Total Pageviews

Monday, July 10, 2017

ಕವಿತೆ ಕಾಲಿಡುತ್ತಿದೆ, ಸುಮ್ಮನಿರಿ. . . . .



ಕವಿತೆಯಂಥ ರಮಿಸಿಕೊಳ್ಳುವ ಕ್ರಿಯೆ ಪ್ರಪಂಚದಲ್ಲಿ ಮತ್ತೊಂದಿಲ್ಲ. ಪಶುವಿನಿಂದು ಮನುಷ್ಯನವರೆಗೆ, ಮನುಷ್ಯನಿಂದ ಮಹಾದೇವನವರೆಗೆ ಎಲ್ಲರಿಗೂ ಬೇಕಾದುದೆ ಕವಿತೆ. ಕಡಲೂ ಕವಿತೆಗಳ ಹಾಡುತ್ತದೆ, ಗಾಳಿಯೂ ಕವಿತೆಗಳ ಕೊರೆಯುತ್ತದೆ, ಕಾನನದ ಬಿದಿರು ಮೇಳಗಳಲ್ಲಿ ಕವಿತೆ ಇದೆ, ಹಕ್ಕಿಗಳ ಉಲಿಯಲ್ಲಿ, ಜೇಡದ ಬಲೆಯಲ್ಲಿ, ಸಾಲಾಗಿ ಸಾಗುವ ಇರುವೆ ಕಾಲಲ್ಲಿ, ಕವಿತೆ ಇದೆ.
ದೇವರಿಲ್ಲದ ದೇಶ-ಕಾಲ-ಧರ್ಮಗಳು ಹೇಗೆ ಅಸಾಧ್ಯವೊ, ಕವಿತೆ ಇಲ್ಲದ ಜೀವನ ವ್ಯವಹಾರವೂ ಅಷ್ಟೇ ಅಸಾಧ್ಯ. ಇದು ನಾಲ್ಕು ದಶಕಗಳ ನನ್ನ ಅನುಭವ, ಎದೆಗೆ ವೇದ್ಯವಾದ ಮಾತು.
ಕವಿತೆಯೊಂದು ರಮಿಸಿಕೊಳ್ಳುವ ಕ್ರಿಯೆ ಎಂದೆನಲ್ಲವೆ? ಹಾಗಿದ್ದರೆ ಇದಿಲ್ಲದ ನಮ್ಮ ಸಮಾಜ ಏನಾಗಿರುತ್ತಿತ್ತು? ಮನುಷ್ಯನ ಗತಿ-ಸ್ಥಿತಿಗಳೇನಾಗಿರುತ್ತಿದ್ದವು? ಪ್ರಶ್ನಿಗಳಿಗೆ ಕವಿತೆಯೆಂತೆಯೆ ರಮಿಸುತ್ತ ಚಿಂತಕನೊಬ್ಬ ಬರೆಯುತ್ತಾನೆWithout the poetic element in our own being and without our poets and their great poetry, we would be brutes, or what is worse and we are most likely today: vicious automata of self-will.
ಎಷ್ಟೊಂದು ಭಯಾನಕ ಅಲ್ಲವೆ! ಕವಿತೆ ಇಲ್ಲದೆ ಹೋದಲ್ಲಿ ಪಶುಗಳಾಗಿರುತ್ತಿದ್ದೆವು ನಾವು. ಅಸಭ್ಯವಾಗಿರುತ್ತಿತ್ತು ಸಮಾಜ. ಭೂಮಿ ಎನ್ನುವುದು ಮೃಗಗಳ ದೊಡ್ಡಿಯಾಗಿರುತ್ತಿತ್ತು. ಹಾಗಿದ್ದರೆ ಕವಿತೆ ನಮ್ಮ ಕೈ ಹಿಡಿದು ಬದುಕನ್ನು ಒಪ್ಪಗೊಳಿಸಿದೆ. ರಮಿಸಿದೆ ತಾಯಿಯಂತೆ. ಹೀಗಾಗಿ ಕವಿತೆ ಕಟ್ಟದ ಮನಸ್ಸು ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಲಾರದು ಎನ್ನುವುದು ಸತ್ಯ. ಅಂತೆಯೆ ಲೇಖಕ ಹೈಡೆಗರ್ ಹೇಳಿದ, Poetry is an indispensable function for human life. It is the creative source of the humanness of the dwelling life of man. ಕವಿತೆಯೊಂದು ಅವಶ್ಯಕ ಕ್ರಿಯೆ. ಅದು ಬಾಳಿನ ಊರ್ಜೆ. ಹೌದು, ಅದಿಲ್ಲದ ಜಗವಿಲ್ಲ, ಯುಗವೂ ಇಲ್ಲ.
