ಅದೇಕೊ ಗೊತ್ತಿಲ್ಲ ನಾನು ಬೇಲೂರನ್ನು ಬಹಳಷ್ಟು ಪ್ರೀತಿಸಿಬಿಟ್ಟೆ.
ಯಾಕೊ ವಾಕ್ಯ ಸರಿಯಾಗಲಿಲ್ಲ. ವ್ಯಾಕರಣದ ವ್ಯಾಪ್ತಿಯಲ್ಲಿ, ಶಬ್ಧ-ಸಂವಹನಗಳ ವ್ಯವಹಾರದಲ್ಲಿ ವಾಕ್ಯ
ಸರಿಯಾಗಿಯೇ ಇದೆ, ಆದರೂ ‘ವಾಕ್ಯ ಸರಿಯಾಗಿಲ್ಲ’ ಎನ್ನುವುದರ ಅರ್ಥವಿಷ್ಟೆ ಶಬ್ಧ, ಅರ್ಥ, ವ್ಯಾಕರಣಗಳ
ಮೀರಿದ ಮನಸ್ಸಿನ ಸಂಕಟಗಳಿಗೆ ಅದು ಕನ್ನಡಿ ಹಿಡಿಯುತ್ತಿಲ್ಲ ಎನ್ನುವುದು. ಈ ಬದುಕಿನಲ್ಲಿ ಬೇಲೂರನ್ನೊ,
ನಮ್ಮಜ್ಜಿಯ ಹಾಳೂರನ್ನೋ, ನಿನ್ನನ್ನು ಹಾರೈಸಿಯೇ ತೀರುತ್ತೇನೆ, ಹಾಳು ಮಾಡಿಯೇ ತೀರುತ್ತೇನೆ ಎನ್ನುವ
ಕಾಡು-ಹಾಡಿನ ಹುಡುಗಿಯನ್ನೋ ‘ಪ್ರೀತಿಸಿ ಬಿಟ್ಟೆ’ ಎಂಬುದಕ್ಕೆ ಕಾರಣಗಳು ಬೇಕೆ? ಅಥವಾ ಹಾಗೆ ಕಳೆದುಹೋಗುವುದಷ್ಟೇ
ಸಾಕೆ? ಹೋಗಲಿ ಯಾವುದನ್ನು ಪ್ರೀತಿಸಿದೆವೊ ಅದನ್ನು ಬಿಡಬಹುದೊ? ಅಥವಾ ಯಾವುದನ್ನು ಎಲ್ಲ ಎಚ್ಚರಿಕೆಗಳಿಂದ
ಬಿಟ್ಟೆವೊ ಅದು ನಮ್ಮ ಪ್ರೀತಿಯಾಗಿತ್ತೊ? ಇವೆಲ್ಲ ನನಗೆ ಪ್ರಶ್ನೆಗಳಲ್ಲ. ಯಾಕೆಂದರೆ ಯಾವುದರಲ್ಲೊ,
ಯಾವಳಲ್ಲೊ ವಿನಾಕಾರಣ ಕಳೆದುಕೊಳ್ಳುವುದರ ಸುಖ ಉಂಡವನು ನಾನು. ಹೀಗೆ ನನ್ನಂತೆಯೇ ಒಬ್ಬ ‘ಸಖ’ ಅವನ
ಹೆಸರು ‘ದರ್ಶನ್ ಆರಾಧ್ಯ’. ಈತನೂ ನನ್ನಂತೆಯೇ ಹಾಡುತ್ತಾನೆ-
ಹೀಗೆ ಒಮ್ಮೆ ಎಲ್ಲವನ್ನೂ ಬಿಟ್ಟು ಹೋಗುವಾಗ
ಅಳದೆ ಹೇಗೆ ಹೋಗಲಿ?
