Total Pageviews

Tuesday, August 23, 2016

ಮಥುರೆಗೆ ಬಾರೋ



ನಿನ್ನೆ ನನ್ನೊಡಲ ಮಧುಶಾಲೆಯಲ್ಲಿ
ಮಾತಾಗಿದ್ದವನೆ
ಮೃತ್ಯುಪುಟಗಳ ಸುಟ್ಟು
ಮೈ ಕಾಯಿಸಿಕೊಂಡವನೆ
ಸಿಕ್ಕ ಗೋಪಿಯರನ್ನೆಲ್ಲ ಒತ್ತೆಯಿಟ್ಟು
ಇಂದು ಅದ್ಯಾವ ದಿಕ್ಕಿಗೆ ಹೋದೆ
ಚುಕ್ಕೆ ಎಣೆಸುತ್ತಾ?

ಕತ್ತಲಾಗುತ್ತಿದೆ
ಮರಳಿ ಬಾರೋ ಗೂಡಿಗೆ
ಮರವೆಂಬ ಮರಭೂಮಿಯ
ಮಹಾರಾಜನೆ
ಎಣ್ಣೆ ತೀರಿದೆ ದೀಪ ದಣಿದಿದೆ
ಕತ್ತಲು ನಿಂತಿದೆ ನೆತ್ತಿಗೆಣ್ಣೆ ಸವರಿಕೊಂಡು
ನಾಶಿಕದ ಮೊಗಸಾಲೆಯಲ್ಲಿ
ನಿನ್ನುಸಿರ ಸುಳಿದಾಟ
ಈಗ ನನ್ನೆದೆಯ ವೃಂದಾವನದ ತುಂಬಾ
ನಿನ್ನದೇ ವಸಂತ
ಕೆಳಗಿಳಿದರೆ ಶ್ರಾವಣ, ಕಿಚಿಪಿಚಿ ಕೆಸರು
ಮೈ ಈಗ ಮಹಾಮಥುರೆ ಬಾರೋ

ನನ್ನ ಹೆಗಲುಗಳ ಮೇಲೆರೆದ
ಜೊಲ್ಲು ನೆನಪಾದರೆ
ಸಲ್ಲದ ಸಾವಿರ ಓಕುಳಿಯ ಹಾಡುಗಳು
ಗಲ್ಲ ಚೂಟುವ, ಸೊಲ್ಲು ನುಡಿಯುವ ಸಂಪ್ರೀತಿಯರು
ಒದ್ದೆಯಾಗುತಿದೆ ರವಿಕೆ
ನಿನ್ನ ಜೀವ ಜೀವ್ಹೆಯ ನೆನೆದು
ಅದ್ಯಾವ ಸಂದಿನಲಿ ಅವಿತಿರುವಿ
ಬಾರಯ್ಯ ಭೃಜರಾಯ
ಮೆಲ್ಲೊ ಮೆಲ್ಲೊ ನನ್ನ ಬೆಣ್ಣೆ ಮೈಯ
ಕಣ್ಣೀರಿಗೆ ನೀಡೊ ಒಂದು ಅಭಯದ ಕೈಯ
 ಗೊಲ್ಲರಾಯ ಗುಲ್ಲೆಬ್ಬಿಸ ಬೆಡವೋ
ನನ್ನ ಹೊಕ್ಕುಳದ ಗಲ್ಲಿ ಗಲ್ಲಿಗಳಲ್ಲಿ
ನಿಲ್ಲಬೇಕೊ ನೀ ನನ್ನೊಡೆಯ
ಕಣ್ಣಗೊಂಬೆಗಳಲ್ಲಿ ಮೆಲ್ಲ ನುಡಿಯುತ್ತ
ಹುಬ್ಬು ತೀಡುವೆ ಬಾರೋ
ಗಬ್ಬ ಗೆದ್ದವೆ
ಗದ್ದ ತೀಡುವೆ ಬಾರೋ
ನನ್ನ ಹಡೆದವನೆ

ಅದ್ಯಾವ ಘಳಿಗೆಯೊ
ಪ್ರೀತಿಯ ಮಹಾ ಸಲುಗೆಯೊ
ತುಟಿಗೆ ತುಟಿ ಕೊಟ್ಟೆ
ಆತ್ಮದೊಳಗೊಂದು ನವಿಲ ಗರಿ ನೆಟ್ಟೆ
ಉಸಿರು ಬಿಗಿದವನೆ
ಕೊಸರಿ ಹೋಗದ ಹಾಗೆ
ನನ್ನ ಬಸೀರ ಬೆರೆತವನೆ
ಪ್ರೀತಿ ನುಡಿದವನೆ
ಪಾಪದ ನನ್ನ ಹೆಣ ಹೊತ್ತು ನಡೆದವನೆ
ಕೋಪ ತಡೆದವನೆ
ನನ್ನ ಕೇಶ ರಾಶಿಗೆ
ಪಾರಿಜಾತ ಸುರಿದವನೆ
ಎಲ್ಲಿ ಅಡಗಿರುವೆ ಹೇಳೊ
ನನ್ನ ಒಡಲ ಕದ್ದವನೆ

Monday, August 1, 2016

ನೆಲ ನಮ್ಮದು, ನೆಮ್ಮದಿ ಎಲ್ಲಿ?


       1248ರಲ್ಲಿ, ಖೊಯ್ದಲ್ಲಿ ನಿಧನನಾದ ಮಹಾನ್ ಸಂತ ಇರಾನ್ ತಬ್ರೀಜಿ. ಅಂದಹಾಗೆ ಇರಾನ್ದಲ್ಲಿ ತಬ್ರೀಜ್ ಎನ್ನುವ ಸ್ಥಳವೂ ಇದೆ. ವಾಸ್ತವದಲ್ಲಿ ಸ್ಥಳನಾಮಕ್ಕೂ ವ್ಯಕ್ತಿನಾಮಕ್ಕೂ ಯಾವುದೇ ಸಂಬಂಧಗಳಿರುವ ಮಾಹಿತಿಗಳಿಲ್ಲ. ತಬ್ರೀಜಿ ಪ್ರೀತಿಯನ್ನು ಕುರಿತು ಕನವರಿಸಿದ ಸೂಫಿ ಆದ್ಯ ಸಂತರಲ್ಲಿ ಒಬ್ಬ ಎನ್ನುವುದು ಮಾತ್ರ ಸ್ಪಷ್ಟ. ಆತ ಒಂದೆಡೆ ಬರೆಯುತ್ತಾನೆ, “ಒಂದನ್ನು ನಂಬಿ, ಒಂದೆಡೆಯೇ ನೆಮ್ಮದಿಯಾಗಿರು ನಿನಗೆ ದಕ್ಕ ಬೇಕಾದುದೆಲ್ಲವೂ ದಕ್ಕುತ್ತದೆ. ಇದು ಬರೀ ಒಂದು ಹೇಳಿಕೆಯಾಗಿದ್ದರೆ ಇಂಥ ಮರುಚಿಂತನೆಯ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ ಇದು ಬದುಕಿನ ಅನರ್ಥ ಭ್ರಮೆಗಳನೆಲ್ಲ ಬಸಿದುಬರಿದಾಯಿತೆ ಪಾತ್ರೆ?’ ಎಂದುಕೊಳ್ಳುವಾಗ ಹೆಪ್ಪುಗಟ್ಟಿದ ಒಂದು ಅನುಭವದ, ಆನುಭಾವದ ಧಾನ್ಯ. ಇಂಥ ಧಾನ್ಯಗಳು ಆಗೊಮ್ಮೆ-ಈಗೊಮ್ಮೆ, ಅಲ್ಲೊಮ್ಮೆ-ಇಲ್ಲೊಮ್ಮೆ, ಅವರೊಮ್ಮೆ-ಇವರೊಮ್ಮೆ ಬಿತ್ತಿ-ಬೆಳೆದರೂ ಸಾಕು, ಇಳೆ ನಂದನವನವಾಗುತ್ತದೆ, ಮತ್ತೆ ಮನುಕುಲಕ್ಕೆ ಆಧಾರವಾಗಬಹುದಾದುದೆಲ್ಲವೂ ಪಲ್ಲವಿಸಿಬಿಡುತ್ತದೆ. ತಬ್ರೀಜಿಯ ಸಾಲುಗಳಲ್ಲಿ ಅಂಥ ಸಮೃದ್ಧಿಯ ಲಕ್ಷಣವನ್ನು ನಾವು ಕಾಣುತ್ತೇವೆ. ಯಾಕೆಂದರೆ ಆತ ಮರ ಬೆಳೆಸಬೇಕಾದ ಬೇರುಗಳ ಜವಾಬ್ದಾರಿ ಕುರಿತು, ಮೂಲಕ ದೇಶೀಯವಾಗುವುದರ ಕುರಿತು ಮಾತನಾಡುತ್ತಿದ್ದಾನೆ.
