When
greed hits you like a wave
You
don’t need water to drown
ಇವು ಕಬೀರನ ದೋಹೆಯ ಇಂಗ್ಲೀಷ್ ಭಾಷಾಂತರದ ಸಾಲುಗಳು. ಕಬೀರನನ್ನು ಹಿಂದಿಯಲ್ಲಾದರೂ ಓದಿ, ಇಂಗ್ಲೀಷ್, ಕನ್ನಡದಲ್ಲಾದರೂ ಓದಿ ಅಥವಾ ಜಗತ್ತಿನ ಇನ್ನಾವುದೇ ಭಾಷೆಯಲ್ಲಾದರೂ ಓದಿ ನಿಮಗೆ ಕಬೀರ, ಕಬೀರನಾಗಿಯೇ ದಕ್ಕುತ್ತಾನೆ. ಕಬೀರ ಸತ್ಯವಾಗಿದ್ದಾನೆ, ಸಮೂಹವಾಗಿದ್ದಾನೆ, ಸಾರ್ವಕಾಲಿಕವಾಗಿದ್ದಾನೆ. ಈ ಸಾಲುಗಳನ್ನೆ ಉದಾಹರಣೆಯಾಗಿ ನೋಡಿ, ಅವನೆಂಥ ಮಾತು ಹೇಳುತ್ತಾನೆ! ಸ್ವಾರ್ಥದ ಅಲೆ ನಿಮ್ಮ ತಲೆಯನ್ನು ಅಪ್ಪಳಿಸುವಾಗ ಮುಳುಗಿ ಸಾಯಲು ಸಾಗರ-ಸರೋವರಗಳು ಬೇಕಿಲ್ಲ ಎಂದು ನಕ್ಕು ಬಿಡುತ್ತಾನೆ. ಅವನ ಈ ವ್ಯಂಗ್ಯ ಪ್ರಜ್ಞಾಪೂರ್ವಕ ನಗೆ ಮಂಕು ಕವಿದ ನಮ್ಮ ಬುದ್ಧಿಯ ಮೇಲೆ ಎಚ್ಚರಿಕೆಯ ಗಂಟೆಯಂತೆ ಕೆಲಸ ಮಾಡುತ್ತದೆ, ಪರಂಪರೆಯ ಪುಟಗಳನ್ನು ಒಂದು ಕ್ಷಣ ತಿರುಗಿ ಹಾಕುವಂತೆ ಮಾಡುತ್ತದೆ.
ನನ್ನ ಮನಸ್ಸೆಂಬ ಮಾರುಕಟ್ಟೆಯಲ್ಲಿ ಈಗ ಸಹೋದರಿ ತಾರಾ ಹೆಗಡೆಯವರ ಚಂದ ಚಂದದ ಚೆಲ್ಲಿದ ಹೂಗಳಿವೆ. ಈ ಗುಚ್ಚ ನಮ್ಮ ಜೀವ ಪರಂಪರೆಯ ಮಾಸಿದ ಪುಟಗಳಷ್ಟೆ. ಈ ಓದಿಗೆ ವಿಮರ್ಶೆಯ ದೃಷ್ಟಿ ಬೇಕಿಲ್ಲ, ಒಳಾರ್ಥ, ಗೂಡಾರ್ಥ ಹೀಗೆ ಅರ್ಥದ ಸೂಳಿಯಲ್ಲಿ ಸಿಕ್ಕಿ ಒದ್ದಾಡುವ ಕಾವ್ಯದ ಕಷ್ಟ ಬೇಕಾಗಿಲ್ಲ, ಡಿಕ್ಷನರಿ ಪರಾಮರ್ಶನ ಗ್ರಂಥಗಳ ಸಹಾಯ ಬೇಕಿಲ್ಲ, ಇತಿಹಾಸ ಭೂಗೋಲಗಳ ಆಳ-ಅಗಲದ ತಿಳುವಳಿಕೆಯೂ ಬೇಕಿಲ್ಲ, ಬೇಕಿರುವುದು ನೀವಷ್ಟೆ. ನಿಮ್ಮೊಂದಿಗೆ ನೀವಿದ್ದರೆ ಸಾಕು ಈ ಚೆಲ್ಲಿದ ಹೂಗಳಲ್ಲಿ ಕೆಲವು ಹೂಗಳ ಗಂಧ, ಗಾಳಿಯಾದರೂ ನಿಮ್ಮದಾಗಿ ಬಿಡುತ್ತದೆ.