ನಾನು ಕಾವ್ಯ ಹೊಸೆಯಲೆಂದೇ ಬೇಲೂರಿಗೆ ಹೋದದ್ದು. ಎಷ್ಟೆಲ್ಲ ಹಿಂಸೆಗಳ
ಮಧ್ಯದಲ್ಲೂ ಗಟ್ಟಿಯಾಗಿ ಕುಳಿತು ಬರೆದದ್ದು, ಬೇಕಾದುದನ್ನು, ಬೇಡಾದುದನ್ನು ಬೇಕು-ಬೇಡಗಳ ನಿರ್ಧರಿಸಲಾಗದೆ
ನಿಂತುದನ್ನೆಲ್ಲ ನೆಮ್ಮದಿ-ವಿಶ್ವಾಸಗಳೊಂದಿಗೆ ಬಾಚಿಕೊಂಡದ್ದು ಎಲ್ಲ ಈ ಬೇಲೂರಿನಲ್ಲಿಯೆ. ಇದು ನನಗೆ
ಮಗಳನ್ನು ಮಡಿಲೊಳಗಿಟ್ಟು ಗಾಂಧಿ ಮತ್ತು ಅಂಬೇಡ್ಕರರನ್ನು ಓದಿಸಿದ ನೆಲ. ಆದರೆ ಒಂದು ವಿಚಿತ್ರ ಈಗೆಲ್ಲ
ಮಕ್ಕಳನ್ನು-ಹೆಂಡತಿಯನ್ನು ಕೆಲವು ಸೈದ್ಧಾಂತಿಕ ಕಾರಣ, ಕೆಲಸಗಳ ಒತ್ತಡಗಳಿಂದಾಗಿ ಅವರನ್ನು ಸರಿಯಾಗಿ
ನೋಡಿಕೊಳ್ಳಲಿಲ್ಲವೇನೊ. ಆದರೆ ಈ ಬೇಲೂರು ಬೇಲೂರೆ. ಅದು ಒಂದೊಮ್ಮೆ ನನ್ನನ್ನೇ ಹೊರಹಾಕಿ ನನ್ನ ಇಬ್ಬರೂ
ಮಕ್ಕಳಿಗೆ ಈತನಂಥವರ ಮೂಲಕ ಮಮತೆಯ ಮಹಾ ಮೊಲೆಯುಣಿಸಿತು. ಮೈಯ್ಯಾಗಿ ಮುದ್ದಾಡಿತು. ಕವಿತೆಯಾಗಿ ಅವರಲ್ಲಿ
ಅವಿತುಕೊಂಡಿತು. ಹೀಗಾಗಿ ಬೇಲೂರು ನಮಗೆ ಬೇರೆ ಊರಲ್ಲ. ಬೇರುಗಳ ಊರು ನಮ್ಮ ಪಾಲಿಗೆ ಬೇಲೂರು.
ನಮ್ಮ ಆ ಬೇರುಗಳಲ್ಲಿ
ಒಂದು ಈ ದರ್ಶನ್ ಆರಾಧ್ಯ. ಈತನ ಸುತ್ತಲೂ ನನ್ನ ಭಾಷಣ, ಬರಹ, ಪಾಠ. ಹಠ, ಚಟಗಳ ನಿತ್ಯ ಧ್ಯಾನ. ಏನೇನೋಗಳ
ಮಧ್ಯ ಬತ್ತಿ ಹೋದವನ, ಸುತ್ತಿ ಸುತ್ತಿ ಸತ್ತು ಹೋದವನ ಹುಂಬತನವನೆಲ್ಲ ಎತ್ತಿ ಎದೆಗಿಟ್ಟುಕೊಳ್ಳವ ಸಾಹಸ
ಈ ಎಳೆಯ-ಗೆಳೆಯರದು.
‘ಜಟಿಲ ದಾರಿಯಲಿ
ಪುಟಿವ ಮನಸಿಗೆ
ದಾರಿ ಮರೆತು ಹೋಗಿದೆ’
ಎಂದು ನಮ್ರತೆಯಿಂದ ಹಾಡುತ್ತಲೇ ತಮ್ಮ ‘ಪ್ರೀತಿ’ಯ ನೆರಳಿನಲ್ಲಿ
ನನ್ನ ಸಾಹಿತ್ಯ, ಸಂಸಾರ, ಸಿದ್ಧಾಂತಗಳ ಕಾಪಾಡಿದವರು. ಕವಿ ದರ್ಶನ್ ಆರಾಧ್ಯ ಬದುಕಿನ ಅನಿರೀಕ್ಷಿತ