       ಚೀನಾದ ದೊಡ್ಡ ಚಿಂತಕ ಕನ್ಫ್ಯೂಷಿಯಸ್ ಇದನ್ನೇ ಹೇಳಿದ, “ಮಾಡುವ ಪ್ರತಿ ಕ್ರಿಯೆಯನ್ನು ಮಹತ್ತರವಾದುದೆಂದೇ ತಿಳಿದು ಮಾಡು, ಒಂದೆಡೆ ತಲ್ಲೀನನಾಗು. ಇದು ಸಾಧ್ಯವಾಗುವುದಾದರೆ ನೀ ಹಿಡಿದ ಚಿಕ್ಕ ಕೆಲಸಗಳಲ್ಲೂ ಮಹದ್ ಅನುಭವವಾಗುತ್ತದೆ. ಮತ್ತೊಮ್ಮೆ ಕವಿ ಕೀಟ್ಸ್ ಇದನ್ನೇ ಮುಂದೊರೆಸಿ ತಿಳಿಸುತ್ತ ಗೆಳೆಯನಿಗೆ ಪತ್ರ ಬರೆದ, “ಹೂವಿನಂತೆ ಒಂದೆಡೆ ಅರಳಿ ನಿಲ್ಲುವುದರಿಂದಲೂ ಏನೆಲ್ಲಾ ನೆಮ್ಮದಿ-ಸಮೃದ್ಧಿ-ಭದ್ರತೆ ಸಾಧ್ಯವಿದೆ. ಸಂಚಾರಿಯಾಗಿರುವುದರಿಂದಲೇ ಸರ್ವ ಜ್ಞಾನವೂ ಸಾಧ್ಯ ಎನ್ನುವುದು ಪೂರ್ಣ ಸತ್ಯವಲ್ಲ.    
          ಮೂವರೂ ಚಿಂತಕರ ದೇಸಿಪರ ಅನುಭವಗಳನ್ನು ಕನಿಷ್ಟ ಒಂದೂವರೆ ದಶಕಗಳಷ್ಟು ಕಾಲ ಸಂಶಯಿಸಿ, ಪರಕಿಸಿ, ಪರ್ಯಾಯ ನೆಲೆಗಳಿಂದ ನೋಡಿ ಈಗ ಒಪ್ಪಿಕೊಂಡಿದ್ದೇನೆ. ಅಂದಹಾಗೆ, ಕನ್ನಡ ಕಾವ್ಯದ ನವೋದಯದ ಬರಹಗಾರರೆಲ್ಲ ದೇಸಿ ಕುರಿತಾದ ನನ್ನ ಶೋಧ ಮತ್ತು ಸಾರಾಂಶಕ್ಕೆ ಸಮ್ಮತಿಯ ನೆಲೆಯಾದವರು. ಸಾವಯವ ಪ್ರಪಂಚವನ್ನು ಸುತ್ತದೆಯೂ ಸಾರ್ವಕಾಲಿಕವಾಗಿ ಸಲ್ಲುವ ಅನುಭವವನ್ನು ಅವರು ತಮ್ಮ ಸಾಲುಗಳಲ್ಲಿ ಸೆರೆ ಹಿಡಿದಿಟ್ಟರು. ಗೊತ್ತಿರಲಿ, ಸಂತತ್ವದ ಸೊಂಕಿಲ್ಲದ, ಸರ್ವೋದಯದ ಸಮಾಧಾನವಿಲ್ಲದ, ಅಸ್ಮಿತೆಗೆ ನೆಲೆಯಾಗದ ಸೃಜನಶೀಲತೆಗೆ ಅವರೆಂದೂ ಸಾಕ್ಷಿಯಾಗಲೇ ಇಲ್ಲ. ಇದು ನನಗೆ ಬಹಳ ದೊಡ್ಡ ಸಾಧನೆ ಎನಿಸಿದೆ ಸತ್ಯ, ಆದರೆ ಹಲಸಂಗಿಯ ಖಾಜಾಸಾಹೇಬ್, ಮಧುರಚೆನ್ನ, ಸಿಂಪಿ ಲಿಂಗಣ್ಣ ಹಾಗೂ ಸೂಫಿ ದರ್ವೇಶಿಗಳ ನೆಲದಿಂದ, ಅವರ ದೇಸಿ ಚಿಂತನೆಗಳ ಸಂಪರ್ಕದಿಂದ ಬಂದ ನನಗೆ ಸೋಜಿಗವೆನಿಸಿಲ್ಲ. ಸತ್ಯ ಸೋಜಿಗವಲ್ಲ. ಅದು ತೆಕ್ಕೆ ಹೊಡೆಯಲಾಗದ ಸಮೃದ್ಧಿಯ ಸುರಿಮಳೆ.
        ಒಂದು ಅನುಭವ ಗಟ್ಟಿಯಾಗಿ, ಆಲೋಚನೆಗಳ ಮೈಕಟ್ಟನ್ನು ಕಟ್ಟಿಕೊಡುವಾಗ ನಾವು ತಪ್ಪಾದ ಗರಡಿ ಮನೆ ಹೊಕ್ಕರೆ ಅಥವಾ ನಿಜವಲ್ಲದ ಉಸ್ತಾದನನ್ನು ಒಪ್ಪಿಕೊಂಡರೆ ಇಡೀ ಸಾಧನೆಯೇ ಹದಗೆಡುತ್ತದೆ. ಹಾಗೆ ಪಶ್ಚಿಮ ಪ್ರಣೀತ ಭೌತಿಕವಾದಗಳಿಂದ, ಹದಗೆಡುವ ಎಲ್ಲ ಅಪಾಯಗಳಿಂದ ಆನಂತರದಲ್ಲಿ ನನ್ನನ್ನು, ಕೃತಿಯ ಮೂಲಕ ನಿಮ್ಮನ್ನು ತಪ್ಪಿಸುವ ಒಂದು ಸಣ್ಣ ಪ್ರಯತ್ನ ಗುರುಗಳಾದ ಸಿ.ಆರ್.ಯರವಿನತೇಲಿಮಠರದ್ದಾಗಿದೆ. ಕೃತಿಯ ಮೂಲಕ ಸರಿಯಾದ ಗರಡಿ ಮನೆ ಮತ್ತು ಉಸ್ತಾದರತ್ತ ನಮ್ಮನ್ನವರು ಮಾರ್ಗದರ್ಶನ ಮಾಡುತ್ತಿದ್ದಾರೆ. ಹೀಗಾಗಿ ಇದು ಪುಸ್ತಕವಲ್ಲ, ಸಮಾಲೋಚನೆಗಳ ಸಣ್ಣ ವೇದಿಕೆ.