ಕವಿತೆ, ಕವಿ, ಹೆಣ್ಣು, ಮೃತ್ಯು ಮತ್ತು ಮಣ್ಣಗಳನ್ನು ಕುರಿತು ಧ್ಯಾನಿಸಿದಷ್ಟು ಮತ್ತಿನ್ನೇನೂ ಧ್ಯಾನಿಸಲಿಲ್ಲ ನಾನು. ಬದುಕಿನಲ್ಲಿ ಸಿಗಬೇಕಾದ ಎಲ್ಲ ಶ್ರೇಯ-ಪ್ರೇಯ, ಅದಮ-ಅಪರೂಪ, ಸುಂದರ-ಕುರೂಪ, ವ್ಯಕ್ತಿ-ವಿಚಾರ ಹಾಗೂ ಬದುಕುಗಳು ಮೇಲಿನ ನಾಲ್ಕೇ ಪದಗಳ ಧ್ಯಾನಿಸುವಲ್ಲಿ ದಕ್ಕಿವೆ ನನಗೆ. ನೀರ ಮೇಲೆ ನೆನಪ ಬರೆದ ಕೀಟ್ಸ್ ಸಿಕ್ಕದ್ದೂ ಇಲ್ಲಿಯೇ. ಎಲ್ಲ ನಿರ್ಮಮ ಹೆಣ್ಣುಗಳಲ್ಲಿ ಇವನ ಪ್ರೇಯಸಿ ಫ್ಯಾನಿಯನ್ನು, ಮಣ್ಣಲ್ಲಿ ಅವನ ತಾಯಿಯನ್ನು, ದಾರಿಯಲ್ಲಿ ಸಿಕ್ಕ ಶವಗಳ ಮೆರವಣಿಗೆಗಳಲ್ಲಿ ಸ್ವಯಂ ಕೀಟ್ಸ್ನನ್ನು, ಅವನ ಸಮಗ್ರ ಮೃತ್ಯು ಪೀಡಿತ ಸಂಸಾರವನ್ನು, ಇವನ ಕವಿತೆಗಳಲ್ಲಿ ಕಾವ್ಯದ ಸಾತ್ವಿಕ-ಸಾದ್ವಿಕ ಸಂಭ್ರಮವನ್ನು ನಾನು ಕಂಡಿದ್ದೇನೆ, ಅನುಭವಿಸಿದ್ದೇನೆ. ಇವನಂಥ ಕವಿತಾ ಮೋಹದ, ಕಾವ್ಯ ತಪದ ಜೀವ ಇವನೆ.
ಉಸಿರಾಗಿತ್ತು ಕವಿತೆ ಕೀಟ್ಸ್ನಿಗೆ. ಇಂಥ ಹಸಿರೇ ವಿರಳವಾದ, ಬಿಸಿಲೇ ಬದುಕಾದ ಊರಿನಲ್ಲಿದ್ದಾಗ (ಬಾಗಲಕೋಟೆ) ನನ್ನನ್ನು ಕಾಡಲಾರಂಭಿಸಿದ ಅವನ Ode on Grecian Urn ತುಂಬಾ ಇಷ್ಟವಾದ ಕವಿತೆ. ಥಾಮಸ್ ಗ್ರೇನ Elegy written on country church Yard ದಷ್ಟೇ ಉತ್ಕøಷ್ಟ ಕವಿತೆ ಅದು. ಗ್ರೀಸ್ ದೇಶದಿಂದ ತಂದ ಮಣ್ಣ ಮಡಿಕೆಯೊಂದರ ಮೇಲೆ ಚಿತ್ತಾರಗೊಂಡ ಬಾಳ ಜಾತ್ರೆಯನ್ನು ಸಂಭೋಧಿಸುತ್ತ ಬದುಕಿನ ಅದೆಷ್ಟು ಸತ್ಯಗಳೊಂದಿಗೆ ಕೀಟ್ಸ್ ನಮ್ಮನ್ನಿಲ್ಲಿ ಮುಖಾಮುಖಿಯಾಗಿಸುತ್ತಾನೆ.
