯೊಂದಿಗೆ ಮದುವೆ ಮಾಡಿಕೊಂಡು ವಿಕ್ಟೋರಿಯನ್ ಸಾಹಿತ್ಯ ಪಂಥದಲ್ಲಿ ಮಹತ್ವದವಳೆನಿಸಿಕೊಂಡವಳು.
ತಾಯಿಯ ಈ ಸಾಹಿತ್ಯಿಕ ಮತ್ತು ಕಲೆಯ ಹಿನ್ನೆಲೆ ವರ್ಜೀನಿಯಾ ಗ್ರೀಕ್, ಫ್ರೆಂಚ್ ಒಟ್ಟಾರೆ ಕ್ಲಾಸಿಕಲ್ ಸಾಹಿತ್ಯವನ್ನು ಗಮನಿಸಲು ಕೆಂಬ್ರಿಜ್ ವಿಶ್ವವಿದ್ಯಾಲಯದತ್ತ ಮನಸ್ಸು ಹರಿಸಲು ಕಾರಣವಾಯಿತು. ಮಕ್ಕಳನ್ನು ಕರೆದುಕೊಂಡು ಪ್ರವಾಸಗಳಿಗೆ ಹೋಗುವುದು ತಾಯಿ ಜೂಲಿಯಾಳ ಮೆಚ್ಚಿನ ಹವ್ಯಾಸವಾಗಿತ್ತು. ಇದೇ ಮುಂದೊಂದು ಕಾಲಕ್ಕೆ ವರ್ಜೀನಿಯಾ ತನ್ನ ಜಗತ್ಪ್ರಸಿದ್ಧ ಕಾದಂಬರಿ ‘ಟು ದ ಲೈಟ್ ಹೌಸ್’ ಬರೆಯಲು ಕಾರಣವಾಯಿತು.
ವರ್ಜೀನಿಯಾಳ ಬದುಕಿನಲ್ಲಿ ಕಾಲ ಮುಂದೊರೆಯಲೇ ಇಲ್ಲ. ಅದೆಲ್ಲೊ ಸ್ಥಗಿತಗೊಂಡಂತಿತ್ತು. ಗ್ರೀಕ್, ಲ್ಯಾಟಿನ್, ಜರ್ಮನ್ ಮತ್ತು ಫ್ರೆಂಚ್ ಇತಿಹಾಸ ಮತ್ತು ಸಾಹಿತ್ಯ ಓದಿಯೂ, ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಅಭ್ಯಸಿಸಿಯೂ ಅನಾಥ ಪ್ರಜ್ಞೆಯಿಂದ ನರಳುತ್ತಿದ್ದಳು ಊಲ್ಫ. ಇದಕ್ಕೆ ಕಾರಣ ಈಕೆಯ 13ನೇ ವಯಸ್ಸಿನಲ್ಲಿ ಘಟಿಸಿದ ತಾಯಿಯ ಮರಣ. ಆನಂತರ ಕೆಲವೇ ತಿಂಗಳುಗಳ ಪ್ರಶ್ನೆ. ಸಹೋದರಿ ಸ್ಟೆಲ್ಲಾ ರೋಗದಿಂದ ನರಳಲಾರಂಭಿಸಿ ಎರಡು ವರ್ಷಗಳ ನಂತರ ತೀರಿಕೊಂಡಳು. ಈ ಎರಡೂ ಸಾವುಗಳಿಗಿಂತ ಮುಂಚಿನ ಭಯಾನಕ ಸಾವು ತಂದೆಯದ್ದು. ಹೀಗೆ ಒಂದರ ನಂತರ ಒಂದು ಘಟಿಸಿದ ಸಾವು ವರ್ಜೀನಿಯಾಳನ್ನು ಮಾನಸಿಕವಾಗಿ ದುರ್ಬಲಗೊಳಿಸಿ ಅವಳ ಬದುಕಿನಲ್ಲಿ ಸಮಯವೇ ನಿಚ್ಛಲವಾಗಿ ನಿಂತ ಅನುಭವ ನೀಡಿತು.
ಬದುಕಿನ ಪ್ರಾಥಮಿಕ ಸುಖವೆ ಅದು ಸಹಜವಾಗಿರಬೇಕು ಎನ್ನುವುದರಲ್ಲಿ ಇದೆ. ಸಾಧನೆಗಳ ನಿರೀಕ್ಷೆಯೂ ಈ ಸಹಜತೆಯ ವ್ಯಾಪ್ತಿಯಲ್ಲಿಯೇ ಬರುತ್ತದೆ. ವರ್ಜೀನಿಯಾಳ ಪಾಲಿಗೆ ಬಹುತೇಕ ಇದು ಸಾಧ್ಯವಾಗಲಿಲ್ಲವೆನೊ. ಒಂದು ರೀತಿಯ ಅನಿಚ್ಛಿಂತತೆ ಮತ್ತು ಅಸಹಜತೆಗಳೇ ಊಲ್ಫಾಳ ಸಾಮಾಜಿಕ, ಸಾಹಿತ್ಯಿಕ ಫಲಿತಾಂಶಗಳನ್ನು ಪ್ರಭಾವಿಸಿತ್ತು.
