Total Pageviews

Saturday, September 3, 2016

ಮುಹಾಜಿರ್‍ನ ಮಾತುಗಳು....(PART-1)



Live a just and honest life. God does not do injustice, and He expects His followers to be just. Act justly at all times and under all conditions.”
                                                                                       -Excellence in Islam
          ಮನುಷ್ಯತ್ವದ  ಮೆಹಫಿಲ್ನಲ್ಲಿ ಮಾತುಗಳನ್ನುರುಳಿಸುತ್ತಿದ್ದೇನೆ. ಪಗಡೆಯೊಳಗಿನ ದಾಳಕ್ಕೂ ಮಾತಿನೊಳಗಿನ ಅರ್ಥಕ್ಕೂ ಬಹಳ ವ್ಯತ್ಯಾಸವೇನಿಲ್ಲ. ಅವೆರಡೂ ಎಲ್ಲ ಕಾಲಕ್ಕೂ ಅಚ್ಚರಿ ಮತ್ತು ಅನಿರೀಕ್ಷಿತಗಳಾಗಿರುವುದರಿಂದಲೇ ಆಟ ಮತ್ತು ಮಾತು ಮನುಷ್ಯನ ಒಟ್ಟು ಅಸ್ತಿತ್ವದ ಅವಿಭಾಜ್ಯ ಅಂಗಗಳಾಗಿ ಉಳಿದಿವೆ. ಹೀಗಾಗಿ ಕ್ಷಣದ ನನ್ನ ಮಾತು ನನ್ನನ್ನುಮುಹಾಜಿರ್ನನ್ನಾಗಿಸಿದರೂ ಸೈ, ‘ಮುಜಾವೀರ್ನನ್ನಾಗಿಸಿದರೂ ಸೈ, ‘ಮುಯಜಿನ್ನನ್ನಾಗಿಸಿದರೂ ಸೈ. ಯಾಕೆಂದರೆ ಅಂತಿಮವಾಗಿ ಇವುಗಳನೆಲ್ಲಾ ಮೀರಿ ನಾವು ಮನುಷ್ಯನಾಗಿರಬೇಕಾದುದು ಮಾತ್ರ ನಮ್ಮೆಲ್ಲ ಧರ್ಮಗಳ ಮೂಲ. ಉಳಿದವುಗಳೆಲ್ಲ ಮನುಷ್ಯನೆಂಬ ಮನುಷ್ಯನ ಮೇಲಿನ ಅನಂತರದ ಸಾಧ್ಯತೆಗಳು. ಸಾಧ್ಯತೆಗಳಿಗೆ ಕೆಲವು ಪದಗಳು. ಆದರೆ ಪದಗಳ ನಿಷ್ಪತ್ತಿಯೂ ಜೀವನ ವ್ಯವಹಾರದ ಒಂದು ಸಾಧ್ಯತೆ ಅಷ್ಟೇ.
          ನನಗೆ ಮಾನವ ದೇಹದಷ್ಟು ಸುಂದರವಾದ ಯಂತ್ರ, ಅಲ್ಲಲ್ಲ ಮಂತ್ರ ಅಥವಾ ತಂತ್ರ ಮತ್ತೊಂದು ಕಾಣಿಸಿಯೇ ಇಲ್ಲ. ತಣ್ಣಗೊಮ್ಮೊಮ್ಮೆ ತಂಬಿಗೆಗೆ ಕುಳಿತುಕೊಂಡಾಗಲೆಲ್ಲಾ ಪ್ರಪಂಚದ ಅತ್ಯಂತ ಮುಗ್ಧ ಸೃಷ್ಟಿಯಾದ ದೇಹವನ್ನು ಕುರಿತು ಎಷ್ಟೆಲ್ಲಾ ಯೋಚಿಸುತ್ತೇನೆ. ಬಯಲಿಗೆ ಕುಳಿತ ದೇಹ, ಬಿದ್ದ ದೇಹ, ಹಾದು ಹೋದ ಹಾದಿಗೆ ಹೂವು ಹಾಸುವ ದೇಹ, ಬಯಸುವ-ಬಸಿಯುವ, ಬೆಸೆಯುವ-ಬಸರುವ, ಬರೆಯುವ-ಮರೆಯುವ, ಬಿತ್ತುವ-ಮೆತ್ತುವ, ಅಂತಿಮವಾಗಿ ಬಯಲಾಗುವ ದೇಹ ಒಂದು ನಿರುಪದ್ರವ ಸೃಷ್ಟಿ. ಇಂಥ ದೇಹದ ದುರಂತವೇ ಬೇರೆ. ಮನಸ್ಸಿಗೆ ಮಾರ್ಗವಾಗುವ ಇದನ್ನು ನೆನೆಸಿಕೊಂಡು ನಾನು ಕಣ್ಣೀರು ಹಾಕಿದ್ದಕ್ಕೊಂದು ಸಾಕ್ಷಿ ನನ್ನ ಪದ್ಯ-
ದೇಹ ಕಾಶಿ ಸುತ್ತುವುದಿಲ್ಲ
ಮೆಕ್ಕಾಗೆ ಹೋಗಿಯೂ
 ಇದಕ್ಕೆ ಮುಕ್ಕಾಲು ಭಾಗ್ಯ ಬರುವುದಿಲ್ಲ
ಗಂಗೆಗೆ ಇಳಿದೂ ಮೊಳಕಾಲಿನ ಪಾಪ
ತೊಳೆಯುವುದಿಲ್ಲ
ಮಾನಸ ಸರೋವರದಲ್ಲೂ ದೇಹದ ಕಥೆಗೆ
ಕನ್ನಡಿ ಸಿಗುವುದಿಲ್ಲ
           ಯಾಕೆಂದರೆ (ಇದು ನನ್ನ ಗುಮಾನಿ ಇರಬಹುದು) ಪ್ರಪಂಚದ ಎಲ್ಲ ಧರ್ಮಗಳೂ ಆತ್ಮವೆಂಬ ಪಲಾಯನದ ದಾರಿಯ ಮೇಲೆಯೆ ದೇಹವೆಂಬ ಕಟುಸತ್ಯವನ್ನು ಸಂದರ್ಭ, ಸನ್ನಿವೇಶ, ಸ್ವಾರ್ಥಗಳಿಗೆ ತಕ್ಕಂತೆ ಧಿಕ್ಕರಿಸುತ್ತಲೇ ಬಂದವುಗಳು.