          ನಮ್ಮ ಓದು ವಿಸ್ತಾರಗೊಳ್ಳಬೇಕಾದ ಒಂದು ಸಂದರ್ಭದಲ್ಲಿ ಕನ್ನಡಕ್ಕೆ ಪಾಶ್ಚಾತ್ಯವಾದಗಳ ದೊಡ್ಡ ಸರಕನ್ನು ಹೊತ್ತಿಗೆಗಳ ಸರಣಿಮಾಲೆಯಲ್ಲಿ ಪರಿಚಯಿಸಿದವರು ಸಿ.ಆರ್.ವಾಯ್. ಇಂಗ್ಲಿಷ್ ಭಾಷೆ ಹುಟ್ಟಿಕೊಂಡ ದೇಶದೊಳಗಿನ ಭಾಷಿಕ-ಬೌದ್ಧಿಕ, ಪುರಾತನ-ಆಧುನಿಕ, ಪ್ರಾದೇಶಿಕ-ಜಾಗತಿಕ ಪಲ್ಲಟಗಳೊಂದಿಗೆ ಐದು ದಶಕಗಳವರೆಗೆ ನಿರಂತರವಾಗಿ ಮುಖಾಮುಖಿಯಾದವರವರು. ಪಾಠ-ಪ್ರವಚನ, ಸಂಶೋಧನೆ-ಸೆಮಿನಾರ್ಗಳ ಅಬ್ಬರಗಳನೆಲ್ಲ ನಿರ್ಭಾವುಕರಾಗಿ ಗಮನಿಸುತ್ತ, ಅಮೇರಿಕಾ, ಭಾರತ ಹಾಗೂ ಇವುಗಳಂತೆ ಅನೇಕ ವಸಾಹತು ರಾಷ್ಟ್ರಗಳಲ್ಲಿ ಇಂಗ್ಲಿಷ್ ಸಂಸ್ಕೃತಿ ಸೃಷ್ಟಿಸಿದ ಅದ್ವಾನ-ಆವಿಷ್ಕಾರಗಳನ್ನು ಓದುತ್ತ, ವಿವ್ಹಲರಾಗಿದ್ದ ಅವರಿಗೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರಿಗಿದ್ದಂತೆಯೇ ತಮ್ಮ ಒಳಗುದಿಗಳಿಗೆಲ್ಲ ವೇದಿಕೆಯಾಗುವ ಚಿಂತನೆಯ ಅವಶ್ಯಕತೆ ಇತ್ತು. ಬಹುತೇಕ ದೇಸಿಯತೆ ಮತ್ತು ದೇಶಿವಾದದೆಡೆಗಿನ ಅವರ ಗಮನ ಹರಿಸುವಿಕೆ ನೆಮ್ಮದಿ ನೀಡಿದೆ ಎಂದುಕೊಳ್ಳುತ್ತೇನೆ.
        ಪ್ರಭುತ್ವದ ಹೇರಿಕೆಯಂತೆ ಸಾಂಸ್ಕೃತಿಕ ಹೇರಿಕೆಯೂ ನಮಗೊಗ್ಗದಿದ್ದಾಗ, ನಮ್ಮ ನೆಲದ ಸಮಸ್ಯೆಗಳಿಗೆ ಅದು ನೆಲೆಯಾಗದಿದ್ದಾಗ, ನಿರಾಕರಣೆ ಅನಿವಾರ್ಯವಾಗುತ್ತದೆ. ಅಂಥ ಒಂದು ನಿರಾಕರಣೆಯ ಸಕಾರಣವೇ ಅನ್ಯದೊಂದಿಗೆ ಸಮ-ಸಮನಾಗಿ ದೇಸಿವಾದ ನಾಡಿನ ಸಾಂಸ್ಕøತಿಕ ಕ್ರಮಿಸುವಿಕೆಯಲ್ಲಿ ತನ್ನ ಚಾರಿತ್ರಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳುವುದಕ್ಕೆ ಕಾರಣವಾಗಿದೆ. ಸಿ.ಆರ್.ವಾಯ್ ಅವರ ಸಾಲುಗಳಲ್ಲಿಯೇ ಹೇಳಬೇಕೆಂದರೆ, “ಪಶ್ಚಿಮದಲ್ಲಿ ಬೀಸಿದ್ದು ಆಧುನಿಕತೆಯ ಬಿರುಗಾಳಿ. ಯುರೋಪಿಯನ್ ಸಾಹಿತ್ಯದಲ್ಲಿ ಬೀಸಿದ್ದು ನವ್ಯ ಮತ್ತು ನವ್ಯೊತ್ತರ ಸುಂಟರಗಾಳಿ. ಪಾಶ್ಚಾತ್ಯರು ಶುದ್ಧ ಸೌಂದರ್ಯ ಸಿದ್ಧಾಂತವನ್ನು ರೂಪಿಸಿಕೊಂಡು, ಅದನ್ನು ಪ್ರತಿಪಾದಿಸುವುದರ ಜೊತೆಗೆ, ಶಬ್ಧಕೇಂದ್ರಿತ ರೂಪನಿಷ್ಠವಾದ, ಸಹಚನಾವಾದ, ನಿರಚನವಾದಗಳು ಮತ್ತು ತಂತ್ರಪ್ರಧಾನ ಪ್ರತಿಮಾವಾದ, ಸಂಕೇತವಾದ, ಅಭಿವ್ಯಕ್ತಿವಾದ ಮುಂತಾದ ವಿಪರೀತ ವೈಚಾರಿಕವಾದಗಳ ಸುಳಿಯಲ್ಲಿ ಸಿಕ್ಕು ಸಾಹಿತ್ಯ ಮತ್ತು ವಿಮರ್ಶ ಎರಡೂ ಜರ್ಜರಿತವಾದವು ಅವುಗಳ ಜೊತೆಗೆ ಯಾಂಗ್, ಮಾರ್ಕ ಮೊದಲಾದವರ ಪ್ರಭಾವ ಎಂಥವರನ್ನೂ ದಂಗುಬರಿಸುವಂತಿದ್ದಿತು. ಯುರೋಪಿಯನ್ ವಿಮರ್ಶೆ ಮತ್ತು ಸಿದ್ಧಾಂತಗಳು ಏಕರೂಪ ತಂತ್ರಪ್ರಧಾನ ಕೃತಿಗಳು ಇಂಗ್ಲೀಷ್ ಸಂಪ್ರದಾಯವನ್ನು ಪೋಷಿಸಿದವು. ಆದರೆ ಅವುಗಳ ಅಬ್ಬರದ ಪ್ರಚಾರ ನಮ್ಮ ದೇಶದ ಭಾಷೆ ಮತ್ತು ಸಾಹಿತ್ಯಗಳ ಮೇಲೆ ವಿಪರೀತ ಪರಿಣಾಮವನ್ನುಂಟುಮಾಡಿತು.”
