Total Pageviews

Wednesday, July 26, 2017

ಕವಿತೆ ಕಾಲಿಡುತ್ತಿದೆ, ಸುಮ್ಮನಿರಿ ಭಾಗ-2



ನಮ್ಮ ಕಾಡುವ ಕವಿ ಹಾಗೂ ಕವಿತೆಗಳು ಹೇಗೆ ಮತ್ತು ಎಲ್ಲಿ ಘಟಿಸುತ್ತಾರೆ? ಅವರ ಕವಿತೆಗಳಲ್ಲಿ ಅದ್ಯಾವ ಅದ್ಭುತ ಲೋಕ ಸೃಷ್ಟಿಯಾಗಿರುತ್ತದೆ? ಎಂದು ಕೇಳಿದರೆ ಕಾವ್ಯ ಚಿಂತಕನೊಬ್ಬ ಹೇಳುತ್ತಾನೆPoetry is the original way in which beings are brought into the open clearing of truth, in which world and earth, mortals and gods are bidden to come to their appointed places of meeting. ಸತ್ಯ, ಸೌಂದರ್ಯ ಹಾಗೂ ಸುತ್ತಲಿನ ವಾಸ್ತವಗಳ ದರ್ಶನವೇ ಕವಿ ಹಾಗೂ ಕಾವ್ಯದ ಮಹಾ ಜವಾಬ್ದಾರಿ. ಇದನ್ನು ಭಾವಪ್ರಾಮಾಣಿಕತೆ ಹಾಗೂ ಅಭಿವ್ಯಕ್ತಿ ತೀವ್ರತೆಗಳ ಮಾತ್ರದಿಂದಲೇ ಸಾಧಿಸಿದಾತ ಕೀಟ್ಸ್. ಆರಂಭದಲ್ಲಿಯೇ ಕವಿತೆಯಂಥ ರಮಿಸಿಕೊಳ್ಳುವ ಕ್ರಿಯೆ ಮತ್ತೊಂದಿಲ್ಲ ಎಂದೆನಲ್ಲ. ಹೌದು, ಕೀಟ್ಸ್ ಬದುಕಿನ ಆಘಾತಗಳಿಂದ ತನ್ನ ತಾನು ರಮಿಸಿಕೊಳ್ಳಲೆಂದೇ ಕವಿತೆಗೆ ಕೈ ಚಾಚಿದವ. ಆದರೆ ಕೃಷ್ಣನಂತೆ ಕಾವ್ಯ ಪರ್ವತವನ್ನೆತ್ತಿ ಹಿಡಿದು, ಎಷ್ಟೆಲ್ಲ ಬದುಕುಗಳ ದಾರುಣ ಸ್ಥಿತಿಯನ್ನು ಸುಧಾರಿಸಿ ಬಿಟ್ಟ. ಪ್ರಪಂಚದ ಮನಸ್ಸಿನ ಏನೆಲ್ಲ ಅಸಮಾಧಾನಗಳ ರಮಿಸಿಬಿಟ್ಟ. ಆದರೆ ಇಂಥ ಕವಿತೆಗಾಗಿ ತನ್ನ ಬದುಕನ್ನೇ ಪಣಕ್ಕಿಟ್ಟ.
 ಹೌದು, ಪ್ರಾಣ ಪಣಕ್ಕಿಡದ್ದಾವುದನ್ನು ಪ್ರಪಂಚ ಪೂಜಿಸಿಲ್ಲ, ಪೂಜಿಸುವುದೂ ಇಲ್ಲ.