       ನನ್ನ ವಾದ ಸ್ವಲ್ಪ ಹೆಚ್ಚಾಗಿದ್ದರೂ ಸಹಿಸಿಕೊಳ್ಳಿ, ಆದರೆ ಇದು ಸತ್ಯ, ಆತ್ಮದ ಮಾತುಗಳನ್ನಾಡುವ ನಮ್ಮಲ್ಲಿ ನಮ್ಮಅಹಂನ್ನು ಕಾಪಿಟ್ಟುಕೊಳ್ಳುವ ಕಮಟು ವಾಸನೆ ಬಡಿಯದೇ ಇರುವುದಿಲ್ಲ. ಇಂಥವರಿಗೆ ಧರ್ಮ, ದೇಹ ಮತ್ತು ಆತ್ಮ ಯಾವವೂ ಅರ್ಥವಾಗಿಲ್ಲವೆಂದೇ ಅರ್ಥ. ಎಲ್ಲೋ ಆತ್ಮ ಮತ್ತು ದೇಹಗಳೆರಡರ ಸರಿಯಾದ ವಿವೇಚನೆ ಇಲ್ಲದವರು ಧರ್ಮದ ಠೇಕಿದಾರಿಕೆಯನ್ನು ಘೋಷಿಸಿಕೊಂಡಿರುವುದೇ ಪ್ರಪಂಚದ ಎಲ್ಲ ಧಾರ್ಮಿಕ ವಿಕೃತಿಗಳಿಗೆ, ವಿಭಜನೆಗಳಿಗೆ, ವಿನಾಶಗಳಿಗೆ ಕಾರಣವಾಗಿದೆ. ಕ್ಷಮಿಸಿ, ಹೀಗೆಯೆ ಹೋದರೆ ಚರ್ಚೆ ಲಂಬಿಸಿ ನಾನು ಮತ್ತೆಲ್ಲೋ ಹೋಗುವ ಸಾಧ್ಯತೆಗಳಿವೆ.
        ಒಂದಂತೂ ಸತ್ಯ, ನಾನು ಹುಟ್ಟಿದ ಭಾರತವೆಂಬ ಸನಾತನ ನೆಲದಲ್ಲಿ ಆತ್ಮಗಳ ಅಸ್ತಿತ್ವವನ್ನು ಹಿಂದೂ-ಮುಸ್ಲಿಂ ಧರ್ಮಗಳೆರಡೂ ಒಪ್ಪಿಕೊಳ್ಳುತ್ತವೆ. ಎರಡರಲ್ಲೂ ಇಂದು ಹುಟ್ಟಿರದ, ಮುಂದೆಯೂ ನಿಲ್ಲದ ಆತ್ಮದ ಯಾತ್ರೆಯನ್ನು ಅನಂತತೆಯೊಂದಿಗೆ ಹೊಂದಿಸಲಾಗಿದೆ. ಪರಮಾತ್ಮ, ದೇವದೂತ, ಪೆÇ್ರಫೆಟ್ ಮುಂದೆ ನಮ್ಮ ಆಯುಷ್ಯದ ಕಡತ ಇಡಲಾಗಿದೆ. ಹೀಗೆ ನಮ್ಮ ಆತ್ಮ ಹಾಗೂ ಪರಮಾತ್ಮದ ಸಂಬಂಧ ಕುರಿತು ಧರ್ಮಗಳೆರಡೂ ಮಾತನಾಡುವುದು ಸಮ್ಮತ ಎನ್ನುವುದಾದರೆ ಇವೆರಡರ ಅಸ್ತಿತ್ವಗಳೂ ಅವುಗಳ ಆತ್ಮಗಳ ಅಸ್ತಿತ್ವವನ್ನೇ ಅವಲಂಬಿಸಿವೆ, ಅವಲಂಬಿಸಿರಬೇಕು.