          ನಾವು ಕಂಡುಂಡ ಸತ್ಯ, ಮನುಷ್ಯ ಎಂದರೆ ಮತ್ತೇನೂ ಅಲ್ಲ, ಆಲೋಚನೆ. ಸ್ವ-ಆಲೋಚನೆಗಳಿಲ್ಲದ, ಅಸ್ಮಿತೆಯಿಲ್ಲದ ಯಾವ ಜನಾಂಗವೂ ಇತಿಹಾಸದಲ್ಲಿ ತನ್ನ ಕುರುಹುಗಳನ್ನು ಬಿಟ್ಟ ಉದಾಹರಣೆಗಳಿಲ್ಲ. ಉತ್ಖನನಗಳಲ್ಲಿ ಸಿಗುವ ವಸ್ತುಗಳನ್ನು ಮ್ಯೂಸಿಯಂಗಳಲ್ಲಿ ಸಂರಕ್ಷಿಸಿಡುವುದರ ಮೂಲಕ ನಾವು ಏನನ್ನು ಮಾಡಿದ್ದೇವೆ ಎಂದು ಪ್ರಶ್ನಿಸಿಕೊಂಡರೆ, ಒಂದು ಕಾಲದ ಮನುಷ್ಯನ ಆಲೋಚನೆಗಳನ್ನು, ಅವುಗಳ ಫಲಶೃತಿಯಾದ ಆವಿಷ್ಕಾರಗಳನ್ನು, ಅದರಿಂದ ಸಾಧ್ಯವಾಗಬಹುದಾದ ಸಾಧ್ಯತೆಗಳನ್ನು ಪೇರಿಸಿಟ್ಟಿದ್ದೇವೆ ಎನ್ನುವುದೇ ಸರಿಯಾದ ಉತ್ತರ. ವಸ್ತುಸಂಗ್ರಹಾಲಯವೆನ್ನುವುದು ಅಸ್ಮಿತೆಯ ಸಂಗ್ರಹಾಲಯವು ಹೌದು. ಹೀಗೆ ಸಂಗ್ರಹಿತ ಅಸ್ಮಿತೆ ತಾನು ಭಗ್ನಗೊಂಡುದಕ್ಕೆ ಕಾರಣಗಳನ್ನೂ ಸ್ಪಷ್ಟಪಡಿಸುತ್ತದೆ. ಅದರ ಓದಿನ ಕ್ರಮದಲ್ಲಿಯ ನಮ್ಮ ತಪ್ಪುಗಳಿಗೂ ಅದು ಕನ್ನಡಿ ಹಿಡಿಯುತ್ತದೆ.
     ಭಾರತದ ಪಾಲಿಗೆ, 1900ರಿಂದ ಶತಮಾನದ ಪೂರ್ವದವರೆಗಿನ ಅವಧಿಯವರೆಗೆ ರಚನೆಯಾದ ಎಲ್ಲ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಧಾರ್ಮಿಕ ಸೃಷ್ಟಿಗಳು ಇಂಥ ಕೆಲವು ಭಗ್ನತೆ, ವೈಪರಿತ್ಯ, ವಿಷಾದ, ದ್ವಂದ್ವಗಳಿಗೆ ಸಾಕ್ಷಿಯಾಗಿವೆ. ಕಾರಣಕ್ಕಾಗಿಯೇ ಇರಬಹುದೇನೋ, ಒಂದು ಕಾಲಕ್ಕೆ ಒಕ್ಕೊರಲಿನಿಂದ ಕೂಡಿ ಕಡಿದಾಡಿ, ಬಡಿದಾಡಿ, ಬೇಡಿ ಪಡೆದ ನಮ್ಮ ಅಸ್ಮಿತೆಯನ್ನು ನಮಗೇ ಸಮಾಧಾನ ಎನ್ನಿಸುವ ರೀತಿಯಲ್ಲಿ ರೂಪಿಸಿಕೊಳ್ಳುವುದಾಗುತ್ತಿಲ್ಲ. ದೇಶ ಸ್ವಾತಂತ್ರ್ಯದ ಮೊದಲ ಪುಟದಲ್ಲಿಯೇ ಪ್ರಧಾನಿ ಕುಳಿತು ಕಣ್ಣೀರು ಹಾಕುತ್ತಾರೆ,  ಬಹುಸಂಸ್ಕೃತಿಯ ನಾಡು ಪ್ರಪಂಚವೇ ಬೆರಗಾಗುವ ಜಾತ್ಯಾಧಾರಿತ ಹತ್ಯಾಕಾಂಡಕ್ಕೆ ಸಾಕ್ಷಿಯಾಗುತ್ತದೆ, ದೇಶ ಮತ್ತು ದೇಸಿವಾದದ ನಿಜವಾದ ಹೋರಾಟ ಇನ್ನಷ್ಟೇ ಪ್ರಾರಂಭವಾಗಬೇಕು ಎಂದು ವಾದಿಸಿದವನ (ಗಾಂಧಿ) ಹತ್ಯೆಯಾಗುತ್ತದೆ. ಯಂತ್ರಗಳಿಂದ ಸೃಷ್ಟಿಯಾದದ್ದು ಮಾತ್ರ ಔದ್ಯೋಗಿಕರಣ ಎನ್ನುವ ಭ್ರಮೆ ಮುಂದಿನ ನಾಲ್ಕಾರು ದಶಕ ಭಾರತೀಯ ಮನಸ್ಸನ್ನು ಕತ್ತಲೆಗೆ ನೂಕುತ್ತದೆ. ಇದೇ ಸಂದರ್ಭದಲ್ಲಿ ನಡೆಯುವ ಗುಲಾಮಗಿರಿಯ ನಂತರದ ಗುಲಾಮಿ ಮನಸ್ಸಿನ ಸಾಂಸ್ಕೃತಿಕ ಅಧ್ಯಯನ ಭಾಷಿಕ ರಾಜಕಾರಣವನ್ನು ಸೃಷ್ಟಿ ಮಾಡಿ ಇಂಗ್ಲೀಷ ಸಂಸ್ಕೃತಿಯ ವಿಪರೀತ ಅಂಧಾನುಕರಣೆಗೆ ಕಾರಣವಾಗುತ್ತದೆ. “ಇಂಗ್ಲೀಷ್ ಸಂಸ್ಕøತಿಯ ವ್ಯಾಮೋಹ ಅತಿಯಾಯಿತು. ಇಂಗ್ಲೀಷ್ ಭಾಷೆ ಕಲಿತವರಿಗೆ, ಇಂಗ್ಲೀಷ್ನಲ್ಲಿ ವ್ಯವಹರಿಸುವವರಿಗಷ್ಟೇ ಮನ್ನಣೆ ದೊರೆಯುವಂತಾಯಿತು. ಮಿಕ್ಕ ಭಾಷೆಗಳು ಲೆಕ್ಕಕ್ಕೆ ಇಲ್ಲವಾದವು. ದೇಶೀಯ ಭಾಷೆಗಳಲ್ಲಿ ಎಂಥ ಶ್ರೇಷ್ಠ ಕೃತಿಗಳು ಹುಟ್ಟಿಕೊಂಡರೂ ಅವು ಲೆಕ್ಕಕ್ಕಿಲ್ಲವಾದವು. ಇಂಗ್ಲೀಷ್ನಲ್ಲಿ ಬರೆದ ಭಾರತೀಯ ಟ್ಯಾಗೋರ್, ಆಫ್ರಿಕದ ಅಂಬೆ ಮತ್ತು ಸೋಯಂಕಾರಿಗೆ ಮಾತ್ರ  ಅಂತರ್ರಾಷ್ಟ್ರೀಯ ಮನ್ನಣೆ ದೊರೆಯಿತು. ಇಂಡಿಯನ್ ಇಂಗ್ಲೀಷ್ ಲಿಟರೇಚರ್ ಭಾರತೀಯ ಸಾಹಿತ್ಯಗಳಲ್ಲಿ ಒಂದು ಮತ್ತು ಇತರ ಭಾರತೀಯ ಸಾಹಿತ್ಯಗಳಿಗೆ ಹೋಲಿಸಿದರೆ ಬಹಳ ಚಿಕ್ಕ ಗಾತ್ರದ್ದು, ಕಡಿಮೆ ಗುಣಮಟ್ಟದ್ದು ಎನ್ನುವ ಪರಿಜ್ಞಾನ ಪಶ್ಚಿಮದ ವಿದ್ವಾಂಸರಿಗೆ ಇಲ್ಲದಾಯಿತು. “ಇಂಡಿಯನ್ ಇಂಗ್ಲೀಷ್ ಸಾಹಿತ್ಯಭಾರತದಲ್ಲಿ ಯಾವ ಮೂಲೆಯದು? ಎಂದು ಕೆಲವರು ಇಂದು ಪ್ರಶ್ನಿಸುತ್ತಿದ್ದಾರೆ. ಹಾಗೆ ಪ್ರಶ್ನಿಸುವುದರಲ್ಲಿ ಸತ್ಯಾಂಶ ಇಲ್ಲದಿರದೆಂದು ಎನಿಸುತ್ತದೆ. ಭಾರತೀಯ ಇತರ ಭಾಷೆಗಳಲ್ಲಿ ಬರೆಯಲಾದ ಶ್ರೇಷ್ಠ ಕೃತಿಗಳಿಗೆ ಮನ್ನಣೆ ಸಿಗದಿರಲು ಅತಿಯಾದ ಇಂಗ್ಲೀಷ್ ವ್ಯಾಮೋಹವೇ ಪ್ರಮುಖ ಕಾರಣವೆಂದು ಭಾವಿಸಲಾಗುತ್ತದೆ.”