ತಿರುವಿನಲ್ಲಿ ಕವಿತೆಯಷ್ಟೆ ಮಧುರವಾದ ನನ್ನ ಮಕ್ಕಳಿಗೆ ಅಜ್ಜೇನಹಳ್ಳಿಯ ಪ್ರೀತಿಯುಣಿಸಿ ರಟ್ಟೆ ಬಲವ ತಟ್ಟಿ ಮಲಗಿಸಿ ಅವರ ಜಗದ ತುಂಬ ಹರಿದು ಹೋದವನು. ಇದೆಲ್ಲ
ಒಂದೆಡೆಯಾದರೆ ಆತ ತೀವ್ರವಾಗಿ ಸ್ಪಂಧಿಸುವ ಭಾವನಾತ್ಮಕ ಘಟ್ಟದಲ್ಲಿ ನಾನಾತನ ಪಾಠದ ಗುರುವಾಗಿದ್ದೆ
ಎನ್ನುವುದು ಸಂಬಂಧವೊಂದರ ಸುಂದರ ಸಾವರಿಸಿಕೊಳ್ಳುವಿಕೆಗೆ ಕಾರಣವಾಗುತ್ತದೆ. ಅವನೇ ಬರೆದುಕೊಂಡಿರುವಂತೆ-
ಭಾವನೆಗಳ ಬಸುರ ಹಿಸುಕಿ
ಎದೆಯ ಮೇಲೆ ಮೆತ್ತಗೆ
ನಡೆದುಹೋದ ಹೆಜ್ಜೆಗಳ
ಲಜ್ಜೆಯನ್ನು ಆತ ತನ್ನ ಹಾಡಿನ ಹದುಳವಾಗಿಸಿಕೊಳ್ಳುವ ಕಾಲದಲ್ಲಿ ನಾನಲ್ಲಿ ಕಾಲಿಟ್ಟಿದ್ದೆ. ಈಗ ನಾನವನನ್ನು
ಕೆರಳಿಸಲೇ ಬೇಕಿತ್ತು. ಹಾಗೆ ನೋಡಿದರೆ ಈ ನಾಲ್ಕು ದಶಕಗಳ ಬಾಳಿನಲ್ಲಿ ನಾನು ನಿಷ್ಠೆಯಿಂದ ಮಾಡಿದ್ದು
ಇದೊಂದೆ ಕ್ರಿಯೆಯನ್ನು. ಎಳೆಯರೊಳಗಿನ ಕವಿತೆಗಳನ್ನು, ಗೆಳೆಯರೊಳಗಿನ ಬೆಳಗನ್ನು, ಗೆಳತಿಯರ ಎದೆಯ ಬೆರಗನ್ನು
ನನ್ನ ಪದಗಳ ನಿಮಿತ್ಯದಿಂದಲೇ ಕೆರಳಿಸಿದವನು. ಒಂದು ಓದಿನ, ಓದಿಸುವಿಕೆಯ, ಒಡನಾಟದ ಉದ್ದೇಶ ಯಾವಾಗಲೂ
ಇಷ್ಟೆ, ನಿಜವಾಗಿಯೂ ಅದು ಯಾವುದನ್ನೂ ಬದಲಾಯಿಸಲು ಹಾತೊರೆಯುವುದಿಲ್ಲ ಬದಲಾಗಿ ಆಲೋಚನೆಗೀಡುಮಾಡಲು
ಯತ್ನಿಸುತ್ತದೆ. ನಾನು ಈತನಲ್ಲಿ ಮಾಡಿದ್ದು ಅಷ್ಟೆ. ಇನ್ನು ಈತ ನಿದ್ರಿಸಲಾರ, ಘಾಯಗಳ ಮಾಡಿಯಾಗಿದೆ.
ಅವು ಮಾಯಲು ಮತ್ತೆ ಮತ್ತೆ ನಿಮ್ಮ ಮುಂದೆ ಕವಿತೆಯಾಗಿ ಬಾಯಿ ತೆರೆಯುತ್ತಲೇ ಇರುತ್ತಾನೆ. ಹಠ ಹಿಡಿದು
ಈಗ ಕೇಳುತ್ತಾನೆ.
ಸುಮ್ಮನೆ ಹೊರಟು ಹೋದೆ
ಕಿತ್ತೆಸೆದು ಎದೆಯ ತೋರಣ
ನನ್ನೆದೆಯ ತಮಟೆ ಹೊಡೆದು
ಹೇಳಿ ಹೋಗು ಕಾರಣ.