ಮನುಷ್ಯನಶಬ್ಧಹಾಗೂಆಲೋಚನೆಅರ್ಥಗಳಿಂದ ಗರ್ಭಕಟ್ಟುವ ಸಂದರ್ಭಗಳು ಅವನ ನಿತ್ಯ ವ್ಯವಹಾರದಲ್ಲಿಲ್ಲ. ಇಲ್ಲೆಲ್ಲ ಅವು ಸಾಮಾನ್ಯ ಆಯವ್ಯಯದ ಸರಕುಗಳಷ್ಟೆ. ನಮ್ಮಶಬ್ಧಹಾಗೂಆಲೋಚನೆನಮಗೆ ಅಚ್ಚರಿಯನ್ನುಂಟು ಮಾಡುವ ಅರ್ಥಗಳಾಗಿ ಸಿಡಿಯುವುದು ಕವಿತೆ ಹಾಗೂ ಮೌನದಲ್ಲಿ ಮಾತ್ರ. ಇಂಥ ಸ್ಪೋಟವಿದೆ ಕೀಟ್ಸ್ ಕಾವ್ಯದಲ್ಲಿ. ಅವನ ಪತ್ರಗಳೂ ಅಷ್ಟೆ. ಕವಿತೆ ಕಾಣದ ಒಂದೇ ಒಂದು ಸಾಲು ಅವನ ಪತ್ರಗಳಲಿಲ್ಲ. ಕೀಟ್ಸ್ ಬರಹವನ್ನು ಗದ್ಯ-ಪದ್ಯ ಎಂದು ಸೀಳಲಾಗದು. ಅಖಂಡವಾದ ಕಾವ್ಯಧರ್ಮಕ್ಕೆ ಒಂದು ಅದ್ಭುತ, ಶಾಶ್ವತ ನಿದರ್ಶನ ಕೀಟ್ಸ್. ಅವನ ಪಾಲಿಗೆ ಪ್ರಪಂಚ ಒಂದು ಮಹಾಕಾವ್ಯ. ಪ್ರಪಂಚಕ್ಕೆ ಕೀಟ್ಸ್ ಒಂದು ಮರೆಯದ, ಮುಗಿಯದ ಕವಿತೆ
 ಕೀಟ್ಸ್ ಬರಹವನ್ನು ಗದ್ಯ-ಪದ್ಯ ಎಂದು ಸೀಳಲಾಗದು ಎಂದು ಹೇಳಿದೆ. ಬರಹವನ್ನು ನಾನು ಪ್ರಾರಂಭಿಸಿದಂದಿನಿಂದಲೂ ನನ್ನ ಬಲವಾದ ನಂಬಿಕೆಯಿದು. ಜಗತ್ತಿನ ಶ್ರೇಷ್ಠ ಬರಹಗಾರನಾದ ಪ್ರೇಮಚಂದ, ಕುವೆಂಪು, ಮಾಂಟೊ, ಟ್ಯಾಗೋರ್, ಟಾಲ್ಸ್ಟಾಯ್, ದಾಸ್ತೋಯೆವಸ್ಕಿ, ಕಾಮು, ಶರೀಫ, ಓಶೋ ಇವರನ್ನೆಲ್ಲ ನಾನು ಓದಿದ್ದು ಹೀಗೆಯೆ. ಇವರೆಲ್ಲ ನನಗೆ ದಾರ್ಶನಿಕರಂತೆ ದಕ್ಕಿದವರು. ಹೀಗಾಗಿ ಕವಿತೆಯಂತೆ ಕಾಡಿವೆ ಇವರ ಆಲೋಚನೆಗಳು. ಅಂದಹಾಗೆ, ಒಂದು ಆಲೋಚನೆಯ ಪ್ರಕಾರ The opposite of the poem is not the prose, pure prose is as poetic as any poetry. The voice of thought must be poetic.  ಕಪ್ಪುಶಬ್ದದ ವಿರುದ್ದಾರ್ಥಕ ಹೇಗೆಬಿಳಿಅಲ್ಲವೊ ಹಾಗೆಯೆ ಆಲೋಚನೆಗಳಾಗಿ ನಮ್ಮ ತಲೆಮಾರುಗಳನ್ನು ಕಾಡುವ ಲೇಖಕರಲ್ಲಿಗದ್ಯಎಂಬ ಪದಕ್ಕೆ ವಿರುದ್ದಾರ್ಥಕವಾಗಿಪದ್ಯಎಂಬ ಪರಿಕಲ್ಪನೆ ಹುಟ್ಟುವುದಿಲ್ಲ. ಮನುಕುಲವನ್ನು ಕಾಡಿದ ಯಾವ ಚಿಂತಕನೂ ಗದ್ಯ-ಪದ್ಯಗಳ ಮಾನದಂಡಗಳನ್ನಿಟ್ಟುಕೊಂಡು ಮಾತಾಡಿಲ್ಲ. ಸಾಕ್ರೆಟಸ್, ದಾವ್, ಔಸ್ಪೆನಸ್ಕಿ, ಮೋಲಿಯರ್, ಶಂಕರಚಾರ್ಯ, ರಾಮಕೃಷ್ಣ ಪರಮಹಂಸ ಎಲ್ಲರೂ ಹೀಗೆಯೆ. ಆದರೆ ಒಂದು ಸತ್ಯ, ಇವರೆಲ್ಲ ಕವಿತೆಯಂತೆ ಆಲೋಚಿಸಿದ್ದಾರೆ ಅಥವಾ ಅವರ ಆಲೋಚನೆಗಳೆಲ್ಲವೂ ಕವಿತೆಗಳಂತೆ ನಮ್ಮನ್ನು ಕಾಡಿವೆ. ಹೀಗಾಗಿ ಅವು ಬರೀ ಅರ್ಥದ ಸೀಮೆಗಳಲಿಲ್ಲ ಬದಲಾಗಿ ಸೀಮಾತೀತವಾದ ಅರ್ಥಲೋಕಗಳನ್ನೇ ಸೃಷ್ಟಿಸಿವೆ.