ಹಾಂ, ಒಂದು ಉತ್ಕøಷ್ಟ ಕಾವ್ಯದ ಗಂತವ್ಯವೇ ಸತ್ಯ, ಸತ್ಯವನ್ನಲ್ಲದೆ ಅದು ಮತ್ತಿನ್ನೇನೂ ಹೇಳುವುದಿಲ್ಲವಾದುದರಿಂದ ಅದು ನಮ್ಮ ನೆನಪುಗಳಿಗೆ ಮತ್ತೆ ಮತ್ತೆ ಹತ್ತಿರವಾಗುತ್ತಿರುತ್ತದೆ. ಹೀಗೆ ಹತ್ತಿರವಾದವರು ವಚನಕಾರರು, ಸೂಫಿಗಳು ಹಾಗೂ ರಮ್ಯ ಕಾವ್ಯದ ಮೊದಲ ತಲೆಮಾರಿನ ವಡ್ಸ್ವರ್ಥ, ಕೊಲ್ರಿಜ್ ಹಾಗೂ ಎರಡನೆಯ ತಲೆಮಾರಿನ ಶೆಲ್ಲಿ, ಕೀಟ್ಸ್, ಬೈರನ್. ದಾರ್ಶನಿಕನಾದ ಕವಿ ಇದನ್ನೇ ನಂಬಿದ್ದಾನೆThe function of poetry is the founding of truth. ಹೀಗಾಗಿಯೆ, ಲೋಕವ್ಯವಹಾರದ ಭಾಗವೇ ಆಗಿರುವ ಕವಿ ಸುಳ್ಳಾಡಬಹುದು, ಆದರೆ ಎಲ್ಲವೂ ಮೀರಿ ಅವನೊಳಗೆ ಘಟಿಸುವ ಕವಿತೆ ಎಂದೂ ಸುಳ್ಳಾಡದು.
ಹೀಗೆಯೆ ಕೀಟ್ಸ್. ಪರಮಸತ್ಯಗಳಿಗೆ ಕವಿತೆಯನ್ನು ಸೋಪಾನವಾಗಿಸಿಕೊಂಡು ಆತ ಸಾವನ್ನೂ ನಾಚಿಸುವ ಸಾಲುಗಳ ರಚಿಸಿದ. ಆದರೆ ನಿಷ್ಪಾಪಿ ಈತ ನಿರಾಳವಾಗಿ ಒಂದಿನಿತೂ ಬದುಕಲಿಲ್ಲ. ಬದುಕೆನ್ನುವುದು ಮೃತ್ಯುಗೀತೆಯಿಂದ ರಚ್ಚೆ ಹಿಡಿದು ಹೋಯಿತು. ಇಂಥದರಲ್ಲೂ ಅಮರತ್ವದ ಕವಲು ಹಿಡಿದ ಕೀಟ್ಸ್ ಕವಿತೆಯ ಧೀಶಕ್ತಿ ಎಂಥವರನ್ನೂ ಬೆರಗುಗೊಳಿಸುವಂಥದ್ದೆ! ಹೀಗೆಯೇ ಬೆರಗುಗೊಳಿಸಿದವ ನನ್ನನ್ನೂ ಕೂಡ.