ತಾರಾ ಹೆಗಡೆಯವರ ‘ಚೆಲ್ಲಿದ ಹೂಗಳು’ ಓದುತ್ತಿರುವಾಗ ನನ್ನ ತಂದೆ ಕಲಿಸುತ್ತಿದ್ದ ‘ಆನಂದ ಕಿ ಫುಲ್ ಜಡಿಯಾ’ ಪಾಠ ನೆನಪಾಗುತ್ತಿತ್ತು. ಭಾರತದಲ್ಲಿ ರೈಲಿನೊಳಗೆ ಕುಳಿತುಕೊಂಡು ಕಿಡಕಿ ಹೊರಗಡೆ ಕೈ ಬಿಟ್ಟುಕೊಂಡು ಪ್ರವಾಸ ಮಾಡುತ್ತಿದ್ದ ವಿದೇಶಿ ಮಹಿಳೆಯೊಬ್ಬಳಿಗೆ ಭಾರತೀಯನೊಬ್ಬ ಪ್ರಶ್ನೆ ಮಾಡುತ್ತಾನೆ, ‘ಕಿಡಕಿ ಆಚೆಯ ನಿಮ್ಮ ಕೈಗಳಿಂದ ನೀವು ಏನನನ್ನು ಚೆಲ್ಲುತ್ತಿದ್ದೀರಿ?’ ಮುಗುಳ್ನಕ್ಕು ಮಹಿಳೆ ಉತ್ತರಿಸುತ್ತಾಳೆ, ‘ನಾನು ಹೂಗಳನ್ನು ಚೆಲ್ಲುತ್ತಿದ್ದೇನೆ, ನನ್ನ ದೇಶದಿಂದ ತಂದ ಅಪರೂಪದ ಹೂ ಮರಗಳ ಬೀಜಗಳನ್ನು ಚೆಲ್ಲುತ್ತಿದ್ದೇನೆ. ನನಗೆ ಗೊತ್ತು ನಾನಿಲ್ಲಿ ಮತ್ತೆ ಬರಲಾರೆ. ನಾ ಬಿತ್ತಿದ ಹೂ ಮರಗಳು ಮೊಗವೆತ್ತಿ ನಿಂತಿರುವುದನ್ನು ನೋಡಲಾರೆ. ಆದರೆ ನಡೆದ ದಾರಿಯಲ್ಲೊಂದಿಷ್ಟು ಸುಂದರ ನೆನಪುಗಳನ್ನು ಬಿತ್ತಿ ಹೋಗಬೇಕಲ್ಲ?’
‘ಚೆಲ್ಲಿದ ಹೂಗಳು’ ಕೃತಿಯಲ್ಲಿ ತಾರಾ ಹೆಗಡೆಯವರು ಮೇಲಿನ ಈ ಮಹಿಳೆಯಂತೆ ನೆನಪುಗಳನ್ನು ಬಿತ್ತುವ, ಅವರಿಗಿಂತಲೂ ಮುಂಚಿನವರು ಬಿತ್ತಿ ಹೋದ ನೆನಪುಗಳನ್ನು ಸಾಕುವ, ಸಲಹುವ ಹಾಗೂ ಸಾವರಿಸುವ ಪ್ರೀತಿಯ ಕೆಲಸ ಮಾಡಿದ್ದಾರೆ. ಈ ಚೆಲ್ಲಿದ ಹೂಗಳಲ್ಲಿ ಬದುಕಿನ ಘಮ ಘಮವಿದೆ, ಮಂದ ಮಾರುತದ ಹಸಿ ಇದೆ, ಬಸುರಿ, ಬಾಣಂತನ, ಮೊಮ್ಮಕ್ಕಳ ಜೀವ ಜಾಲವಿದೆ. ಮದುವೆ, ಮಸಣ ಮತ್ತು ಮರುಮದುವೆಯ ಅನಂತತೆ ಇದೆ. ಪರಂಪರೆ, ಯೋಗ, ಬೆಟ್ಟ-ಗುಡ್ಡಗಳ ಅಲೆದಾಟವಿದೆ. ಅಜ್ಜ, ಅಕ್ಕ, ಅವ್ವನಂಥ ಹೆಮ್ಮರಗಳ ನೆರಳಿದೆ. ಒಟ್ಟಾರೆ ಹಾಡಿಗೆ ಹೊರಳಿ, ಜೋಗುಳಕ್ಕೆ ನಿಧಾನವಾಗಿ, ನೋವಿಗೆ ಎದೆಯೊಡೆದು ಧುಮ್ಮಿಕ್ಕಿದ ಜೀವನದಿ ಇದೆ ಇಲ್ಲಿ.