 ಇಂಥ ಸೀಮೆಗಳ ಹಂಗು ಹರಿದುಕೊಂಡವ ಕೀಟ್ಸ್. ಬದುಕಿನ ಏಳೆಂಟು ವರ್ಷಗಳ ಸೀಮಿತ ಅವಧಿಯಲ್ಲಿ ಆತ ಸೀಮಾತೀತವಾದ ಪರಿ ನನಗೆ ನಾಚಿಕೆ ಹುಟ್ಟಿಸಿದೆ.
ನಿತ್ಯ ನಮ್ಮೊಂದಿಗಿರುವ ಇದೇ ಭೂಮಿ, ಆಕಾಶ, ಜನ, ಜಗತ್ತು, ದೇಹ-ದೇಗುಲ, ಧರ್ಮ-ಕರ್ಮ, ಕಾಯ-ಕಾಯಕ, ಕಾಮ-ಪಾರಮಾರ್ಥ, ಭೂಗ-ಭವಣೆಗಳ ಮಧ್ಯದಲ್ಲೇ ಇದ್ದ ಕೀಟ್ಸ್ನನ್ನು ನಮ್ಮಿಂದ ಭಿನ್ನವಾಗಿಸಿದ, ಬೆಳಕಾಗಿಸಿದ, ಕೊಳೆಯುವವುಗಳ ಮಧ್ಯ ಕೀಟ್ಸ್ನನ್ನು ಉಳಿಸದೆ ಮನುಕುಲ ಮರೆಯದಂತೆ ಮುಗಿಲೆತ್ತರ ಬೆಳೆಸಿದ ಶಕ್ತಿ ಯಾವುದು? ಏನು ಮಾಡಿದರೆ ಅದು ನನ್ನನ್ನೂ ಮುಟ್ಟಿ ಪುನೀತನಾಗಿಸಿತು? ಯಾವುದನ್ನು ಮೆಟ್ಟಿದರೆ ನಮ್ಮೊಳಗಿನ ಕವಿತೆ ಕಡಲ ಗಂಭೀರಾಚ್ಚರಿಗಳನ್ನು ತುಂಬಿಕೊಂಡೀತು? ಇದು ನಾನು ಕೀಟ್ಸ್ನನ್ನು ಮುಟ್ಟಿದಂದಿನಿಂದ ಇಂದಿನವರೆಗೂ ಕಾಡಿದ ಪ್ರಶ್ನೆ.