        ನಡೆದ ಅಧ್ವಾನಗಳಿಗೆ ನೂರಾರು ನಿದರ್ಶನಗಳನ್ನು ನೀಡುವ ಸಿ.ಆರ್.ವಾಯ್ ಅಂತಿಮವಾಗಿ ದೇಶಿ ಆಗುವುದೆಂದರೇನು? ಎನ್ನುವ ನಮ್ಮ ಗುಮಾನಿಗೆ ಸರಳವಾದ ಉತ್ತರವೊಂದನ್ನು ಕೊಟ್ಟಿದ್ದಾರೆ, “ದೇಶೀಯ ಆಗುವುದೆಂದರೆ ಒಂದು ನಿರ್ದಿಷ್ಟ ಪ್ರದೇಶಕ್ಕೆ ಅಂಟಿಕೊಂಡಿರುವುದು ಎಂದರ್ಥ. ದೇಶೀಯವಾಗಿರುವುದು ಸಹಜ. ಹೇಗೆ ಪಶುಪಕ್ಷಿಗಳು ಮತ್ತು ಗಿಡಮರಗಳು ತಮ್ಮ ಪ್ರದೇಶಕ್ಕೆ ಹೊಂದಿಕೊಂಡು ಸಹಜವಾಗಿ ಬೆಳೆಯುತ್ತವೆಯೋ ದೇಶೀಯರೂ ಕೂಡ ತಮ್ಮ ತಮ್ಮ ನೆಲದಲ್ಲಿ ನೆಲೆಸಿ ಅದರ ಸತ್ವ ಹೀರಿ, ಅದರ ವಿಶಿಷ್ಟ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಾರೆ. ಅವರ ಅಳಿವು-ಉಳಿವು ತಮ್ಮ ನೆಲದ ಅಳಿವು-ಉಳಿವಿನೊಂದಿಗೆ ಜೋಡಿಸಲ್ಪಟ್ಟಿರುತ್ತದೆ. ಒಬ್ಬ ವ್ಯಕ್ತಿಯ ಮೈಮನ ನರನಾಡಿಗಳಲ್ಲಿ ದೇಶೀಯತೆ ಪ್ರವಹಿಸುತ್ತಿರುತ್ತದೆ. ಅದು ಸಾಮಾನ್ಯವಾಗಿ ಅವ್ಯಕ್ತವಿರುತ್ತದೆ. ಅದು ಪ್ರಕಟವಾಗುವುದು ಕೆಲ ನಿರ್ದಿಷ್ಟ ಸಂದರ್ಭಗಳಲ್ಲಿ. ವಿಶೇಷವಾಗಿ ಒಂದು ನೆಲದ ಸಂಸ್ಕøತಿಗೆ - ಭಾಷೆ, ಸಾಹಿತ್ಯ, ಸಂಗೀತ ಮುಂತಾದ ಕಲೆಗಳಿಗೆ ಬಾಹ್ಯ ಸಂಸ್ಕøತಿಯಿಂದ ಅಪಾಯ ಬಂದೊದಗಿದ ಸಂದರ್ಭದಲ್ಲಿ, ಅಂಥ ಸಂದರ್ಭದಲ್ಲಿ ಆಕ್ರಮಣಕ್ಕೊಳಗಾದ ಸಮುದಾಯಗಳು(ಸಂಸ್ಕøತಿಗಳು) ತಾವು ಬದುಕಿ ಉಳಿಯುವುದಕ್ಕಾಗಿ ದೇಶೀ ಆಗಬೇಕಾಗುತ್ತದೆ. ಮೈಕೊಡವಿ ಮೇಲೇಳಬೇಕಾಗುತ್ತದೆ.” ಇದನ್ನು ಗಟ್ಟಿಯಾಗಿ ತನ್ನ ಅನುಭವದ ಮೂಲಕ ಸಾರುವ ವ್ಯಕ್ತಿ ಯಾರಾದರೂ ಇದ್ದರೆ? ಎನ್ನುವ ಪ್ರಶ್ನೆಗೆ, “ಇಡಿಯ ಜನತೆಯನ್ನು ಎದ್ದು ನಿಲ್ಲಿಸುವ ದೇಸಿಯತೆ ಗಾಂಧಿಯದಾಗಿತ್ತುಎಂದು ಸ್ಪಷ್ಟವಾಗಿ ಉತ್ತರಿಸುತ್ತಾರೆ. ಇದು ಸರ್ವರೂ ಸರಳವಾಗಿ ಒಪ್ಪಿಕೊಂಡುಬಿಡಬಹುದಾದ ನಿದರ್ಶನವಲ್ಲ. ಗಾಂಧಿಯೆಂದರೆ ಪ್ರತಿಗಾಮಿತನ ಎನ್ನುವ ಪುಟ ವಿಮರ್ಶಕರು ನಮ್ಮಲ್ಲಿದ್ದಾರೆ. ಅವರು ಯಾವ ಚಿಂತನೆಗೆ ಕೈ ಹಾಕಿದರೂ ತಮ್ಮ ಜಾತಿಯ ವಾಸನೆಯನ್ನು ವಾದಿಸುವುದೇ ಅಲ್ಲಿ ಮುಖ್ಯ ಗುರಿಯಾಗಿರುತ್ತದೆ. ಆದರೆ ಇಂತಹ ಚಿಂತನೆಗಳು ಎಲ್ಲ ಜಾತಿ-ಧರ್ಮಗಳು, ಜೀವಸಂಕುಲಗಳು ಸೇರಿ ಬದುಕಬಹುದಾದ ನಾಡನ್ನು ಸಶಕ್ತಗೊಳಿಸುವಲ್ಲಿ ಮಹತ್ವದ ಕೊಡುಗೆಯನ್ನು ನೀಡುವುದಿಲ್ಲ, ಕನಿಷ್ಟ ಅವು ಚಿಂತಕನ ಮನುಷ್ಯ ಸೌಂದರ್ಯಕ್ಕೂ ಸಾಕ್ಷಿಯಾಗುವುದಿಲ್ಲ ಎನ್ನುವುದನ್ನು ನೆನಪಿಡಬೇಕು.
         ಅಂದಹಾಗೆ, ನಿರಾಕರಣೆಯ ಭಾಷೆ ಗೊತ್ತಿಲ್ಲದಿರುವುದೇ ಗೊತ್ತಿಲ್ಲದ ಭಾಷೆ ಮತ್ತು ಸಂಸ್ಕೃತಿಗಳೊಂದಿಗೆ, ಗೆಲ್ಲಲಾಗದ, ಗೆದ್ದು ಮೆಲ್ಲಲಾಗದ ಭಾಷೆ, ಮನಸ್ಸು ಮತ್ತು ಮನುಷ್ಯರೊಂದಿಗೆ ನಾವು ನೂರಾರು ವರ್ಷ ಅಂಧಾನುಕರಣೆಯ ಗೊಂದಲಕ್ಕೆ ಬೀಳಲು ಕಾರಣವಾಯಿತು. ಬರೀ ಬಾಚಿಕೊಳ್ಳುವುದರ ಮೂಲಕ ಮಾನವ ಬದುಕು ಅಥವಾ ಸಂಸ್ಕೃತಿ ವಿಸ್ತಾರಗೊಳ್ಳುವುದಿಲ್ಲ. ತನ್ನದೆನ್ನುವ ಒಂದು ಪ್ರಜ್ಞೆಯಿಲ್ಲದ ಯಾವುದೇ ವ್ಯಕ್ತಿ ಮತ್ತು ದೇಶಗಳು ಸರಿಹೋಗುವುದಿಲ್ಲ ಎನ್ನುವುದಕ್ಕೆ ಸಾಮರ್ಸೆಟ್ ಮಾಮ್ ನ “A writer’s note book” ನಲ್ಲಿ ಕೆಲವು ಸಾಲುಗಳನ್ನು ಓದಿದ್ದೇನೆ, I am like a passenger waiting for his ship at a war-time port. I do not know on which day it will sail, but I am ready to embark at a moment’s notice. I leave the sights of the city unvisited. I do not want to see the fine new speedway along which I shall never drive, nor the grand new theatre, with all its modern appliances, in which I shall never sit. I read the papers and flip the pages of magazine, but when someone offers to lend me a book I refuse because I may not have time to finish it, and in any case with this journey before me I am not a mind to interest myself in it. I strike up acquaintances at the bar on the card-table, but I do not try to make friends with people from whom I shall so soon be parted. I am on the wing”.