ಮಧ್ಯದಲ್ಲಿ ಇನ್ನೊಂದು ಬೆಳವಣಿಗೆ. ಸಹೋದರರಾದ ವೆನೆಸ್ಸಾ ಹಾಗೂ ಎಡ್ರೈನ್ ಈಕೆಯ ತಂದೆಗೆ ಸಂಬಂಧಪಟ್ಟ ಆಸ್ತಿಯನ್ನು ಮಾರಾಟ ಮಾಡಿದರು. ಇದು ಕೇವಲ ಆಸ್ತಿಯಾಗಿರದೆ ಊಲ್ಫಾಳ ಪಾಲಿಗೆ ಈಕೆಯ ತಂದೆಯ ಕೊನೆಯ ನೆನಪಾಗಿತ್ತು. ಈ ನೆನಪು ಮಾರಾಟವಾದಾಗ ಈಕೆಗೆ ಎಲ್ಲಿಲ್ಲದ ನೋವಾಯಿತು. ಬ್ಲೂಮ್ಸ್ಬರಿ ಗ್ರೂಪಿನ್ ಲಿಟನ್ ಸ್ಟೆಚಿ, ಕ್ಲೈವ್ ಬೆಲ್, ಸಿಗ್ನಿ ಟರ್ನರ್, ಡೆವಿಡ್ ಗಾರ್ನೆಟ್ ಹಾಗೂ ಲಿಯೊನಾರ್ಡ್ ಊಲ್ಫ ಇವೆಲ್ಲ ಬರಹಗಾರರು ಇವಳೊಂದಿಗೆ ಆತ್ಮೀಯವಾಗಿ ಇದ್ದವರೆ. ವರ್ಜೀನಿಯಾ ಇವರಲ್ಲಿ ಲಿಯೊನಾರ್ಡ್ ಊಲ್ಫನನ್ನು ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಳು. ಹೀಗಾಗಿ ವರ್ಜೀನಿಯಾ ಸ್ಟೀಫನ್ ಈಗ ವರ್ಜೀನಿಯಾ ಊಲ್ಫ ಆದಳು. 1912ರಲ್ಲಿ ಈ ಮದುವೆ ನಡೆಯಿತು. ಗಂಡ-ಹೆಂಡತಿ ಸೇರಿಕೊಂಡು ಹೊಗಾರ್ಥ್ ಪ್ರೆಸ್ ಸ್ಥಾಪನೆ ಮಾಡಿದರು. ಪ್ರಸಿದ್ಧ ಕವಿ ಟಿ.ಎಸ್. ಎಲಿಯೆಟ್ರ ಕೃತಿಗಳೂ ಸೇರಿ ವರ್ಜೀನಿಯಾಳ ಎಲ್ಲಾ ಕಾದಂಬರಿಗಳು ಇದೇ ಪ್ರಕಾಶನ ಸಂಸ್ಥೆಯಿಂದ ಪ್ರಕಟಗೊಂಡಿವೆ.
ಬ್ಲೂಮ್ಸ್ಬರಿ ಗ್ರೂಪಿನ ಒಂದು ದುರಂತ. ಅವರೆಲ್ಲರೂ ಮುಕ್ತ ಲೈಂಗಿಕತೆಯನ್ನು ಪ್ರಚೋದಿಸುವುದರ ಮೂಲಕ ಪ್ರಾರಂಭವಾಗುತ್ತದೆ. ವರ್ಜೀನಿಯಾ ಇದೇ ಗ್ರೂಪಿನ ಸ್ಯಾಕ್ವೆಲ್ ವೆಸ್ಟ್ ಎಂಬ ಲೇಖಕಿಯೊಂದಿಗೆ ಸಂಪರ್ಕಕ್ಕೆ ಬರುತ್ತಾಳೆ. ಈಕೆ ಹೆರಾಲ್ಡ್ ನಿಕೋಲ್ಸ್ನ್ನ ಹೆಂಡತಿ. ಇವಳೊಂದಿಗೆ ಇಟ್ಟುಕೊಂಡಿದ್ದ ಸಲಿಂಗ ಕಾಮದ, ಸ್ನೇಹದ ಹಾಗೂ ಪ್ರೇಮದ ಸಂಬಂಧವನ್ನು ವರ್ಜೀನಿಯಾ ಊಲ್ಫ ತನ್ನ ಇಡೀ ‘ಓರ್ ಲ್ಯಾಂಡೋ’ ಕಾದಂಬರಿಯಲ್ಲಿ ವಿವರಿಸಿದ್ದಾಳೆ. ಈ ಕೃತಿ ಒಂದು ರೀತಿಯಲ್ಲಿ ಪ್ರಪಂಚದ ಅತ್ಯಂತ ದೊಡ್ಡ ಪ್ರೇಮ ಪತ್ರವಾಗಿದೆ.