 ನಿರುದ್ದೇಶಿತವಾಗಿರಲಿಲ್ಲ ಕೀಟ್ಸ್ ಬರಹ. ತನ್ನೊಳಗಿನ ಮೃತ್ಯುವನ್ನು ಸಂಭಾಳಿಸುವುದರೊಂದಿಗೆ ತನ್ನ ಕವಿತೆಗಳ ಹೆಗಲ ಮೇಲೆ ತನ್ನ ಪ್ರೀತಿಯನ್ನು ರಮಿಸುವ ಜವಾಬ್ದಾರಿಯನ್ನು ಹೊರಿಸಿದ್ದ ಆತ. ಇಂಥ ಕೀಟ್ಸ್ನನ್ನು ಕುಡಿಯುವ ಹೊತ್ತಿಗೆ ನನ್ನೆದುರೂ ಕೂಡಾ ಅಂಥದೇ ಒಂದು ಜವಾಬ್ದಾರಿ ಇತ್ತು. ಈತನನ್ನು ಹಿಡಿದುಕೊಂಡು ಮೈ-ಮೈಥುನ, ಮಾತು-ಮುತ್ತು, ಪಯಣ-ಪ್ರಮಾಣಗಳಿಂದ ದಕ್ಕಿಸಲಾಗದ, ವೇದ್ಯಗೊಳಿಸಲಾಗದ, ಪ್ರಪಂಚದ ಶಾಶ್ವತ ಸುಖ-ಸೌಂದರ್ಯ, ಚಾರಿತ್ರ್ಯ-ಪ್ರಾಮಾಣಿಕತೆಗಳ ನಿಷ್ಕಲ್ಮಶ ಬೆಳಕಿಗೆ ಯಾರನ್ನೋ ಕರೆಯಬೇಕಿತ್ತು. ಆದರೆ ಇಂಥ ಜರೂರತ್ತು ಶಬ್ದ ಸಂಗ ಮಾಡಿ ಸುಂದರ ಕಲಾಕೃತಿಯಾಗಿ ದಕ್ಕುವುದುರೊಳಗಾಗಿ ಏನೆಲ್ಲ ಅವಘಡಗಳು ಘಟಿಸಿ, ಕೀಟ್ಸ್ ಹಾಗೂ ಅವನು ಸಾರುವ ಕಾವ್ಯದ ಧರ್ಮ ಎಲ್ಲ ಸುಳ್ಳೆ? ಎಂದು ಗಲಿಬಿಲಿಗೊಳಗಾಗುವುದರಲ್ಲಿ, ಎಲ್ಲಿಂದಲೋ ಬಂದ ಅರಿವಿನ ಮಹಾಬೆಳಗು ಮತ್ತೆ ಕೀಟ್ಸ್ನಂತೆಯೆ, ಅವನ ಕವಿತೆಯಂತೆಯೆ ಕೈ ಹಿಡಿಯಿತು.
ಈಗ ರಮಿಸುತ್ತ ಬಳಿ ಬಂದ ಕೀಟ್ಸ್ ತನ್ನೊಳಗಿನ ಕಬೀರ, ಟ್ಯಾಗೋರ್, ಗಿಬ್ರಾನ್, ಬುದ್ಧ ಹಾಗೂ ಶೆಕ್ಸ್ಪೀಯರರನ್ನು ದಕ್ಕಿಸಿ ಬಿಟ್ಟ. ಇರುವ ಬದುಕು ಮುಗಿಸುವವರೆಗೂ ನಾನು ರಮಿಸಬೇಕಾದ ವಿಶಾಲ ಲೋಕ ತೋರಿಸಿ ಬಿಟ್ಟ. ಇನ್ನು ಕವಿತೆ-ಕನಸುಗಳ ಕೈ ಬಿಡುವ ಪ್ರಮೇಯ ಎಲ್ಲಿದೆ ಹೇಳಿ?
 ಒಂದು ಖಾಲಿತನವಂತೂ ಖಂಡಿತ ಕಾಡಿದೆ. ನನ್ನಂಥ ಅಲ್ಪನಿಗೆ ಶೆಲ್ಲಿ-ಕೀಟ್ಸ್-ಬೈರನ್ರೆಂಬ ಶಕ್ತಿಗಳ ತೆಕ್ಕೆ ಹೊಡೆಯುವ ಪಟ್ಟುಗಳನ್ನು ಕಲಿಸಿದ ತಾಯಿ ವಾತ್ಸಲ್ಯದ, ಇಂಗ್ಲೀಷ ಗುರುಗಳಾಗಿದ್ದ ಪ್ರೊ. ಜಿ.ಬಿ. ಸಜ್ಜನರಿಗೆ ನನ್ನ ಕೀಟ್ಸ್ನನ್ನು ಕೊಟ್ಟಿದ್ದರೆ ಅವರ ಕಣ್ಣುಗಳಲ್ಲಿ ಪ್ರಪಂಚದ ಇನ್ನಾವುದೇ ಸುಂದರಿಯ ಕಣ್ಣುಗಳಲ್ಲಿಯೂ ಕಾಣದ ಮುಗ್ಧ ಅಚ್ಚರಿ-ಬೆರಗುಗಳನ್ನು ನಾನು ಅನುಭವಿಸಬಹುದಾಗಿತ್ತು. ನನಗೆಂದೂ ಅರ್ಥವಾಗದ ಅವರ ಪ್ರಶ್ನೆಗಳನ್ನು, ನಾನು ಸುಮ್ಮನಿದ್ದರೂ ಒಂದು ಉತ್ತರವೆ ಎಂದು ಸಮಾಧಾನಿಸಿಕೊಳ್ಳುತ್ತಿದ್ದ ಅವರ ವಾತ್ಸಲ್ಯವನ್ನು ನಾನು ಅನುಭವಿಸಬಹುದಾಗಿತ್ತು. ಬರಹದ ಮುಂದಿರುವ ಗುರಿ-ಗಮ್ಮ್ಯಗಳು ಅವರಾಗಿದ್ದರು. ಹೀಗಾಗಿ, ಅಕಾಲಿಕವಾಗಿ ಅವರನ್ನು ನನ್ನಿಂದ ಕಿತ್ತುಕೊಂಡು ಮೃತ್ಯುವನ್ನು ನಾನೆಂದೂ ಕ್ಷಮಿಸಲಾರೆ.