      ಮತ್ತೆ ಕೆಲವರ ವಾದದ ಪ್ರಕಾರ ಮೂಲದಲ್ಲಿ ಒಂದೇ ಆದಧರ್ಮಕ್ಕೆ ಹಿಂದೂ-ಮುಸ್ಲಿಂ. ಕ್ರಿಶ್ಚಿಯನ್,ಯಹೂದಿ, ಬೌದ್ಧ, ಜೈನ,  ಝರೋಸ್ಟ್ರಿಯನ್ಗಳೆಲ್ಲ ಬೇರೆ ಬೇರೆ ಬರ್ಮೊಡಾಗಳು.ಇವೆಲ್ಲವುಗಳ ಉದ್ದೇಶ ಮಾನವನೆಂಬ ಮರಿಪಿಶಾಚಿಯ ಅಸಹ್ಯಕ್ಕೊಂದು ಮಾನದ ಬಟ್ಟೆ ಹೊಲಿದು ಅತನನ್ನು ಸುಸಂಸ್ಕೃತಗೊಳಿಸುವುದೇ ಆಗಿದೆ. ಬದುಕಿನ ಎಲ್ಲ ಸಂಸ್ಕಾರಗಳ ಉದ್ದೇಶವೂ ಅಷ್ಟೆ, ನಿತ್ಯ ನಿಲುವನ್ನು, ನಿಂತ ನೆಲವನ್ನು ಪರಾಮರ್ಶಿಸಿಕೊಳ್ಳುತ್ತಲೇ ಸಂಸ್ಕೃತಿಯೊಳಗೆ ತಂದು ಬಿಡುವುದು.
            ಇಸ್ಲಾಂ ಅಂತೂ ಆತ್ಮದ ಉನ್ನತಿಯೇ ಬದುಕಿನ ಉನ್ನತಿ ಎನ್ನುವ ರೀತಿಯಲ್ಲಿ ಆತ್ಮದ ಮಜಲುಗಳನ್ನು ನಮ್ಮ ಮುಂದಿಟ್ಟಿದೆ. ಅದು ತಿಳಿಸುವ ಪ್ರಕಾರ - 1. ಅಮಾ(ಪಶು ಆತ್ಮ) 2. ಲವ್ವಾಮ್(ನಿಂದಕ ಆತ್ಮ) 3.ಮುಲಹಮ್(ಉದ್ದೀಪಿತ ಆತ್ಮ) 4.ಮುತ್ಮನ್(ಶಾಂತ ಆತ್ಮ) 5. ರಸೀಯ(ತೃಪ್ತ ಆತ್ಮ) 6. ಮರ್ಸೀಯ(ಪ್ರಿಯ ಆತ್ಮ) ಎನ್ನುವ 6 ಆತ್ಮದ ಮಜಲುಗಳಿವೆ. ಇಂಥಆತ್ಮದ ಪರಿಪೂರ್ಣತೆಯನ್ನು ಕಾಪಾಡಿಕೊಂಡವನು ಗೆದ್ದ, ಆತ್ಮ ಅದುಮಿದವ ಬಿದ್ದ(ಸುರಾ91) ಎನ್ನುವುದನ್ನು ನಂಬುತ್ತದೆ.
       ನಮ್ಮ ಹುಟ್ಟಿಗೂ ಮುಂಚೆ ಹಲವು ಮತ-ಧರ್ಮಗಳ ಬಾ/ಭಾವಿ ಹೆಣವಾಗುವುದು, ಅದು ನಮ್ಮ ಕರ್ಮ. ನಾವು ಹೊಣೆಯಲ್ಲದ ಕರ್ಮದ ದಾರಿಯಲ್ಲಿ, ನೂರೆಂಟು ಸಂಕಟ-ಸಂಕರ, ಸಾವು. ಸರಿ-ತಪ್ಪುಗಳ ಬಗೆಹರಿಯದ ಲೆಕ್ಕ. ಅಯ್ಯೋ! ಸ್ವರ್ಗ ಕುರಿತು ಕನವರಿಸುವ ನಮ್ಮ ನಮ್ಮ ಧರ್ಮಗಳ ದಾರಿಯಲ್ಲಿ ಎಷ್ಟೊಂದು ನರಕಗಳ ದರ್ಶನ!! ಬಹುತೇಕ ಕಾರಣಕ್ಕಾಗಿಯೇ ಇರಬಹುದುಸಾಕಿಯರಿಲ್ಲ ಸ್ವರ್ಗದಲ್ಲಿಎಂದು ಗಾಲೀಬ ಲೇವಡಿ ಮಾಡಿದ್ದ
        ಚಿಕ್ಕವನಿದ್ದೆ. ಮನೆಯಲ್ಲಿ ಅಯ್ಯಾಚಾರದ ಪ್ರಸಂಗ. ನೌಟಂಕಿಯಂಥ ಜಗದ್ಗುರು ಒಬ್ಬನಿಂದ ದೀಕ್ಷೆಯನ್ನು ಕೊಡಿಸಲು ಎಲ್ಲ ತಯ್ಯಾರಿಗಳೂ ನಡೆದಿದ್ದವು. ಓಡಿ ಹೋಗಿ ತಪ್ಪಿಸಿಕೊಂಡುಬಿಟ್ಟೆ. ಇನ್ನೊಂದು ಸಂದರ್ಭ, ಅತ್ಯಂತ ಕರುಣಾಭರಿತ ಮಾತೃ ಹೃದಯದ ಓರ್ವ ಬೈರಾಗಿ. ಅವನ ಕುಲ ಯಾವುದೊ? ನೆಲ ಯಾವುದೊ? ನನಗೆ ಅವನೊಂದಿಗೆ ಓಡಿಹೋಗುವ ತವಕ. ಆದರೆ ತಾನು ಯಾವ ಧರ್ಮ ಅಥವಾ ಮತದವನು ಎಂದು ತಿಳಿಯದ, ಎಂದೂ ತಿಳಿಸದ ಆತ ಮುಗುಳ್ನಕ್ಕು ನನ್ನಿಂದ ಓಡಿಹೋದ.