      ಸಿ.ಆರ್.ವಾಯ್ ಅವರ ಕೃತಿಯ ವಾದ ಅವರ ವ್ಯಕ್ತಿತ್ವದ ಪ್ರತಿರೂಪವೆ. ಕಾರಣವೇ ದೇಸಿಯತೆ ಇಲ್ಲಿ ಅವರ ಆಯ್ಕೆಯಾಗಿರುವುದು. ಅಂದಹಾಗೆ, ತನಗೆ ಪ್ರತಿಸ್ಪರ್ಧಿಯಲ್ಲದ, ತನ್ನ ಪ್ರತಿ ನೆರಳಿಲ್ಲದ ಯಾವುದೇ ವಿಷಯವನ್ನು ಕುರಿತು ಲೇಖಕನೊಬ್ಬ ಸ್ಪಂದಿಸಲು ಸಾಧ್ಯವಿಲ್ಲ. ದೇಸಿಯತೆ ಹುಟ್ಟಿಕೊಳ್ಳುವುದು ತನಗೆ ವಿರುದ್ಧವಾದ ಹಲವು ವಾದಗಳ ಒಳದೋಟಿಯಲ್ಲಿಯೆ. .ಸಿ.ಆರ್.ವಾಯ್ ಮತ್ತು ಅವರ ಒಟ್ಟು ಸೃಜನಕ್ರಿಯೆ ಸ್ವರೂಪ ತಾಳುವುದು ಕೂಡ ಹಿನ್ನೆಲೆಯಲ್ಲಿಯೆ. ಸಂಶೋಧನೆಯ ಶಾಸ್ತ್ರೋಕ್ತತೆಯನ್ನು, ಸರಳತೆಯನ್ನು ರೂಢಿಸಿಕೊಂಡವರ ಬರಹ ಮತ್ತು ಬದುಕಿನ ಕ್ರಮದಲ್ಲಿ ಅತಿರೇಕಗಳಿಗೆ ಆಸ್ಪದವಿರುವುದಿಲ್ಲ. ಆದರೆ ಶಿಥಿಲಗೊಳ್ಳುತ್ತಿರುವ ಸಂಸ್ಕೃತಿಯೊಂದು ತನ್ನೊಳಗಿನ ಸನ್ನಡತೆ, ಸರಳತೆ, ಪ್ರಾಮಾಣಿಕತೆ ಮತ್ತು ಕರ್ತವ್ಯಪರತೆಗಳಿಂದಲೇ ತನ್ನ ತಾ ಕಟ್ಟಿಕೊಳ್ಳಬೇಕು. ಮೂಲಕವೇ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕೆನ್ನುತ್ತಾನೆ ಕನ್ಫ್ಯೂಷಿಯಸ್. ಇದು ವ್ಯಕ್ತಿ ವಿಚಾರದಲ್ಲೂ ಅನ್ವಯವಾಗುವ ಸಿದ್ಧಾಂತವೇ. ಯಾಕೆಂದರೆ ಸಂಸ್ಕೃತಿಯ ಮೊದಲ ಮೆಟ್ಟಿಲು ಮನುಷ್ಯನೇ. ಮಾರ್ಗ ಕಾಣದ ಮನುಷ್ಯನೊಬ್ಬನ ಸಂಸ್ಕೃತಿ ಮಾರ್ಗದರ್ಶಿಯಾಗಲು ಸಾಧ್ಯವಿಲ್ಲ. ಆಲೋಚನೆಯನ್ನು ಪುಷ್ಟೀಕರಿಸಿದಂತೆ ಬರೆದವರು ಮತ್ತು ಬದುಕಿದವರು ಸಿ.ಆರ್.ವಾಯ್.
    ಇದು ನನ್ನ ಹೆಮ್ಮೆ ಸಿ.ಆರ್.ವಾಯ್ ನನ್ನ ಸಂಶೋಧನಾ ಮಾರ್ಗದರ್ಶಿಗಳಾಗಿದ್ದರು. ಒಂದರ್ಥದಲ್ಲಿ ಇದು ಸರಿಯಾದ ವಾಕ್ಯವಲ್ಲ. ಅವರು ನನ್ನ ಮಾರ್ಗದರ್ಶಿಗಳಾಗಿದ್ದರು, ಮಾರ್ಗದರ್ಶಿಗಳಾಗಿದ್ದಾರೆ, ಮಾರ್ಗದರ್ಶಿಗಳಾಗಿಯೇ ಇರುತ್ತಾರೆ. ಆರಂಭದಿಂದಲೇ ನಾನೊಂದಿಷ್ಟು ಕವಲು ದಾರಿಯ ಮನುಷ್ಯ, ವಯೋಸಹಜವಾದ ಅಲೆದಾಟ, ಜಿಗಿದಾಟ ನಾಲ್ಕು ದಶಕಗಳವರೆಗೆ ನನ್ನನ್ನು ಹೈರಾಣಾಗಿಸುವಾಗ ನನ್ನೊಳಗೆ ತಣ್ಣಗುರಿಯುತ್ತ ದೀಪದಂಥ ಒಂದು ಪ್ರಶ್ನೆಯಾಗಿಯೋ ಅಥವಾ ಪ್ರಶ್ನೆ ಸ್ವರೂಪದ ಒಂದು ದೀಪವಾಗಿಯೊ ಕಾಡಿದವರು ಸಿ.ಆರ್.ವಾಯ್. ಸಂಶೋಧನೆಯ ಆರು ವರ್ಷಗಳ ಎಷ್ಟೊಂದು ಧೀರ್ಘ ದಾರಿ ಸವೆಸಿಯೂ ಇವರೊಂದಿಗೆ ಮಾತೇ ಸಾಧ್ಯವಾಗಲಿಲ್ಲವಲ್ಲ! ಎಂದು ಅದೆಷ್ಟೋ ಬಾರಿ ಕೇಳಿಕೊಂಡಾಗ ಸಾಲುಸಾಲಾಗಿ ಸಮಾಧಾನದ ನಿದರ್ಶನಗಳಾಗಿ ಬಂದು ನಿಲ್ಲುತ್ತವೆ ನನ್ನ ಸಾಹಿತ್ಯ ಸೃಷ್ಟಿಗಳು ಹಾಗೂ ನನ್ನ ಗುರುಗಳು ಪರಿಚಯಿಸಿ ಬಿಟ್ಟ ಸಾಂಸ್ಕøತಿಕ ವ್ಯಕ್ತಿತ್ವಗಳು. ಇಂದು ನನ್ನನ್ನೂ ಸೇರಿಸಿಕೊಂಡು ರಾಜೇಂದ್ರ ಚೆನ್ನಿ, ಡಾ.ಬಸವರಾಜ ನಾಯ್ಕರ್ಆರ್.ಕೆ.ಕುಲಕರ್ಣಿ ಹೀಗೆ ಹೇಳುತ್ತ ಹೋದರೆ ಅವರ ಮಾರ್ಗದರ್ಶನದಲ್ಲಿಯ ಸಂಶೋಧನಾರ್ಥಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದು ಸತ್ಯ, ಅವರೊಂದಿಗೆ ಮಾತು ಸಾಧ್ಯವಿಲ್ಲ. ಸಾಧನೆಯ ಸಂಭ್ರಮ ಖಂಡಿತವಾಗಿಯೂ ಸಾಧ್ಯವಿದೆ. ನಮ್ಮ ಬೆಳವಣಿಗೆಯ ಬೆಳಕಿನ ಹಿಂದೆ ಎಣ್ಣೆಯಂತೆ ತಣ್ಣಗಾದ ಅವರ ಭರವಸೆ ಇದೆ.
