Total Pageviews

Tuesday, March 8, 2016

ಅಗ್ನಿ ಯುಗದ ಆರದ ಪುಟ

           ಒಡಲ ಉರಿಗೆ ಕಡಲೂ        ತಂಪನೆರೆಯುವುದಿಲ್ಲ
ಕಣ್ಣ ಕಿಡಿಯ ಮಣ್ಣ ಒಡಲೂ ಮುಚ್ಚುವುದಿಲ್ಲ
ನಾನು ನಡುರಾತ್ರಿಯ ನೋವು
ನನ್ನುಡಿಯ ಉಲ್ಕಾಪಾತವನ್ನು ನಿಮ್ಮಿಂದ ಸಹಿಸಿಕೊಳ್ಳಲಾಗುವುದಿಲ್ಲ
ಇವು ಬೆಂಗಾಲಿ ಕವಿ ಖಾಜಿ ನಜರುಲ್ ಇಸ್ಲಾಂ ಭಾರತದ ಕ್ರಾಂತಿಕಾರಿಯೊಬ್ಬನನ್ನು ಸ್ಮರಿಸಿಕೊಂಡು ಬರೆದ ಸಾಲುಗಳು.
ಬಹಳ ಅಲ್ಪಾವಧಿಗೆ ಬದುಕಿದ್ದ ಕ್ರಾಂತಿಕಾರಿ ಕಟ್ಟಿದ ಕವಿತೆಗಳು ಬಹಳ ವಿರಳ. ಆದರೆ ಇಡೀ ಭಾರತದ ಸ್ವಾತಂತ್ರ್ಯಪೂರ್ವದ ಕಾವ್ಯವನ್ನೇಲ್ಲ ಈತ ಆವರಿಸಿಕೊಂಡು ಬಿಟ್ಟಿದ್ದಾನೆ. ಈತನಿಲ್ಲದ ಸ್ವಾತಂತ್ರ್ಯಪೂರ್ವದ ಇತಿಹಾಸದ ಪುಟಗಳು ಇಲ್ಲ ಎಂದೇ ಹೇಳಬೇಕು. ಅಂತೆಯೇ ಈತನ ಹೋರಾಟಗಾಥೆಯ ಯುಗವನ್ನು ಅಗ್ನಿಯುಗ ಎಂದು ಪರಿಗಣಿಸಲಾಗಿದೆ. ವಿಶೇಷತಃ ಬೆಂಗಾಲಿಗಳ ಪಾಲಿಗಂತೂ ಇದು ಎಂದಿಗೂ ಆರದ ಅಗ್ನಿಯುಗದ ಅಮರ ಪುಟ.
ಹದಿನೆಂಟು ವರ್ಷ ಎಂಟು ತಿಂಗಳು ಎಂಟು ದಿನ ಬದುಕಿದ ಈತನ ಹೆಸರು ಖುದಿರಾಮ್ ಭೋಸ್. ಕ್ರಾಂತಿ ಕಾವ್ಯದಂತೆಯೇ ಬದುಕಿದ ಈತ ಭಾರತದ ಸ್ವಾತಂತ್ರ್ಯಕ್ಕಾಗಿ ಕೊರಳು ನೀಡಿದ ಜೀವಂತ ಕಾವ್ಯ. ಈತನ ಕೊರಳಿಗೆ ಉರುಳು ಹಾಕುವುದೂ ಅಷ್ಟೆ, ಘಟ್ಟದ ಕಾವ್ಯದ ಕತ್ತು ಹಿಚುಕುವುದೂ ಅಷ್ಟೆ. ಖುದಿರಾಮ್ ಭೋಸ್ ಸ್ವತಕ್ಕೆ ಕಾವ್ಯ ಬರೆಯಲಿಲ್ಲವೇನೊ ಆದರೆ ಕಾವ್ಯವೇ ಆದ.