     ಹೀಗೆ ಒಬ್ಬರಿನ್ನೊಬ್ಬರಿಂದ ಓಡುವ, ಓಡಿಸುವ ಕಟ್ಟಿ ಹಾಕುವ, ಕೊಲ್ಲುವ, ಇಲ್ಲದ ಕಲ್ಪನೆಗಳನ್ನಿಟ್ಟು ಇಲ್ಲಿ ಸಲ್ಲದೆಯೂ ಅಲ್ಲಿ ಸಲ್ಲುವ ದಾರಿಗಳನ್ನು ತೋರಿಸಿವುದೇ ಧರ್ಮವೆ? ಎಂದು ಗೊಂದಲಕ್ಕಿಡಾಗುವ ಸಣ್ಣ ಸಂಕಟದ ವಯಸ್ಸು. ವೇಳೆಯಲ್ಲಿ ನನ್ನ ತಂದೆ ಕವಿ ಗೋಪಾಲದಾಸ ನೀರಜರ ಒಂದು ಪದ್ಯ ಕಲಿಸಿಬಿಟ್ಟರು. ಅಬ್ಬಾ !! ಎಂಥ ಪರಿಹಾರ, ಸಾವಿರ ಜನ್ಮಗಳ ನನ್ನ ಪ್ರಶ್ನೆಗೆ ಅದೆಂಥ ನೆಮ್ಮದಿ!! ಅದುವೆ ನನಗೆ ಒಪ್ಪಿತವಾದಧರ್ಮ ಸರಿಯಾದ ವ್ಯಾನ ಎನ್ನಿಸಿತು.
 ಕೋಯಿ ನಹೀ ಪರಾಯಾ
ಮೇರಾ ಘರ್ ಹೈ ಸಾರಾ ಸಂಸಾರ್
ಮೈ ಬಂದಾ ಹೂಂ ದೇಶ್-ಕಾಲ ಕಿ ಜಂಗ ಲಡಿಗಿ ಜಂಜೀರ್ ಸೆ
ಮೈ ಖಡಾ ಹೂಂ ಜಾತಿ-ಮತ, ಊಂಚ-ನೀಚ ಕೀ ಭೀಡ್ ಮೆ
ಮುಝಸೆ ತುಮ್ ಮತ್ ಕಹೊ
ಮಂದಿರ್-ಮಸಜಿದ್ ಪರ್ ಸರ್ ಠೋಂಕ್ ದೂಂ
      ಅಂದಹಾಗೆ, ನಾವು ಯಾವ ಧರ್ಮದ ಗುಲಾಮರೂ ಅಲ್ಲ, ಒಡೆಯನೂ ಅಲ್ಲ, ನಾವು ನಾವಷ್ಟೇ. ನಮಗೆ ಬೇಕಾದ ಧರ್ಮ ನಮ್ಮ ಮಾರುಕಟ್ಟೆಗಳಲ್ಲಿ ಸಿಗುವ ಬಟ್ಟೆ. ಹೊಂದಿದರೆ ಸಂಭ್ರಮಿಸೋಣ. ಹೊಂದದಿದ್ದರೆ..? ಬಟ್ಟೆಯ ಮರ್ಯಾದೆಯೊಂದಿಗೆ ಅಲ್ಲಿಯೇ ಬಿಟ್ಟು ಬರೋಣ.
                 ನಾನಾಡುವ ಹಿಂದಿಯಲ್ಲಿ ಕಾಬೂಲ್, ಕಂದಹಾರ್ಗಳ ಬುದ್ಧನ ಮೃದುತ್ವ ಇದೆ. ನೆಲದ ಮಗಳಾಗಿದ್ದ ಗಾಂಧಾರಿಯ ನಾಡಿನ ಯಾವುದೇ ಮೂಲೆಯಲ್ಲಿ ಯಾರೊಂದಿಗೂ ಅರೆಘಳಿಗೆ ಹಿಂದಿಯಲ್ಲಿ ಮಾತನಾಡಿದರೂ ಸಾಕು, ಮೋಹಕ್ಕೊಳಗಾಗುತ್ತಾರೆ ಗಂಧವಿದೆ. ಅಫ್ಘನ್ ಮಕ್ಕಳ ಕೆನ್ನೆಯ ಮೇಲಿನ ತಿಳಿ- ಗುಲಾಬಿಯ ಸೊಗಸಿದೆ. “ಅರೆ ಯಾರ್, ಲಾಜವಾಬ್!!” ಎಂದು ಸಂಭ್ರಮಿಸುವ ನನ್ನ ಹಿಂದಿಯ ತಮ್ಮತನಕ್ಕೆ, ಸೊಗಸುಗಾರಿಕೆಗೆ ಕಾರಣವೇನು? ಎನ್ನುವುದಕ್ಕೊಂದು ಉತ್ತರ ಅದರೊಳಗೆ ಬೆರೆತ ಬಿಜಾಪೂರದ ನೆಲದ ಉರ್ದು ಮತ್ತು ಪರ್ಷಿಯನ್ ಶಬ್ದಗಳ ಹೇರಳ ಬೆರಕೆ ಹಾಗೂ ಬಳಕೆ.