ಈ ಸಂಕಲನದ ಮೊದಲ ಲೇಖನದ ಮೂರೇ ಮೂರು ಸಾಲುಗಳು –
‘ಅಪ್ಪಯ್ಯ ಎಂದಿಗೂ ನಮ್ಮನ್ನು ಓಲೈಸಿದವರಲ್ಲ, ಸಂತೈಸಿದವರಲ್ಲ, ತಪ್ಪು ಮಾಡಿದಾಗ, ಕೆಟ್ಟದ್ದಾಗಿ ವರ್ತಿಸಿದಾಗ ಚೆನ್ನಾಗಿ ಬೈದವರು, ಆಕ್ರೋಶಗೊಂಡವರು. ಅವರ ಈ ಕಟು ವರ್ತನೆಯ ನಡುವಳಿಕೆಯೇ ಇಂದಿಗೂ ನಮ್ಮ ರೀತಿ-ನೀತಿಯ ಜೀವನಕ್ಕೆ ದಾರಿ ದೀಪವಾಗಿದೆ.’ ತಾರಾ ಹೆಗಡೆಯವರ ಈ ಅಪ್ಪನಲ್ಲಿ ಇಡೀ ಭಾರತದ ಅಪ್ಪ ಎಂಬ ಅಸ್ಮಿತೆ ಸ್ಥಾಪನೆಯಾಗಿಬಿಡುತ್ತದೆ. ಅವನ ಒಳ ಪದರುಗಳು ಬಿಚ್ಚಿಕೊಳ್ಳುತ್ತವೆ. ಬಹುತೇಕ ಸಂಬಳವನ್ನೋ, ಸ್ಥಿರ ಆಸ್ತಿಯನ್ನೋ ನಂಬಿಕೊಂಡ ಅಪ್ಪ, ತಾರಾ ಹೆಗಡೆಯವರ ತಂದೆಯಂತೆ ಒಂದು ಸ್ವಾಭಿಮಾನದ ಮತ್ತು ಭರವಸೆಯ ಜೀವನ ಮಾಡಲು ಸಾಧ್ಯವಿಲ್ಲ. ಅಪ್ಪ ಎಂಬುವವನಿಗೆ ಆಕಾಶದ ಆಳ, ಭೂಮಿಯ ಗಟ್ಟಿತನಗಳೆರಡರ ದರ್ಶನ ಬೇಕಾಗುತ್ತದೆ. ಇಂಥವರಾಗಿದ್ದಕ್ಕೇ ತಾರಾವರ ತಂದೆ ಎಂಬತ್ತು ಮಕ್ಕಳ ತಂದೆಯಾಗಿ, ನಾಲ್ಕು ಗಂಡು ಐದು ಹೆಣ್ಣು, ಮೊಮ್ಮಕ್ಕಳು ಅಳಿಯಂದಿರು ಎಂಬ ವಿರಾಟ ಸಾಗರದ ಮುಂದೆ ನಿಲ್ಲಲು ಸಾಧ್ಯವಾಗುತ್ತದೆ.