ಇಂಗ್ಲೀಷ ಸಾಹಿತ್ಯದ ವಿದ್ಯಾರ್ಥಿಯಾಗಿ ಬಿಜಾಪುರದಲ್ಲಿ ಬಿ. ಯಲ್ಲಿದ್ದಾಗ, ಹಸಿವು ನೀಗಿಸಿ ಉಳಿದಷ್ಟೂ ಹಣದಲ್ಲಿ ಸಾಕುಸಾಕೆನ್ನುವಷ್ಟು ಪುಸ್ತಕಗಳನ್ನು ಕೊಂಡೆ. ವ್ಯವಹಾರದಲ್ಲಿಯೇ ಕೀಟ್ಸ್ ಪತ್ರಗಳ ಒಂದು ಅತ್ಯಂತ ಶಿಥಿಲಾವಸ್ಥೆಯ ಪುಸ್ತಕ ನನ್ನ ಮನೆ ಸೇರಿತು. ವಿಪ್ಲವಗಳಿಂದ ಬದುಕು ಹಣ್ಣಾದ ಬಾಗಲಕೋಟೆಯ ದಿನಗಳಲ್ಲಿ (2003 ರಿಂದ 2009) ನನ್ನ ಮನ ಸೇರಿತು. ಕವಿತೆಯಂತೆ ಕಾಡಿದ, ಕವಿತೆಯೇ ಆದ ಕೀಟ್ಸ್ ನನ್ನಿಂದ ಕಳೆದು ಹೋಗಬಾರದೆಂದುಜಾನ್ ಕೀಟ್ಸ್ ಪ್ರೇಮ ಪತ್ರಗಳುಎಂಬ ಲೇಖನ ಬರೆದೆ. ಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖವಾಣಿಯಾದಸಮಾಚಾರದಲ್ಲಿ  ಅದು ಪ್ರಕಟಗೊಂಡಿತಾದರೂ ಮುಂದೊಮ್ಮೆ ಸಂಚಿಕೆಯೇ ಕಳೆದುಹೋಯಿತು
ಕೀಟ್ಸ್ ಹೀಗೆ ಕಳೆದುಕೊಂಡವ, ಕಳೆದುಕೊಳ್ಳುತ್ತಲೇ ಹೋದ. ಆದರೆ ಒಂದು ವಿಚಿತ್ರ ಬದುಕಿನ ನಿಸ್ಸಹಾಯಕತೆಯ ಎಲ್ಲ ಘಳಿಗೆಗಳಲ್ಲಿ ಅದೆಲ್ಲಿಂದಲೋ ಬಂದು, ಬಳಿಸಾರಿ, ಪಕ್ಕದಲಿ ಕುಳಿತು, ತಲೆ ನೇವರಿಸಿ, ತನ್ನ ಕವಿತೆಗಳಿಂದ ನನ್ನ ರಮಿಸಿ ಮರೆಯಾಗಿ ಬಿಡುತ್ತಿದ್ದ. ಬಡತನದಲ್ಲಿ ಬಂಧುವಾಗಿದ್ದ, ಘಾಯಗಳಿಗೆ ಮುಲಾಮಾಗಿದ್ದ, ಸೋಲುಗಳಲ್ಲಿ ಸಹಾಯವಾಗಿದ್ದ, ಒಂಟಿತನದಲ್ಲಿ ನೆಂಟನಾಗಿದ್ದ. ಹೀಗಾಗಿ ಬದುಕಿನ ಎಲ್ಲ ಘಟ್ಟಗಳ ನಿಖಶದ ನಂತರ, ನಿರ್ಭಾವುಕತನದ ನಿರಾಳ ಘಳಿಗೆಯಲ್ಲಿ, ಸೋಲು-ಅಪಮಾನ, ಮೋಹ-ಮತ್ಸರಗಳಿಂದ ಅತೀತವಾದ ಅವಧಿಯಲ್ಲಿ ಇವನೊಂದಿಗೊಂದಿಷ್ಟು ಮಾತಾಡಬೇಕೆನ್ನುವುದು ಹಂಬಲವಾಗಿತ್ತು. ಇಂಥ ಅವಧಿ 2016 ಕೊನೆಕೊನೆಗೆ ಬೆಂಗಳೂರಿನ ನನ್ನ ವಾಸ್ತವ್ಯದಲ್ಲಿ, ವಾಸ್ತವದಲ್ಲಿ ಸಾಧ್ಯವಾಗಿ ಬರಹದ ಮೊದಲ ಭಾಗವಾಗಿ ಈಗ ಕೀಟ್ಸ್, ಕವಿತೆಯಲ್ಲದೇ ಇನ್ನೇನೂ ಅಲ್ಲದ ಜಾನ್ ಕೀಟ್ಸ್ ಈಗ ನಮ್ಮ ಕೈಯಲ್ಲಿದ್ದಾನೆ. ನನ್ನ ಕಾಡಿದ ಕೀಟ್ಸ್ ಈಗ ನಿಮ್ಮ ಹಾಡಾಗಿದ್ದಾನೆ. ಹಾಡಿಕೊಳ್ಳಿ.

No comments:

Post a Comment