ನನ್ನ ಹುಚ್ಚುಗಳ ಹೊದ್ದು ಹರುಷಪಟ್ಟ ಹಿರಿಯ ಜೀವ ಅದು. ತಾಯಿಯನ್ನು ದಿಢೀರ್ ಕಳೆದುಕೊಂಡು ಕೀಟ್ಸ್ ಹೇಗೆ ಪ್ರಕ್ಷುಬ್ಧನಾಗಿದ್ದನೊ ಅಷ್ಟೇ ಸಿಡಿಮಿಡಿಗೊಂಡಿದ್ದೇನೆ ನಾನು. ಅವರೊಬ್ಬರಿರಲೇಬೇಕಿತ್ತು ಬರಹ ಮುಗಿಯುವವರೆಗೂ.
ಕೀಟ್ಸ್ ಕುರಿತು ಬರೆದ ವರ್ಷವೆಲ್ಲ ಕವಿತೆಯಾಗಿತ್ತು ನನ್ನ ಸಂಸಾರ. ಕೀಟ್ಸ್ ಹುಟ್ಟಿದ ದಿನಾಂಕದಂದೇ ತಾನೂ ಹುಟ್ಟಿದ್ದೇನೆಂದು ಎದೆಯುಬ್ಬಿಸಿ ಮಾತನಾಡುವ ಮಗ ಸಿದ್ಧಾರ್ಥ, ಕೀಟ್ಸ್ ಮುದ್ದಾದ ಭಾವ ಚಿತ್ರವನ್ನು ತನ್ನ ಬೆರಗುಗಣ್ಣುಗಳಿಂದ ಮತ್ತೆ ಮತ್ತೆ ನೋಡುವ ಮಗಳು ತರಂಗಿಣಿ, ಕೀಟ್ಸ್ನನ್ನು ನನ್ನ ಹೃದಯದ ವೇದನೆಯಾಗಿಸಿಬಿಟ್ಟರು. ಶಬ್ಧ, ಆಲೋಚನೆಗಳಾಗಿದ್ದ ಆತನನ್ನು ನಮ್ಮ ಮನೆಯಂಗಳದ ಹಿರಿಯ ಮಗನನ್ನಾಗಿಸಿ ಬಿಟ್ಟರು.
ನನ್ನ ಹಿರಿಯ ಮಗನೊ ಈಗ ಪ್ರಪಂಚದ ಹಿರಿಯ ದೀರ್ಘಾಯುಷಿ ನಾಗರೀಕರ ಪಟ್ಟಿಗೆ ಸೇರಿದ್ದಾನೆ. ಇವನ ವಯಸ್ಸೀಗ 161 ವರ್ಷಗಳಷ್ಟೆ.
ನನ್ನೂರಿಗೆ ಹೋದರು, ನೀಮ್ಮೂರಿಗೇ ಬಂದರು ಮನೆಯಂಗಳದಲ್ಲಿ ಮಳೆಹುಯ್ದು ನಿಂತ ನೀರುಗಳಲ್ಲಿ ಕಾಗದದ ದೋಣಿಗಳ ಬಿಟ್ಟು, ನೀರ ಮೇಲೆ ನೆನಪ ಬರೆವ ಮಕ್ಕಳಲೆಲ್ಲ ಕೀಟ್ಸ್ನೇ ಕಾಣುತ್ತಾನೆ ನನಗೆ.
ಸುಮ್ಮನಿರಿ, ಇಷ್ಟರಲ್ಲಿಯೆ ಕವಿತೆಯಾಗಿ ಕಾಡುತ್ತಾನೆ ನಿಮಗೆ.