ಮೊದಲೇ ಹೇಳಿದೆ ತಾರಾ ಹೆಗಡೆಯವರ ‘ಚೆಲ್ಲಿದ ಹೂಗಳು’ ಬದುಕಿನ ಬಿಡಿ ಅನುಭವಗಳ ಒಂದು ಹಿಡಿ ದರ್ಶನವಷ್ಟೆ. ಅಂತೆಯೇ ಇದು ‘ಚೆಲ್ಲಿದ ಹೂಗಳು’. ಭಾರತದ ಅಡುಗೆ ಮನೆಗಳಲ್ಲಿ ಅಡಗಿಕೊಂಡಿರುವ ಆರೋಗ್ಯ-ಆಧ್ಯಾತ್ಮ, ಹಬ್ಬಗಳ ಹಿಂದಿನ ಸುಚಿತ್ವ-ಸಹನೆ, ಸಮಾರಂಭಗಳ ಹಿಂದಿನ ದೈವಿ ಪ್ರೇರಣೆ, ಸಾರ್ಥಕ ಬದುಕಿನ ಸರಳ ದಾರಿ ಹೀಗೆ ಏನೆಲ್ಲ ಇದೆ. ತಾರಾ ಹೆಗಡೆ ಅಜ್ಜಿಯಾದಾಗ ಬರೆದ ಕೆಲವು ಸಾಲುಗಳು, “ದಿನ ದಿನಕ್ಕೂ ಒಂದೊಂದು ವೇಷ, ಮಗುವೆಂಬ ಮಹಾನದಿಯ ರೋಷ, ಒಂದು ದಿನ ನಗು ಮತ್ತೊಂದು ದಿನ ಅಳು, ಮಗದೊಂದು ದಿನ ಹಠ ಹೀಗೆ ತಿಂಗಳುಗಳು ಬದಲಾದಂತೆ ಮಗುವಿನ ಪ್ರತಿ ಬೆಳವಣಿಗೆಯೂ ಚೆಂದವೆ. . . .
ಈಗ ಮೊಮ್ಮಗ ‘ಅಜ್ಜಿ’ಎಂದಾಗ ಸಂತೋಷ ನುಗ್ಗಿ ಬರುತ್ತದೆ. ಹುಷಾರಿಲ್ಲದೆ ಮೊಮ್ಮಗ ನರಳಿದಾಗ ನಾನೂ ನಲುಗುತ್ತೇನೆ. ನಾನೇ ಆರೈಕೆ ಮಾಡಿ ಸಲುಹಿದ ಮಾಗುವಾದ್ದರಿಂದ ಏನೋ ಅಕ್ಕರೆ. ದಿನಕ್ಕೊಮ್ಮೆ ಫೋನಾಯಿಸಿ ಅವನನ್ನು ವಿಚಾರಿಸುವುದೇ ಸಂಭ್ರಮ. ಅವನಿಗೂ ಅಷ್ಟೆ, ಅಜ್ಜಿಯ ಮನೆಗೆ ಬಂದಾಗ ಎಲ್ಲದಕ್ಕೂ ಅಜ್ಜಿಯೇ ಬೇಕು. ಮಗಳು ಮೊಮ್ಮಗ ಬರುತ್ತಾರೆ ಎಂದಾಗ ಎಲ್ಲಿಲ್ಲದ ಹರುಷ. ಬಂದು ಹೋದಾಗ ಮೈ ಮನವೆಲ್ಲಾ, ಮನೆಯಲ್ಲಾ ಬಿಕೋ ಬಿಕೋ.”
ಜೀವದಾಂಗುಡಿಯ, ದಡಬಡಿಕೆಯ ಇಂಥ ಬರಹಗಳಲ್ಲಿ ನಾನು ಒಂದು ರೀತಿ ನೆಮ್ಮದಿಯನ್ನು ಅನುಭವಿಸಿ ಬಿಡುತ್ತೇನೆ. ತಲೆ ತಿನ್ನುವ, ಮತಿ ಭ್ರಮಣಕ್ಕೆಡೆಮಾಡುವ ಸಿದ್ಧಾಂತಗಳ ಮಹಾ ಸುಳಿಯಾದ ಸಾಹಿತ್ಯಕ್ಕಿಂತ ಇಂಥ ಸರಳ ಬರಹದ ಸಮಾಧಾನ ಬೇಕೆನಿಸುತ್ತದೆ. ಹಾಗೆ ನೋಡಿದರೆ ಈಗ ಮನುಷ್ಯನಿಗೆ ಎಲ್ಲವೂ ಸಾಕಾಗಿ ಹೋಗಿದೆ. ಸರಳತೆಯ ದಾರಿ ಬೇಕಾಗಿದೆ.