          ಕುದಿ ಕುದಿಯ ಹುಡುಗ ನಮ್ಮ ಕಣ್ಣೀರಿನಲ್ಲಿ ದೇಶದ ಕರ್ಮವ ಕಟ್ಟಿದ್ದಾನೆ. ಕಾಡುಗೊಲ್ಲ ಖುದಿರಾಮ್ ವರ್ತಮಾನದಲ್ಲಿ ಕೃಷ್ಣನಂತೆ ನಮ್ಮ ಕುರುಕ್ಷೇತ್ರಕ್ಕೆ ಸಾರಥಿಯಾಗಿದ್ದಾನೆ. ಇವು ಬೆಂಗಾಲಿ ಕವಿ ಅಜಿತ್ ಪಾಂಡೆ ಖುದಿರಾಮ್ನನ್ನು ಸ್ಮರಿಸಿಕೊಂಡು ಬರೆದ ಕೆಲವು ಸಾಲುಗಳು.
          3 ಡಿಸೆಂಬರ್, 1989ರಲ್ಲಿ ವೆಸ್ಟ್ ಬೆಂಗಾಲ್ ಮಿಡ್ನಾಪುರ ಪ್ರಾಂತದ ಕೇಶಪುರ ಹಳ್ಳಿಯಲ್ಲಿ ಕ್ರಾಂತಿ ಕುಡಿಯ ಜನನವಾಯಿತು. ಅದೇನೊ ಗೊತ್ತಿಲ್ಲ, ಈತನ ಜನನಕ್ಕೂ ಮತ್ತು ಸಾವಿಗೂ ದೊಡ್ಡ ಪರಂಪರೆಯೇ ಇತ್ತು. ಈತನಿಗೂ ಮುಂಚೆ ಹುಟ್ಟಿದ ಇಬ್ಬರು ಗಂಡು ಮಕ್ಕಳು ಅಕಾಲಿಕವಾಗಿಯೇ ತೀರಿ ಹೋಗಿದ್ದರು. ಹೀಗಾಗಿ ತಂದೆ ತ್ರೈಲೋಕನಾಥ ಭೋಸ್ ಮತ್ತು ತಾಯಿ ಲಕ್ಷ್ಮೀಪ್ರಿಯಾದೇವಿ ಮಗುವನ್ನು ತಮ್ಮ ಹಿರಿಯ ಮಗಳಿಗೆ ಮಾರಾಟ ಮಾಡುವ ಮತ್ತು ಮೂಲಕ ಮಗನನ್ನು ಉಳಿಸಿಕೊಳ್ಳುವ ಒಂದು ಮೂಢಾಚರಣೆಗೆ ತಲೆಬಾಗಿದರು.
         ಮಗ ಬದುಕುತ್ತಾನೆಂದರೆ ತಾಯಿಗೆ ಆಚರಣೆಯೋ ಮೂಢಾಚರಣೆಯೋ ಪ್ರಶ್ನೆಯಾಗುವುದಿಲ್ಲ. ಒಟ್ಟಾರೆ ತನ್ನ ಗಂಡು ಸಂತಾನ ಉಳಿಯಬೇಕು, ಹಿಂದೂ ಸಂಪ್ರದಾಯದ ನಂಬಿಕೆ ಪ್ರಕಾರ ಮಗನಿಂದ ಅವರ ಜನ್ಮಕ್ಕೆ ಮೋಕ್ಷ ಸಿಗಬೇಕು ಇದಷ್ಟೆ ಅವರ ಚಿಂತನೆ. ಹೀಗಾಗಿ ಹಿರಿಯ ಮಗಳಾದಅಪರೂಪಳಿಗೆ ಒಂದಿಷ್ಟು ದಾನದ ಎರವಲು ಪಡೆದು ಮಗನನ್ನು ಮಾರುತ್ತಾರೆ. ನಿರ್ಧಿಷ್ಟ ಮಾನದಂಡದ ಧಾನ್ಯಕ್ಕೆಖುದ್ಎನ್ನುತ್ತಾರೆ. ಕಾರಣದಿಂದಾಗಿ ಈತ ಮುಂದೆ ಖುದಿರಾಮ್ ಭೋಸ್ ಎಂದು ಲೋಕವಿಖ್ಯಾತನಾಗುತ್ತಾನೆ.