      ಅಂದಹಾಗೆ, ಬಿಜಾಪೂರದ   ಕಲ್ಲುಗಳ ಮೇಲೆ ಕೆತ್ತಲಾದ, ಸಮಾಧಿ-ದರ್ಗಾಗಳಿಗೆ ಬಳ್ಳಿಯಂತೆ ಸುತ್ತಿಕೊಂಡ ಹೆರಳು-ಹೆರಳಾದ ಪರ್ಷಿಯನ್ ಭಾಷೆಯನ್ನು,  ಮಳೆಯ ನಂತರ ಆಕಾಶದಲ್ಲಿ ಹರಡಿಕೊಂಡ ತುಂಡು-ತುಂಡಾದ ಖಾಲಿ ಮೋಡಗಳಂಥ ಉರ್ದು ಭಾಷೆಯನ್ನು ನೋಡಿಕೊಂಡೇ ಬಿಜಾಪೂರದಿಂದ ಬೀದರ್ವರೆಗಿನ ಭಾಷೆ, ಭಾವಗಳೆಲ್ಲವೂ ನನ್ನವಾದವು. ನಾನಿನ್ನೆಂದೂ ಬದಲಾಗದಂಂತೆಇಸ್ಲಾಂ ಇತಿಹಾಸದೊಂದಿಗೆ ನನ್ನ ಜನ್ಮಕ್ಕೂ ಪೂರ್ವವೇ ನನ್ನ ಸಂಬಂಧಗಳನ್ನು ಹೊಂದಿಸಿಬಿಟ್ಟಿತು
 

       ಈಗ ನಾನು ಓರ್ವ ಹಿಂದೂ ಎಷ್ಟು ಸತ್ಯವೋ ಅಷ್ಟೇ ಸತ್ಯ ನಾನೊಬ್ಬ ಮುಸ್ಲಿಂ. ಹೀಗೆಯೆ ಹೇಳಿದ್ದರು ಗಾಂಧಿಯೂ ಕೂಡ.
              ಇಂಡಿಯಾದಇಸ್ಲಾಂಈಗ ಇಂಡಿಯಾ ಇರುವಷ್ಟು ಕಾಲವೂ ಇರುವ, ಈಡಾಗುವ,ಇಡಿಯಾಗುವ, ತಳ್ಳಲಾಗದ ನಮ್ಮ-ನಿಮ್ಮೆಲ್ಲರ ಪಾಲಿನ ಕಟು ವಾಸ್ತವ. ಅದನ್ನು ಹೊರತುಪಡಿಸಿದ ನಮ್ಮಐಡೆಂಟಿಟಿಯೇ ಅಪೂರ್ಣ. ನನಗಂತೂ ಇದು ಹೆಜ್ಜೆ-ಹೆಜ್ಜೆಗೂ ಮನದಟ್ಟಾದ ಸಂಗತಿ. ಇಷ್ಟಾಗಿಯೂ ಈಗ ಇಸ್ಲಾಂ ನನ್ನದೆಂದು ಹೇಳುವುದರಲ್ಲಿ ನಮಗಿರುವ ಹಾನಿಯಾದರೂ ಏನು?
         ಅಂದಹಾಗೆ ಇದು ನನ್ನದಲ್ಲ, ನನ್ನದಾಗದು ಎಂದು ಹೇಳುವ ಹಕ್ಕು, ದರ್ದು ಯಾರಿಗಿದೆ? ಯಾತಕ್ಕಿದೆ? ಯಾಕಿದೆ? ಅದು ತಮ್ಮದೆನ್ನುವ ಅಮಲಿನಲ್ಲಿ ಮಾತನಾಡುವ ಠೇಕೆದಾರರು ಸ್ವ ಘೋಷಿತರೇ ವಿನಃ ಅವರು ಸಾರ್ವಜನಿಕರೂ ಅಲ್ಲ, ಸಾರ್ವಕಾಲಿಕರೂ ಅಲ್ಲ, ಸಾರ್ವಭೌಮರೂ ಅಲ್ಲ.
      ಗೊತ್ತಿರಲಿ, ಧರ್ಮ ವಕಾಲತ್ತಿನ ಅಥವಾ ಪಾರಮ್ಯದ ವಸ್ತುವಲ್ಲ.
     ಓಶೋ ತಿಳಿಸುವಂತೆ, “There is Religion. Religion is not an argument. It is a fulfilment , a feeling of fulfilment”

      ನನ್ನ ಓದಿಗೆ ದಕ್ಕಿರುವಂತೆ ಇಸ್ಲಾಂನ್ನು ತನ್ನ ಶಾಂತಿಯ ಕೈಗಳಿಂದ ಸಾವರಿಸಿದ ಪೆÇ್ರಫೆಟ್ ಮೊಹಮ್ಮದ್ ಅರಬ್ಬ್(ಬರಡು) ನಾಡಿನ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ವಿಷಮಸ್ಥಿತಿಯಲ್ಲಿ ಹುಟ್ಟಿ, ಅದನ್ನು ಚಾಣಾಕ್ಷತೆಯಿಂದ ವ್ಯಾವ್ಯಹಾರಿಕವಾಗಿ ಮತ್ತು ಭಾವನಾತ್ಮಕವಾಗಿ ಕಟ್ಟಿಡುವಲ್ಲಿ ಹೆಣಗಾಡಿದ ಓರ್ವ ತಿಳುವಳಿಕಸ್ಥ ನಾಯಕ .