ಇಂಗ್ಲೆಂಡಿನ ಓರ್ವ ಕವಿ ಎ.ಸಿ ಸ್ವಿನ್‍ಬರ್ನ್. ಲೇಖಕರ ಪ್ರೋತ್ಸಾಹದಿಂದ
ಇಟಲಿಯ ಕ್ರಾಂತಿ ಯಶಸ್ವಿಯಾದಾಗ ಈ ಮನುಷ್ಯನ ಈ ಬದುಕಿನ ಸುಖವೇನು? ಎಂದು ತಾನೆ ಪ್ರಶ್ನಿಸಿಕೊಂಡು ಕೊನೆಗೊಂದು
ಎರಡಕ್ಷರಗಳ ಉತ್ತರ ಹೇಳಿದ Passion
and pleasure. ಆತನ ಒಂದು ಕವಿತೆ “ದ ಸೋಲ ಸುಪ್ರೀಮ್”ದಲ್ಲಿ ಆತ ಬರೆಯುತ್ತಾನೆ-
Yet
between life and death air hours
To flush
with love and hide in flowers
ಪ್ರೀತಿಯಲ್ಲಿ ನಾಚುವವರಿಗೆ ಹೂವಿನಲ್ಲಿ ಅಡಗುವವರಿಗೆ ದಕ್ಕುವುದೆಲ್ಲವೂ
ಪಕಳೆಗಳ ಪಿಸು ಮಾತು ಮತ್ತು ಹೂವಿನ ಸುಗಂದವೆ. ಈ ಸಂಕಲನದ ಪುಟ ಪುಟಗಳ ಪಕಳೆಗಳಲ್ಲಿ ಹೀಗೆ ಅವಿತು ಕುಳಿತವನು
ಈ ಪ್ರೀತಿಯ ಕವಿ ದರ್ಶನ್ ಆರಾಧ್ಯ. ಈತ ಹುದುಗಿಟ್ಟ ಉಸಿರ ಕುರಿತು ಹೀಗೆ ಕನವರಿಸುತ್ತಲೆ ಇರುತ್ತಾನೆ
-
ನನ್ನ ಕವಿತೆ
ಕಳೆದು ಹೋಗಿದೆ
ಅದು ನಿನ್ನುಸಿರಲಿ ಬೆರೆತು ಹೋಗಿದೆ .
ನನ್ನ ಕವಿತೆಗೊಂದು ಕಿಚ್ಚಿದೆ
ಅದರೆದೆಯಲ್ಲಿ ಅವಳದೇ ಹುಚ್ಚಿದೆ
ದರ್ಶನ್ ಆರಾಧ್ಯ ‘ಭರವಸೆಯ ಕವಿ’. ಹೋರಾಟದ, ಹಾರಾಟದ, ಇತ್ತೀಚೆಗೆ
ತೂರಾಟದ ಕವಿ ಎಂದೆಲ್ಲ ನನಗೆ ಈತನ ಬಗ್ಗೆ ಹೇಳಲು ಮನಸ್ಸಿಲ್ಲ. ಬೆಂಕಿಯಂತೆ ಹಾಡಿ ಬಂಗಾರದ ಪಂಜರದಲ್ಲಿ
ಪ್ರಶಸ್ತಿ ಪಲ್ಲಂಗಗಳ ಮೇಲೆ, ಹವಾ ನಿಯಂತ್ರಿತ ಕೋಣೆಗೆ ಓಣಿಯಾದವರನ್ನು ನಾವು ಸಾಲು ಸಾಲಾಗಿ ನೋಡಿದ್ದೇವೆ-
ಅಹೋ ರಾತ್ರಿ ಬ್ರಹ್ಮ ಕಮಲ
ಅರಳುವ ಸಮಯ ಬಲ್ಲೆ
ಮೊಳಕೆಯೊಡೆದು ಕಾಳು
ಸಸಿಯಾಗುವುದ ಕಾಣಬಲ್ಲೆ
ಎನ್ನುವ ತವಕ, ಕಾಯುವಿಕೆ ಮತ್ತು ಹುಡುಕಾಟಗಳು ಎಲ್ಲಿಯವರೆಗೆ ಈತನಲ್ಲಿರುತ್ತವೆಯೊ
ಅಲ್ಲಿಯವರೆಗೂ ಕವಿತೆಯೊಂದಿಗೆ ಈತನ ಪಯಣ ಅವಿರತವಾಗಿರುತ್ತದೆ. ಅದರ ಬಣ್ಣ ಬೆಡಗನು ಸರಿಸಿ ತಣ್ಣಗಂಬಲಿ
ಉಣಿಸಿ ಮಡಿಲು ಕೊಟ್ಟು ಮಲಗಿಸಿದವಳಿಂದ ಅವಳ ಮಮತೆಯಿಂದ ಈತ ಹೊರಬಂದ ಕ್ಷಣವೆ ಎಚ್ಚರಾಗುತ್ತಾನೆ. ಬದುಕಿನ
ವ್ಯವಹಾರ ಖಂಡಿತವಾಗಿಯೂ ಆತಗೆ ದಕ್ಕುತ್ತದೆ ಆದರೆ ಕವಿತೆ ಕೈ ಬಿಡುತ್ತದೆ. ಹೀಗಾಗಬಾರದೆನ್ನುವುದು
ನನ್ನ ಆಶಯ. ಆದರೆ ಬದುಕು ತೆರೆದುಕೊಳ್ಳುವ ರೀತಿಗೆ ನಾವು ಗಲಿಬಿಲಿಗೊಳ್ಳುವ ಸ್ಥಿತಿಯ ಮೇಲೆ ಈ ಬದುಕಿನ
ಭವಿಷ್ಯದ ಪಯಣ ನಿಂತಿದೆ. ಕವಿ ದರ್ಶನನ ಈ ಪಕಳೆಗಳಿಗೆ ಮಾತ್ರ ಹೂವಿನ ಗಂಧ, ಚೆಂದ, ಮೃದುತ್ವ ಅವುಗಳ
ಕೆನ್ನೆಯ ಮೇಲೆ ಪ್ರೀತಿಯ ಪ್ರಭುತ್ವದ ಲಕ್ಷಣ ಎಲ್ಲ ಇದೆ.