ಊಲ್ಫಳ ಮೊದಲ ಕಾದಂಬರಿ ‘ದ ವಾಎಜ್ ಔಟ್’ ಪ್ರಕಟವಾಗಿದ್ದು 1915ರಲ್ಲಿ. ಇದಕ್ಕೂ 15 ವರ್ಷ ಮುಂಚೆ ಟೈಮ್ಸ್ ಲಿಟರರಿ ಸಪ್ಲಿಮೆಂಟ್ನಲ್ಲಿ ಇವಳು ಅನೇಕ ಲೇಖನಗಳನ್ನು ಬರೆಯುತ್ತಾಳೆ.
ಪ್ರಪಂಚದ ಯಾವುದೇ ಲೇಖಕಿಯೊಂದಿಗೆ ಹೋಲಿಸಿದಾಗಲೂ ಊಲ್ಫಳದು ಸಾಮಾಜಿಕವಾಗಿ ಹಾಗೂ ಕೌಟುಂಬಿಕವಾಗಿ ಸಮೃದ್ಧ ಜೀವನವೆ. ಬಾಲ್ಯದಿಂದಲೂ ತುಂಬಿದ ಸಂಸಾರ. ತಂದೆ-ತಾಯಿಯ ಎಥೆಚ್ಯವಾದ ಪ್ರೀತಿ, ಗಂಡನ ಸಹಕಾರ, ದೊಡ್ಡ ಪ್ರಮಾಣದ ಗೆಳೆಯ-ಗೆಳತಿಯರ ಸಹಕಾರ ಇವೆಲ್ಲವೂ ಇವಳಿಗೆ ದಕ್ಕಿದ ಭಾಗ್ಯಗಳೆ. 1928ರಲ್ಲಿ ಬರೆದ ಇವಳ ‘ಓರ್ ಲ್ಯಾಂಡೋ’ ಒಂದು ರೀತಿಯಲ್ಲಿ ಇವಳ ಜೀವನ ಚರಿತ್ರೆಯೆ. ಈ ಕಾದಂಬರಿಯಲ್ಲಿ ಒಂದು ಕ್ಷಣ ಕಾಲವೇ ನಿಂತು ಹೋದ ಅನುಭವವನ್ನು ಇವಳು ವಿವರಿಸುತ್ತಾಳೆ. ಇದು ಶಬ್ಧಶಃ ಸತ್ಯ. ಎಷ್ಟೊ ಬಾರಿ ಮಾನಸಿಕವಾಗಿ ಕುಸಿದಾಗ ಊಲ್ಫಳ ಪಾಲಿಗೆ ಕಾಲ ನಿಂತೇ ಹೋಗುತ್ತಿತ್ತು.
ಮಿಸೆಸ್ ಡಾಲೊವೆ, ಟು ದ ಲೈಟ್ ಹೌಸ್, ಓರ್ ಲ್ಯಾಂಡೋ, ದ ವೆವಸ್ ಮತ್ತು ಫ್ಲಶ್ ಇವೆಲ್ಲ ಬರಹಗಳಲ್ಲಿ ವರ್ಜೀನಿಯಾ ತನ್ನೆಲ್ಲ ಪಾತ್ರಗಳನ್ನು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿದಳು. ತನ್ನ ಈ ವಿಶ್ಲೇಷಣೆ ಸ್ಟ್ರೀಮ್ ಆಫ್ ಕಾನ್ಸಿಯಸ್ನೆಸ್ ಅಂದರೆ ಪ್ರಜ್ಞಾ ಪ್ರವಾಹ ತಂತ್ರ ಎಂದು ವಿವರಿಸಲು ಯತ್ನಿಸಿದಳು. ದ ಫ್ಲಶ್ ಪರ್ಯಾಯ ಇಂಗ್ಲೀಷ್ ಸಾಹಿತ್ಯವನ್ನು ಓದುವ ಪ್ರತಿಯೊಬ್ಬ ಚಿಂತಕನೂ ಗಮನಿಸಲೇಬೇಕಾದ ಕೃತಿ. ಇದು ಊಲ್ಫ ಕಟ್ಟಿಕೊಡುವ ಕವಿ ಬ್ರೌನಿಂಗ್ನ ಬದುಕು.