      ನೀರು, ನೆರಳು, ನೆಮ್ಮದಿಯ ಭರವಸೆಗಳೇ ಇಲ್ಲದ, ಹತ್ತು ಹೆಜ್ಜೆಗೊಂದು ಬುಡಕಟ್ಟಿನ ಸಂಸ್ಕೃತಿ ಮತ್ತು ಸಮಸ್ಯೆಗಳನ್ನು ಹೊಂದಿದ್ದ ಅರೇಬಿಯಾದ ಅಗಣಿತ, ಅನಾಗರಿಕ ಬುಡಕಟ್ಟುಗಳನ್ನು ಒಗ್ಗೂಡಿಸುವುದಾಗಲಿ, ಮೂಲಕ ಅದಕ್ಕೊಂದು ರಾಷ್ಟ್ರವೆನ್ನುವ ಸಾಂಸ್ಥಿಕ ಸ್ವರೂಪ ಹಾಗೂಇಸ್ಲಾಂಎಂಬ ಜನಾಂಗೀಯ ಅಸ್ಮಿತೆಯನ್ನು ನೀಡುವುದಾಗಲಿ ಅಷ್ಟೊಂದು ಸರಳವಾದ ಕೆಲಸವಾಗಿರಲಿಲ್ಲ. ಒಬ್ಬರಿನ್ನೊಬ್ಬರ ಭಯದಿಂದ ಅಥವಾ ಒಬ್ಬರಿನ್ನೊಬರ ಆಸ್ತಿ, ಪ್ರದೇಶ, ರಾಜಕೀಯ ಪಾರಮ್ಯದ ಪ್ರಲೋಭನೆ ಮತ್ತು ದುರಾಸೆಗಳಿಂದಾಗಿ ಖಡ್ಗವೇ ಗೆಲುವಿನ ಅಂತಿಮ ದಾರಿ, ಯುದ್ಧವೇ ಎಲ್ಲದಕ್ಕೂ ಪರಿಹಾರ ಎಂದುಕೊಂಡು ರಕ್ತದಲ್ಲಿ ಮಿಂದೆದ್ದವರನ್ನುಇಸ್ಲಾಂಎಂಬ ಸಹೋದರತ್ವದ, ಸೌಹಾರ್ದದ ಭಾವತಂತುಗಳೊಂದಿಗೆ ಬೆಸೆಯುವುದು ಸಾಮಾನ್ಯ ಸಾಧನೆಯಾಗಿರಲಿಲ್ಲ. ಪ್ರತಿ ಬುಡಕಟ್ಟು ತಮ್ಮ ತಮ್ಮ ಕಟ್ಟುಪಾಡುಗಳನ್ನು ಬದಿಗಿರಿಸಿ, ಒಂದು ಸಾರ್ವತ್ರಿಕ, ಸರ್ವಸಮ್ಮತ ಜೀವನಕ್ರಮಕ್ಕೆ ಒಪ್ಪಿಕೊಳ್ಳಬೇಕು ಎಂಬ ನೀತಿ-ನಿಯಮಗಳನ್ನು ರೂಪಿಸಿ ಅದಕ್ಕೆ ಅವರನ್ನು ಹೊಂದಿಸುವ ಮೊಹಮ್ಮದರ ಆಲೋಚನೆ ಅಷ್ಟು ಸುಲಭವಾಗಿ ಸಾಧ್ಯವಾಗುವಂತದಾಗಿರಲಿಲ್ಲ. ಇದೊಂದು ರೀತಿ ಬೆಟ್ಟ ತಬ್ಬುವ ಬಯಕೆ.