ಅಪರೂಪ ಉಡಿಯಲ್ಲಿ ಖುದಿರಾಮ್ ಆಶ್ರಯ ಪಡೆಯುತ್ತಾನೆ, ಅಕಾಲಿಕವಾಗಿ ತಂದೆ-ತಾಯಿಗಳೂ ತೀರಿಹೋಗುತ್ತಾರೆ. ಇಷ್ಟಕ್ಕೂ ಸಾವಿನ ಅಟ್ಟಹಾಸ ನಿಲ್ಲುವುದಿಲ್ಲ. ಭಗವತ್ಗೀತೆಯ ಬೆಳಕಿನಲ್ಲಿ ಮುಂದೆ ಬಾಲಕನಿಗೆ ಸಿಕ್ಕದ್ದು ಕೇವಲ ಹದಿನೆಂಟು ವರ್ಷಗಳ ಜೀವನಾವಧಿ.
ಮೊದಲಿಗೆ ಹೆಮಿಲ್ಟನ್ ಸ್ಕೂಲ್ ಆನಂತರ ಮಿಡ್ನಾಪುರ ಕಾಲೇಜಿಯೇಟ್ ಸ್ಕೂಲ್ ಹಾಗೂ ಈತನ ಸಹೋದರಿಯರು ಇಡಿಯಾಗಿ ಇವನ ಶಿಕ್ಷಣವನ್ನು ರೂಪಿಸಿದ, ನಿರ್ದೇಶಿಸಿದ ಶಕ್ತಿಗಳು. ಆಗ ಇಡೀ ಬೆಂಗಾಲಿನಲ್ಲಿ ಪ್ರಸಿದ್ಧವಾಗಿದ್ದ ಪತ್ರಿಕೆಸೋನಾರ ಬಾಂಗ್ಲಾಖುದಿರಾಮ್ ಅತ್ಯಂತ ಪ್ರೀತಿಯ ಓದಾಗಿತ್ತು. ಬ್ರಿಟಿಷ್ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಪತ್ರಿಕೆಯನ್ನು ಓದುವುದೇ ಅಪರಾಧ ಎಂದು ಪರಿಗಣಿಸಲಾದ ದಿನಗಳಲ್ಲಿ ಈತ ಅದನ್ನು ರಸ್ತೆಗಳಲ್ಲಿ ನಿಂತು ಮಾರಾಟ ಮಾಡುವ ಪ್ರಯತ್ನವನ್ನೂ ಮಾಡುತ್ತಾನೆ. ಕಾರಣಕ್ಕಾಗಿ 1906ರಲ್ಲಿ ಮೊದಲ ಬಾರಿಗೆ ಬ್ರಿಟಿಷ್ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಆದರೆ ಎಳೆ ವಯಸ್ಸು ಎನ್ನುವ ಕಾರಣಕ್ಕಾಗಿ ಪೊಲೀಸರು ಈತನಿಂದ ಘಾಯಗೊಂಡಿದ್ದರೂ ಕೂಡ ಶಿಕ್ಷೆಗೊಳಪಡಿಸದೆ ಬಿಟ್ಟುಬಿಡುತ್ತಾರೆ.
ಖುದಿರಾಮ್ ಭೋಸ್ ಬದುಕೆಂದರೆ ಎರಡೇ ಪದಗಳು. ಒಂದು ಕಾವ್ಯ ಮತ್ತೊಂದು ಕ್ರಾಂತಿ
ಕತ್ತು ಹೋಗಲಿ ಕಂಬಕ್ಕೆ
ಆದರೆ ಶತಮಾನಗಳ ಕತ್ತಲೆ ಅಳಿಯಲಿ
ಕ್ರಾಂತಿಕಾರಿಗಳ ಬಿಂಬಕ್ಕೆ
ಇದು ಖುದಿರಾಮ್ ಕನಸು. ಕಾವ್ಯ ಮತ್ತು ಮನಸ್ಸು. 1907ರಲ್ಲಿ ಮೇಲ್ ಬ್ಯಾಗ್ಗಳನ್ನು ದರೋಡೆ ಮಾಡುವಾಗ ಖುದಿರಾಮ್ ಮತ್ತೆ ಬ್ರಿಟಿಷರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಆದರೆ ಅಪ್ರಾಪ್ತ ವಯಸ್ಸಿನ ಕಾರಣ ಮತ್ತೂ ಬಿಡುಗಡೆಗೊಳ್ಳುತ್ತಾನೆ. ಹೀಗೆ ಕ್ರಾಂತಿಗೆ ಮತ್ತೆ ಮತ್ತೆ ಖುದಿರಾಮ್ನನ್ನು ಎಳೆದ ಶಕ್ತಿಯಾವುದು ಪ್ರಶ್ನೆಯಲ್ಲವೆ?