ತಾರಾ ಹೆಗಡೆಯವರ ಇನ್ನೊಂದು ಲೇಖನ ‘ಸೀರೆಯುಟ್ಟು ಶೋಭಿಸಿ’ ಅದರ ಒಂದು ಸಾಲು, ‘ಸೀರೆ ಎಂದರೆ ಸಂಭ್ರಮ, ಸೀರೆ ಎಂದರೆ ಸಂಸ್ಕøತಿ, ಸೀರೆ ಎಂದರೆ ಸಡಗರ’ ಇದಕ್ಕೂ ಮುಂದೊರೆದು ಸೀರೆ ಎಂದರೆ ನೀರೆ, ನಾಚಿಕೆ, ನಲ್ಲ. ಅದರ ಒಳ ನೆರಳಿನಲ್ಲಿ ಬೆಳೆಯುವ ಬಾಳು, ಏನೆಲ್ಲ. ಈ ಲೇಖನವನ್ನು ಓದುವಾಗ ಖುಷವಂತ ಸಿಂಗ್ರ ‘ಆನ್ ಇಂಡಿಯನ್ ಸಾರಿ’ ಎನ್ನುವ ತುಂಟ ಬರಹ ಅಲೆ ಅಲೆಯಾಗಿ ಮನದ ಮೂಲೆಯಲ್ಲಿ ಹಾಯ್ದು ಹೋಗುತ್ತಿತ್ತು. ತಾರಾ ಹೆಗಡೆ ಸಮುದ್ರ ತೀರದ ಬಹುತೇಕ ಹವ್ಯಕ್ ಸಮಾಜದ ಮಹುಪಾಲು ನಂಬಿಕೆ, ಆಚರಣೆ, ಜೀವನ ರೀತಿಯನ್ನು ಇಲ್ಲಿ ಅಲ್ಲಲ್ಲಿ ದಾಖಲಿಸಿದ್ದಾರೆ.
‘ಮನೆ ಮುಂದೆ ಹೂವಿರಲಿ’, ‘ಗೆಳೆಯರಿರಲಿ ಬಾಳಿನಲ್ಲಿ’, ‘ಪ್ರೀತಿಯಿಂದ ಸ್ವಾಗತಿಸೋಣ’, ‘ಸರ್ವರಿಗೂ ಸರ್ವೇಸ್ವರಿ’ ಲೇಖನಗಳು ನಮ್ಮೊಳಗಿದ್ದೂ ನಮಗೆ ಗೊತ್ತಿರದ ಒಂದು ಕರ್ನಾಟಕದ ಹಲವು ಆಯಾಮಗಳನ್ನು ಪರಿಚಯಿಸುವ ಪ್ರಯತ್ನ ಮಾಡುತ್ತವೆ. ಈ ನಿಟ್ಟಿನಲ್ಲಿ ಇದೊಂದು ಸುಂದರ ಗುಚ್ಚ.
ತಾರಾ ಹೆಗಡೆಯವರ ಬರಹಕ್ಕೆ ಬರಹವೇ ಗುರಿ, ಬರಹವೇ ಸಂತೃಪ್ತಿ. ಅದು ಮುಟ್ಟಬಹುದಾದ ಸಮಾಜ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ಇದೆ ಕಾರಣವಿರಬಹುದೇನೊ ಅವರಿಗೆ ಅವರ ಬರಹದಲ್ಲಿ ನಂಬಿಕೆ ಇದೆ. ಅವರ ಈ ನಂಬಿಕೆ ನೂರ್ಮಡಿಗೊಳ್ಳಲಿ.
ಶುಭ ಹಾರೈಕೆಗಳೊಂದಿಗೆ,
No comments:
Post a Comment