ಮನೋವೈಜ್ಞಾನಿಕ ತಂತ್ರಕ್ಕಾಗಿಯೇ ಇವಳು ಜಗತ್ತಿನ ಶ್ರೇಷ್ಠ ಕಾದಂಬರಿಗಾರ್ತಿ ಎನ್ನಿಸಿಕೊಂಡಿದ್ದು. ಇದರರ್ಥ ಇವಳೇ ಅದನ್ನು ಆವಿಸ್ಕರಿಸಿದಳು ಎಂದೇನಲ್ಲ. ಈಕೆಗೂ ಮುಂಚೆ ಇದನ್ನು ಪ್ರಾರಂಭಿಸಿದವ ಜೇಮ್ಸ್ ಜಾಯ್ಸ್.
ಮನೋವೈಜ್ಞಾನಿಕ ಅಭ್ಯಾಸಿಗಳು ಮೂಲತಃ ಮನೋರೋಗಿಗಳಾಗಿರುತ್ತಾರೆ ಎನ್ನುವ ವಾದವೂ ಒಂದಿದೆ. ಅವು ಎಲ್ಲರ ಪಾಲಿಗೆ ಸತ್ಯವಾಗಿರಲಿಕ್ಕಿಲ್ಲ. ವರ್ಜೀನಿಯಾಳ ಪಾಲಿಗೆ ಮಾತ್ರ ಇದು ಸತ್ಯವಾಗಿದೆ. ಎರಡನೇ ಮಹಾಯುದ್ಧದ ತರುವಾಯ ಇದ್ದಕ್ಕಿದ್ದಂತೆ ಊಲ್ಫಳ ಸಾಹಿತ್ಯಿಕ ಗರಿಮೆ ಕಡಿಮೆಯಾಗುವ ಒಂದು ಸಂದರ್ಭ ಬರುತ್ತದೆ. ಸದಾ ಪ್ರಚಾರದ ಗಾಳಿಯಲ್ಲಿ ಮೇಲೆ ಮೇಲೆಯೇ ತೇಲಿಕೊಂಡಿದ್ದ ಊಲ್ಫಳಿಗೆ ಈ ಸೋಲು ಸಹಿಸಿಕೊಳ್ಳಲಾಗುವುದಿಲ್ಲ. ಈಗ ಇವಳು ಹಿಂದೆಂದಿಗಿಂತಲೂ ಹೆಚ್ಚು ಮಾನಸಿಕ ಕ್ಷೋಭೆಗೆ ಒಳಗಾಗುತ್ತಾಳೆ.
ನಿಸ್ಸಂಶಯವಾಗಿಯೂ ಊಲ್ಫಳಿಲ್ಲದೆ ಆಧುನಿಕ ಇಂಗ್ಲೀಷ್ ಸಾಹಿತ್ಯವೇ ಸಾಧ್ಯವಿಲ್ಲ ಎನ್ನುವ ದೊಡ್ಡ ಪ್ರಮಾಣದ ಕೊಡುಗೆ ಈಕೆಯದು, ಪ್ರಯೋಗಶೀಲ ಬರಹ ಮತ್ತು ಬದುಕು. ವರ್ಜೀನಿಯಾ ನಿಜವಾದ ಅರ್ಥದ ರೋಮ್ಯಾಂಟಿಕ್. ಇವಳ ಕಾದಂಬರಿಗಳನ್ನು ಓದುತ್ತಿರಬೇಕಾದರೆ ನಮಗೆ ಗದ್ಯ-ಪದ್ಯದ ಗೊಡವೆಯೇ ಬರುವುದಿಲ್ಲ. ಪಥ-ಪಂಗಡಗಳ ಗೋಡೆಗಳಾಚೆಯ ಬದುಕನ್ನು ಬರಹದಲ್ಲಿ ಬಿಂಬಿಸಿದವಳು ಇವಳು. ಇಂಥ ಲೇಖಕಿ ವರ್ಜೀನಿಯಾ ಐದು ದಶಕಗಳ ಬದುಕಿನ ನಂತರ ನೀರಿಗೆ ಜಿಗಿದು ವಿದಾಯ ಹೇಳುತ್ತಾಳೆ. ಆತ್ಮಹತ್ಯೆ ಮಾಡಿಕೊಂಡು ಈ ಲೋಕವನ್ನು ನೀಗುತ್ತಾಳೆ. ಈ ರೀತಿಯ ನಿರ್ಗಮನದ ಮೂಲಕ ಇವಳು ಅದೇನು ಹೇಳಲು ಯತ್ನಿಸಿದಳೆನ್ನುವುದನ್ನು ಮನೋವಿಜ್ಞಾನಿಗಳೇ ವಿವರಿಸಬೇಕು.