ಆರಂಭದ ಕೆಲದಿನಗಳ
ಮಾತು. ಆತ ಕವಿಯಾಗಲೊಲ್ಲ, ನಾನು ಬಿಡಲೊಲ್ಲೆ, ಇದು ಆತನ ಬದುಕಿನ ಕವಿ ಸಮಯ. ಪರೀಕ್ಷೆಗಳು, ನೌಕರಿಗಳು,
ಅಧಿಕಾರ, ಕಾರು, ಕಾರುಬಾರುಗಳ ಹಿಂದೆ ಮುಪ್ಪಾಗುವ ಎಲ್ಲ ವ್ಯವಸ್ಥೆಗಳನ್ನು ನಾವು ಈ ಸಮಾಜದಲ್ಲಿ ನೋಡಿದ್ದೇವೆ.
ಆದರೆ ದರ್ಶನನಂಥ ಯುವಕರು ದಾರಿ ತಪ್ಪಿಸಿ ಮಹಾ ಮಾರ್ಗಗಳಿಂದ ಕಾಲುದಾರಿಗೆ, ಕವಿತೆಗಳ ಕಾಡುಹಾದಿಗೆ
ತಂದವನು ನಾನು ಭಯಪಡುವಂಥದೆನಿದೆ ಅಲ್ಲಿ? ಇಂದು ಈ ಹಾದಿ ತುಳಿದು ಈ ಪಕಳೆಗಳ ತಂದ ಹುಡುಗ ಮುಂದೊಂದು
ದಿನ ಹೂದಾರಿಯನ್ನು ನಿರ್ಮಿಸುತ್ತಾನೆ. ಕ್ರೂರ ಮೃಗಗಳ ಭಯವಳಿದು ಅನಂತವಾಗುತ್ತಾನೆ.
ಇವನ ಪ್ರತಿ ಕವಿತೆಯೂ
‘ಪ್ರೀತಿ’ಯೆ. ಅದು ಈಗಷ್ಟೇ ಅಲ್ಲ ಮುಂದೆಯೂ ಉಳಿಯಲೇಬೇಕಾದ ಉಳಿಸಿಕೊಳ್ಳಲೇಬೇಕಾದ ಮನದ ಸೌಂದರ್ಯ. ಅದು
ಅಳಿದರೆ ಏನುಳಿಯುತ್ತದೆ ಜಗತ್ತಿನಲ್ಲಿ? ಅಂದಹಾಗೆ, ಪ್ರೀತಿ ಪಕಳೆಗಳ ಕೈಯಲ್ಲಿರಿಸಿಕೊಂಡು ಪಾಠ ಹೇಳುವುದು
ಸರಿಯಾಗಿರುವುದಿಲ್ಲ. ಮುದ್ದು ಹೆಣ್ಣಿನ ಮೊಡವೆ ಎಣಿಸುವ ಕೆಲಸ ಮಾಡಬಾರದು. ಅವಳೊಂದಿಗೆ ಮಾತಾಗಬೇಕು,
ಹಾಡಾಗಬೇಕು ಇಲ್ಲವೆ ಜಗಳವಾಡಬೇಕು. ಯಾಕೆಂದರೆ ಈಗ ಅವಳು ಹೊಡೆದರೆ ನಿಮಗೆ ಎಸೆಯುವುದು ಹೂವನ್ನೆ, ಹೂವಿನಿಂದ
ಹೊಡಿಸಿಕೊಳ್ಳುವ ಭಾಗ್ಯ ಹೆಣಗಳಿಗಿರುವುದಿಲ್ಲ ಜೀವಂತವಾಗಿ ಹಂಬಲಿಸಿದವರಿಗಿರುತ್ತದೆ.
ಈಗ ದರ್ಶನ ಆರಾಧ್ಯನ
ಹಾಡುಗಳಲ್ಲಿ ನಾವು ಹಂಬಲವಾಗೋಣ, ಹೂ ಹೊಡೆದಾಟಕ್ಕೆ ಮೈ ಹಾಸೋಣ ಅಲ್ಲವೆ?