1902 ಮತ್ತು 1903 ಅವಧಿಯನ್ನು ಬೆಂಗಾಲ್ದಲ್ಲಿ ಶ್ರೀ ಅರವಿಂದೋ ಹಾಗೂ ಸಿಸ್ಟರ್ ನಿವೇದಿತಾ ಅವರ ಕ್ರಾಂತಿಕಾರಿ ವಿಚಾರಗಳ ಅವಧಿ ಎಂದೇ ಪರಿಗಣಿಸಲಾಗುತ್ತದೆ. ಅವರ ಭಾಷಣ ಮತ್ತು ಕವಿತೆಯಲ್ಲಿಯೇ ಖುದಿರಾಮ್ ಕ್ರಾಂತಿಯ ಕನಸು ಕಾಣುತ್ತಾನೆ. ಇದೇ ಚಿಕ್ಕ ವಯಸ್ಸಿನಲ್ಲಿ ಮಿಡ್ನಾಪುರ ಕಾಲೇಜಿಯೇಟ್ ಸ್ಕೂಲಿನಲ್ಲಿ ತನ್ನ ಗುರುವಾಗಿದ್ದ ಹೇಮಚಂದ್ರ ಕನುಂಗೋರನ್ನು ಭೇಟಿಯಾಗಿ ತನಗೊಂದು ರಿವಾಲ್ವರ್ ತಂದು ಕೊಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತಾನೆ.
       ಬಹುತೇಕ ಬ್ರಿಟಿಷ್ ಸರ್ಕಾರದ ಕಛೇರಿ ಹಾಗೂ ಪೊಲೀಸ್ ಸ್ಟೇಷನಿನ ಪಕ್ಕ ಬಾಂಬುಗಳನ್ನು ಇಟ್ಟು ಉಡಾಯಿಸುವಾಗ ಖುದಿರಾಮ್ ವಯಸ್ಸು ಕೇವಲ ಹದಿನಾರು. ಇವನ ಚಾಣಾಕ್ಷತೆಯನ್ನು ಗಮನಿಸಿಯೇ ಬಿಹಾರದ ಮುಜಪ್ಪರ್ಪುರ ಪ್ರದೇಶದ ಮೋತಿಜಿ ಹಿಲ್ಗೆ ಕಿಂಗ್ಸ್ಫೋಲ್ಡ್ ಎಂಬ ಬ್ರಿಟಿಷ್ ಮ್ಯಾಜಿಸ್ಟ್ರೇಟ್ನನ್ನು ಕೊಲ್ಲುವುದಕ್ಕೆ ಕಳುಹಿಸಲಾಗುತ್ತದೆ. ಕಲ್ಕತ್ತಾದ ಜನರ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಹಜ ಜೀವನಕ್ಕೆ ಕಂಟಕನಾಗಿದ್ದ ಕಿಂಗ್ಸ್ಫೋಲ್ಡ್ನನ್ನು ಕೊಂದರೆ ಸಾಮಾನ್ಯರು ನೆಮ್ಮದಿಯಾಗಿರಬಹುದು ಎನ್ನುವುದು ಕ್ರಾಂತಿಕಾರಿಗಳ ಆಲೋಚನೆ. ಕಾರಣ ಖುದಿರಾಮ್ ಮತ್ತು ಪ್ರಫುಲ್ಲಾ ಚಾಕಿ ಎಂಬ ಇಬ್ಬರು ಯುವಕರಿಗೆ ವಿಶೇಷ ತರಬೇತಿಯನ್ನು ನೀಡಿ ಅಲ್ಲಿಗೆ ಕಳುಹಿಸಲಾಗಿರುತ್ತದೆ.