         ಒಂದು ಪ್ರದೇಶದ ಇಡಿ ಬದುಕಿನ ಸನ್ನಿವೇಶ ಹೀಗಿದ್ದ ಸಂದರ್ಭದಲ್ಲಿ ಮೊಹಮ್ಮದ್ ಎಂಬ ಮಹತ್ವಾಕಾಂಕ್ಷಿ ಹೋರಾಟಗಾರಇಸ್ಲಾಂಎನ್ನುವ ಚೌಕಟ್ಟಿನಡಿ ಕೆಲವು ಜೀವನ ಸೌಂದರ್ಯಗಳನ್ನು ರೂಪಿಸಿದರು. ಪರಸ್ಪರ ಕಡಿದಾಟ, ಕಿತ್ತಾಟ, ಒಳಜಗಳಗಳಿಗೆ ಕಾರಣವಾಗಿದ್ದ , ಮೆಕ್ಕಾದ ಕಾಬಾದೊಳಗೆ ಶಾಂತಿಯ ಹೆಜ್ಜೆಗಳನ್ನಿರಿಸುವ ಮೂಲಕ ಧಾರ್ಮಿಕವಾಗಿ ಸಮ್ಮತನಾಗಿ, ಧರ್ಮಮಾರ್ಗದ ಜೀವನವೆಂದರೆ ಹೇಗಿರಬೇಕು ಎನ್ನುವುದರವುಗಳ  ಪಟ್ಟಿ ಮಾಡಿದರು-
       ಬೇಟೆಯ ಮೂಲಕ ಪಶು-ಪಕ್ಷಿಗಳ ಮೇಲಿನ ದುರಾಕ್ರಮಣ ಸಲ್ಲದು, ಅರೇಬಿಯಾದ ಮಾನವನ ಅಸ್ತಿತ್ವದ ಅವಿಭಾಜ್ಯ ಅಂಗವಾದ, ಜೀವನಾಧಾರವಾದ ಒಂಟೆಯನ್ನು ನೋಯಿಸಬಾರದು. ಯಾವುದೇ ಜಾನುವಾರುಗಳನ್ನು ಹಿಂಸಿಸಬಾರದು. ಇದು ಪಶು-ಪಕ್ಷಿಗಳ ಕುರಿತ ಮೊಹಮ್ಮದರ ಕಾಳಜಿಯಾದರೆ , ನಿಸರ್ಗದ ಅಪರೂಪದ ಸೃಷ್ಟಿಯಾದ ಮಹಿಳೆಯ ಬಗೆಗೆ- ಹೆಣ್ಣು ಶಿಶು ಹತ್ಯೆ ಘೋರ ಪಾಪ, ಹೆಣ್ಣು ಶಿಶುಗಳನ್ನು ಜೀವಂತ ಹೂಳಬಾರದು, ಸ್ತ್ರೀಯರಿಗೆ ಆಸ್ತಿಯಲ್ಲಿ ಪಾಲು ನೀಡಬೇಕು. ಆಕೆಯನ್ನು ಆಕೆಯ ಮಕ್ಕಳಿಂದ ಅಗಲಿಸಬಾರದು. ಯುದ್ಧಗಳಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಹತ್ಯೆ ಮಾಡಬಾರದು, ಪವಿತ್ರ ಸ್ತ್ರೀಯರನ್ನು ಆಪಾದಿಸಬಾರದು, ತಾಯಂದಿರಿಗೆ ಎಂದೂ ಅವಿಧೇಯರಾಗಿರಬಾರದು
       ಮನುಷ್ಯನ ವಿಕೃತಿಗಳ ಪರಿಚಯವಿದ್ದ ಮೊಹಮ್ಮದ್ ಅದನ್ನು ಸರಿಪಡಿಸುವಲ್ಲಿ ಕೆಲವು ನಿಯಮಗಳನ್ನು ರಚಿಸಿದರು-
      ಎಲ್ಲರೂ ಪ್ರಾರ್ಥನೆಯೊಂದಿಗೆ ದೇವರಿಗೆ ವಿಧೇಯತೆಯಿಂದ ನಡೆದುಕೊಳ್ಳಬೇಕು, ಹಾಗೂ ಒಳ್ಳೆಯ ಮಾತುಗಳನ್ನಾಡಬೇಕು. ಕೋಪವನ್ನು ಹಿಡಿತದಲ್ಲಿಟ್ಟುಕೊಂಡವನೇ ಪ್ರಪಂಚದ ಬಲಶಾಲಿ ವ್ಯಕ್ತಿ. ಎರಡು ದವಡೆ, ಎರಡು ತೊಡೆಗಳ ಮೇಲಿನ ನಿಯಂತ್ರಣವೇ ಚಾರಿತ್ರ್ಯದ ಮೊದಲ ಪಾಠ. ಮೆಲುದನಿಯಲ್ಲಿ ಮಾತನಾಡುವುದೇ ಮನುಷ್ಯತ್ವ. ಮಾಟ-ಮಂತ್ರಗಳನ್ನು ಧಿಕ್ಕರಿಸಬೇಕು. ಬಡ್ಡಿ ತಿನ್ನಬಾರದು. ಅನಾಥನ ಆಸ್ತಿಯನ್ನು ಎಂದೂ ಕಬಳಿಸಬಾರದು, ಕಷ್ಟಕ್ಕೆ ಬೆನ್ನು ತೋರಿಸಿ ಓಡಿ ಹೋಗಬಾರದು. ದಾನ-ಧರ್ಮ ಮಾಡಬೇಕು, ಭಿಕ್ಷೆಯನ್ನೆಂದೂ ಬೇಡಬಾರದು, ಬೆನ್ನು ಹಿಂದೆ ಯಾರನ್ನೂ ಹಿಯಾಳಿಸಬಾರದು, ಧರ್ಮ ಕುರಿತು ಇಲ್ಲ-ಸಲ್ಲದ ಪ್ರಶ್ನೆಗಳನ್ನು ಕೇಳಬಾರದು. ಯಾವುದೇ ಆಸ್ತಿ-ಪಾಸ್ತಿಯನ್ನು ಅಗೌರವಿಸಬಾರದು. ಮಾದಕ ದ್ರವ್ಯವನ್ನು ಸೇವಿಸಬಾರದು, ಮಧ್ಯಪಾನ ಮಾಡಬಾರದು, ಅನೈತಿಕ ಲೈಂಗಿಕತೆಯಲ್ಲಿ ತೊಡಗಬಾರದು, ಇತಿ-ಮಿತಿಗಳ ಮಧ್ಯಮ ಮಾರ್ಗ ಅನುಸರಿಸಿ ಜೀವನ ನಡೆಸಬೇಕು, ಪರಾಭವಗೊಂಡ ಶತ್ರುಗಳನ್ನು ಕ್ಷಮೆ ಮತ್ತು ಉದಾರತೆಗಳಿಂದ ನೋಡಿಕೊಳ್ಳಬೇಕು. ಗುಲಾಮರನ್ನು ಕರುಣೆಯಿಂದ ಕಾಣಬೇಕು, ಭೂಮಿ ಪ್ರಾರ್ಥನೆಗಾಗಿ ನಮಗೆ ಲಭಿಸಿದ ಸ್ಥಳ, ಬಲಗೈಯಲ್ಲಿ ಮಾಡಿದ ದಾನ-ಧರ್ಮ ಎಡಗೈಗೆ ಗೊತ್ತಾಗದ ಹಾಗೆ ನೋಡಿಕೊಳ್ಳಬೇಕು.
