Total Pageviews

Tuesday, August 23, 2016

ಮಥುರೆಗೆ ಬಾರೋ



ನಿನ್ನೆ ನನ್ನೊಡಲ ಮಧುಶಾಲೆಯಲ್ಲಿ
ಮಾತಾಗಿದ್ದವನೆ
ಮೃತ್ಯುಪುಟಗಳ ಸುಟ್ಟು
ಮೈ ಕಾಯಿಸಿಕೊಂಡವನೆ
ಸಿಕ್ಕ ಗೋಪಿಯರನ್ನೆಲ್ಲ ಒತ್ತೆಯಿಟ್ಟು
ಇಂದು ಅದ್ಯಾವ ದಿಕ್ಕಿಗೆ ಹೋದೆ
ಚುಕ್ಕೆ ಎಣೆಸುತ್ತಾ?

ಕತ್ತಲಾಗುತ್ತಿದೆ
ಮರಳಿ ಬಾರೋ ಗೂಡಿಗೆ
ಮರವೆಂಬ ಮರಭೂಮಿಯ
ಮಹಾರಾಜನೆ
ಎಣ್ಣೆ ತೀರಿದೆ ದೀಪ ದಣಿದಿದೆ
ಕತ್ತಲು ನಿಂತಿದೆ ನೆತ್ತಿಗೆಣ್ಣೆ ಸವರಿಕೊಂಡು
ನಾಶಿಕದ ಮೊಗಸಾಲೆಯಲ್ಲಿ
ನಿನ್ನುಸಿರ ಸುಳಿದಾಟ
ಈಗ ನನ್ನೆದೆಯ ವೃಂದಾವನದ ತುಂಬಾ
ನಿನ್ನದೇ ವಸಂತ
ಕೆಳಗಿಳಿದರೆ ಶ್ರಾವಣ, ಕಿಚಿಪಿಚಿ ಕೆಸರು
ಮೈ ಈಗ ಮಹಾಮಥುರೆ ಬಾರೋ

ನನ್ನ ಹೆಗಲುಗಳ ಮೇಲೆರೆದ
ಜೊಲ್ಲು ನೆನಪಾದರೆ
ಸಲ್ಲದ ಸಾವಿರ ಓಕುಳಿಯ ಹಾಡುಗಳು
ಗಲ್ಲ ಚೂಟುವ, ಸೊಲ್ಲು ನುಡಿಯುವ ಸಂಪ್ರೀತಿಯರು
ಒದ್ದೆಯಾಗುತಿದೆ ರವಿಕೆ
ನಿನ್ನ ಜೀವ ಜೀವ್ಹೆಯ ನೆನೆದು
ಅದ್ಯಾವ ಸಂದಿನಲಿ ಅವಿತಿರುವಿ
ಬಾರಯ್ಯ ಭೃಜರಾಯ
ಮೆಲ್ಲೊ ಮೆಲ್ಲೊ ನನ್ನ ಬೆಣ್ಣೆ ಮೈಯ
ಕಣ್ಣೀರಿಗೆ ನೀಡೊ ಒಂದು ಅಭಯದ ಕೈಯ
 ಗೊಲ್ಲರಾಯ ಗುಲ್ಲೆಬ್ಬಿಸ ಬೆಡವೋ
ನನ್ನ ಹೊಕ್ಕುಳದ ಗಲ್ಲಿ ಗಲ್ಲಿಗಳಲ್ಲಿ
ನಿಲ್ಲಬೇಕೊ ನೀ ನನ್ನೊಡೆಯ
ಕಣ್ಣಗೊಂಬೆಗಳಲ್ಲಿ ಮೆಲ್ಲ ನುಡಿಯುತ್ತ
ಹುಬ್ಬು ತೀಡುವೆ ಬಾರೋ
ಗಬ್ಬ ಗೆದ್ದವೆ
ಗದ್ದ ತೀಡುವೆ ಬಾರೋ
ನನ್ನ ಹಡೆದವನೆ

ಅದ್ಯಾವ ಘಳಿಗೆಯೊ
ಪ್ರೀತಿಯ ಮಹಾ ಸಲುಗೆಯೊ
ತುಟಿಗೆ ತುಟಿ ಕೊಟ್ಟೆ
ಆತ್ಮದೊಳಗೊಂದು ನವಿಲ ಗರಿ ನೆಟ್ಟೆ
ಉಸಿರು ಬಿಗಿದವನೆ
ಕೊಸರಿ ಹೋಗದ ಹಾಗೆ
ನನ್ನ ಬಸೀರ ಬೆರೆತವನೆ
ಪ್ರೀತಿ ನುಡಿದವನೆ
ಪಾಪದ ನನ್ನ ಹೆಣ ಹೊತ್ತು ನಡೆದವನೆ
ಕೋಪ ತಡೆದವನೆ
ನನ್ನ ಕೇಶ ರಾಶಿಗೆ
ಪಾರಿಜಾತ ಸುರಿದವನೆ
ಎಲ್ಲಿ ಅಡಗಿರುವೆ ಹೇಳೊ
ನನ್ನ ಒಡಲ ಕದ್ದವನೆ

No comments:

Post a Comment