1908 ಅವಧಿ ಇಬ್ಬರೂ ಯುವಕರು ಧರ್ಮಶಾಲೆಯೊಂದರಲ್ಲಿ ಬಂದಿಳಿಯುತ್ತಾರೆ. ಕಿಶೋರಿ ಮೋಹನ ಬಂಡೋಪಾಧ್ಯಾಯ ಎಂಬ ಧರ್ಮದಾಸ ಇವರಿಬ್ಬರಿಗೂ ಅನ್ನ ಹಾಕುತ್ತಾನೆ. ಖುದಿರಾಮ್ ಭೋಸ್ ಹೆಸರು ಬದಲಾಯಿಸಿಕೊಂಡು ಹರೆನ್ ಸರ್ಕಾರ ಎನ್ನುವ ನಾಮದಡಿಯಲ್ಲಿ ತನ್ನ ಚಟುವಟಿಕೆ ಪ್ರಾರಂಭಿಸುತ್ತಾನೆ.
1908 ಏಪ್ರಿಲ್ 30, ಸಾಯಂಕಾಲದ 8.30 ನಿಮಿಷಕ್ಕೆ ಯುರೋಪಿಯನ್ ಕ್ಲಬ್ ಒಂದರಿಂದ ಕಾರು ಹೊರಬರುತ್ತದೆ. ಖುದಿರಾಮ್ ಬಾಂಬ್ ಎಸೆಯುತ್ತಾನೆ. ಕಾರು ಅಂದುಕೊಂಡಂತೆಯೇ ಸಿಡಿದು ಉರಿಯಲಾರಂಭಿಸುತ್ತದೆ. ಮೂರು ಜನರ ಸಜೀವ ದಹನವಾಗುತ್ತದೆ. ಆದರೆ ಭೋಸ್ ನಿರೀಕ್ಷಿದಂತೆ ಸುಟ್ಟು ಹೋದ ವ್ಯಕ್ತಿಗಳಲ್ಲಿ ಕಿಂಗ್ಸ್ಫೋಲ್ಡ್ ಇರುವುದಿಲ್ಲ.
ಸತ್ತವರು ಬ್ಯಾರಿಸ್ಟರ್ ಪ್ರಿಂಗಲ್ ಕೆನಡಿಯ ಮಗಳು, ಹೆಂಡತಿ ಮತ್ತು ಕಾರು ಚಾಲಕ. ತಲೆಮರೆಸಿಕೊಳ್ಳುತ್ತಾನೆ ಭೋಸ್. ಖುದಿರಾಮ್ನನ್ನು ಹಿಡಿದುಕೊಟ್ಟವರಿಗೆ ಸಾವಿರ ರೂಪಾಯಿಗಳ ಇನಾಮು ಘೋಷಣೆಯಾಗುತ್ತದೆ. ರಾತ್ರಿಯೆಲ್ಲಾ 25 ಮೈಲಿಗಳ ದಾರಿಯ ಪಯಣದ ನಂತರವೂ ವೈನಿ ಸ್ಟೇಷನ್ನಿನಲ್ಲಿ ನೀರು ಕುಡಿಯುವಾಗ ಖುದಿರಾಮ್ ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಕೊನೆಗೆ ಅವರಿಂದ ಕೊಸರಿಕೊಂಡು ಓಡಿಹೋಗುವಾಗ ಕಂಕುಳಲ್ಲಿ ಬಚ್ಚಿಟ್ಟುಕೊಂಡಿದ್ದ ಎರಡು ಪಿಸ್ತೂಲುಗಳಲ್ಲಿ ಒಂದು ಕೆಳಗೆ ಬಿದ್ದು ಖುದಿರಾಮ್ ಗುರ್ತು ಇನ್ನೂ ಸ್ಪಷ್ಟವಾಗಿಬಿಡುತ್ತದೆ. ಈತನ ಬ್ಯಾಗ್ ಹುಡುಕಾಡಿದಾಗ 37 ಗುಂಡುಗಳು, 30 ರೂಪಾಯಿ ಹಾಗೂ ರೈಲ್ವೆ ಮ್ಯಾಪುಗಳು ಸಿಕ್ಕು ಖುದಿರಾಮ್ ಅಪರಾಧಿ ಎಂದು ಸಾಬೀತಾಗುತ್ತದೆ.