       ಹೀಗೆ ನಿಯಮಗಳನ್ನು ರೂಪಿಸಿದ ಮೊಹಮ್ಮದರು ಇವುಗಳನ್ನು ಮನವರಿಕೆ ಮಾಡಲು ಯವಾಗಲೂ ಆಜ್ಞೆ, ಬಲಪ್ರಯೋಗ, ಯುದ್ಧಗಳನ್ನೇ ಅಂತಿಮ ಎಂದುಕೊಳ್ಳಲಿಲ್ಲ. ಅನೇಕ ಬಾರಿ `ಮೆಕ್ಕಾದ ಮೂಲನಿವಾಸಿಗಳಾಗಿದ್ದ ಖುರೈಷಿಗಳೊಂದಿಗೆ ಕಾದಾಡುವುದಕ್ಕಿಂತ ಅಬಿಸ್ಸಿನಿಯಾಕ್ಕೆ ವಲಸೆ ಹೋಗುವುದೇ ಉತ್ತಮ ಎಂದುಕೊಂಡ ಮೊಹಮ್ಮದ್ ಜೀವನಾರಂಭದಲ್ಲಿ ಕಾದಾಟಗಳಿಂದ ದೂರ ಉಳಿಯುವ ಪ್ರಯತ್ನಗಳನ್ನು ಗಮನಿಸಿದರೆ ಇಂಥ ಒಬ್ಬ ಸಹನೆಯ ಮನುಷ್ಯ ಮತ್ತ್ಯಾರಾದರೂ ಉಂಟೇ? ಎಂದು ಅಚ್ಚರಿಯಾಗದಿರಲಾರದು. ವಲಸೆಯನ್ನುಹಿಜರಾಎಂದು ದಾಖಲಿಸುತ್ತದೆ ಇಸ್ಲಾಮಿಕ್ ಇತಿಹಾಸ. ಮೊಹಮ್ಮದರ ಜೀವನದಲ್ಲಿ ಇಂಥ ಒಂದು ಅನಿವಾರ್ಯ ಸಂದರ್ಭ ಬರುವ ಹಲವು ವರ್ಷಗಳಿಗೂ ಮೊದಲು ಖುರಾನ್ ಸಂದೇಶಗಳು ಅವರಿಂದ ಹೊರಬಂದವು ಎಂದು ದಾಖಲಿಸಿದ್ದಾರೆ. ಆದರೆ ಮೇಲಿನ ಅವರ ನಿಯಮಗಳ ಪಟ್ಟಿಯನ್ನು ಗಮನಿಸಿದರೆ ಯಹೂದಿ ಮತ್ತು ಕ್ರಿಶ್ಚಿಯನ್ ಧಾರ್ಮಿಕ ಸಂದೇಶಗಳ ಗಾಢ ಪ್ರಭಾವ ಅಲ್ಲಿರುವುದು ಸ್ಪಷ್ಟವಾಗುತ್ತದೆ. ಅರೇಬಿಯಾದ ಜನಪದ ಕಾವ್ಯ, ಕಥೆಗಳ ಸೆಳಕೂ ನಮಗೆ ಅಲ್ಲಿ ಸಿಗುತ್ತದೆ
        ಜಗತ್ತಿನ ಯಾವುದೇ ಧರ್ಮವಾಗಿರಲಿ ಅದು ರೂಪಗೊಳ್ಳುವುದು ಮನುಷ್ಯರಿಂದಲೆ ಮತ್ತು ಮನುಷ್ಯರಿಗಾಗಿಯೆ. ನಾವುದನ್ನು  ದೇವಾವಾಣಿಯಾಯಿತು ಎಂದು ಹೇಳಿದರೂ ಅಷ್ಟೆ, ಗಣೇಶನಿಂದ ಬರೆಯಿಸಲಾಯಿತು ಎಂದರೂ ಅಷ್ಟೆ, ದೈವ ಪ್ರೇರಣೆಯಾಯಿತು ಎಂದು ಹೇಳಿದರೂ ಅಷ್ಟೆ, ಒಂದಂತೂ ಸತ್ಯ, ಅಂತಿಮವಾಗಿ ಇದೆಲ್ಲ ಮನುಷ್ಯನ ಮೂಲಕವೇ, ಮನುಷ್ಯರ ಮಧ್ಯ ಸಾಗಿ ಬಂದು, ಮನುಷ್ಯನ ಒಟ್ಟು ಅಸ್ತಿತ್ವವನ್ನೇ ನಿಯಂತ್ರಿಸುವ ಹಂತಕ್ಕೆ ಬೆಳೆದುಬಿಟ್ಟಿತು. ಇಸ್ಲಾಂದ ಕಥೆಯೂ ಅಷ್ಟೇ.

No comments:

Post a Comment