         ಇಂದು ಎಲ್ಲ ವಾದಗಳ ನಂತರ ದೇಸಿವಾದವನ್ನು ಕುರಿತು ಗಹನವಾಗಿರುವ ಸಿ.ಆರ್.ವಾಯ್ ದೇಸಿಯತೆಯ ಚಾರಿತ್ರಿಕ ಪುಟಗಳಾದ ವಚನಕಾರರ ಜೀವನವನ್ನು, ರಚನೆಗಳನ್ನು ಜಾಗತಿಕ ಭಾಷೆಗೆ ಹೊಂದಿಸುವ ಬಹು ದೊಡ್ಡ ಕಾರ್ಯವನ್ನು ಪೂರೈಸಿದವರು. ಜಾಗತಿಕವಾದ ಅತೀ ದೊಡ್ಡ ಅಲೋಚನಾ ಪರಂಪರೆಯನ್ನು ಕನ್ನಡದ ಸಾಂಸ್ಕೃತಿಕ ಸಂದರ್ಭದಲ್ಲಿ ಹೊಂದಿಸಿಡುವ ಅವರ ಶ್ರಮಕ್ಕೆ ಸಾಕ್ಷಿ ಹಂಪಿ ವಿಶ್ವವಿದ್ಯಾಲಯದಿಂದ ಪ್ರಕಟವಾದ ಅವರಪಾಶ್ಚಾತ್ಯವಾದಗಳು. ಬಿ.ಎಮ್.ಶ್ರೀ ಬರೆದಇಂಗ್ಲೀಷ್ ಗೀತೆಗಳುಸಂಕಲನದ ಸಾಲುಗಳನ್ನು
ಒಮ್ಮೆ ಇವಳು, ಒಮ್ಮೆ ಅವಳು
ಕುಣಿಸುತಿರುವಳು
ಹೇಗೆ ನನಗೆ ಹಬ್ಬವಾಗಿ
ಇನಿಯರುಬ್ಬರನ್ನು ತೂಗಿ
ಇವಳ ಸೊಬಗನವಳು ತೊಟ್ಟು
ನೋಡಬಯಸಿದೆ
ಅವಳ ತೊಡಿಗೆ ಇವಳಿಗಿಟ್ಟು
ಹಾಡ ಬಯಸಿದೆ
ಸಿ.ಆರ್.ವಾಯ್ ಬರೀ ದಾಖಲಿಸಲಿಲ್ಲ, ಬದುಕಿದರು. ಮೂಲಕ ದೇಸಿಯತೆಯನ್ನೂ ಬದುಕಿಸಿದರು.
     ಅಧಿಕಾರಕ್ಕೊ, ಅವಕಾಶಕ್ಕೊ, ಅಗ್ಗದ ಪ್ರಚಾರಕ್ಕೊ ಹಪಹಪಿಸಿದವರಲ್ಲ ಸಿ.ಆರ್.ವಾಯ್. ಅವರು ಮಾಡಿ ಮರೆತವರು, ನೀಡಿ ನೆಮ್ಮದಿಯಾಗಿದ್ದವರು. ಬಹುತೇಕ ಮೂಲಕವೆ ವಿಸ್ಮøತಿಗೊಳಗಾದ ನೆಲದ ಮೂಲ ಸಂಸ್ಕøತಿಯನ್ನು ನಮ್ಮಂಥವರಿಗೆ ತೋರಿಸಿ ಎಚ್ಚರಿಸಿದರು. ಬದುಕು ಅತ್ಯಂತ ದಿವ್ಯ, ಭವ್ಯ ಹಾಗೂ ಶಿಸ್ತು ಅವರ ಪಾಲಿಗೆ. ಬಾಳಿನ ಮುಸ್ಸಂಜೆಯಲ್ಲಿ ಸಿ.ಆರ್.ವಾಯ್ ಅಗತ್ಯವಾದ ವಿಷಯವನ್ನೆತ್ತಿಕೊಂಡೇ ಬರಹಕ್ಕಿಳಿದಿದ್ದಾರೆ.
     ಸಿ.ಆರ್.ವಾಯ್ರವರದೇಸಿಯತೆ ಮತ್ತು ದೇಶಿವಾದಕೃತಿಯನ್ನು ಗಮನಿಸುತ್ತಿರುವಂತೆ ಹುಟ್ಟಿದ ಗುಮಾನಿ,  ಇಷ್ಟೊಂದು ಸಂಕೀರ್ಣವಾದ ಜೀವನ ಸಂದರ್ಭಕ್ಕೆ ಭಾರತ ಹಿಂದೆಂದಾದರೂ ಸಾಕ್ಷಿಯಾಗಿತ್ತೇ? ಅಷ್ಟಿಷ್ಟು ಇತಿಹಾಸವನ್ನು ಓದಿದ ನಾನು ಗಮನಿಸಿದಂತೆಇಲ್ಲಎಂದು ಹೇಳಬೇಕು. ಇದ್ದರೂ ಅಲ್ಲಿ ಮೈಯೊಡ್ಡಬೇಕಾದ ಸನ್ನಿವೇಶಗಳಿದ್ದವೆ ವಿನಃ ಎದೆಯೊಡ್ಡಬೇಕಾದ ಸಂದರ್ಭಗಳು ಕಡಿಮೆ. ಭೌಗೋಳಿಕವಾಗಿ ಅನ್ಯರ ಪಾಲಾಗಿದ್ದ ನೆಲವನ್ನು ಭಾರತ ಖಂಡಿತವಾಗಿಯೂ ಜಗತ್ತಿಗೆ ಮಾದರಿಯಾಗಬೇಕಾದ ರೀತಿಯಲ್ಲಿಯೇ ಮತ್ತೆ ತನ್ನದಾಗಿಸಿಕೊಂಡಿತು. ದುರಂತವೆಂದರೆ ತನ್ನತನದ ಯಶಸ್ವಿ ಸೂತ್ರವನ್ನು ತನ್ನದೇ ಒಳಿತಿಗಾಗಿ ಆನಂತರ ಅದು ಬಳಸಿಕೊಳ್ಳದೇ ಇರುವುದುಸಿ.ಆರ್.ವಾಯ್ ಅವರದೇಸಿವಾದ ಮತ್ತು ದೇಶಿಯತೆನನ್ನ ವಿಚಾರವನ್ನು ಪುಷ್ಟಿಕರಿಸಿದೆ. ಸ್ವತಂತ್ರ ಭಾರತದ ಅಸ್ಮಿತೆಯ ಮೊದಲ ಪುಟವಾಗಬೇಕಾಗಿದ್ದ ಗಾಂಧಿ ದೇಶದ ಭೌಗೋಳಿಕ ಹೋರಾಟದ ಕೊನೆಯ ಪುಟವಾಗಿದ್ದು