ಮೇ 1, 1908ರಲ್ಲಿ ಈತನನ್ನು ಕರೆದೊಯ್ಯುವಾಗ ಮುಜಪ್ಪರ್ಪುರ ಸ್ಟೇಷನ್ದಲ್ಲಿ ಎಲ್ಲಿಲ್ಲದ ಜನಸಂದಣಿ. ರೈಲಿನ ಫಸ್ಟಕ್ಲಾಸ್ ಕಮ್ಪಾರ್ಟ್ಮೆಂಟ್ನಿಂದ ಈತ ಕೆಳಗಿಳಿಯುತ್ತವಂದೇ ಮಾತರಂಎನ್ನುವಾಗ ಎಂಥ ಹೇಡಿಯ ಮೈಯಲ್ಲೂ ಒಂದು ಕ್ಷಣ ಬಿಸಿ ರಕ್ತದ ಸಂಚಾರ.
11 ಅಗಸ್ಟ್, 1908 ನಸುಕಿನ ಐದು ಗಂಟೆಗೆ ಖುದಿರಾಮ್ನನ್ನು ಗಲ್ಲಿಗೇರಿಸುವ ಮುನ್ನ ನಿನ್ನ ಕೊನೆಯ ಆಸೆ ಏನು? ಎಂದು ಮುಖ್ಯ ನ್ಯಾಯಾಧೀಶ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ‘ಸಮಯ ಕೊಟ್ಟರೆ ಬ್ರಿಟಿಷರಿಗೆ ಬಾಂಬುಗಳನ್ನು ಹೇಗೆ ತಯ್ಯಾರಿಸುವುದು ಎನ್ನುವುದನ್ನು ಕಲಿಸುತ್ತೇನೆಎನ್ನುವ ಉತ್ತರ ನೀಡುತ್ತಾನೆ.
ಖುದಿರಾಮ್ನನ್ನು ಉಳಿಸಿಕೊಳ್ಳುವ ಕಾಳಿದಾಸ ಬಸು, ಉಪೇಂದ್ರನಾಥ ಸೇನ್ ಮತ್ತು ದಂಡೋಪಾಧ್ಯಾಯ ಎಂಬ ಖುದಿರಾಮ್ ಪರ ವಕೀಲರ ಎಲ್ಲ ಪ್ರಯತ್ನಗಳೂ ವಿಫಲವಾಗುತ್ತವೆ. ಏಳು ದಿನಗಳ ಗಡುವಿದ್ದರೂ ಕೂಡ ಖುದಿರಾಮ್ ವಿಶೇಷ ಅಪೀಲು ಮಾಡಿಕೊಳ್ಳುವ ಅವಕಾಶವನ್ನು ನಿರಾಕರಿಸುತ್ತಾನೆ. ಅಗಸ್ಟ್ 11 ನಸುಕಿನ ಸಮಯ ಜೈಲಿನಿಂದ ಖುದಿರಾಮ್ ಹೆಣ ಹೊರಗೆ ಬರುತ್ತದೆ. ಆದರೆ ಈತ ಗಲ್ಲುಗಂಬಕ್ಕೆ ಏರುವಾಗ ಮುಗುಳ್ನಗುತ್ತ ಕಾವ್ಯವನ್ನು ಕನವರಿಸುತ್ತಿದ್ದ ಎನ್ನುವ ಸುದ್ದಿ ಕ್ರಾಂತಿಕಾರಿಗಳಿಗೆ ಸಂದೇಶವಾಗುತ್ತದೆ.

ಈತನ ನಿಧನದ 39 ವರ್ಷಗಳ ತರುವಾಯ ಇದೇ ಅಗಸ್ಟ್ ತಿಂಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತದೆ. ಇದೂ ಒಂದು ಕವಿತೆಯಲ್ಲವೆ?

No comments:

Post a Comment