           ಬಹಳ ಜಟಿಲವಾಗಿದೆ ಸಂದರ್ಭ. ವಸಾಹತೀಕರಣದಿಂದ ಪ್ರಾರಂಭವಾದ ಅನ್ಯಾಕ್ರಮಣದ ಕಥೆ ಕೈಗಾರೀಕರಣ, ಔದ್ಯೋಗಿಕರಣ, ಜಾಗತೀಕರಣ ಮತ್ತು ಖಾಸಗಿಕರಣಗಳಿಂದ ಸಾಗಿ ಬಂದು ನಿರ್ವಿರ್ಯೀಕರಣದ ಹಂತಕ್ಕೆ ನಮ್ಮನ್ನು ತಂದು ನಿಲ್ಲಿಸಿದೆ. ಔದಾರ್ಯತೆ ಮತ್ತು ವೈಚಾರಿಕತೆಯ ಪೈಪೆÇೀಟಿಯ ಧಾವಂತದಲ್ಲಿ ಅಗತ್ಯವಿಲ್ಲದ್ದನ್ನು ವಾದಿಸಿ, ಸ್ಥಾಪಿಸಿ ಪ್ರಪಂಚದ ಪ್ರಗತಿ ಹೊಂದಿದ ನಾಗರಿಕತೆಗಳ ಸಾಲಿಗೆ ಸೇರಿದೆವೆಂಬ ಬಿಗುಮಾನ ಒಂದು ಕ್ಷಣದ್ದಾದರೆ ನಿಂತ ನೆಲದಲ್ಲಿಯೇ ನಾವು ಬೇರುಗಡಿತರಾದ ತಲ್ಲಣ ನಮ್ಮದಾಗಿದೆ. ನಾನುಸಿರಿದ ಭಾಷೆಗೆ ಈಗ ನನಗೊಬ್ಬ ಟ್ಯೂಟರ್ ಬೇಕು. ನನ್ನಹಳ್ಳಿ ಊಟಕ್ಕೂ ನಾನೇ ಒಬ್ಬ ಯೂರೋಪಿಯನ್ನನಾಗಿ ಸರದಿಯಲ್ಲಿ ನಿಲ್ಲಬೇಕು. ನನ್ನ ಹಟ್ಟಿಯ ಹಾಡುಗಳಿಗೆ ನಾನು ಪಶ್ಚಿಮದ ಮಸಾಲೆ ಅರಿಯಬೇಕು. ನನ್ನ ಜೋಗುಳ ಹಾಡಿದ ಕಥೆಗಳು ನನ್ನ ಸಂತಾನಗಳಿಗೆ ನನ್ನದಲ್ಲದ ಭಾಷೆಯಿಂದಲೇ ದಕ್ಕಬೇಕು. ಅಬ್ಬಾ! ಈಗ ನೆಲ ನಮ್ಮದು ಅದನ್ನು ಘೋಷಿಸುವ ಸಂವಿಧಾನ, ಬಾವುಟ, ವ್ಯವಹಾರ ಎಲ್ಲವೂ ನಮ್ಮದೇ, ಆದರೆ ಇದೆಲ್ಲವೂ ನೆಮ್ಮದಿಯಿಲ್ಲದ ನಮ್ಮದು.
         ಸ್ವಾತಂತ್ರ್ಯೋತ್ತರದ ಭಾರತಕ್ಕೆ ಬ್ರಿಟಿಷ್ ಮಾದರಿಯ ನ್ಯಾಯಿಕ ವ್ಯವಸ್ಥೆ ಸರಿಯಾದುದಲ್ಲ ಎಂದು ಹೇಳಿ, ಖುಲಾಸೆಗೊಳ್ಳದ ಕಡತಗಳನ್ನು ಮುಂದಿಟ್ಟುಕೊಂಡು ದೇಶದ ನ್ಯಾಯಾಧೀಶನೊಬ್ಬ ಕಣ್ಣೀರಿಡುವುದರೊಳಗಾಗಿ 70 ವರ್ಷ ಗತಿಸಿಬಿಡುತ್ತದೆ.  ಪಶ್ಚಿಮದ ಔಷಧಿ ಕಂಪನಿಗಳನ್ನು ಸಾಯಲಾಗದಷ್ಟು ಪೆÇೀಷಿಸದ ಭಾರತ ನಮ್ಮದೇ ಯೋಗ ನಮ್ಮನ್ನು ಕಾಯುವ ಸಂಜೀವಿನಿ ಎಂದು ತಿಳಿದುಕೊಳ್ಳುವಲ್ಲಿ ಹಲವು ತಲೆಮಾರುಗಳು ಇಲಿ-ಕಪ್ಪೆಗಳಂತೆ ಔಷಧಿಯನ್ನು ತಿಂದೇ ಸತ್ತು ಹೋಗುತ್ತವೆ. ಹೀಗೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂದರ್ಭದಲ್ಲಿ ನಾವು ಬಂದು ನಿಲ್ಲುತ್ತಿರುವ, ಕಂಡುಕೊಳ್ಳುತ್ತಿರುವ ಸಮಾಧಾನ ಬೇರೆಯಾಗುತ್ತಿದೆ. ಅದು ದೇಸಿಯತೆಯೆಡೆಗೆ ವಾಲುತ್ತಿದೆ ಎನ್ನುವುದನ್ನು ಸಿ.ಆರ್.ವಾಯ್ ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಎಲಿಯಟ್ ಒಂದು ಪ್ರಶ್ನೆ, “ಜ್ಞಾನದ ಓಟದಲ್ಲಿ ವಿವೇಕವನ್ನೂ, ಮಾಹಿತಿಯ ಮಹಾಪೂರದಲ್ಲಿ ಜ್ಞಾನವನ್ನೂ ನಾವು ಕಳೆದುಕೊಂಡಿದ್ದೇವೆಯೇ?” ಇಲ್ಲಿ ಜ್ಞಾನವೆನ್ನುವುದನ್ನು ವೈಯಕ್ತಿಕ ಅನುಭವದ ನೆಲೆಯಲ್ಲಿಯೇ ಗ್ರಹಿಸಬೇಕಾಗುತ್ತದೆ. ವೈಯಕ್ತಿಕ ಅನುಭವದ ಬೇರುಗಳನ್ನು ನಾನು ನನ್ನ ದೇಸಿಯತೆಯಲ್ಲಿಯೇ ಖಾತರಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಂತ ದೇಸಿಯತೆಯೇ ವರ್ತಮಾನದ ನಮ್ಮೆಲ್ಲ ಸಮಸ್ಯೆಗಳಿಗೂ ಅಂತಿಮ ಪರಿಹಾರ ಎನ್ನುವ ಯಾವುದೇ ಕರ್ಮಠ ನಿಲುವಿಗೆ ಬಾರದೆ ಅದರ ಮಿತಿಗಳನ್ನು, ಅಪಾಯಗಳನ್ನು ಸಿ.ಆರ್.ವಾಯ್ ಚರ್ಚಿಸಿದ್ದಾರೆ. ಆದಾಗ್ಯೂ ದೇಸಿಯತೆಯ ಮಹಾ ಜಂಗಮನಾಗಿದ್ದ ಬೇಂದ್ರೆ ಹೇಳುವಂತೆ, “ತಲಿ ಜಾಡಿಸುದಕ್ಕಿಂತ ನೊಣ ಜಾಡಿಸುವುದೇ ಮೇಲು
      ಯಾವ ಶೋಧವೂ ಅಂತಿಮವಲ್ಲ. ಅಂತಿಮವಾಗುವುದಾದರೆ ಅದು ಶೋಧವೂ ಅಲ್ಲ. ಎಲ್ಲ ಶೋಧಗಳು ಓದಾಗಬೇಕು. ಇದು ನನ್ನ ಗುರುಗಳಾಗಿರುವ ಸಿ.ಆರ್.ವಾಯ್ ನನಗೆ ಕಲಿಸಿದ, ಮನದಟ್ಟಾಗಿಸಿದ ಮಹಾನ್ ಮಂತ್ರ. ಅದು ಕೃತಿಯ ಕಾಳಜಿ ಮತ್ತು ಗಂತವ್ಯವೂ ಹೌದು.